ದೇವತಾಶಕ್ತಿಗಳ ಪ್ರೇರಣೆಯಿಂದ ಶುದ್ಧಿ

posted in: Gurubodhe | 0

ನಾವೆಲ್ಲ ನಿಮಿಷನಿಮಿಷಕ್ಕೂ  ಉಸಿರನ್ನು  ತೆಗೆದುಕೊಳ್ಳುತ್ತ, ಬಿಡುತ್ತ  ಇರುತ್ತೇವೆ.  ಎಲ್ಲ  ಪ್ರಾಣಿಗಳೂ  ಇದನ್ನು  ಮಾಡುತ್ತವೆ.  ಪ್ರಾಣಿ ಎಂಬ  ಶಬ್ಧಕ್ಕೆ  ಉಸಿರಾಟ  ಉಳ್ಳವರು  ಎಂದರ್ಥ.  ಈ ಭೂಮಂಡಲವನ್ನು  ವ್ಯಾಪಿಸಿಕೊಂಡಿರುವ  ವಿಸ್ತಾರವಾದ  ವಾಯುಂಡಲದಲ್ಲಿ  ಇರುವ  ಗಾಳಿ  ಬೇರೆ  ಬೇರೆ  ಪ್ರಾಣಿಗಳ ಶ್ವಾಸವನ್ನು  ಹೊಕ್ಕಿ  ಬಂದ  ಗಾಳಿಯೇ  ಆಗಿರುತ್ತದೆ.  ಈ ಭೂಮಂಡಲ  ಇದ್ದಾಗಿನಿಂದ  ಇರುವ ಗಾಳಿ  ಒಂದೇ  ಆಗಿದೆ.  ಹೀಗೆ  ಎಲ್ಲ ಪ್ರಾಣಿಗಳಿಂದ ಉಪಯೋಗಿಸಲ್ಪಟ್ಟ  ಗಾಳಿಯು  ನಿರಂತರ  ಶುದ್ಧೀಕರಣಗೊಳ್ಳುತ್ತಲೇ  ಬಂದಿರುತ್ತದೆ.  ಶುದ್ಧೀಕರಣ ಗೊಳ್ಳದಿದ್ದರೆ  ಜಗತ್ತೆಲ್ಲ  ದುರ್ನಾತವಾಗಿ  ಬಿಡುತ್ತಿತ್ತು.  ನಿರಂತರ  ಶುದ್ಧೀಕರಣ  ಪ್ರಕ್ರಿಯೆ  ಮಾಡುತ್ತಿರುವವರು  ಯಾರು?  ಡಿವಿಜಿಯವರು  ಹೇಳುತ್ತಾರೆ “ರಾಮನುಚ್ಛ್ವಾಸವಲೆದಿರದೇ  ರಾವಣನೆಡೆಗೆ   ರಾಮನುಂದಶಕಂಠನೆಲರನುಸಿರಿರೆನೆ || ರಾಮರಾವಣರು ಸಿರ್ಗಳಿಂದು ನಮ್ಮೊಳಗಿರದೆ ಭೂಮಿಯಲಿ ಪೊಸತೇನೊ – ಮಂಕುತಿಮ್ಮ “

ಹೀಗಿರುವಾಗ ಅನಾದಿ ಕಾಲದಿಂದಲೂ  ಇರುವ  ಗಾಳಿಯನ್ನು  ಶುದ್ಧೀಕರಿಸುತ್ತ ಬಂದವರು ಯಾರು ?  ವಾಯು ಎಂಬ  ದೇವತೆ.  ಆಧುನಿಕ ವಿಜ್ಞಾನ  ದೇವತೆಗಳನ್ನು  ಒಪ್ಪದಿರಬಹುದು.  ಆದರೆ  ಚೈತನ್ಯದ  ಪ್ರವೇಶವಾಗದೇ  ಜಡವಾದ  ವಾಯು  ವ್ಯವಸ್ಥಿತವಾಗಿ  ನಿರಂತರವಾಗಿ  ಕೆಲಸ ಮಾಡುತ್ತಿರಲು  ಸಾಧ್ಯವಿಲ್ಲ.  ಸಸ್ಯಗಳು  ಪ್ರಾಣಿಗಳ  ಉಸಿರಾಟದಿಂದ  ಹೊರಗೆ  ಬರುವ  ಕಶ್ಮಲ  ಅನಿಲಗಳನ್ನು ಸ್ವೀಕರಿಸಿ  ಶುದ್ಧೀಕರಿಸುತ್ತದೆ  ಎನ್ನುವ  ಮಾತು  ಸತ್ಯ.  ಆದರೆ  ಸಸ್ಯಗಳಿಲ್ಲದ  ಮರಳುಗಾಡಿನಲ್ಲಿ  ಮತ್ತು  ಸಮುದ್ರ  ಪ್ರದೇಶಗಳಲ್ಲಿ  ವಾಯು  ಶುದ್ಧವಾಗಿರುತ್ತದೆ.

ಆದ್ದರಿಂದ  ವಾಯು  ಎಂಬ ದೇವತೆಯ ಸಂಕಲ್ಪದಿಂದ  ಚಲನೆಗೊಳಗಾಗಿರುವ  ವಾಯುವು  ಚಲನೆಯ  ಮೂಲಕ  ಕಶ್ಮಲ ಅನಿಲಗಳನ್ನು  ಕರಗಿಸಿಕೊಳ್ಳುತ್ತದೆ.  ಭೂಮಿಯೂ ಇದೇ  ರೀತಿಯಲ್ಲಿ  ಕಶ್ಮಲಗಳನ್ನು  ಕರಗಿಸಿಕೊಳ್ಳುತ್ತದೆ.  ಆದರೆ  ಗಾಳಿ,  ನೀರು  ಮತ್ತು ಭೂಮಿಗಳಿಗೆ ಕಶ್ಮಲಗಳನ್ನು  ಹೀರಿಕೊಳ್ಳುವದಕ್ಕೆ  ಒಂದು ಮಿತಿ ಇದೆ.

ಆಧುನಿಕ ಕಾರ್ಖಾನೆಗಳಿಂದ ಹೊರಬರುವ  ಹೊಗೆ,  ದ್ರವತ್ಯಾಜ್ಯ ಮತ್ತು  ಘನತ್ಯಾಜ್ಯಗಳನ್ನು  ಅನೇಕ  ಸಲ ಪ್ರಕೃತಿಯಲ್ಲಿ  ಕರಗಿಸಿಕೊಳ್ಳಲಾಗದೇ  ಶಾಶ್ವತವಾಗಿ  ಹಾಗೆಯೇ  ಉಳಿಸಿಕೊಂಡಿರುವದನ್ನು  ಕಾಣುತ್ತೇವೆ.  ಇವುಗಳು  ದೇವತೆಗಳಿಗೆ  ಒಪ್ಪಿಗೆಯಿಲ್ಲದ  ತ್ಯಾಜ್ಯಗಳಾದುದರಿಂದ  ಹಾಗೆಯೇ  ಉಳಿದುಕೊಳ್ಳುತ್ತಿವೆ.  ಒಟ್ಟಾರೆ  ದೇವತೆಗಳಿಂದ  ಪ್ರೇರೇಪಿಸಲ್ಪಟ್ಟ  ಪಂಚ  ಮಹಾಭೂತಗಳು  ತಮ್ಮ  ಕೆಲಸಗಳನ್ನು  ಮಾಡಿಕೊಳ್ಳುತ್ತಿವೆ.  ಆ ದೇವತೆಗಳಿಗೆ  ಪ್ರೇರಕನಾಗಿ  ದೇವರದೇವ  ಪರಮಾತ್ಮನು ಇದ್ದಿರುತ್ತಾನೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ