ಸ್ವರ್ಣವಲ್ಲಿಯ ಸಂತ

posted in: shishyasvikara | 0

ಶಾಲ್ಮಲಾನದಿಯ ಹೆಸರನ್ನು ಕೇಳುತ್ತಿರುವಂತೆಯೇ, ನಮ್ಮಂತರಂಗದ ಪುಳಕವನ್ನು ಹೊಳೆಯಾಗಿಸುತ್ತಾಳೆ. ಹಲವು ಪುನೀತ ನೆನಪನ್ನು ತೆರೆಯಾಗಿ ಉನ್ಮೀಲಿಸುತ್ತಾಳೆ. ಇವಳು ಹರನ ಜಟೆಯಿಂದಿಳಿದ ಜಾಹ್ನವಿ. ಸಹಸ್ರಲಿಂಗವೆಂಬ ಶಿವಸಾನ್ನಿಧ್ಯವಿದ್ದದ್ದು ಇವಳ ತೊಡೆಯ ಮೇಲೆಯೇ. ಸ್ವರ್ಣವಲ್ಲಿಯನ್ನು ಬಳಸಿ ಹರಿಯುವ ಈ ನದಿ ತನ್ನೊಡಲಲ್ಲಿ ಎಷ್ಟೊಂದು ವಿರಕ್ತರಿಗೆ ಕಾವಿಯನ್ನು ಉಡಿಸಿದ್ದಾಳೆ. ಬೇಸಿಗೆಯಲ್ಲಿ ಉಪಾಧಿರಹಿತ ಆತ್ಮದಂತೆ ಪಾರದರ್ಶಕವಾಗಿ, ಪ್ರಸನ್ನವಾಗಿ ನಿಂತರೆ; ಮಳೆಗಾಲದಲ್ಲಿ ತಾನು ಕೊಟ್ಟ ಕಾವಿಯ ನೆನಪಾಗಿ ಅದೇ ಬಣ್ಣದಲ್ಲಿ ಹರಿಯುತ್ತಾ, ತನ್ನಲ್ಲಿ ತ್ಯಾಗ ಮಾಡಿದ ಕರ್ಮವನ್ನೆಲ್ಲ ತೆರೆಯಾಗಿ ಹರಿದು, ನೊರೆಯಾಗಿ ಮೆರೆದು, ಪತನವಾಗಿ ಕುಕ್ಕಿ ಸಮುದ್ರವನ್ನು ಸೇರಿಸುತ್ತಾಳೇನೋ! ಇಳೆಗೆ ಅವತರಿಸಿದ ಈ ಭಾಗೀರಥಿ ಅದೆಷ್ಟು ಚಾತುರ್ಮಾಸ್ಯ ವ್ರತಗಳನ್ನು ಕಂಡಳೋ! ಅದೆಷ್ಟು ಜ್ಞಾನಿಗಳ ಚರಣರಜವನ್ನು ತೊಳೆದಳೋ! ಸ್ವರ್ಣವಲ್ಲಿ ಶಿಷ್ಯರ ಅಜ್ಞಾನವನ್ನು ಹರಿಸುವುದಕ್ಕಾಗಿ ಹರಿಯುತ್ತಲೇ ಇದ್ದಾಳೆ.

ನದಿಕೂಲದಲ್ಲಿ ಬೆಳೆದ ಶಾಲ್ಮಲಿ (ಬೂರುಗದ ಮರ) ವೃಕ್ಷದ ಬಾಹುಲ್ಯದಿಂದಲೇ ಈ ನದಿಗೂ ಶಾಲ್ಮಲಾ ಎಂಬ ಹೆಸರು ಬಂದಿರಬಹುದು. ಅಜ್ಞಾನದಂತೆ ಬೃಹತ್ತಾಗಿ ಕಪ್ಪಾಗಿ ಬೆಳೆವ ಈ ಬೂರುಗದ ಮರಗಳು ತಮ್ಮೊಡಲಲ್ಲಿರುವ ಜ್ಞಾನದ ಬೆಳಕಿನಂತೆ ಹತ್ತಿಯನ್ನು ಹಾರಿಬಿಡುವುವು. ಸುಧೆ ಸೋದೆಯಾಯಿತೋ, ಸೋದೆ ಸೋಂದೆಯಾಯಿತೊ ತಿಳಿಯದು. ಹೆಸರು ಬದಲಾದರೂ ಅಮೃತತ್ವ ಬದಲಾಗದಲ್ಲವೇ? ಶಾಂತಿಯಿಂದ ಶೋಭಿಸುವ ಸಂತರು, ಆಪೋಜ್ಯೋತಿಯಂತೆ (ತಂಪಾದ ಬೆಳಕು) ಬೆಳಗುವ ತಪೋ ಪರಂಪರೆ, ಸ್ವರ್ಣವಲ್ಲಿ ಆಗದೇ? ಹೀಗೆ ಗುರುಸಾನ್ನಿಧ್ಯದಿಂದ ಗಿಡ ಮರ ಹೊಳೆ ಹಳ್ಳಗಳೆಂಬ ಚರಾಚರ ಪ್ರಕೃತಿಯೇ ವೇದಾಂತಪಾಠವನ್ನು ಮಾಡುತ್ತಿವೆ.

ಪ್ರಕೃತ ಸ್ವರ್ಣವಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಬಗ್ಗೆ ಯಲ್ಲಾಪುರದ ಅವಧಾನವೊಂದರಲ್ಲಿ ಶತಾವಧಾನಿ ರಾ. ಗಣೇಶರು ಸ್ನೇಹಿತ ವಿನಯ ಹೆಗಡೆಯವರ ಚಿತ್ರಕ್ಕೆ ಹೀಗೆ ಜೀವ ತುಂಬಿದ್ದರು;
ಹರಿಚ್ಛಂಕರರೂಪೋಯಂ
ಸರಿತ್ಪರ್ವತಮಧ್ಯಗಃ /
ಗಂಗಾಧರೇಂದ್ರಸನ್ಯೋಸೌ
ಗಂಗಾಂ ಚ ಧರ್ತುಮುತ್ಸುಖಃ //
‘ಈ ಹಸಿರೇ ಶಂಕರನ ರೂಪವನ್ನು ಧರಿಸಿ ಈ ನದಿ ವನಗಳ ಮಧ್ಯದಲ್ಲಿ ಓಡಾಡುತ್ತಿರುವಂತೆ ಕಾಣುವ ಗಂಗಾಧರೇಂದ್ರರು, ಜ್ಞಾನವನ್ನು ಭೂಮಿಯನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ’ ಎಂದು ಭಾವತುಂದಿಲರಾಗಿ ಹೇಳಿದ್ದರು. ಕಾಣುವುದಕ್ಕೆ ಸರಳವಾದ ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಪದ್ಯ, ಗಂಗಾಧರೇಂದ್ರರ ಸಂನ್ಯಾಸಿಜೀವನವನ್ನು ದರ್ಶಿಸುವ ದೀಪವಾಗಿದೆ. ಗಂಗಾಧರೇಂದ್ರರಾದರೂ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತಿಗಳ ತಪಃಫಲವಾಗಿ ಈ ಮಠಕ್ಕೆ ಬಂದವರು.

ಬ್ರಹ್ಮೀಭೂತರಾದ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಶ್ರೀಚಕ್ರ ಆರಾಧನೆಯ ಮೂಲಕ ಲಲಿತಾ ಚರಣದಾಸ ಎಂಬ ಅಭಿದಾನವನ್ನು ಹೊಂದಿದವರು. ಶ್ರೀಮಠದಲ್ಲಿಯೇ ಒಮ್ಮೆ ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳ ದರ್ಶನವನ್ನು ಪಡೆದಿದ್ದೆ. ಆಗ ನನಗಿನ್ನೂ ಹತ್ತರ ಆಸುಪಾಸಿನ ವಯಸ್ಸು. ಮಠದ ಉಪ್ಪರಿಗೆ, ಹಂಚಿನ ಮಾಡು ಇಳಿದು ಗುಹೆಯಂತಾದ ಅಂಚು, ಆ ಸಂಧಿಯಲ್ಲಿ ಕುಳಿತು, ಏಕಾಂತದಿಂದ ಹೊರಬರುವ ಗುರುಗಳ ನಿರೀಕ್ಷೆಯಲ್ಲಿ ನಾವಿದ್ದೆವು. ರೆಡ್ ಆಕ್ಸೈಡ್ ನೆಲದ ತಂಪು, ಮಳೆಗಾಲದ ಚಳಿ, ಕೇಸರಿಯ ಕಂಪು – ಇಡೀ ಉಪ್ಪರಿಗೆಯನ್ನು ತುಂಬಿದ್ದವು. ಉಪ್ಪರಿಗೆಯಲ್ಲಿ ಗಾಢ ಮೌನವಿದ್ದರೂ, ಇದಾವುದರ ಪರಿವೆಯೇ ಇಲ್ಲದೆ, ದೂರದಲ್ಲಿ ದೊಡ್ಡದೊಡ್ಡದಾಗಿ ಮಾತಾಡುವ ಕೆಲಸದವರ ದನಿ ಅಲ್ಲಿ ಕೇಳಿಸುತ್ತಿತ್ತು. ಅದೇ ಮೊದಲಾಗಿ ಮಠವನ್ನು ನಾನು ನೋಡಿದ್ದು. ಹಿರಿಯರು ನಮ್ಮಲ್ಲಿ ಭಕ್ತಿಗಿಂತ ಭಯವನ್ನೇ ಹೆಚ್ಚು ತುಂಬಿದ್ದರು. ಬಹುಶಃ ಅವರಿಗೂ ಅದೇ ಇತ್ತು! ನಿಧಾನವಾಗಿ ತೆರೆದ ಬಾಗಿಲು ಭಯವನ್ನು, ಕುತೂಹಲವನ್ನು ಹೆಚ್ಚಿಸಿತ್ತು. ವಯೋಭಾರದಿಂದ ಶರೀರ ಮುದುಡಿತ್ತು. ಆದರೂ ಎಲ್ಲರನ್ನೂ ನಿರೀಕ್ಷಿಸುತ್ತಾ ಕಂಬದ ಬಳಿ ಇರುವ ಪೀಠದಲ್ಲಿ ಸರ್ವಜ್ಞೇಂದ್ರರು ಆಸೀನರಾದರು. ಅಲ್ಲಿರುವ ಹದಿನೈದಿಪ್ಪತ್ತು ಜನರು ಎದ್ದಿದ್ದರು. ಅವರೆಲ್ಲ ನಮಸ್ಕರಿಸಿ ಕುಳಿತರು. ನಾನು ಸ್ವಾಮಿಗಳನ್ನು ನೋಡುತ್ತಲೇ ಇದ್ದೆ. ನನ್ನ ಭಯ ಮಾಯವಾಗಿತ್ತು. ಈಗಲೂ ನೆನಪಿಸಿಕೊಳ್ಳುವುದಕ್ಕೆ, ನನ್ನ ಜ್ಞಾಪಕದಲ್ಲಿ ಸ್ನೇಹಾರ್ದ್ರವಾದ ಸ್ವಾಮಿಗಳ ಕಣ್ಣಿನ ಚಿತ್ರ ಹಾಗೆಯೇ ಇದೆ. ಮುಂದೆ ಮಠಕ್ಕೆ ಹೋದಾಗಲೆಲ್ಲ ಪ್ರಸಿದ್ಧ ಕಲಾವಿದರಾದ ಯಶವಂತ ಆಚಾರ್ಯರ ಚಿತ್ರದ ಮೂಲಕ ನನ್ನ ನೆನಪನ್ನು ಮತ್ತೆ ಮತ್ತೆ ಜೀವಂತಗೊಳಿಸಿಕೊಂಡಿದ್ದೇನೆ.

ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳು ನಮ್ಮ ಮಠಕ್ಕೆ ಬಾಲಯತಿಗಳಾಗಿ ಬಂದವರು. 1917ರಲ್ಲಿ ಅವರಿಗೆ ಸಂನ್ಯಾಸವಾದಾಗ ಹನ್ನೊಂದು ವರ್ಷದ ಬಾಲಕರಾಗಿದ್ದರು. ವೇದಪಾಠವಿರಲಿ, ಸಾಮಾನ್ಯ ಓದು-ಬರಹದ ವಿದ್ಯಾಭ್ಯಾಸವೂ ಆಗಿರಲಿಲ್ಲ. ಸರ್ವಜ್ಞೇಂದ್ರರಿಗೆ ಸಂನ್ಯಾಸವಾಗಿ ಒಂದು ವರ್ಷದ ಅವಧಿಯಲ್ಲಿಯೇ ಹಿರಿಯ ಗುರುಗಳಾದ ಗಂಗಾಧರೇಂದ್ರ ಸರಸ್ವತಿಗಳು ಬ್ರಹ್ಮದಲ್ಲಿ ಲೀನರಾದರು. ಬಾಲಯತಿಗಳಿಗೆ ಮೊದಲಾಗಿ ಆಗಬೇಕಾದದ್ದು ವಿದ್ಯಾಭ್ಯಾಸ. ಅದಕ್ಕಾಗಿ ಕೂಡಲಿ ಶೃಂಗೇರಿ ಮಠದಲ್ಲಿರುವ ಹಾನಗಲ್ ವಿರೂಪಾಕ್ಷ ಶಾಸ್ತ್ರಿಗಳ ಹತ್ತಿರ ವಿದ್ಯಾಭ್ಯಾಸಕ್ಕೆ ಕಳುಹಿಸಲಾಯಿತು. ಶೃಂಗೇರಿಯ ಶ್ರೀ ಚಂದ್ರಶೇಖರ ಭಾರತಿಗಳಿಗೂ ವಿರೂಪಾಕ್ಷ ಶಾಸ್ತ್ರಿಗಳೇ ಪಾಠವನ್ನು ಮಾಡಿದ್ದರು. ವಿರೂಪಾಕ್ಷ ಶಾಸ್ತ್ರಿಗಳ ನಡೆ-ನುಡಿಗಳ ಪ್ರಭಾವ ಶ್ರೀ ಚಂದ್ರಶೇಖರ ಭಾರತಿಗಳ ಮೇಲೆ ಆಗಿತ್ತು ಎಂದು ‘ಶಾರದಾಪೀಠದ ಮಾಣಿಕ್ಯ’ ಪುಸ್ತಕದಲ್ಲಿ ಶ್ರೀ ಸಾ. ಕೃ. ರಾಮಚಂದ್ರರಾಯರು ಉಲ್ಲೇಖಿಸಿದ್ದಾರೆ. ಮುಂದೆ ವಿರೂಪಾಕ್ಷ ಶಾಸ್ತ್ರಿಗಳು ವಾಲುಕೇಶ್ವರ ಭಾರತಿ ಎಂಬ ಸಂನ್ಯಾಸ ಅಭಿಧಾನದಿಂದ ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿಗಳಾದರು. ಸಂನ್ಯಾಸಿಯಾಗುವವನು, ಆದವನು ಹೇಗಿರಬೇಕೆಂದು ವಿರೂಪಾಕ್ಷ ಶಾಸ್ತ್ರಿಗಳು ಸರ್ವಜ್ಞೇಂದ್ರರಿಗೆ ಸಂದರ್ಭದ ಮೂಲಕವೇ ತಿಳಿಸಿಕೊಟ್ಟು ಶಿಷ್ಯನನ್ನು ಬೆಳೆಸಿದವರು. ಸುಮಾರು 17 ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಪೂರೈಸಿ ಸರ್ವಜ್ಞೇಂದ್ರ ಸರಸ್ವತಿಗಳು ಮಠಕ್ಕೆ ಬಂದರು.

ಸರ್ವಜ್ಞೇಂದ್ರರು ವಿದ್ಯಾಭ್ಯಾಸವನ್ನು ಮುಗಿಸಿ ಪುನಃ ಬಂದಾಗ ಮಠದ ಅವಶೇಷ ಮಾತ್ರ ಇತ್ತು. ಮಠದ ಬೊಕ್ಕಸವಿರಲಿ, ದೇವರ ಮೇಲಿರುವ ಬಂಗಾರವೂ ಮಾಯವಾಗಿತ್ತು. ದೇವರ ಕಂಠದಲ್ಲಿ ಒಂದು ಬೋರಿಸರವಿತ್ತು. ಆ ಬಂಗಾರಕ್ಕಿಂತ ಹಿತ್ತಾಳೆಗೆ ಹೊಳಪು ಹೆಚ್ಚು ಎಂಬಂತೆ ಇತ್ತು. ಹೂವು ಪತ್ರೆಗಳಿಂದಾದರೂ ದೇವರ ಅಲಂಕಾರವನ್ನು ಮಾಡಬಹುದು, ಆದರೆ ನಿತ್ಯವೂ ಮಾಡಬೇಕಾದ ನೈವೇದ್ಯಕ್ಕೆ ಪರ್ಯಾಯವಿಲ್ಲವಲ್ಲ. ಮಠದಲ್ಲಿ ಅದಕ್ಕೂ ತತ್ವಾರವಾಗಿತ್ತು. ಪಾರುಪತ್ತೆಗಾರರ ಆಡಳಿತ ವರ್ಗದವರ ಅವ್ಯವಹಾರದ ಆಡುಂಬೊಲವಾಗಿತ್ತು ಮಠ.

ಆರ್ಥಿಕವಾಗಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಮಠಕ್ಕೆ ಮಾತ್ರ ಈ ದುಃಸ್ಥಿತಿ ಎಂಬಂತಿಲ್ಲ. ಶಂಕರಪರಂಪರೆಯ ನೂರಕ್ಕೆ ತೊಂಬತ್ತರಷ್ಟು ಮಠಗಳ ಸ್ಥಿತಿ ಹೀಗೆಯೇ ಇತ್ತು, ಇದೆ ಎಂಬುದು ಎಲ್ಲ ಮಠಗಳ ಇತಿಹಾಸವನ್ನು ಕೆದಕಿದಾಗ ತಿಳಿಯುತ್ತದೆ. ಶೃಂಗೇರಿಪೀಠದ ಶ್ರೀ ಶ್ರೀ ವೃದ್ಧ ನೃಸಿಂಹ ಭಾರತಿ ಸ್ವಾಮಿಗಳ ಕಾಲದಲ್ಲಿ ಪೂಜೆಗೂ ಹಣವಿಲ್ಲದೆ, ದೇವರ ಪೂಜೆಗೆ ಬಳಸುವ ಬೆಳ್ಳಿ ಪಾತ್ರೆಗಳನ್ನು ಅಡವಿಟ್ಟು ಪೂಜಾಕೈಂಕರ್ಯನ್ನು ಮಾಡಿದ್ದಿದೆಯಂತೆ. ಅದೇ ವೃದ್ಧ ನೃಸಿಂಹ ಭಾರತಿಗಳು ತಿರುಪತಿಗೆ ಹೋದಾಗ ವೇಂಕಟರಮಣನಲ್ಲಿ ಸ್ತೋತ್ರ ಮಾಡಿ ಒಂದು ಕೋರಿಕೆಯನ್ನು ಇಟ್ಟಿದ್ದರು. ಅದೇನೆಂದರೆ ‘ದಾರಿದ್ರ್ಯಂ ಮಮ ದುಷ್ಟಭೃತ್ಯಜನಿತಮ್…’ ಇದನ್ನು ಪರಿಹಾರ ಮಾಡು ದೇವರೆ ಎಂದು ಮಾಡಿದ ಪ್ರಾರ್ಥನೆ ಇಂದಿಗೂ ಲಭ್ಯ.

1930ರ ಸಮಯ. ಮಠಕ್ಕೆ ಕೆಲವೇ ಕೆಲವು ಶಿಷ್ಯರು ಬಂದು ಹೋಗುವ ಕಾಲ. ಸರ್ವಜ್ಞೇಂದ್ರರು ಅವರನ್ನೇ ಕೂರಿಸಿಕೊಂಡು ಮಠವನ್ನು ಒಂದು ವ್ಯವಸ್ಥೆಗೆ ತಂದರು. ಬ್ರಿಟಿಷ್ ಆಡಳಿತ ವ್ಯವಸ್ಥೆ, ಸ್ವಾತಂತ್ರ್ಯಾನಂತರ ಬಂದ ಉಳುವವನೇ ಒಡೆಯ ಎಂಬಂತಹ ಕಾನೂನುಗಳು ಮಠಕ್ಕೆ ಸಾಕಷ್ಟು ಆಘಾತವನ್ನು ಕೊಟ್ಟಿವೆ. (ಉಳುವವನೇ ಒಡೆಯ ಕಾನೂನಿನಿಂದ ಅನೇಕ ಮಠಗಳು, ದೇವಸ್ಥಾನಗಳು ಆದಾಯದ ಮೂಲವಾದ ಭೂಮಿಗಳನ್ನು ಕಳೆದುಕೊಂಡವು. ಇದಕ್ಕೆ ಪರ್ಯಾಯವಾದ ಆದಾಯದ ಮೂಲ ಸೃಷ್ಟಿಯಾಗಲಿಲ್ಲ. ಅದರಿಂದ ಅನೇಕ ಮಠಗಳು, ದೇವಸ್ಥಾನಗಳು ತೀವ್ರ ಸಂಕಷ್ಟವನ್ನು ಅನುಭವಿಸಿವೆ, ಅನುಭವಿಸುತ್ತಲೂ ಇವೆ. ) ಇದರ ನಡುವೆಯೇ ಇರುವಷ್ಟು ತೋಟ ತಡಿಗೆಗಳ ವ್ಯವಸ್ಥೆಯನ್ನು ಮಾಡಿ, ಮಠಕ್ಕೊಂದು ಆದಾಯದ ಮೂಲವನ್ನು ಸೃಷ್ಟಿಸಿದರು. ಅಷ್ಟೇ ಅಲ್ಲದೆ ಮಠದಲ್ಲಿ ಶ್ರೀಚಕ್ರಾರ್ಚನೆಯನ್ನು ಮಾಡಿ ಭಕ್ತಾದಿಗಳಿಂದ ಬರುವ ಕಾಣಿಕೆಯಿಂದಲೂ ಆದಾಯವನ್ನು ವೃದ್ಧಿಸಿದರು.

ಶಿಷ್ಯವರ್ಗದವರಿಂದ ಒಂದು ಆಡಳಿತ ವ್ಯವಸ್ಥೆ ಇದ್ದರೂ, ಮಠದ ಹಣಕಾಸು, ಕೆಲಸಗಳಲ್ಲೆಲ್ಲ ಸರ್ವಜ್ಞೇಂದ್ರರೇ ನೇರವಾಗಿ ನಿಂತು ನೋಡುತ್ತಿದ್ದರು. ಲೆಕ್ಕವನ್ನು ಕೂಡ ಅವರೇ ಬರೆಯುತ್ತಿದ್ದರು. ಅದೇ ಕಾಲಕ್ಕೆ ಮಠದಲ್ಲಿ ಕೆಲಸ ಮಾಡುವವರಿಗೂ ಮಠದ ಮೇಲೆ ಸಾಕಷ್ಟು ಶ್ರದ್ಧೆ ಇತ್ತು. ಇದರಿಂದ ಸೋರಿಕೆಯೂ ಇಲ್ಲದೆ ಅಪವ್ಯಯವೂ ಇಲ್ಲದೆ ಮಠ ನಡೆಯುತ್ತಿತ್ತು. ಮಠ ನಡೆಯುವುದಕ್ಕೆ ಕಷ್ಟವಿರಬಾರದು. ಹಾಗೆಂದು ಸರ್ವಜ್ಞೇಂದ್ರರು ಅತಿಯಾದ ಸಂಗ್ರಹಬುದ್ಧಿಯನ್ನು ತೋರಿದವರಲ್ಲ. ವ್ಯಾವಹಾರಿಕ ದಕ್ಷತೆಯಲ್ಲಿ ಪಾರಮಾರ್ಥಿಕ ದೃಷ್ಟಿಗೆ ಊನವನ್ನೂ ತಂದುಕೊಂಡವರಲ್ಲ.

ಒಮ್ಮೆ ಮಠದಲ್ಲಿ ಅಷ್ಟಗ್ರಹ ಕೂಟದಿಂದಾಗುವ ಅಶುಭ ನಿವಾರಣೆಗಾಗಿ ಚಂಡೀಹವನ ನಡೆಯಿತು. ಆಗ ಗೋಕರ್ಣದಿಂದ ಬಂದ ಪುರೋಹಿತರು ಅದಕ್ಕೆ ಬೇಕಾದ ವ್ಯವಸ್ಥೆಯ ಪಟ್ಟಿಯನ್ನು ಮಾಡಿದರು. ಆಮೇಲೆ ಸರ್ವಜ್ಞೇಂದ್ರರು ಸ್ವತಃ ಆ ಪಟ್ಟಿಯನ್ನು ಕೈಗೆತ್ತಿಕೊಂಡು ಅನವಶ್ಯಕವಾದದ್ದನ್ನೆಲ್ಲ ಹೊಡೆದುಹಾಕಿದರು. ಕಾರ್ಯಕ್ರಮ ವಿಧಿಯಂತೆ ನಡೆಯುವುದಕ್ಕೆ ಏನು ಬೇಕೋ ಅಷ್ಟನ್ನು ಮಾತ್ರ ಇಟ್ಟು, ಆಡಂಬರಕ್ಕೆ ಬೇಕಾದ ವಸ್ತುಗಳನ್ನು ನಿರಾಕರಿಸಿಬಿಟ್ಟಿದ್ದರು. ವಿಧಿಯಲ್ಲಿ ಚ್ಯುತಿ ಬರದ ನಿಷ್ಠೆ, ಆಡಂಬರಕ್ಕೆ ಅವಕಾಶವಿಲ್ಲದ ನಡೆ ಸರ್ವಜ್ಞೇಂದ್ರರ ವ್ಯವಹಾರದಲ್ಲಿತ್ತು.

ಮಠದ ಆಡಳಿತ ವ್ಯವಸ್ಥೆಯಲ್ಲಿ ಇರುವವರು ನೈತಿಕವಾಗಿ ಸರಿ ಇಲ್ಲ ಎಂದು ಅನಿಸಿದರೆ ಅವರೊಂದಿಗೆ ಮಾತನ್ನೇ ಆಡುತ್ತಿರಲಿಲ್ಲವಂತೆ. ಇನ್ನು, ತಪ್ಪುಗಳನ್ನು ಕಟುವಾಗಿಯೇ ತಿದ್ದುತ್ತಿದ್ದರೆಂದು ಹೇಳುತ್ತಾರೆ. ಅದರಿಂದ ಸರ್ವಜ್ಞೇಂದ್ರರಿಗೆ ಕೋಪ ಹೆಚ್ಚು ಎಂದು ಭಯಪಡುವವರೇ ಹೆಚ್ಚಾಗಿದ್ದರು. ಶಿಷ್ಯವರ್ಗದಲ್ಲೂ ಅದೇ ಮಾತು ಅದೇ ಭಯ ಗುರುಗಳ ಮೇಲೆ ಇತ್ತು. ಅನೇಕ ಶಿಷ್ಯರು ಪತ್ರವನ್ನು ಬರೆದು ಮಠದ ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದಾಗ ಅದನ್ನು ಪುರಸ್ಕರಿಸಿದ ಔದಾರ್ಯವೂ ಅವರಲ್ಲಿ ಕಾಣುತ್ತದೆ. ಹಾಗಾಗಿ ಗುರುಗಳಿಗೆ ಕೋಪ ಎಂಬುದಕ್ಕಿಂತಲೂ, ತಪ್ಪಾದರೆ ತಮ್ಮನ್ನು ಖಂಡಿಸುತ್ತಾರೆ ಎಂಬ ಭಯವೇ ಗುರುಗಳು ಕೋಪಿಷ್ಠರು ಎಂಬ ಮಾತಿಗೆ ಮೂಲವಾಗಿರಬಹುದು ಎಂದು ಅನಿಸುತ್ತದೆ. ಶೃಂಗೇರಿಯಂತೆ ಮಠಕ್ಕೊಬ್ಬ ಆಡಳಿತಾಧಿಕಾರಿ ನಮ್ಮ ಮಠದಲ್ಲಿ ಇಲ್ಲದ ಕಾರಣ, ಪೀಠಾಧಿಪತಿಗಳೇ ವ್ಯವಹಾರವನ್ನು ನೋಡಿಕೊಳ್ಳುವ ಅನಿವಾರ್ಯತೆ ಇತ್ತು. ಈ ರೀತಿಯಾಗಿ ವ್ಯವಹಾರವನ್ನು ನೋಡಿಕೊಳ್ಳುವವರಿದ್ದರೆ ಆಕ್ಷೇಪಗಳೆಲ್ಲ ಅವರ ತಲೆಗೆ ಸಲ್ಲುತ್ತದೆ. ನಮ್ಮ ಮಠದಲ್ಲಿ ಗುರುಗಳೇ ವ್ಯವಹಾರವನ್ನು ನೋಡಿಕೊಳ್ಳುವ ಕಾರಣ ಆಕ್ಷೇಪಿಸುವ ಧೈರ್ಯ ಸಾಲದೆ, ಗುರುಗಳು ಮುನಿಸಿಕೊಳ್ಳುತ್ತಾರೆ ಎಂಬ ಮಾತು ಮುಂದೆ ಬಂದಿರಲೂಬಹುದು.

ಸಮಕಾಲೀನರಾದ ಹಲವು ಮಠಗಳ ಯತಿಗಳ ಜೊತೆಗೆ ಸರ್ವಜ್ಞೇಂದ್ರ ಸರಸ್ವತಿಗಳಿಗೆ ಸ್ನೇಹವಿತ್ತು. ಇದರಲ್ಲಿ ಕೆಲವು ಮಠದ ಯತಿಗಳು ಸ್ನೇಹದ ಸಲುಗೆಯಲ್ಲಿ; ಮಠದ ವ್ಯವಹಾರಕ್ಕೆ ಬೇಕಾಗುವ ಹಣ ಸಂಪತ್ತುಗಳನ್ನು ಹೇಗೆ ಸಂಪಾದಿಸಬೇಕೆಂದು ಸರ್ವಜ್ಞೇಂದ್ರರಿಗೆ ಹೇಳಿಕೊಡುತ್ತಿದ್ದರಂತೆ. ಆದರೆ ಸರ್ವಜ್ಞೇಂದ್ರರಿಗೆ ವ್ಯವಹಾರವು ಆಸಕ್ತಿಯಲ್ಲ, ಅನಿವಾರ್ಯವಾಗಿತ್ತು. ಹಾಗಾಗಿ ಆ ಮಾತುಗಳು ಅವರ ಕಿವಿಯಿಂದ ಮನಸ್ಸಿಗೆ ಇಳಿಯಲೇ ಇಲ್ಲ. ಹಾಗೆಂದು ವ್ಯವಹಾರದ ಉದಾಸೀನತೆಯಲ್ಲಿ ಮಠವನ್ನು ದುರ್ಭಿಕ್ಷ ಸ್ಥಿತಿಯಲ್ಲೇ ಇಟ್ಟವರೂ ಅಲ್ಲ.

ಮಠದಲ್ಲಿ ಶ್ರೀ ರಾಜರಾಜೇಶ್ವರಿ ಪಾಠಶಾಲೆಯನ್ನು ಪ್ರಾರಂಭಿಸಿದರು. ಆ ಕಾಲದ ವೇದ, ಶಾಸ್ತ್ರಗಳ ಪಂಡಿತರೆಲ್ಲ ಮಠದಲ್ಲಿ ಓದಿದವರೆಂಬುದು ಗಮನಾರ್ಹ ವಿಷಯ. ತಮ್ಮ ಶಿಷ್ಯರ ಸೀಮೆಗಳಲ್ಲೂ ಶಾಲೆ, ಹೈಸ್ಕೂಲುಗಳನ್ನು ತೆರೆಯುವಂತೆ ಪ್ರೋತ್ಸಾಹಿಸಿದರು. ಅನೇಕ ಶಾಲೆ, ಹೈಸ್ಕೂಲ್ ಕಟ್ಟಡಗಳ ಅಡಿಗಲ್ಲಿಗೂ, ಉದ್ಘಾಟನೆಗೂ ಸ್ವತಃ ತಾವೇ ಬಂದರು. ಸೀಮೆಯ ಹಳ್ಳಿಹಳ್ಳಿಗಳಲ್ಲೂ ಸಹಕಾರಿ ಸಂಘಗಳನ್ನು ಸ್ಥಾಪಿಸುವುದಕ್ಕೆ ಸರ್ವಜ್ಞೇಂದ್ರರೇ ಪ್ರೇರಣೆಯಾಗಿದ್ದಾರೆ. ಬಹುತೇಕ ಈ ಸಹಕಾರಿ ಸಂಘದ ಹಳೆಯ ಕಟ್ಟಡಗಳಲ್ಲಿ ಕಾಣುವ ಉದ್ಘಾಟನಾ ಶಿಲಾಲೇಖನದಲ್ಲಿ ಸರ್ವಜ್ಞೇಂದ್ರರ ಹೆಸರನ್ನೇ ಕಾಣಬಹುದು.

1978ರಲ್ಲಿ ಬೇಡ್ತಿ ಡ್ಯಾಮ್ ಕಟ್ಟುವ ಯೋಜನೆಯೊಂದು ಹೊರಟಿತು. ಬೇಸಿಗೆಯಲ್ಲಿ ಆ ನದಿಯ ನೀರು ಕಡಿಮೆ ಇರುವುದರಿಂದ ಕೆಲಸವು ಪ್ರಾರಂಭವಾಗಿಬಿಟ್ಟಿತ್ತು. ಶಾಲ್ಮಲಿ ನದಿಗೆ ಡ್ಯಾಮ್ ಕಟ್ಟಿ, ಸುರಂಗದ ಮೂಲಕ ಆ ನೀರನ್ನು ಬೇಡ್ತಿನದಿಗೆ ಒಯ್ಯುವುದು ಈ ಡ್ಯಾಮಿನ ಅಂಗಯೋಜನೆಯಾಗಿತ್ತು. ಮಠದ ಸಮೀಪದಲ್ಲಿ ಹರಿಯುವ ಶಾಲ್ಮಲೆಯಲ್ಲಿ ‘ಭೀಮನಪಾದ’ವೆಂಬ ಸ್ಥಳವಿದೆ. ಅಲ್ಲಿ ಸಹಸ್ರಲಿಂಗದಂತೆ ಕೆಲವು ಲಿಂಗಗಳೂ ಇವೆ. ಆ ಲಿಂಗಕ್ಕೆ ಶಿವರಾತ್ರಿಯ ದಿವಸ ಶ್ರೀಮಠದ ಗುರುಗಳು ಪೂಜಿಸುವ ನಿಯಮವಿದೆ. ಅಂತಹ ಒಂದು ಲಿಂಗದ ಹತ್ತಿರ ಸುರಂಗ ತೆಗೆಯಲು ಭೂಗರ್ಭದ ಅಧ್ಯಯನಕ್ಕಾಗಿ ಸರಕಾರ ಬೋರ್‌ವೆಲ್ ಒಂದನ್ನು ತೆಗೆಯಿತು. ಶಿವರಾತ್ರಿಯ ದಿನ ಪೂಜಿಸಲು ಸರ್ವಜ್ಞೇಂದ್ರರು ಭೀಮನಪಾದಕ್ಕೆ ಹೋದರು. ಅಲ್ಲಿ ಲಿಂಗದ ಸಮೀಪದಲ್ಲಿ ತೆಗೆದ ಬೋರ್‌ವೆಲ್ ಸರ್ವಜ್ಞೇಂದ್ರರ ದೃಷ್ಟಿಗೆ ಬಿತ್ತು. ಮುಂದಾಗುವ ಅನಾಹುತಗಳೆಲ್ಲ ಮನಸ್ಸಿಗೆ ಬಂದುಹೋದವೇನೋ! ಕೋಪಗೊಂಡ ಸರ್ವಜ್ಞೇಂದ್ರರು, ‘ನಿನ್ನನ್ನೇ ರಕ್ಷಣೆ ಮಾಡಿಕೊಳ್ಳುವ ಶಕ್ತಿ ನಿನಗಿಲ್ಲ. ಇನ್ನು ನಮ್ಮನ್ನು ಹೇಗೆ ಕಾಪಾಡುತ್ತೀಯೆ? ಮತ್ತೆ ನಾನೇಕೆ ನಿನ್ನನ್ನು ಪೂಜಿಸಲಿ’ ಎಂದು ನುಡಿದು, ಮಠಕ್ಕೆ ಹಿಂತಿರುಗಿದರು. ಅದೇ ಸಮಯಕ್ಕೆ ಮಠವನ್ನು ಹೊಸದಾಗಿ ಕಟ್ಟುವ ಯೋಜನೆಯೂ ಸಿದ್ಧವಾಗಿತ್ತು. ಅದನ್ನು ಕೂಡ ನಿಲ್ಲಿಸಿಬಿಟ್ಟರು.

ಬೇಡ್ತಿ ಯೋಜನೆಯಿಂದಾಗುವ ಅನಾಹುತವನ್ನು ಚರ್ಚಿಸಲು ಬಹು ದೊಡ್ಡ ಸೆಮಿನಾರೊಂದು ನಡೆಯಿತು. ಅದನ್ನು ಸರ್ವಜ್ಞೇಂದ್ರರೇ ಉದ್ಘಾಟಿಸಿ ಮಾತನಾಡಿದರು.
ದಶಕೂಪ ಸಮೋ ವಾಪೀ
ದಶವಾಪೀ ಸಮೋ ಹೃದಃ /
ದಶಹೃದ ಸಮಃ ಪುತ್ರೋ
ದಶಪುತ್ರ ಸಮೋ ದ್ರುಮಃ //
‘ಹತ್ತು ನೀರಿನ ಹೊಂಡಗಳು ಒಂದು ಬಾವಿಗೆ ಸಮ. ಹತ್ತು ಬಾವಿಗಳು ಒಂದು ಸರೋವರಕ್ಕೆ ಸಮ. ಹತ್ತು ಸರೋವರಗಳು ಒಂದು ಪುತ್ರನಿಗೆ ಸಮ. ಹತ್ತು ಪುತ್ರರಿಗೆ ಒಂದು ಮರ ಸಮ’ ಎಂಬ ವಿಷ್ಣುಪುರಾಣದ ಉಲ್ಲೇಖದೊಂದಿಗೆ ಮಾತನ್ನು ಆರಂಭಿಸಿದ್ದರು. ಈ ಮಾತಿನ ಮಹತ್ವ ಅಲ್ಲಿರುವ ವಿಜ್ಞಾನಿಗಳಿಗೆ, ಪರಿಸರ ತಜ್ಞರಿಗೆ ಗಾಢವಾದ ಪ್ರಭಾವವನ್ನು ಬೀರಿತೆಂದು ಬೇರೆ ಹೇಳಬೇಕಾಗಿಲ್ಲ. ಆ ವಿಜ್ಞಾನಿಗಳು ಪರಿಸರ ತಜ್ಞರೆಲ್ಲ ಮರುದಿನ ಮಠಕ್ಕೆ ಬಂದುಹೋದರು. ಇದರ ಪರಿಣಾಮವಾಗಿ ಅಂದಿನ ಮುಖ್ಯಮಂತ್ರಿಗಳಾದ ಗುಂಡೂರಾಯರು ನಾರಾಯಣರಾವ್ ಕಮಿಟಿ ಮಾಡಿ ಬೇಡ್ತಿ ಯೋಜನೆಯನ್ನು ಹಿಂದೆ ತಳ್ಳಿದರು.

ಮಠದಲ್ಲಿ ನಿತ್ಯವೂ ಅನ್ನದಾನ ನಡೆಯುತ್ತಿತ್ತು. ತೋಟ ಗದ್ದೆಗಳು ಇರುವುದರಿಂದ ಸಾಕಷ್ಟು ಕೆಲಸಗಾರರೂ ಇದ್ದರು. ಹಾಗಾಗಿ ಮಠದ ನಿತ್ಯದ ಖರ್ಚಿಗೆ ಸಾಕಷ್ಟು ಹಣವು ಬೇಕಾಗುತ್ತಿತ್ತು. ತೋಟ ಗದ್ದೆಗಳ ಆದಾಯ, ಶ್ರೀಚಕ್ರ ಪೂಜೆ, ಸೇವೆಗಳ ಕಾಣಿಕೆಗಳಿಂದ ಮಠಕ್ಕೆ ಉಳಿಕೆಯಾಗದಿದ್ದರೂ ನಡೆಯುವುದಕ್ಕೆ ತೊಂದರೆ ಇಲ್ಲದೆ ಸಾಗುತ್ತಿತ್ತು. ಸರ್ವಜ್ಞೇಂದ್ರರಿಗೆ ವಯಸ್ಸಾದಂತೆ ಸ್ವಲ್ಪ ಅನಾರೋಗ್ಯ ಸೇರಿಕೊಂಡಿತು. ಇದರಿಂದ ಶ್ರೀಚಕ್ರಾದಿ ಪೂಜೆಗಳನ್ನು ಮಾಡುವುದು ಕಷ್ಟವಾಯಿತು. ಹಾಗಾಗಿ ತನ್ಮೂಲಕ ಬರುವ ಕಾಣಿಕೆ ಸಂಗ್ರಹದ ಕೊರತೆ ಉಂಟಾಯಿತು. ಇದಕ್ಕೂ ಸ್ವಲ್ಪ ಕಾಲ ಮೊದಲಿನಿಂದಲೇ ಸರ್ವಜ್ಞೇಂದ್ರರಿಗೆ ಇದ್ದ ವಿರಕ್ತಿ ವ್ಯವಹಾರದಲ್ಲೂ ಹೆಚ್ಚುಹೆಚ್ಚು ಕಾಣತೊಡಗಿತು. ದರ್ಶನಕ್ಕೆ ಬಂದ ಭಕ್ತಾದಿಗಳು ಇಟ್ಟ ಕಾಣಿಕೆಯನ್ನು ಮಂತ್ರಾಕ್ಷತೆಯ ಜೊತೆಗೆ ಸೇರಿಸಿ ಕೊಟ್ಟುಬಿಡುತ್ತಿದ್ದರಂತೆ. ಇದರಿಂದ ಗುರುಗಳು ಬ್ರಹ್ಮೈಕ್ಯರಾದಾಗ ಸಂಗ್ರಹವೂ ಇರಲಿಲ್ಲ. ನಿತ್ಯದ ವ್ಯವಸ್ಥೆಗೆ ತೀವ್ರ ಕೊರತೆಯೂ ಇರಲಿಲ್ಲ. ಸರ್ವಜ್ಞೇಂದ್ರರು ಮಠವನ್ನು ತೀವ್ರ ದುರ್ಭಿಕ್ಷ ಸ್ಥಿತಿಯಿಂದ ಸುಸ್ಥಿತಿಗೆ ತಂದು ನಿಲ್ಲಿಸಿದ್ದರು. ಗುರುಗಳು ಬ್ರಹ್ಮೈಕ್ಯರಾದಾಗ ಸೇರಿದ ಭಕ್ತರು ಕೊಟ್ಟ ಕಾಣಿಕೆಯಲ್ಲಿ ಗುರುಗಳ ಸಮಾಧಿಯನ್ನು ನೆರವೇರಿಸಲಾಯಿತು. ಶ್ರೀಮಠದ ದೇವತಾ ಹುಂಡಿಯ ಹಣದಿಂದ ಗುರುಗಳ ಆರಾಧನೆಯು ನಡೆಯಿತೆಂದು ತಿಳಿಯುತ್ತದೆ.

ಸರ್ವಜ್ಞೇಂದ್ರರು ಮಠಕ್ಕೊಂದು ಶಿಷ್ಯನನ್ನು ಹುಡುಕುತ್ತಲೇ ಇದ್ದರು. ಈ ಹುಡುಕಾಟದಲ್ಲಿ ಮಠಕ್ಕೆ ಸಮೀಪದಲ್ಲಿರುವ ನಡಗೋಡಿನ ವಿದ್ವಾನ್ ಶ್ರೀ ಪರಮೇಶ್ವರ ಭಟ್ಟರ ಜಾತಕವೊಂದು ಗುರುಗಳ ಗಮನವನ್ನು ಸೆಳೆಯಿತು. ಪರಮೇಶ್ವರ ಭಟ್ಟರು ಅದಾಗಲೇ ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಅದರಲ್ಲೂ ವೇದಾಂತ ಅಧ್ಯಯನವೇ ಸಾಗುತ್ತಿತ್ತು. ಸರ್ವಜ್ಞೇಂದ್ರರು ಮಠದ ಶಿಷ್ಯಪ್ರಮುಖರನ್ನು ಕರೆದು; ಮೈಸೂರಿನಲ್ಲಿರುವ ಪರಮೇಶ್ವರ ಭಟ್ಟರ ಅಭಿಪ್ರಾಯದ ಜೊತೆಗೆ ಅವರ ಬಗ್ಗೆ ಸಹಪಾಠಿಗಳ, ಪಾಠ ಮಾಡುವ ಶಿಕ್ಷಕರ, ಕಾಲೇಜಿನ ಪ್ರಾಂಶುಪಾಲರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಬರಬೇಕು. ಅಷ್ಟೇ ಅಲ್ಲದೆ ತಮ್ಮೊಂದಿಗೆ ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಶಾಸ್ತ್ರವನ್ನು ಓದಿದ ವಿಶ್ವೇಶ್ವರ ದೀಕ್ಷಿತರೆಂಬವರಲ್ಲಿ ಜಾತಕವನ್ನು ಪರಿಶೀಲಿಸಿಕೊಂಡು ಬರಬೇಕೆಂದು ಹೇಳಿದರು. ವಿಶ್ವೇಶ್ವರ ದೀಕ್ಷಿತರು ಜ್ಯೋತಿಷ್ಯ, ಫಲಜ್ಯೋತಿಷ್ಯಗಳಲ್ಲಿ ತುಂಬ ದಕ್ಷರು, ಅವರ ಅಭಿಪ್ರಾಯ ಬೇಕೇ ಬೇಕು ಎಂದು ಹೇಳಿದ್ದಲ್ಲದೆ; ಕೋಪಿಸಿಕೊಳ್ಳುವುದರಲ್ಲಿ ಉದಾರಿಗಳು, ವ್ಯವಹಾರದಲ್ಲಿ ಜಿಪುಣರು, ಹಾಗಾಗಿ ಎಚ್ಚರದಿಂದ ಈ ಕೆಲಸವನ್ನು ಮಾಡಿಕೊಂಡು ಬನ್ನಿ ಎಂದು ನಾಲ್ಕಾರು ಜನರನ್ನು ಕಳುಹಿಸಿದರು.

ಆಗ ನಮ್ಮ ಭಾಗದಿಂದ ಸಾಕಷ್ಟು ಜನ ಮೈಸೂರಿನ ಸಂಸ್ಕೃತ ಕಾಲೇಜಿನಲ್ಲಿ ಓದುತ್ತಿದ್ದರು. ಅವರೆಲ್ಲರ ಸಹಾಯವನ್ನು ಪಡೆದು ಪರಮೇಶ್ವರ ಭಟ್ಟರ ಬಗ್ಗೆ ಅಲ್ಲಿ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಎಲ್ಲರೂ ಹೇಳಿರುವ ಮಾತು ಒಂದೇ ಆಗಿತ್ತು. ‘ಪರಮೇಶ್ವರ ಭಟ್ಟರು ಒಪ್ಪಿದರೆ ನಿಮ್ಮ ಯೋಗವೆಂದೇ ತಿಳಿಯಿರಿ’ ಎಂದರು. ಪರಮೇಶ್ವರ ಭಟ್ಟರಿಗೂ ಗುರುಗಳ ಅಪೇಕ್ಷೆಯನ್ನು ಅನುಜ್ಞೆಯನ್ನು ತಿಳಿಸಿ, ಅವರ ಒಪ್ಪಿಗೆಯನ್ನು ಪಡೆದು ಮಠದ ಪ್ರಮುಖರೆಲ್ಲ ಅಲ್ಲಿಂದ ಹೊರಟರು.

ವಿಶ್ವೇಶ್ವರ ದೀಕ್ಷಿತರನ್ನು ಕಾಣಲು ಹೊರಟಾಗ, ಅವರು ಕಾರ್ಯಾಂತರದಿಂದ ಬೆಂಗಳೂರಿನ ಹೆಬ್ಬಾಳದಲ್ಲಿ ಇರುತ್ತಾರೆ ಎಂದು ತಿಳಿಯಿತು. ಇವರೆಲ್ಲ ಬೆಂಗಳೂರಿಗೆ ಹೊರಟರು. ಮೈಸೂರಿನಿಂದ ಹೊರಟು ಬೆಂಗಳೂರಿನ ಹೆಬ್ಬಾಳಕ್ಕೆ ಬರುವಾಗ ಮುಸ್ಸಂಜೆಯಾಗಿತ್ತು. ಯಾರನ್ನಾದರೂ ವಿಚಾರಿಸೋಣ ಎಂಬಾಗ ಎದುರಿನಲ್ಲಿ ಸ್ವಲ್ಪ ಹರಿದ ಬನಿಯನ್ನು ಪಂಚೆಯನ್ನುಟ್ಟ ವ್ಯಕ್ತಿಯೊಬ್ಬರು ಬಂದರಂತೆ. ಅವರನ್ನೇ ವಿಚಾರಿಸಲಾಗಿ, ‘ನಾನೇ ವಿಶ್ವೇಶ್ವರ ದೀಕ್ಷಿತ. ಏನಾಗಬೇಕಿತ್ತು?’ ಎಂದು ಕೇಳಿದರಂತೆ. ‘ತಮ್ಮಿಂದ ಜಾತಕ ಪರಿಶೀಲನೆ ಆಗಬೇಕಿತ್ತು’ ಎಂದು ಇವರು ಹೇಳಿದರು. ‘ನಾನು ಜಾತಕವನ್ನೆಲ್ಲ ನೋಡುವುದಿಲ್ಲ’ ಎಂದು ಸ್ವಲ್ಪ ಸಿಡುಕಿದರಂತೆ. ಆಮೇಲೆ ‘ಸ್ವರ್ಣವಲ್ಲಿ ಸ್ವಾಮಿಗಳು ತಮ್ಮಲ್ಲಿಗೆ ಕಳುಹಿಸಿದ್ದಾರೆ’ ಎಂದು ಹೇಳಿದರು. ಆಗ ದೀಕ್ಷಿತರು, ‘ಸರ್ವಜ್ಞೇಂದ್ರರೇ!!’ ಎಂದರು. ‘ಹೌದು!’ ಎಂದಾಗ, ‘ಈಗ ರಾತ್ರಿಯಾಯಿತು. ನಾಳೆ ನಸುಕಿನಲ್ಲಿಯೇ ಬನ್ನಿ’ ಎಂದು, ಜಾತಕವನ್ನು ಪರಿಶೀಲಿಸಲು ಒಪ್ಪಿಕೊಂಡರು.

ವಿಶ್ವೇಶ್ವರ ದೀಕ್ಷಿತರು ಹೇಳಿದ ಸಮಯಕ್ಕೆ ಮಠದ ಪ್ರಮುಖರೆಲ್ಲ ಅವರ ಬಳಿಯಲ್ಲಿದ್ದರು. ಚಾಪೆಯನ್ನು ಹಾಕಿ ಇವರನ್ನೆಲ್ಲ ಕುಳ್ಳಿರಿಸಿ, ಜಾತಕವನ್ನು ತೆಗೆದುಕೊಂಡು ಮನೆಯೊಳಗೆ ಹೋಗಿ ಪರಿಶೀಲಿಸಿಕೊಂಡು ಬಂದರು. ‘ಒಳ್ಳೆ ಸಂನ್ಯಾಸಯೋಗದ ಜಾತಕವನ್ನು ತಂದಿದ್ದೀರಿ’ ಎಂದು ಇವರ ಮುಂದೆ ಜಾತಕವನ್ನು ಕುಕ್ಕಿದರು. ಇವರೆಲ್ಲರಿಗೂ ಸಂತೋಷವೇ ಆಯಿತು. ‘ನಾವು ಅದಕ್ಕಾಗಿಯೇ ಬಂದಿದ್ದೆವು’ ಎಂದು ಎಲ್ಲವನ್ನೂ ವಿವರಿಸಿ, ಸರ್ವಜ್ಞೇಂದ್ರರ ಜಾತಕವನ್ನೂ ದೀಕ್ಷಿತರ ಕೈಗೆ ಒಪ್ಪಿಸಿದರು. ಮತ್ತೊಮ್ಮೆ ಎರಡೂ ಜಾತಕಗಳನ್ನು ಪರಿಶೀಲಿಸಿ, ‘ಪರಮೇಶ್ವರ ಭಟ್ಟರ ಜಾತಕ, ಸಂನ್ಯಾಸಕ್ಕೆ ಪೀಠಕ್ಕೆ ಯೋಗ್ಯವಾಗಿದೆ’ ಎಂದು ಹೇಳಿದರು. ಹಾಗೆಯೇ, ‘ಸರ್ವಜ್ಞೇಂದ್ರರು ದೇಹ ತ್ಯಜಿಸುವ ಸಮಯ ಹತ್ತಿರವಾಗಿದೆ. ಅವರು ಹುಬ್ಬಳ್ಳಿಯಲ್ಲಿದ್ದಾರೆ. ನೀವು ಈಗಲೇ ಹೊರಟು ಹುಬ್ಬಳ್ಳಿಯಲ್ಲಿ ಅವರನ್ನು ನೋಡಿ’ ಎಂದು ಹೇಳಿದರು. ಅಲ್ಲಿಯೇ ವಿಶ್ವೇಶ್ವರ ದೀಕ್ಷಿತರ ಜಾತಕ ಪ್ರಾವೀಣ್ಯವೂ ಪ್ರಕಟವಾಗಿತ್ತು. ಮಠದ ಪ್ರಮುಖರೆಲ್ಲ ನೇರವಾಗಿ ಹುಬ್ಬಳ್ಳಿಗೆ ಬಂದರೆ, ಅಲ್ಲಿ ಇನ್ನು ಚಿಕಿತ್ಸೆ ಸಾಕೆಂದು ಸರ್ವಜ್ಞೇಂದ್ರರನ್ನು ಮಠಕ್ಕೆ ಕರೆದುಕೊಂಡು ಹೋಗುವ ಸನ್ನಾಹದಲ್ಲಿದ್ದರು. ಹಾಸಿಗೆಯಲ್ಲಿರುವ ಸರ್ವಜ್ಞೇಂದ್ರರಿಗೆ ವಿಶ್ವೇಶ್ವರ ದೀಕ್ಷಿತರ ಅಭಿಪ್ರಾಯವನ್ನು, ಮೈಸೂರಿನ ಶಿಕ್ಷಕವರ್ಗದವರ ಅಭಿಪ್ರಾಯವನ್ನು, ಪರಮೇಶ್ವರ ಭಟ್ಟರ ಒಪ್ಪಿಗೆಯನ್ನು ತಿಳಿಸಲಾಯಿತು. ಇದೆಲ್ಲವನ್ನೂ ಕೇಳಿ ಕೈಯೆತ್ತಿ ಆಶೀರ್ವದಿಸಿದ ಸರ್ವಜ್ಞೇಂದ್ರರು ದೇಹತ್ಯಾಗ ಮಾಡಿದರು.

ಮಾನಸಿಕವಾಗಿ ಸರ್ವಜ್ಞೇಂದ್ರರು ಶಿಷ್ಯಸ್ವೀಕಾರವನ್ನು ಮಾಡಿ ಹೊರಟಿದ್ದರು. ಇನ್ನು ಭೌತಿಕವಾಗಿ ಪರಮೇಶ್ವರ ಭಟ್ಟರನ್ನು ಮಠಕ್ಕೆ ಕರೆತಂದು ಸಂನ್ಯಾಸವನ್ನು ನೀಡಿ, ಪೀಠಾಧಿಪತಿಯನ್ನಾಗಿಸುವ ಕೆಲಸ ಮಾತ್ರವಿತ್ತು. ಮಠಕ್ಕೆ ಬೇಕಾದ ಶಿಷ್ಯನ ಆಯ್ಕೆ ಎಂಬ ಬಹುದೊಡ್ಡ ಕೆಲಸವೊಂದು ಸರ್ವಜ್ಞೇಂದ್ರರು ಇರುವಾಗಲೇ ಆಗಿಹೋಗಿತ್ತು. ಸಂನ್ಯಾಸವನ್ನು ಯಾರಿಂದ ಕೊಡಿಸಬೇಕು ಎಂಬ ಚರ್ಚೆ ಮುಂದುವರಿಯಿತು. ಗುರುಗಳಿಲ್ಲದಿರುವಾಗ ಇಂತಹ ಕೆಲಸಗಳೆಲ್ಲ ಬಹು ಸಂಕೀರ್ಣವಾಗುತ್ತವೆ. ಪ್ರತಿಷ್ಠೆಯನ್ನು ತೋರಿಸುವ, ದಾರಿ ತಪ್ಪಿಸುವ ಅನೇಕರು ಇಂತಹ ಸಮಯವನ್ನು ಬಳಸಿಕೊಳ್ಳುತ್ತಾರೆ. ವೇದ-ಶಾಸ್ತ್ರಗಳನ್ನು ಓದಿದ ಒಂದಿಬ್ಬರು ಗೃಹಸ್ಥರು ಮುಂದೆ ಬಂದು, ‘ನಾವೇ ಸಂನ್ಯಾಸವನ್ನು ಕೊಡುತ್ತೇವೆ’ ಎಂದು ಕೂಡ ಹೇಳಿದ್ದರು. ಸರ್ವಜ್ಞೇಂದ್ರರಿಂದ ಶ್ರೀಚಕ್ರಾರ್ಚನೆಯನ್ನು ಮಾಡಿಸಿಕೊಂಡು, ತಮ್ಮ ಮಠದ ಸಮಸ್ಯೆಗಳನ್ನು ಬಗೆಹರಿಸಿಕೊಂಡ ಪೀಠಾಧಿಪತಿಗಳೊಬ್ಬರು ಸಂನ್ಯಾಸ ಕೊಡುವುದಕ್ಕೆ ಇಚ್ಛೆಪಟ್ಟಿದ್ದರು. ಮಠದ ಆಡಳಿತ ವರ್ಗದಲ್ಲಿ ಕೆಲವರು ಖರ್ಚಿನ ದೃಷ್ಟಿಯಿಂದ ಯೋಚನೆ ಮಾಡಿ, ‘ಅವರಾದರೆ ಮಠಕ್ಕೆ ಆರ್ಥಿಕ ಭಾರವು ತಪ್ಪುತ್ತದೆ. ಹಾಗಾಗಿ ಅವರಿಂದಲೇ ಸಂನ್ಯಾಸವನ್ನು ಕೊಡಿಸೋಣ’ ಎಂಬುದನ್ನು ಪ್ರಕಟವಾಗಿ ಅಲ್ಲದಿದ್ದರೂ ಆಡಳಿತ ವರ್ಗದ ಒಳಗೆ ನಿಶ್ಚಯಿಸಿಕೊಂಡಿದ್ದರು. ಅಷ್ಟರಲ್ಲಿ ಈ ಆಡಳಿತ ಮಂಡಳಿಯಲ್ಲಿರುವ ಒಬ್ಬರು ಸಿದ್ದಾಪುರಕ್ಕೆ ಹೋಗಿದ್ದರು. ಅಲ್ಲಿ ಶ್ರೀಧರಸ್ವಾಮಿಗಳ ಸೇವೆಯನ್ನು ಮಾಡಿ ನಂತರ ಸಂನ್ಯಾಸವನ್ನು ಸ್ವೀಕರಿಸಿದ ಶ್ರೀ ಸಚ್ಚಿದಾನಂದ ಸ್ವಾಮಿಗಳು ಭೇಟಿಯಾದರು. ಅವರು ಮಠದ ಈ ವಿಷಯವನ್ನೆಲ್ಲ ಕೇಳಿ, ‘ಸ್ವರ್ಣವಲ್ಲಿ ಮಠಕ್ಕೆ ಶೃಂಗೇರಿ ಪೀಠದಿಂದಲೋ ಅಥವಾ ಕಂಚಿಯ ಪೀಠದಿಂದಲೋ, ಸಂನ್ಯಾಸವಾಗಬೇಕು. ಶೃಂಗೇರಿ ಪೀಠಾಧಿಪತಿಗಳೇ ಸಂನ್ಯಾಸವನ್ನು ಕೊಡುವುದಿಲ್ಲ. ಬಿಡಿ ಸಂನ್ಯಾಸಿಗಳಿಂದ ಸಂನ್ಯಾಸವನ್ನು ಕೊಡಿಸುತ್ತಾರೆ. ಶೃಂಗೇರಿಯದು ‘ಭಾರತಿ’ ಪರಂಪರೆ. ಹಾಗಾಗಿ ‘ಇಂದ್ರ ಸರಸ್ವತಿ’ ಪರಂಪರೆಯ ಕಂಚಿಮಠದ ಸಂನ್ಯಾಸಿಗಳೇ ಸರಿ’ ಎಂದು ಸಲಹೆ ನೀಡಿದರು. ಈ ವಿಚಾರ ಮಠದ ಆಡಳಿತ ಮಂಡಳಿಯಲ್ಲಿ ಚರ್ಚೆಗೆ ಬರುವ ಮೊದಲೇ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಅಚಲಾನಂದ ಸ್ವಾಮೀಜಿಯವರು ಪರಮೇಶ್ವರ ಭಟ್ಟರನ್ನು ಕಂಚಿಗೆ ಕರೆದುಕೊಂಡು ಹೋದರು. ಪರಮೇಶ್ವರ ಭಟ್ಟರು ಅಚಲಾನಂದರಲ್ಲಿ ಪಾಠವನ್ನು ಹೇಳಿಸಿಕೊಳ್ಳುತ್ತಿದ್ದರು. ಅದರಿಂದ ಅಚಲಾನಂದರಿಗೆ, ಪರಮೇಶ್ವರ ಭಟ್ಟರು ಸ್ವರ್ಣವಲ್ಲಿ ಪೀಠಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಯಿತು. ಕಂಚಿಯ ಪರಮಾಚಾರ್ಯರ ಆಶೀರ್ವಾದವನ್ನು ಪಡೆಯುವುದು ಉತ್ತಮವೆಂದು ಅಚಲಾನಂದರೇ ಪರಮೇಶ್ವರ ಭಟ್ಟರನ್ನು ಕರೆದುಕೊಂಡು ಹೊರಟಿದ್ದರು. ಅಲ್ಲಿ ಪರಮಾಚಾರ್ಯರು ಕಾವಿ ಬಟ್ಟೆಯೊಂದನ್ನು ನೀಡಿ ಪರಮೇಶ್ವರ ಭಟ್ಟರನ್ನು ಆಶೀರ್ವದಿಸಿದರು. ಸ್ವರ್ಣವಲ್ಲಿಗೆ ಹೋಗಿ ಸಂನ್ಯಾಸವನ್ನು ನೀಡಿಬರಲು ಶ್ರೀಮದ್ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳಿಗೆ ಅಪ್ಪಣೆ ಮಾಡಿದರು.

ಶಿಷ್ಯನನ್ನು ಆಯ್ಕೆ ಮಾಡುವಲ್ಲಿ ಅಥವಾ ಸ್ವೀಕಾರ ಮಾಡುವಲ್ಲಿ ಗುರುಗಳು ದೈಹಿಕವಾಗಿಯೋ ಇನ್ನಾವುದೋ ಕಾರಣಕ್ಕೆ ಅಸಮರ್ಥರಾದರೆ, ಅಥವಾ ಶಿಷ್ಯಸ್ವೀಕಾರಕ್ಕೆ ಮೊದಲೇ ಗುರುಗಳು ದೇಹತ್ಯಾಗವನ್ನು ಮಾಡಿದರೆ, ಅಂತಹ ಸಂದರ್ಭದಲ್ಲಿ ಯೋಗ್ಯ ಪೀಠಾಧಿಪತಿಗಳನ್ನು ತರುವುದು ಸುಲಭದ ಮಾತಲ್ಲ. ಇಂತಹ ಹಲವಾರು ಘಟನೆಗಳು ನಮ್ಮ ಸುತ್ತಮುತ್ತಲಿನ ಅನೇಕ ಮಠಗಳಲ್ಲಿ ನಡೆದಿವೆ. ಇಂತಹ ಸಂದರ್ಭದಲ್ಲಿ, ಶಿಷ್ಯನನ್ನು ಹುಡುಕುವ ಅಧಿಕಾರವುಳ್ಳವರ ಆಸೆಯೇ ಪ್ರಧಾನವಾಗುವುದೇ ವಿನಾ ಲೌಕಿಕ ಆಸೆಯನ್ನು ಬಿಟ್ಟವನನ್ನು ಹುಡುಕುವುದು ಸುಲಭವಲ್ಲ. ಮಂದ, ಮಧ್ಯಮ, ಉತ್ತಮ ವೈರಾಗ್ಯಗಳನ್ನು ಗುರುತಿಸುವುದು ಜ್ಞಾನಿಗೆ ಮಾತ್ರ ಸಾಧ್ಯ. ಇನ್ನು ಜ್ಯೋತಿಷ್ಯವನ್ನು ನಂಬಬಹುದಾದರೂ ಜ್ಯೋತಿಷಿಗಳಿಗೂ ಮಿತಿ ಇದೆಯಲ್ಲವೇ? ಲೌಕಿಕ ವ್ಯಕ್ತಿ ಇಂತಹ ಪರೀಕ್ಷೆಗೆ ಹೊರಟರೆ ಅವನ ಅಜ್ಞಾನವೇ ಪ್ರಕಟವಾಗುವುದು.

ಶೃಂಗೇರಿ ಮಠದಲ್ಲೂ ಒಮ್ಮೆ, ಶಿಷ್ಯಸ್ವೀಕಾರಕ್ಕೂ ಮೊದಲೇ ಗುರುಗಳು ಬ್ರಹ್ಮೀಭೂತರಾದ ಸಂದರ್ಭವೊಂದು ಒದಗಿತ್ತು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು ಬೆಂಗಳೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಓದುತ್ತಿರುವ ನರಸಿಂಹನನ್ನೇ ಶಿಷ್ಯನನ್ನಾಗಿ ಸ್ವೀಕರಿಸುವ ಸಂಕಲ್ಪ ಮಾಡಿದ್ದರು. ಗುರುಗಳಿಗೆ ಅನಾರೋಗ್ಯ ಪ್ರಾರಂಭವಾದಾಕ್ಷಣ ಬೆಂಗಳೂರಿನಲ್ಲಿರುವ ನರಸಿಂಹನನ್ನು ಕರೆತರಲು ಜನರನ್ನು ಕಳುಹಿಸಿದರು. ಅದು 1912ರ ಕಾಲ. ಬೆಂಗಳೂರಿನಿಂದ ಒಂದಷ್ಟು ದೂರದವರೆಗೆ ಮಾತ್ರ ಬಸ್ಸಿನಲ್ಲಿ ಬಂದು, ಮುಂದೆ ನಡೆದೇ ಬರಬೇಕಾದ ಕಾಲ. ಅಷ್ಟು ಅವಧಿಯವರೆಗೆ ದೇಹಧಾರಣೆ ಸಾಧ್ಯವಿಲ್ಲವೆಂದು ತಿಳಿದ ಸ್ವಾಮಿಗಳು, ಮಠದ ಆಡಳಿತಾಧಿಕಾರಿಗಳ ಮೇಲಿನ ಭರವಸೆ ಸಾಲದೆ, ‘ನನ್ನ ಆಯ್ಕೆಯ ವ್ಯಕ್ತಿಯಾದ ನರಸಿಂಹನನ್ನೇ ಪೀಠಕ್ಕೆ ತರಬೇಕು. ಈ ಕಾರ್ಯವನ್ನು ತಾವೇ ನಿಂತು ಮಾಡಿಸಬೇಕು’ ಎಂದು ಮೈಸೂರು ಮಹಾರಾಜರಿಗೆ ಪತ್ರ ಬರೆದಿದ್ದರಂತೆ. ಇಷ್ಟಾದರೂ ಆಡಳಿತಾಧಿಕಾರಿಗಳು ಬೇರೆಯವರನ್ನು ಪೀಠಕ್ಕೆ ತರಲು ಪ್ರಯತ್ನಿಸಿದರು. ಆದರೆ ಮಹಾರಾಜರ ಅಪ್ಪಣೆಯಿಂದ ಗುರುಗಳ ಸಂಕಲ್ಪವೇ ನೆರವೇರಿತು. ಇಂತಹ ಸಂದರ್ಭದಲ್ಲಿ ಆ ಮಠ ಈ ಮಠವೆಂಬ ಭೇದವಿಲ್ಲದೆ, ತಮ್ಮ ತಮ್ಮ ಅಧಿಕಾರಕ್ಕೆ ಆಶಯಕ್ಕೆ ಕೈಗೊಂಬೆಯಾಗುವ ಗುರುಗಳೇ ಬೇಕೆಂದು ಬಯಸುವುದು ನಡೆದೇ ಇದೆ. ನಡೆಯುತ್ತಲೂ ಇದೆ. ಆದರೆ ಎಷ್ಟೋ ಬಾರಿ ಈ ರೀತಿಯ ಆಶಯಕ್ಕಿಂತ ಹಿಂದಿನ ಗುರುಗಳ ತಪಃಪ್ರಭಾವವೇ ಮುಂದಾಗಿ ಎಲ್ಲವನ್ನೂ ನಡೆಸಿದಂತೆಯೂ ಕಾಣುತ್ತದೆ. ನಮ್ಮ ಮಠದಲ್ಲಿ ಈ ರೀತಿಯ ಯಾವ ತೊಡಕುಗಳೂ ಇಲ್ಲದೆ ಹಿರಿಯ ಗುರುಗಳ ಆಶಯ ಸುಲಲಿತವಾಗಿ ನೆರವೇರಿತು.

ಎಂಭತ್ತು ತೊಂಬತ್ತರ ದಶಕ ರಾಜಕೀಯವಾಗಿ ದೇಶ ಬದಲಾಗುತ್ತಿರುವ ಸಂದರ್ಭ. ಎಲ್ಲೆಲ್ಲೂ ಹೋರಾಟ ಚಳವಳಿಗಳು ಪ್ರಾರಂಭವಾದ ಕಾಲ. ರಸ್ತೆ ಬೇಕು, ಅಭಿವೃದ್ಧಿಯಾಗಲಿ ಎಂಬುದಕ್ಕೊಂದು ಹೋರಾಟವಾದರೆ; ರಸ್ತೆ ಬಂದರೆ ಅದರೊಟ್ಟಿಗೆ ಕಳ್ಳನೂ ಬರುತ್ತಾನೆ, ಹಾಗಾಗಿ ರಸ್ತೆ ಬೇಡ ಎಂಬುದಕ್ಕೊಂದು ಹೋರಾಟ ನಡೆಯುತ್ತಿತ್ತು. ಏನಾದರಾಗಲಿ ನಿದ್ದೆಗಿಂತ ಎಚ್ಚರ ಲೇಸು, ತಮಸ್ಸಿಗಿಂತ ರಜೋಗುಣ ಒಳ್ಳೆಯದು. ಈ ರೀತಿಯ ಬದಲಾವಣೆಯ ಗಾಳಿಯಲ್ಲಿ ಜನ ಮಗ್ಗಲು ಬದಲಿಸುತ್ತಿದ್ದರು. ಮಠಕ್ಕೆ ಬರುವ ಸೀಮೆಯ ಶಿಷ್ಯರು ಕಡಿಮೆ. ಸಂಪರ್ಕವ್ಯವಸ್ಥೆಯ ಕೊರತೆ ನಿದ್ದೆ ಬಂದವನಿಗೆ ಹಾಸಿಗೆ ಹಾಸಿದಂತಿತ್ತು. ಬಹುಕಾಲದ ನಂತರ ಕೇಳಿದ, ಮಠದ ಶಿಷ್ಯಸ್ವೀಕಾರ ಜನರ ಕುತೂಹಲವನ್ನು ಹೆಚ್ಚಿಸಿತ್ತು. ಅದು ಮಠವನ್ನು ನೋಡುವುದಕ್ಕೂ, ತಮ್ಮ ಮಠವೆಂದು ಅರಿವಾಗುವುದಕ್ಕೂ ಅವಕಾಶವನ್ನು ಸೃಷ್ಟಿಸಿತು. ಹಾಗಾಗಿ ಸಾಕಷ್ಟು ಜನ ಸೇರಿದ್ದರು. ಕಂಚಿಮಠದ ಶ್ರೀಮದ್ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಶ್ರೀ ಪರಮೇಶ್ವರ ಭಟ್ಟರಿಗೆ ಸಂನ್ಯಾಸವನ್ನು ನೀಡಿದರು. ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಎಂಬ ಅಭಿಧಾನದ ಮೂಲಕ ಸ್ವರ್ಣವಲ್ಲಿ ಮಠದ ಪೀಠಾರೋಹಣವು ನಡೆಯಿತು. ಶ್ರೀಮದ್ ಸರ್ವಜ್ಞೇಂದ್ರ ಸರಸ್ವತಿಗಳು ದೇಹತ್ಯಾಗ ಮಾಡಿ ಎರಡೂವರೆ ತಿಂಗಳೊಳಗೆ ಈ ಕಾರ್ಯಕ್ರಮ ನಡೆಯಿತು. ಊಟ ತಿಂಡಿಯ ವ್ಯವಸ್ಥೆಗಳೆಲ್ಲ ಪವಾಡವೆಂಬಂತೆ ನಡೆದವು. ನಮ್ಮ ಸೀಮೆಗಳಲ್ಲಿ ಈ ಪೀಠಾರೋಹಣ ಕಾರ್ಯಕ್ರಮ ಸಂಚಲನವನ್ನಂತೂ ಉಂಟುಮಾಡಿತು.

ಗಂಗಾಧರೇಂದ್ರರಿಗೆ ಸಹಜವಾಗಿಯೇ ಮಠದಲ್ಲಿ ಎಲ್ಲವೂ ಹೊಸತು. ಹಿರಿಯರ ಸಲಹೆ ಸೂಚನೆಯಂತೆ ಪೂಜೆ ನೇಮ ನಿಷ್ಠೆಗಳನ್ನು ಸ್ವಯಂ ಕೈಗೊಂಡರು. ವ್ಯವಹಾರದಲ್ಲಂತೂ ಪರಾವಲಂಬಿಯಾಗಬೇಕಾದದ್ದು ಅನಿವಾರ್ಯವಾಗಿತ್ತು. ಮೊದಲೇ ಸ್ಥಾನಾಪನ್ನರಾದ ಮಠದ ನೌಕರರನ್ನು ನಿಭಾಯಿಸಬೇಕು. ಇವರು ಮಠಕ್ಕೆ ಗುರುಗಳಾದರೂ, ತಾವು ಮೊದಲಿನಿಂದಲೂ ಇಲ್ಲಿ ಇರುವವರೆಂಬ ಅವರ ಹಕ್ಕಿನ ಮನೋಭಾವವನ್ನು ತಿದ್ದಿಕೊಂಡು, ಮಠವನ್ನು ನೇರ್ಪುಗೊಳಿಸುವಾಗ ಅಷ್ಟೋ ಇಷ್ಟೋ ಶ್ರಮವಂತೂ ಆಗಿರುತ್ತದೆ. ಹಿಂದಿನ ಗುರುಗಳಂತೆ ಗಂಗಾಧರೇಂದ್ರರು ತಪ್ಪನ್ನು ನೇರವಾಗಿಯೋ ಕಟುವಾಗಿಯೋ ಹೇಳಲಾರರು. ಇದರಿಂದ ಭಯವೂ ಕಡಿಮೆ. ಕಾಲದ ಮಹಿಮೆಯಂತೆ ಎಲ್ಲ ಕಡೆಯ ಹಾಗೆ ಕೆಲಸದವರಲ್ಲಿ ಶ್ರದ್ಧೆ, ತತ್ಪರತೆಯೂ ಕಡಿಮೆ. ಹಾಗಾಗಿ ಒಂದಷ್ಟು ಸೋರಿಕೆ ಅಪವ್ಯಯಗಳು ಅನಿವಾರ್ಯ. ಇವುಗಳೊಂದಿಗೆ ಮಠದ ತೋಟ, ಪೂಜೆ, ಭಕ್ತಾದಿಗಳಿಂದ ಸಂಗ್ರಹವಾಗುವ ಕಾಣಿಕೆ ಮೊದಲಿಗಿಂತ ಸಾಕಷ್ಟು ವೃದ್ಧಿಸಿದೆ.

ಹಿಂದಿನ ಗುರುಗಳಂತೆ ಮಠವೆಂಬುದು ಧನಸಂಗ್ರಹದ ಕೇಂದ್ರವೋ ಅಥವಾ ಮಠದ ಗುರಿಯೋ ಆಗಬಾರದೆಂಬುದು ಗಂಗಾಧರೇಂದ್ರರ ನಿಲುವು. ಗಾಯತ್ರಿ ಜಪಯಜ್ಞದಿಂದ ಪ್ರಾರಂಭಿಸಿ ಮಠದ ನವೀಕರಣದವರೆಗೂ ಅವರಾಗಿ ಯಾವ ಶಿಷ್ಯರಲ್ಲೂ ಮಠಕ್ಕಾಗಿ ಹಣವನ್ನು ಕೇಳಲಿಲ್ಲ. ಸ್ವರ್ಣವಲ್ಲಿ ಸೀಮೆಗಳಲ್ಲಿ ನಡೆಯುವ ಯಾವುದೇ ಸಭೆಯಲ್ಲಿ ಮಠದ ಅಭಿವೃದ್ಧಿಗೋ ಕಾರ್ಯಕ್ರಮಕ್ಕೋ ಧನಸಂಗ್ರಹಕ್ಕಾಗಿ ಒಂದೇ ಒಂದು ಮಾತನಾಡಿದ ದಾಖಲೆ ಇಲ್ಲ. ಈಗಲೂ ಧನಸಂಗ್ರಹವಾದಂತೆ ವಿನಿಯೋಗಕ್ಕೂ ವ್ಯವಸ್ಥೆಯನ್ನು ಮಾಡುತ್ತಲೇ ಇರುತ್ತಾರೆ. ಮಠದ ಶಿಷ್ಯರು ಹಣವನ್ನು ಕೊಡುತ್ತಾರೋ ಬಿಡುತ್ತಾರೋ ಮುಖ್ಯವಲ್ಲ. ಎಲ್ಲರೂ ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು, ಒಳಗೊಳ್ಳಬೇಕು ಎಂಬುದು ಗಂಗಾಧರೇಂದ್ರರ ಗುರಿ, ಆಶಯವಾಗಿದೆ. ಆದರೂ ಮಠವೆಂಬ ವ್ಯವಸ್ಥೆಗೆ ಹಣದ ಆವಶ್ಯಕತೆಯಂತೂ ಸಾಕಷ್ಟು ಇದ್ದೇ ಇರುತ್ತದೆ. ಹಾಗಾಗಿ ಆದಾಯದ ಮೂಲವನ್ನು ಹುಡುಕುತ್ತಲೇ ಇರಬೇಕಾಗುತ್ತದೆ. ಆಗ ಆಡಳಿತ ವರ್ಗದವರು; ಭಕ್ತರು ಬಂದು ಮಾಡಿಸುವ ಪೂಜೆ ಸೇವೆಗಳಿಗೆಲ್ಲ ಇಷ್ಟೆಂದು ಶುಲ್ಕವನ್ನು ವಿಧಿಸೋಣವೆಂಬ ಸಲಹೆಯನ್ನು ನೀಡಿದಾಗ ಸ್ವಾಮಿಗಳು ಸುತಾರಾಂ ಒಪ್ಪಲೇ ಇಲ್ಲ. ಅಷ್ಟೇ ಅಲ್ಲದೆ ಮಠದ ಶಿಷ್ಯಪರಂಪರೆಗೆ ಸೇರದ ಭಕ್ತರು, ಮಠದ ಸಂಪೂರ್ಣ ವ್ಯವಸ್ಥೆಯನ್ನು ಮಾಡುವುದಕ್ಕೆ ಮುಂದಾದಾಗಲೂ ಸ್ವಾಮಿಗಳು ಒಪ್ಪಲಿಲ್ಲ. ಹಣವನ್ನು ಕೊಡಲು ಸಿದ್ಧರಿದ್ದ ಹೊರಗಿನ ವ್ಯಕ್ತಿಗಳ ಮರ್ಜಿಯಲ್ಲಿ ಹದಿನಾರು ಸೀಮೆಗಳ ಶಿಷ್ಯರ ಮಠವನ್ನಿಡಲು ಸ್ವಾಮಿಗಳು ಮನಸ್ಸು ಮಾಡಲಿಲ್ಲ. ಹದಿನಾರು ಸೀಮೆಗಳ ಶಿಷ್ಯರೆಲ್ಲ ನತಮಸ್ತಕರಾಗಲು ಸ್ವಾಮಿಗಳ ಈ ಒಂದು ನಡೆ ಸಾಕು.

ಸುತ್ತಮುತ್ತಲಿನ ಅನೇಕ ಮಠಗಳ ಆಯಕಟ್ಟಿನ ಸ್ಥಳಕ್ಕೆ ಸ್ವಾಮಿಗಳ ಪೂರ್ವಾಶ್ರಮದ ಅಣ್ಣ-ತಮ್ಮ ಅಕ್ಕ-ತಂಗಿ ಭಾವ-ನೆಂಟರೇ ಬಂದು ಕುಳಿತುಕೊಂಡಿದ್ದನ್ನು ನೋಡಿದ್ದೇವೆ. ಆದರೆ ನಮ್ಮ ಮಠದ ವ್ಯವಸ್ಥೆಯಲ್ಲಿ ಸ್ವಾಮಿಗಳ ಪೂರ್ವಾಶ್ರಮದ ಸಂಬಂಧಿಗಳು ಯಾರೂ ಕೂಡ ಇಲ್ಲವೇ ಇಲ್ಲ. ಸಾಮಾನ್ಯ ಭಕ್ತರಂತೆ ಮಠಕ್ಕೆ ಬಂದು ಹೋಗುವುದಷ್ಟೇ ಅವರಿಗೆಲ್ಲ ಇರುವ ಅವಕಾಶ. ಸ್ವಾಮಿಗಳ ತಂದೆ ತಾಯಿಗಳು ಮಠಕ್ಕೆ ಬಂದರೂ, ಶಾಸ್ತ್ರದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಉಲ್ಲೇಖಿತವಾಗಿದೆಯೋ ಅಷ್ಟು ಗೌರವ ಮಾತ್ರ ಅವರಿಗೆ ಸಲ್ಲುತ್ತದೆ. ಅದರಾಚೆ ಒಂದು ನೂಲಿನಷ್ಟೂ ವ್ಯತ್ಯಯವಿಲ್ಲದಂತೆ ಸಂನ್ಯಾಸಧರ್ಮ ಪಾಲನೆಯಾಗುತ್ತದೆ.

ಗಂಗಾಧರೇಂದ್ರರು ಪೀಠಕ್ಕೆ ಬಂದಾಗ ಮಠಕ್ಕೆ ಬಡತನವಿಲ್ಲದಿದ್ದರೂ ಶ್ರೀಮಂತಿಕೆಯೇನೂ ಇರಲಿಲ್ಲ. ಮಠವು ಮಧ್ಯಮವರ್ಗದ ಕುಟುಂಬದಂತಿತ್ತು. ಹಾಗಾಗಿ ಸ್ವಾಮಿಗಳ ಓಡಾಟಕ್ಕೆ ಬೇಕಾದ ಕಾರು ಮುಂತಾದ ವಾಹನವ್ಯವಸ್ಥೆ ಮಠದಲ್ಲಿರಲಿಲ್ಲ. ಅವರಿವರಿಂದ ಬಾಡಿಗೆಯನ್ನು, ಸೇವಾಭಾವದ ಭಕ್ತರಿಂದಲೋ ಕಾರನ್ನು ಪಡೆದು, ಅನಿವಾರ್ಯದ ಓಡಾಟವನ್ನು ಸ್ವಾಮಿಗಳು ಮಾಡಿದರು. ದೂರದ ಪ್ರಯಾಣಗಳಿಗೆಲ್ಲ ಎರವಲು ತಂದ ವಾಹನವನ್ನು ತಿರುಗಿ ಕೊಡುವಾಗ, ಎಲ್ಲ ರೀತಿಯ ಸರ್ವಿಸ್‌ಗಳನ್ನು ಮಾಡಿಸಿ, ಇಂಧನವನ್ನು ಸಂಪೂರ್ಣ ತುಂಬಿಸಿ ಕೊಡಬೇಕಿತ್ತು. ಈ ರೀತಿಯ ವ್ಯಾವಹಾರಿಕ ಶಿಸ್ತು ಲೌಕಿಕರಿಗೂ ಕಡಿಮೆ ಎಂಬುದನ್ನು ಗಮನಿಸಬಹುದು.

ಒಂದು ದಿನವೂ ವ್ಯತ್ಯಯವಾಗದಂತೆ ಇಂದಿನವರೆಗೂ ಅಧ್ಯಯನ ಅಧ್ಯಾಪನ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮಠದ ವ್ಯವಹಾರ, ಪೂಜೆ, ವಿವಿಧ ಸಮಾಜ ಸುಧಾರಣಾ ಕಾರ್ಯಕ್ರಮಗಳ ನಡುವೆ ಅಧ್ಯಯನವನ್ನು ಹೇಗೆ ನಡೆಸಿದರೋ ತಿಳಿಯದು. ಪೀಠಾಧಿಪತಿಗಳಾಗಿ ಅಧ್ಯಯನವನ್ನು ಹೇಗೆ ಮಾಡಬೇಕೆಂದು ಹೇಳುವಾಗ ಶೃಂಗೇರಿಯ ಶ್ರೀ ಭಾರತಿತೀರ್ಥರು ನಮ್ಮ ಗುರುಗಳನ್ನು ಉದಾಹರಿಸುತ್ತಾರಂತೆ. ಅಧ್ಯಾಪನವಂತೂ ಬಿಡುವಿಲ್ಲದ ಕೆಲಸದ ನಡುವೆಯೂ ಸಾಗುವುದನ್ನು ನಾನೂ ನೋಡಿದ್ದೇನೆ. ಯಾವುದೋ ಕಾರ್ಯಕ್ರಮವನ್ನು ಮುಗಿಸಿ ಬಂದು, ರಾತ್ರಿಯ ಪೂಜಾದಿ ಕೈಂಕರ್ಯವನ್ನು ಮಾಡಿ, ಆಮೇಲೆ ಕಾಣಲು ಬಂದ ಭಕ್ತರ ಅಹವಾಲುಗಳನ್ನು ಸ್ವೀಕರಿಸಿ, ಸಮಾಧಾನವನ್ನು ಹೇಳುವಾಗ ರಾತ್ರಿ ಹನ್ನೆರಡು ಗಂಟೆಯ ಹತ್ತಿರವಾಗಿತ್ತು. ಆಮೇಲೆ ವೇದಾಂತ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ನೋಡುವಾಗ, ಒಳಗಿನ ಚೈತನ್ಯವೇ ಯಂತ್ರವಾಗಿ ಕೆಲಸ ಮಾಡುತ್ತಿರುವಂತೆ ಅನಿಸಿತು.

ಪೂಜೆಗೆ ಕುಳಿತರೆ ಮುಗಿಯುವವರೆಗೆ ದೇವತಾ ಸನ್ನಿಧಾನದಿಂದ ದೃಷ್ಟಿಯನ್ನು ಕದಲಿಸದೆ, ಆಸನಭಂಗವೂ ಇಲ್ಲದೆ ಶ್ರೀಗಳು ಮಾಡುವ ಪೂಜೆ ಮನನೀಯವಾದದ್ದು. ಒಮ್ಮೆ ಶತಾವಧಾನಿ ಗಣೇಶರು, ಗುರುಗಳೊಂದಿಗೆ ತೀರ್ಥ ಪರಿಕ್ರಮಕ್ಕೆ ಹೋಗಿದ್ದರು. ಆ ಸಮಯದಲ್ಲಿ ಸ್ವಾಮಿಗಳ ಪೂಜೆಯ ಕಾಲ, ಒಂದು ದಿನ ಬೇಗ ಇನ್ನೊಂದು ದಿನ ದೀರ್ಘವಾಗಿ ನಡೆಯುವುದನ್ನು ನೋಡಿದ ಅವಧಾನಿಗಳು, ‘ಯಾಕೆ ಪೂಜಾ ಸಮಯದಲ್ಲಿ ಒಂದೊಂದು ದಿನ ಒಂದೊಂದಷ್ಟು ಕಾಲ ಹೆಚ್ಚು ಕಡಿಮೆಯಾಗುವುದು?’ ಎಂದು ಸ್ವಾಮಿಗಳನ್ನು ಕೇಳಿದರಂತೆ. ಆಗ ಸ್ವಾಮಿಗಳು ‘ಏಕಾಗ್ರತೆ ಬಂದ ದಿವಸ ಬೇಗ ಪೂಜೆಯಾಗುತ್ತದೆ. ಏಕಾಗ್ರತೆ ಬರದಿದ್ದರೆ ಬರುವವರೆಗೂ ಪೂಜೆಯನ್ನು ಮಾಡುವುದಾಗುತ್ತದೆ. ಅದರಿಂದ ಹೆಚ್ಚು ಕಾಲ ಪೂಜೆಯಾಗುತ್ತದೆ’ ಎಂದು ಹೇಳಿದರಂತೆ. ‘ಏಕಾಗ್ರತೆ ಬಂದ ದಿವಸ ಸಮಯದ ಪರಿವೆಯೇ ಇಲ್ಲದೆ ಪೂಜೆ ದೀರ್ಘವಾಗುವುದು. ಏಕಾಗ್ರತೆ ಇಲ್ಲದ ದಿನ ಬೇಗ ಪೂಜೆ ಮುಗಿಯುವುದೆಂದು ಅವಧಾನಿಗಳು ಊಹಿಸಿದ್ದರಂತೆ. ಆದರೆ ಸ್ವಾಮಿಗಳ ಪೂಜೆಯಲ್ಲಿ ತದ್ವಿರುದ್ಧವಾದ ರೀತಿ ಅಡಗಿತ್ತು.

ಒಮ್ಮೆ ಬೆಂಗಳೂರಿನ ಚಿಕ್ಕಬೆಟ್ಟಳ್ಳಿಗೆ ಬಂದ ಸ್ವಾಮಿಗಳ ದರ್ಶನಕ್ಕೆ ನಾನೂ ಹೋಗಿದ್ದೆ. ಪೂಜೆ ಇನ್ನೂ ನಡೆಯುತ್ತಲೇ ಇತ್ತು. ನಾಲ್ಕಾರು ವಿದ್ಯಾರ್ಥಿಗಳು ದೇವರ ಕೋಣೆಯ ಹೊರಗೆ ಕುಳಿತು ಮಂತ್ರಪಠಣ ಮಾಡುತ್ತಿದ್ದರು. ಪೂಜೆ ಮುಗಿಸಿ ಬಂದ ಸ್ವಾಮಿಗಳು, ಮಂತ್ರ ಹೇಳಿದ ವಿದ್ಯಾರ್ಥಿಗಳಲ್ಲಿ ಒಬ್ಬನ ಹೆಸರನ್ನು ಕರೆದರು. ಮಂತ್ರದ ಒಂದು ಪಾದವನ್ನು ಹೇಳಿಸಿ, ‘ಇಲ್ಲಿ ನಿನ್ನ ಸ್ವರೋಚ್ಚಾರ ತಪ್ಪಿದೆ, ಹೀಗಾಗಬೇಕು’ ಎಂದು ತಿದ್ದಿ ಹೇಳಿದರು. ಪೂಜಾಸಮಯದಲ್ಲಿ ತಿರುಗಿಯೂ ನೋಡದ ಸ್ವಾಮಿಗಳು, ನಾಲ್ಕಾರು ವಿದ್ಯಾರ್ಥಿಗಳ ನಡುವೆ ಇಂಥವನೇ ಸ್ವರೋಚ್ಚಾರವನ್ನು ತಪ್ಪಿದನೆಂದು ಹೇಗೆ ಗುರುತಿಸಿದರೋ ತಿಳಿಯದು. ಆದರೆ ಸ್ವಾಮಿಗಳ ಗ್ರಹಿಕೆಯ ವೇಗವಂತೂ ಅರ್ಥವಾಗದಿರದು. ಹೀಗೆ ವ್ಯವಹಾರ ಶುದ್ಧತೆಯಿಂದಲೇ ಮಠದ ಪ್ರಗತಿಯನ್ನು ಸಾಧಿಸಬೇಕೆಂಬ ಧ್ಯೇಯವನ್ನು ಇಟ್ಟುಕೊಂಡ ಸ್ವಾಮಿಗಳು, ಮಠದಲ್ಲಿ ವ್ಯವಸ್ಥೆಯನ್ನು ಮಾಡುವವರನ್ನು ತಿದ್ದಿಕೊಳ್ಳಬೇಕಾದ ಅನಿವಾರ್ಯತೆಯೂ ಇತ್ತು. ಆಗೆಲ್ಲ, ಸಂಯಮವನ್ನು ಮೀರಿದರೆ ಸಂನ್ಯಾಸಕ್ಕೆ ಕುತ್ತು, ಉದಾಸೀನರಾದರೆ ಪೀಠಾಧಿಪತಿತ್ವಕ್ಕೆ ಆಪತ್ತು ಎಂಬ ಕತ್ತಿಯಲಗಿನ ದಾರಿಯಲ್ಲಿ ಸ್ವಾಮಿಗಳು ಹೆಜ್ಜೆ ಇಟ್ಟು ನಡೆದಿದ್ದಾರೆ.

ಮಠದೊಳಗೆ ಸಾಕಷ್ಟು ಕಾರ್ಯಗಳಲ್ಲಿ ಅವ್ಯವಸ್ಥೆ, ಅಪವ್ಯಯ, ಸೋರಿಕೆಗಳು ನಡೆಯುತ್ತವೆ. ಇದಕ್ಕೆಲ್ಲ ಕಾರಣವೂ ಇಲ್ಲದಿಲ್ಲ. ಸಾಮಾನ್ಯವಾಗಿ ಸಮರ್ಥರನ್ನು ಆಕರ್ಷಿಸುವಷ್ಟು ಸಂಬಳವೂ ಮಠದಲ್ಲಿ ಇರುವುದಿಲ್ಲ. ಹೊರಗೆ ನಿಂತು ಮಠವನ್ನು, ಅಲ್ಲಿಯ ವ್ಯವಸ್ಥೆಯನ್ನು, ಅಲ್ಲಿಯ ಜನರನ್ನು ಆಕ್ಷೇಪಿಸುವ ಪ್ರಾಮಾಣಿಕನೆಂಬ ಭ್ರಮೆಯಲ್ಲಿರುವ ನಾನೋ ನನ್ನಂಥವನೋ ಮಠದ ಕೆಲಸಕ್ಕೆ ಹೋಗಲಾರ. (ಹೊರಗೆ ನಿಂತು ಪ್ರಾಮಾಣಿಕತೆಯ ಮಾತನ್ನು ಆಡುವುದು, ತಾನು ಹರಿಶ್ಚಂದ್ರನ ವಂಶದ ತುಣುಕೆಂದು ತೋರ್ಪಡಿಸಿಕೊಳ್ಳುವುದು ಸುಲಭ. ಮಠವಿರಲಿ ರಾಜಕೀಯವಿರಲಿ, ಅಲ್ಲಿ ನಿಂತು ಪ್ರಾಮಾಣಿಕತೆಯಿಂದ ಕೆಲಸವನ್ನು ಸಾಧಿಸಿದ ಮೇಲೆ ಈ ಮಾತಿಗೆಲ್ಲ ಬೆಲೆ. ಹೊರತು ದೂರ ನಿಂತು ಹೇಳುವುದು ಅಭಾವವೈರಾಗ್ಯವೇ ಸರಿ.) ಬೇರೆಡೆಯಲ್ಲಿ ಕೆಲಸಕ್ಕೆ ಅವಕಾಶವಿಲ್ಲದೆ ಮಠವನ್ನು ಸೇರಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಎಲ್ಲರೂ ಹಾಗಲ್ಲ. ಸೇವಾಬುದ್ಧಿ ಶ್ರದ್ಧೆಯಿಂದ ಬರುವವರ ಸಂಖ್ಯೆಯೂ ಸಾಕಷ್ಟಿರುತ್ತದೆ. ಅಂತಹ ಸಂದರ್ಭದಲ್ಲಿ ಕೇಡು, ವಂಚನೆ, ಕುಹಕ ಬುದ್ಧಿಯುಳ್ಳ ವ್ಯಕ್ತಿಗಳಿಗೂ ಈ ಶ್ರದ್ಧಾವಂತರಿಗೂ ಸಂಘರ್ಷಗಳು ತಪ್ಪಿದ್ದಲ್ಲ. ಆಗ ನಿಧಾನವಾಗಿ ಶ್ರದ್ಧಾವಂತನೇ ಮಠವನ್ನು ಬಿಡುತ್ತಾನೆ. ಆದರೆ ಈ ಸ್ವಾತಂತ್ರ್ಯ ಗುರುಗಳಿಗೆ ಇಲ್ಲವಲ್ಲ! ಹಾಗಾಗಿ ಈ ಜಗತ್ತಿನ ಒಳಿತು ಕೆಡುಕುಗಳು ಆತ್ಯಂತಿಕ ದೃಷ್ಟಿಯಿಂದ ಒಂದೇ ಎಂಬ ಬುದ್ಧಿಯಿಂದ ಎಲ್ಲರನ್ನೂ ಸಮಭಾವದಲ್ಲಿ ಕಂಡು, ಇದ್ದವರನ್ನೇ ತಿದ್ದುವಷ್ಟು ತಿದ್ದಿ, ಬೆಳೆಸುವಷ್ಟು ಬೆಳೆಸಿ ಮಠವನ್ನು ಉಚ್ಛ್ರಾಯ ಸ್ಥಿತಿಗೆ ತಂದ ಸ್ವಾಮಿಗಳನ್ನು ಎಷ್ಟು ಅಭಿವಂದಿಸಿದರೂ ಸಾಲದು. ಸಂನ್ಯಾಸಿಯಾಗಿಯೂ ವ್ಯವಹಾರಶುದ್ಧಿಯನ್ನು ನಡೆದು ತೋರಿ ಲೌಕಿಕರಿಗೆ ಆದರ್ಶಪ್ರಾಯರಾಗಿದ್ದಾರೆ. ವ್ಯಾವಹಾರಿಕ ದಕ್ಷತೆ – ಪಾರಮಾರ್ಥಿಕ ದೃಷ್ಟಿ ಎರಡನ್ನೂ ಸರಿದೂಗಿಸಿಕೊಂಡು ಮಠವನ್ನು ಮುನ್ನಡೆಸುತ್ತಿದ್ದಾರೆ.

ಸರ್ವಜ್ಞೇಂದ್ರರು ಅವರ ಕಾಲದ ಸಂಪರ್ಕವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಶಿಷ್ಯಸಂಪರ್ಕವನ್ನು ಮಾಡಿದ್ದಾರೆ. 80ರ ದಶಕದ ಹೊತ್ತಿಗೆ ಸಂಪರ್ಕ ವ್ಯವಸ್ಥೆಗಳಲ್ಲಿ ಬದಲಾವಣೆಗಳು ಬರತೊಡಗಿದರೂ ಸರ್ವಜ್ಞೇಂದ್ರರಿಗೆ ವಯಸ್ಸಾಗಿತ್ತು. ಆದರೂ ಮಠದಲ್ಲಿ ನಡೆಯಬೇಕಾದ ಎಲ್ಲ ಕಾರ್ಯಗಳನ್ನೂ ನಡೆಸಿಕೊಂಡು ಹೋದರು. ಸರ್ವಜ್ಞೇಂದ್ರರಿಗೆ ಮುಪ್ಪು ಬರುವ ಮೊದಲೇ ಶಿಷ್ಯಸೀಮೆಗಳನ್ನೆಲ್ಲ ಓಡಾಡಬಲ್ಲ ಮುಂದೆ ಪೀಠಾಧಿಪತಿಗಳಾಗಬಲ್ಲ ಶಿಷ್ಯಸ್ವೀಕಾರವಾಗದೆ, ಸುಮಾರು ಹತ್ತು ವರ್ಷಗಳ ಕಾಲ ಶಿಷ್ಯಸೀಮೆ ಮತ್ತು ಮಠದ ನಡುವೆ ಒಂದು ಅಂತರ ಸೃಷ್ಟಿಯಾದಂತೆ ಕಾಣುತ್ತದೆ. ಹಾಗಾಗಿ ಗಂಗಾಧರೇಂದ್ರರು ಪೀಠಕ್ಕೆ ಬರುವಾಗ ಸಮಾಜದಲ್ಲಿ ಒಂದಷ್ಟು ಅನಪೇಕ್ಷಿತ ಬದಲಾವಣೆಗಳೂ ನಡೆದಿದ್ದವು.

ಸ್ವರ್ಣವಲ್ಲಿ ಮಠಕ್ಕೆ ಹದಿನಾರು ಸೀಮೆಗಳು ಮತ್ತು ಕರಾವಳಿಯಲ್ಲಿ ಅಂಕೋಲೆಯಿಂದ ಭಟ್ಕಳದವರೆಗೂ ಹಬ್ಬಿದ ರಾಮಕ್ಷತ್ರಿಯರ ಶಿಷ್ಯಪರಂಪರೆ ಇದೆ. ಇಲ್ಲಿಯಾದರೂ ಶ್ರದ್ಧೆ ಕ್ಷೀಣಿಸತೊಡಗಿತ್ತು. ಇದು ಕೇವಲ ಸ್ವರ್ಣವಲ್ಲಿ ಸೀಮೆಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ವಿಷಯದಲ್ಲಿ ಇತಿಹಾಸ ಮತ್ತು ರಾಜಕೀಯದ ಪ್ರಭಾವವೂ ಸಾಕಷ್ಟಿದೆ. ಇಲ್ಲಿ ಕ್ಷೀಣವಾದದ್ದು ಕೇವಲ ಮಠದ ಮೇಲಿನ ಶ್ರದ್ಧೆಯಲ್ಲ, ಸನಾತನ ಸಂಸ್ಕೃತಿ ಅಥವಾ ಧರ್ಮದ ಮೇಲೆಯೇ ಶ್ರದ್ಧೆ ಕುಸಿಯತೊಡಗಿತ್ತು. ಹವ್ಯಕರ ಮೂಲ ಅಹಿಚ್ಛತ್ರ, ಕದಂಬರ ಕಾಲಕ್ಕೆ ರಾಜನ ಆಮಂತ್ರಣದಂತೆ ಇಲ್ಲಿಗೆ ಬಂದವರೆಂದು ಇತಿಹಾಸ ಹೇಳುತ್ತದೆ. ಆದರೆ ರಾಜಾಡಳಿತವೇ ಅಳಿದ ಮೇಲೆ ಹವ್ಯಕರಿಗೆ ಆಶ್ರಯವಿಲ್ಲದಂತಾಯಿತು. ಮೆಕಾಲೆಯ ಕಾರಣದಿಂದ ಗುರುಕುಲಗಳೆಲ್ಲ ನಿಂತುಹೋದವು. ಅದರಿಂದ ಅಧ್ಯಯನ ಅಧ್ಯಾಪನಗಳೂ ನಿಂತುಹೋದವು. ‘ಆಪತ್ಸು ಅನಂತರಾ ವೃತ್ತಿಃ’ ಎಂಬಂತೆ ಕೃಷಿಯು ಹವ್ಯಕರ ಬದುಕಾಯಿತು ಎಂದು ಅನಿಸುತ್ತದೆ. ಮುಂದೆ ಪುರೋಹಿತ ಮನೆತನದವರು ಮಾತ್ರ ಮಂತ್ರವನ್ನು ಓದುವುದೆಂಬ ಪ್ರತೀತಿಯೂ ಬಂತು. ತದನಂತರ ಅವರಿಗೂ ವೇದವನ್ನು ಓದುವುದು ಕಷ್ಟವೇ ಆಯಿತು. ಹಾಗಾಗಿ ಈ ಹಿಂದಿನ ತಲೆಮಾರಿನ ಅನೇಕ ಪುರೋಹಿತರಿಗೆ ಅಗ್ನಿಮುಖವೂ ಆಗಿರಲಿಲ್ಲ. ಕೆಲವರಿಗೆ ಕಾಲೋಚಿತ ಪ್ರಯೋಗ ಭಾಗಶಃ ಆಗಿತ್ತು. ಅವರಾದರೋ ಕೇವಲ ಮಂತ್ರವನ್ನು ಕಂಠಪಾಠ ಮಾಡಿದವರು. ಸಂಸ್ಕೃತ ಭಾಷೆಯ ಪರಿಚಯವನ್ನು ಪಡೆಯಲು ಅನುಕೂಲವೂ ಇರಲಿಲ್ಲ. ಅದರಿಂದ ಅವ್ಯಯಕ್ಕೂ ವಿಸರ್ಗ ಅನುಸ್ವಾರಗಳನ್ನು ಸೇರಿಸಿ, ವಿಸರ್ಗ ಭಟ್ರು, ಅನುಸ್ವಾರ ಭಟ್ರು ಎಂಬಂತಹ ಅನ್ವರ್ಥಕಕ್ಕೂ ತುತ್ತಾದರು. ಆದರೆ ಇಂತಹ ಹಲವರಲ್ಲಿ ವಿದ್ಯೆ ಕಡಿಮೆಯಾದರೂ ಶ್ರದ್ಧೆ ಮಾತ್ರ ಅಸೀಮವಾಗಿತ್ತು. ಈ ಪುರೋಹಿತರೆಲ್ಲ ಶ್ರೀಮಂತರೇನಲ್ಲ. ಇವರ ಶಿಷ್ಯವರ್ಗವೂ ಇದಕ್ಕೆ ಹೊರತಲ್ಲ. ವಾರ್ಷಿಕವಾಗಿ ಗಣೇಶ ಚತುರ್ಥಿ, ನವರಾತ್ರಿ ಪೂಜೆಗಳಾದರೆ, ಒಂದಷ್ಟು ಪಿತೃಕಾರ್ಯಗಳು ಇರುತ್ತಿದ್ದವ. ಇಲ್ಲಿಯೂ ಸಂಭಾವನೆಯ ನಿರೀಕ್ಷೆಯಿಲ್ಲದೆ ಶಿಷ್ಯನ ಅನುಕೂಲಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ಮಾಡಿಸಿ ಸಂತೋಷಪಡುತ್ತಿದ್ದರು. ಅಷ್ಟೇ ಅಲ್ಲದೆ ಅಂತ್ಯೇಷ್ಟಿ ಮಾಡುವುದಕ್ಕೂ ಕಷ್ಟವಾಗುವ ಶಿಷ್ಯರ ಮನೆಗೆ, ತಮ್ಮ ಮನೆಯಿಂದಲೇ ಸಾಮಾನು ಸರಂಜಾಮುಗಳನ್ನು ಒಯ್ದು ಕಾರ್ಯವನ್ನು ಮುಗಿಸಿಕೊಟ್ಟಿದ್ದನ್ನೂ ನೋಡಿದ್ದೇನೆ. ಇನ್ನೂ ಕೆಲವು ಪುರೋಹಿತರು ತಮ್ಮ ಮಕ್ಕಳ ಉಪನಯನ ಮದುವೆಗಳೊಟ್ಟಿಗೆ ಶಿಷ್ಯವರ್ಗದ ಬಡಮಕ್ಕಳ ಮುಂಜಿ ಮದುವೆಗಳನ್ನು ಮಾಡಿಸಿದ್ದೂ ಇದೆ. ಈ ಶ್ರದ್ಧೆ ಸಂಸ್ಕಾರಗಳೆಲ್ಲ ನಮ್ಮ ಸಮಾಜದಲ್ಲಿ ಬೀಜರೂಪವಾಗಿ ಉಳಿಯಿತೇ ವಿನಾ ಚಿಗುರಲಿಲ್ಲ.

ಸ್ವಾತಂತ್ರ್ಯಾನಂತರ ನಮ್ಮ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತ ಕಮ್ಯುನಿಸ್ಟರಿಂದ ದೇಶದಲ್ಲಿ ಕರ್ತವ್ಯಪ್ರಜ್ಞೆಗಿಂತ ಹಕ್ಕಿನ ಪ್ರಜ್ಞೆ ಹೆಚ್ಚಾಗಿದ್ದು, ಅದು ಸ್ವರ್ಣವಲ್ಲಿ ಮಠದ ಶಿಷ್ಯಸೀಮೆಗಳಲ್ಲೂ ಕಾಣಿಸಿಕೊಂಡಿತು. ಮಠಕ್ಕೆ ಬರುವ ಭಕ್ತಾದಿಗಳಲ್ಲಿ ಅನೇಕರಿಗೆ ದೇವತಾಸನ್ನಿಧಿ, ಗುರುದರ್ಶನಗಳಿಗಿಂತ ಅಹಂಕಾರ ತೃಪ್ತಿಯೇ ಮುಖ್ಯವಾಗುವುದು ಕಾಣುತ್ತದೆ. ‘ಮಠದಲ್ಲಿ ಮಾತಾಡಿಸುವವರಿಲ್ಲ! ಚಹಾ ಕೊಡುವವರಿಲ್ಲ!’ ಎಂಬಂತಹ ಮಾತುಗಳಿಂದ ಪ್ರಾರಂಭಿಸಿ, ಮಠದ ಮೇಲೆ ಆಕ್ಷೇಪಗಳ ಅಭಿಷೇಕವನ್ನೇ ಮಾಡಿದ್ದನ್ನು ಕೇಳಿದ್ದೇನೆ. ಮಠಕ್ಕೆ ದೀಪಾರಾಧನೆಯ ಕಾಣಿಕೆಯನ್ನು ಕೊಡುತ್ತೇವೆ ಎಂಬುದೇ ಮಠವೆಂಬುದು ಹಕ್ಕಿನ ಸ್ಥಳವೆಂಬ ಭಾವನೆಗೆ ಕಾರಣವಾಗಿತ್ತು. ಹಾಗಾಗಿ ಮಠಕ್ಕೆ ಬಂದಾಗ ಎಲ್ಲ ಸತ್ಕಾರಗಳನ್ನೂ ಅಪೇಕ್ಷಿಸುವ, ಎಲ್ಲವನ್ನೂ ಆಕ್ಷೇಪಿಸುವ ಅಧಿಕಾರವು ಬಳಸಲ್ಪಡುತ್ತಿತ್ತು.

ಇಲ್ಲೆಲ್ಲ ತಿಳಿದವರಂತೆ ಅವಿಚಾರಿತ ರಮಣೀಯವಾಗಿ ಮಾತಾಡುವ ಆಕ್ಷೇಪಿಸುವ ಜನರ ಅಹಂಕಾರ ಶಮನಕ್ಕೋ, ಅಂತರಂಗದ ದೌರ್ಬಲ್ಯ ಮೂಲವಾಗಿಯೋ ಆಗಾಗ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಮಠದಲ್ಲಿ ನಿರಂತರವಾಗಿ ಪೂಜಾದಿ ಕೈಂಕರ್ಯಗಳನ್ನು ನಡೆಸುವ ಯತಿಗಳ ಮಹತ್ವ ಅರ್ಥವಾಗದು. ಮಠದ ಅಕ್ಕಪಕ್ಕದಲ್ಲಿ ಅವರ ಅವತಾರ, ಇವರ ಪ್ರತಿರೂಪ, ಅವರ ಪಾದುಕೆ, ಇವರ ದಂಡವೆಂಬ ಕಥೆಗಳಿಗೆ ಮರುಳಾಗಿ, ತಮ್ಮ ವಿಚಾರಶಕ್ತಿಯನ್ನೆಲ್ಲ ಅಲ್ಲಿರುವ ಕಾಷಾಯವೇಷದ ಕಾಲಡಿಯಲ್ಲಿ ಹಾಕಿ, ಅಲ್ಲಿ ಮಾಡುವ ಸೇವೆ, ನೀಡುವ ಕಾಣಿಕೆಗಳಿಗೆ ಲೆಕ್ಕವೇ ಇಲ್ಲ. ಆಕ್ಷೇಪವೊ ಅಪೇಕ್ಷೆಯೋ ಇಲ್ಲದೆ ಅಲ್ಲೆಲ್ಲ ನಡೆದುಕೊಂಡು, ಅಲ್ಲಿ ಉಗುಳಲ್ಪಡುವ ಪವಾಡ ಕಥೆಗಳನ್ನು ಹೇಳಿಕೇಳಿ ಧನ್ಯರಾಗುವುದೇನು! ಅಲ್ಲಿಯ ಮಡಿಗೆ ಭಯಪಡುವುದೇನು! ಮುಚ್ಚುಮರೆಯನ್ನೇ ದೈವಶಕ್ತಿ ಎಂದು ಭ್ರಮಿಸುವುದೇನು! ಒಟ್ಟಾರೆ ಇವರ ಅಜ್ಞಾನ ಅವರ ಬಂಡವಾಳ. ಮಧ್ಯದಲ್ಲಿರುವ ಸ್ವರ್ಣವಲ್ಲಿ ಮಾತ್ರ ಗಾಳಿಗಲುಗದ ದೀಪದ ಕುಡಿಯಂತೆ ಇದೆಲ್ಲವನ್ನೂ ನೋಡುತ್ತ ನಿಂತಿತ್ತು. ಪ್ರಾತಿಭಾಸಿಕ ಸತ್ಯವನ್ನು ನಂಬಿ, ವ್ಯಾವಹಾರಿಕ ಅಜ್ಞಾನದಲ್ಲಿ ತೊಳಲಾಡುತ್ತ, ಆತ್ಯಂತಿಕ ಸತ್ಯವನ್ನು ಮರೆಯುವುದೇ ಈ ಜಗತ್ತಿನ ಸ್ವಾರಸ್ಯವೂ ಇರಬಹುದು.

ಓದಿದವರಿಗೆ ಬುದ್ಧಿಪೂರ್ವಕ ಅಶ್ರದ್ಧೆ. ಓದದಿದ್ದವರಿಗೆ ಅಜ್ಞಾನದ ಹೊದಿಕೆ. ಹೀಗೆ ಆಡಿಕೊಳ್ಳುವುದಕ್ಕೆ, ಅಣಕಿಸುವುದಕ್ಕೆ, ಆಕ್ಷೇಪಿಸಿ ಅಹಂಕಾರ ತೃಪ್ತಿಪಡಿಸಿಕೊಳ್ಳುವುದಕ್ಕೆ ಮಠವೊಂದು ವಿಷಯವಾಗಿತ್ತು. ಆಗಷ್ಟೇ ಪ್ರಾರಂಭವಾದ ಮಂಡಲ ಪಂಚಾಯತ ಚುನಾವಣೆಯ ದ್ವಾರದ ಮೂಲಕ ಮನೆಮನೆಗೂ ರಾಜಕೀಯವೂ ಪ್ರವೇಶಿಸುತ್ತಿತ್ತು. ಅದು ಮಠವನ್ನು ಮಾತ್ರ ಬಿಡುವುದು ಹೇಗೆ? ನಮ್ಮ ದೇಶದ ಸ್ಥಿತಿಯೇ ಹೀಗಿರುವಾಗ, ನಮ್ಮ ಸೀಮೆಗಳು ಮಾತ್ರ ಬೇರೆಯಾಗಲು ಹೇಗೆ ಸಾಧ್ಯ?!

ಎಂಬತ್ತರ ದಶಕದಿಂದ ಆರ್ಥಿಕ ಸ್ಥಿತಿಯಲ್ಲಿ ನಿಧಾನವಾಗಿ ಬದಲಾವಣೆ ತೋರತೊಡಗಿತು. ಲೌಕಿಕ ವಿದ್ಯಾಕೇಂದ್ರಗಳಾದ ಶಾಲಾ, ಕಾಲೇಜುಗಳು ತುಂಬತೊಡಗಿದವು. ಬಹುತೇಕರಿಗೆ ಎಸ್.ಎಸ್.ಎಲ್.ಸಿ. ಆದರೆ ಕೆಲವರು ಕಾಲೇಜಿನ ಮೆಟ್ಟಿಲನ್ನು ತುಳಿದರು. ಇನ್ನೂ ಕೆಲವರು ಡಿಗ್ರಿಯ ಸರ್ಟಿಫಿಕೆಟ್ ಪಡೆದರು. ಇವರಲ್ಲಿ ಅನೇಕರು ಮಾರ್ಕ್ಸಿಸ್ಟರಿಂದ ಪೂರ್ವಯೋಜಿತವಾದ ಪಾಠಪ್ರವಚನಗಳನ್ನು ಕೇಳಿ ಸನಾತನ ಶ್ರದ್ಧೆಯನ್ನು ಕಳೆದುಕೊಂಡರು. ಅದೇ ವಿಷವನ್ನು ಊರಲ್ಲೂ ಹರಡಿದರು. ಸಾಂಸ್ಕೃತಿಕವಾಗಿ ಬೇರೂರಿದ ತಾಳಮದ್ದಳೆಯಲ್ಲಿಯೂ, ದಕ್ಷಿಣ ಕನ್ನಡದಿಂದ ಬಂದ ದೊಡ್ಡ ದೊಡ್ಡ ಅರ್ಥಧಾರಿಗಳು ಪ್ರತಿನಾಯಕನ ಪಾತ್ರವನ್ನು ವೈಭವೀಕರಿಸುವುದರ ಮೂಲಕ ಶ್ರದ್ಧಾಕೇಂದ್ರಗಳಾದ ರಾಮಾಯಣ ಮಹಾಭಾರತದ ಅನೇಕ ಪಾತ್ರಗಳ ಮೂರ್ತಿಭಂಜನವನ್ನು ಮಾಡಿದರು. ಇವೆಲ್ಲ ಮಳೆಯ ಮೇಲೆ ಕೊಳೆಯಂತೆ ಸೇರಿದವು. ಹೀಗೆ ಸನಾತನ ಶೈಥಿಲ್ಯಗೊಂಡು, ಮಾರ್ಕ್ಸ್‌ವಾದದ ಭ್ರಮೆಯಲ್ಲಿ ನೈತಿಕತೆ ಕುಸಿಯಿತು. ನಮ್ಮ ಸಮಾಜದ ಬಹುಪಾಲು ವ್ಯಕ್ತಿಗಳು ವ್ಯಸನದ ಕಡೆ ವಾಲಿದರು. ಅಪೇಯ ಪಾನ ಅಭಕ್ಷ್ಯಭಕ್ಷಣಗಳ ಜೊತೆಗೆ ಜೂಜು ಸೇರಿಕೊಂಡಿತು. ಮನೆಯಲ್ಲಿ ಶ್ರಾದ್ಧವೆಂದರೆ ರಾತ್ರಿಯಲ್ಲಿ ಇಸ್ಪೀಟ್ ಜಾಗರಣೆ ಎಂಬುದು ಸಹಜವಾಗಿಹೋಯಿತು.

ಈ ಸ್ಥಿತಿಯಿಂದ ಸಮಾಜವನ್ನು ಮೇಲೆತ್ತುವುದು ಕಷ್ಟದಾಯಕವಾಗಿತ್ತು. ಆದರೆ ಸದುದ್ದೇಶಕ್ಕೆ ಕಾಲವೇ ಅವಕಾಶವನ್ನು ಸೃಷ್ಟಿಸಿದಂತೆ, ಬೇಡ್ತಿ ಡ್ಯಾಮ್ ಮುನ್ನೆಲೆಗೆ ಬಂತು. ಮಠದ ಹಲವು ಸೀಮೆಗಳಿಗೆ ನೆಲೆಯನ್ನು ಕಳೆದುಕೊಳ್ಳುವ ಭಯ ಒದಗಿತು. ಅದಾಗಲೇ ಸೂಪಾ ಕೊಡಸಳ್ಳಿಗಳಲ್ಲಿ ಡ್ಯಾಮ್‌ಗಳಿಂದಾದ ದುಃಸ್ಥಿತಿಯು ಜನರ ಕಣ್ಮುಂದೆ ಇತ್ತು. ಹಾಗಾಗಿ ಡ್ಯಾಮ್ ವಿರುದ್ಧ ಹೋರಾಟಕ್ಕೆ ನಿಂತ ಸ್ವಾಮಿಗಳನ್ನು ಶಿಷ್ಯಸೀಮೆಗಳು ಒಕ್ಕೊರಲಿನಿಂದ ಬೆಂಬಲಿಸಿದವು. ಸರಕಾರವೂ ಬಗ್ಗಿತು. ದೇಶದಾದ್ಯಂತ ಸ್ವರ್ಣವಲ್ಲಿ ಗುರುಗಳನ್ನು ‘ಹಸಿರು ಸ್ವಾಮಿ’ಗಳೆಂದೇ ಕರೆದರು. ಅಲ್ಲಿಂದ ಸೀಮೆಯ ಶಿಷ್ಯರಲ್ಲಿ ಶ್ರದ್ಧೆಯನ್ನು ಜಾಗೃತಗೊಳಿಸುವ ಯೋಜನೆಯೊಂದನ್ನು ಶ್ರೀಗಳು ಕೈಗೊಂಡರು. ಅದೇ ಹದಿನಾರು ಸೀಮೆಗಳಲ್ಲಿ ವ್ಯಾಪಕವಾಗಿ ಮನೆಮನೆಯನ್ನು ಶಿಷ್ಯರ ಮನಗಳನ್ನು ತಲುಪಿದ ಎಚ್ಚರಿಸಿದ ‘ಗಾಯತ್ರಿ ಜಪಯಜ್ಞ’. ಉಪನೀತರಾದ ಪ್ರತಿಯೊಬ್ಬರೂ ಗಾಯತ್ರಿಮಂತ್ರವನ್ನು ಜಪಿಸಿದರು. ಅಲ್ಲಿಂದ ಮಠಕ್ಕೆ ಶಿಷ್ಯರ ಸಂಪರ್ಕ ಹೆಚ್ಚತೊಡಗಿತು. ಎಲ್ಲರ ಒಳಗೊಳ್ಳುವಿಕೆಯಿಂದ ಶ್ರದ್ಧೆಯ ಉತ್ಥಾನವಾಗಿ ದೈವಿಕ ಭವ್ಯತೆಯಿಂದ ಕಾರ್ಯಕ್ರಮ ನಡೆಯಿತು. ಶ್ರೀಗಳು ಎಲ್ಲರಲ್ಲಿ ನಿಂತು ಸದ್ಬುದ್ಧಿಯನ್ನು ಪ್ರಚೋದಿಸಿದರು.

ತದನಂತರ ಬೇಸಿಗೆಯಲ್ಲಿ ವೇದಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ವೇದಮಂತ್ರಗಳನ್ನು ಹೇಳಿಕೊಡಲಾಯಿತು. ಇದರಿಂದ ಇತ್ತೀಚಿನ ಬಹುತೇಕ ಯುವಕರು ಮಂತ್ರಸಹಿತವಾಗಿ ದೇವರ ಪೂಜೆಯನ್ನು ಮಾಡುವಷ್ಟು ಸಿದ್ಧರಾದರು. ಈ ಶಿಬಿರಗಳಿಂದಾಗಿ ವಿದ್ಯಾರ್ಥಿಗಳು ಶಿಖೆಯನ್ನು ಬಿಡುವಷ್ಟು ಸ್ವಾಭಿಮಾನಿಗಳಾದರು. ಅಷ್ಟೇ ಅಲ್ಲದೆ ನಿತ್ಯ ಸಂಧ್ಯಾವಂದನೆ ಪೂಜೆಗಳನ್ನು ಮುಗಿಸಿ ಶಾಲೆಗೆ ಹೋಗತೊಡಗಿದರು. ಇದರಿಂದ ಉಳಿದ ತಂದೆ ತಾಯಿಗಳು ತಾವೇ ವಿಚಾರಿಸಿಕೊಂಡು ಬಂದು ವೇದಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದರು. ಇದೇ ಪ್ರಭಾವದಿಂದ ಮಠದ ಪಾಠಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯೂ ವೃದ್ಧಿಸಿತು. ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ಮಠದ ಪಾಠಶಾಲೆಗೆ ಸೇರಿಕೊಳ್ಳುತ್ತೇನೆ ಎಂದು ಈಗಲೂ ಹೇಳುವಷ್ಟು ಜಾಗೃತಿ ಸ್ವರ್ಣವಲ್ಲಿಯ ಶಿಷ್ಯಸೀಮೆಗಳಲ್ಲಿ ಉಂಟಾಗಿದೆ.

ಇದೇ ರೀತಿ ಹೆಣ್ಣುಮಕ್ಕಳಿಗಾಗಿ ‘ಕುಮಾರಿ ಸಂಸ್ಕೃತಿ ಶಿಬಿರ’ವನ್ನು ನಡೆಸುತ್ತಾರೆ. ಅಲ್ಲಿಗೂ ಸಾಕಷ್ಟು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಬಂದು, ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಹೆಣ್ಣೊಬ್ಬಳಿಗೆ ಸಂಸ್ಕಾರವನ್ನು ಕೊಡುವುದು ಹತ್ತು ಜನ ಹುಡುಗರಿಗೆ ಸಂಸ್ಕಾರ ಕೊಡುವುದಕ್ಕೆ ಸಮವೆಂದು ನನ್ನ ಅನಿಸಿಕೆ. ಸಮಾಜದ ಅಡಿಪಾಯ ತಾಯಿ ತಾನೇ.

ನವವಿವಾಹಿತರಿಗಾಗಿ ‘ದಂಪತಿ ಶಿಬಿರ’ವನ್ನು ನಡೆಸುತ್ತಾರೆ. ಇದು ವ್ಯಷ್ಟಿಯಿಂದ ಸಮಷ್ಟಿಯ ಕಡೆಗೆ ಸಾಗುವ ಮಹಾಪಥ. ಇವತ್ತಿನ ವೈವಾಹಿಕ ಜೀವನದ ವಿಪ್ಲವಗಳ ಹಿನ್ನೆಲೆಯಲ್ಲಿ ಈ ದಂಪತಿ ಶಿಬಿರದ ಮಹತ್ವವನ್ನು ನೋಡಬೇಕು. ಶಿಷ್ಯರ ಆಕಾಂಕ್ಷೆಯ ಮೇರೆಗೆ ವರ್ಷದಿಂದ ವರ್ಷಕ್ಕೆ ಈ ಶಿಬಿರಗಳ ಸಂಖ್ಯೆಯೂ ವೃದ್ಧಿಸುತ್ತಿದೆ.

ಬೀಜ ಬಿತ್ತಿದರೆ ಸಾಲದು, ಬೆಳವಣಿಗೆಗೆ ನೀರು ಬಿಡಬೇಕು. ಬಿಟ್ಟ ನೀರಿನಿಂದ ಹುಟ್ಟಿದ ಕಳೆಯನ್ನು ತೆಗೆಯಬೇಕು. ಅದೇ ಉದ್ದೇಶದಿಂದ ಪ್ರಾರಂಭವಾದ ಬಹುಮುಖ್ಯವಾದ, ಜನರಿಗೆ ಅರಿವಿಲ್ಲದೆ ಪರಿವರ್ತನೆಯನ್ನು ತಂದ ಕಾರ್ಯ, ಶ್ರೀಗಳು ಹಮ್ಮಿಕೊಂಡ ‘ವ್ಯಸನಮುಕ್ತ ಸಮಾಜ’ ಕಾರ್ಯಕ್ರಮ. ನಮ್ಮ ಸೀಮೆಯ ಪ್ರತಿ ಹೈಸ್ಕೂಲುಗಳಲ್ಲಿ ಶ್ರೀಗಳು ಈ ಕಾರ್ಯಕ್ರಮವನ್ನು ಮಾಡಿದ್ದಾರೆ, ಇನ್ನೂ ಮಾಡುತ್ತಲೇ ಇದ್ದಾರೆ.

ದೇಶಾಭಿಮಾನವನ್ನು ಹೆಚ್ಚಿಸುವುದರಲ್ಲೂ ಸ್ವಾಮಿಗಳು ಹಿಂದುಳಿದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಾತೆಯರಿಂದ ‘ಕೋಟಿ ಕುಂಕುಮಾರ್ಚನೆ’ಯನ್ನು ಮಾಡಿಸಿದ್ದಾರೆ. ಹಾಗೆ ‘ಕೋಟಿ ತುಳಸಿ ಅರ್ಚನೆ’ಯೂ ನಡೆದಿದೆ. ಆಗ ಪ್ರಾರಂಭವಾದ ಕಾರ್ಯಕ್ರಮ ಈಗಲೂ ಮುಂದುವರೆದಿದೆ.

ಈ ಕಾರ್ಯಕ್ರಮಗಳನ್ನೆಲ್ಲ ಕೇವಲ ಹದಿನಾರು ಸೀಮೆಗಳ ಶಿಷ್ಯರನ್ನು ಉದ್ದೇಶಿಸಿ ಮಾಡಿದರೆ; ಇಡೀ ರಾಜ್ಯಕ್ಕೂ ವಿಸ್ತರಿಸುವಂತೆ ‘ಭಗವದ್ಗೀತಾ ಅಭಿಯಾನ’ವನ್ನು ಕೈಗೊಂಡರು. ತುಂಬ ಪರಿಣಾಮಕಾರಿಯಾದ ಪರಿಕ್ರಮ ಇದಾಯಿತು. ರಾಜ್ಯದ ಪ್ರತಿ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ಈಗಲೂ ನಡೆಯುತ್ತಿದೆ. ಪ್ರಾರಂಭದಲ್ಲಿ ಹಲವು ಕಡೆ ಭಗವದ್ಗೀತೆ ಯುದ್ಧದಂತಹ ಸನ್ನಿವೇಶವನ್ನು ಸೃಷ್ಟಿಸಿದೆ. ಎಡಚಿಂತಕರು ಮಾವೋವಾದಿ ಬೆಂಬಲಿಗರು ಅನೇಕ ಕಡೆ ತುಂಬ ಕಷ್ಟ ಕೊಟ್ಟಿದ್ದಾರೆ. ಆದರೆ ಖೇದಕರವಾದದ್ದು ಏನೆಂದರೆ, ನಮ್ಮವರು, ಧರ್ಮಾನುಯಾಯಿಗಳೆಂಬವರು ಕೂಡ ಕೈ ಎತ್ತುವವರೆಗೆ ಮುಂದುವರಿದಿದ್ದರು. ಏನು ಮಾಡುವುದು? ಕೌರವರು ಕೂಡ ಕೃಷ್ಣನಿಗೆ ದೂರದವರೇನಲ್ಲವಲ್ಲ! ಆದರೆ ಶ್ರೀಗಳ ಉದ್ದೇಶಶುದ್ಧಿ ಶಕ್ತಿಯ ಮುಂದೆ ಇವೆಲ್ಲ ಮಂಜಿನ ಬೆಟ್ಟಕ್ಕೆ ಬಿಸಿಲ ಕಿರೀಟವನ್ನು ಇಟ್ಟಂತಾಯಿತು.

ಒಮ್ಮೆ ಶ್ರೀಗಳೇ ಈ ಅಭಿಯಾನವನ್ನು ನಿಲ್ಲಿಸಬೇಕೆಂದುಕೊಂಡಿದ್ದರಂತೆ. ನಿಲ್ಲಿಸುವುದಕ್ಕೂ, ಮುಂದುವರಿಸುವುದಕ್ಕೂ ಹತ್ತಿರವಾದ ಸಮಯದಲ್ಲೊಮ್ಮೆ ತೀರ್ಥಯಾಟನೆ ಮಾಡುತ್ತ ಗಂಗಾನದಿಯಲ್ಲಿ ಸಾಗುತ್ತಿದ್ದರಂತೆ. ಆಗ ಹೂಮಾಲೆಗಳಿಂದ ಅಲಂಕೃತವಾದ ಪೆಟ್ಟಿಗೆಯೊಂದು ಬಂದು ಗಂಗೆಯಲ್ಲಿರುವ ಶ್ರೀಗಳ ಕೈಸೇರಿತು. ಎತ್ತಿಕೊಂಡು ನೋಡಿದರೆ ಆ ಪೆಟ್ಟಿಗೆಯಲ್ಲಿ ಭಗವದ್ಗೀತೆಯ ಪುಸ್ತಕವಿತ್ತು. ಗಂಗಾಧರೇಂದ್ರರಿಗೆ ಗಂಗೆಯೇ ಅನುಜ್ಞೆಯನ್ನು ನೀಡಿದಂತೆ ಅನಿಸಿತು. ಭಗವದ್ಗೀತಾ ಅಭಿಯಾನ ಮುಂದುವರೆಯಿತು.

ಇವುಗಳೊಂದಿಗೆ ಅಕ್ಷಯ ಭವನ, ಶಾಲೆ, ಪ್ರೌಢಶಾಲೆ, ಮಠದ ನವೀಕರಣ, ವಿಮಾನ ಗೋಪುರ ಮುಂತಾದ ಸಾಕಷ್ಟು ಕೆಲಸಗಳು ನಡೆದಿವೆ. ಹೀಗೆ ಗಂಗಾಧರೇಂದ್ರರು ಪ್ರಗತಿ, ವಿಕಾಸ ಎರಡನ್ನೂ ಸಾಧಿಸಿದ್ದಾರೆ. ಇವಾವುದನ್ನೂ ದುಡ್ಡಿದ್ದು ಮಾಡಲಿಲ್ಲ. ಯಾವ ಕಾರ್ಯವೂ ದುಡ್ಡಿಲ್ಲದೆ ನಿಂತಿಲ್ಲ. ಹಿಡಿದ ಎಲ್ಲ ಕೆಲಸಗಳನ್ನು ಮುಗಿಸಬೇಕಾದದ್ದನ್ನು ಮುಗಿಸಿದ್ದಾರೆ. ಮುಂದುವರಿಸಬೇಕಾದದ್ದನ್ನು ಮುಂದುವರೆಸಿದ್ದಾರೆ.

ಗಂಗಾಧರೇಂದ್ರರು ಪ್ರಾರಂಭಿಸಿದ ಯಾವ ಕಾರ್ಯಕ್ರಮವೂ ಒಂದು ದಿನದ ಅಥವಾ ಕೆಲವು ದಿನಗಳ ಉತ್ಸವವಾಗಿ ಮುಗಿಸಿದ್ದಲ್ಲ. ಅವಿಚ್ಛಿನ್ನವಾಗಿ ಮುಂದುವರೆದುಕೊಂಡು ಬಂದಿದೆ. ನಿರಂತರತೆಯೇ ಅಧ್ಯಾತ್ಮಸಾಧನೆಯ ಮೂಲಮಂತ್ರ ತಾನೇ! ‘ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹಾತಾಂ ನೋಪಕರಣೇ’

ಗಂಗಾಧರೇಂದ್ರರು ಪೀಠಾಧಿಪತಿಗಳಾಗಿ ಮಠವನ್ನು ಹೊಕ್ಕಾಗ, ಹಿಂದಿನ ಗುರುಗಳು ಸಶರೀರಿಗಳಾಗಿ ಮಾರ್ಗದರ್ಶನಕ್ಕಿರಲಿಲ್ಲ. ಸಕಲ ಕಾರ್ಯಗಳಲ್ಲೂ ತಪಶ್ಶರೀರಿಗಳಾದ ಶ್ರೀಮತ್ ಸರ್ವಜ್ಞೇಂದ್ರರೇ ನಮ್ಮ ಕೈಹಿಡಿದು ನಡೆಸುತ್ತಿದ್ದಾರೆ ಎಂದು ಗಂಗಾಧರೇಂದ್ರರು ಮತ್ತೆ ಮತ್ತೆ ತಮ್ಮ ಗುರುಗಳನ್ನು ಉಲ್ಲೇಖಿಸಿ, ತಮ್ಮೆಲ್ಲ ಯಶಸ್ಸನ್ನು ಗುರುಪಾದಕ್ಕೆ ಅರ್ಪಿಸುತ್ತಾರೆ. ಈ ಗುರುಭಕ್ತಿ ಸಕಲ ಶಿಷ್ಯರಿಗೂ ಆದರ್ಶವಾದದ್ದು. ಅಧ್ಯಯನ, ಅಧ್ಯಾಪನ, ಪೂಜೆ, ಪ್ರವಚನ, ಸಮಾಜ ಸುಧಾರಣೆ ಎಲ್ಲದರಲ್ಲೂ, ಸಂನ್ಯಾಸಿಯಾಗಿಯೂ ಪೀಠಾಧಿಪತಿಯಾಗಿಯೂ ‘ಸ್ವರ್ಣವಲ್ಲಿಯವರಂತಿರಬೇಕು’ ಎಂಬ ಮಾತು ಎಲ್ಲ ಕಡೆ ಕೇಳುವಂತೆ ಬೆಳೆದುನಿಂತರು. ಇತ್ತೀಚಿಗೆ ಪೀಠಾಧಿಪತಿಗಳಾದ ಅನೇಕ ಯತಿಗಳು ಸ್ವರ್ಣವಲ್ಲಿ ಶ್ರೀಗಳನ್ನೇ ಪಥಪ್ರದರ್ಶಕರೆಂಬಂತೆ ನಡೆದುಕೊಂಡದ್ದನ್ನು ಕಾಣಬಹುದು. ಕಂಚಿಮಠಕ್ಕೂ ಶೃಂಗೇರಿ ಮಠಕ್ಕೂ ಆಡಳಿತಾತ್ಮಕ ಅಭಿಪ್ರಾಯಭೇದ, ಸಂಘರ್ಷವಿದೆ ಎಂಬ ಮಾತುಗಳು ಕೇಳಿಬರುತ್ತವೆ. (ಅಲ್ಲಿನ ಸಂನ್ಯಾಸಿಗಳಿಗೆ ಪೀಠಾಧಿಪತಿಗಳಿಗೆ ಇದಾವುದೂ ಇಲ್ಲ ಎಂಬುದು ಅನೇಕ ಉಲ್ಲೇಖಿತ ಘಟನೆಗಳಿಂದಲೂ ತಿಳಿಯುತ್ತದೆ.) ಕಂಚಿಮಠದಿಂದ ಸಂನ್ಯಾಸವನ್ನು ಪಡೆದು, ಶೃಂಗೇರಿಯವರು ಉಲ್ಲೇಖಿಸುವಂತೆ ಎರಡು ಮಠಗಳಿಗೂ ಗಂಗಾಧರೇಂದ್ರರು ನಡೆದುಕೊಂಡ ರೀತಿ ಅನನ್ಯ.

ಸಂಪರ್ಕದ ಕೊರತೆಯಿಂದಲೂ, ಪ್ರಾದೇಶಿಕವಾಗಿ ಮಠಕ್ಕೆ ದೂರವಾದದ್ದರಿಂದಲೂ ಯಲ್ಲಾಪುರದ ಭಾಗಗಳು ಮಠದಿಂದ ದೂರವೇ ಇದ್ದವು. ಶ್ರೀಗಳ ಆಸ್ಥೆಯಿಂದಲೂ ಸಂಪರ್ಕದಿಂದಲೂ ಯಲ್ಲಾಪುರದ ಭಾಗ ಮಠದಲ್ಲಿ ಒಳಗೊಳ್ಳುವಂತಾಯಿತು. ಹೀಗೆ ಪ್ರಾದೇಶಿಕ ಅಸಮತೋಲನವನ್ನು ತೊಡೆದುಹಾಕಿದ ಶ್ರೀಗಳ ಅಂತರಂಗದ ಅನುಗ್ರಹವೋ ಎಂಬಂತೆ, ಯಲ್ಲಾಪುರದಲ್ಲೂ ಅನಾಮಧೇಯ ಊರಾದ ಇರಾಪುರದಲ್ಲಿ ಜನ್ಮಿಸಿದ, ಜನ್ಮಾಂತರದ ಯೋಗಿ ಶ್ರೀ ನಾಗರಾಜ ಭಟ್ಟರು ಮಠಕ್ಕೆ ಸಂನ್ಯಾಸಿ ಶಿಷ್ಯರಾಗಿ ದೊರೆತದ್ದು ಸಂತೋಷದ ಸಂಗತಿ.

ನಾನು ಕಂಡಂತೆ ನಾಗರಾಜ ಭಟ್ಟರ ಪೂರ್ವಿಕರು ವೇದವನ್ನು ಶಾಸ್ತ್ರವನ್ನು ಓದಿದವರಲ್ಲ. ಯೋಗಾದಿ ಸಾಧಕರನ್ನು ಕಂಡಿಲ್ಲ. ಆದರೆ ನಾಗರಾಜ ಭಟ್ಟರ ಮುತ್ತಜ್ಜನನ್ನು ಮೂರು ಬಾರಿ ಕಂಡ ನೆನಪು ನನಗೆ ಇದೆ. ನಮ್ಮ ಮನೆಗೆ ಅವರು ಆಗಾಗ ಬರುತ್ತಿದ್ದರಂತೆ. ‘ಗಂಗೆಅಜ್ಜ’ರೆಂದೇ ಅವರನ್ನು ಕರೆಯುತ್ತಿದ್ದರು. ಒಮ್ಮೆ ಅವರು ನಮ್ಮ ಮನೆಯಲ್ಲಿ ಊಟ ಮಾಡಿದ ನೆನಪು ಸ್ಥಿರವಾಗಿ ನನಗೆ ಇದೆ. ಏಕೆಂದರೆ ಊಟಕ್ಕೆ ಕುಳಿತಾಗ ಮಾಡಿದ ಎಲ್ಲ ಬಗೆಯ ಭಕ್ಷಾದಿಗಳನ್ನು ಒಮ್ಮೆಲೇ, ಒಮ್ಮೆ ಮಾತ್ರ ಬಡಿಸಿದ್ದರು. ಕುತೂಹಲಗೊಂಡ ನಾನು ನನ್ನ ದೊಡ್ಡ ಅಕ್ಕನಲ್ಲಿ ವಿಚಾರಿಸಿದಾಗ, ‘ಅವರು ‘ಏಕಭುಕ್ತಿ ವೃತನಿಷ್ಠ’ರು, ಹಾಗಾಗಿ ಒಮ್ಮೆ ಮಾತ್ರ ಬಡಿಸಿದ್ದನ್ನು ಊಟ ಮಾಡುತ್ತಾರೆ’ ಎಂದು ವಿವರಿಸಿದಳು. ಗಂಗೆಅಜ್ಜರಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳುವ ಉತ್ಸುಕತೆಯೂ ಇತ್ತು. ಸದಾ ರುಕ್ಮಾಂಗದನ ಪಾತ್ರವನ್ನೇ ಹೇಳುವವರು. ಆ ಪಾತ್ರದ ಮೇಲೆ ಅವರಿಗೆ ಭಾವನಾತ್ಮಕವಾದ ಸಂಬಂಧವೇ ಇತ್ತೆಂದು ತೋರುತ್ತದೆ. ಮಲವಳ್ಳಿ ಬಾರೆ ಊರುಗಳಿಗೆ ವಿಭಾಗವಾಗುವ ರಸ್ತೆಯ ಬದಿಯಲ್ಲಿ ಒಂದು ಚಿಕ್ಕದಾದ ದೇವಿ ಮಂದಿರವಿದೆ. ಅಲ್ಲಿ ಕೆಲವು ಕಾಲ ಪೂಜೆ ಮಾಡಿಕೊಂಡಿದ್ದರೆಂದು ತೋರುತ್ತದೆ. ನಾನು ಆ ಕಡೆ ಬಸ್ಸಿನಲ್ಲೊಮ್ಮೆ ಹೋದಾಗ ಗಂಗೆಅಜ್ಜರನ್ನು ನೋಡಿದ ನೆನಪು ಇದೆ. ಸಹಜವಾಗಿಯೇ ಭಾವುಕರಾದ ಗಂಗೆಅಜ್ಜರು, ಊರಿನವರ ಪರಿಹಾಸಕ್ಕೆ ಒಳಗಾಗಿದ್ದರು. ಆದರೆ ಒಬ್ಬರ ಮನಸ್ಸನ್ನು, ಅಧ್ಯಾತ್ಮದ ಪರಿಪಾಕವನ್ನು ಸಾಮಾನ್ಯರಿಂದ ಅಳೆಯುವುದಕ್ಕೆ ಸಾಧ್ಯವೇ? ಹಾಗೆ ಬಿದ್ದ ಭಕ್ತಿಯ ಬೀಜ ಆ ವಂಶದ ನಾಗರಾಜ ಭಟ್ಟರಲ್ಲಿ ವಿರಕ್ತಿಯ ರೂಪದಲ್ಲಿ ಚಿಗುರೊಡೆಯಿತೇನೋ ಎಂದು ನನ್ನ ಅನಿಸಿಕೆ. ಗಂಗೆಮನೆ ಎಂಬ ಹೆಸರೇ ಆ ಪುಣ್ಯವನ್ನು ತಂದಿರಬಹುದು. ಹಿಂದಿನ ಮುಂದಿನ ತಲೆಮಾರುಗಳನ್ನು ಉದ್ಧರಿಸುವ ಮಹಾತ್ಮನ ಜನನಕ್ಕೂ ಕಾರಣವಾಗಿರಬಹುದು. ಎಲ್ಲಕ್ಕೂ ಶಿಖರಪ್ರಾಯವಾಗಿ ಗುರುಮಹಾತ್ಮೆಯ ಬಗ್ಗೆ ಇರುವ ಮಾತೊಂದು ಸರಿಯಾದದ್ದೇನೋ! ‘ಸ್ಪರ್ಶಮಣಿ ಮುಟ್ಟಿದ್ದೆಲ್ಲವನ್ನು ಚಿನ್ನವಾಗಿಸುತ್ತದೆ. ಆದರೆ ಗುರುವೆಂಬ ಸ್ಪರ್ಶಮಣಿ ಮುಟ್ಟಿದರೆ ಮತ್ತೊಂದು ಸ್ಪರ್ಶಮಣಿಯೇ ಆಗುತ್ತದೆ.’ ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಗುರುವಿನ ಅನುಗ್ರಹಕ್ಕಿಂತ ದೊಡ್ಡದು ಈ ಪ್ರಪಂಚದಲ್ಲಿ ಯಾವುದಿದೆ?!!

ಗಂಗಾಧರೇಂದ್ರರು ಪೀಠಾಧಿಪತಿಯಾಗಲು ಪುರಪ್ರವೇಶ ಮಾಡುವಾಗ ಬೆರಳೆಣಿಕೆಯಷ್ಟು ಜನರಿದ್ದರು. ನಾಗರಾಜ ಭಟ್ಟರು ಪುರಪ್ರವೇಶ ಮಾಡುವಾಗ ನೂರಾರು ವಾಹನಗಳಲ್ಲಿ ಸಾವಿರಾರು ಭಕ್ತರು ಹಿಂಬಾಲಿಸಿದ್ದರು. ಇದು ಗಂಗಾಧರೇಂದ್ರರು ತಮ್ಮ ಸೀಮೆಯಲ್ಲಿ ಕಟ್ಟಿ ನಿಲ್ಲಿಸಿದ ಶ್ರದ್ಧೆಯ ಪ್ರತೀಕ. ಹೊಸದಾಗಿ ಸಂನ್ಯಾಸಿ ಶಿಷ್ಯರಾಗುವವರಿಗೆ ಪರೀಕ್ಷೆ. ಗಂಗಾಧರೇಂದ್ರರಿಗೆ ಬೆಳೆಸುವ ಪರೀಕ್ಷೆ ಇತ್ತು. ಮುಂದೆ ಬರುವವರಿಗೆ ಬೆಳೆಸಿದ್ದನ್ನು ಉಳಿಸುವ ಪರೀಕ್ಷೆ ಇದ್ದೇ ಇದೆ. ನಾಗರಾಜ ಭಟ್ಟರ ಯೋಗ ಬಹು ದೊಡ್ಡದು. ಕೈಹಿಡಿದು ನಡೆಸಲು ಸಾಕ್ಷಾತ್ ಪರಮೇಶ್ವರನೇ ಇದ್ದಾನೆ.

ಸದಾಶಿವಸಮಾರಂಭಾಂ
ಶಂಕರಾಚಾರ್ಯಮಧ್ಯಮಾಂ /
ಅಸ್ಮದಾಚಾರ್ಯಪರ್ಯಂತಾಂ
ವಂದೇ ಗುರುಪರಂಪರಾಮ್ //

-ಶ್ರೀಪಾದ ಗದ್ದೆ, ಬೆಂಗಳೂರು.