ದುರಾಚಾರಿಯೂ ಸದಾಚಾರಿಯಾಗಬಲ್ಲ

posted in: Gurubodhe | 0

ಗವಂತನ ಭಕ್ತಿಗೆ ಅನೇಕ ಮಹಿಮೆಗಳಿವೆ.ಅವುಗಳನ್ನು ಅನೇಕ ಐತಿಹಾಸಿಕ ಕಥೆಗಳಲ್ಲಿ ಕಾಣಬಹುದಾಗಿದೆ. ಭಗವಂತನೇ ಒಂಭತ್ತನೇ ಅಧ್ಯಾಯದಲ್ಲಿ ಭಕ್ತಿಯ ಕೊಂಡಾಡಿದ್ದಾನೆ. “ನಮೇ ಭಕ್ತಃ ಪ್ರಣಶ್ಯತಿ” ಎಂಬುದಾಗಿ ಭಕ್ತನ ಮಹಿಮೆಯನ್ನು ಸಾರಿದ್ದಾನೆ.

”ತನ್ನ ಭಕ್ತನು ಹಾಳಾಗುವುದಿಲ್ಲ” ಎಂಬ ಈ ಪ್ರತಿಜ್ಞೆಯನ್ನು ಅವನೇ ವಿವರಿಸಿದ್ದಾನೆ. “ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್| ಸಾಧುರೇವ ಸ ಮಂತವ್ಯಃ ಸಮ್ಯಕ್ ವ್ಯವಸಿತೋ ಹಿ ಸಃ ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಫಾಂತಿಂ ನಿಗಚ್ಫತಿ| ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ| ಭಗವಂತನಲ್ಲಿ ಅನನ್ಯ  ಭಕ್ತಿ ಉಂಟಾದರೆ  ಅಂತಹ ಭಕ್ತನು ಪುರುಷಾರ್ಥ ಸಾಧನೆಯಿಲ್ಲದೆ ದುರ್ಗತಿ ಹೊಂದುವುದಿಲ್ಲ. ಅದು ಹೇಗೆ ಎಂಬುದನ್ನು ಈ ಎರಡು ಶ್ಲೋಕಗಳಲ್ಲಿ ಪ್ರತಿಪಾದಿಸಿದ್ದಾನೆ. ಅತ್ಯಂತ ಕಡು ದುರಾಚಾರಿಯಾಗಿದ್ದರೂ ಅನನ್ಯ  ಭಕ್ತಿಯೊಂದಿದ್ದರೆ ಅವನನ್ನು ದುರಾಚಾರಿ ಎಂಬ ಕಾರಣದಿಂದ ಅವಹೇಳನ ಮಾಡಬಾರದು. ಅವನು ಸಾಧು ಎಂಬುದಾಗಿಯೇ ತಿಳಿಯಬೇಕು. ಯಾಕೆಂದರೆ ಅನನ್ಯ  ಭಕ್ತಿಯ ಹಿಂದಿರುವ ಅವನ ನಿಶ್ಚಯ ಅತ್ಯಂತ ಸರಿಯಾಗಿದ್ದೇ ಆಗಿದೆ. ಹೊರಗಿನ ಆಚರಣೆಯಲ್ಲಿ ಅವನು ದುರಾಚಾರಿಯಾಗಿದ್ದರೂ ಅವನ ಮನಸ್ಸು ಗಟ್ಟಿಯಾಗಿ ಭಗವಂತನಲ್ಲಿ  ನಿಂತಿರುತ್ತದೆ. ಮನಸ್ಸಿನ ಸ್ಥಿತಿಯಿಂದಲೇ ಸದ್ಗತಿ – ದುರ್ಗತಿಗಳ ಅಂತಿಮ ನಿರ್ಣಯವಾಗುತ್ತದೆ. ಮನಸ್ಸಿನ ಅಚಲ ನಿಶ್ಚಯದ ಬಲದಿಂದಲೇ ಅವನು ತನ್ನ ಎಲ್ಲಾ ದುರಾಚಾರಗಳನ್ನು ಕ್ರಮೇಣ ಕಳೆದುಕೊಳ್ಳುತ್ತಾನೆ. ಅಲ್ಲದೇ ಶಾಶ್ವತವಾದ ಶಾಂತಿಯನ್ನು  ಹೊಂದುತ್ತಾನೆ. ಮೋಕ್ಷವೇ ಶಾಶ್ವತ ಶಾಂತಿ. ಅದೇ ಎಲ್ಲಾ ಪುರುಷಾರ್ಥಗಳಿಗಿಂತ ಶ್ರೇಷ್ಠ ಪುರುಷಾರ್ಥ. ಅನನ್ಯ ಭಕ್ತಿಯ ಹಿನ್ನಲೆಯಲ್ಲಿರುವ ದೃಢನಿಶ್ಚಯದ ಮಹಿಮೆಯಿದು. ಯಾವುದು ಈ ನಿಶ್ಚಯ? “ತನಗೆ ಭಗವಂತನ ಹೊರತು ಬೇರೆ ಅಸ್ತಿತ್ವ ಇಲ್ಲ. ಅಂತರ್ಯಾಮಿಯಾಗಿರುವ ಅವನು ತನ್ನೊಳಗೆ ಇರುವುದರಿಂದ ತನಗೆ ಅವನ ನಿತ್ಯ ಸಂಬಂಧವಿದೆ, ಆದರಿಂದ ತಾನು ಬದುಕಿರುವುದಾದರೂ ಅವನಿಂದಲೇ, ಸತ್ತುಹೋಗುವುದಾದರೂ ಅವನಿಂದಲೇ’ ಇದೇ ಅವನ ನಿಶ್ಚಯ. ಇದನ್ನು ’ವ್ಯವಸಾಯ’ ಎಂಬುದಾಗಿ ಕರೆಯುತ್ತಾರೆ. ವ್ಯವಸಾಯದ ಒಂದು ಲಕ್ಷಣವೇನೆಂದರೆ ಅದು ಮತ್ತೆ ಬದಲಾಗುವುದಿಲ್ಲ. ಮತ್ತೆ ಬದಲಾಗುವಂತೆ ಬಂದಿದ್ದರೆ ಅದು ವ್ಯವಸಾಯವಲ್ಲ.

                      ಇಲ್ಲಿ ಭಕ್ತಿಗೆ ಅನನ್ಯ ಭಕ್ತಿ ಎಂಬ ವಿಶಿಷ್ಟ ಹೆಸರನ್ನು ಕೊಟ್ಟಿದ್ದಾರೆ. ಈ ಹೆಸರು ಭಗವದ್ಗೀತೆಯಲ್ಲಿ ಮಾತ್ರವೇ ಕಂಡುಬರುತ್ತದೆ. ದೇವರ ಬಗ್ಗೆ ಸಾಮಾನ್ಯವಾದ ಪ್ರೀತಿ ಭಕ್ತಿಯಾಗುತ್ತದೆ.ಆ ಪ್ರೀತಿಯ ಜೊತೆಯಲ್ಲಿ ’ತನಗೆ ಅವನಿಗಿಂತ ಬೇರೆಯಾದ ಅಸ್ತಿತ್ವವಿಲ್ಲ’ ಎಂಬ ಅಂಶ  ಸೇರ್ಪಡೆಯಾದಾಗಲೇ ಅದು ಅನನ್ಯ ಭಕ್ತಿಯಾಗುತ್ತದೆ. ಸಾಮಾನ್ಯ ಭಕ್ತಿಗಿಂತ ಅದು ಉತ್ಕಟವಾಗಿರುತ್ತದೆ. ತನ್ನ ಅಸ್ತಿತ್ವದ ಚಿಂತನೆ ಯಾವುದೇ ಆಲೋಚನೆಯಲ್ಲಿ ಬಂದರೂ ಅದು ಉತ್ಕಟವಾಗುತ್ತದೆ. ತನ್ನ ಅಸ್ತಿತ್ವವೇ ಕೊನೆಗೊಳ್ಳುತ್ತಿವೆ ಎಂಬ ಪರಿಸ್ಥತಿ ಬಂದಾಗ ಮನುಷ್ಯನಿಗೆ ಇನ್ನೆಲ್ಲಿಯೂ ಉಂಟಾಗದಷ್ಟು ಗಾಬರಿ ಉಂಟಾಗುತ್ತದೆ.ಹೀಗಾಗಿ ಅನನ್ಯ ಭಕ್ತಿ ವಿಶೇಷವಾದದ್ದು, ಉತ್ಕಟವಾದದ್ದು.

ಭಕ್ತಿಯು ಅನನ್ಯ ಭಕ್ತಿಯಾಗಿ ವೃದ್ಧಿಹೊಂದಲು ಸಾಧನೆಯೇ ಕಾರಣ, ಅವನ  ಪ್ರಾರ್ಥನೆಯೇ ಕಾರಣ. ಅಂತಿಮವಾಗಿ ಅವನ ಅನುಗ್ರಹವೇ ಕಾರಣ. ಅದಕ್ಕಾಗಿ ಪ್ರಾರ್ಥಿಸಿಕೊಳ್ಳೋಣ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ