ಭಗವಂತನ ಸಿ.ಸಿ. ಕ್ಯಾಮರಾಗಳು

posted in: Gurubodhe | 0

ಮನುಷ್ಯನ  ವರ್ತನೆಗಳನ್ನು  ಸತತ  ಗಮನಿಸುವ  ಸೂಕ್ಷ್ಮ  ವ್ಯವಸ್ಥೆ  ಈ ಸೃಷ್ಟಿಯಲ್ಲಿ  ಇದೆ.  ’ಆದಿತ್ಯ ಚಂದ್ರೌ  ಅನಲಾನಿಲೌಚ | ದ್ಯೌಃ ಭೂಮಿ  ಆಪಃ  ಹೃದಯಂ  ಯಮಶ್ಚ || ಅಹಶ್ಚ  ರಾತ್ರಿಶ್ಚ ಉಭೇ ಚ  ಸಂಧ್ಯೇ ಧರ್ಮಶ್ಚ  ಜಾನಾತಿ  ನರಸ್ಯ  ವೃತ್ತಮ್’  ||   ಪ್ರಸಿದ್ಧವಾದ ಈ ಶ್ಲೋಕವು  ಮನುಷ್ಯನ ಎಲ್ಲ  ವರ್ತನೆಗಳನ್ನು  ಗಮನಿಸುವ ಸಿ.ಸಿ.  ಕ್ಯಾಮರಾಗಳು  ಎಲ್ಲೆಲ್ಲಿ  ಇರುತ್ತವೆ ಎಂಬುದನ್ನು  ಹೇಳುತ್ತವೆ.  ಎಷ್ಟೇ  ಗುಟ್ಟಾಗಿ  ಮಾಡಿದರೂ ಎಲ್ಲ ವರ್ತನೆಗಳನ್ನು ಗಮನಿಸುವವರಿದ್ದಾರೆ.  ಆದುದರಿಂದ  ಮನುಷ್ಯ  ತನ್ನ ವರ್ತನೆಗಳನ್ನು   ತುಂಬಾ  ಎಚ್ಚರಿಕೆಯಿಂದ   ಸರಿಯಾಗಿಟ್ಟುಕೊಂಡು  ಹೋಗಬೇಕು.  ಸೂರ್ಯ-ಚಂದ್ರರು  ಮೊದಲನೆಯ  ಸಿ.ಸಿ.  ಕ್ಯಾಮರಾ.  ಆದುದರಿಂದಲೇ  ಹಿಂದೆ  ರಾಜ-ಮಹಾರಾಜರು  ದಾನ ಶಾಸನ  ಬರೆಸುವಾಗ  ಸೂರ್ಯ-ಚಂದ್ರರನ್ನು ಸಾಕ್ಷಿಯಾಗಿ  ಉಲ್ಲೇಖ  ಮಾಡುತ್ತಿದ್ದರು.  ಅನೇಕ  ಯುಗಗಳ  ಪರ್ಯಂತವೂ  ಇರುವ ಸಾಕ್ಷಿಗಳು  ಈ ಇಬ್ಬರು.  ಸೂರ್ಯನು  ತುಂಬಾ  ದೂರ ಇದ್ದರೂ  ಅವನ  ಕಿರಣಗಳ  ಮೂಲಕ  ಎಲ್ಲ  ಜೀವಿಗಳ  ನೇರ ಸಂಬಂಧವನ್ನು  ಹೊಂದಿದ್ದಾರೆ.  ಆದುದರಿಂದ  ಎಲ್ಲ ಜೀವಿಗಳ ಸನ್ನಡತೆ- ದುರ್ನಡತೆಗಳು  ಅವನಿಗೆ  ಗೊತ್ತಾಗುತ್ತವೆ.

’ಅನಲ’  ಅಂದರೆ  ಅಗ್ನಿ.  ಅನಿಲ  ಎಂದರೆ   ವಾಯು.  ಅಜ್ಞಾನಿಗಳು  ಅಂದುಕೊಂಡಂತೆ  ಇವುಗಳು  ಅಚೇತನಗಳಲ್ಲ.  ನಮ್ಮನ್ನು   ಸದಾ  ಗಮನಿಸುತ್ತವೆ.  ’ದ್ಯೌಃ’  ಎಂದರೆ  ಮೇಲಿರುವ  ಬೆಳಕಿನ  ಲೋಕ.  ಭೂಮಿ  ನಮಗೆ  ಆಶ್ರಯ ವಾಗಿರುವ  ಲೋಕ.  ಅದು ಕೆಳಗಿದೆ.  ಈ  ಇಬ್ಬರನ್ನೂ  ತಂದೆ-ತಾಯಿಗಳೆಂದು  ಕರೆಯುವ  ರೂಢಿ  ಉಂಟು.  ಇವರಿಬ್ಬರೂ ಮಕ್ಕಳಾದ  ಎಲ್ಲ  ಜೀವನಗಳನ್ನು ಗಮನಿಸುತ್ತಾರೆ.  ’ಆಪಃ’  ಎಂದರೆ  ನೀರು.  ನೀರು  ಪರಮಾತ್ಮ ಚೈತನ್ಯದ  ಆವಾಸ ಸ್ಥಾನ.  ಸಕಲ  ದೇವತಾ  ಸ್ವರೂಪಿ.  ಕೇವಲ ಜಡ  ವಸ್ತುವಲ್ಲ.  ಆದುದರಿಂದ  ನೀರು  ನಮ್ಮನ್ನು  ಗಮನಿಸುತ್ತದೆ.

’ಹೃದಯ’  ಎಂದರೆ ನಮ್ಮ ಅಂತರಂಗ  ಮನಸ್ಸು.  ನಾವು  ಏನೇ  ಕೆಲಸ  ಮಾಡಿದರೂ  ಮನಸ್ಸಿನ  ಮೂಲಕವೇ  ಅಗಿರುತ್ತದೆ.  ಅಂತಃ ಸಾಕ್ಷಿಗೆ  ಗಮನಕ್ಕೆ  ಬರದಂತೆ  ಏನನ್ನೂ  ಮಾಡಲು  ಸಾಧ್ಯವಿಲ್ಲ.  ಯಾವುದೋ  ಒಂದು  ಕ್ಷಣದಲ್ಲಿ  ತಪ್ಪು  ಕೆಲಸವನ್ನು  ಯಾವುದೋ  ಆಗ್ರಹಕ್ಕೆ  ಒಳಗಾಗಿ  ಮಾಡಿದ್ದರೂ  ಅಂತಃಸಾಕ್ಷಿ  ಅದನ್ನು  ತಪ್ಪೆಂಬುದಾಗಿಯೇ  ಸೂಚಿಸುತ್ತದೆ.  ಹೀಗೆ  ಮಾಡಿದ ತಪ್ಪು  ಕೆಲಸಗಳ  ನೆನಪು  ಕಾಲಾನಂತರ  ಮುಳ್ಳಿನಂತೆ  ಚುಚ್ಚುತ್ತದೆ.

’ಯಮ’  ಎಂದರೆ  ಮೃತ್ಯು  ದೇವತೆ.  ಆತನ  ಕಣ್ಣು  ಕಟ್ಟಿಸಲು  ಯಾರಿಂದಲೂ  ಸಾಧ್ಯವಿಲ್ಲ.  ಹಗಲು- ರಾತ್ರಿಗಳ  ವ್ಯಾಪ್ತಿಗೆ  ಎಲ್ಲ  ಜೀವಿಗಳೂ   ಒಳಪಟ್ಟಿದ್ದಾರೆ.  ಆದ್ದರಿಂದ  ಅವು  ಜೀವಿಗಳನ್ನು  ಗಮನಿಸುತ್ತವೆ.  ಬೆಳಗಿನ  ಕಾಲ  ಮತ್ತು  ಸಂಧ್ಯಾಕಾಲ  ಇವು  ಎಲ್ಲರನ್ನೂ  ಗಮನಿಸುತ್ತವೆ.  ಧರ್ಮ  ಪುರುಷನ  ಎಲ್ಲರ  ಧರ್ಮಾಧರ್ಮಗಳನ್ನು   ಗಮನಿಸುತ್ತಾನೆ.

ಹೀಗೆ  ಇವಿಷ್ಟು  ಭಗವಂತನು  ನಿರ್ಮಿಸಿರುವ  ಸಿ.ಸಿ.  ಕ್ಯಾಮರಾಗಳು.  ಇವುಗಳ  ಮೂಲಕ  ಭಗವಂತನು ನಮ್ಮ  ಚರ್ಯೆಗಳನ್ನು  ಗಮನಿಸುತ್ತಾನೆ.  ಆದುದರಿಂದಲೇ  ಅವನು  ಸರ್ವಜ್ಞ  ಒಟ್ಟಾರೆ  ನಾವು  ಹುಷಾರಾಗಿರಬೇಕು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ