ಬಜೆಬೇರು

posted in: Articles | 0

ಅಕೊರಸ್ ಕೆಲಾಮಸ್ (Acorus calamus L) ಎಂದು ಕರೆಯಲ್ಪಟ್ಟ ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯ ಮೂಲಿಕೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ. ಬೇರುಗಳಿಗೆ  ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೂವುಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ ಇದು.

     ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. ಜೊತೆಗೆ, ಮನೆ ಮದ್ದಾಗಿ ಬಳಸುವ ಈ ಗಿಡ ಬಜೆಬೇರು ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ  ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ. ಆದರೆ, ಇದರಿಂದ ಹೊರಹೊಮ್ಮುವ ಸುವಾಸನೆ ಮಾತ್ರ ಅದ್ಭುತ!

ಇದರ ಉಪಯೋಗ:

* ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

* ಬಜೆಯನ್ನು ಅರೆದು ಲೇಪಿಸುವುದರಿಂದ, ನೋವಿನಲ್ಲಿ ಉಪಯೋಗ .

* ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.

* ಬಜೆಯ ಕಷಾಯ ಸೇವನೆಯಿಂದ ಮೂತ್ರದ ಕಲ್ಲು ಕರಗಲು ಸಹಾಯ.

* ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸಬಹುದು.

* ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿಗೆ ಉಪಯೋಗ

* ಮಕ್ಕಳಲ್ಲಿ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.

* ಉತ್ತಮ ಜೀರ್ಣಕ್ರಿಯೆ: ಬಜೆ ಬೇರನ್ನು ತಿಂಗಳಿಗೆ 2 ಬಾರಿ ತೇಯ್ದು ಒಂದು ಚಮಚ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಜೊತೆಗೆ, ಹೊಟ್ಟೆ ನೋವು, ಜಂತು ಹುಳು ಈ ರೀತಿಯ ಸಮಸ್ಯೆಗಳ ನಿವಾರಣೆಗೆ ಬಜೆ ಬೇರು ಬಹಳ ಪರಿಣಾಮಕಾರಿ.

* ಚಿಕ್ಕ ಮಕ್ಕಳಲ್ಲಿ ಮಾತು ಶುದ್ಧತೆ: ಮಕ್ಕಳ ಉಚ್ಛಾರಣೆಯಲ್ಲಿ ತೊದಲು ಕಂಡುಬಂದರೆ ಪ್ರತಿದಿನ ಬಜೆ ಬೇರನ್ನು ತೇಯ್ದು ಕೊಡುವುದರಿಂದ ಮಾತಿನಲ್ಲಿ ಶುದ್ಧತೆ ಕಂಡುಬರುತ್ತದೆ. 

* ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಪರಿಹಾರ: ಉಸಿರಾಟ ಕ್ರಿಯೆ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಬಜೆ ಬೇರನ್ನು ಕುಟ್ಟಿ ಪುಟಿ ಮಾಡಿ ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಸೇವಿಸುವುದು ಉತ್ತಮ. ನೆಗಡಿ(ಶೀತ), ಜ್ವರದ ಸಮಸ್ಯೆಗಳಿಗೂ ಬಜೆ ಬೇರಿನ ಕಷಾಯ ಅತ್ಯಂತ ಪರಿಣಾಮಕಾರಿ.

ಈ ಎಲ್ಲ ಉಪಯೋಗಗಳು ಇತಿಮಿತಿಯಲ್ಲಿ ವೈದ್ಯರಯ ನಿರ್ದೇಶನದಂತೆ ಉಪಯೋಗಿಸುವುದು ಉತ್ತಮ.

ಲೇಖಕರು: ಡಾ|| ರವಿಕಿರಣ ಪಟವರ್ಧನ

ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ