ಮನಸ್ಸಿನ ಶಕ್ತಿ

posted in: Gurubodhe | 0

     “ಮನಸೋ ವಶೇ ಸರ್ವಮಿದಂ ಬಭೂವ” ಎಂಬುದಾಗಿ ವೇದ ಹೇಳುತ್ತದೆ. ಕನ್ನಡದಲ್ಲಿಯೂ ‘ಮನಸ್ಸಿದ್ದರೆ ಮಾರ್ಗ’ ಎಂಬ ನುಡಿ ಪ್ರಸಿದ್ಧವಾಗಿದೆ. ಮನಸ್ಸು ಪ್ರಸನ್ನತೆಯಿಂದ ಕೂಡಿದ್ದರೆ ಎಲ್ಲ ಕೆಲಸಗಳನ್ನೂ ಸುಲಭವಾಗಿ ಚೆನ್ನಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಮನಸ್ಸು, ಮನಸ್ಸು ಮಾಡಿದರೆ ಶರೀರವನ್ನು ನಿಯಂತ್ರಣದಲ್ಲಿಡಬಹುದು. ಅಂದರೆ ಶರೀರದ ಆರೋಗ್ಯವನ್ನು ಕೂಡ ನಿಯಂತ್ರಣದಲ್ಲಿ ಇಡಬಲ್ಲದು. ಅಲ್ಲದೇ ಇಂದ್ರಿಯಗಳನ್ನು ನಿಯಮದಲ್ಲಿ ಇಡಬಲ್ಲದು. ಉಸಿರಾಟವನ್ನು ಕೂಡ ವ್ಯವಸ್ಥಿತವಾಗಿಡಬಲ್ಲದು. ಮಹಾತ್ಮರು ಹೇಳುತ್ತಾರೆ – ಮನಸ್ಸಿನೊಳಗೆ ಪ್ರಾಮಾಣಿಕವಾದ ಭಕ್ತಿ-ಭಾವ ಪರಿಪಕ್ವವಾಗಿ ಮೂಡಿದರೆ ಆಗ ಪ್ರಾಣಾಯಾಮ ಶಾಸ್ತ್ರದಲ್ಲಿ ಹೇಳುವ ಕುಂಭಕ ಸ್ಥಿತಿ ಸುಲಭವಾಗಿ ಏರ್ಪಡುತ್ತದೆ ಎಂದು. ಅಂದರೆ ಮನಸ್ಸು ಉಸಿರಾಟವನ್ನು ಕೂಡ ನಿಯಂತ್ರಿಸಬಲ್ಲದು.

ಮನಸ್ಸು ಪರಮಾದ್ಭುತ ಶಕ್ತಿ ಉಳ್ಳದ್ದು. ಅದನ್ನು ಸರಿಯಾಗಿ ಬಳಸಿಕೊಂಡರೆ ಅದ್ಭುತವಾದ ಸಾಧನೆಗಳನ್ನು ಮಾಡಬಹುದು. ಶಾಸ್ತ್ರಗಳಲ್ಲಿ ಹೇಳಲಾಗಿರುವ ಎಲ್ಲಾ ವಿಧದ ಸಾಧನೆಗಳೂ ಕೂಡ ಮನಸ್ಸನ್ನು ಪರಿಷ್ಕರಿಸಿ ಪರಿಪಕ್ವಗೊಳಿಸಿಕೊಳ್ಳುವುದಕ್ಕಾಗಿ ಬಂದಿವೆಯೇ ಹೊರತು ಬೇರೇನೂ ಅಲ್ಲ. ಮನಸ್ಸನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಕಲೆಯನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಸುಖವಾಗಿಯೂ ಇರಬಹುದು . ಅತ್ಯಂತ ಉತ್ತಮವಾದ ಉದಾತ್ತವಾದ ಬದುಕನ್ನೂ ಬದುಕಬಹುದು.

     ಏನನ್ನು ಸಾಧನೆ ಮಾಡಬೇಕು? ಎಂಬ ಪ್ರಶ್ನೆ ಬರುತ್ತದೆ. ತುಂಬಾ ಉನ್ನತವಾದ ವಿಮರ್ಶೆಯೇನೂ ಇಲ್ಲಿ ಬೇಡ, ‘ಮನಸ್ಸನ್ನು ಸತತ ಉತ್ಸಾಹಶೀಲವನ್ನಾಗಿ ಇಟ್ಟುಕೊಳ್ಳಬೇಕು’ ಎಂಬಷ್ಟೇ ಸಾಕು. ಸತತ ಉತ್ಸಾಹದಿಂದಿರುವ ಮನಸ್ಸಿದ್ದರೆ, ಅವನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. “ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ” ಎಂಬ ಸುಭಾಷಿತ ಇದನ್ನೇ ಹೇಳುತ್ತದೆ.

ಮನಸ್ಸಿನಲ್ಲಿ ಆಲಸ್ಯವೂ ಇರಬಾರದು, ಉದ್ವೇಗವೂ ಇರಕೂಡದು. ಆಲಸ್ಯವೆಂದರೆ ಒಂದರ್ಥದಲ್ಲಿ ಮನಸ್ಸಿನ ನಿಷ್ಕ್ರಿಯತೆ, ಉದ್ವೇಗವೆಂದರೆ ಅತಿಕ್ರಿಯತೆ. ಇವೆರಡೂ ಇಲ್ಲದೆ ಮಧ್ಯಮ ಮಾರ್ಗವನ್ನು ಅನುಸರಿಸಬೇಕು. ಅಂದರೆ ಸತತ ಶ್ರದ್ಧೆಯಿಂದ ಕೆಲಸಗಳಲ್ಲಿ ಸರಿಯಾಗಿ ತೊಡಗಿರಬೇಕು. ಕ್ರಿಯಾಶೀಲತೆಯೆಂದರೆ ಆಲಸ್ಯವೂ ಅಲ್ಲ, ಉದ್ವೇಗವೂ ಅಲ್ಲ. ಒಂದಾದ ಮೇಲೊಂದರಂತೆ ಕೆಲಸಗಳನ್ನು ಮನಸ್ಸುಗೊಟ್ಟು ಮಾಡುತ್ತ ಇರುವುದು. ಅಂತಹ ಕ್ರಿಯಾಶೀಲತೆ ರೂಢಿಯಲ್ಲಿದ್ದರೆ ಮನಸ್ಸು ನಿರಂತರ ಉತ್ಸಾಹದಿಂದ ಕೂಡಿರುತ್ತದೆ. ಮುಖ್ಯವಾಗಿ ಮಾನಸಿಕ, ತನ್ಮೂಲಕ ಶಾರೀರಿಕ ಆರೋಗ್ಯ ದೊರೆಯುತ್ತದೆ. ಆಗ ಜೀವನದಲ್ಲಿ ಸುಖ-ಶಾಂತಿಗಳ ಜೊತೆಯಲ್ಲಿ ಶ್ರೇಷ್ಠ ಉದಾತ್ತ ಬದುಕನ್ನು ಸಾಗಿಸುವುದಕ್ಕೂ ಸಾಧ್ಯವಾಗುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ನಾರಾಯಣ ನಾರಾಯಣ ನಾರಾಯಣ