ಸನ್ಯಾಸಾಶ್ರಮ ಅತ್ಯಂತ ಶ್ರೇಷ್ಠವಾದುದು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷವೆಂಬ ಪರಮ ಪುರುಷಾರ್ಥವನ್ನು ಸಾಧಿಸಲು ಈ ಸನ್ಯಾಸಾಶ್ರಮ ಹೆಚ್ಚು ಸಹಕಾರಿಯಾಗತ್ತದೆ. ಧರ್ಮ ಎಲ್ಲದಕ್ಕೂ ಮೂಲ ಪುರುಷಾರ್ಥವಾಗುತ್ತದೆ. ಅರ್ಥ ಮತ್ತು ಕಾಮಗಳು ಲೌಕಿಕವಾದ ಗ್ರಹಸ್ಥಾಶ್ರಮಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಈ ಅರ್ಥ ಕಾಮಗಳು ಧರ್ಮದ ನಿಯಂತ್ರಣದಲ್ಲಿಯೇ ಇರಬೇಕು. ಎಂದರೆ ಧರ್ಮಪರವಾಗಿಯೇ ಇರಬೇಕು. ಇನ್ನು ಕೊನೆಯ ಪುರುಷಾರ್ಥ ಮೋಕ್ಷ. ಇದು ಧರ್ಮದಿಂದ ಹಾಗೂ ಉಪಾಸನೆಯಿಂದ ಸಾಧಿತವಾಗಬೇಕಾದ ಪುರುಷಾರ್ಥ.
ಭುವಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮಾನವನೂ ಸಾಧಿಸಲೇಬೇಕಾದ ಪುರುಷಾರ್ಥ. ಈ ಮೋಕ್ಷವೆಂಬ ಪುರುಷಾರ್ಥವನ್ನು ಪಡೆಯಲು ಮುಖ್ಯವಾಗಿ ಬೇಕಾಗುವ ಅಂಶವೇ ವೈರಾಗ್ಯ. ಈ ವೈರಾಗ್ಯದ ಮೊದಲ ಸೋಪಾನವೇ ಸನ್ಯಾಸ.
ಈ ಸನ್ಯಾಸಾಶ್ರಮದಲ್ಲಿ ಅನೇಕ ವಿಧಗಳನ್ನು ನಾವು ಕಾಣುತ್ತೇವೆ. ಸನ್ಯಾಸವನ್ನು ಯಾವಾಗ ಸ್ವೀಕರಿಸಬೇಕು ಎಂಬ ಪ್ರಶ್ನೆಗೆ ಮೊದಲು ಉತ್ತರವನ್ನು ಹುಡುಕುವುದಾದರೆ.” ಯದಹರೇವ ವಿರಜೇತ್ ತದಹರೇವ ಪ್ರವೃಜೇತ್” ಎಂದರೆ ಯಾವ ಕ್ಷಣಕ್ಕೆ ವೈರಾಗ್ಯ ಬರುತ್ತದೆಯೋ ಆಗಲೇ ಸನ್ಯಾಸವನ್ನು ತೆಗೆದುಕೊಳ್ಳಬದು. ಆದರೆ ವೈರಾಗ್ಯವು ತಾತ್ಕಾಲಿಕವಾಗಬಾರದು. ಶಾಸ್ತ್ರಕಾರರು ತಾತ್ಕಾಲಿಕ ವೈರಾಗ್ಯಕ್ಕೆ ಅನೇಕ ಉದಾಹರಣೆಯನ್ನು ತಿಳಿಸುತ್ತಾರೆ. “ಸ್ಮಶಾನ ವೈರಾಗ್ಯ” ಎಂದರೆ ಯಾರಾದರೂ ಮರಣಿಸಿದಾಗ ಅವರ ಶರೀರವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅದನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ವರೆಗೆ ಈ ಜೀವನವೇ ಸಾಕು ಎಂಬ ಒಂದು ಭಾವ ಅಥವಾ ದುಃಖ ಇರುತ್ತದೆ. ಆದರೆ ಅದು ಕೆಲವು ಸಮಯದ ಅನಂತರ ತಾನಾಗಿಯೇ ನಶಿಸಿಹೋಗುತ್ತದೆ. ಮರಣಿಸಿದ ವ್ಯಕ್ತಿಯ ನೆನಪು ಮಾಸುವವರೆಗೆ ಮಾತ್ರ ಸ್ಮಶಾನ ವೈರಾಗ್ಯ ಇರುತ್ತದೆ. ಇನ್ನು “ಪ್ರಸೂತಿ ವೈರಾಗ್ಯ” ತಾಯಿಯಾದವಳು ಮಗುವಿಗೆ ಜನ್ಮ ನೀಡುವಾಗ ಅನುಭವಿಸುವ ಯಾತನೆಗೆ ಸಮನಾದ ನೋವು ಪ್ರಪಂಚದಲ್ಲಿ ಯಾವುದೂ ಇಲ್ಲ. ಆ ನೋವನ್ನು ಅನುಭವಿಸುವ ತಾಯಿ ಇನ್ನು ನನಗೆ ಮಕ್ಕಳು ಸಾಕು ಎಂಬ ಭಾವವನ್ನು ಹೊಂದುತ್ತಾಳೆ. ಆದರೆ ಆ ಭಾವ ಕೇವಲ ಆ ನೋವಿನ ಪರಿಣಾಮ ಶರೀರದ ಮೇಲಿರುವ ವರೆಗೆ ಮಾತ್ರ ಇರುತ್ತದೆ. ಅನಂತರ ಆ ವೈರಾಗ್ಯವೂ ಕಣ್ಮರೆಯಾಗುತ್ತದೆ. ಈ ತಾತ್ಕಾಲಿಕ ವೈರಾಗ್ಯ ಸನ್ಯಾಸಕ್ಕೆ ಪೂರಕವಲ್ಲ. ಪರಿಪೂರ್ಣವಾದ ವೈರಾಗ್ಯ ಯಾವಾಗ ವ್ಯಕ್ತಿಯ ಮನಸ್ಸಿನಲ್ಲಿ ಜಾಗ್ರತವಾಗುವುದೋ ಆ ಕ್ಷಣದಲ್ಲಿ ಆತ ಸನ್ಯಾಸಾಶ್ರಮ ಸ್ವೀಕರಿಸಲು ಅರ್ಹನಾಗುತ್ತಾನೆ. ಉಳಿದ ಮೂರೂ ಆಶ್ರಮದಿಂದ ನೇರವಾಗಿ ಸನ್ಯಾಸವನ್ನು ಪಡೆಯಬಹುದು. ಬ್ರಹ್ಮಚರ್ಯದಲ್ಲಿದ್ದವನೂ, ಗ್ರಹಸ್ಥನೂ, ಮತ್ತು ವಾನಪ್ರಸ್ಥನೂ ಸನ್ಯಾಸ ಸ್ವೀಕರಿಸಬಹುದು.ಇನ್ನೊಂದು ಮುಖ್ಯವಾಗಿ “ಆತುರ ಸನ್ಯಾಸ” ಎಂಬ ಪದ್ಧತಿಯಿದೆ. ಯಾವಾತನಿಗೆ ಮರಣ ಸಮೀಪಿಸುತ್ತಿದೆಯೋ ಅವನೂ ಸನ್ಯಾಸವನ್ನು ಪಡೆಯಬಹುದು. “ಆತುರ” ಎಂಬ ಶಬ್ದಕ್ಕೆ ಪ್ರಾಣೋತ್ಕ್ರಮಣ ಸ್ಥಿತಿ ಎಂದು ಅರ್ಥ.
ಸನ್ಯಾಸದಲ್ಲಿ ನಾಲ್ಕು ವಿಧವನ್ನು ಹೇಳುತ್ತಾರೆ. ಕುಟೀಚಕ, ಬಹೂದಕ, ಹಂಸ ಮತ್ತು ಪರಮಹಂಸ. ಇದರಲ್ಲಿ ಮೊದಲನೆಯದು ಕುಟೀಚಕ. ಮನೆಯಲ್ಲೇ ಇದ್ದು ಬಂಧುಗಳ ಜೊತೆಯಲ್ಲಿ ಇದ್ದು ಕಾಷಾಯವನ್ನು ದಂಡವನ್ನು ಧರಿಸಿ ಸನ್ಯಾಸನಿಷ್ಠನಾಗಿ ಇರುವವನನ್ನು “ಕುಟೀಚಕ” ಎಂದು ಕರೆಯುತ್ತಾರೆ.ಇನ್ನು ತನ್ನ ಬಂಧುಗಳನ್ನು ಸಂಸಾರವನ್ನು ಬಿಟ್ಟು ಎಳು ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಸನ್ಯಾಸಧರ್ಮ ನಡೆಸುವವನು “ಬಹೂದಕ” ಅನಿಸಿಕೊಳ್ಳುತ್ತಾನೆ. ಕಾಷಾಯವನ್ನು ಧರಸಿ ಎಲ್ಲವನ್ನೂ ತೊರೆದು ಊರಿನಿಂದ ದೂರದಲ್ಲಿ ವಾಸಮಾಡುವ ಒಂದೇ ದಂಡವನ್ನು ಧರಿಸುವ ಸನ್ಯಾಸಿಯನ್ನು “ಹಂಸ” ಎಂಬ ಶಬ್ದದಿಂದ ಕರೆಯುತ್ತಾರೆ. ಈ ಹಿಂದಿನ ಸನ್ಯಾಸಿಗಳು ಯಜ್ಞೋಪವೀತ ಹಾಗೂ ಅಗ್ನಿಪರಿಚರ್ಯೆಯನ್ನು ಮತ್ತು ಶಿಖೆಯನ್ನ ಹೊಂದಿದವರಾಗಿರುತ್ತಾರೆ.ಆದರೆ ಉಪವೀತ, ಅಗ್ನಿ ಹಾಗೂ ಶಿಖೆಯನ್ನು ತ್ಯಜಿಸಿ ಏಕದಂಡವನ್ನು ಧರಿಸುವ ಸನ್ಯಾಸದ ಕ್ರಮವನ್ನು “ಪರಮಹಂಸ” ಎಂದು ಕರೆಯುತ್ತಾರೆ. ಇಲ್ಲಿ ಕುಟೀಚಕನಿಗಿಂತ ಬಹೂದಕನೂ, ಬಹೂದಕನಿಗಿಂದ ಹಂಸನೂ, ಹಂಸನಿಗಿಂದ ಪರಮಹಂಸನೂ ಶ್ರೇಷ್ಠರಾಗುತ್ತಾರೆ. ಹೀಗೆ ಸನ್ಯಾಸದ ವಿಧಗಳು ಧರ್ಮಶಾಸ್ತ್ರದಲ್ಲಿ ನಿರೂಪಿತವಾಗಿವೆ.
ಸನ್ಯಾಸಿಯಾದವನ ನಿತ್ಯಕರ್ಮ ಹಾಗೂ ಧರ್ಮವನ್ನು ಮುಂದಿನ ಲೇಖನದಲ್ಲಿ ಗಮನಿಸೋಣ.
- ವಿ. ರವಿಶಂಕರ ದೊಡ್ನಳ್ಳಿ. (ಶ್ರೀ ಸ್ವರ್ಣವಲ್ಲೀ ಭಕ್ತವೃಂದ)