“ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎನ್ನುವ ವೇದವಾಕ್ಯಕ್ಕೆ ಅನುಗುಣವಾಗಿ ಬದುಕಿನ ಸುಖ-ಭೋಗಗಳನ್ನು ಬದಿಗಿಟ್ಟು ಆತ್ಮಾರ್ಥ ವಾಗಿ ಸನ್ಯಾಸ ಸ್ವೀಕರಿಸಿ ಯತಿಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಿರುವ ವಿರಳ ಸನ್ಯಾಸಿಗಳಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಎದ್ದು ಕಾಣುತ್ತಾರೆ. ಜಪ-ತಪ, ಪೂಜೆ-ಪುನಸ್ಕಾರ, ಅಧ್ಯಯನ-ಅಧ್ಯಾಪನ, ಮುಂತಾದ ನಿಯಮಗಳ ಪಾಲನೆಯಲ್ಲಿ ಶ್ರೀಗಳವರದ್ದು ಕರ್ತವ್ಯ ತತ್ಪರತೆ. ಮಳೆಯಿರಲಿ, ಚಳಿಬರಲಿ, ದೇಹ ಬಳಲಿ-ಬೆಂಡಾಗಿರಲಿ, ಸಮಯ ಮಧ್ಯರಾತ್ರಿಯೂ ಆಗಿರಲಿ, ಈ ಕಾರ್ಯಗಳ ಅನುಷ್ಠಾನದಲ್ಲಿ ಯಾವುದೇ ರಾಜಿ ಇಲ್ಲ; ಮುಂದೂಡಿಕೆ ಇಲ್ಲ. ಅವರ ಅನುಷ್ಠಾನ ನಿಷ್ಠೆ ಕಂಡ ಜೀವನ್ಮುಕ್ತ ಪೂಜ್ಯ ಪುತ್ತೂರು ಅಜ್ಜರು “ಇವರ ನಿಯಮಿತತೆ ಮುಂದೆ ನಿಯಮಾತೀತ ಸ್ಥಿತಿಗೆ ಕರೆದೊಯ್ಯುತ್ತದೆ”, “ಅವರು ವೇದಾಂತವನ್ನು ಕಂಠಪಾಠ ಮಾಡಲಿಕ್ಕಲ್ಲ; ಅನುಭವಿಸಲು ಬಂದಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅನುಷ್ಠಾನಕ್ಕೆ ಮನೆಮಾತಾಗಿದ್ದ ತಮ್ಮ ಗುರು ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರ ಸಮರ್ಥ ಉತ್ತರಾಧಿಕಾರಿ ಎಂದು ಋಜುವಾತು ಪಡಿಸಿದ್ದಾರೆ.
ಪೀಠಾಧಿಪತ್ಯ ಒಂದರ್ಥದಲ್ಲಿ ಬೃಹತ್ ಸಂಸ್ಥೆ ಒಂದರ ಮುಖ್ಯ ಕಾರ್ಯನಿರ್ವಾಹಕನ ಹುದ್ದೆ ಇದ್ದಂತೆ. ಆದರೆ, ಲೌಕಿಕ ಜವಾಬ್ದಾರಿಗಳು ತಮ್ಮ ಆಧ್ಯಾತ್ಮಿಕ ಸಾಧನೆಗೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಪ್ರತಿಬಂಧಕ ಆಗದಂತೆ ಅವರು ನೋಡಿಕೊಂಡಿದ್ದಾರೆ. ಸನ್ಯಾಸ ದೀಕ್ಷೆ ಪಡೆದು, ಪೀಠಾರೋಹಣ ಮಾಡಿದ ೨/೨/೧೯೯೧ ರಿಂದ ಕಳೆದ ಮೂರು ದಶಕಗಳಲ್ಲಿ ಧಾರ್ಮಿಕ ಕೇಂದ್ರವಾಗಿದ್ದ ಶ್ರೀಮಠವನ್ನು ತಮ್ಮ ಕರ್ತ್ತತ್ವ ಶಕ್ತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಿದರು. ತಮ್ಮ ಶಿಷ್ಯರಲ್ಲಿ, ಭಕ್ತರಲ್ಲಿ, ಸುತ್ತಲಿನ ಸಮಾಜದಲ್ಲಿ ಅದ್ಭುತವಾದ ಪರಿವರ್ತನೆಗೆ ಕಾರಣರಾಗಿದ್ದಾರೆ. ತಾವು ಶ್ರೀಮಠದ ಏಕೈಕ ಟ್ರಸ್ಟಿ ಆಗಿದ್ದರೂ ಮಠದ ವ್ಯಾವಹಾರಿಕ ಚಟುವಟಿಕೆಗಳ ನಿರ್ವಹಣೆಗಾಗಿ ಆಡಳಿತ ಸಮಿತಿ, ಸೀಮೆ ಹಾಗೂ ಗ್ರಾಮ ಪರಿಷತ್ತುಗಳು, ಮಾತೃಮಂಡಳಿ, ಯುವ ಪರಿಷತ್ತು, ರಾಮಕ್ಷತ್ರಿಯ ಪರಿಷತ್ತು, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಪುಣೆ, ಮುಂಬೈ ಮುಂತಾದ ನಗರಗಳ ಶಿಷ್ಯರ ಸಂಘಟನೆಗಾಗಿ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ, ಮುಂತಾದವನ್ನು ಆಯೋಜಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು:
೫೮ ವರ್ಷಗಳ ಕಾಲ ನಿರಂತರವಾಗಿ, ನಿಯಮಿತವಾಗಿ ಶ್ರೀ ಚಕ್ರೇಶ್ವರೀಯ ಉಪಾಸನೆ ಮಾಡಿ ಶ್ರೀ ಲಲಿತಾಚರಣದಾಸ ಎಂಬ ಬಿರುದಾಂಕಿತ ತಮ್ಮ ಗುರುಗಳವರ ಪಥದಲ್ಲಿ ಮುಂದುವರಿದು ಕಳೆದ ೩೦ ವರ್ಷಗಳ ಕಾಲ ನಿಯಮಿತವಾಗಿ ನವಾವರಣ ಪೂಜೆ ಹಾಗೂ ಶ್ರೀಮಠದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀನರಸಿಂಹ, ಶ್ರೀ ಚಂದ್ರಮೌಳೀಶ್ವರ, ಶ್ರೀ ರತ್ನಗರ್ಭ ಗಣಪತಿ, ಮುಂತಾದವರ ಪೂಜಾದಿಗಳನ್ನು ನಿಷ್ಠೆಯಿಂದ ಅನುಷ್ಠಾನ ಮಾಡುತ್ತ ಬಂದಿದ್ದಾರೆ. ಪ್ರತಿನಿತ್ಯ ಮುಂಜಾನೆ ೬ ಗಂಟೆಗೆ ಗರ್ಭಗುಡಿಯನ್ನು ಪ್ರವೇಶ ಮಾಡಿದರೆ ಮಧ್ಯಾಹ್ನ ೨.೦೦ ಅಥವಾ ೨.೩೦ಕ್ಕೇ ಹೊರಬರುವುದು. ಎಂತಹ ಸನ್ನಿವೇಶ ಇದ್ದರೂ ಪೂಜೆಯಲ್ಲಿ ರಾಜಿಯಿಲ್ಲ. ಶರನ್ನವರಾತ್ರಿ ಮಠದ ದಿವ್ಯ ಉತ್ಸವ. ಆ ದಿನಗಳಲ್ಲಿ ಸುಮಾರು ೧೫-೧೬ ಗಂಟೆ ಶ್ರೀಗಳವರು ಪೂಜೆಯಲ್ಲೇ ತೊಡಗಿರುತ್ತಾರೆ. ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ಅವರಿಂದ ನವಾವರಣ ಪೂಜೆ ನೆರವೇರುತ್ತದೆ. ಉತ್ತರ ಭಾರತದ ಯಾತ್ರೆಯ ಸಂದರ್ಭದಲ್ಲಿ ಪುಷ್ಕರದಿಂದ ಕೇವಲ ೨೪೩ ಕಿ.ಮಿ. ದೂರವಿರುವ ಮಥುರಾವನ್ನು ತಲುಪುವಾಗ ರಾತ್ರಿ ೨ ಗಂಟೆ. ಜೊತೆಯಲ್ಲಿದ್ದ ನಾವೆಲ್ಲರೂ ಹಾಸಿಗೆಗೆ ಶರಣಾದರೆ ಶ್ರೀಗಳವರು ಸ್ನಾನಮಾಡಿ ಬೆಳಿಗ್ಗೆ ೫.೩೦ ರವರೆಗೆ ರಾತ್ರಿಯ ಪೂಜೆ ನೆರವೇರಿಸಿದರು. ಆನಂತರ ಪುನಃ ಸ್ನಾನ ಮಾಡಿ ಮರುದಿನದ ಪ್ರಾತಃಕಾಲದ ಪೂಜೆಗೆ ಕುಳಿತುಕೊಂಡರು. ಅವರ ಈ ಅನುಷ್ಠಾನ-ನಿಷ್ಠೆಯನ್ನು ಕಂಡು ಶಿಷ್ಯರೊಬ್ಬರು “ಕ್ರಿಯಾಶೀಲ ವ್ಯಕ್ತಿಗೆ ಉದ್ಯೋಗದ ಬದಲಾವಣೆಯೇ ವಿಶ್ರಾಂತಿ: ಸ್ವರ್ಣವಲ್ಲೀ ಗುರುಗಳವರಿಗೆ ಪೂಜೆಯ ಬದಲಾವಣೆಯೇ ವಿಶ್ರಾಂತಿ” ಎಂದು ಉದ್ಗರಿಸಿದ್ದರು.
ಗುಜರಾತದ ಗಿರನಾರ ಪರ್ವತದ ತುದಿಯಲ್ಲಿರುವ ಶ್ರೀ ದತ್ತಪಾದುಕಾ ದರ್ಶನಕ್ಕೆ ೧೦೦೦೦ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುಮಾರು ೪ ಗಂಟೆಗಳ ನಡಿಗೆ. ರಾತ್ರಿ ೧.೩೦ಕ್ಕೇ ಎದ್ದು ಮುಂಜಾನೆಯ ಪೂಜೆ ಪ್ರಾರಂಭಿಸಿ ೬ ಗಂಟೆಗೆ ಪೂಜೆ ಮುಗಿಸಿ ೬.೩೦ಕ್ಕೆ ಚಾರಣ ಪ್ರಾರಂಭ; ೧೧.೩೦ಕ್ಕೆ ದತ್ತಪಾದುಕೆಯ ದರ್ಶನ; ಅಲ್ಲಿ ಸುಮಾರು ೧ ಗಂಟೆಯ ಕಾಲ ಪೂಜಾದಿಗಳನ್ನು ಪೂರೈಸಿ ಕೆಳಗೆ ಇಳಿದು ಬಂದಾಗ ಮಧ್ಯಾಹ್ನ ೩.೩೦. ಯಾರಿಗೂ ಕಾಲನ್ನು ಎತ್ತಿಡುವ ಸಾಮರ್ಥ್ಯ ಇರಲಿಲ್ಲ; ಅಸಾಧ್ಯವಾದ ನೋವು; ಜೊತೆಗೆ ತೀವ್ರ ಹಸಿವು. ಜೊತೆಯಿದ್ದ ನಾವೆಲ್ಲ ನೇರವಾಗಿ ಊಟಕ್ಕೆ ತೆರಳಿದರೆ ಶ್ರೀಗಳವರು ಸ್ನಾನ ಮಾಡಿ ಸಂಜೆ ೫.೪೫ ರವರೆಗೆ ಮಾಧ್ಯಾಹ್ನಿಕ ಪೂರೈಸಿ ಆನಂತರ ಮಧ್ಯಾಹ್ನದ ಭಿಕ್ಷೆಗೆ ಹೋದರು. ಇದನ್ನು ಕಂಡ ಅಲ್ಲಿಯ ಸ್ವಾಮಿನಾರಾಯಣ ಪಂಥದ ಗುರುಗಳವರು ತಾವು ಯಾತ್ರೆಯ ಅವಧಿಯಲ್ಲಿ ತಮ್ಮ ಪೂಜೆ ಅನುಷ್ಠಾನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲವೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಶ್ರೀಗಳವರು “ಯತಿಯಾದ ನಮಗೆ ಪ್ರತಿನಿತ್ಯವೂ ಯಾತ್ರೆ. ಒಂದು ದಿನ ಪೂಜೆಯಲ್ಲಿ ರಾಜಿ ಮಾಡಿಕೊಂಡರೆ ೩೬೫ ದಿನವೂ ರಾಜಿಯನ್ನೇ ಮಾಡಿಕೊಳ್ಳಬೇಕಾಗುತ್ತದೆ” ಎಂದು ತಮ್ಮ ನಿಲುವನ್ನು ವಿವರಿಸಿದ್ದರು. ಅಧ್ಯಯನ ಹಾಗೂ ಅಧ್ಯಾಪನ ಯತಿಯ ಆದ್ಯ ಕರ್ತವ್ಯ. ಸಮಯ ಎಷ್ಟೇ ರಾತ್ರಿಯಾಗಿರಲಿ, ಈ ಕರ್ತವ್ಯಗಳನ್ನು ಅವರು ವ್ರತದಂತೆ ಪರಿಪಾಲಿಸುತ್ತ ಬಂದಿದ್ದಾರೆ. ತಮ್ಮ ಅವಿಶ್ರಾಂತ ಕರ್ತವ್ಯಗಳ ನಡುವೆ ಪ್ರತಿನಿತ್ಯ ವೇದಾಂತದ ಸೂತ್ರಗಳನ್ನು, ಪ್ರಸ್ಥಾನ ತ್ರಯವನ್ನು ಅಧ್ಯಯನ ಮಾಡುವುದರ ಜೊತೆಗೆ ಮಕ್ಕಳಿಗೆ ವೇದಾಂತದ ಪಾಠ- ಪ್ರವಚನವನ್ನೂ ತಪ್ಪದೇ ಮಾಡುತ್ತಾರೆ. ಯಾತ್ರೆಯ ಸಂದರ್ಭದಲ್ಲಿ ತಮ್ಮ ವಾಹನದಲ್ಲಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಪಾಠ ಮಾಡಿದ ಸಂದರ್ಭಗಳು ಹಲವು.
ವೇದ, ಶಾಸ್ತ್ರ, ಸಂಸ್ಕೃತ, ಮುಂತಾದವುಗಳ ಸಂರಕ್ಷಣೆ ಹಾಗೂ ಅಧ್ಯಯನಕ್ಕೆ ಅವರಿಗೆ ಅತೀವ ಕಳಕಳಿ. ೨೦೦೭ರಲ್ಲಿ ಅಖಿಲ ಕರ್ನಾಟಕ ವೇದ ಸಮ್ಮೇಳನ, ೧೯೯೮ರಲ್ಲಿ ಹಾಗೂ ೨೦೧೯ರಲ್ಲಿ ಶ್ರೀಮಠದಲ್ಲಿ ಭಾರತ ಸರಕಾರದ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಸಹಯೋಗದಲ್ಲಿ ದಕ್ಷಿಣ ಭಾರತದ ಕ್ಷೇತ್ರೀಯ ವೇದಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿದ್ದಾರೆ. ಅವಲ್ಲದೇ ಮನೆಮನೆಯಲ್ಲಿ ವೇದ ಘೋಷವನ್ನು ಪುನಃ ಮೊಳಗಿಸಲು ವೇದಸಂಗಮ, ಶ್ರೀ ಮಠದಲ್ಲಿ ಋಗ್ವೇದ ಘನ ಪಾರಾಯಣ, ಸಂಸ್ಕೃತ ಸಂಭಾಷಣೆಯನ್ನು ಜನಪ್ರಿಯಗೊಳಿಸಲು ಜಿಲ್ಲೆಯಾದ್ಯಂತ ಸಂಸ್ಕೃತ ಸಂಗಮ ಕಾರ್ಯಕ್ರಮ ಮುಂತಾದವುಗಳನ್ನು ಸಂಘಟಿಸಿದ್ದಾರೆ. ಮಠದಲ್ಲಿ ಉಚಿತ ಊಟ-ವಸತಿಯೊಡನೆ ನಡೆಸಿತ್ತಿರುವ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಋಗ್ವೇದ ಹಾಗೂ ಯಜುರ್ವೆದವನ್ನು ಅಧ್ಯಯನ ಮಾಡಿರುವುದು ಹಾಗೂ ಮಾಡುತ್ತಿರುವುದು ಅವರ ಸತ್ಸಂಕಲ್ಪದ ಪರಿಣಾಮ. ಇದೀಗ ಸಾಮವೇದ ಹಾಗೂ ಅಥರ್ವಣ ವೇದಗಳ ತರಗತಿಗಳನ್ನೂ ಪ್ರಾರಂಭಿಸುವ ಸಿದ್ಧತೆ ನಡೆದಿದೆ. “ಕೃಷ್ಣ ಯಜುರ್ವೆದ ಸ್ವಾಹಾಕಾ ವಿಧಿಃ” ಎನ್ನುವ ಯಜುರ್ವೆದ ದ ಹವನಗಳಿಗೆ ಸಂಬಂಧಿಸಿದ ಬಾಲಕ ಸಂಪುಟಗಳ ಕೃತಿಯನ್ನೂ ಶ್ರೀಮಠ ಪ್ರಕಟಿಸಿದೆ. ಹಲವು ಬಾರಿ ವೇದ ವಾಙ್ಮಯದ ಸಂಹಿತಾ ಹವನಗಳನ್ನು ಮಠದಲ್ಲಿ ಆಯೋಜಿಸಿದ್ದಾರೆ. ಮಠದಲ್ಲಿ ಪೂಜಾದಿಗಳನ್ನು ಹಾಗೂ ಅನ್ನಸಂತರ್ಪಣೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಶ್ರೀ ಲಲಿತಾಂಬಾ ನಿಧಿ ಎನ್ನುವ ಟ್ರಷ್ಠ ಸ್ಥಾಪಿಸಲಾಗಿದೆ. ಶ್ರೀಮಠಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಉಚಿತ ಭೋಜನ ವ್ಯವಸ್ಥೆ ನೀಡಲಾಗುತ್ತಿದೆ. ಜೊತೆಗೆ ಬಡ ಮಕ್ಕಳಿಗೆ ಉಚಿತ ಉಪನಯನ ಸಂಸ್ಕಾರವನ್ನೂ ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸ್ವಾನಂದಾಶ್ರಮ ಎನ್ನುವ ಸಂಸ್ಥೆ ಶ್ರೀಗಳವರ ನೇತೃತ್ವದಲ್ಲಿ ಗಣಪತಿ ತತ್ತ್ವ ಪ್ರಸರಣೆಗೆ ಕೆಲಸ ಮಾಡುತ್ತಿದೆ. ಅಲ್ಲಿ ಮಹಾಗಣಪತಿ ಹಾಗೂ ದೇವಿ ದೇವಸ್ಥಾನಗಳನ್ನು ನಿರ್ಮಿಸಿರುವ ಈ ಸಂಸ್ಥೆ “ಸ್ವಾನಂದ ಪ್ರಕಾಶ” ಎನ್ನುವ ಅಂತರ್ಜಾಲ ಪತ್ರಿಕೆಯನ್ನೂ ಪ್ರಕಟಿಸುತ್ತಿದೆ.
ಶೈಕ್ಷಣಿಕ ಚಟುವಟಿಕೆಗಳು
ಗುರು ಶ್ರೀ ಸರ್ವಜ್ಞೇಂದ್ರರಿಂದ ೧೯೨೯ರಲ್ಲಿ ವೇದಾಧ್ಯಯನ ವರ್ಧಿನಿ ಸಭಾ ಎಂದು ಪ್ರಾರಂಭಿಸಲ್ಪಟ್ಟು ನಂತರ ೧೯೫೦ರಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆ ಎಂದು ಮರುನಾಮಕರಣಗೊಂಡ ಟ್ರಸ್ಟ್ ನಡೆಸುತ್ತಿದ್ದ ಸಂಸ್ಕೃತ ಪಾಠಶಾಲೆ ಶ್ರೀಗಳವರ ಮಾರ್ಗದರ್ಶಕ ಸಂಸ್ಕೃತ ಮಹಾವಿದ್ಯಾಲಯವಾಗಿ (ಕಾಲೇಜ್) ಬೆಳವಣಿಗೆ ಹೊಂದಿದೆ. ಇಂದು ನೂರಾರು ವಿದ್ಯಾರ್ಥಿಗಳಿಗೆ ವೇದ, ವೇದಾಂಗ ಹಾಗೂ ಶಾಸ್ತ್ರಗಳಲ್ಲಿ ಪದವಿ ಹಾಗೂ ವೇದಾಂತ ಮತ್ತು ಮೀಮಾಂಸ ಶಾಸ್ತ್ರಗಳಲ್ಲಿ ವಿದ್ವತ್ ಪದವಿ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಗೆ ಸ್ವತಂತ್ರ ಸ್ಥಳವನ್ನೂ ಖರೀದಿಸಲಾಗಿದೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸಂಸ್ಥೆಯಲ್ಲಿ ಅತ್ಯುತ್ತಮವಾದ ವಾಚನಾಲಯವನ್ನೂ ಸ್ಥಾಪಿಸಲಾಗಿದೆ. ಸುತ್ತಲಿನ ಮನೆಗಳಲ್ಲಿ ಇದ್ದ ತಾಡವಾಲೆ ಪ್ರತಿಗಳನ್ನು ಸಂರಕ್ಷಿಸಲಾಗಿದ್ದು ಅವುಗಳ ಸಂಶೋಧನಾ ಕಾರ್ಯವೂ ನಡೆಯುತ್ತಿದೆ. ಕಳೆದ 30 ವರ್ಷಗಳಿಂದ ಪ್ರತಿವರ್ಷ ರಾಷ್ಟ್ರಮಟ್ಟದ ಶಾಸ್ತ್ರ ಚಿಂತನ ಗೋಷ್ಠಿ ನಡೆಸಲಾಗುತ್ತಿದೆ. ಸ್ವತಃ ಶ್ರೀಗಳವರು ಈ ಗೋಷ್ಠಿಯಲ್ಲಿ ಆದ್ಯಂತ ಪಾಲ್ಗೊಳ್ಳುತ್ತಾರೆ. ಬ್ರಹ್ಮವಿದ್ಯಾ ಸಂಸ್ಥಾನ ಎನ್ನುವುದು ಶ್ರೀಗಳವರು ಪ್ರಾರಂಭಿಸಿರುವ ವಿದ್ಯಾ ಸಂಸ್ಥೆಯ ಸಂಶೋಧನಾ ವಿಭಾಗ. ವೇದ-ವೇದಾಂಗ ಹಾಗೂ ಸಂಸ್ಕೃತ- ಶಾಸ್ತ್ರಗಳಲ್ಲಿ ಸಂಶೋಧನೆ ನಡೆಸುವುದು ಇದರ ಧ್ಯೇಯ. ಸೂರ್ಯ ಸಿದ್ಧಾಂತ, ದೃಕ್ ಸಿದ್ಧಾಂತ ಹಾಗೂ ಆರ್ಯಭಟೀಯ ಸಿದ್ಧಾಂತಗಳನ್ನು ಆಧರಿಸಿ ಸಿದ್ಧಪಡಿಸಲಾಗುವ ಪಂಚಾಂಗಗಳ ನಡುವಿನ ಗೊಂದಲ ನಿವಾರಣೆಗೆ ಶ್ರೀಗಳವರ ಮಾರ್ಗದರ್ಶನದಲ್ಲಿ 2004 ರಲ್ಲಿ ಸ್ವರ್ಣವಲ್ಲೀ ಮಠದಲ್ಲಿ ಹಾಗೂ 2012ರಲ್ಲಿ ತಿರುಪತಿಯಲ್ಲಿ ಜ್ಯೋತಿಷ ಗಣಿತ ಸಮ್ಮೇಳನ ಆಯೋಜಿಸಲಾಯಿತು. ಪಂಚಾಂಗ ಪರಿಷ್ಕರಣೆಗೆ ಪಾರಂಪರಿಕ ಪಂಡಿತರ ಹಾಗೂ ವಿಜ್ಞಾನಿಗಳಿಂದ ಸಮಿತಿ ರಚಿಸಿ ಅಧ್ಯಯನ ನಡೆಸಲಾಗುತ್ತಿದೆ. ಪರಂಪರೆಯ ಬೇರುಗಳನ್ನು ಆಧರಿಸಿದ ಆಧುನಿಕ ಶಿಕ್ಷಣ ಸೌಲಭ್ಯ ಕಲ್ಪಿಸಲು ಶಿರಸಿಯ ಸಮೀಪ ಇಸಳೂರಿನಲ್ಲಿ 8 ಎಕರೆ ವಿಸ್ತೀರ್ಣದ ಸ್ವತಂತ್ರ ಜಾಗದಲ್ಲಿ ನಿರ್ಮಿಸಲಾದ ಸುಸಜ್ಜಿತ ಕಟ್ಟಡ ಹಾಗೂ ಕ್ರೀಡಾಂಗಣ ಹೊಂದಿದ ಶ್ರೀನಿಕೇತನ ಸಿ.ಬಿ.ಎಸ್.ಸಿ. ಶಾಲೆಯನ್ನು ಪ್ರಾರಂಭಿಸಲಾಗಿದೆ. ಪೂರ್ವ ಪ್ರಾಥಮಿಕ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶ್ರೀದೇವಿ ಶಿಕ್ಷಣ ಸಂಸ್ಥೆ ಹುಲೇಕಲ್ ಸಹ ಶ್ರೀಗಳವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ 8ನೇ ತರಗತಿಯಿಂದ 12ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಯಲ್ಲಾಪುರದಲ್ಲಿ ಶ್ರೀಮಠ ಸ್ಥಾಪಿಸಿರುವ ಶ್ರೀ ಶಾರದಾಂಬಾ ದೇವಸ್ಥಾನ ಸಮುಚ್ಚಯದಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ವೇದ ಶಿಕ್ಷಣ ಕೊಡುವ ಕಾರ್ಯ ನಡೆಸುತ್ತಿದೆ.
ಶ್ರೀ ಭಗವತ್ಪಾದ ಪ್ರಕಾಶನ (ರಿ)
ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀಗಳವರು ಇದನ್ನು ಪ್ರಾರಂಭಿಸಿದರು. 2001ರಲ್ಲಿ ಸ್ವರ್ಣವಲ್ಲೀ ಪ್ರಭಾ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಕಳೆದ 20 ವರ್ಷಗಳಿಂದ ಆ ಪತ್ರಿಕೆ ಪ್ರಕಟವಾಗುತ್ತಿದೆ. ಅದಲ್ಲದೇ, 108ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಈವರೆಗೆ ಪ್ರಕಟಿಸಲಾಗಿದೆ. ಸಂತರ ಜೀವನ ಚರಿತ್ರೆ, ಶಾಸ್ತ್ರ ಕೃತಿಗಳು, ಮಂತ್ರ-ಸ್ತೋತ್ರಗಳು, ಸಂಶೋಧನಾ ಗ್ರಂಥಗಳು ಮುಂತಾದವುಗಳ ಪ್ರಕಟಣೆ ಇದರ ಗುರಿ. ತಂತ್ರ ಸಮುಚ್ಚಯ, ಶೇಷ ಸಮುಚ್ಚಯ, ಶ್ರೀ ಗಣೇಶ ಮಹಾದರ್ಶನ, ಶ್ರೀ ರಾಮ ಮಹಾದರ್ಶನ, ಶ್ರೀ ಶಂಕರಾಚಾರ್ಯರ ಅದ್ವೈತ ದರ್ಶನ, ಅದ್ವೈತ ವೇದಾಂತ ಮತ್ತು ಆಧುನಿಕ ಭೌತಶಾಸ್ತ್ರ, ಮುಂತಾದವು ಇದರ ಹೆಮ್ಮೆಯ ಪ್ರಕಟಣೆಗಳು.
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ (ರಿ)
1991ರಲ್ಲಿ ಶ್ರೀಗಳವರಿಂದ ಪ್ರಾರಂಭಿಸಲ್ಪಟ್ಟ ಈ ಸಂಘಟನೆ ಜನತೆಯಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ವರ್ಧನೆಗೆ ಕಾರ್ಯ ನಿರ್ವಹಿಸುತ್ತಿದೆ. ಬಡವರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಾ ಸ್ಪರ್ಧೆಗಳ ಆಯೋಜನೆ, ಸಂಧ್ಯಾವಂದನೆ, ನಿತ್ಯಕರ್ಮ, ಯೋಗಾಸನ, ಪ್ರಾಣಾಯಾಮ, ಮುಂತಾದವುಗಳಲ್ಲಿ ಉಪನೀತ ಗಂಡುಮಕ್ಕಳಿಗೆ ವಸತಿಯುಕ್ತ ತರಬೇತಿ ನೀಡುವ ಜೀವನ ಶಿಕ್ಷಣ ಅಧ್ಯಯನ ಶಿಬಿರ, ಹೆಣ್ಣು ಮಕ್ಕಳಿಗೆ ವಸತಿಯುಕ್ತ ತರಬೇತಿ ನೀಡುವ ಕುಮಾರಿ ಸಂಸ್ಕೃತಿ ಶಿಬಿರ, ವ್ಯಸನಗಳಿಂದ ಯುವಕರನ್ನು ರಕ್ಷಿಸುವ ಸಲುವಾಗಿ ಶಾಲೆಗಳಲ್ಲಿ ವ್ಯಸನಮುಕ್ತ ಸಮಾಜ ಶಿಬಿರ, ಸ್ತ್ರೀಭ್ರೂಣಹತ್ಯಾ ನಿರ್ಮೂಲನೆ ಹಾಗೂ ಸತ್ಸಂತಾನ ಕುರಿತು ಮಾರ್ಗದರ್ಶನ ನೀಡಲು ದಂಪತಿ ಸಮಾವೇಶ ಶಿಬಿರ, ಮುಂತಾದ ಕಾರ್ಯಕ್ರಮಗಳನ್ನು ಈ ಸಂಘಟನೆ ಸಮರ್ಥವಾಗಿ ಆಯೋಜಿಸುತ್ತಿದೆ. ಶಿರಸಿಯಲ್ಲಿ ಯೋಗಮಂದಿರವನ್ನು ನಿರ್ಮಿಸಿ ಯೋಗ-ಪ್ರಾಣಾಯಾಮವನ್ನು ಜನಪ್ರಿಯಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯೋಗ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಯೋಗಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಭಗವದ್ಗೀತಾ ಅಭಿಯಾನ
ಸಮಾಜದಲ್ಲಿ ಸಾತ್ತ್ವಿಕ ಮೌಲ್ಯಗಳ ಪ್ರತಿಪಾದನೆಗೆ 2007ರಲ್ಲಿ ಶ್ರೀಗಳವರು ಪ್ರಾರಂಭಿಸಿದ ಶ್ರೀ ಭಗವದ್ಗೀತಾ ಅಭಿಯಾನ ಶಾಲಾ-ಕಾಲೇಜುಗಳಲ್ಲಿ, ಸಂಘಸಂಸ್ಥೆಗಳಲ್ಲಿ, ಕಾರಾಗೃಹಗಳಲ್ಲಿ ಗೀತೆಯ ಪಾರಾಯಣವನ್ನು ಪ್ರಚುರ- ಪಡಿಸುವುದರ ಜೊತೆಗೆ ಗೀತೆಯನ್ನು ಕುರಿತು ತಜ್ಞರಿಂದ ಉಪನ್ಯಾಸಗಳನ್ನೂ ಹಾಗೂ ವಿಚಾರ ಸಂಕಿರಣಗಳನ್ನೂ ಆಯೋಜಿಸಿದೆ. ಭಗವದ್ಗೀತೆ ಮತ್ತು ಮಾನಸಿಕ ಆರೋಗ್ಯ, ಭಗವದ್ಗೀತೆ ಮತ್ತು ಮ್ಯಾನೇಜ್ಮೆಂಟ್, ಭಗವದ್ಗೀತೆ ಮತ್ತು ವಚನ ಸಾಹಿತ್ಯ, ಭಗವದ್ಗೀತೆ ಮತ್ತು ಕಾನೂನು, ಮುಂತಾದ ವಿಷಯಗಳ ಮೇಲೆ ವಿವಿಧ ಪ್ರತಿಷ್ಠಿತ ಸಂಘಟನೆಗಳ ಸಹಯೋಗದಲ್ಲಿ ವಿಚಾರ ಸಂಕಿರಣ ಆಯೋಜಿಸಿ ಮಂಡಿಸಲ್ಪಟ್ಟ ಪ್ರಬಂಧಗಳನ್ನು ಪ್ರಕಟಿಸಲಾಗಿದೆ.
ಪರಿಸರ ಚಟುವಟಿಕೆಗಳು:
ಜನಜೀವನಕ್ಕೆ ಮಾರಕವಾದ ಬೇಡ್ತಿ-ಅಘನಾಶಿನಿ ಬೃಹತ್ ಜಲವಿದ್ಯುತ್ ಯೋಜನೆಗಳ ವಿರುದ್ಧ 1992ರಲ್ಲಿ ಶ್ರೀಗಳವರು ನಡೆಸಿದ ಐತಿಹಾಸಿಕ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮ ಅವರಿಗೆ “ಹಸಿರು ಸ್ವಾಮೀಜಿ” ಎಂಬ ಅಭಿದಾನವನ್ನು ತಂದುಕೊಟ್ಟಿದೆ. ಪ್ರತಿರೋಧ ಮಾತ್ರವಲ್ಲದೇ ಪರಿಸರ ಸಂರಕ್ಷಣೆಯೂ ನಮ್ಮ ಕರ್ತವ್ಯ ಎಂದು ಶ್ರೀಗಳವರು ಶ್ರೀಮಠದ ಪರಿಸರದಲ್ಲಿ 30 ಎಕರೆ ವಿಸ್ತೀರ್ಣದ ಸಸ್ಯಲೋಕ ಎನ್ನುವ ಉದ್ಯಾನವನವನ್ನು ನಿರ್ಮಿಸಿದ್ದಾರೆ. 225 ಪ್ರಬೇಧಗಳ 10000ಕ್ಕೂ ಅಧಿಕ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ. ವಿನಾಶದ ಅಂಚಿನಲ್ಲಿ ಇರುವ ಸಸ್ಯಗಳನ್ನು ಸಂರಕ್ಷಿಸಲಾಗಿದೆ. ರಾಶಿವನ, ನಕ್ಷತ್ರವನ, ಫಲವನ, ಪುಷ್ಪವನ, ಮುಂತಾದವನ್ನು ಬೆಳೆಸಲಾಗಿದೆ. ಇದು ಒಂದರ್ಥದಲ್ಲಿ ಸಸ್ಯ-ಪಾಠಶಾಲೆ.
ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ (ರಿ)
ಪಾರಂಪರಿಕ ಸಾವಯವ ಕೃಷಿಯನ್ನು ರಕ್ಷಿಸಲು ಹಾಗೂ ಯುವಕರಲ್ಲಿ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಆಸಕ್ತಿ ಮೂಡಿಸಲು 2009ರಲ್ಲಿ ಈ ಸಂಘಟನೆ ಪ್ರಾರಂಭಿಸಲಾಗಿದೆ. ಪ್ರತಿವರ್ಷ ಕೃಷಿ ಜಯಂತಿ ಸಮಾವೇಶ ಹಮ್ಮಿಕೊಂಡು ತಜ್ಞರಿಂದ ಉಪನ್ಯಾಸ, ತರಬೇತಿ, ಇತ್ಯಾದಿ ಕಾರ್ಯಕ್ರಮಗಳನ್ನು ಈ ಸಂಘಟನೆ ನಡೆಸುತ್ತಿದೆ.
ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳು
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಕಾರ್ಯ ನಡೆಸಲು ಜಾಗೃತ ವೇದಿಕೆ ಎನ್ನುವ ಸಂಘಟನೆಯನ್ನು ಶ್ರೀಗಳವರು ಪ್ರಾರಂಭಿಸಿದ್ದಾರೆ. ಇದು ಹಲವು ಶಿಥಿಲವಾದ ದೇವಾಲಯಗಳನ್ನು ಸರಕಾರ ಹಾಗೂ ಸಂಘಸಂಸ್ಥೆಗಳ ನೆರವಿನಿಂದ ಜೀರ್ಣೋದ್ಧಾರ ಮಾಡಿದೆ.
ಗ್ರಾಮಾಭ್ಯುದಯ(ರಿ)
ಗ್ರಾಮೀಣ ಅಭಿವೃದ್ಧಿ ಸಾಧಿಸಲು ಮಾರ್ಗದರ್ಶನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳ ಆಯೋಜನೆ (ಈವರೆಗೆ 111 ಶಿಬಿರಗಳನ್ನು ಏರ್ಪಡಿಸಲಾಗಿದೆ), ಉಚಿತ ಔಷಧಗಳ ವಿತರಣೆ, ಶಸ್ತ್ರ ಚಿಕಿತ್ಸೆ, ರಕ್ತತಪಾಸಣೆ, ಸ್ವಸಹಾಯ ಸಂಘಗಳ ಸ್ಥಾಪನೆ, ಮುಂತಾದ ಕಾರ್ಯಗಳನ್ನು ಈ ಸಂಘಟನೆ ನಡೆಸುತ್ತಿದೆ. ಸುವರ್ಣ ಕರ್ನಾಟಕ ಗೋಶಾಲೆ ಸ್ವರ್ಣವಲ್ಲೀ (2010) ಹಾಗೂ ಗೋವರ್ಧನ ಟ್ರಸ್ಟ್ (ರಿ) ಯಲ್ಲಾಪುರ (2012) ಇವು ವೃದ್ಧ ಗೋವುಗಳ ಆರೈಕೆ ಮಾಡುವುದರ ಜೊತೆಗೆ ಕಾನೂನು ಬಾಹಿರವಾಗಿ ಸಾಗಿಸುವ ಗೋವುಗಳನ್ನು ಆರಕ್ಷಕರು ವಶಪಡಿಸಿಕೊಂಡಾಗ ಅವುಗಳಿಗೆ ಆಶ್ರಯ ಒದಗಿಸುತ್ತಿವೆ.
ಸಾಂಸ್ಕೃತಿಕ ಚಟುವಟಿಕೆಗಳು
ಯಕ್ಷಶಾಲ್ಮಲಾ (ರಿ) ಇದು ಕರ್ನಾಟಕದ ವರ್ಣಮಯ ಕಲೆ ಯಕ್ಷಗಾನದ ಪಾರಂಪರಿಕ ಸೊಬಗನ್ನು ಸಂರಕ್ಷಿಸಲು ಹಾಗೂ ಪೋಷಿಸಲು ಪ್ರಾರಂಭಿಸಲಾದ ಸಂಘಟನೆ. ಸ್ವರ ಸಂಧಾನ, ನೃತ್ಯ ಸಂಧಾನ, ಅಭಿನಯ ಸಂಧಾನ, ಮುಂತಾದ ಕಮ್ಮಟಗಳನ್ನು ಆಯೋಜಿಸುವ ಮೂಲಕ ಹಾಗೂ ಮಕ್ಕಳಿಗೆ ಯಕ್ಷಗಾನ ಸ್ಪರ್ಧೆಗಳನ್ನು ನಡೆಸುವ ಮೂಲಕ ಈ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿದೆ. ಮಾತೃಮಂಡಳಿ ಸಂಘಟನೆ ಪಾರಂಪರಿಕ ಹಳ್ಳಿ ಹಾಡಿನ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಆ ಪ್ರಕಾರದ ಸಂರಕ್ಷಣೆಗೆ ಪ್ರಯತ್ತಿಸುತ್ತಿದೆ.
ಹೀಗೆ ತಮ್ಮ ಆಧ್ಯಾತ್ಮಿಕ ಅಂತರ್ಯಾತ್ರೆಯ ಜೊತೆಗೆ ಸುತ್ತಲಿನ ಸಮಾಜದ ಸರ್ವಾಂಗೀಣ ಅಭ್ಯುದಯಕ್ಕೆ ಯತಿಯೊಬ್ಬರು ಕಂಕಣ ಬದ್ಧರಾಗಿರುವುದು ಅವರ ಸಾಮಾಜಿಕ ಕಳಕಳಿಯ ದ್ಯೋತಕ. ಸಿದ್ಧಾಂತದ ಚೌಕಟ್ಟಿನಲ್ಲಿ ತಮ್ಮನ್ನು ಬಂಧಿಸಿಕೊಳ್ಳದೇ ಎಲ್ಲ ಮತಗಳನ್ನು, ಸಿದ್ಧಾಂತಗಳನ್ನು ಮುಕ್ತಮನಸ್ಸಿನಿಂದ ಸ್ವೀಕಾರ ಮಾಡುವ ಶ್ರೀಗಳವರು ಎಲ್ಲರೊಡನೆ ಆತ್ಮೀಯವಾಗಿ ಬೆರೆಯಬಲ್ಲರು. “ದೇಹಬುದ್ಧ್ಯಾ ತು ದಾಸೋಹಂ ಜೀವಬುದ್ಧ್ಯಾ ತ್ವದಂಶಕಃ | ಆತ್ಮಬುಧ್ಯಾತ್ವಮೇವಾಹಂ ಇತಿ ಮೇ ನಿಶ್ಚಿತಾ ಮತಿ:||” ಎಂಬ ವಾಕ್ಯವನ್ನು ಉಲ್ಲೇಖಿಸುವ ಅವರು ಸಿದ್ಧಾಂತಗಳು ಒಂದೇ ಸತ್ಯದ ವಿಭಿನ್ನ ಮುಖಗಳು ಎಂಬ ದೃಢ ನಿಲುವನ್ನು ಹೊಂದಿರುವ ವ್ಯಕ್ತಿ. ಅವರ ಮುಕ್ತ ಯೋಚನೆ ಸ್ವತಂತ್ರ ಭಾರತಕ್ಕೆ ಅತ್ಯಗತ್ಯವಾದ ಸೈದ್ಧಾಂತಿಕ ತಳಹದಿ. ಅವರ ತಪಸ್ಸು ಹಾಗೂ ಸಾಮಾಜಿಕ ಕಳಕಳಿ ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಲಿ ಎನ್ನುವುದು ನಮೆಲ್ಲರ ಪ್ರಾರ್ಥನೆ.
-ನಾರಾಯಣ ಹೆಗಡೆ, ಗಡಿಕೈ