ಬಾಹ್ಯವಾದ ಆಚರಣೆಗಳಿಗೆ ಅರ್ಥವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡರೆ ಧರ್ಮಾಚರಣೆ ಅರ್ಥಪೂರ್ಣವಾಗುತ್ತದೆ. ಅದಿಲ್ಲದಿದ್ದರೆ, ಆ ಆಚರಣೆಯು ಡಂಭಾಚಾರವಾಗಿ ಕಾಲಕ್ರಮೇಣ ಸಾಮಾಜಿಕ ಘರ್ಷಣೆಯಲ್ಲಿಯೂ ಪರ್ಯಾವಸಾನವಾಗಬಹುದು. ಈಗಿನ ಜಗತ್ತಿನಲ್ಲಿ ನಡೆಯುತ್ತಿರುವ ಅನೇಕ ಘರ್ಷಣೆ, ಸಮಸ್ಯೆಗಳಿಗೆ ಧರ್ಮಾಚರಣೆಗಳ ಆಂತರ್ಯದ ಅರಿವಿಲ್ಲದಿರುವುದು ಒಂದು ಪ್ರಮುಖ ಕಾರಣ. ಅದಕ್ಕಾಗಿಯೇ ಹಿರಿಯರು ಹೇಳಿದ್ದಾರೆ
“ಆರ್ಷಂ ಧರ್ಮೋಪದೇಶಂ ಚ ವೇದಶಾಸ್ತ್ರವಿರೋಧಿನಾ|
ಯಸ್ತರ್ಕೇಣಾನುಸಂಧತ್ತೇ ಸ ಧರ್ಮಂ ವೇದ ನಂತರಃ||”
ನಮ್ಮ ಆಚರಣೆಗೋಸ್ಕರ ಋಷಿಗಳು ಉಪದೇಶಿಸಿರುವುದನ್ನು, ಅವುಗಳ ಹಿನ್ನೆಲೆ-ಮುನ್ನೆಲೆಗಳೇನು ಎಂಬ ಪ್ರಾಮಾಣಿಕ ಚಿಂತನೆಗೆ ಒಳಪಡಿಸಿ ಅರ್ಥಮಾಡಿಕೊಂಡರೆ ಮಾತ್ರ ಧರ್ಮಾಚರಣೆ ಅರ್ಥಪೂರ್ಣವಾಗುತ್ತದೆ.
ಕೆಲವರು ಬಾಹ್ಯ ಆಚರಣೆಗಳನ್ನು ಸಾಮಾಜಿಕ ಸಭ್ಯತೆಗೋಸ್ಕರವಷ್ಟೇ ಇಟ್ಟುಕೊಳ್ಳಬೇಕೆಂದು ಭಾವಿಸುತ್ತಾರೆ. ಉದಾಹರಣೆಗೆ, ಎಲ್ಲರೂ ದೇವರಿಗೆ ಕೈಮುಗಿಯುತ್ತಾರೆ. ತಾನು ಕೈಮುಗಿಯದಿದ್ದರೆ ಎಲ್ಲಿ ಅಸಭ್ಯತೆ ಎನ್ನಿಸಿಬಿಡುತ್ತದೆಯೋ ಎಂಬುದಕ್ಕೋಸ್ಕರ ಕೆಲವರು ಕೈಮುಗಿಯುವವರಿರುತ್ತಾರೆ. ಧರ್ಮಾಚರಣೆಗಳಲ್ಲಿ ಅತ್ಯಂತ ಸ್ವಲ್ಪ ಭಾಗ ಸಾಮಾಜಿಕ ಸಭ್ಯತೆಗೋಸ್ಕರ ಇದೆಯಾದರೂ, ಅವುಗಳ ಮುಖ್ಯ ಲಕ್ಷ್ಯ ಇರುವುದು ಆಂತರಂಗಿಕ ಬೆಳವಣಿಗೆಯಲ್ಲಿಯೇ ಎಂಬುದನ್ನು ಅರಿಯಬೇಕಾಗಿದೆ.
ಆಂತರಂಗಿಕ ಬೆಳವಣಿಗೆ ಎಂದರೇನು? ಮನಸ್ಸು-ಬುದ್ದಿಗಳಿಗೆ ಬೆಳವಣಿಗೆಯುಂಟು, ಬಾಲಕನಾಗಿದ್ದಾಗ ಮನಸ್ಸಿಗೆ ಎಷ್ಟೋ ವೃತ್ತಿಗಳು ಇರುವುದಿಲ್ಲ. ವಯಸ್ಸು ಬೆಳೆದಂತೆ ಜವಾಬ್ದಾರಿಯೇ ಮುಂತಾದ ವೃತ್ತಿಗಳು ಹುಟ್ಟಿಕೊಂಡು ಬೆಳೆಯತೊಡಗುತ್ತವೆ . ಹಾಗೆಯೇ ಧರ್ಮಾಚರಣೆಯಿಂದ ಒಂದು ವಿಧದಲ್ಲಿ ಮನೋಬುದ್ಧಿ ಸಹಿತವಾದ ‘ಜೀವ’ ವಿಕಸಿತವಾಗುತ್ತದೆ.
ಧೃತಿಃ ಕ್ಷಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ| ಹ್ರೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್||
ಧೈರ್ಯ, ಕ್ಷಮಾ, ದಮ, ಅಸ್ತೇಯ (ಲೋಭವಿಲ್ಲದಿರುವಿಕೆ), ಶೌಚ (ಶರೀರ ಮನಸ್ಸುಗಳ ಶುದ್ಧಿ), ಇಂದ್ರಿಯ ನಿಗ್ರಹ, ಹ್ರೀಃ (ಸಂಕೋಚ ಸ್ವಭಾವ), ವಿದ್ಯಾ, ಸತ್ಯ, ಅಕ್ರೋಧ – ಇವುಗಳು ಯಾರ ವ್ಯಕ್ತಿತ್ವದಲ್ಲಿ ಸಹಜ ರೂಪದಿಂದ ಇವೆಯೋ ಆ ವ್ಯಕ್ತಿ ಅಂತರಂಗಿಕವಾಗಿ ಬೆಳವಣಿಗೆ ಹೊಂದಿದ್ದಾನೆಂದರ್ಥ. ಇವುಗಳಲ್ಲದೇ ಭಗವದ್ಗೀತೆಯಲ್ಲಿ (೧೬ ನೆಯ ಅಧ್ಯಾಯ) ಹೇಳಿದ ದೈವೀ ಸಂಪತ್ತನ್ನೂ (ಅಭಯ, ಸತ್ವ, ಸಂಶುದ್ಧಿ ಮುಂತಾದವು) ಇಲ್ಲಿ ಸೇರಿಸಿಕೊಳ್ಳಬೇಕು. ಇಲ್ಲಿ ಹೇಳಿದ ಹೆಚ್ಚಿನ ಶಬ್ದಗಳು ಮನಸ್ಸಿನ ಒಂದೊಂದು ವೃತ್ತಿಯನ್ನು ಹೇಳುತ್ತವೆ. ಹಾಗೆ ನೋಡಿದರೆ, ಒಂದರ್ಥದಲ್ಲಿ ಇವುಗಳು ಪರಿಪಕ್ವ ಮನಸ್ಸಿನ ವಿವಿಧ ಮುಖಗಳೇ ಆಗಿವೆ. ಇಂಥ ಮನಃಸ್ಥಿತಿ ಸಹಜ ರೂಪದಲ್ಲಿರುವುದು, ಅಂದರೆ ಕೃತ್ರಿಮವಲ್ಲದ ರೀತಿಯಲ್ಲಿ ಇರುವುದು ಸುಲಭವೇನಲ್ಲ. ಅದು ಅನೇಕ ವರ್ಷಗಳ ಸಾಧನೆಯಿಂದ ಲಭ್ಯವಾದದ್ದು. ಸಾಧನೆಯೆಂದರೇನು? ಮನಸ್ಸಿನ ನಿಯಂತ್ರಣವೇ ಸಾಧನೆಯ ಪ್ರಮುಖ ಭಾಗ, ಮನಸ್ಸು ಕೈಗೆ ಸಿಕ್ಕುವಂತಹದಲ್ಲ.
ಮನಸ್ಸನ್ನು ಮಾತು ಮತ್ತು ಮೈ (ಶರೀರ)ಯ ನಿಯಂತ್ರಣದ ಮೂಲಕವೇ ನಿಯಂತ್ರಿಸಬೇಕಾಗಿದೆ. ಹಾಗಂದರೆ, ಮನಃಪೂರ್ವಕವಾಗಿ ವಾಚಿಕ ಅಥವಾ ಕಾಯಿಕವಾದ ಸತ್ಕರ್ಮಗಳಲ್ಲಿ ತೊಡಗಿದಾಗ, ಆ ಕರ್ಮದಿಂದ ಮನಸ್ಸಿಗೊಂದು ಸಂಸ್ಕಾರ ಸಿಗುತ್ತದೆ. ಇಂಥ ಸತ್‌ಸಂಸ್ಕಾರಗಳು ರಾಶಿ ರಾಶಿಯಾಗಿ ಮನಸ್ಸಿನಲ್ಲಿ ಸೇರಿಸಲ್ಪಟ್ಟಾಗ ಮನಸ್ಸು ಮೇಲೆ ಹೇಳಿದ ಪರಿಪಕ್ವ ಸ್ಥಿತಿಗೆ ಕ್ರಮೇಣ ಬರುತ್ತದೆ. ಈ ಅರ್ಥದಲ್ಲಿ ಮನಸ್ಸನ್ನು ಮಾತು ಮತ್ತು ಮೈಗಳ ಮೂಲಕವೇ ನಿಯಂತ್ರಿಸಬೇಕೆಂಬ ಮಾತನ್ನು ಹೇಳಿದ್ದು. ಉದಾಹರಣೆಗೆ – ತಾಯಂದಿರು ಚಿಕ್ಕಮಕ್ಕಳಿದ್ದಾಗಿನಿಂದ ದೇವರಿಗೆ ನಮಸ್ಕಾರ ಮಾಡಿಸುತ್ತಾರೆ. ಆ ಮಕ್ಕಳಿಗೆ ‘ಗೌರವ’ ಅಥವಾ ‘ಪೂಜ್ಯತೆ’ ಎಂದರೇನೆಂಬುದು ಗೊತ್ತಿರುವುದಿಲ್ಲ. ಕೆಲವೊಮ್ಮೆ ದೇವರ ಕಡೆ ಕಾಲು, ಮತ್ತೊಂದು ಕಡೆ ತಲೆ ಬರುವಂತೆ ಮಕ್ಕಳು ನಮಸ್ಕರಿಸಿಬಿಡುತ್ತಾರೆ. ಆದರೂ ತಾಯಿಯರು ಮಗುವಿನ ತಲೆ ಹಿಡಿದು ನೆಲಕ್ಕೆ ಅಮುಕಿ ನಮಸ್ಕಾರ ಮಾಡಿಸುತ್ತಾರೆ. ಇದರಿಂದ ಬಾಲಕನ ಮನಸ್ಸಿನಲ್ಲಿ ಕ್ರಮೇಣ ‘ಪೂಜ್ಯತೆ’ಯ ಭಾವ ಬೆಳೆಯತೊಡಗುತ್ತದೆ.
ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಮನಸ್ಸಿಗೊಂದು ಸಂಸ್ಕಾರ ಬೆಳೆಯುತ್ತದೆ. ಸನಾತನ ಧರ್ಮದಲ್ಲಿ ವಾಚಿಕ (ಮಂತ್ರೋಚ್ಚಾರಣೆ, ಭಜನೆ) ಮತ್ತು ಕಾಯಿಕ (ಪೂಜೆ, ಯಜ್ಞ ಮುಂತಾದವು) ಕ್ರಿಯಾ ಕಲಾಪಗಳು ತುಂಬಾ ಇರುವುದನ್ನು ಕಾಣುತ್ತೇವೆ. ಇವೆಲ್ಲವುಗಳ ಹಿಂದೆಯೂ ಮಾನಸಿಕ ಕ್ರಿಯೆಗಳಿಗೆ ಪ್ರಾಧಾನ್ಯ ಇದ್ದೇ ಇದೆ. ಆದರೆ ಎಲ್ಲಾ ಕ್ರಿಯೆಗಳ ಉದ್ದೇಶವೂ ಒಂದೇ, ಮನಸ್ಸಿಗೊಂದು ಪರಿಪಕ್ವತೆಯನ್ನುಂಟುಮಾಡುವುದು. ಆರಂಭದಲ್ಲಿ ಶಾರೀರಿಕ ಮತ್ತು ವಾಚಿಕ ಕ್ರಿಯೆಗಳೇ ಪ್ರಾಧಾನ್ಯವೋ ಎಂಬಂತೆ ತೋರುತ್ತದೆ. ಮುಂದುವರಿದಂತೆ ಮಾನಸಿಕ ಕ್ರಿಯೆ ಅಥವಾ ಉಪಾಸನೆಯೇ ಪ್ರಧಾನವಾಗುತ್ತದೆ. ಉಪಾಸನೆ ಗಟ್ಟಿಯಾದಾಗ ಧ್ಯಾನಸ್ಥಿತಿ ಬರುತ್ತದೆ.
ಈ ಹಿಂದೆ ಹೇಳಿದ “ಧೃತಿಃ ಕ್ಷಮಾ …” ಇತ್ಯಾದಿ ಶ್ಲೋಕವು ಧರ್ಮದ ಹತ್ತು ಲಕ್ಷಣಗಳನ್ನು ಹೇಳಿದೆ. ಒಂದು ದೃಷ್ಟಿಯಿಂದ ನೋಡಿದರೆ ಈ ಹತ್ತು ಬೇರೆ ಬೇರೆಯಲ್ಲ. ಮನಸ್ಸು ಪರಿಪಕ್ವ ಸ್ಥಿತಿಗೇರಿದಾಗ, ಅಂಥವನಿಗೆ ಈ ಹತ್ತು ಸಹಜವಾಗಿಬಿಡುತ್ತದೆ. ಮರವನ್ನು ಬುಡಸಹಿತ ಕಿತ್ತು ತಂದರೆ ಅದರ ಜೊತೆ ಸಹಜವಾಗಿಯೇ ಎಲೆ, ಟೊಂಗೆ, ಹೂ, ಕಾಯಿ ಎಲ್ಲವೂ ಬರುತ್ತವೆ. ಹಾಗೆಯೇ ಆ ಪರಿಪಕ್ವ ಸ್ಥಿತಿಯುಂಟಾದಾಗ ಧೈರ್ಯ, ಕ್ಷಮಾ ಮುಂತಾದ ಗುಣಗಳು ಸಹಜವಾಗಿಬಿಡುತ್ತವೆ.
ಬಾಹ್ಯ ಧರ್ಮಾಚರಣೆಗಿಂತ ಆಂತರ್ಯದ ಧರ್ಮವೇ ಪ್ರಧಾನ. ಯಾಕೆಂದರೆ ಎಲ್ಲ ಬಾಹ್ಯ ಆಚರಣೆಗಳನ್ನು ಚೆನ್ನಾಗಿ ಪರಿಶೀಲಿಸಿದಾಗ ಒಂದಿಲ್ಲೊಂದು ರೀತಿಯಲ್ಲಿ ಅವು ಆಂತರ್ಯದ ಧರ್ಮದಲ್ಲೇ ಪರ್ಯಾವಸಾನವಾಗುವುದು ಕಂಡುಬರುತ್ತದೆ. ಭಗವಂತನ “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಎಂಬ ಮಾತಿನಲ್ಲಿ ಈ ಅರ್ಥದ ಛಾಯೆಯೂ ಇಲ್ಲದಿಲ್ಲ. ನಾವು ಇಲ್ಲಿ ಹೇಳಿದ “ಪರಿಪಕ್ವ ಮನಃಸ್ಥಿತಿ” ಜ್ಞಾನಿಯಾದವನಿಗೂ ಇದೆಯಾದರೂ, ಅದು ಜ್ಞಾನವೇ ಅಲ್ಲ . ಪರಬ್ರಹ್ಮದರ್ಶನವೆಂಬ ಜ್ಞಾನಕ್ಕಿಂತ ಮುಂಚೆಯೇ ಉಂಟಾಗುವ ಮನಃಸ್ಥಿತಿಯದು. ಆದ್ದರಿಂದ “……… ಜ್ಞಾನೇ ಪರಿಸಮಾಪ್ಯತೇ” ಎಂಬ ಮಾತಿಗೆ ನೇರವಾಗಿ ಇದೇ ಅರ್ಥವಲ್ಲದಿದ್ದರೂ ಅದರ ಛಾಯೆಯಲ್ಲಿ ಇದೇ ಅರ್ಥವಿದೆಯೆನ್ನಬಹುದು.
ಧರ್ಮದಲ್ಲಿ ಬಾಹ್ಯಕ್ಕಿಂತ ಆಂತರ್ಯವೇ ಪ್ರಧಾನವೆಂಬುದಕ್ಕೆ ಒಂದು ಪ್ರಮುಖ ಕಾರಣವನ್ನು ಹೀಗೆ ನೀಡಬಹುದು. ಬಾಹ್ಯ ಆಚರಣೆಗಳಿಂದ ಮನಸ್ಸು ಶುದ್ಧಗೊಂಡವರಿಗೆ, ಅಂದರೆ ಸಂನ್ಯಾಸಿಗಳಿಗೆ ಬಾಹ್ಯ ಕರ್ಮಗಳನ್ನು ಬಿಡಲು ಶಾಸ್ತ್ರಗಳು ಹೇಳಿವೆ. ಆ ಸಂನ್ಯಾಸಿಗಳಿಗೆ ಶ್ರವಣ, ಮನನ, ನಿದಿಧ್ಯಾಸನ, ಶಮ, ದಮ ಮುಂತಾದ ಮಾನಸ ಧರ್ಮಗಳೇ ಪ್ರಧಾನ.
ಒಟ್ಟಾರೆ ಎಲ್ಲ ದೃಷ್ಟಿಯಿಂದ ನಮ್ಮ ಎಲ್ಲ ಶಾರೀರಿಕ ಆಚಾರಗಳು, ಕ್ರಿಯಾಕಲಾಪಗಳು ಮತ್ತು ವಾಚಿಕವಾದ ಮಂತ್ರ ಘೋಷಗಳು ಮುಂದೊಂದು ಹಂತದಲ್ಲಿ ಆಂತರ್ಯದ ಧರ್ಮಕ್ಕೆ ಏರಲೇಬೇಕಾದವುಗಳು ಎಂಬುದು ನೆನಪಿಡಬೇಕಾದ ಸತ್ಯ.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ನಾರಾಯಣ ನಾರಾಯಣ ನಾರಾಯಣ