ಉಪನಿಷತ್ತೆಂಬ ಜ್ಞಾನ ಗಂಗೆಯಲ್ಲಿ ಮೀಯೋಣ ಬನ್ನಿ

posted in: Articles | 0

–     ವಿಶ್ವನಾಥ ಸುಂಕಸಾಳ

ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ವೇದವು ಜಗತ್ತಿನ ಅತಿ ಪ್ರಾಚೀನವಾದ ಜ್ಞಾನರಾಶಿಯಾಗಿದೆ. ವೇದವನ್ನು ಆರ್ಷಸಂಸ್ಕೃತಿಯಲ್ಲಿ ಅವಿನಾಶಿಯೆಂದೂ, ಎಲ್ಲ ಜ್ಞಾನಶಾಖೆಗಳ ಮೂಲವೆಂದೂ, ಪರಮಾರ್ಥತತ್ತ್ವದ ವಿಷಯದಲ್ಲಿ ಪರಮ ಪ್ರಮಾಣವೆಂದೂ ಸ್ವೀಕರಿಸಲಾಗಿದೆ. ವೇದಗಳಲ್ಲಿ ಸ್ಪರ್ಶಿಸಿರದ ಯಾವೊಂದು ಸಂಗತಿಯೂ ಪ್ರಪಂಚದಲ್ಲಿ ಇರಲಿಕ್ಕಿಲ್ಲ ಎಂಬಷ್ಟರ ಮಟ್ಟಿಗೆ ವೇದದ ಪ್ರತಿಪಾದ್ಯ ವಿಷಯದ ಹರಹು ವ್ಯಾಪ್ತವಾಗಿದೆ. ಭಾರತೀಯರ ನಿತ್ಯದ ಎಲ್ಲ ಕ್ರಿಯಾ-ಕಲಾಪವೂ, ಆಚರಣೆಗಳೂ, ನಂಬುಗೆಗಳೂ, ಚಿಂತನಪದ್ಧತಿಗಳೂ ವೇದಮೂಲದವೇ ಆಗಿವೆ. ಎಲ್ಲ ಜ್ಞಾನಶಾಖೆಗಳೂ ವೇದವೆಂಬ ಮಹಾವೃಕ್ಷದ ಒಂದೊಂದು ಪರ್ಣವೋ, ಕೊಂಬೆಯೋ ಆಗಿವೆ. ಇಂಥ ವೇದವು ಜೀವನವನ್ನು ಇಹ ಮತ್ತು ಪರವೆಂದು ಮುಖ್ಯವಾಗಿ ಎರಡು ರೀತಿಯಲ್ಲಿ ವಿಭಾಗಿಸುತ್ತದೆ. ಇಹವೆಂದರೆ ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ಜನ್ಮವೆಂದೂ, ಪರವೆಂದರೆ, ಮರಣಾನಂತರದ ಸ್ಥಿತಿಯೆಂದೂ ಸಾಮಾನ್ಯವಾಗಿ ಗುರುತಿಸಿಕೊಳ್ಳಬಹುದಾಗಿದೆ. ವೇದವು ಇವೆರಡನ್ನೂ ಉದ್ದೇಶಿಸಿ ಪ್ರವೃತ್ತವಾಗಿರುವುದಲ್ಲದೇ, ಇದಕ್ಕೂ ಆಚೆಗಿನ ನಿತ್ಯ-ಸತ್ಯದ ಸ್ಥಿತಿಯನ್ನು ಕಾಣುವ ಮತ್ತು ತಲುಪುವ ಗುರಿಯನ್ನು ಮುಖ್ಯವಾಗಿ ಹೊಂದಿದೆ ಎನ್ನಬಹುದು. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳೆಂಬುದಾಗಿ ವಿಷಯ ಮತ್ತು ಸ್ವರೂಪದ ಆಧಾರದಲ್ಲಿ ವಿಭಕ್ತವಾಗಿರುವ ಪ್ರತಿ ವೇದದಲ್ಲಿಯೂ ಮತ್ತೆ ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳೆಂಬ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಇವುಗಳಲ್ಲಿ ಉಪನಿಷತ್ತೆಂಬ ವಿಭಾಗವು ಹೆಚ್ಚಿನ ಎಲ್ಲ ವೇದದ ಕೊನೆಯಲ್ಲಿ ಬರುವುದರಿಂದ ವೇದಾಂತವೆಂದೂ ಕರೆಯಲಾಗುತ್ತದೆ. ಆದರೆ ವೇದಾಂತ ಶಬ್ದದ ನಿಜವಾದ ಅರ್ಥವೆಂದರೆ ವೇದದ ನಿರ್ಣಯವೆಂಬುದಾಗಿ. ವೇದದ ಪೂರ್ವಭಾಗವು ಕರ್ಮಪ್ರಧಾನವಾಗಿದ್ದು, ಉಪನಿಷದ್ ಭಾಗವು ಜ್ಞಾನಪ್ರಧಾನವಾಗಿದೆ. ಹಾಗಿದ್ದೂ ಉಪಾಸನೆಗಳನ್ನೂ ಕೂಡ ಉಪದೇಶಿಸಲಾಗಿದೆ. ಒಟ್ಟಾರೆಯಾಗಿ ಸಮಗ್ರ ವೇದದ ತಾತ್ಪರ್ಯವು ಮನುಷ್ಯಮಾತ್ರನು ಜೀವನದಲ್ಲಿ ಹೊಂದಬೇಕೆಂದು ಬಯಸುವ ಸುಖದ ಪ್ರಾಪ್ತಿಯೇ ಆಗಿದೆ. ಸುಖವು ಕೇವಲ ಮನುಷ್ಯನಿಗಷ್ಟೇ ಅಭೀಷ್ಟವಾಗಿರದೇ ಎಲ್ಲ ಜಂತುಗಳ ಸಹಜ ಪ್ರಾಪ್ತವ್ಯವಾಗಿದೆ. ಹಾಗಿದ್ದೂ ಸುಖವನ್ನು ಹೊಂದಲು ಮುಖ್ಯವಾಗಿ ಬೇಕಾದ ಇಚ್ಛೆ, ಜ್ಞಾನ ಮತ್ತು ಕ್ರಿಯೆಗಳು ಮನುಷ್ಯನಲ್ಲಿಯೇ ಹೆಚ್ಚು ಅಭಿವ್ಯಕ್ತಗೊಳ್ಳುವ ಕಾರಣದಿಂದ ಮತ್ತು ಅವಕ್ಕೆ ಬೇಕಾದ ಇಂದ್ರಿಯಪಟುತ್ವವೇ ಮೊದಲಾದ ಯೋಗ್ಯತೆಯು ಮನುಷ್ಯನಲ್ಲಿಯೇ ಹೆಚ್ಚಾಗಿ ಲಭ್ಯವಿರುವುದರಿಂದ ಶಾಸ್ತ್ರಗಳೆಲ್ಲವೂ ಮನುಷ್ಯನನ್ನು ಉದ್ದೇಶಿಸಿಯೇ ಪ್ರವೃತ್ತವಾಗಿವೆ.

          ಸುಖವನ್ನು ಕೂಡ ಐಹಿಕ, ಪಾರಲೌಕಿಕ ಮತ್ತು ಪಾರಮಾರ್ಥಿಕ ಎಂಬುದಾಗಿ ವಿಭಾಗಿಸಬಹುದಾಗಿದೆ. ಈ ಎಲ್ಲ ವಿಧದ ಸುಖಗಳನ್ನು ಹೊಂದುವುದಕ್ಕೂ ವೇದ ಹಾಗೂ ವೇದಮೂಲಕವಾದ ಎಲ್ಲ ಶಾಸ್ತ್ರಗಳೂ ನಾನಾವಿಧವಾದ ಮಾರ್ಗಗಳನ್ನು ಉಪದೇಶಿಸುತ್ತವೆ. ಹೀಗೆ ಸುಖ ಹಾಗೂ ಸುಖಸಾಧನಗಳನ್ನು ಒಟ್ಟಾಗಿಸಿ ‘ಪುರುಷಾರ್ಥ’ ಎಂದು ಕರೆಯಲಾಗಿದೆ. ಅವು ನಾಲ್ಕು ವಿಧ. ೧.ಧರ್ಮ, ೨.ಅರ್ಥ, ೩.ಕಾಮ, ೪. ಮೋಕ್ಷ ಎಂಬುದಾಗಿ.  ಪುರುಷಾರ್ಥಾಭಿಧೇಯವಾದ ಈ ನಾಲ್ಕನ್ನು ಹೊಂದುವ ಮಾರ್ಗಗಳನ್ನೂ ವೇದವು ವಿಸ್ತೃತವಾಗಿ ತಿಳಿಸಿಕೊಡುತ್ತದೆ. ಹಾಗಾಗಿಯೇ ವೇದದಲ್ಲಿ ಕರ್ಮವೂ, ಭಕ್ತಿಯೂ, ಉಪಾಸನೆಯೂ, ಜ್ಞಾನವೂ ಪ್ರತಿಪಾದಿಸಲ್ಪಟ್ಟಿವೆ. ವೇದದ ಪೂರ್ವಭಾಗದಲ್ಲಿ ಧರ್ಮ, ಅರ್ಥ ಮತ್ತು ಕಾಮದ ಮಾರ್ಗಗಳು ಉಪದೇಶಿಸಲ್ಪಟ್ಟಿದ್ದರೆ, ಉಪನಿಷದ್ಭಾಗದಲ್ಲಿ ಮೋಕ್ಷವನ್ನು ಹೊಂದುವ ಸಾಧನವಾದ ಜ್ಞಾನಕ್ಕೆ ಒತ್ತು ಕೊಡಲಾಗಿದೆ. ಅಷ್ಟೇ ಅಲ್ಲ, ಜ್ಞಾನದಲ್ಲಿಯೇ ಕರ್ಮಾದಿಗಳ ಪರಿಸಮಾಪ್ತಿಯಾಗುವುದೆಂದೂ, ಇಡೀ ವೇದದ ಪರಮ ತಾತ್ಪರ್ಯವಿರುವುದೇ ಮೋಕ್ಷಪ್ರಾಪ್ತಿಗೆ ಸಾಧನವಾದ ಜ್ಞಾನದಲ್ಲಿ ಎಂದೂ ಪ್ರತಿಪಾದಿಸಲಾಗಿದೆ. ಹೀಗೆಂದ ಮಾತ್ರಕ್ಕೆ ಪೂರ್ವಭಾಗದಲ್ಲಿ ತಿಳಿಸಲಾದ ಧರ್ಮಾದಿ ಪುರುಷಾರ್ಥತ್ರಯವು ವ್ಯರ್ಥವೆಂದಾಗಲೀ, ಅವುಗಳ ಸಾಧನಗಳು ವ್ಯರ್ಥವೆಂದಾಗಲೀ ಅರ್ಥವಲ್ಲ. ಹೇಗೆ ಯಾವುದೋ ದೂರದ ಸ್ಥಳಕ್ಕೆ ತಲುಪಬೇಕಾದವನಿಗೆ ಮಧ್ಯೆ ಸಿಗುವ ಪ್ರದೇಶಗಳನ್ನೂ ಹಾದು ಹೋಗಬೇಕಾಗುವುದೋ ಹಾಗೆಯೇ ಇದೂ ಕೂಡ. ಅವರವರ ಯೋಗ್ಯತೆ ಅಥವಾ ಅಧಿಕಾರಕ್ಕೆ ಅನುಗುಣವಾಗಿ ವೇದವು ಈ ಕೊನೆಯ ಗಮ್ಯವನ್ನು ತಲುಪುವ ರೀತಿಯನ್ನು ತಿಳಿಸಿಕೊಡುತ್ತಿದೆ. ಆ ನಡುವೆ ಉಳಿದವುಗಳನ್ನು ಕೂಡ ಹಾದುಹೋಗಲೇಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಮೋಕ್ಷವೆಂಬುದು ವೇದಗಳ ಪರಮಲಕ್ಷ್ಯವೆಂದೂ. ಧರ್ಮ-ಅರ್ಥ-ಕಾಮಗಳು ಈ ಲಕ್ಷ್ಯಕ್ಕಾಗಿ ಕ್ರಮಿಸಬೇಕಾದ ಹಾದಿಗಳೆಂಬುದೂ ಸ್ಪಷ್ಟ.

ಉಪನಿಷತ್ತುಗಳು ಮೋಕ್ಷವನ್ನು ಉಪದೇಶಿಸುವುದಕ್ಕಾಗಿ ಹೊರಟಿವೆ ಎಂದು ತಿಳಿದುಕೊಂಡೆವು. ಮೋಕ್ಷವೆಂದರೆ ಅದು ನಮ್ಮ ಸ್ವರೂಪವೇ ಆಗಿದೆ. ಅಂದರೆ ನಮ್ಮೊಳಗಿನ ಚೈತನ್ಯದ ಸ್ವರೂಪದ ಪ್ರಾಪ್ತಿಯೇ ಆಗಿದೆ. ಇಡೀ ವಿಶ್ವದ ಮೂಲವಾದ ಯಾವ ಬ್ರಹ್ಮವೆಂಬ ಕಾರಣವಿದೆಯೋ ಅದರೊಂದಿಗೆ ಲೀನವಾಗಿಬಿಡುವ ಮೂಲಕ ದುಃಖದ ಸಂಕೋಲೆಯಾದ ಈ ಸಂಸಾರವನ್ನು ದಾಟುವುದೇ ಮೋಕ್ಷ. ಸಂಸಾರವು ದುಃಖಮಯವಾಗಿದೆ ಎಂಬುದು ಎಲ್ಲರ ನಿತ್ಯದ ಅನುಭವ. ವಿವೇಕಿಗಳಿಗೆ ಇಲ್ಲಿನ ಸುಖವು ಕೂಡ ಸುಖದ ಆಭಾಸವೇ ಆಗಿದೆ. ಕ್ಷಣಿಕವಾದ ಈ ಜೀವನದಲ್ಲಿ ಸುಖವೆಂದು ನಾವು ಅಂದುಕೊಂಡದ್ದೆಲ್ಲವೂ ಅನಿತ್ಯವೂ, ಅಶುದ್ಧವೂ ಆದುದರಿಂದಾಗಿ ನಿತ್ಯವಾದ ಸುಖವನ್ನು ಹೊಂದಲು ಮನುಷ್ಯನು ಇಚ್ಛಿಸುತ್ತಾನೆ. ಎಲ್ಲಿಯವರೆಗೆ ಈ ಹುಟ್ಟು-ಸಾವುಗಳಿವೆಯೋ ಅಲ್ಲಿಯವರೆಗೂ ಈ ದುಃಖಪರಂಪರೆಯೆಂಬುದು ನಾಶವಾಗುವುದಿಲ್ಲ. ಈ ಹುಟ್ಟು-ಸಾವುಗಳಿಗೆ ನಾವು ಈ ಜನ್ಮದಲ್ಲಿ ಮತ್ತು ಇದಕ್ಕೂ ಹಿಂದಿನ ಜನ್ಮಗಳಲ್ಲಿ ಮಾಡಿರುವ ಕರ್ಮಗಳೇ ಕಾರಣ. ಕರ್ಮವನ್ನು ಮಾಡದೆಯೇ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಜೊತೆಗೆ ಮಾಡಿದ ಕರ್ಮದ ಫಲವನ್ನು ಅನುಭವಿಸದೆಯೇ ಆ ಕರ್ಮವು ನಾಶವಾಗುವುದೂ ಇಲ್ಲ. ಹಾಗಾಗಿಯೇ ಕರ್ಮ ಕರಗದೇ ಹುಟ್ಟು-ಸಾವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ಮಕ್ಕೆ ಕಾರಣ ನಮ್ಮ ಅಜ್ಞಾನ. ಈ ಅಜ್ಞಾನವು ಅನಾದಿಯಾಗಿದ್ದು ನಮ್ಮೆಲ್ಲ ಕಷ್ಟಗಳಿಗೆ ಕಾರಣವಾಗಿದೆ. ಹಾಗಾಗಿ ಈ ಅಜ್ಞಾನವೇ ಬಂಧ. ಅದರಿಂದ ಪಾರಾಗುವುದೇ ಮೋಕ್ಷ. ಯಾವಾಗ ನಮ್ಮೊಳಗಿನ ಅಜ್ಞಾನವು ನಾಶವಾಗುವುದೋ ಆಗ ಅಜ್ಞಾನಜನ್ಯವಾದ ದುಃಖದ ನಾಶವಷ್ಟೇ ಅಲ್ಲ, ಪರಮಾನಂದದ ಪ್ರಾಪ್ತಿಯೂ ಉಂಟಾಗುವುದು. ಇದನ್ನು ಉಪದೇಶಿಸುವುದೇ ಉಪನಿಷತ್ತುಗಳ ಮುಖ್ಯ ಲಕ್ಷ್ಯವಾಗಿದೆ.

ನೂರ ಎಂಟು ಉಪನಿಷತ್ತುಗಳಿವೆ ಎಂದು ಮುಕ್ತಿಕೋಪನಿಷತ್ತಿನಲ್ಲಿ ತಿಳಿಸಲಾಗಿದೆ. ಆದರೆ ಆಚಾರ್ಯ ಶಂಕರ ಭಗವತ್ಪಾದರು ಹತ್ತು ಮುಖ್ಯವಾದ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಮತ್ತೆ ಒಂದಿಷ್ಟು ಉಳಿದ ಉಪನಿಷತ್ತುಗಳ ವಾಕ್ಯಗಳನ್ನು ಭಾಷ್ಯದಲ್ಲಿ ಉಲ್ಲೇಖಿಸಿದ್ದಾರೆ. ಈ ಉಪನಿಷತ್ತುಗಳಲ್ಲಿ ತತ್ತ್ವವು ಪ್ರಧಾನವಾಗಿ ಪ್ರತಿಪಾದಿಸಲ್ಪಟ್ಟಿರುವುದರಿಂದ ಎಲ್ಲ ಉಪನಿಷತ್ತುಗಳ ಸಾರಭೂತವಾದವುಗಳಾಗಿವೆ. ಉಪನಿಷತ್ತುಗಳ ಪ್ರಪಂಚವು ಅತ್ಯಂತ ವಿಸ್ತೃತವಾದುದು. ಉಪನಿಷ್ತುಗಳನ್ನು ಅರ್ಥದ ನಿಗೂಢತೆಯ ದೃಷ್ಟಿಯಿಂದ ದಟ್ಟವಾದ ಅರಣ್ಯಕ್ಕೂ, ಗಾಂಭೀರ್ಯದಲ್ಲಿ ಸಮುದ್ರದ ಆಳಕ್ಕೂ, ವಿಸ್ತಾರದಲ್ಲಿ ಆಕಾಶಕ್ಕೂ ಹೋಲಿಸಬಹುದಾಗಿದೆ. ಉಪನಿಷತ್ತುಗಳನ್ನು ಓದಿ, ಅರ್ಥೈಸಿಕೊಳ್ಳುವುದಕ್ಕೆ ಸಾಮನ್ಯರಿಗೆ ಒಂದು ಜನ್ಮವು ಸಾಲುವುದಿಲ್ಲ. ಹಾಗಿದ್ದೂ ಇಡೀ ಜೀವನದಲ್ಲಿ ಒಮ್ಮೆಯಾದರೂ ಗಂಗೆಯ ಸ್ನಾನವನ್ನು ಮಾಡಿದರೆ ಹೇಗೆ ಇಡೀ ಮನುಷ್ಯಜನ್ಮವು ಅಷ್ಟರ ಮಟ್ಟಿಗೆ ಪವಿತ್ರವಾಗುವುದೆಂಬ ವಿಶ್ವಾಸವಿದೆಯೋ ಅದೇ ರೀತಿಯಲ್ಲಿ ಉಪನಿಷದ್ಗಂಗೆಯ ಒಂದು ಗುಟುಕನ್ನಾದರೂ ಕುಡಿದರೆ ಮೋಕ್ಷಮಾರ್ಗದ ದಾರಿಯು ಇನ್ನಷ್ಟು ಸುಗಮವಾದೀತು. ಹಾಗಾಗಿ ಭಾರತೀಯರಾದ ನಾವೆಲ್ಲ ಜಗತ್ತಿನ ಅತ್ಯಂತ ಪ್ರಾಚೀನವಾದ ತತ್ತ್ವಶಾಸ್ತ್ರವಾದ ಉಪನಿಷತ್ತುಗಳ ಪರಿಚಯವನ್ನು ಹೊಂದುವುದು ಅತ್ಯಂತ ಮುಖ್ಯವಾದುದಾಗಿದೆ.

ಈ ನಿಟ್ಟಿನಲ್ಲಿ ಎಲ್ಲರಿಗೂ ಉಪನಿಷತ್ತುಗಳ ಸಾರವನ್ನು ತಲುಪಿಸುವ ಸಲುವಾಗಿ ಸ್ವರ್ಣವಲ್ಲೀ ಭಕ್ತವೃಂದವು ಈ ಲೇಖನ ಸರಣಿಯನ್ನು ಅಂಕಣದ ರೂಪದಲ್ಲಿ ಪ್ರಕಟಿಸಲು ಸಂಕಲ್ಪಿಸಿದೆ. ಉಪನಿಷತ್ತುಗಳನ್ನು ಪರಿಚಯಿಸಿಕೊಳ್ಳುವ ಈ ಪಯಣದಲ್ಲಿ ನಾವು ಹತ್ತು ಮುಖ್ಯ ಉಪನಿಷತ್ತುಗಳನ್ನು ಅತ್ಯಂತ ವಿಸ್ತೃತವಾಗಿ ನೋಡಲಿದ್ದೇವೆ. ಅದು ಮುಗಿದ ಮೇಲೆ ಉಳಿದ ಉಪನಿಷತ್ತುಗಳ ಸಾರವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವವರಿದ್ದೇವೆ. ಲೌಕಿಕವಾದ ಕಾರ್ಯಕಲಾಪಗಳಲ್ಲೇ ಕಳೆದುಹೋಗುವ ನಾವುಗಳೆಲ್ಲ ಆಗಾಗ ಉಪನಿಷತ್ತುಗಳೆಂಬ ಈ ಜ್ಞಾನಸಾಗರದಲ್ಲಿ ಮುಳುಗುಹಾಕುವ ಮೂಲಕ ನಮ್ಮೊಳಗಿನ ಕಲ್ಮಶವನ್ನು ಕಳೆದುಕೊಳ್ಳುವ ಪ್ರಯತ್ನವನ್ನು ಮಾಡೋಣ. ಸಾಧ್ಯವಾದಷ್ಟು ವೇದಾಂತದ ಆತ್ಮತತ್ತ್ವವನ್ನು ಸರಳವಾಗಿ ಅರಿತುಕೊಂಡು ಜ್ಞಾನಮಾರ್ಗದತ್ತ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಪ್ರೇರಣೆಯನ್ನು ಪಡೆಯೋಣ. ಆ ಶಕ್ತಿಯನ್ನು ವೇದಾಂತವೇ ಮೂರ್ತಿವೆತ್ತಂತೆ ಇರುವ, ಜ್ಞಾನ-ತಪೋಮೂರ್ತಿಗಳೂ ಆಗಿರುವ, ಸ್ವರ್ಣವಲ್ಲೀ ಪೀಠಾಧೀಶರಾದ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಮ್ಮೆಲ್ಲ ಭಕ್ತವೃಂದವನ್ನೂ ಆಶೀರ್ವದಿಸಲಿ ಎಂದು ಅವರ ಚರಣಗಳಿಗೆ ತಲೆಬಾಗಿ ಪ್ರಾರ್ಥಿಸುತ್ತೇನೆ.