‘ಗುರು’ ಎಂದರೆ ಯಾರು? ಎಂಬುದರ ಬಗ್ಗೆ ಶ್ರೀ ಶಂಕರ ಭಗವತ್ಪಾದರು ಹೀಗೆ ಹೇಳಿದ್ದಾರೆ- “ಅಧಿಗತ ತತ್ವಃ ಶಿಷ್ಯಹಿತಾಯ ಉದ್ಯತಃ ಸತತಮ್” ಎಂದು. ಈ ಎರಡು ಲಕ್ಷಣಗಳಿದ್ದವನು ಗುರು.
ಅಧಿಗತ ತತ್ವಃ ಅಂದರೆ ಪರಮಾತ್ಮನನ್ನು ಚೆನ್ನಾಗಿ ತಿಳಿದವನು ಎಂದರ್ಥ. ದೇವರನ್ನು ನಾವು ಶಿವ, ವಿಷ್ಣು, ದೇವಿ, ಪುರುಷ, ಸ್ತ್ರೀ ಮೊದಲಾದ ಅನೇಕ ರೂಪಗಳಲ್ಲಿ ಪೂಜಿಸುತ್ತೇವೆ. ಇವೆಲ್ಲವೂ ದೇವತಾ ರೂಪಗಳೇ. ಆದರೂ ಸಾಧನೆಯಲ್ಲಿ ತುಂಬಾ ಮೇಲ್ಮಟ್ಟಕ್ಕೆ ಹೋದಾಗ ಈ ರೂಪಗಳ್ಯಾವುದೂ ಉಳಿಯದೇ ಆ ಅದ್ಭುತವಾದ ಪರಮಾತ್ಮ ತತ್ವವೊಂದೇ ಉಳಿಯುತ್ತದೆ. ಆಗ ಅದನ್ನು ಗಂಡು ಎನ್ನಲೂ ಆಗದು, ಹೆಣ್ಣು ಎನ್ನಲೂ ಆಗದು. ಜ್ಞಾನಿಗಳು ಆ ಪರಬ್ರಹ್ಮನನ್ನು ‘ಅದು’ ಎನ್ನುತ್ತಾರೆ. ಅದನ್ನು ವರ್ಣಿಸುವುದಕ್ಕೆ ಶಬ್ದಗಳು ಸಾಲವು. ಎಲ್ಲವೂ ಆಗಿರುವ, ಜಗತ್ತಿಗೆ ಆಧಾರವಾಗಿರುವ ಆ “ಅದನ್ನು” ಹೇಗಿದೆಯೋ ಹಾಗೆಯೇ ತಿಳಿದುಕೊಳ್ಳಬೇಕು. ಆ ನಿಜಸ್ವರೂಪವೇ ತತ್ವ. ಅದನ್ನು ಸರಿಯಾಗಿ ಅರಿತವನು ಆಗಿರಬೇಕು. ‘ಶಿಷ್ಯಹಿತಾಯ ಉದ್ಯತಃ ಸತತಮ್’ ಎಂದರೆ, ಶಿಷ್ಯರ ಹಿತಕ್ಕಾಗಿ ಸರ್ವದಾ ಜಾಗರೂಕನಾಗಿರುವವನೇ ಗುರು. ಶಿಷ್ಯನ ಹಿತ ಕೇವಲ ಪಾಠ ಹೇಳಿಕೊಡುವುದರಲ್ಲಿ ಮಾತ್ರವೇ ಇಲ್ಲ; ಅವನ ಬೆಳವಣಿಗೆಯನ್ನು ಗಮನಿಸಿ ಕಾಲಕಾಲಕ್ಕೆ ತಕ್ಕ ಪೋಷಕ ವಿಷಯಗಳನ್ನು ಅವನಿಗೆ ನೀಡಿ ಅವನನ್ನು ಪರಮಪದದ ಕಡೆಗೆ ಒಯ್ಯುವ ಹೊಣೆ ಆತನದು. ಇದು ತುಂಬ ದೊಡ್ಡ ಕೆಲಸ. ಕೇವಲ ದೃಷ್ಟ ಪ್ರಯತ್ನದಿಂದ ಮಾತ್ರವೇ ಇದು ಸಾಧ್ಯವಿಲ್ಲ. ಅದೃಷ್ಟವಾದ ಅಂದರೆ ಇತರರಿಗೆ ಅರ್ಥವಾಗದಿದ್ದರೂ ಗುರು ಸ್ವತಃ ತನ್ನೊಳಗೇ ಮಾಡುತ್ತಿರುವ ಪ್ರಯತ್ನಗಳೂ ಇದಕ್ಕೆ ಬೇಕು. ಈ ಪ್ರಯತ್ನದಲ್ಲಿ ಸತತ ನಿರತನಾದವನು ಗುರು.
ಮೊದಲನೆಯ ಲಕ್ಷಣ ಆತ ಸ್ವತಃ ಸಿದ್ಧನೆಂದು ಹೇಳುತ್ತಿದ್ದರೆ, ಎರಡನೆಯ ಲಕ್ಷಣ ಶಿಷ್ಯ ಹಾಗೂ ಜಗತ್ತಿನ ಕಡೆಗೆ ಉಚಿತವಾದ ರೀತಿಯಲ್ಲಿ ನೋಡುತ್ತಿರುವವನು ಎನ್ನುತ್ತಿದೆ. ಇವೆರಡೂ ಲಕ್ಷಣಗಳಿದ್ದವ ಮಾತ್ರ ಗುರು. ಕೇವಲ ತನ್ನೊಳಗೆ ತಾನು ಸಿದ್ಧಿಯನ್ನು ಪಡೆದವನಾದರೆ ಅವನು ಸಿದ್ಧಪುರುಷನಾಗುತ್ತಾನೆ; ಗುರುವಾಗಲಾರ. ಕೇವಲ ಬಾಹ್ಯ ಪ್ರಪಂಚವನ್ನು ನೋಡುತ್ತಿದ್ದು, ಅದನ್ನು ತಿದ್ದುವುದರಲ್ಲಿ ನಿರತನಾಗಿದ್ದರೆ, ತನ್ನಲ್ಲಿ ಯಾವುದೇ ಸಿದ್ಧಿಯನ್ನು ಹೊಂದಿಲ್ಲದಿದ್ದರೆ, ಅವನು ಸಮಾಜ ಸುಧಾರಕನಾದಾನು. ಗುರುವಾಗಲಾರ. ಇವೆರಡೂ ಲಕ್ಷಣಗಳು ಚೆನ್ನಾಗಿ ಒಡಮೂಡಿದ್ದು ಪರಮಾತ್ಮನಲ್ಲಿ. ಪರಮಾತ್ಮ ತತ್ವವನ್ನು ಅವನೊಬ್ಬನೇ ಸರಿಯಾಗಿ ಅರಿತಿದ್ದಾನೆ. ಬೇರೆ ಯಾರೂ ಅರಿತಿಲ್ಲ. ಅರಿಯುವುದು ಸಾಧ್ಯವೂ ಇಲ್ಲ.
ಎರಡನೆಯ ಲಕ್ಷಣವೂ ಪರಮಾತ್ಮನಲ್ಲಿಯೇ ಸರಿಯಾಗಿ ಸಮನ್ವಯವಾಗುವುದು. ಅವನಷ್ಟು ಜಾಗೃತರಾಗಿ ಇನ್ನಾರೂ ಇರಲಾರರು. “ಒಂದು ಕ್ಷಣ ನಾನು ಜಗತ್ತನ್ನು ಗಮನಿಸದೇ ಬಿಟ್ಟರೆ ಇಡೀ ಪ್ರಪಂಚದ ವ್ಯವಸ್ಥೆಯೇ ಕೆಡುತ್ತದೆ” ಎಂದು. ಈ ಪ್ರಪಂಚದ ವ್ಯವಸ್ಥೆಯೇನು ಸಾಮಾನ್ಯವೆ? ಸೌರಮಂಡಲದ ಗ್ರಹಗಳು ತಮ್ಮ ತಮ್ಮ ಕಕ್ಷೆಯಲ್ಲಿಯೇ ಸುತ್ತುತ್ತಿದ್ದರೆ ಸರಿ, ಸ್ವಲ್ಪವೇ ವ್ಯತ್ಯಾಸವಾದರೂ ಅತಿ ದೊಡ್ಡ ಅನಾಹುತವಾಗುತ್ತದೆ. ಈ ಎಲ್ಲವನ್ನೂ ಧರಿಸಿ, ಸತತವಾಗಿ ಗಮನಿಸುತ್ತಿರುವವನು ಆ ಭಗವಂತನೊಬ್ಬನೇ. ಹಾಗಾಗಿ ಗುರುವಿನ ಎರಡೂ ಲಕ್ಷಣಗಳು ನಿಜಾರ್ಥದಲ್ಲಿ ನೂರಕ್ಕೆ ನೂರು ಅನ್ವಯವಾಗುವುದು ದೇವರಲ್ಲಿ ಮಾತ್ರ. ದೇವರೇ ನಿಜವಾದ ಗುರು.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ನಾರಾಯಣ ನಾರಾಯಣ ನಾರಾಯಣ