ದೇವರು ಕೂಡ ನಿದ್ದೆ ಮಾಡುತ್ತಾನೆಯೇ?

posted in: Gurubodhe | 0

ದೇವರೂ ನಿದ್ದೆ ಮಾಡುತ್ತಾನೆಯೇ? ಈ ಪ್ರಶ್ನೆಗೆ ಎರಡು ಉತ್ತರಗಳಿವೆ – ಹೌದು, ಇಲ್ಲ. ಒಂದರ್ಥದಲ್ಲಿ ಅವನು ನಿದ್ದೆ ಮಾಡುತ್ತಾನೆ. ಇನ್ನೊಂದರ್ಥದಲ್ಲಿ ಅವನಿಗೆ ನಿದ್ರೆ ಇಲ್ಲ.

ಆಷಾಢ ಶುದ್ಧ ಏಕಾದಶಿಯ ದಿವಸ ದೇವರ ಶಯನೋತ್ಸವ ಇದೆ. ಅನೇಕ ದೇವಸ್ಥಾನಗಳಲ್ಲಿ ಇದನ್ನು ಆಚರಿಸುತ್ತಾರೆ. ಅದನ್ನು ನೋಡಿದವರ ಮನಸ್ಸಿನಲ್ಲಿ ಈ ಪ್ರಶ್ನೆ ಬರುತ್ತದೆ – ‘ಅವನು ನಮ್ಮಂತೆಯೇ ನಿದ್ದೆ ಮಾಡುತ್ತಾನೆಯೇ? ಮಾಡುವುದಾದರೆ ನಮಗೂ ಅವನಿಗೂ ಏನು ಅಂತರ?’ ಭಗವಂತನ ನಿದ್ರೆಯ ಸೂಕ್ಷ್ಮ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದೇ ಈ ಪ್ರಶ್ನೆಗೆ ಉತ್ತರ. ಎಲ್ಲ ಪ್ರಾಣಿಗಳಿಗೆ ಶ್ರಮ ಜಾಸ್ತಿಯಾದಾಗ ನಿದ್ರೆ ಬರುತ್ತದೆ. ವಿಶ್ರಾಂತಿಯಲ್ಲಿ ಶ್ರಮ ಪರಿಹಾರವಾಗುತ್ತದೆ. ಭಗವಂತನಿಗೆ ಶ್ರಮವಿಲ್ಲ, ನಿದ್ರೆಯಿಂದ ಶ್ರಮದ ಪರಿಹಾರವೂ ಇಲ್ಲ. ಪಂಚ ಮಹಾಭೂತಗಳ ಕಾರ್ಯವಾಗಿರುವ ಶರೀರಕ್ಕೆ ಮತ್ತು ಇಂದ್ರಿಯಗಳಿಗೆ ಶ್ರಮ ಇರುತ್ತದೆ. ಮನಸ್ಸು ಕೂಡ ಪಂಚ ಮಹಾಭೂತಗಳಿಂದಲೇ ಆದುದರಿಂದ ಅದಕ್ಕೆ ಶ್ರಮವಿರುತ್ತದೆ. ಭಗವಂತನಿಗೆ ಪಂಚಮಹಾಭೂತಗಳ ದೇಹೇಂದ್ರಿಯಗಳಿಲ್ಲ. ಅವನ ಮೂಲಸ್ವರೂಪದಲ್ಲಿ ಅವನನ್ನು ನೋಡಿದರೆ ಅವನಿಗೆ ಪಂಚ ಮಹಾಭೂತಗಳ ಶರೀರೇಂದ್ರಿಯಗಳಿಲ್ಲ. ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಂ | ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ || (ಭ.ಗೀ.: ೯.೧೧) ವಸ್ತುತಃ ಅವನಿಗೆ ಶರೀರ ಇಲ್ಲದಿರುವುದನ್ನು ಈ ಶ್ಲೋಕ ಹೇಳುತ್ತದೆ. ಆದ್ದರಿಂದ ಅವನಿಗೆ ವಿಶ್ರಾಂತಿಯ ರೂಪದ ನಿದ್ರೆ ಇಲ್ಲ.

ಅವನ ನಿದ್ರೆಯನ್ನು ‘ಯೋಗನಿದ್ರೆ’ ಎಂಬುದಾಗಿ ಕರೆಯುತ್ತಾರೆ. ಅದು ವಾರ್ಷಿಕವಾಗಿ ಆಷಾಢಾದಿ ನಾಲ್ಕು ತಿಂಗಳಲ್ಲಿಯೇ ಬರುತ್ತದೆ. ಕಾರ್ತಿಕ ಶುದ್ಧ ದ್ವಾದಶಿಗೆ ಭಗವಂತನ ಯೋಗನಿದ್ರೆ ಮುಗಿಯುತ್ತದೆ. ಹೀಗೆ ನಿಯತವಾಗಿ ನಾಲ್ಕು ತಿಂಗಳಲ್ಲೇ ಬರುವುದರಿಂದಲೂ ಅವನ ನಿದ್ರೆ ಶ್ರಮ ಪರಿಹಾರದ ನಿದ್ರೆಯಲ್ಲ ಎಂದು ಗೊತ್ತಾಗುತ್ತದೆ. ಯೋಗನಿದ್ರೆ ಸತ್ತ್ವಗುಣದಿಂದ ಬರುತ್ತದೆ. ‘ಭೋಗನಿದ್ರೆ’ ಅಥವಾ ‘ವಿಶ್ರಾಂತಿಯ’ ನಿದ್ರೆ ತಮೋಗುಣದಿಂದ ಬರುತ್ತದೆ. ಸಾತ್ತ್ವಿಕ ಯೋಗನಿದ್ರೆಯಿಂದಲೂ ಶ್ರಮ ಪರಿಹಾರವಿದೆ, ಇಲ್ಲವೇ ಇಲ್ಲವೆಂದು ಅಭಿಪ್ರಾಯವಲ್ಲ. ಆದರೆ ಅಜ್ಞಾನಿಗಳ ವಿಶ್ರಾಂತಿಯಾಗುವುದು ತಮೋಗುಣದ ಯೋಗನಿದ್ರೆಯಿಂದಲೇ. ಭೋಗಿಗಳಿಗೆ ಬರುವ ನಿದ್ರೆಯಾದ್ದರಿಂದ ಅದು ಭೋಗನಿದ್ರೆ. ಯೋಗಿಗಳಿಗೆ ಬರುವ ನಿದ್ರೆ ಯೋಗನಿದ್ರೆ.

ಭಗವಂತನಿಗೆ ಇನ್ನೊಂದು ದೊಡ್ಡ ನಿದ್ರೆ ಇದೆ. ಬ್ರಹ್ಮದೇವನ ಒಂದು ದಿವಸದ ಅವಧಿಯಾದ ೪೩೨ ಕೋಟಿ ವರ್ಷಗಳು ಮುಗಿದಾಗ ಒಂದು ಮಹಾನಿದ್ರೆ ಬರುತ್ತದೆ. ಈ ೪೩೨ ವರ್ಷಗಳೇ ಸುಮಾರು ಒಂದು ಸಾವಿರ ಮಹಾಯುಗಗಳಾಗುತ್ತವೆ.. ಸಹಸ್ರಯುಗಪರ್ಯಯಂತಂ ಅಹರ್ಯತ್ ಬ್ರಹ್ಮಣೋ ವಿದುಃ | ರಾತ್ರಿಂ ಯುಗಸಹಸ್ರಾಂತಾಂ ತೇsಹೋರಾತ್ರವಿದೋ ಜನಾಃ || (ಭ.ಗೀ.: ೮.೧೭) ಈ ಹಗಲಿನ ಅವಧಿ ಮುಗಿದಾಗ ಬರುವ ನಿದ್ರೆ ಮಹಾನಿದ್ರೆ. ರಾತ್ರಿಯ ಅವಧಿಯೂ ೪೩೨ ಕೋಟಿ ವರ್ಷಗಳೇ ಆಗಿವೆ. ಈ ವೇಳೆಯ ನಿದ್ರೆಯಲ್ಲಿ ಇಡೀ ಬ್ರಹ್ಮಾಂಡವೂ ನಿದ್ರಿಸುತ್ತದೆ. ಬ್ರಹ್ಮದೇವನ ಪ್ರಕೃತಿಯಾಗಿರುವ ‘ಅವ್ಯಕ್ತ’ದಲ್ಲಿ ಸೇರಿಕೊಂಡು ಜಗತ್ತೆಲ್ಲವೂ ನಿದ್ರಿಸುತ್ತದೆ. ಇದೂ ವಿಶ್ರಾಂತಿಯ ನಿದ್ರೆಯಲ್ಲ. ಸೃಷ್ಟಿ – ಸ್ಥಿತಿ – ಲಯಗಳ ವ್ಯವಸ್ಥೆಗೆ ಅನುಸಾರವಾಗಿ ಬರುವ ನಿದ್ರೆ. ಒಟ್ಟಾರೆ ಸಾಮಾನ್ಯ ಜೀವರ ನಿದ್ರೆಗೂ ಅವನ ನಿದ್ರೆಗೂ ದೊಡ್ಡ ಅಂತರವಿದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ