ಆರಾಧನಾ ಮಹೋತ್ಸವ

posted in: Articles | 0

ಪರಮಪೂಜ್ಯ ಶ್ರೀಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ನಿಮಿತ್ತ ಪರಮಪೂಜ್ಯ ಶ್ರೀಶ್ರೀಗಳವರು “ಶ್ರೀ ಸ್ವರ್ಣವಲ್ಲಿ ಪ್ರಭಾ”ಗಾಗಿ ಬರೆದ ಲೇಖನದ ಆಯ್ದ ಭಾಗ

ಪೂಜ್ಯ ಗುರುಗಳ ರಾಷ್ಟ್ರಭಕ್ತಿಯ ಬಗೆಗೆ ಅನೇಕರಿಗೆ ಗೊತ್ತಿರಲಾರದು..

1947 ಆಗಸ್ಟ್ 15ರ ಮಧ್ಯರಾತ್ರಿ ನಮ್ಮ ದೇಶ ಸ್ವತಂತ್ರ್ಯಗೊಂಡಿತು..

ಭಾರತೀಯ ಗಣನೆಯ ಪ್ರಕಾರ 1869ನೆಯ ಶಾಲಿವಾಹನ ಶಕೆಯ ಸರ್ವಜಿತ್ ಸ0ವತ್ಸರದ ಅಧಿಕಶ್ರಾವಣ ಮಾಸದ ಕೃಷ್ಣತ್ರಯೋದಶಿ ಗುರುವಾರ ಪೂಜ್ಯ ಗುರುಗಳು ಏನು ಮಾಡುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ. ಮಧ್ಯರಾತ್ರಿಯ ಆ ವೇಳೆಯಲ್ಲಿಯೇ ಶ್ರೀ ಗುರುಗಳು ಶ್ರೀ ರಾಜರಾಜೇಶ್ವರಿಯ ಆರಾಧನೆಯಲ್ಲಿ ತೊಡಗಿದ್ದರು. ಅಲ್ಲದೆ ಭಾರತಮಾತೆಯನ್ನು ಮತ್ತು ಆರಾಧ್ಯ ತ್ರಿಪುರಸುಂದರಿಯನ್ನು ಒಂದಾಗಿ ಚಿಂತನೆ ಮಾಡುತ್ತಾ ಸ್ವತಂತ್ರ ಭಾರತದ ಬಗ್ಗೆ ಅವರು ಮಾಡಿದ ಪ್ರಾರ್ಥನೆ ಶ್ರದ್ಧಾವಂತರಿಗೆ ಮತ್ತು ದೇಶಭಕ್ತರಿಗೆ ರೋಮಾಂಚನವನ್ನು ಉಂಟುಮಾಡುತ್ತದೆ. ” ಭಾರತಾಂಬಿಕಾ-ತಾದಾತ್ಮ್ಯಚೈತನ್ಯಆಹ್ಲಾದಿನೀ0 ಶ್ರೀಲಲಿತಾತ್ರಿ ಪುರಸುಂದರೀ0 ಪ್ರಾರ್ಥಯಾಮಹೇ” ಅವರ ಪ್ರಾರ್ಥನೆಯ ಈ ಸಾಲಿನಲ್ಲಿ ಭಾರತಾ0ಬೆಗೂ ಜಗನ್ಮಾತೆಗೂ ಇರುವ ವಿಶಿಷ್ಟವಾದ ತಾದಾತ್ಮ್ಯ ಸಂಬಂಧವನ್ನು ಅವರು ಹೇಳಿದ್ದಾರೆ..ಸಂಸ್ಕೃತದಲ್ಲಿರುವ ಪ್ರಾರ್ಥನೆಯನ್ನು ಅವರೇ ಕನ್ನಡಕ್ಕೆ ಅನುವಾದಿಸಿದ್ದಾರೆ.. ಆ ಅನುವಾದದಲ್ಲಿ ಆ ಸಾಲಿನ ಅರ್ಥ ಹೀಗೆ ಬರೆಯಲ್ಪಟ್ಟಿದೆ.” ತನ್ನ ಚೈತನ್ಯದಿಂದ ಭಾರತಾಂಬೆಯೊಡನೆ ಸಮರಸವಾಗಿ ಬೆರೆತು ಭಾರತೀಯರನ್ನು ಆಹ್ಲಾದಗೊಳಿಸಿದ ಭಗವತಿ ಶ್ರೀ ತ್ರಿಪುರಸುಂದರಿಯ ಸನ್ನಿಧಿಯಲ್ಲಿ ಪ್ರಾರ್ಥಿಸುವೆವು”.

ಏನನ್ನು ಪ್ರಾರ್ಥಿಸಿದ್ದಾರೆ? ” ಎಲ್ಲ ಭಾರತೀಯರು ಸದ್ವಿದ್ಯಾ ಸಂಪನ್ನರಾಗಿ ಧೀರರಾಗಲಿ! ಭಾರತದ ಮಹಿಳೆಯರು ವೀರಪುತ್ರರನ್ನು ಕೊಡುವ ವೀರಮಾತೆಯರಾಗಲಿ!! ಭಾರತದ ಸಂಸ್ಕೃತಿಯ ತಳಹದಿಯಾದ ವೇದದ ತಿರುಳನ್ನರಿತ ಜ್ಞಾನಿಗಳು ತಮ್ಮ ಅಲೌಕಿಕ ಜ್ಞಾನದಿಂದ ಜಗತ್ತಿನಲ್ಲಿ ವಿಖ್ಯಾತರಾಗಿ ತ್ರಿಭುವನ ದೀಪಕರಾಗಲಿ”. ಈ ಪ್ರಾರ್ಥನೆಯಲ್ಲಿ ದೀರ್ಘದರ್ಶಿಯಾದ ಒಬ್ಬ ಆಧ್ಯಾತ್ಮಕೋವಿದನು ಭವಿಷ್ಯತ್ತಿನಲ್ಲಿ ಭಾರತದೇಶ ಹೇಗಿರಬೇಕೆಂದು ನಿರೀಕ್ಷಿಸುತ್ತಾನೆಂದು ಸ್ಪುಟವಾಗಿ ಗೊತ್ತಾಗುತ್ತದೆ. ರಾಷ್ಟ್ರಭಕ್ತಿಗೆ ಇದಕ್ಕಿಂತ ಮಿಗಿಲಾದ ನಿದರ್ಶನ ಯಾವುದಿದೆ?