ಪೂರ್ಣಸ್ವಾಸ್ಥ್ಯಕ್ಕೆ ಆಹಾರ ಸಂಜೀವಿನಿ

posted in: Articles | 0

ಚಳಿಗಾಲ ಮುಗಿದು ಆಗಲೇ ಬೇಸಿಗೆ ಪ್ರಾರಂಭವಾಗಿದೆ. ಸುಡು ಬಿಸಿಲ ಧಗೆಗೆ ನಮ್ಮ ದೇಹವನ್ನು  ಎಷ್ಟು ತಂಪಾಗಿಟ್ಟುಕೊಂಡರೂ ಸಾಲದು. 

ಹೊರಗೆ ಹೋದಾಗ ಬಣ್ಣ ಬಣ್ಣದ ಪಾನೀಯಗಳು, ಜ್ಯೂಸ್ ಗಳು ಮಕ್ಕಳನ್ನಷ್ಟೇ ಅಲ್ಲ ದೊಡ್ಡವರನ್ನೂ ಸಹ ಆಕರ್ಷಿಸುವುದು ಸಹಜ. ದೇಹಕ್ಕೆ ಒಳ್ಳೆಯದಲ್ಲ , ಬೇಡ ಎಂಬ ಸೂಚನೆಯನ್ನು‌ ಬುದ್ಧಿ ಕೊಟ್ಟರೂ ಸಹ, ನಾಲಿಗೆ ಮತ್ತು ಮನಸ್ಸು ಬುದ್ಧಿಯ ಮಾತು ಕೇಳೋದಿಲ್ಲ.

ಬೇಸಿಗೆಯಲ್ಲಿ ಹೆಚ್ಚಿನ‌ ಕೆಲಸ ಮಾಡದೇ ಇದ್ದರೂ ಸಹ ಬೆವರುವಿಕೆಯಿಂದಾಗಿ ದೇಹದಲ್ಲಿ ನೀರಿನ ಕೊರತೆ( ಡಿಹೈಡ್ರೇಷನ್ )ಉಂಟಾಗಿ  ಆಯಾಸ, ತಲೆಸುತ್ತು, ತಲೆನೋವು, ಒಣಗಿದ ಚರ್ಮ, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.

ಬಾಯಾರಿಕೆ ನೀಗಿಸಿಕೊಳ್ಳಲು, ದೇಹವನ್ನು ತಂಪುಗೊಳಿಸಿ ಹೈಡ್ರೇಟೆಡ್ ಆಗಿರಲು‌ ಇಲ್ಲೊಂದಿಷ್ಟು ಸಲಹೆಗಳು.

• ಹೆಚ್ಚಿನ‌ ನೀರು ಕುಡಿಯಿರಿ : 

ನೀರಿನ ಜೊತೆ ನಿಂಬೆ‌ರಸ ಅಥವಾ ಕೋಕಂ ಮತ್ತು ಬೆಲ್ಲ ಇವುಗಳನ್ನು ಸೇರಿಸಿ ಪಾನಕ‌ ತಯಾರಿಸಿ ಸೇವಿಸಬಹುದು.‌ ಇವುಗಳು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿ ದೇಹವನ್ನು ಸಕ್ರಿಯಗೊಳಿಸಲು ಸಹಾಯಕ. ಹಾಗೆಯೇ ಜೀರಿಗೆ, ಕಾಮಕಸ್ತೂರಿ ಅಥವಾ ಸಬ್ಜಾ ಸೀಡ್ಸ್ ಗಳನ್ನು ನೀರಿಗೆ ಸೇರಿಸಿ ಕುಡಿಯುವುದರಿಂದ, ದೇಹವನ್ನು ಹೆಚ್ಚುಹೊತ್ತು ಹೈಡ್ರೇಟ್ ಆಗಿರಲು ಸಹಕರಿಸುತ್ತದೆ.

• ಎಳನೀರು: ನೈಸರ್ಗಿಕ ಎಲೆಕ್ಟ್ರೋಲೈಟ್ ಆಗಿರುವ ಎಳನೀರು ಪೊಟ್ಯಾಸಿಯಮ್‌, ಸೋಡಿಯಂ‌, ಮ್ಯಾಗ್ನೀಷಿಯಂ ಇತ್ಯಾದಿ‌ ಅಂಶಗಳನ್ನು ಒಳಗೊಂಡಿದ್ದು  ದೇಹದ ಉಷ್ಣತೆ ಕಡಿಮೆ ಮಾಡಿ ಅವಶ್ಯಕ ಶಕ್ತಿಯನ್ನು ಪೂರೈಸುತ್ತದೆ.

• ತಾಜಾ ಹಣ್ಣುಗಳ ಸೇವನೆ : ಬೇಸಿಗೆಯಲ್ಲಿ ಸಾಕಷ್ಟು ಹಣ್ಣುಗಳು ಬೆಳೆಯುವುದರಿಂದ, ತಾಜಾ ಹಣ್ಣುಗಳನ್ನು ಎಲ್ಲರು ಸೇವಿಸಬಹುದು. ಕಲ್ಲಂಗಡಿ, ಕರಬೂಜ, ಮಾವು ಮುಂತಾದವುಗಳು ಹೆಚ್ಚಿನ ನೀರಿನಂಶ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿರುತ್ತವೆ.ಜ್ಯೂಸ್  ಬದಲಾಗಿ ಹಣ್ಣುಗಳನ್ನು ಹಾಗೆಯೇ ಸೇವಿಸುವುದು ಉತ್ತಮ. ಇದರಿಂದಾಗಿ ಹಣ್ಣಿನಲ್ಲಿರು ನಾರಿನಂಶವೂ ಹಾಗೆಯೇ ಇರುತ್ತದೆ ಮತ್ತು ಸಕ್ಕರೆ‌ ಹಾಕುವ ಅಗತ್ಯವೂ ಇಲ್ಲ.

• ತಾಜಾ ತರಕಾರಿಗಳು : ಸವತೆಕಾಯಿ, ಸೋರೆಕಾಯಿ ಜೊತೆಗೆ ಇತರೆ ತರಕಾರಿಗಳನ್ನು ನಮ್ಮ ಆಹಾರದಲ್ಲಿ ಸಲಾಡ್ ಅಥವಾ ಸೂಪ್  ರೂಪದಲ್ಲಿ ಹೆಚ್ಚು ಬಳಸಬೇಕು.

 • ಮೊಸರು,ಮಜ್ಜಿಗೆ: ದೇಹವನ್ನು  ತಂಪುಮಾಡುವುದಲ್ಲದೆ ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡಬಲ್ಲದು. ಮಜ್ಜಿಗೆಯನ್ನು ಹಾಗೇ ಆದರೂ ಸೇವಿಸಬಹುದು ಅಥವಾ ತಂಬುಳಿಯನ್ನು ತಯಾರಿಸಿ ಆದರೂ ಬಳಸಬಹುದು.

ಕರಿದ ತಿಂಡಿಗಳು, ಅತಿಯಾಗಿ ಮಸಾಲೆ ಬಳಸಿದ ಹಾಗೂ ಖಾರದ ತಿಂಡಿಗಳನ್ನು  ಆದಷ್ಟು ಕಡಿಮೆ‌ಬಳಸಬೇಕು.‌ಇವು ದೇಹದ ಉಷ್ಣತೆ ಹೆಚ್ಚಿಸುವುದರ ಜೊತೆಗೆ  ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಹೆಚ್ಚಿಸುವುದು.

•ಜಂಕ್ ಫುಡ್, ಹೊರಗಿನ ಆಹಾರವನ್ನು ಬಿಟ್ಟು ಮನೆಯಲ್ಲೇ  ತಾಜಾ ತಯಾರಿಸಿದ  ಆಹಾರವನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಸಾಮಾನ್ಯವಾಗಿ ಹರಡುವ ರೋಗಗಳನ್ನು ತಡೆಗಟ್ಟಿ ಆರೋಗ್ಯ ಕಾಪಾಡಿಕೊಳ್ಳಬಹುದು.

• ಅಂಗಡಿಗಳಲ್ಲಿ ಸಿಗುವ ಪ್ಯಾಕೇಜ್ಡ್ ಜ್ಯೂಸ್ ಗಳು, ಕೃತಕವಾಗಿ ತಯಾರಿಸಿದ ಹಣ್ಣಿನ ಜ್ಯೂಸ್ ಅಥವಾ ಪೆಪ್ಸಿ,ಕೋಕ್ ಗಳಂತಹ  ತಂಪು ಪಾನೀಯಗಳು, ಐಸ್ ಕ್ಯಾಂಡಿ, ಐಸ್ಕ್ರೀಂ ಗಳು ಒಮ್ಮೆಗೆ ತಂಪಿನ ಅನುಭವ ಕೊಟ್ಟರೂ ಸಹ ಅವುಗಳಲ್ಲಿ ಇರುವ ಅತಿಯಾದ ಪ್ರಮಾಣದಲ್ಲಿರುವ ಸಕ್ಕರೆಯಿಂದ ದೇಹಕ್ಕೆ ನೀರಿನ ಅಗತ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ ಹೊರತು ಕಡಿಮೆ ಮಾಡುವುದಿಲ್ಲ.

ಆದ್ದರಿಂದ ವಾತಾವರಣ ಬದಲಾದಂತೆ ಆಹಾರದಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ. ಸುಲಭವಾಗಿ ಜೀರ್ಣವಾಗುವ ಪೋಷಕಾಂಶಭರಿತ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಲೇಖಕರು: ಪೂರ್ಣಿಮಾ ಲಾಲ್ಗುಳಿ

ಸಂಗ್ರಯ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ