ಅಹಂಕಾರ ಎಂಬ ಆಪತ್ತು

posted in: Gurubodhe | 0

ಅಹಂಕಾರವು ಬಹುತೇಕ ಎಲ್ಲ ಸಮಸ್ಯೆಗಳ ಮೂಲ. ಅದು ಅತಿಯಾದರೆ ಅನೇಕ ರೋಗಗಳು ಬರುವುದುಂಟು. ಆಯುಷ್ಯ ಕಡಿಮೆಯಾಗುವುದುಂಟು. ಅದರ ಬಗ್ಗೆ ಶ್ರೀರಾಮನು ಹೇಳಿದ ಮಾತನ್ನು ಚಿಂತನೆ ಮಾಡೋಣ. ಅಹಂಕಾರವನ್ನು ಬಿಡುವ ಉಪಾಯದ ಬಗ್ಗಯೂ ಚಿಂತನೆ ಮಾಡೋಣ.

ಶ್ರೀರಾಮನು ಹೇಳಿದ ಮಾತು “ಅಹಂಕಾರವಶಾತ್ ಆಪತ್ ಅಹಂಕಾರ ಧುರಾದಯಃ | ಅಹಂಕಾರ ವಶಾತ್ ಈಹ ಅಹಂಕಾರೋ ಮಮಾಮಯಃ || 1) ಅಹಂಕಾರದಿಂದ ಆಪತ್ತುಗಳು ಬರುತ್ತವೆ. ರಾವಣನು ತನ್ನ ಅಹಂಕಾರದಿಂದ ಯಾರ ಮಾತನ್ನು ಕೇಳದೆ ಅನೇಕ ಆಪತ್ತಗಳೆಸಗಿಕೊಂಡನು. ಧುರ್ಯೋಧನನು ಅಹಂಕಾರದಿಂದ ಭೀಷ್ಮರ ಮಾತನ್ನು ಕೇಳದೆ ಯುದ್ಧದಲ್ಲಿ ಹೀನಾಯವಾಗಿ ಸೋತು ದಯನೀಯ ಸ್ಥಿತಿಯಲ್ಲಿ ಸತ್ತುಹೊದನು. 2) ಅಹಂಕಾರದಿಂದಲೇ ತನ್ನ ಸಾಮರ್ಥ್ಯಕ್ಕೆ ಮೀರಿ ಕೆಲವರು ಸಂಕಲ್ಪ ಮಾಡುತ್ತಾರೆ. ಹಾಗೆ ಅಹಂಕಾರದಿಂದ  ಸಂಕಲ್ಪ ಮಾಡಿದವನು ತನ್ನ ಸಂಕಲ್ಪ ಈಡೇರದೇ ಇದ್ದಾಗ ತುಂಬಾ ಚಿಂತೆಗೆ ಒಳಗಾಗುತ್ತಾನೆ.  ಈ ಚಿಂತೆ ಆತ್ಮಹತ್ಯೆಯವರೆಗೂ ಹೋಗುವುದುಂಟು. 3) ಅಹಂಕಾರದಿಂದ  ರಾಗದ್ವೇಷಗಳಿಂದ ಕೂಡಿದ ದುಶ್ಚೇಶ್ಟೆಯು ಉಂಟಾಗುತ್ತದೆ. 4) ಅಹಂಕಾರವೇ ನನ್ನ ದೃಷ್ಟಿಯಲ್ಲಿ ದೊಡ್ಡ ರೋಗ ಎನ್ನುತ್ತಾನೆ ಶ್ರೀರಾಮಚಂದ್ರ . ಅಹಂಕಾರ ಹೆಚ್ಚಿಗೆ ಇದ್ದವನಿಗೆ ಉದ್ವೇಗ ಜಾಸ್ತಿಯಾಗುತ್ತದೆ.  ಉದ್ವೇಗ ಮೂಲಗಳಿಂದ ಹುಟ್ಟಿಕೊಳ್ಳುವ ರೋಗಗಳು ಇಂದಲ್ಲಾ ನಾಳೆಯಾದರೂ ಬಂದೇ ಬರುತ್ತದೆ. ಅಹಂಕಾರವನ್ನು ಬಿಡಲು ಪ್ರಮುಖವಾಗಿ ಎರಡು ದಾರಿಗಳಿವೆ. ಒಂದು ಭಕ್ತಿಮಾರ್ಗ ನ್ನೊಂದು ಜ್ಞಾನಮಾರ್ಗ. ಭಕ್ತಿ ಮಾರ್ಗಕ್ಕೆ ಉದಾಹರಣೆ ಶ್ರೀರಾಮಕೃಷ್ಣ ಪರಮಹಂಸರು. ಭಗವಂತನಲ್ಲಿ ಶರಣಾಗತಿ ಹೊಂದಿ ತಾನು ಅವನ ದಾಸ ಎಂಬ ಭಾವನೆ ಬೆಳೆಸಿಕೊಂಡರೆ ಅಹಂಕಾರವು ಬಗ್ಗಿ ಬರುತ್ತದೆ. ಹೀಗೆ ಭಾಗಿಸಲ್ಪಟ್ಟ ಅಹಂಕಾರವನ್ನು ಸಾತ್ವಿಕ ಅಹಂಕಾರ ಎಂಬುದಾಗಿ ಕರೆಯುತ್ತಾರೆ.  ಸಾತ್ವಿಕ ಅಹಂಕಾರದಿಂದ ಅಪಾಯವಿಲ್ಲ. ಅಲ್ಲದೆ ಭಗವಂತನಲ್ಲಿ ಸಂಪೂರ್ಣ ಶರಣಾಗತಿಯ ಮೂಲಕ ಸಾತ್ವಿಕ ಅಹಂಕಾರವು ಲಯವಾಗುತ್ತದೆ. ಹನುಮಂತನಿಗೆ ಇಂತಹ ಸಾತ್ವಿಕ ಅಹಂಕಾರವಿದೆ. ಅವನ ಅಹಂಕಾರವು  ಸಾತ್ವಿಕ ಅಹಂಕಾರವಾದ್ದರಿಂದಲೇ ಜಾಗೃದವಸ್ಥೆಯಲ್ಲಿರುವಾಗ ಅವನ ನಾಮ ಸಂಕೀರ್ತನೆಯ ಮೂಲಕ ಭಕ್ತಿಪರವಶನಾಗುತ್ತಾನೆ. ಸಮಾಧ್ಯವಸ್ಥೆಯಲ್ಲಿ ಸಂಪೂರ್ಣ ತನ್ನನ್ನೇ ತಾನು ಮರೆಯುತ್ತಾನೆ. ಅಂದರೆ ಆಗ ಅವನ ಅಹಂಕಾರವು ಲಯವಾಗುತ್ತದೆ. ಜ್ಞಾನಮಾರ್ಗಕ್ಕೆ ಉದಾಹರಣೆ ಶ್ರೀ ರಮಣ ಮಹರ್ಷಿಗಳು. ಅಹಂಕಾರಕ್ಕೆ ಅತ್ಯಂತ ಮೂಲದಲ್ಲಿರುವ ಪರಮಾತ್ಮನನ್ನು ಅರಿತುಕೊಳ್ಳುವ ಮೂಲಕ ಅವನಲ್ಲಿ ಅಹಂಕಾರವನ್ನು ಲಯಗೊಳಿಸಿಕೊಳ್ಳುವಿಕೆ  ಜ್ಞಾನಮಾರ್ಗ. ಈ ಎರಡರ ಪೈಕಿ  ಯಾವುದಾರೂ ಒಂದು ಮಾರ್ಗವನ್ನು ಹಿಡಿಯುವ ಮೂಲಕ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಬೇಕು. ಜ್ಞಾನಮಾರ್ಗ ಎಲ್ಲರಿಗೂ ಒಮ್ಮೆಲೆ ಕೈಗೆ ಸಿಗುವುದಿಲ್ಲ. ಭಕ್ತಿಮಾರ್ಗದ ಮೂಲಕ ಎಲ್ಲರೂ ಪ್ರಯತ್ನಿಸಬಹುದು.