ಸ್ವರ್ಣವಲ್ಲಿಯ – ಸ್ವರ್ಣಯುಗ, ಭವನತ್ರಯದ ಸಮನ್ವಯ ಸಾಧಕ – ಸ್ವರ್ಣವಲ್ಲೀ ಶ್ರೀ

posted in: Articles | 0

ಸ್ವರ್ಣವಲ್ಲೀ ಶ್ರೀ ಗುರುಪರಂಪರೆಯ ಬೆಳಕಿನಲ್ಲಿ ಬೆಳೆದುಬಂದ ಶಿಷ್ಯಬಳಗಕ್ಕೆ ಇದು ಸ್ವರ್ಣಯುಗ, ಇಂದು ಪರ್ವಕಾಲ. ಈ ದಿವ್ಯ ಪರಂಪರೆಯಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರು ೫೪-ನೆಯ ಯತಿಶ್ರೇಷ್ಠರಾಗಿ ಪೀಠವನ್ನಲಂಕರಿಸಿ ಇಂದಿಗೆ ೩೦ ಸಂವತ್ಸರಗಳು ಸಂಪನ್ನವಾಗುತ್ತಿದೆ. ಪರಮಪೂಜ್ಯ ಶ್ರೀಗಳವರು ಈ ಮೂವತ್ತು ವರ್ಷಗಳಲ್ಲಿ ವ್ಯಕ್ತಿಯಿಂದ ಶಕ್ತಿಯಾಗಿ ರೂಪುಗೊಂಡಿರುವುದು ಯುಕ್ತಿಗೂ-ಯೋಚನೆಗೂ ನಿಲುಕದ ಸಂಗತಿಯಾಗಿದೆ.  ೩೨ ವರ್ಷಗಳ ತಮ್ಮ ದಿವ್ಯಜೀವನದಲ್ಲಿ ಶ್ರೀ ಶಂಕರರು ಸಾಧಿಸಿದ ಸಾಧನೆಯ ಎತ್ತರವನ್ನು ನಾವು ಅಷ್ಟೋ ಇಷ್ಟೋ ಕೇಳಿ ತಿಳಿಯಬಲ್ಲೆವಾದರೆ, ಈ ಮೂವತ್ತು ವರ್ಷಗಳ ಅವಧಿಯಲ್ಲಿ ಸ್ವರ್ಣವಲ್ಲೀ ಶ್ರೀಗಳವರ ಸಾಧನೆಯನ್ನು ಕಣ್ತುಂಬಿಕೊಂಡು ಮನಗಂಡವರಾಗಿದ್ದೇವೆ.  ಸ್ವರ್ಣವಲ್ಲೀ ಯತಿಪರಂಪರೆಯನ್ನು ಪಾವನಗೊಳಿಸಿದ ಅನೇಕ ಮಹಾತ್ಮರು ಈ ಪೀಠಕ್ಕೆ ತಪೋಬಲವನ್ನೂ, ಜ್ಞಾನಬಲವನ್ನೂ ಧಾರೆ ಎರೆದಿದ್ದಾರೆ. ಅಂಥ ವಿಶಿಷ್ಟ ಪೀಠವನ್ನಲಂಕರಿಸಿ

ಶ್ರೀಗಳವರು ತಮ್ಮ ಕಠೋರ ನಿಷ್ಠೆಯ ತಪಸ್ಸು, ದೇವತಾ ಉಪಾಸನೆ, ವೇದಾಂತ ಚಿಂತನೆಗಳ ಮೂಲಕ ಇನ್ನಷ್ಟು ಸತ್ವವನ್ನು ಹೆಚ್ಚಿಸಿರುವುದು ನಿಜಕ್ಕೂ ಲೋಕಸಾಮಾನ್ಯರಾದ ನಮ್ಮ ಊಹೆಗೆ ಗೋಚರಿಸುವ ಸಂಗತಿಯಲ್ಲ. `ಆತ್ಮೋನ್ನತಿ ಹಾಗೂ ಲೋಕಹಿತ’ ಈ ಎರಡನ್ನೂ ಸಮಪ್ರಾಧಾನ್ಯದಿಂದ ಸಾಧಿಸುತ್ತ ಹೊರಟ ಧೀರ ಧೀಮಂತ ನಡೆ ಶ್ರೀ ಶ್ರೀಗಳವರದು.

ಹೆಸರಿಗಾಗಿ ಹಸಿರನ್ನು ಉಳಿಸುವ ಕಳಕಳಿಯನ್ನು ತೋರಬಯಸುವವರ ಈ ಕಾಲದಲ್ಲಿ ತಮ್ಮ ಉಸಿರನ್ನೇ ಹಸಿರಿನ ಉಳಿವಿಗಾಗಿ ಮುಡಿಪಾಗಿಟ್ಟು, `ಹಸಿರು ಸ್ವಾಮೀಜಿ’ ಎಂಬ ಅಂತರಂಗದಿಂದ ಹೊರಹೊಮ್ಮಿದ ಅಭಿಧಾನಕ್ಕೆ ಪಾತ್ರರಾಗಿದ್ದಾರೆ. ಶ್ರೀ ಭಗವದ್ಗೀತೆಯನ್ನು ನಾಡಿನಾದ್ಯಂತ ಜನಮಾನಸಕ್ಕೆ ತಲುಪಿಸಿದ ಶ್ರೀ ಶ್ರೀಗಳವರಲ್ಲಿ ಅದೆಷ್ಟೋ ಆಸ್ತಿಕ ಮಹನೀಯರು ಗೀತಾಚಾರ್ಯ ಶ್ರೀಕೃಷ್ಣನನ್ನೇ ಕಂಡಿರುವ ಸಂಗತಿ ರೋಮಾಂಚನವನ್ನುಂಟುಮಾಡುವಂತಹುದಾಗಿದೆ. ಪ್ರಪಂಚವನ್ನೇ ಭಯಭೀತವನ್ನಾಗಿಸಿದ ಕೊರೋನಾ ರೋಗದ ನಿವಾರಣೆಗಾಗಿ ಶ್ರೀ ಶ್ರೀಗಳವರು ಕೈಗೊಂಡ ದೇವತಾರಾಧನೆ ಹಾಗೂ ಸಾಮಾಜಿಕ ಆರೋಗ್ಯ ಚಟುವಟಿಕೆಗಳನ್ನು ಗಮನಿಸಿದಾಗ, ಇಂಥ ವಾತ್ಸಲ್ಯಪೂರ್ಣ ಗುರುಗಳನ್ನು ಪಡೆದ ಶಿಷ್ಯಕೋಟಿಯೇ ಧನ್ಯವೆಂದು ಎಂಥವರಿಗೂ ಅನ್ನಿಸದಿರಲಾರದು. ಭೌತಿಕಕ್ಕಿಂತಲೂ ದೈವಿಕವಾದದ್ದು ಶ್ರೇಷ್ಠ, ದೈವಿಕಕ್ಕಿಂತಲೂ ಅಧ್ಯಾತ್ಮ ಇನ್ನೂ ಶ್ರೇಷ್ಠ. ಈ ತತ್ವವನ್ನು ತಮ್ಮ ಸಾಧನಾಮಾರ್ಗದ ಬೆಳಕಾಗಿಸಿಕೊಂಡು ಮುನ್ನಡೆಯುತ್ತಿರುವ ಸ್ವರ್ಣವಲ್ಲೀ ಶ್ರೀಗಳವರು ಉಪನಿಷತ್ತು, ಶ್ರೀ ಭಗವದ್ಗೀತೆ ಹಾಗೂ ಶ್ರೀ ಶಂಕರರ ದಿವ್ಯ ಸಂದೇಶಗಳ ಮೂಲಕ ಸಮಾಜದಲ್ಲಿ, ಜನರ ಅಂತರಂಗದಲ್ಲಿ ಮೊಟ್ಟಮೊದಲು ಅಧ್ಯಾತ್ಮಭವನವನ್ನು ನಿರ್ಮಿಸುವತ್ತ ಮುನ್ನಡೆದರು. ಅನಂತರದಲ್ಲಿ ಜಪ, ಸ್ತೋತ್ರಪಠನ, ಯಜ್ಞ-ಯಾಗಾದಿಗಳ ಮೂಲಕ ಆಧಿದೈವಿಕಭವನ ನಿರ್ಮಾಣಕ್ಕೆ ಮುಂದಾದರು. ಇದೀಗ ಜೀರ್ಣಗೊಳ್ಳುತ್ತಿದ್ದ ಶ್ರೀಮಠದ ಕಟ್ಟಡವನ್ನು ನೂತನವಾಗಿ ನಿರ್ಮಿಸಿ, ನೂತನ `ವಿದ್ಯಾಭವನ’ದ ನಿರ್ಮಾಣದೊಂದಿಗೆ ಆಧಿಭೌತಿಕ ಭವನವನ್ನೂ ಸಂಪನ್ನಗೊಳಿಸಿದರು.

ಹಿನ್ನೆಲೆಯಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು `ಭವನತ್ರಯ ಸಮನ್ವಯ ಸಾಧಕರಾಗಿ, ಸಮಾಜಕ್ಕೆ ಸನ್ಮಾರ್ಗವನ್ನು ತೋರಿಸಿ ಮುನ್ನಡೆಸುವ ಸದ್ಗುರುವಾಗಿ, ಸಂಸಾರದುಃಖದಿಂದ ಬೇಯುತ್ತಿರುವವರಿಗೆ ಅಧ್ಯಾತ್ಮಪಥವನ್ನು ತೋರಿಸುವ ಭವರೋಗವೈದ್ಯರಾಗಿ, ವಾತ್ಸಲ್ಯವನ್ನು ಅನುಭವಿಸಬಲ್ಲ ಸಹೃದಯಿ ಶಿಷ್ಯಸಮುದಾಯಕ್ಕೆ ತಂದೆಯೂತಾಯಿಯೂ ಆಗಿ ಸಲ್ಲುತ್ತಿರುವುದು ಮಾತಿಗೆ ನಿಲುಕದ ಭಾವವಾಗಿ ಮಾತ್ರ ಗೋಚರವಾಗುತ್ತದೆ.

ಸ್ವರ್ಣವಲ್ಲೀ ಶ್ರೀ ಶ್ರೀಗಳವರ ಪೀಠಾರೋಹಣ ತ್ರಿದಶಮಾನೋತ್ಸವದ ಈ ಸುಸಂದರ್ಭದಲ್ಲಿ ಶ್ರೀ ಶ್ರೀಗಳವರ ಸಾಧನೆಯ ಎತ್ತರವನ್ನು ಅಳೆಯಲು ಹೊರಟ ಲೇಖನಿ ಸೋಲುತ್ತದೆ. ಮಾತು ಮೌನಕ್ಕೆ ಜಾರುತ್ತದೆ. ಮನಸ್ಸು ಅಲೌಕಿಕ ಆನಂದದಿಂದ ಪ್ರಸನ್ನವಾಗುತ್ತದೆ. ಶ್ರೀ ಶ್ರೀಗಳವರ ಪೀಠಾರೋಹಣ ತ್ರಿದಶಮಾನೋತ್ಸವದ ಈ ಸಂದರ್ಭವು ಸಮಸ್ತ ಆಸ್ತಿಕ ಸಮಾಜದ ಸ್ವರ್ಣಯುಗವೆಂದರೆ ಅತಿಶಯೋಕ್ತಿಯಾಗಲಾರದು. ಶ್ರೀ ಶ್ರೀಗಳವರ ದಿವ್ಯ ಪ್ರೇರಣೆ, ಅನುಗ್ರಹ ಸಮಾಜಕ್ಕೆ ಸದಾ ಲಭಿಸಲೆಂದು ಆಶಿಸೋಣ.

    ಡಾ.ಮಹಾಬಲೇಶ್ವರ ಭಟ್ಟ, ಕಿರುಕುಂಭತ್ತಿ