ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆ ವಿಧಿಯು ಸುರಿಯೆ,|
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ.||
ಹೀಗೊಂದು ಮಂಕುತಿಮ್ಮನ ಕಗ್ಗದ ಸಾರ್ಥಕ್ಯಕ್ಕೆ ಇಡೀ ಮಲೆನಾಡು ಕಾತರದಿಂದ ಕಾಯುತ್ತಿದ್ದ ಕ್ಷಣವದು !! ಜುಳು.. ಜುಳು.. ಹರಿಯುವ ನದಿಯ ನೀರಿನ ನಿನಾದದ ಕರೆಯೋಲೆ….! ಆಗಸದೆತ್ತರದಿಂದ ಪಾತಾಳದ ಕಂದರಕ್ಕೆ ದುಮ್ಮಿಕ್ಕುವ ಜಲಪಾತಗಳ ಮನದುಂಬುವ ಆಮಂತ್ರಣ.. ಹಸಿರು ಸೀರೆಯನುಟ್ಟು ಸಮೃಧ್ದಜ್ಯೋತಿಯನ್ನು ಕೈಯಲ್ಲಿ ಹಿಡಿದು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುವ ಪರಿಸರ ಮಾತೆ… ಚಿಲಿಪಿಲಿಗುಟ್ಟುವ ಪಕ್ಷಿಗಳ ಇಂಚರದ ಧ್ವನಿ..ತಮ್ಮನ್ನು ಆತಿಥ್ಯಗೈಯುವ ಪರಿ ಎನಿಸುವಂತಿತ್ತು ಆ ದಿನ …
ಆ ಕ್ಷಣ… ಎಂತಹ ಅಧ್ಬುತವಾದ ದೃಶ್ಯಗಳಿವು…. ಇಂತಹ ಸಮೃಧ್ದತೆಯ ನಡುವೆಯೂ 1978 ರಲ್ಲಿ ಒಂದು ಆಘಾತಕಾರಿ ಸುದ್ದಿ ಇಲ್ಲಿಯ ಜನರ ಕಿವಿಗೆ ಬಿದ್ದಿತ್ತು..!!!? ನದೀ ಜೋಡಣೆಯಂತೆ…. ನಮ್ಮೂರು ಮುಳುಗುವದಂತೆ….ಎಂತಹ ಆಘಾತ…!!! ಬೆಚ್ಚಿಬಿದ್ದಿತ್ತು ಇಡೀ ಸಮುದಾಯ… ಹೆದರಿ ಕಂಗೆಟ್ಟಿದ್ದ ಎಲ್ಲ ಶಿಷ್ಯರಿಗೆ ಅಭಯವಿತ್ತು ಧೈರ್ಯ ಹೇಳಿದವರು ಸ್ವರ್ಣವಲ್ಲಿಯ ಪೀಠಾಧೀಶ್ವರರಾದ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು.
ಆ ದಿನಗಳಲ್ಲಿ ಸಂಪರ್ಕದ ವ್ಯವಸ್ಥೆಯಿಲ್ಲ. ಪತ್ರಿಕೆಗಳ ಭರಾಟೆ ಕಡಿಮೆ ಸರ್ಕಾರದ ನೇರ ಸಂಪರ್ಕ ಯಾರಿಗೂ ಇಲ್ಲ. ಕೆಲವೇ ಕೆಲವು ಶಿಷ್ಯ ಸಮುದಾಯ ಹೊಂದಿದ ಒಂದು ಚಿಕ್ಕ ಮಠ ಈ ನದೀ ಜೋಡಣೆಯನ್ನು ವಿರೋಧಿಸಿ ಗೆದ್ದೀತೇ…. ಎಲ್ಲರ ಮುಖದಲ್ಲೂ ಉದ್ಭವಿಸಿದ ಸಹಜವಾದ ಪ್ರಶ್ನೆ…..?? ಆ ಪ್ರಶ್ನೆಗೆ ಸರಿಯಾದ ಉತ್ತರವನ್ನು ಆ ಕಾಲದಲ್ಲಿ ಪೂಜ್ಯ ಗುರುಗಳು ನೀಡಿದ್ದರು ಎನ್ನುವದು ಪತ್ರಿಕೆಗಳಲ್ಲಿ ದಾಖಲಾದ ವಿಷಯ..!!
ಡಾ|| ರಾಮಚಂದ್ರ ಗುಹಾ ಅವರು ಬರೆದಿರುವ “ಜಗತಿಕ ಪರಿಸರ ಚರಿತ್ರೆ” ಪುಸ್ತಕಕ್ಕೆ ಮುನ್ನುಡಿಬರೆಯುತ್ತಾ ಶ್ರೀ ನಾಗೇಶ ಹೆಗಡೆಯವರು “ಇತಿಹಾಸವನ್ನು ಸೂಕ್ಮವಾಗಿ ನೋಡಿದರೆ 1979-80 ರಲ್ಲಿ ನೆಡೆದ ಬೇಡ್ತಿ ಚಳುವಳಿಯೇ ರಾಜ್ಯದ ಮೊದಲ ಪರಿಸರ ಚಳವಳಿ..! ಜಾಗತಿಕವಾಗಿ ಹೇಳುವದಾದರೆ ಪರಿಸರ ರಕ್ಷಣೆಗಾಗಿ ಧ್ವನಿಯೆತ್ತಿದ ಜಗತ್ತಿನ ಮೊದಲ ಹಿಂದೂ ಸನ್ಯಾಸಿ “ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು” ಆ ಕಾಲದಲ್ಲಿಯೇ ಅವರು ಅರಣ್ಯಸೂಕ್ತ ಉಪದೇಶ ಮಾಡಿ ಪರಿಸರ ಜಾಗೃತಿಯನ್ನು ಸಾಮಾನ್ಯರಲ್ಲೂ ಮೂಡಿಸಿದರು..” ಎಂಬುದಾಗಿ ಬರೆಯುತ್ತಾರೆ. ಸರ್ವಜ್ಞೇಂದ್ರರನಿರ್ದೇಶನದ ಹೋರಾಟದಿಂದಾಗಿ ಬೇಡ್ತಿಯೋಜನೆ 10 ವರ್ಷಗಳಕಾಲ ನೆನೆಗುದಿಗೆ ಬಿದ್ದಿತ್ತು. ಆದರೆ ಆ ಯೋಜನೆ ಸಂಪೂರ್ಣವಾಗಿ ರದ್ದಾಗಿರಲಿಲ್ಲ. ಹತ್ತು ವರ್ಷಗಳ ಸುಧೀರ್ಘ ಅವಧಿಯ ನಂತರ ಮತ್ತೆ ಮರುಕಳಿಸಿತಲ್ಲ ಈ ಅರ್ಬುದ..!! ಒಮ್ಮೆ ಮರೆಯಾಯಿತೆಂದು ಸಂತಸದಿಂದ ಇದ್ದ ಜನರ ನಿದ್ದೆ ಮತ್ತೊಮ್ಮೆ ರದ್ದಾದದ್ದು ಆ ಕ್ಷಣಕ್ಕೆ …1992ರ ಮಾರ್ಚ ತಿಂಗಳಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಘೋಷಣೆಯಾಗಿತ್ತು.. “ಇನ್ನು ಕೆಲವು ತಿಂಗಳಲ್ಲಿ ಬೇಡ್ತಿ-ಅಘನಾಶಿನಿ ನದೀ ಜೋಡಣೆ ಆರಂಭವಾಗಲಿದೆ, ಆ ನದೀಜೋಡಣೆಯಿಂದ ಸಂತ್ರಸ್ತರಾಗಬಹುದಾದ ಉತ್ತರಕನ್ನಡ ಜಿಲ್ಲೆಯ ಜನರಿಗೆ ಪುನರ್ವಸತಿ ಕಲ್ಪಿಸಲಾಗುವದು ಎಂದು ಕೇಂದ್ರಪ್ರಾಧಿಕಾರ ತಿಳಿಸಿದೆ” ಎಂದು ಈ ವಾಕ್ಯಗಳನ್ನು ಕೇಳಿ ಇಡೀ ಉತ್ತರಕನ್ನಡ ಜಿಲ್ಲೆಯೇ ಕಂಗೆಟ್ಟಿತ್ತು..!! ಈ ಮಹಾಸಂಗರಕ್ಕೆ ಇಡೀ ರೈತಸಮೂಹವೇ ವಿಶ್ವಾಸದ ಗಾಂಢಿವವನ್ನು ಕೈಬಿಟ್ಟಿತ್ತು.. ಒಮ್ಮೆ ಪರಿಸರದ ಗೀತೆ ಅರಣ್ಯಸೂಕ್ತದ ಮೂಲಕ ಉಪದೇಶವಾದರೂ ಮತ್ತೊಮ್ಮೆ ರೈತೋಧ್ದಾರಕ್ಕೆ ’ಉದ್ಭವಗೀತೆ’ಯ ನಿರೀಕ್ಷೆಯಲ್ಲಿ ಮನವಿಟ್ಟಿತ್ತು. ನೇತಾರರಿಲ್ಲದೇ ಒಳಮನ ಆ ವಿಷಮತೆಯ ವಿರೋಧಕ್ಕೆ ಒಳಗಿಂದ ಒಳಗೇ ಟೊಂಕಕಟ್ಟಿತ್ತು… ಹಿಂದೊಮ್ಮೆ ಧ್ವನಿ ಎತ್ತಿದ್ದ ಯತಿಗಳ ಪರಂಪರೆ ಅವಿಚ್ಚಿನ್ನವಲ್ಲವೇ..? ಆ ಯೋಗಿಗಳು ಶರೀರ ತ್ಯಜಿಸಿದ್ದರೂ ಅವರ ಸಂಕಲ್ಪ ಗಟ್ಟಿಯಾಗಿಯೇ ಇತ್ತು… ಅದೇ ನಿರೀಕ್ಷೆಯಲ್ಲಿಯೇ ನೇಗಿಲಯೋಗಿಗಳ ದಂಡು ಆ ಯೋಗಪೀಠದ ಬಳಿ ಮತ್ತೊಮ್ಮೆ ನಿಯೋಗ ಹೋಗಿತ್ತು.. ಆ ಹೊಸ ಯತಿಗಳಿಗೆ ಪೀಠವೇರಿ ಕೆಲವು ತಿಂಗಳುಗಳು ಮಾತ್ರ. ಇನ್ನೂ ಇಪ್ಪತ್ತೈದು ಮೀರದ ಎಳೆಯ ಪ್ರಾಯ. ಅವರಲ್ಲಿ ಹೋದ ನಿಯೋಗ ..! ಪೂರ್ಣಫಲ ಸಮರ್ಪಿಸಿ ತಮ್ಮನ್ನು ಸಮರ್ಪಿಸಿಕೊಂಡ ಭಾವದಲ್ಲಿ ಕೇಳಿಯೇ ಬಿಟ್ಟರಲ್ಲ… ” ಗುರುಗಳೇ ಧರ್ಮದಲ್ಲಿ ವ್ಯತ್ಯಯವಾದರೆ ಅದನ್ನು ತಿದ್ದಲು ಇದ್ದವರಲ್ಲವೇ ನೀವು…! ಈ ನಮ್ಮ ಜೀವನಧರ್ಮಕ್ಕೆ ಕುತ್ತು ಬಂದಿದೆ. ನದೀಜೋಡಣೆ ನಮ್ಮೆಲ್ಲರ ಜೀವನವನ್ನೆ ಕಿತ್ತು ತಿನ್ನುತ್ತಿದೆ. “ವಿಚಾರಿಸಬೇಕಾದ ವಿಷಯ” ಯಾವ ಗೊಂದಲವೂ ಇಲ್ಲದೆ ಅವರ ಬಾಯಿಂದ ಅನಾಯಾಸವಾಗಿ ಹೊರಬಂದಿತು…! ಅದನ್ನು ಕೇಳಿ ಅದೇ ಆಶೀರ್ವಾದ, ಅದೇ ಅಭಯ ..!! ಎಂದು ತಿಳಿದರೋ ಏನೋ.. ಎಲ್ಲರೂ ಹಿಂದಿರುಗಿದ್ದು ಸತ್ಯ. ಕೆಲವೇ ದಿನಗಳಲ್ಲಿ “ಬೇಡ್ತಿ-ಅಘನಾಶಿನಿ ಕೊಳ್ಳಸಂರಕ್ಷಣಾ ಸಮಿತಿ” ಶ್ರೀಗಳ ಕರದಿಂದ ಹೊರಬಂದ ಮೊಟ್ಟಮೊದಲ ಪರಿಸರ ಸಂರಕ್ಷಣೆಯ ಹಸುಗೂಸು. ಈ ಹಸುಗೂಸು ಒಬ್ಬ ಯುವಯತಿಯ ಪೋಷಣೆಯಲ್ಲಿ ಬೆಳೆಯಿತು. ರಾಜಕಾರಣಿಗಳು… ಜನನಾಯಕರು.. ಸಮಾಜಸೇವಕರು.. ಪರಿಸರವಾದಿಗಳು…ಎಲ್ಲರೂ ಈ ಹಸುಗೂಸಿನ ಹಾಸಿಗೆಯಲ್ಲಿ ಆಶ್ರಯ ಪಡೆದರು..! ಹಾಗೆಯೇ ..! ಹಾಗೆಯೇ…! ನೆಡೆದಿತ್ತು ಸಿಧ್ದತೆ. ಎಷ್ಟೋ ಆವೇದನೆಗಳು.., ನಿವೇದನೆಗಳು.., ಆಗ್ರಹಗಳು..ಒಂದರ ಹಿಂದೆ ಒಂದು ಹೋದರೂ ಜಗ್ಗಲಿಲ್ಲ ಆಗಿನ ಸರ್ಕಾರ …! ಅದೊಂದುದಿನ ಶ್ರೀಮಠದ ಹೆಬ್ಬಾಗಿಲು….!! ವಾದ್ಯನಾದ… ವೇದಘೋಷ….!! ಕಿಕ್ಕಿರಿದು ತುಂಬಿದ ಜನಸ್ತೋಮ…..!!!!! ಎಲ್ಲರ ಕಣ್ಣಲ್ಲೂ ಏನನ್ನೋ ಸಾಧಿಸುವ ಛಲ…!! ಎಲ್ಲರ ಶರೀರದಲ್ಲೂ ಅದ್ಯಾವುದೋ ಅವ್ಯಕ್ತಶಕ್ತಿಯ ಆವೇಶ..!! ಎಲ್ಲರನ್ನೂ ಒಗ್ಗೂಡಿಸಿತ್ತು ಒಂದು ಯತಿಶಕ್ತಿಯ ಆದೇಶ…..!! ಅಬ್ಬ… ಎಂಥವರೂ ಮೂಗಿನ ಮೇಲೆ ಬೆರಳಿಡುವ ಆ ದೃಶ್ಯ…..!!!! ಬೆಳ್ಗೊಡೆಯ ಆಶ್ರಯದಲ್ಲಿ ಹೊರಟೇಬಿಟ್ಟರು ಆ ಯುವಸನ್ಯಾಸಿ ಕನ್ಯಾಕುಮಾರಿಯ ಕಲ್ಬಂಡೆಗಳಮೇಲೆ ಹೆಜ್ಜೆ ಹಾಕಿದ ವಿವೇಕಾನಂದರನ್ನು ಕ್ಷಣಕ್ಷಣಕ್ಕೂ ನೆನಪಿಸುವಂತಿತ್ತು ಆ ಯತಿಗಳ ಗಂಭೀರ ನಡಿಗೆ ….!!! ಮಠದಿಂದ ಹೊರಟ ಯತಿಗಳ ಹಿಂಬದಿಯಲ್ಲಿ ಕಣ್ಣಿಗೆ ಕಾಣುವಷ್ಟು ದೂರ ಎಲ್ಲಿ ನೋಡಿದರೂ ಜನರ ಹಿಂಡು ….!!! ರಾಮೇಶ್ವರದಿಂದ ಲಂಕೆಗೆಸಾಗುವ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಹಿಂದೆ ರಾಮನನ್ನೇ ಸರ್ವಸ್ವವೆಂದು ತಿಳಿದು ಹೊರಟ ಕಪಿಸೇನೆಯಷ್ಟು ಪವಿತ್ರ ಭಾವನೆ ಮೂಡಿಸುವಂತಿತ್ತು ಆ ದೃಶ್ಯ …!! ಶ್ರೀಮಠದಿಂದ ಮಾಗೋಡಿನವರೆಗೆ ಅನನ್ಯ ಪಾದಯಾತ್ರೆ….!!!! ಶ್ರೀಮಠದಿಂದ ಮಾಗೋಡಿನವರೆಗಿನ ಸುಮಾರು 50-60 ಕಿಲೋಮೀಟರ್ ಪ್ರದೇಶವನ್ನ ಪಾದಯಾತ್ರೆಯಿಂದಲೇ ಕ್ರಮಿಸುವ ಉದ್ದೇಶದಿಂದ ಹೊರಟ ಜನಜಂಗುಳಿ.
ಸೆಪ್ಟೆಂಬರ್ 14 ರ ಬೆಳಗ್ಗೆ ಹೊರಟ ಆ ಜನಸ್ತೋಮಕ್ಕೆ ದಾರಿಯುದ್ದಕ್ಕೂ ಅರವಟ್ಟಿಗೆ ವ್ಯವಸ್ಥೆ. ಆ ಜನರ ಹುಮ್ಮಸ್ಸು ಹೇಗಿತ್ತೆಂದರೆ ? ಯಾರೊಬ್ಬರೂ ಆಯಾಸವಾಯಿತು ಎಂದವರಿಲ್ಲ. ..!! ಸ್ವಂತ ವಾಹನವಿದ್ದರೂ ವಾಹನ ಅಪೇಕ್ಷಿಸಿದವರಿಲ್ಲ. …!!! ದೇಶದ ಮೂಲೆ-ಮೂಲೆಯ ಸುದ್ದಿ ಮಾದ್ಯಮಗಳು ನಿಬ್ಬೆರಗಾಗಿ ಈ ಮಹಾಯಾತ್ರೆಯನ್ನು ಪರಿಸರ ಜಾತ್ರೆಯನ್ನು ಅದೆಷ್ಟೋ ರೀತಿಯಿಂದ ವರ್ಣಿಸಿದರು…!! ನಿತ್ಯವೂ ಒಂದೊಂದು ಕಡೆ ವಾಸ್ತವ್ಯ. ಒಂದೊಂದು ಕಡೆ ಭಿಕ್ಷೆ.. ದಂಡ ಕಮಂಡಲು ಧಾರಿ… ಎತ್ತರದ ಶರೀರ.. ಅಂಚೂ ಬೇರೆಯಲ್ಲದ ಶುಧ್ದಕಾಶಾಯ ವಸ್ತ್ರ… ತ್ರಿಕರಣ ಪರಿಶುಧ್ದತೆಯನ್ನು ಸಾರುವ ತ್ರಿಪುಂಡ್ರ … ಆಜ್ಞಾಸಾಮರ್ಥ್ಯವನ್ನು ಸ್ಪಷ್ಟವಾಗಿ ನಿರ್ದೇಶಿಸುವ ನಡುಹಣೆಯ ಕೆಂಪುಬೊಟ್ಟು.. ಪೂರ್ಣಪರಿತ್ಯಾಗದ ಸಂಕೇತವೋ ಎಂಬಂತೆ ಪೂರ್ಣ ಮಂಡನದ ಆ ಮುಖಮುದ್ರೆ…!! ಗಹನವಾದ ಯೋಚನೆಯ ಮಧ್ಯದಲ್ಲೂ ಅಭಯದಾಯಕ ಗಂಭಿರಪೂರ್ಣ ನಗು ..! ಆಹಾ..!! ಅದೆಂತಹ ತೇಜಸ್ಸು… ವರ್ಚಸ್ಸು..!! ಕಟ್ ..ಕಟ್… ಕಟ್.. ಎಂಬ ಪಾದುಕೆಯ ಪ್ರತಿಪದದ ಸದ್ದು . ಸಾಧನೆಯ ಶಿಖರಾರೋಹಣದ ಉತ್ತುಂಗದ ಸಾಮೀಪ್ಯಕ್ಕೆ ಕ್ಷಣಗಣನೆಯೋ ಎಂಬಂತೆ ಭಾಸವಾಗುತ್ತಿತ್ತು..ಅವರ ಒಂದೊಂದು ಹೆಜ್ಜೆಯೂ ಆ ನದಿಗೆ ಆಶ್ರಿತವಾಗಿದ್ದ ಕೋಟಿ-ಕೋಟಿ ಜೀವಜಂತುಗಳಿಗೆ ನಾವಿದ್ದೇವೆ..ನಾವಿದ್ದೇವೆ ಎಂಬ ಸಾಂತ್ವನದ ಮಾತುಗಳನ್ನಾಡುತ್ತಿತ್ತು…! ಆ ಉರಿ ಬಿಸಿಲಬೇಗೆಯಲ್ಲೂ ಮಾರ್ಗದ ಬದಿಯ ಮರಗಳು ನಮ್ಮ ಕುಲೋಧ್ದಾರಕರಿವರು ಎಂಬ ಭಾವನೆಯಲ್ಲಿ ಬಾಗಿ ನೆರಳೀಯುತ್ತಿವೆಯೇನೋ ಎನ್ನುವಂತಿತ್ತು…! ನೀರೊಳಗಿರುವ ಮತ್ಸ್ಯಾದಿ ಜಂತುಗಳು “ಹಸಿರು ಯೋಗಿ” ಯ ಕಂಡು ಭಕ್ತಿಯಿಂದಲೋ.., ಭಯದಿಂದಲೋ ಪುನಃ ಪುನಃ ನೀರೊಳಗೆ ಆಚಿಂದೀಚೆ ಓಡಾಡಿದ್ದು ಸುಳ್ಳಲ್ಲ…!! ಯಾವ ನೆಲೆಯನ್ನೂ, ಹಿನ್ನೆಲೆಯನ್ನೂ ಅರಿಯದ ಬುಡಕಟ್ಟುಜನಾಂಗದವರು ಕಾವಿಯೊಳಗಡಗಿದ ತೇಜಃಪುಂಜಕ್ಕೆ ಕೈಮುಗಿದು ಅಡ್ಡಬಿದ್ದಿದ್ದಂತೂ ಮನದುಂಬುವ ಸಮಯ…!!
ಹಾಗೆಯೇ ನಾಲ್ಕುದಿನ ನೆಡೆದಿತ್ತು ಈ ಪರಿಸರ ಜಾತ್ರೆ… ಪ್ರಕೃತಿಮಾತೆಯ ಆರಾಧನೆ…
ಮುಂದುವರೆಯುವದು……
ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ