Shree shree Shrimad Gangadhrendra saraswati swamiji
ಧಾರ್ಮಿಕ ಚಟುವಟಿಕೆಗಳು
ಶ್ರೀಗಳವರು ಪೀಠಕ್ಕೆ ಬಂದ ಪ್ರಾರಂಭದ ದಿನಗಳಿಂದಲೇ ಧರ್ಮ ಜಾಗೃತಿ ಮತ್ತು ಶಿಷ್ಯ ಕಲ್ಯಾಣದ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದಾರೆ. ಹಿಂದಿನ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರು ಶ್ರೀ ಚಕ್ರಾರಾಧಕರಾಗಿದ್ದರು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಉತ್ಕಟ ಅಭಿಲಾಷೆಯಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಶ್ರೀ ಚಕ್ರಾರ್ಚನೆಯ ವಿಧಿ ವಿಧಾನಗಳನ್ನು ಕರಗತ ಮಾಡಿಕೊಂಡು ಶ್ರೀ ಮಠದಲ್ಲಿ ಹೊಸ ಶ್ರೀ ಚಕ್ರ ಪ್ರತಿಷ್ಠಾಪನೆಯನ್ನು ಬ್ರಹ್ಮಶ್ರೀ ವಿದ್ವಾನ ಕೆ.ಪಿ ಶಂಕರ ಶಾಸ್ತ್ರೀಯವರ ನೇತ್ರತ್ವದಲ್ಲಿ ದಿನಾಂಕ 23.9.1991 ರಂದು ನೆರವೇರಿಸಿದರು. ಇಂದಿಗೂ ಶಿಷ್ಯ ಕಲ್ಯಾಣಕ್ಕಾಗಿ ಪ್ರತಿ ಶುಕ್ರವಾರ ಶ್ರೀ ಚಕ್ರಾರ್ಚನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜನವರಿ 1993 ರಲ್ಲಿ ಉತ್ತರಕನ್ನಡ ಜಿಲ್ಲಾ ವೈದಿಕ ಸಮಾವೇಶ ನಡೆಸಿ ಔಚಿತ್ಯ ಪೂರ್ಣ ಕರ್ಮಾನುಷ್ಠಾನ ಕೈಕೊಳ್ಳುವ ಕುರಿತು ಚರ್ಚಿಸಿದರು. 1995 ನವೆಂಬರ್ 26ರಿಂದ ಸಾರಾ ಸೀಮೆಗಳಲ್ಲಿ ಕೋಟಿ ಗಾಯತ್ರೀ ಜಪಾನುಷ್ಠಾನ ಪ್ರಾರಂಭಿಸಲು ನಿರ್ದೇಶಿಸಿದರು. ತನ್ನಿಮಿತ್ತ ಶ್ರೀ ಮಠದಲ್ಲಿ 26.01.1996 ರಿಂದ 2.2.1996 ರ ವರೆಗೆ ಏಳು ದಿನಗಳ ಕಾಲ ಕೋಟಿ ಗಾಯತ್ರೀ ಜಪಯಜ್ಞ ಮತ್ತು ಸಂಹಿತಾ ಯಾಗಗಳು ನೆರವೇರಿದವು. ಈ ಸಂದರ್ಭದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರ ನಾಯಕ ಅಟಲ್ ಬಿಹಾರೀ ವಾಜಪೇಯಿಯವರು ಭಾಗವಹಿಸಿ ಭಾಷಣ ಮಾಡಿದರು. 1998 ನವೆಂಬರ ದಿನಾಂಕ 26,27 ಮತ್ತು 28ರಂದು ಶ್ರೀ ಮಠದಲ್ಲಿ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನ ಜರುಗಿತು. ಇದೇ ಸಂದರ್ಭದಲ್ಲಿ ಭಗವತ್ಪಾದ ಪ್ರಕಾಶನ ಸಂಸ್ಥೆಯ ಉದ್ಘಾಟನೆ ಜರುಗಿತು, ಹಾಗೂ ಶ್ರೀ ಸ್ವರ್ಣವಲ್ಲೀ ಪ್ರಭಾ ಮಾಸಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. 1999 ಜುಲೈ ದಿನಾಂಕ 19ರಿಂದ 28ರ ವರೆಗೆ 10ದಿನಗಳ ಕಾಲ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಯೋಧರಿಗೆ ವಿಜಯ ಲಭಿಸುವಂತೆ ಪ್ರಾರ್ಧಿಸಿ ಕೋಟಿ ತುಳಸಿ ಅರ್ಚನೆ ಹಾಗೂ ಸುವಾಸಿನಿಯರಿಂದ ಕೋಟಿ ಕುಂಕುಮಾರ್ಚನೆ ನೆರವೇರಿತು. 2002 ಮಾರ್ಚ ದಿನಾಂಕ 16 ರಿಂದ 24ರ ವರೆಗೆ ಸಾರಾ ಸೀಮೆಗಳಲ್ಲಿ ಸಂಪದಭಿವೃದ್ಧಿಗಾಗಿ ಶ್ರೀಗಳವರ ಆದೇಶದಂತೆ ಶ್ರೀ ಲಕ್ಷ್ಮೀನಾರಾಯಣ ಹೃದಯ ಪಾರಾಯಣವನ್ನು ಕೈಗೊಳ್ಳಲಾಯಿತು. 2004ರ ಅಗಸ್ಟ ದಿನಾಂಕ 22ರಿಂದ ದಿನಾಂಕ 27ರ ವರೆಗೆ ಶ್ರೀ ಮಠದಲ್ಲಿ ಅಥರ್ವವೇದ ಸಂಹಿತಾಯಾಗ ನಡೆಯಿತು. 2005 ನವೆಂಬರ್ ದಿನಾಂಕ 27ರಿಂದ 24ಕೋಟಿ ಗಾಯತ್ರೀ ಜಪಾನುಷ್ಠಾನ ತತ್ ಸಂಬಂಧಿ ಗಾಯತ್ರೀ ಜಪಯಜ್ಞ ನೆರವೇರಿಸುವ ಮಹಾಸಂಕಲ್ಪ ದೊಂದಿಗೆ ಸಾರಾ ಸೀಮೆಗಳಲ್ಲಿ ಹಾಗೂ ಶ್ರೀ ಮಠದಲ್ಲಿ ಅಕ್ಷರಕೋಟಿ ಗಾಯತ್ರೀ ಜಪಯಜ್ಞ ಪ್ರಾರಂಭಗೊಂಡಿತು. ಜೊತೆಗೆ ರಾಮಕ್ಷತ್ರಿಯ ಶಿಷ್ಯರು 5ಲಕ್ಷ ರಾಮರಕ್ಷಾ ಸ್ತೋತ್ರ ಪಾರಾಯಣವನ್ನು ಪ್ರಾರಂಭಿಸಿದರು. ಇದನ್ನು 2005 ಡಿಸೆಂಬರ ದಿನಾಂಕ 3ರಂದು ಶ್ರೀಗಳವರು ಹಳದೀಪುರದ ಮಹಾಲಕ್ಷ್ಮೀ ದಾಮೋದರ ದೇವಸ್ಥಾನದಲ್ಲಿ ಉದ್ಘಾಟಿಸಿದರು. ಇವುಗಳ ಮುಕ್ತಾಯ ಸಮಾರಂಭ ಮತ್ತು ಶ್ರೀಗಳವರ ಪೀಠಾರೋಹಣದ 15ನೇ ವರ್ಷಾಚರಣೆ ಇವು 2006 ಫೆಬ್ರವರಿ ದಿನಾಂಕ 2ರಿಂದ 6 ರ ವರೆಗೆ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದವು. 2006 ರಲ್ಲಿ ಅತಿವ್ರಷ್ಟಿಯಾದಾಗ ಅತಿವ್ರಷ್ಟಿ ನಿವಾರಣೆ ಮತ್ತು ಅಡಿಕೆಕೊಳೆ ರೋಗ ನಿಯಂತ್ರಣಕ್ಕಾಗಿ ಸಮೀರಣಾಯಾಗ ಮತ್ತು ಧನ್ವಂತರಿಹೋಮ ಕೈಕೊಳ್ಳಲಾಗಿದೆ. 2009 ಆಗಸ್ಟ್ ದಿನಾಂಕ 14 ರಿಂದ 18 ರ ವರೆಗೆ ಸಹಸ್ರ ಚಂಡೀಯಾಗ ನೆರವೇರಿಸಲಾಗಿದೆ. ಶ್ರೀಗಳವರ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ಸಾತ್ವಿಕ ಸಮಾಜ ನಿರ್ಮಾಣದ ಗುರಿಹೊಂದಿದ ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನದ ಉದ್ಘಾಟನೆಯು ಹುಬ್ಬಳ್ಳಿಯಲ್ಲಿ ದಿನಾಂಕ 28.10.2007 ರಂದು ನೆರವೇರಿತು. ಈ ಅಭಿಯಾನವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾಲ್ಕು ವಿವಿಧ ಹಂತಗಳಲ್ಲಿ ಸತತ ನಾಲ್ಕೂವರೆ ವರ್ಷಗಳ ಕಾಲ ಮುನ್ನಡೆದು ಬೆಂಗಳೂರು ಅರಮನೆ ತ್ರಿಪುರವಾಸಿನಿ ಮೈದಾನದಲ್ಲಿ ದಿನಾಂಕ 8.01.2012ರಂದು ವೈಭವದ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. 2012 ಅಗಸ್ಟ ದಿನಾಂಕ 8 ರಿಂದ ಸಪ್ಟೆಂಬರ 16 ರ ವರೆಗೆ ಶ್ರೀ ಮಠದಲ್ಲಿ ಸೀಮಾವಾರು ಶ್ರೀ ಶಂಕರ ಸ್ತೋತ್ರ ಮಹಾಸತ್ರವನ್ನು ಮಾತೆಯರು ನಡೆಸಿಕೊಟ್ಟರು.
Protecting Forests
ಪರಿಸರ ಸೌರಕ್ಷಣೆ ಮತ್ತು ಜನಾಂದೋಲನ
ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಮಾಡಿದ ಸಮಾಜೋದ್ಧಾರಕ ಧಾರ್ಮಿಕ ಕಾರ್ಯಗಳು ಅಭೂತ ಪೂರ್ವವಾದವುಗಳು.ಪೀಠಾರೋಹಣದ ಕೆಲ ದಿನಗಳಲ್ಲಿಯೇ ಬೇಡ್ತಿ ಯೋಜನೆಯ ವಿರುದ್ಧ ಅವರು ಪಾದಯಾತ್ರೆಯನ್ನು ಕೈಗೊಂಡು ಪರಿಸರ ನಾಶವನ್ನು ತಡೆಯಲು ಅಹಿಂಸಾತ್ಮಕ ಹೋರಾಟದ ಮುಖಂಡತ್ವವನ್ನು ವಹಿಸಿದರು.18 ಸೆಪ್ಟಂಬರ 1992 ರಂದು ಮಾಗೋಡದಲ್ಲಿ ಜರುಗಿದ ಬೇಡ್ತಿ ವಿರುದ್ಧ ಆಂದೋಲನಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನ ದೊಡ್ಡ ಪ್ರತಿಭಟನಾ ಸಭೆ ನಡೆಸಿದಾಗ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಪರಿಸರ ಸಂರಕ್ಷಣೆ ಜೀವಸಂಕುಲದ ರಕ್ಷಣೆಗೆ ಶ್ರೀ ಸ್ವರ್ಣವಲ್ಲೀ ಮಠವು ಮುಂದಾಗಿ ನಿಲ್ಲಲಿದೆ. ನಮ್ಮ ಹಿಂದಿನ ಗುರುಗಳು ಶೀಮಠ ಮುಳುಗಡೆಯಾಗದಂತೆ ಹೋರಾಡಲು ನಮಗೆ ಪ್ರೇರಕಶಕ್ತಿಯಾಗಿದ್ದಾರೆ. ನಾವು ಅಹಿಂಸಾತ್ಮಕವಾದ ಮಹಾಸಮರ ನಡೆಸುತ್ತಿದ್ದೇವೆ.ಬೇಡ್ತಿ ಆಣೆಕಟ್ಟು ಕಟ್ಟುವುದರಿಂದ ಬೆಲೆ ಬಾಳುವ ತೋಟಗಳು ವನ್ಯ ಜೀವಿಗಳು ನಾಶವಾಗುತ್ತವೆ. ಇದನ್ನು ತಡೆಯಲು ನಾವು ಜಾತಿ ಮತ ಪಕ್ಷಭೇದ ಮರೆತು ಒಂದಾಗಿ ಹೋರಾಡೋಣವೆಂದು ಶ್ರೀಗಳು ನೀಡಿದ ಕರೆಗೆ ಸಹಸ್ರ ಸಹಸ್ರ ಸಂಖ್ಯೆಯ ಜನಸ್ತೋಮ ಗುರುಗಳ ಮಾರ್ಗದರ್ಶನದಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಸ್ವೀಕರಿಸಿತು. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನಡೆಸಿದ ಈ ಪರಿಸರ ಹೋರಾಟ ಸರಕಾರವನ್ನು ನಡುಗಿಸಿತು. ರಾಷ್ಟ್ರದಲ್ಲೇ ಅಪೂರ್ವಾದ ಪರಿಸರ ಹೋರಾಟವನ್ನು ಕೈಗೊಂಡ ಶ್ರೀ ಸ್ವರ್ಣವಲ್ಲೀ ಮಠದ ಸ್ವಾಮಿಗಳು “ಹಸಿರುಸ್ವಾಮಿ” ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಷ್ಟ್ರವ್ಯಾಪಿ ಸುದ್ದಿಯಾದ ಸ್ವಾಮಿಗಳು ದೊಡ್ಡ ಜನಾಂದೋಲನದ ರೂವಾರಿಗಳಾದರು. ಸರಕಾರ ಈ ಹೋರಾಟದಿಂದ ಭಯಪಟ್ಟು ಬೇಡ್ತಿ ಯೋಜನೆಗೆ ನೀಡಿದ ಆದೇಶವನ್ನು ಕೈಬಿಡುವಂತೆ ಆದೇಶ ಹೊರಡಿಸಿತು.ಬೇಡ್ತಿ ಯೋಜನೆ ಮತ್ತೆ ಸುದ್ದಿಮಾಧ್ಯಮಗಳಲ್ಲಿ ಬಂದಾಗ ಸ್ವಾಮೀಜಿಯವರು ಎರಡನೆಯ ಬಾರಿ ಮಾಗೋಡಿನಲ್ಲಿ ಜನಸಮಾವೇಶ ಜರುಗಿಸಿ ಅಲ್ಲಿಯ ಮಣ್ಣಿನ ಮಕ್ಕಳಿಗೆ ಅಭಯ ವಚನ ನೀಡಿದರು. ಬೇಡ್ತಿ ಆಣೆಕಟ್ಟಿನ ವಿರುದ್ಧ ಮಾತ್ರವಲ್ಲದೇ ಪಶ್ಚಿಮ ಘಟ್ಟದ ಉಳಿವಿಗೆ ಸ್ವಾಮೀಜಿ ಬೆಂಬಲಿಸಿ ಪರಿಸರ ನಾಶದ ವಿರುದ್ಧ ನಿರಂತರ ಜನ ಜಾಗೃತಿ ಮೂಡಿಸುತ್ತಿದ್ದಾರೆ.ಕೈಗಾ ಅಣುಸ್ಥಾವರವನ್ನು ಸರಕಾರ ಕೈಗೆತ್ತಿಕೊಂಡಾಗ ಅಲ್ಲಿಯ ಸತ್ಯಾಗ್ರಹಿಗಳಿಗೆ ಬೆಂಬಲ ನೀಡಿ ಜನ ಹಾಗೂ ವನ್ಯಜೀವಿಸಂರಕ್ಷಣೆ ವಿದ್ಯುತ್ತಿಗಿಂತ ಮುಖ್ಯವಾದುದೆಂದು ಉತ್ತೇಜಿಸಿದರು. ಹಾಗೂ ಜಿಲ್ಲೆಯ ವನಸಂಪತ್ತನ್ನು ಅಭಿವೃದ್ಧಿಪಡಿಸುವ ಬಗೆಗೆ ಸ್ವಾಮೀಜಿಯವರು ಸ್ಫೂರ್ತಿ ತೊಂಬಿದ್ದಾರೆ. ಕಾಳಿ ಕೊಳ್ಳ ಆಣೆಕಟ್ಟನ್ನು ದಾಂಡೇಲಿ ಹತ್ತಿರ ನಿರ್ಮಿಸಿ ಮುಗ್ಧ ಕುಣಬಿ ಜನಾಂಗಕ್ಕೆ ವನನಾಶಕ್ಕೆ ಕಾರಣವಾಗುವಂತೆ ಮಾಡುವ ಯೋಜನೆಯ ವಿರುದ್ಧ ಶ್ರೀ ಸ್ವರ್ಣವಲ್ಲೀ ಮಠದ ಶ್ರೀಗಳು ವಿರೋಧಿಸಿದ್ದನ್ನು ಇಲ್ಲಿ ಉಲ್ಲೇಖಿಸ ಬೇಕು. ಉತ್ತರಕನ್ನಡಜಿಲ್ಲೆಯ ಪರಿಸರ ಸಂರಕ್ಷಣೆಗೆ ಸಂಬಧಿಸಿದಂತೆ ವಿಚಾರ ಸಂಕಿರಣ ಜರುಗಿಸಿ ವಿಜ್ಞಾನಿಗಳನ್ನು ಪರಿಸರ ತಜ್ಞರನ್ನೂ ಬರಮಾಡಿಕೊಂಡು ಅವರೊಡನೆ ಸಂವಾದ ನಡೆಸಿದ ಶ್ರೀಗಳು ಕೇಂದ್ರಸರಕಾರದ ಪರಿಸರ ಸಚಿವರೊಡನೆಯೂ ಪರಿಸರ ನಾಶದ ವಿರುದ್ಧ ತಿಳಿ ಹೇಳಿ ಇಂತಹ ಯೋಜನೆಗಳನ್ನು ಕೈಬಿಡುವಂತೆ ಮಾಡಿದ್ದಾರೆ. ಹೀಗೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸಲು ಜನಾಂದೋಲನ ರೂಪಿಸಿ ಅದ್ವಿತೀಯ ಕಾರ್ಯ ಮಾಡಿದ್ದಾರೆ. ಶ್ರೀ ಸ್ವರ್ಣವಲ್ಲೀ ಶ್ರೀಗಳು ಈ ಅಹಿಂಸಾತ್ಮಕ ಹೋರಾಟ ಮಾಡದಿದ್ದರೆ ಬೆಲೆಬಾಳುವ ಅಡಿಕೆ ತೋಟ , ವನಸಿರಿ, ವನ್ಯಜೀವಿಗಳು ಮುಳುಗಡೆಯಾಗಿ ಉತ್ತರಕನ್ನಡ ಜಿಲ್ಲೆ ಬರಡಾಗುತ್ತಿತ್ತು. ರಾಷ್ಟ್ರದಲ್ಲೇ ಅಪೂರ್ವಾದ ಪರಿಸರ ಹೋರಾಟವನ್ನು ಕೈಗೊಂಡ ಶ್ರೀ ಸ್ವರ್ಣವಲ್ಲೀ ಮಠದ ಸ್ವಾಮಿಗಳು “ಹಸಿರುಸ್ವಾಮಿ” ಎಂಬ ಹೆಗ್ಗಳಿಕೆಗೆ ಪಾತ್ರರಾದರು.ರಾಷ್ಟ್ರವ್ಯಾಪಿ ಸುದ್ದಿಯಾದ ಸ್ವಾಮಿಗಳು ದೊಡ್ಡ ಜನಾಂದೋಲನದ ರೂವಾರಿಗಳಾದರು.
Unconditional Love for Environment
ಅದಮ್ಯ ಪರಿಸರ ಪ್ರೇಮ
ಒಂದು ಮಹಾಸಂಸ್ಥಾನದ ಪೀಠಾಧಿಪತಿಗಳಿಗೆ ಜಪ-ತಪನುಷ್ಠಾನ, ದೇವತಾರಾಧನೆ, ಧರ್ಮ ರಕ್ಷಣೆ ಹಾಗೂ ಧರ್ಮ ಜಾಗೃತಿ ಇವು ಕರ್ತವ್ಯಗಳಾಗಿವೆ. ಇವುಗಳ ಜೊತೆ ಜೊತೆಗೆ ಸಾಮಾಜಿಕ ಸ್ಪಂದನೆಯು ಯತಿವರೇಣ್ಯರ ಕ್ರಿಯಾಶೀಲತೆ ಮತ್ತು ಶಿಷ್ಯಪರ ಕಾಳಜಿಯ ದ್ಯೋತಕವಾಗುತ್ತದೆ. ಉತ್ತರಕನ್ನಡ ಜಿಲ್ಲೆ ಸಹ್ಯಾದ್ರಿ ಪರ್ವತ ಶ್ರೇಣಿಗಳು, ಬೇಡ್ತಿ- ಆಘನಾಶಿನಿಯಂಥ ನದಿಗಳು ಇರುವ ಸಂಪದ್ಭರಿತ ಅರಣ್ಯ ಜಿಲ್ಲೆ. ಈ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಜಲ ವಿದ್ಯುತ್ ಉತ್ಪಾದಿಸುವ ಪರಿಸರ ಮಾರಕ ಯೋಜನೆಯನ್ನು ಸರಕಾರ 1990 ರ ದಶಕದಲ್ಲಿ ಕೈಗೆತ್ತಿಕೊಂಡಿತ್ತು. ಜಿಲ್ಲೆಯ ಜನರು ತಮ್ಮ ಅಮೂಲ್ಯ ಬೇಸಾಯ ಕ್ಷೇತ್ರಗಳು ಮುಳುಗಡೆಯಾಗಿ ಮನೆ ಮಾರು ಕಳೆದುಕೊಂಡು ವಲಸೆ ಹೋಗ ಬೇಕಾದ ದುರಂತ ಸ್ಥಿತಿ ಎದುರಿಸುತ್ತಿದ್ದರು. ಸಂಪದ್ಭರಿತ ಕಾಡು, ಪ್ರಾಣಿ-ಪಕ್ಷಿಗಳು ಮುಳುಗುವ ಅಪಾಯದಲ್ಲಿದ್ದವು. ಯಾವ ರಾಜಕೀಯ ಧುರೀಣರೂ ಈ ದುರಂತ ತಪ್ಪಿಸುವ ಸ್ಥಿತಿಯಲ್ಲಿರಲಿಲ್ಲ. ಜನರ ಮತ್ತು ಪರಿಸರದ ಈ ಕರುಣಾಜನಕ ಸ್ಥಿತಿಯನ್ನು ಶ್ರೀಗಳವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಜನ ಸಮೂಹದ ನೇತೃತ್ವ ವಹಿಸುವ ವಯಸ್ಸು ಶ್ರೀಗಳವರದ್ದಾಗಿರಲಿಲ್ಲ. ಇನ್ನೂ 25ರ ತಾರುಣ್ಯ, ಪರಿಸರ ರಕ್ಷಣೆಯ ದಿವ್ಯ ಸಂಕಲ್ಪದೊಂದಿಗೆ ದಂಡ-ಕಮಂಡಲ ಸಹಿತ ಕಾವಿಧಾರಿ ಯತಿವರೇಣ್ಯರು ದಿನಾಂಕ 14.9.1992 ರಂದು ಬೇಡ್ತಿ ಯೋಜನೆ ಸ್ಥಗಿತಗೊಳಿಸ ಬೇಕೆನ್ನುವ ಘೋಷಣೆಯೊಂದಿಗೆ ಐತಿಹಾಸಿಕ “ಬೇಡ್ತಿ ಪಾದಯಾತ್ರೆ” ಪ್ರಾರಂಭಿಸಿದರು. ಸತತ ಐದು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಮಾಗೋಡಿನ ಬೇಡ್ತಿ (ಪಾತ್ರದತ್ತ) ಈ ಪಾದಯಾತ್ರೆ ಸಾಗಿತ್ತು. ಶ್ರೀಗಳವರನ್ನು ಹಿಂಬಾಲಿಸಿ ಜನಸಾಗರವೇ ಹೊರಟಿತ್ತು. ದಿನದಿಂದ ದಿನಕ್ಕೆ ಜನ ಪ್ರವಾಹ ಉಕ್ಕುತಿತ್ತು. ದಿನಾಂಕ 18.9.1992ರಂದು ಮಾಗೋಡಿನ ರುದ್ರ-ರಮಣೀಯ ಅರಣ್ಯದಲ್ಲಿ 30 ಸಾವಿರಕ್ಕೂ ಅಧಿಕ ಜನರು ಹಸಿವು ತೃಷೆಯ ಪರಿವೆ ಇಲ್ಲದೆ ಶ್ರೀಗಳವರ ಸಂದೇಶಕ್ಕಾಗಿ ಕಾಯುತ್ತಿದ್ದರು. ಬೇಡ್ತಿ ಯೋಜನೆ ತಡೆದು ಅರಣ್ಯ ನಾಶ ನಿಲ್ಲಿಸಲೇ ಬೇಕೆಂಬ ಕಠೋರ ನಿಲುವು ತಳೆದ ಸ್ವಾಮೀಜಿಯವರು “ನಾವು ಅಹಿಂಸಾತ್ಮಕ ಕುರುಕ್ಷೇತ್ರಕ್ಕೆ ಕಾಲಿಡುತ್ತಿದ್ದೇವೆ. ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ” ಎಂದು ಘೋಷಿಸಿದಾಗ ಜನಸ್ತೋಮದಲ್ಲಿ ಭರವಸೆಯ ಸುವೃಷ್ಟಿಯಾದಂತೆಆಯಿತು. ಪರಿಸರ ರಕ್ಷಣೆಯ ಘೋಷಣೆಗಳು ಭೋರ್ಗರೆದವು. ಮಾಧ್ಯಮಗಳು ಸ್ವಾಮೀಜಿಯವರ ನೇತೃತ್ವದಲ್ಲಿ ಈ ಜನಾಂದೋಲನದ ಸಂದೇಶವನ್ನು ರಾಜ್ಯ ಹಾಗೂ ರಾಷ್ಟ್ರದ ಮೂಲೆ ಮೂಲೆಗೆ ತಲುಪಿಸಿದವು. ಎಲ್ಲ ಪ್ರಮುಖ ಪತ್ರಿಕೆಗಳು ಈ ಪರಿಸರ ಆಂದೋಲನವನ್ನು ಶ್ಲಾಘಿಸಿದರು. ನೇತೃತ್ವವಹಿಸಿದ ಈ ಯತಿವರೇಣ್ಯರನ್ನು “ಹಸಿರು ಸ್ವಾಮೀಜಿ” ಎಂದು ಸಂಬೋಧಿಸಿ ಗೌರವಿಸಿದರು. ಇವೆಲ್ಲವನ್ನು ಗಮನಿಸಿ ನಾಡಿನ ಹಲವು ಪರಿಸರ ವಿಜ್ಞಾನಿಗಳು ಪರಿಸರವಾದಿಗಳು ಬೇಡ್ತಿಯೋಜನೆ ಅವೈಜ್ಞಾನಿಕ ಎಂದು ಸಾಬೀತುಪಡಿಸಿದರು. ಕೊನೆಗೂ ಸರಕಾರ ಬೇಡ್ತಿಕೊಳ್ಳ ರಕ್ಷಣೆಯ ಕೂಗಿಗೆ ಮಣಿದು ಯೋಜನೆಯನ್ನು ಸ್ಥಗಿತಗೊಳಿಸಿತು. ಇದೇ ರೀತಿ 1996-97 ರಲ್ಲಿ ಚೆಲ್ವರಾಜ್ ಯೋಜನೆಯನ್ನು ಬೇಡ್ತಿ ಗಂಗಾವಳಿ ನದಿಗೆ ಜಾರಿಗೊಳಿಸಲು ಸರಕಾರದ ಚಿಂತನೆ ನಡೆದಾಗ ದಿನಾಂಕ 28.10.1997 ರಂದು ಅಂಕೋಲಾ ತಾಲೂಕು ಅಗಸೂರಿನಲ್ಲಿ ಶ್ರೀಗಳವರ ದಿವ್ಯಸಾನಿಧ್ಯ ದಲ್ಲಿ ಸಭೆ ಸೇರಿ ಯೋಜನೆ ವಿರೋಧಿಸಲಾಯಿತು. ಶ್ರೀಗಳವರ ನೆಲ ಜಲ ರಕ್ಷಣೆಯ ಕರೆಗೆ ಸರಕಾರ ಮಣಿಯಬೇಕಾಯಿತು. 1999ರಲ್ಲಿ ಬೇಡ್ತಿ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ತಟ್ಟಿಹಳ್ಳ ಜಲಾಶಯಕ್ಕೆ ನೀರು ಕೊಂಡೊಯ್ಯುವ ಕಿರುವತ್ತಿ ಯೋಜನೆ ಪ್ರಸ್ತಾಪಿಸಲ್ಪಟ್ಟಿತು. ಅಲ್ಲಿಯ ಅರಣ್ಯ ವಾಸಿಗಳಾದ ಗೌಳಿ, ಸಿದ್ದಿ, ಕುಣುಬಿ ಜನಾಂಗದವರಿಗೆ ಒದಗುವ ಸಂಕಟ ಮತ್ತು ಪರಿಸರ ನಾಶ ತಪ್ಪಿಸಲು ಶ್ರೀಗಳವರು ಮಾರ್ಗದರ್ಶನ ನೀಡಿದರು. 2000ನೇ ನವೆಂಬರ 14ರಂದು ಮಾಗೋಡಿನ ಕರಡಿಪಾಲ ಶಾಲಾ ಆವರಣದಲ್ಲಿ ಬೇಡ್ತಿಕೊಳ್ಳ ರಕ್ಷಣೆಯ 2ನೇ ಜನಸಮಾವೇಶ ಶ್ರೀಗಳವರ ನೇತೃತ್ವದಲ್ಲಿ ಜರುಗಿತು. ಅಘನಾಶಿನಿ ಕಣಿವೆಯ ರಕ್ಷಣೆಗೂ ಶ್ರೀಗಳವರು ಹೇರೂರಿನಲ್ಲಿ ಸೇರಿದ ಸಾವಿರಾರು ಮಣ್ಣಿನ ಮಕ್ಕಳಿಗೆ ಶಕ್ತಿ ತುಂಬಿದರು. 1997-98 ರಲ್ಲಿ ಪಶ್ಚಿಮ ಘಟ್ಟದಲ್ಲಿ ಬೃಹತ ಗಣಿಗಾರಿಕೆಗಳು ಬೇಡ ಎನ್ನುವ ಚಳವಳಿಯನ್ನು ಸ್ವಾಮಿಗಳು ಬೆಂಬಲಿಸಿದರು. ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳ ಸಮಾವೇಶ ಶ್ರೀ ಸ್ವರ್ಣವಲ್ಲೀಯಲ್ಲಿ ಏರ್ಪಟ್ಟಾಗ ದಿನಾಂಕ 5.10.1998 ರಂದು ಅಂದಿನ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಿ ಶ್ರೀ ಸುರೇಶ ಪ್ರಭು ಪಾಲ್ಗೊಂಡಿದ್ದರು. ಕೈಗಾ ಅಣುಸ್ಥಾವರ ವಿರೋಧಿ ಹೋರಾಟಗಾರರಿಗೆ ಶ್ರೀಗಳವರು ಬೆಂಬಲ ಸೂಚಿಸಿದ್ದರು. ಜಿಲ್ಲೆಯ ವಿವಿಧೆಡೆಗಳಲ್ಲಿ ಪರಿಸರ ರಕ್ಷಣೆ ಕುರಿತು ಉಪನ್ಯಾಸಗಳು, ದೇವರಕಾಡು ರಕ್ಷಣೆ, ಜೌಷಧ ವನ ನಿರ್ಮಾಣ ಇವುಗಳ ಕಡೆ ಶ್ರೀಗಳವರು ಗಮನಹರಿಸುತ್ತಿದ್ದಾರೆ. ಅರಣ್ಯ ಇಲಾಖೆ ಆಶ್ರಯದಲ್ಲಿ ಶ್ರೀ ಸ್ವರ್ಣವಲ್ಲೀಯಲ್ಲಿ ಸಸ್ಯಲೋಕ ವನ ನಿರ್ಮಿಸಲಾಗಿದೆ. ಪ್ರತಿವರ್ಷ ಚಾತುರ್ಮಾಸ್ಯ ಸಂದರ್ಭದಲ್ಲಿ ಶಿಷ್ಯರಿಗೆ ಸಸಿ ವಿತರಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಶ್ರೀಗಳವರು ಕೈಗೊಂಡ ಅಮೋಘ ಕಾರ್ಯವನ್ನು ಪರಿಗಣಿಸಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯವರು 2011ನೇ ಸಾಲಿನ ಕರ್ನಾಟಕ ರಾಜ್ಯ “ಪರಿಸರ ಶ್ರೀ ಪ್ರಶಸ್ತಿ” ಯನ್ನು ಶ್ರೀಗಳವರಿಗೆ ನೀಡಿ ಗೌರವಿಸಿದ್ದಾರೆ. ದಿನಾಂಕ 3.7.2011 ರಂದು ಶ್ರೀ ಜೆ ಕೃಷ್ಣ ಪಾಲೇಮಾರ ಇವರು ಮುಖ್ಯಮಂತ್ರಿಗಳ ಪರವಾಗಿ ಈ ಪ್ರಶಸ್ತಿ ಪ್ರದಾನ ಮಾಡಿದರು.
Development Activities
ಆಡಳಿತಾತ್ಮಕ ಚಟುವಟಿಕೆಗಳು
ನೊಂದಾಯಿತ ನಿಬಂಧನೆಗಳ ಪ್ರಕಾರ ಒಂದು ಆಡಳಿತ ಮಂಡಳಿ ಇದ್ದು ಶ್ರೀಗಳವರು ಸರ್ವಾಧ್ಯಕ್ಷರಾಗಿರುತ್ತಾರೆ. ಆಡಳಿತ ಸುಗಮ ನಿರ್ವಹಣೆಗಾಗಿ ಕೃಷಿ ಉಪಸಮಿತಿ, ಅನ್ನಪ್ರಸಾದ ಉಪಸಮಿತಿ ಮತ್ತು ಧಾರ್ಮಿಕ ಉಪಸಮಿತಿಗಳನ್ನು ರಚಿಸಿಕೊಳ್ಳಲಾಗಿದೆ. ಶ್ರೀ ರಾಜರಾಜೇಶ್ವರಿ ಸ್ನಾತಕ ಸ್ನಾತಕೋತ್ತರ ವಿದ್ಯಾಸಂಸ್ಥೆ, ಶ್ರೀ ಲಲಿತಾಂಬ ನಿಧಿ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ , ಭಗವತ್ಪಾದ ಪ್ರಕಾಶನ, ಗ್ರಾಮಾಭ್ಯುದಯ ಇತ್ಯಾದಿ 20ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಸ್ಥಾಪಿಸಿ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಯಕ್ಷಗಾನ ಕಲೆಯ ಪೋಷಣೆಯ ಉದ್ದೇಶದಿಂದ ದಿನಾಂಕ 30.9.1996 ರಂದು ಯಕ್ಷಶಾಲ್ಮಾಲ ವಿಶ್ವಸ್ಥಮಂಡಲಿ ಸ್ಥಾಪಿಸಲಾಯಿತು. 1998 ನವೆಂಬರ ದಿನಾಂಕ 26,27 ಮತ್ತು 28ರಂದು ಶ್ರೀ ಮಠದಲ್ಲಿ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನ ಜರುಗಿತು ಈ ಸಂದರ್ಭದಲ್ಲಿ ಭಗವತ್ಪಾದ ಪ್ರಕಾಶನ ಸಂಸ್ಥೆ ಉದ್ಘಾಟಿಸಲಾಯಿತು. ಶ್ರೀ ಸ್ವರ್ಣವಲ್ಲೀ ಪ್ರಭಾ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಬಿಡುಗಡೆಗೊಳಿಸಲಾಯಿತು. 2001 ಎಪ್ರಿಲ್ ದಿನಾಂಕ 28ರಂದು ಒಂದು ಕೋಟಿರೂಪಾಯಿಗೂ ಅಧಿಕ ವೆಚ್ಚದ ವಿಶಾಲ ಭೋಜನ ಶಾಲೆ, ಭವ್ಯ ಸಭಾಂಗಣವಿರುವ “ಅಕ್ಷಯ ಭವನ” ಪ್ರಾರಂಭೋತ್ಸವವು ವೈದಿಕ ವಿಧಿಗಳೊಂದಿಗೆ ನಡೆಯಿತು. 2001 ಡಿಸೆಂಬರ ದಿನಾಂಕ 17 ರಂದು ಶಿರಸಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಮಠದ ಅಧೀನದ ಯೋಗಮಂದಿರ ಉದ್ಘಾಟನೆ ಹಾಗೂ ಶಂಕರಾಚಾರ್ಯಮೂರ್ತಿ ಪ್ರತಿಷ್ಠಾಪನೆ ಜರುಗಿತು. 2002 ಮಾರ್ಚ 23 ರಂದು “ಸುಧರ್ಮಾ ಸಭಾಭವನ” ಉದ್ಘಾಟಿಸಲಾಯಿತು. ಶ್ರೀಗಳವರ ಪೀಠಾರೋಹಣದ ದಶಮಾನೋತ್ಸವ ಆಚರಿಸಲಾಯಿತು. 2002 ಏಪ್ರಿಲ್ 29 ರಂದು ಕಡತೋಕದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಹಿಂದಿನ ಮೂರು ಯತಿಗಳ ಗುರುಮೂರ್ತಿ ಮನೆ, ಶ್ರೀ ಲಕ್ಷ್ಮೀ ನೃಸಿಂಹ ಗುಡಿ ಇರುವ ವಿಶ್ವವಂದ್ಯ ಸರಸ್ವತೀ ಮಠದ ನೂತನ ಕಟ್ಟಡವನ್ನು ಶ್ರೀಗಳವರು ಉದ್ಘಾಟಿಸಿದರು. ದಿನಾಂಕ 6.9.2002 ರಂದು ನೂತನ ಸಂಘಟನೆ “ಮಾತ್ರ ಮಂಡಳಿ” ಸ್ಥಾಪಿಸಲಾಯಿತು. 2002 ಡಿಸೆಂಬರ ದಿನಾಂಕ 7 ರಂದು ಶ್ರೀರಾಜರಾಜೇಶ್ವರೀ ಸ್ನಾತಕ ಸ್ನಾತಕೋತ್ತರ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಜರುಗಿತು. 2002 ಡಿಸೆಂಬರ 22 ರಂದು ಬೆಂಗಳೂರು ಚಿಕ್ಕ ಬೆಟ್ಟಹಳ್ಳಿಯ ಶ್ರೀ ಮಠದ ಸ್ವಂತ ನಿವೇಶನದಲ್ಲಿ “ಆಭ್ಯುದಯ” ವಸತಿಗೃಹ ನಿರ್ಮಾಣದ ಶಂಕುಸ್ಥಾಪನೆ ನಡೆಯಿತು. ಮತ್ತು ಈ ಕಟ್ಟಡದ ಉದ್ಘಾಟಾನೆಯು ದಿನಾಂಕ 21.5.2004 ರಂದು ನಡೆಯಿತು. 2006 ರಲ್ಲಿ ನಾಲ್ಕು ಜನ ಅಧ್ಯಾಪಕರಿಗೆ ಅನುಕೂಲವಾಗುವಂತೆ ಶ್ರೀ ಮಠದ ಆವರಣದಲ್ಲಿ ವಸತಿಗೃಹ ಸಮುಚ್ಚಯ ನಿರ್ಮಿಸಲಾಯಿತು. ದೇಶಿ ಗೋತಳಿ ಸಂವರ್ಧನೆಗಾಗಿ ಪ್ರಸ್ತುತ ಗೋಶಾಲೆಯ ಸನಿಹದಲ್ಲಿಯೇ ನೂತನವಾಗಿ ಪ್ರತ್ಯೇಕ ಗೋಶಾಲೆ ನಿರ್ಮಿಸಲಾಗಿದೆ. ದಿನಾಂಕ 9.10.2008 ವಿದ್ಯಾದಶಮಿಯಂದು ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠ ಶಾಲೆಯ ನೂತನ ಕಟ್ಟಡ ಶಿಲಾನ್ಯಾಸ ಮಾಡಿದರು. ದಿನಾಂಕ 5.12.2009 ರಂದು ಶ್ರೀ ಮಠದ ಚಂದ್ರಶಾಲೆಯ ಪುನರ್ನಿರ್ಮಾಣಕ್ಕಾಗಿ ನೂತನ ಕಟ್ಟಡ ಶಿಲಾನ್ಯಾಸ ನೆರವೇರಿಸಿದರು. ಕೇಂದ್ರೀಯ ಪಠ್ಯಕ್ರಮದ ಶ್ರೀನಿಕೇತನ ಶಾಲೆ ನಡೆಸಲು 8 ಎಕರೆ ನಿವೇಶನ ಖರೀದಿಸಿ ಕಟ್ಟಡಕಾರ್ಯ ಪ್ರಾರಂಭಿಸಲಾಯಿತು. ಶ್ರೀ ಮಠದ ಸಂಕೀರ್ಣಕ್ಕೆ ಸಮರ್ಪಕ ವಿದ್ಯುತ ಪೂರೈಸಬಲ್ಲ ಅಧಿಕ ಸಾಮರ್ಥ್ಯ ಬೃಹತ ಡಿಸೈಲ್ ಜನರೇಟರ್ ಅಳವಡಿಸಲಾಗಿದೆ. ಶ್ರೀಮಠದ ದಕ್ಷಿಣ ಭಾಗದ ಕಟ್ಟಡ ” ಅಂಬಾಭವನ ” ಉದ್ಘಾಟನೆಯ ದಿನಾಂಕ 17.12.2012 ರಂದು ನೆರವೇರಿತು.
Educational Programmes
ಶೈಕ್ಷಣಿಕ ಕಾರ್ಯಕ್ರಮಗಳು
ವಿದ್ಯಾದಾನದಿಂದ ಸಮಾಜ ಸುಧಾರಣೆ ಸಾಧ್ಯ ಮತ್ತು ಸಾಮಾಜಿಕ ಉನ್ನತಿ ಸಾಧ್ಯ ಎನ್ನುವದನ್ನು ಪರಿಗಣಿಸಿ ಶ್ರೀಗಳವರು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತಿದ್ದಾರೆ. ಹಿಂದಿನಿಂದ ನಡೆಸಿಕೊಂಡು ಬಂದ ವೇದ ಮತ್ತು ಸಂಸ್ಕೃತ ಬೋಧನೆ ಮಾಡುವ ಶ್ರೀ ರಾಜರಾಜೇಶ್ವರೀ ಸ್ನಾತಕ ಸ್ನಾತಕೋತ್ತರ ವಿದ್ಯಾಕೇಂದ್ರ, ಆಧುನಿಕ ಶಿಕ್ಷಣ ನೀಡುವ ಶ್ರೀದೇವಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹುಲೇಕಲ್, ಕೇಂದ್ರೀಯ ಪಠ್ಯಕ್ರಮದಡಿಯಲ್ಲಿ ಆಂಗ್ಲ ಮಾಧ್ಯಮ ಶ್ರೀನಿಕೇತನ ಶಾಲೆ ಇಸಳೂರು, ವೇದ ಮತ್ತು ಸಂಸ್ಕೃತ ಶಿಕ್ಷಣ ನೀಡುವ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆ ಯಲ್ಲಾಪುರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡುವ ಶ್ರೀ ಸ್ವರ್ಣವಲ್ಲೀ ಶಿಕ್ಷಣ ಸಮಿತಿ, ಕಲ್ಲೇಶ್ವರ ಇವುಗಳನ್ನು ನಡೆಸುತ್ತಿದ್ದಾರೆ. ಬೇಸಿಗೆ ರಜೆಯಲ್ಲಿ ಗಂಡು ಮಕ್ಕಳಿಗಾಗಿ “ಜೀವನ ಶಿಕ್ಷಣ ಅಧ್ಯಯನ ಶಿಬಿರ”, ಹೆಣ್ಣು ಮಕ್ಕಳಿಗಾಗಿ ” ಕುಮಾರಿ ಸಂಸ್ಕೃತಿ ಶಿಬಿರ ” ಇವುಗಳನ್ನು ನಡೆಸುತ್ತಿದ್ದಾರೆ. ಆಯ್ದ ಪ್ರೌಢಶಾಲೆಗಳಲ್ಲಿ ಮತ್ತು ಪದವಿಪೂರ್ವ ಮಹಾವಿದ್ಯಾಲಯಗಳಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಶಿಬಿರಗಳನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದಾರೆ. ಈ ಗುರುತರ ಕಾರ್ಯವನ್ನು ಪರಿಗಣಿಸಿ ಭಾರತೀಯ ಮನೋವೈದ್ಯರ ಸಂಘದವರು ದಿನಾಂಕ 25.8.2007 ರಂದು ಶ್ರೀಗಳವರನ್ನು ಪ್ರತಿಷ್ಠಿತ “ಸ್ಪಂದನ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವೈದಿಕ ವಾಜ್ಮಯ ಅಧ್ಯಯನಕ್ಕಾಗಿ ಪ್ರತಿವರ್ಷ ಶಾಸ್ತ್ರಗೋಷ್ಠಿ, ವೈದಿಕ ಚಿಂತನಗೋಷ್ಠಿ ಇವುಗಳನ್ನು ನಡೆಸಿಕೊಂಡು ಬಂದಿದ್ದಾರೆ. ದಿನಾಂಕ 9.1.1992 ರಲ್ಲಿ ಪ್ರಥಮ ಶಾಸ್ತ್ರಗೋಷ್ಠಿ ನಡೆಯಿತು. 2000ನೇ ಮೇ ದಿನಾಂಕ 2 ರಿಂದ 4 ರ ವರೆಗೆ ಶ್ರೀ ಮಠದಲ್ಲಿ ಆದಿ ಶಂಕರಾಚಾರ್ಯರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಶ್ರೀ ಸ್ವರ್ಣವಲ್ಲಿಯಲ್ಲಿ ಪ್ರತಿವರ್ಷ 5 ದಿನಗಳಕಾಲ ನಡೆಯುವ ಶಾಸ್ತ್ರಗೋಷ್ಠಿಯಲ್ಲಿ ದೇಶದ ನಾನಾ ಕಡೆಗಳಿಂದ ಸಂಸ್ಕೃತ ವಿದ್ವಾಂಸರು ಪಾಲ್ಗೊಂಡು ಪ್ರೌಢ ಪ್ರಭಂದಗಳನ್ನು ಮಂಡಿಸುತ್ತಾರೆ. ವೇದಾಂತ, ಧರ್ಮ-ಶಾಸ್ತ್ರ, ನ್ಯಾಯ, ಜ್ಯೋತಿಷ್ಯ, ವ್ಯಾಕರಣ, ಅಲಂಕಾರ, ಶ್ರೌತ ಇತ್ಯಾದಿ ವಿಷಯಗಳ ಕುರಿತು ವಿದ್ವತ್ಪೂರ್ಣ ಚರ್ಚೆ ನಡೆಯುವುದು ಈ ಗೋಷ್ಠಿಯ ವೈಶಿಷ್ಟ್ಯ, ಇವು ಶ್ರೀಗಳವರ ಸಾನ್ನಿಧ್ಯದಲ್ಲಿ ನಡೆಯುತ್ತವೆ. 1997 ಅಕ್ಟೋಬರ ದಿನಾಂಕ 24,25 ಮತ್ತು 26 ರಂದು ಶ್ರೀಮಠದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ನೆರವೇರಿತು. 2006 ಅಕ್ಟೋಬರ ದಿನಾಂಕ 27,28 ಮತ್ತು 29 ರಂದು ನಮ್ಮ ಪರಂಪರೆಯಲ್ಲಿ “ವೈಜ್ಞಾನಿಕತೆ” ಎನ್ನುವ ವಿಷಯದ ಕುರಿತು 3 ದಿನಗಳ ವಿಚಾರ ಸಂಕಿರಣ ನಡೆಯಿತು. 2007 ಸಪ್ಟೆಂಬರ ದಿನಾಂಕ 10,11 ಮತ್ತು 12 ರಂದು ಅಖೀಲ ಕರ್ನಾಟಕ ವೇದ ಸಮ್ಮೇಳನ ನಡೆಸಲಾಯಿತು. ಪಂಚಾಂಗ ಪರಿಷ್ಕರಣೆ ಉದ್ದೇಶದಿಂದ ಜ್ಯೋತಿಷ್ಯ ಸಮ್ಮೇಳನ ನಡೆಸಲಾಗುತ್ತಿದೆ. ಶಿಕ್ಷಕರಿಗಾಗಿ ಪುನಶ್ಚೇತನ ಕಾರ್ಯಾಗಾರ, ಯಕ್ಷಗಾನ ಕಲೆಯ ಅಧ್ಯಯನ ಹಾಗೂ ತರಬೇತಿ ಉದ್ದೇಶದಿಂದ ಪ್ರತಿವರ್ಷ ಶ್ರೀಗಳವರ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಮೂರು ದಿನಗಳ ಯಕ್ಷಗಾನ ತರಬೇತಿ ಶಿಬಿರಗಳನ್ನು ಕೈಗೊಳ್ಳುತ್ತಾ ಬರಲಾಗಿದೆ.
Social Activities & Programmes
ಸಾಮಾಜಿಕ ಚಟುವಟಿಕೆಗಳು
ಶಿಷ್ಯ ಕಲ್ಯಾಣ ಮತ್ತು ಸಾತ್ವಿಕ ಸಮಾಜ ನಿರ್ಮಾಣದ ಉದ್ದೇಶದಿಂದ ಶ್ರೀಗಳವರು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ 1991ರಲ್ಲಿ “ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ” ಎನ್ನುವ ಅಂಗಸಂಸ್ಥೆ ಸ್ಥಾಪಿಸಿ ನೊಂದಾಯಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಅರ್ಹವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಶ್ರೀ ಮಠದ ಅಂಗಸಂಸ್ಥೆಯಾಗಿ “ಗ್ರಾಮಾಭ್ಯುದಯ” ಸಂಸ್ಥೆಯನ್ನು ಸ್ಥಾಪಿಸಿ ಬಡವರು, ಕಾರ್ಮಿಕವರ್ಗ, ಹಿಂದುಳಿದ ಜನಾಂಗದವರು, ಇವರ ಕಲ್ಯಾಣಕ್ಕಾಗಿ ಜಾಗೃತ ಸಮಾವೇಶ, ಆರೋಗ್ಯ ಶಿಬಿರ, ಕಡುಬಡವರಿಗೆ ಆರೋಗ್ಯ ಚಿಕಿತ್ಸೆಗೆ ಧನ ಸಹಾಯ ಕೈಗೊಳ್ಳುತ್ತಿದ್ದಾರೆ. “ಸಂವಿಧಾನದಲ್ಲಿ ಆಧ್ಯಾತ್ಮಿಕತೆಯ ಅಳವಡಿಕೆ” ಎನ್ನುವ ವಿಷಯದ ಕುರಿತು ರಾಷ್ಟ್ರೀಯ ಚಿಂತನ ಗೋಷ್ಠಿಯನ್ನು ಶ್ರೀಗಳವರು ಪ್ರಪ್ರಥಮವಾಗಿ ಬೆಂಗಳೂರು ಭಾರತೀಯ ವಿದ್ಯಾಭವನದಲ್ಲಿ ದಿನಾಂಕ 31.12.2000 ದಂದು ಆಯೋಜಿಸಿದರು. 2003ನೇ ಪೆಬ್ರವರಿ ದಿನಾಂಕ 19ರಂದು ನದಿ ತಿರವು ಯೋಜನೆ ಪ್ರತಿಭಟನಾರ್ಥ ಶಿವಮೊಗ್ಗದಲ್ಲಿ ಜರುಗಿದ ಪಶ್ಚಿಮಘಟ್ಟ ಉಳಿಸಿ ಆಂದೋಲನ ಸಭೆಯಲ್ಲಿ ಶ್ರೀಗಳವರು ನೇತೃತ್ವವಹಿಸಿದ್ದರು. 2003 ಅಕ್ಟೋಬರ ದಿನಾಂಕ 16ರಿಂದ 19 ರ ವರೆಗೆ ಅಖಿಲಭಾರತ ವಿಧ್ಯಾರ್ಥಿ ಪರಿಷತ ವತಿಯಿಂದ ಶ್ರೀಮಠದಲ್ಲಿ ಶ್ರೀಗಳವರ ಸಾನಿಧ್ಯದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಹೆಣ್ಣು ಭ್ರೂಣ ಹತ್ಯಾ ನಿಷೇಧ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಬೇರೆ ಬೇರೆ ಸ್ಥಳಗಳಲ್ಲಿ “ಧನ್ಯೋಗೃಹಸ್ಥಾಶ್ರಮ” ಶಿಬಿರಗಳನ್ನು ನೂತನ ದಂಪತಿಗಳನ್ನುದ್ದೇಶಿಸಿ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿದ್ದ ಹಿಂದೂ ದೇವಾಲಯಗಳ ಧಾರ್ಮಿಕ ದತ್ತಿ ಕಾಯಿದೆಯಲ್ಲಿಯ ದೋಷಗಳನ್ನು ರದ್ದು ಗೊಳಿಸಬೇಕೆಂದು ಶ್ರೀಗಳವರ ನೇತೃತ್ವದಲ್ಲಿ 3-3-2004 ರಂದು ಹಿಂದೂ ದೇವಾಲಯಗಳ ಮಹಾಮಂಡಳದ ಬೃಹತ ಸಮಾವೇಶ ನಡೆಸಿ ಪ್ರತಿಭಟಿಸಲಾಗಿತ್ತು. ಕಾಯಿದೆ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯವು ಈ ಕಾಯಿದೆಯನ್ನು ರದ್ದುಗೊಳಿಸಿರುವುದು ಸ್ವಾಮಿಗಳವರ ಆಶಯಕ್ಕೆ ಸಂದ ಜಯವಾಗಿದೆ. 31.08.2005 ರಂದು ಶ್ರೀಮಠದಲ್ಲಿ ರಾಜ್ಯಮಟ್ಟದ ಜನಪದ ವೈದ್ಯರ ಸಮಾವೇಶ ಹಾಗೂ ವಿಚಾರ ಸಂಕಿರಣ ನಡೆಯಿತು. ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮತ್ತು ಅಭಿವ್ರದ್ಥಿ ಉದ್ದೇಶದಿಂದ “ಜಾಗೃತ ವೇದಿಕೆ” ಎನ್ನುವ ಅಂಗ ಸಂಸ್ಥೆ ಸ್ಥಾಪಿಸಿಕೊಂಡು ಸುತ್ತ ಮುತ್ತಲಿನ ದೇವಾಲಯಗಳ ಅಭಿವ್ರದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಸಾಲಭಾದೆಯಿಂದ ಬಳಲುತ್ತಿರುವ ರೈತರಿಗೆ ಪರಿಹಾರ ಒದಗಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಲುವಾಗಿ ದಿನಾಂಕ 20.3.2011 ರಂದು ಶಿರಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ರೈತ ಸಮಾವೇಶವನ್ನು ಶ್ರೀಗಳವರು ಆಯೋಜಿಸಿದ್ದರು. 50 ಸಾವಿರಕ್ಕೂ ಅಧಿಕ ಸಂಖ್ಯೆಯ ರೈತರು ಪಾಲ್ಗೊಂಡು ಅಹವಾಲು ಸಲ್ಲಿಸಿದರು. ಕೃಷಿ ಕ್ಷೇತ್ರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2009ರಿಂದ ಕೃಷಿಜಯಂತಿ ಆಚರಿಸಲಾಗುತ್ತಿದೆ. ಈ ದಿಶೆಯಲ್ಲಿ “ಕೃಷಿ ಪ್ರತಿಷ್ಠಾನ” ಎನ್ನುವ ಅಂಗಸಂಸ್ಥೆ ಸ್ಥಾಪಿಸಲಾಗಿದೆ. 2013 ಏಪ್ರಿಲ್ 30ರಂದು ಮುಂಡಗೋಡ ಕರಡೊಳ್ಳಿಯಲ್ಲಿ ಶ್ರೀಮಠದ ಅಂಗಸಂಸ್ಥೆ ಗೋವರ್ಧನ ಟ್ರಸ್ಟ್ ಆಶ್ರಯದಲ್ಲಿ ನಿರ್ಮಿಸಿದ ಗೋಶಾಲೆ ಉದ್ಘಾಟಿಸಿದರು.
Cultural Activities
ಸಾಂಸ್ಕೃತಿಕ ಚಟುವಟಿಕೆಗಳು
ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರಲ್ಲಿ ಉತ್ತಮ ಸಾಮಾಜಿಕ ಸಾಮರಸ್ಯ ಸ್ಥಾಪಿಸಿ ಮೌಲ್ಯಯುತ ಸಂಸ್ಕಾರಗಳನ್ನು ಬೆಳೆಸಬಹುದು ಎನ್ನುವುದು ಶ್ರೀಗಳವರ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದ ಸಂಸ್ಕಾರ ವೃದ್ಧಿಸಬಲ್ಲ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಶ್ರೀಗಳವರು ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಜಿಲ್ಲಾಮಟ್ಟದ ಅಂತರ ಕಾಲೇಜು ಚರ್ಚಾಸ್ಪರ್ಧೆಗಳನ್ನು ನಡೆಸಿದ್ದಾರೆ. ಪ್ರತಿವರ್ಷ ಶರನ್ನವರಾತ್ರಿ ಉತ್ಸವದಲ್ಲಿ ಶಾಸ್ತ್ರೀಯ ಸಂಗೀತ, ಲ ಘುಸಂಗೀತ, ಭಜನೆ, ಕೀರ್ತನೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಯಕ್ಷಗಾನ ಕಲೆಯ ಪೋಷಣೆಗಾಗಿ ದಿನಾಂಕ 30.09.1996 ರಂದು ಶ್ರೀಮಠದ ಇನ್ನೊಂದು ಅಂಗಸಂಸ್ಥೆಯಾಗಿ ಯಕ್ಷಶಾಲ್ಮಲಾ ವಿಶ್ವಸ್ಥ ಮಂಡಳಿಯನ್ನು ಸ್ಥಾಪಿಸಲಾಯಿತು. ಈ ವಿಶ್ವಸ್ಥ ಮಂಡಳಿ ನೇತೃತ್ವದಲ್ಲಿ ತಾಳಮದ್ದಳೆ, ಯಕ್ಷಗಾನ, ಬಯಲಾಟ, ಮತ್ತು ತರಬೇತಿ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತಿವೆ. ಡಾ|| ಆರ್ ಗಣೇಶ್ ಅರವಿಂದ ಅಷ್ಟಾವಧಾನ ಕಾರ್ಯಕ್ರಮಗಳು ನಡೆದಿವೆ. ಕೃಷಿಜಯಂತಿ ಸಂದರ್ಭದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ನಡೆಯುತ್ತವೆ. 1997 ನವೆಂಬರ ದಿನಾಂಕ 6 ರಿಂದ 12 ರ ವರೆಗೆ ಎಡ ನೀರು ಮಹಾಸಂಸ್ಥಾನದ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳವರ ನಿರ್ದೇಶನದಲ್ಲಿ ಯಕ್ಷಗಾನ ಸಪ್ತಾಹ ನೆರವೇರಿತು.
Travelling
ಪ್ರವಾಸ
ಪ್ರವಾಸ1994 ರ ಡಿಸೆಂಬರ 24 ರಿಂದ 1995 ಜನವರಿ 16 ರ ವರೆಗೆ ಕಂಚಿಪ್ರವಾಸ ಕೈಗೊಂಡರು. ದಿನಾಂಕ 14.12.1997 ರಿಂದ 29.1.1998 ರ ವರೆಗೆ ದಕ್ಷಿಣ ಭಾರತ ಯಾತ್ರೆ ಕೈಗೊಂಡರು. ದಿನಾಂಕ 20.10.1999 ರಿಂದ 9.12.1999 ರ ವರೆಗೆ ಉತ್ತರ ಭಾರತ ಪುಣ್ಯ ಕ್ಷೇತ್ರಗಳ ಯಾತ್ರೆ. ದಿನಾಂಕ 20.10.2002 ರಿಂದ 5.12.2002 ರ ವರೆಗೆ ಮುಂಬಯಿ ಪ್ರವಾಸ. ದಿನಾಂಕ 6.09.2001 ರಿಂದ 13.10.2001 ರ ವರೆಗೆ ಪಶ್ಚಿಮ ಭಾರತ ಯಾತ್ರೆ ಕೈಗೊಂಡರು. 2014ರ ಜನವರಿ 21 ರಿಂದ ಫೆಬ್ರವರಿ 11 ರ ವರೆಗೆ ಪುನಃ ಉತ್ತರ ಭಾರತ ಯಾತ್ರೆ ಕೈಗೊಂಡರು. ನಾಡಿನೆಲ್ಲೆಡೆಗಳಿಂದ ಗಣ್ಯರನ್ನು, ಹಿರಿಯ ವಿದ್ವಾಂಸರನ್ನು, ಕಿರಿಯ ಪ್ರತಿಭಾವಂತರನ್ನು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆಮಾಡಿ ಆಮಂತ್ರಿಸಿ ಸಂಮಾನಪತ್ರ ನೀಡಿ, ಶಾಲು ಮಂತ್ರಾಕ್ಷತೆಗಳೊಂದಿಗೆ ಆಶೀರ್ವದಿಸಿದ್ದಾರೆ. ಈ 25 ವರ್ಷಗಳಲ್ಲಿ ಈ ಸಂಖ್ಯೆ 200ಕ್ಕೂ ಅಧಿಕವಾಗಿದೆ. ಸದಾ ಶಿಷ್ಯರ ಪ್ರಾರ್ಥನೆ ಮೇರೆಗೆ ಅವರ ಮನೆಗೆ ತೆರಳಿ ಪಾದಪೂಜೆ ಭಿಕ್ಷಾ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾನಿಧ್ಯವಹಿಸಿ ಅನುಗ್ರಹವಚನ ನೀಡುತ್ತಿದ್ದಾರೆ.
History Conclave
ಇತಿಹಾಸ ಸಮ್ಮೇಳನ
ಶ್ರೀ ಸ್ವರ್ಣವಲ್ಲೀ ಮಠದಲ್ಲಿ ವಿಚಾರ ಸಂಕಿರಣಗಳು, ವಿದ್ವದ್ಗೋಷ್ಠಿಗಳು, ವಿವಿಧಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ವಿದ್ವಾಂಸರು, ಸಾಹಿತಿಗಳು, ಕಲಾವಿದರ ಬಗೆಗೆ ಅಪಾರ ಗೌರವ ಶ್ರದ್ಧೆಯುಳ್ಳ ಈ ಮಹಾಸಂಸ್ಥಾನ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಶ್ರಯದಲ್ಲಿ ಕರ್ಣಾಟಕ ಇತಿಹಾಸ ಅಕಾಡೆಮಿಯ ಹನ್ನೊಂದನೆಯ ವಾರ್ಷಿಕ ಸಮ್ಮೇಳನ ಮೂರು ದಿನಗಳ ಕಾಲ (25-27 ಅಕ್ಟೋಬರ್1997) ಅರ್ಥಪೂರ್ಣವಾಗಿ ಜರುಗಿತು. ನಾಡಿನ ಖ್ಯಾತ ಇತಿಹಾಸ ವಿದ್ವಾಂಸರು, ಸಂಶೋಧಕರು ಈ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಇತಿಹಾಸ, ಕಲೆ, ವಾಸ್ತುಶಿಲ್ಪ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಮೌಲಿಕ ಪ್ರಬಂಧಗಳನ್ನು ಮಂಡಿಸಿದರು. ಸೋಂದಾ ಐತಿಹಾಸಿಕ ಶಿಲ್ಪಕಲೆಗಳ ರಕ್ಷಣೆಗೂ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಮಾರ್ಗದರ್ಶನ ನೀಡಿದ್ದಾರೆ. ಸ್ವಾದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ದೇವಾಲಯಗಳು ಈಗ ಜೀರ್ಣಸ್ಥಿತಿಯಲ್ಲಿವೆ.ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗುಡಿ ಗೋಪುರಗಳನ್ನು, ದೇವಾಲಯಗಳನ್ನೂ ಸಂರಕ್ಷಣೆಮಾಡಲು ಜಾಗೃತ ವೇದಿಕೆಯ ಸಂಸ್ಥೆಯನ್ನು ಗುರುಗಳ ಅಧ್ಯಕ್ಷತೆಯಲ್ಲಿ ಆರಂಭಿಸಲಾಗಿದೆ. ಇದರಿಂದ ಪ್ರಾಚೀನ ದೇವಾಲಯಗಳ ಸಂರಕ್ಷಣೆ ಅಭ್ಯುದಯಕ್ಕೆ ಶ್ರೀ ಸ್ವರ್ಣವಲ್ಲೀ ಮಠವು ಉತ್ತೇಜನ ನೀಡಿದೆ. ಶ್ರೀ ಸ್ವರ್ಣವಲ್ಲೀ ಮಠವು ಹಮ್ಮಿಕೊಂಡ ವಿವಿಧ ಸಂಸ್ಕಾರಗಳ ವಿಚಾರ ಸಂಕಿರಣಗಳು ಮಹತ್ತ್ವಪೂರ್ಣ ವಾದವುಗಳು. ಆಧುನಿಕ ಸಂದರ್ಭದಲ್ಲಿ ಧಾರ್ಮಿಕ ಸಾಮಾಜಿಕ ಸಂಸ್ಕಾರಗಳು ವ್ಯಕ್ತಿಜೀವನದಲ್ಲಿ ಬೀರುವ ಪ್ರಭಾವವನ್ನು ವಿಶ್ಲೇಷಿಸುವುದು ತುಂಬ ಆವಶ್ಯಕವಾದುದು. ಶ್ರೀ ಸ್ವರ್ಣವಲ್ಲಿ ಮಠದ ಆಶ್ರಯದಲ್ಲಿ ವಿವಾಹ ಸಂಸ್ಕಾರ, ಕುರಿತಾದ ಸಮಾವೇಶದಲ್ಲಿ ವೈದಿಕ ವಿದ್ವಾಂಸರೂ ಜನಸಮಾನ್ಯರೂ ನೇರವಾಗಿ ಮುಖಾಮುಖಿ ಸಂವಾದಕ್ಕಿಳಿದು ಚರ್ಚಿಸಿದ್ದು ಗಮನಾರ್ಹವಾದದ್ದು. ಶ್ರೀಮಠದ ಆಶ್ರಯದಲ್ಲಿ ಅವರ ಸಂಸ್ಕಾರದ ಬಗ್ಗೆ ಗೋಕರ್ಣದಲ್ಲಿ ಪಂಡಿತ ಗೋಷ್ಠಿ ನಡೆಸಿ ಅದರ ಬಗೆಗೆ ಮುಕ್ತಚರ್ಚೆ ನಡೆಸಲಾಗಿದೆ. ನಮ್ಮ ಇಂದಿನ ಜೀವನದಲ್ಲಿ ಸಂಸ್ಕಾರಗಳು ಕಳಚುವ ಕೊಂಡಿಗಳಾಗದೆ ಅವುಗಳಿಗಿರುವ ಸಾಂಸ್ಕೃತಿಕ ಮಹತ್ತ್ವವನ್ನು ವಿದಿತ ಪಡಿಸಲು ಇವು ನೆರವು ನೀಡುತ್ತವೆ.
Special Pooja’s For Societies
ಕೋಟಿ ಕುಂಕುಮಾರ್ಚನೆ ತುಳಸಿ ಅರ್ಚನೆ
ರಾಷ್ಟ್ರ ಸಂಕಷ್ಟದಲ್ಲಿರುವಾಗ ಸಾಮಾಜಿಕ ಸಮಸ್ಯೆಯುಂಟಾದಾಗ ಶ್ರೀ ಸ್ವರ್ಣವಲ್ಲೀ ಮಠ ಮುಂದಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತ ಬಂದಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲೀ ಮಠವು ಧನಸಹಾಯ ಮಾಡಿರುವುದಲ್ಲದೇ ಕೋಟಿ ಕುಂಕುಮಾರ್ಚನೆಯನ್ನು ಶ್ರೀ ಮಠದಲ್ಲಿ ನಡೆಸುವ ಮೂಲಕ ಸುಮಂಗಲೆಯರಿಗೆ ಧಾರ್ಮಿಕಪೂಜೆ ಮಾಡುವ ಮುಕ್ತ ಅವಕಾಶ ಕಲ್ಪಿಸಿಕೊಟ್ಟು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಧಾರ್ಮಿಕ ರಂಗದಲ್ಲಿ ಮಾತೆಯರು ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಹಿಳೆಯರು ದೇಶದ ಅರ್ಧ ಜನಸಂಖ್ಯೆಯ ಭಾಗವಾಗಿದ್ದು ಅವರು ನಮ್ಮ ಸಂಸ್ಕೃತಿ ಸಂಪ್ರದಾಯದ ರಕ್ಷಕರು.ಅವರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗಿ ಆತ್ಮೋನ್ನತಿ ಸಾಧಿಸಬೇಕು. ನಿತ್ಯ ಸ್ತೋತ್ರ ಪಾಠಮಾಡಬೇಕು. ಮಹಿಳೆಯರು ದೈವಶ್ರದ್ಧೆ ಹೆಚ್ಚಿಸಿ ಕೊಂಡರೆ ಅದರ ಪ್ರಭಾವ ಅವರ ಸಂತತಿಯ ಮೇಲೆ ಆಗುತ್ತದೆ. ತಾಯಿ ತನ್ನ ಮಕ್ಕಳಿಗೆ ವಿದ್ಯೆಯ ಮೊದಲ ಗುರುವಾಗಿರುವಂತೆ ಧಾರ್ಮಿಕ ಭಾವನೆ ನೈತಿಕ ಶ್ರದ್ಧೆಯನ್ನು ಬೆಳೆಸಲು ಸಾಧ್ಯವೆಂಬುದು ಗುರುಗಳ ಸದಾಶಯವಾಗಿದೆ.ಕೋಟಿ ಕುಂಕುಮಾರ್ಚನೆ ಮತ್ತು ಕೋಟಿ ತುಳಸಿ ಅರ್ಚನೆ ಕಾರ್ಯಕ್ರಮಗಳನ್ನು ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಹಮ್ಮಿಕೊಂಡು ಶ್ರೀಗಳು ಜಗನ್ಮಾತೆಯಾದ ಆದಿಶಕ್ತಿಯ ಉಪಾಸನೆ ಮಾಡಲು ಸ್ಫೂರ್ತಿ ತುಂಬಿದ್ದಾರೆ. ವಿಪ್ರ ಮಹಿಳಾ ಸಮಾವೇಶವನ್ನೂ ಜರುಗಿಸಿ ನಮ್ಮ ಸಂಪ್ರದಾಯ ಸಂಸ್ಕೃತಿ ಉಳಿಸಿಕೊಳ್ಳುವಂತೆ ಶ್ರೀಗಳು ಮಹಿಳೆಯರಿಗೆ ಕರೆ ನೀಡಿದ್ದಾರೆ.ಸಮಾಜದಲ್ಲಿ ಧಾರ್ಮಿಕ ರಂಗದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ದೊರಕಬೇಕು. ಭಗವಂತನ ಕೃಪೆ ಸರ್ವ ಮಾನವರಿಗೆ ಸಕಲ ಜೀವಕೋಟಿಗಳಿಗೆ ದೊರಕುವಂತಾಗಬೇಕು ಎಂಬ ಸದಾಶಯ ಸ್ವಾಮೀಜಿಯವರದಾಗಿದೆ.