ಮರಣಾನಂತರ ಜೀವಿಯ ಕರ್ಮಕ್ಕನುಗುಣವಾಗಿ ಶಿಕ್ಷೆಯನ್ನು ನೀಡುವ ಯಮನೆಂಬ ದೇವತೆಯ ಕಥೆ ಪುರಾಣಗಳಲ್ಲೂ ವೇದದಲ್ಲೂ ಬರುತ್ತದೆ. ಅವನು ಪರಮಾತ್ಮನ ಒಂದು ರೂಪವೇ ಆಗಿದ್ದಾನೆ. ಅವನು ನಮ್ಮೊಳಗೆ ಅಂತಃಸಾಕ್ಷಿಯ ರೂಪದಿಂದ ಇರುತ್ತಾನೆ. ಅವನು ನೀಡಿದ ಸೂಚನೆಗಳನ್ನು, ನಿಷ್ಪಕ್ಷಪಾತ ನಿರ್ಣಯಗಳನ್ನು ವಿರೋಧಿಸದೇ ಅದಕ್ಕೆ ಅನುಸಾರವಾಗಿ ತನ್ನ ಪ್ರವೃತ್ತಿಗಳನ್ನು ರೂಪಿಸಿಕೊಂಡು ಬಂದರೆ ಜೀವನದಲ್ಲಿ ಯಾವ ಪಾತಕವನ್ನೂ ಮಾಡುವ ಸಂಭವವಿಲ್ಲ. ಅವನಿಗೆ ಗಂಗಾಸ್ನಾನವೂ ಅಗತ್ಯವಿಲ್ಲ. ಕುರುಕ್ಷೇತ್ರಾದಿ ತೀರ್ಥಕ್ಷೇತ್ರಗಳ ದರ್ಶನವೂ ಅಗತ್ಯವಿಲ್ಲ. ಅರ್ಥಾತ್ ಅವನ ಜೀವನವು ಪರಿಶುದ್ಧವಾಗಿದ್ದು ಶುದ್ಧಿಗೊಳಿಸುವುದಕ್ಕೆ ಇನ್ನೇನೂ ಬೇಕಾಗಿರುವುದಿಲ್ಲ. ಇಂತಹುದೇ ಒಂದು ಮಾತು ಮಹಾಭಾರತದ ಶಕುಂತಲೋಪಾಖ್ಯಾನದಲ್ಲಿ ಬರುತ್ತದೆ. ಕಣ್ವರ ಆಶ್ರಮದಲ್ಲಿ ಇದ್ದ ಅವರ ಸಾಕುಮಗಳು ಶಕುಂತಲೆಯನ್ನು ದುಷ್ಯಂತನೆಂಬ ರಾಜನು ಗಾಂಧರ್ವ ವಿಧಿಯಿಂದ ವರಿಸಿದ. ಅನಂತರ ಅವನು ತನ್ನ ರಾಜ್ಯಕ್ಕೆ ಹೊರಟುಹೋದ. ಶಕುಂತಲೆ ಪುತ್ರವತಿಯಾದಳು. ಕಣ್ವರೇ ಮೊದಲಾದ ಮಹಾತ್ಮರ ಅನುಜ್ಞೆ ಪಡೆದು ಅವಳು ತನ್ನ ಪುತ್ರನೊಂದಿಗೆ ದುಷ್ಯಂತನ ಸಭಾಸ್ಥಳಕ್ಕೆ ಹೋದಳು. ಆಕೆಯನ್ನು ಕರೆದುಕೊಂಡು ಬಂದ ಋಷಿಪುತ್ರರು ಅವಳನ್ನು ಸಭಾಸ್ಥಾನದಲ್ಲಿಯೇ ಬಿಟ್ಟು ಹೊರಟು ಹೋದರು. ಆಕೆ ದುಷ್ಯಂತನಿಗೆ ತನ್ನ ಪರಿಚಯವಿದೆಯೆಂಬ ಭಾವನೆಯಿಂದ ಮಾತಾಡದೇ ಸಭೆಯ ಒಂದು ಕಂಬದ ಬಳಿ ನೆಲವನ್ನು ನೋಡುತ್ತಾ ನಿಂತಿದ್ದಾಳೆ. ಆಗ ರಾಜನೇ ಆಕೆಯನ್ನು ನೀನಾರು? ನಿನಗೇನಾಗಬೇಕು? ಎಂದು ಕೇಳುತ್ತಾನೆ. ಆಕೆ “ನಾನು ನಿನ್ನ ಪತ್ನಿ, ಇವ ನಮ್ಮ ಮಗ, ನಮ್ಮನ್ನು ಸ್ವೀಕರಿಸು” ಎಂದು ಕೇಳಿಕೊಳ್ಳುತ್ತಾಳೆ. ಈ ಮಾತನ್ನು ಕೇಳಿದ ದುಷ್ಯಂತ ಹಿಂದಿನ ಘಟನೆಗಳೆಲ್ಲ ನೆನಪಿದ್ದರೂ ಅವರನ್ನು ಸ್ವೀಕರಿಸಲು ಸಿದ್ಧನಾಗುವುದಿಲ್ಲ. ಆಗ ಆಕೆ ಅವನಿಗೆ ಒಂದು ಮಾತನ್ನು ಹೇಳುತ್ತಾಳೆ –
ಅನ್ಯಥಾ ಸಂತಮಾತ್ಮಾನಂ ಅನ್ಯಥಾ ಪ್ರತಿಪದ್ಯತೇ|
ಕಿಂ ತೇನ ನಕೃತಂ ಪಾಪಂ ಚೋರೇಣಾತ್ಮಾಪಹಾರಿಣಾ||
ತನ್ನ ಅಂತರಾತ್ಮದಲ್ಲಿ ಏನೋ ಒಂದು ಇದ್ದು ಅದನ್ನು ಹೊರಗೆ ಬೇರೊಂದು ರೀತಿಯಲ್ಲಿ ತೋರಿಸಿಕೊಳ್ಳುವವ ದೊಡ್ಡ ಕಳ್ಳ. ಅವನು ಮಾಡದಿರುವ ಪಾಪವಾದರೂ ಯಾವುದು? ಯಾಕೆಂದರೆ ತನ್ನನ್ನೇ ಕದ್ದುಕೊಂಡಿದ್ದಾನೆ ಅವನು. ಲೋಕದಲ್ಲಿ ಧನ ಕನಕಗಳನ್ನು ಕದ್ದವನನ್ನು ದೊಡ್ಡ ಕಳ್ಳನನ್ನುತ್ತೇವೆ. ಆದರೆ ಆತ್ಮನನ್ನೇ ಅಪಹಾರ ಮಾಡಿದ ಕೃತಿಗಿಂತ ದೊಡ್ಡ ಕಳ್ಳತನ ಇನ್ನಾವುದೂ ಇರಲಿಕ್ಕಿಲ್ಲ. ತನ್ನನ್ನೇ ತಾನು ವಂಚಿಸಿಕೊಂಡು ತನ್ನೊಳಗೇ ಇರುವ ಸತ್ಯವನ್ನು ತಿಳಿದೂ ಬಚ್ಚಿಡುವ ಈ ಅಪ್ರಾಮಾಣಿಕತೆ ದೊಡ್ಡ ಪಾಪ, ದೊಡ್ಡ ಕಾಪಟ್ಯ. ಇದು ಜೀವನದಲ್ಲಿ ಬರುವುದಕ್ಕೆ ಅವಕಾಶ ಕೊಡದೇ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿದ್ದರೆ ಅಂಥವನ ಜೀವನ ನಿಜಕ್ಕೂ ಪವಿತ್ರವಾಗುತ್ತದೆ. ಅಂತಃಸಾಕ್ಷಿಯನ್ನು ಗುರುತಿಸುವ ಅದರಂತೆ ನಡೆಯುವ ಕಲೆ ಗೊತ್ತಾದರೆ ಅವನಿಗೆ ಬದುಕನ್ನು ಕಲಿಸಲು ಯಾವ ಶಾಸ್ತ್ರವೂ ಬೇಕಾಗಿಲ್ಲ. ಅಂತಹ ಶುದ್ಧ ಪವಿತ್ರ ಪ್ರಾಮಾಣಿಕ ಜೀವನ ನಮ್ಮದಾಗಬೇಕಲ್ಲವೇ?
ಲೋಕಾಃ ಸಮಸ್ತಾಃ ಸುಖಿನೋ ಭವಂತು
ನಾರಾಯಣ ನಾರಾಯಣ ನಾರಾಯಣ