
(ಶಿವರಾತ್ರಿಪರ್ವದಕಾಲನಿರ್ಣಯ, ಮಾಹಾತ್ಮ್ಯಹಾಗೂಆಚರಣೆಯಶಾಸ್ತ್ರೀಯಕ್ರಮ)
ಮಾಘ ಬಹುಳ ಚತುರ್ದಶಿ ಶಿವರಾತ್ರಿ. ಅಂದು ಪ್ರಪಂಚಕ್ಕೇ ತಂದೆಯೆನಿಸಿದ ಶಿವನ ಆರಾಧನೆಗೆ ಪ್ರಶಸ್ತ ಮುಹೂರ್ತ
“ಮಾಘ ಕೃಷ್ಣ ತ್ರಯೋದಶ್ಯಾಂ ಆದಿದೇವೋ ಮಹಾನಿಶಿ |
ಶಿವಲಿಂಗತಯೋದ್ಭೂತಃ ಕೋಟಿಸೂರ್ಯ ಸಮಪ್ರಭ ||
ತತ್ಕಾಲವ್ಯಾಪಿನೀ ಗ್ರಾಹ್ಯಾ ಶಿವರಾತ್ರಿವ್ರತೇ ತಿಥಿ|
ಎಂಬ ಈಶಾನಸಂಹಿತೆಯ ವಾಕ್ಯದಂತೆ ಮಹಾಶಿವರಾತ್ರಿಯಂದು ನಡುರಾತ್ರಿ ಕೋಟಿಸೂರ್ಯ ಪ್ರಕಾಶನಾದ ಪರಮಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದನೆಂದು ತಿಳಿದುಬರುತ್ತದೆ. ಇದಲ್ಲದೇ ಶಿವರಾತ್ರಿಯಂದೇ ಶಿವನು ಹಾಲಾಹಲ (ವಿಷ) ದಿನವೆಂದೂ, ತಾಂಡವನೃತ್ಯ ಮಾಡಿದ ದಿನವೆಂದೂ ಹೇಳುತ್ತಾರೆ.
*ಶಿವರಾತ್ರಿಆಚರಣೆವಿಧಾನ*
ಈ ದಿನ ಅರುಣೋದಯದಲ್ಲಿ ಎದ್ದು ಸ್ನಾನಮಾಡಿ ಶುಭ್ರವಸ್ತ್ರವನ್ನುಟ್ಟು “ಸಮಸ್ತ ಪಾಪ ನಿವಾರಣೆಗಾಗಿ,ಜ್ಞಾನ ಮೋಕ್ಷ ಪ್ರಾಪ್ತಿಗಾಗಿಯೂ ಶಿವರಾತ್ರಿ ವ್ರತ ಆಚರಿಸುತ್ತೇನೆ” ಎಂದು ಸಂಕಲ್ಪ ಮಾಡಬೇಕು. ತ್ರಯೋದಶಿಯಲ್ಲಿ ಒಪ್ಪತ್ತು ಊಟ,ಚತುರ್ದಶಿಯಂದು ಪೂರ್ಣನಿರಾಹಾರವಾಗಿದ್ದು,ಅಮಾವಾಸ್ಯೆಯಂದು ಪಾರಣೆ ಮಾಡಬೇಕು. ತೀರಾ ಅಸಮರ್ಥರಾಗಿದ್ದರೆ ಕ್ಷೀರಾಹಾರ ಅಥವಾ ಫಲಾಹಾರ ಸ್ವೀಕರಿಸಬಹುದು. ಪ್ರದೋಶಕಾಲಕ್ಕೆ ಶಿವಾಲಯಕ್ಕೆ ಹೋಗಿ ರಾತ್ರಿ ನಾಲ್ಕೂ ಯಾಮಗಳಲ್ಲೂ ರುದ್ರಾಭಿಷೇಕ,ಪೂಜೆ,ಹರಿಕಥೆ,ಸತ್ಸಂಗಾದಿಗಳಲ್ಲಿ ಮಗ್ನರಾಗಬೇಕು. ಕೊನೆಯಲ್ಲಿ “ಬದ್ಧೋಹಂ ವಿವಿಧೈಃ ಪಾಪೈ ಸಂಸಾರ ಭವ ಬಂಧನೈಃ |
ಪತಿತಂ ಮೋಹಜಾಲೇ ಮಾತ್ವಂ ಸಮುದ್ಧರ ಶಂಕರ || ಎಂದರೆ ” ನಾನಾ ವಿಧವಾದ ಪಾಪಕರ್ಮಗಳಿಂದ ಭವ–ಬಂಧನದಲ್ಲಿ ಸಿಲುಕಿದ ನನ್ನನ್ನು ಲೋಕಕ್ಕೆ ಸುಖವನ್ನು ಕೊಡುವ ಸ್ವಾಮಿಯಾದ ನೀನು ಉದ್ಧರಿಸು” ಎಂದು ಪಾರ್ಥಿಸಬೇಕು.
“ಶಿವ ಶಿವ ಎಂದರೆ ಸಿಡಿತಿಲ್ಲಾ ಬಯಲಾಗಿ ಕಲ್ಲು ಬಂದೆರಗಿ,ಕಡೆಗಾಗಿ ಎಲೆ ಮನವೇ ಶಿವನೆಂಬ ಶಬುದ ಬಿಡಬೇಡ” ಎಂಬಂತೆ ಶಿವಧ್ಯಾನದಲ್ಲಿ ನಿರತರಾಗಿದ್ದರೆ ಯಾವ ವಿಪತ್ತೂ ಬರಲಾರದು.
“ಅಭಿಷೇಕ ಪ್ರಿಯೋಶಿವಃ ” ಎಂಬಂತೆ ಶಿವನು ಅಭಿಷೇಕ ಪ್ರಿಯ. ಅಭಿಷೇಕದಿಂದ ತುಷ್ಟಿಪಡಿಸಿದರೆ ಆ ಪಶುಪತಿಯು ನಮ್ಮಲ್ಲಿರುವ ಪಶುತ್ವವನ್ನು ದೂರಮಾಡುತ್ತಾನೆ.
ಭಕ್ತನು ನೀಡಿದ ಅಲ್ಪವನ್ನು ಕಲ್ಪವೆಂದು ಭಾವಿಸಿ, ಧಾವಿಸುವ ದೇವನೆಂದರೆ ಮಹಾದೇವನೊಬ್ಬನೇ ಸರಿ. ಕವಿ ನೀಲಕಂಠ ದೀಕ್ಷಿತರು ಸೊಗಸಾಗಿ ಒಂದು ಮಾತು ಹೇಳಿದ್ದಾರೆ.” ಹಿಂದೆ ಸಮುದ್ರ ಮಥನದಲ್ಲಿ ಕಾಮಧೇನು, ಕಲ್ಪವೃಕ್ಷ,ಕೌಸ್ತುಭಮಣಿ,ಅಪ್ಸರೆಯರು,ಅಂಮೃತ ಮುಂತಾದವು ಹುಟ್ಟಿದಾಗ ನನಗೆ–ತನಗೆ ಎಂದು ಸಾಮಾನ್ಯ ಮನುಷ್ಯರಂತೆ ದೇವತೆಗಳೂ ಅಪೇಕ್ಷಿಸಿದರು. ಈ ಮಧ್ಯೆಉಪೇಕ್ಷೆಯಿಂದಿರುವ ಪರಮಶಿವನು ಭೀಕರ ಕಾಲಕೂಟ ವಿಷ ಹುಟ್ಟಿದಾಗ ಹಾಲಾಹಲ, ಕೋಲಾಹಲವುಂಟಾಗಿ ಅದು ‘ನನಗೆ ಬೇಡ,ತನಗೆ ಬೇಡ‘ ಎಂದು ಎಲ್ಲರೂ ದಿಕ್ಕೆಟ್ಟು ಓಡಿದ ಆ ಕಷ್ಟದ ವೇಳೆಯಲ್ಲಿ “ಅದು ನನಗಿರಲಿ” ಎಂದು ಪಡೆದು ಕುಡಿದು ಜಗತ್ತನ್ನೇ ಉದ್ಧರಿಸಿದ ದೇವನನ್ನು ಸ್ತುತಿಸೋಣ ಎನ್ನುತ್ತಾರೆ.
ನಮ್ಮ ಜೀವನ ಅಳುವಿನಿಂದ ಆರಂಭವಾಗುತ್ತದೆ. ” ರುಃ ದ್ರಾವಯತಿ ಇತಿ ರುದ್ರ” ಎಂದರೆ ರೋದನವನ್ನು ದೂರ ಮಾಡುವವನೇ ರುದ್ರ. ” ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಂ” ಅಂದರೆ ‘ಜಗದೃದಯವೇ ಆನಂದಮಯನಾಗಿ,ರೋಗ-ರುಜಿನಗಳಿಲ್ಲದೇ, ದ್ವೇಷಾಸೂಯೆಗಳಿಲ್ಲದೇ ಸಿದ್ಧಿ-ಸಮೃದ್ಧಿಗಳಿಂದ, ತುಷ್ಟಿ-ಪುಷ್ಟಿಗಳಿಂದ ರಾರಾಜಿಸಲಿ’ ಎಂದು ಪ್ರಾರ್ಥಿಸಲಾಗಿದೆ. ನಾಲ್ಕು ಯಾಮಗಳಲ್ಲಿ ರುದ್ರಾಭಿಷೇಕ ಮಾಡಿದರೆ ಅದಕ್ಕೆ ನಾಲ್ಕು ವೇದಾಭಿಷೇಕದಷ್ಟೇ ಫಲ.
ವೇದವಲ್ಲದೇ, ಲಿಂಗಾಪುರಾಣ, ಶಿವಪುರಾಣ,ಸ್ಕಂದಪುರಾಣ,ಕೂರ್ಮಪುರಾಣ, ಶಿವರಹಸ್ಯ, ಶೈವಾಗಮಮುಂತಾದವುಶಿವನಮಹಿಮೆಯನ್ನುಸಾರುತ್ತವೆ. ಸ್ಕಂದಪುರಾಣದಒಂದುಮಾತುಸ್ಮರಣಾರ್ಹ.“ಸಂಸಾರಮುಲ್ಬಣಮಸಾರಮವಾಪ್ಯಜಂತೋಃ|ಸಾರೋಯಮಿಶ್ವರಪದಾಂಬುರುಹಸ್ಯಸೇವಾ ”|| ಅಂದರೆಅಸಾರವಾದಸಂಸಾರದಲ್ಲಿಜನಿಸಿದಮನುಷ್ಯನಿಗೆಈಶ್ವರಾರಾಧನೆಯೇಸಾರ. ವ್ಯಾಧಿನಿವಾರಣೆಗೆಆರೋಗ್ಯಐಶ್ವರ್ಯಕ್ಕೆಶಿವಾರಾಧನೆಯೇರಾಮಬಾಣ.“ತಸ್ಮಿನ್ಮಹೇಶೆವಿಧಿನೇಜ್ಯಮಾನೇ,ಸರ್ವೇಪ್ರಸೀದಂತಿಸುರಾಧಿನಾಥಾಃ” ಎಂಬಂತೆಅವನನ್ನುಆರಾಧಿಸಿದರೆಎಲ್ಲಾದೇವತೆಗಳೂತುಷ್ಟರಾಗುತ್ತಾರೆ.ಮಹಾಭಾರತದಲ್ಲಿಮಾರ್ಕಂಡೆಯಶಿವನನ್ನುಆರಾಧಿಸಿಹದಿನಾಲ್ಕುಕಲ್ಪಗಳವರೆಗೆದೀರ್ಘಾಯುಷ್ಯಪಡೆದವೃತ್ತಾಂತವಿದೆ. ಹರಿವಂಶದಲ್ಲಿಶ್ರೀಕೃಷ್ಣನೂರುದ್ರಜಪಮಾಡಿದನೆಂದುಹೇಳಿದೆ.
ಲಿಂಗ ರಹಸ್ಯ :–ಲಿಂಗ ಬ್ರಹ್ಮಾoಡದ ಪ್ರತೀಕ. ಅದಕ್ಕೆ ಕೈ ಕಾಲು ಮುಖವಿಲ್ಲ. ಅದು ಸಾಕಾರವೂ ಅಲ್ಲ ನಿರಾಕಾರವೂ ಅಲ್ಲ. ಅದು ನಮ್ಮನ್ನು ಸಾಕಾರದಿಂದ ನಿರಾಕಾರದತ್ತ, ಸಗುಣೋಪಾಸನೆಯಿಂದ ನಿರ್ಗುಣೋಪಾಸನೆಯತ್ತ ಕರೆದೊಯುತ್ತದೆ. ಈಶ್ವರ ಸರ್ವವ್ಯಾಪಿಯೆಂದು ಲಿಂಗ ಸಾರುತ್ತದೆ.“ಜ್ಞಾನಂ ಮಹೇಶ್ವರಾದಿಚ್ಛೆತ್ ” ಎಂದರೆ ಜ್ಞಾನವನ್ನು ಈಶ್ವರನಲ್ಲಿ ಬೇಡಬೇಕು. ಜ್ಞಾನಶಕ್ತಿಯೇ ಮನುಷ್ಯನನ್ನು ಪ್ರಾಣಿಗಳಿಂದ ಉನ್ನತನನ್ನಾಗಿ ಮಾಡಿದೆ. ಈಶ್ವರನು ಚಂದ್ರನನ್ನು ತಲೆಯಮೇಲಿಟ್ಟು ಮೆರೆಸಿ, ವಿಷವನ್ನು ಕಂಠ ದಲ್ಲಿ ಅಡಗಿಸಿಟ್ಟಂತೆ, ನಾವು ಗುಣವನ್ನು ಮೆರೆಸಿ, ದೋಷವನ್ನು ಮರೆಸಿ, ಬಾಳಲು ಕಲಿಯಬೇಕು.ಸಂಸಾರದ ವಿಷಯ ವಾತಾವರಣವನ್ನು ತೂಗಿಸಿ –ಬಾಗಿಸಿ ಬಾಳುವುದನ್ನು ಶಿವನಿಂದ ಕಲಿಯಬೇಕು.ಅವನ ಬಳಗವನ್ನೇ ನೋಡಿ :-ಅವನ ಕೈ ಹಾಗೂ ಕೊರಳಿಗೆ ಸುತ್ತಿದ ಸರ್ಪಕ್ಕೆ, ಗಣಪತಿಯ ವಾಹನ ಇಲಿಯನ್ನು ಕಂಡರಾಗದು. ಪಾರ್ವತಿಯ ವಾಹನ ಸಿಂಹ. ಅದು ಗಜಮುಖನನ್ನು ಕಂಡು ಆನೆಯಂದು ಭಾವಿಸಿ ತಿನ್ನಲು ಧಾವಿಸುತ್ತದೆ. ಗೌರಿಗೆ ಶಿವನ ತಲೆಯ ಗಂಗೆಯನ್ನು ಕಂಡರೆ ಅಸೂಯೆ. ಇವರೆಲ್ಲರನ್ನೂ ಸಮತೋಲನದಲ್ಲಿಟ್ಟುಕೊಂಡು ಹೋಗುವಲ್ಲಿ ಅವನ ಹೆಗ್ಗಳಿಕೆ ವ್ಯಕ್ತವಾಗುತ್ತದೆ. ಭಕ್ತರಿಗೆ ಕಲ್ಯಾಣವನ್ನುಂಟು ಮಾಡುವುದರಿಂದ ಆತ ಶಂಕರ. ಕಾಮನನ್ನು ನಿಗ್ರಹಿಸಿದ್ದರಿಂದ ಕಾಮಾರಿ. ಸ್ಥೂಲ –ಸೂಕ್ಷ್ಮ –ಕಾರಣಗಳೆಂಬ ಪುರಗಳಿಗೆ ಅಂತಕನಾದುದರಿಂದ ತ್ರಿಪುರಾರಿ. ಹೀಗೆ ಶಿವನ ಒಂದೊಂದೂ ಹೆಸರು ಅರ್ಥಪೂರ್ಣ. ಅವನ ಕೈಯಲ್ಲಿರುವ ತ್ರಿಶೂಲ ಸತ್ವ –ರಜ –ತಮೋಗುಣಗಳಿಗೂ, ಡಮರುಗ ಶಬ್ದ ಬ್ರಹ್ಮಕ್ಕೂ, ಗಂಗೆ ಅಮೃತಕ್ಕೂ, ಗಜಚರ್ಮ ಗರ್ವನಿಗ್ರಹಕ್ಕೂ, ವಿಭೂತಿ ಪರಿಶುದ್ಧತೆಗೂ, ಹಣೆಗಣ್ಣು ಜ್ಞಾನಕ್ಕೂ, ಚಂದ್ರ ಆನಂದಕ್ಕೂ ಸಂಕೇತಗಳಾಗಿವೆ. ಅವನನ್ನು ಭಕ್ತಿಯಿಂದ ನಮಿಸಿದವರಿಗೆ ಬೇಡಿದ್ದನ್ನು ನೀಡುವಷ್ಟು ಅಖಂಡ ಐಶ್ವರ್ಯವಿದ್ದರೂ ಅವನು ಮಾತ್ರ ಗಜಚರ್ಮಧಾರಿ. ತನ್ನ ಪ್ರೇಯಸಿಗೆ ಅರ್ಧ ದೇಹವನ್ನು ಕೊಟ್ಟು ಸದಾ ಅವಳೊಡನಿದ್ದರೂ, ವಿಷಯಾಸಕ್ತಿ ರಹಿತರಾದ ಯತಿಗಳನ್ನೂ ಮೀರಿದ ಪರಮಯತಿ. ನೆಲ –ಜಲ –ಅನಲ –ಅನಿಲ –ಆಕಾಶ –ಸೂರ್ಯ –ಚಂದ್ರ –ಯಜಮಾನರೂಪದಲ್ಲಿ ಅಷ್ಟಮೂರ್ತಿಯಾಗಿ ಸಮಸ್ತ ಜಗತ್ತನ್ನು ಧರಿಸಿದ್ದರೂ ನಿರಭಿಮಾನಿ. ನಮ್ಮ ತಾಮಸ ವೃತ್ತಿಯನ್ನು ದೂರಮಾಡಿ, ಸನ್ಮಾರ್ಗವನ್ನು ನೀಡಲು ಇಂಥ ಪರಶಿವನಿಗಲ್ಲದೇ ಮತ್ತಾರಿಗೆ ಸಾಧ್ಯ?
ಶಿವರಾತ್ರಿಯ ಕಥೆ :-ಶಿವಲಿಂಗಾಮೃತದಲ್ಲಿ ಬರುವ ಈ ಕಥೆಯನ್ನು ಶಿವನೇ ಪಾರ್ವತಿಗೆ ಹೇಳಿದ್ದಾನೆ.
ಪ್ರತ್ಯಂತವೆಂಬ ದೇಶದಲ್ಲಿ ಸದಾ ಬೇಟೆಯಾಡಿ ಜೀವಿಸುವ ಒಬ್ಬ ಬೇಡನಿದ್ದ. ಒಂದು ದಿನ ಹಗಲೆಲ್ಲ ಅವನಿಗೆ ಬೇಟೆ ಸಿಗಲಿಲ್ಲ. ರಾತ್ರಿ ಸರೋವರ ಒಂದರ ಬಳಿ ಇದ್ದ ಬಿಲ್ವವೃಕ್ಷವನ್ನೇರಿ, ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿಯನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ. ಅಂದು ಶಿವರಾತ್ರಿಯಾಗಿತ್ತು. ಆದರೆ ಬೇಡ ನಿಗೆ ತಿಥಿ– ಮಿಥಿಗಳ ಪರಿವೆಯಿಲ್ಲ. ಬಿಲ್ವವೃಕ್ಷದಡಿಯಲ್ಲೇ ಒಂದು ಬಯಲು ಲಿಂಗವಿದ್ದುದರ ಅರಿವು ಅವನಿಗಿಲ್ಲ. ಅವನಿಗೆ ಅರಿವಿಲ್ಲದಂತೆ, ದೃಷ್ಟಿಗೆ ಅಡ್ಡ ಬಂತೆಂದು ಕಿತ್ತು ಬಿಸಾಡಿದ ಬಿಲ್ವಪತ್ರಗಳು, ಮರದಡಿಲ್ಲಿದ್ದ ಲಿಂಗವನ್ನು ಮುಚ್ಚಿದವು.
ಆ ಸಮಯಕ್ಕೆ ಒಂದು ತುಂಬು ಗರ್ಭಿಣಿಯಾದ ಜಿಂಕೆ ನೀರು ಕುಡಿಯಲು ಬಂದಿತು. ಬೇಡ ಬಾಣಬಿಡಲು ಸನ್ನದ್ಧನಾದಾಗ ಅದು ನುಡಿಯಿತು; ತುಂಬು ಗರ್ಭಿಣಿಯಾದ ನನ್ನನ್ನು ಕೊಂದು ಭ್ರೂಣಹತ್ಯಾ ಪಾಪಕ್ಕೆ ಗುರಿಯಾಗಬೇಡ. ಸ್ವಲ್ಪ ಸಮಯದಲ್ಲೇ ಪ್ರಸವಿಸಿದ ಬಳಿಕ ನಾನಾಗಿಯೇ ಇಲ್ಲಿಗೆ ಬಂದು ದೇಹ ಅರ್ಪಿಸುವೆ, ಶಿವನಾಣೆ; ಎಂದಾಗ ದಯೆ ಹುಟ್ಟಿ ಅದನ್ನೂ ಬಿಟ್ಟು ಬಿಟ್ಟನು. ನಿದ್ರೆ ತಡೆಯಲು ಪತ್ರೆ ಎಸೆಯುತ್ತಲೇ ಇದ್ದನು. ಎರಡನೇ ಯಾಮದಲ್ಲಿ ಇನ್ನೊಂದು ಹರಿಣಿ (ಜಿಂಕೆ) ಮೂರು ಮರಿಗಳೊಂದಿಗೆ ನೀರು ಕುಡಿಯಲು ಬಂದಿತು. ಅದೂ ಹಾಗೆ ಬೇಡನನ್ನು ಕುರಿತು ಈ ಮರಿಗಳನ್ನು ಪತಿಯೆಡೆಗೆ ಬಿಟ್ಟು ಬರುವ ತನಕ ಸಹಿಸು,ಇಲ್ಲವಾದರೆ ಅವು ಅನಾಥವಾಗುತ್ತವೆ, ಎಂದಾಗ ದಯೆ ಹುಟ್ಟಿ ಅದನ್ನೂ ಬಿಟ್ಟ. ನಂತರ ಒಂದು ಗಂಡು ಜಿಂಕೆ ಬಂದಿತು. ಅದಕ್ಕೆ ಬಾಣ ಹೊಡೆದಾಗ ಅದು, ” ಶಿವ ಶಿವಾ! ನನ್ನನ್ನೇಕೆ ಕೊಲ್ಲುವೆ? ಮೊದಲು ನೀನು ದಯೆ ತೋರಿ ಬಿಟ್ಟ ಎರಡು ಜಿಂಕೆಗಳು ನನಗಾಗಿ ಕಾಯುತ್ತಿವೆ. ಅವುಗಳೊಂದಿಗೆ ಇಲ್ಲಿಗೆ ತಪ್ಪದೇ ಬರುವೆ. ‘ಶಿವನಾಣೆ’ ಎಂದಾಗ ಅದನ್ನೂ ಬಿಟ್ಟು ಬಿಟ್ಟ. ಮಾತಿನಂತೆ ಬೆಳಗಿನ ಜಾವಕ್ಕೆ ಎಲ್ಲಾ ಜಿಂಕೆಗಳು, ಮರಿಗಳು ಬಂದು ಬೇಡನನ್ನು ಕುರಿತು ‘ನಮ್ಮನ್ನು ಈಗ ಕೊಲ್ಲು’ ಎಂದವು. ಉಷಃ ಕಾಲ ಸಮೀಪಿಸಿತು. ಬೇಡನ ಮನಸ್ಸೇ ಪರಿವರ್ತನೆಯಾಗಿತ್ತು. ಆಗ ಅವನು, ಶಿವ- ಶಿವಾ ನಿಮ್ಮನ್ನ ಕೊಂದು ನಾನಾವ ನರಕಕ್ಕೆ ಹೋಗಲಿ? ಆ ದಿನ ಬೇಡನಿಗೆ ಅರಿವಿಲ್ಲದಂತೆ ನಿರಾಹಾರ, ಲಿಂಗಾರ್ಚನೆ, ಜಾಗರಣೆ, ಶಿವನಾಮಸ್ಮರಣೆ ಎಲ್ಲಾ ಆಗಿ, ಕಟ್ಟಾ ಶಿವರಾತ್ರಿಯ ಆಚರಣೆ ನಡೆದಿತ್ತು. ಶಿವನು ಅವನ ಬಗ್ಗೆ ಪ್ರಸನ್ನನಾಗಿದ್ದ. ಕೂಡಲೇ ಅಲ್ಲಿಗೆ ಬಂದ ಶಿವಗಣಗಳು ವಿಮಾನದಲ್ಲಿ ಆ ಜಿಂಕೆಗಳೊಂದಿಗೆ ಕುಟುಂಬ ಸಹಿತ ಬೇಡನನ್ನು ಕೂರಿಸಿಕೊಂಡು ಕೈಲಾಸಕ್ಕೆ ಕರೆದೊಯ್ದುರು. ಅವನ್ನನು ಬರಮಾಡಿಕೊಂಡ ಶಿವನು ” ನಿನಗಷ್ಟೇ ಅಲ್ಲ, ನಿನ್ನ ಕಥೆ ಕೇಳಿದವರಿಗೂ, ಶಿವರಾತ್ರಿಯಂದು ಮಡಿದವರಿಗೂ, ಕೈಲಾಸ ಪದವಿ ಖಚಿತ ” ಎಂದು ಲೋಕಕ್ಕೆ ಆಶ್ವಾಸನೆಯಿತ್ತರು.
ಶಿವಾರಾಧನೆಗೆಐಶ್ವರ್ಯ, ಸಂಪತ್ತು, ಆಡಂಬರಯಾವುದುಬೇಕಿಲ್ಲ. ಬಿಲ್ವಪತ್ರೆ, ಒಳ್ಳೆಯಭಕ್ತಿಭಾವನೆಯೇಇಲ್ಲಿಮುಖ್ಯ. ಹೀಗೆಶಿವರಾತ್ರಿಯುಪ್ರಾಂತಭೇದವಿಲ್ಲದೇ, ಇಡೀದೇಶಾದ್ಯಂತಆಚರಿಸುವಉಪವಾಸಹಾಗೂಜಾಗರಣೆಪ್ರಧಾನವಾದಹಬ್ಬ. ಜಗತ್ತಿನಕ್ಷಾಮದೂರವಾಗಿಕ್ಷೇಮನೆಲೆಸಲು, ನಮ್ಮಮುಖಶವಮುಖವಾಗದೆಶಿವಮುಖವಾಗಿ, ನಮ್ಮಬಾಳುಬೀಳಾಗದೆ, ಧೂಳಾಗದೇಅಮೃತವಾಗಲು, ನರಹರನಾಗಲು, ನಮ್ಮಲ್ಲಿಯಪಶುತ್ವಕಳೆದುಕೊಂಡುಪಶುಪತಿಯತ್ತಸಾಗಲುಮಹಾಶಿವರಾತ್ರಿವ್ರತಪೂರಕ- ಪ್ರೇರಕಎನ್ನಬಹುದು.
ಲೇಖನ : ಶ್ರೀ ಈಶ್ವರ .ಗ.ಭಟ್ಟ (ಕರ್ಣಜ್ಜರಮನೆ)ಮಲವಳ್ಳಿ..
ಪರಿಕಲ್ಪನೆ : ಶ್ರೀರಾಜರಾಜೇಶ್ವರೀವಿದ್ಯಾರ್ಥಿಪರಿಷತ್
ಪ್ರಸರಣ : ಶ್ರೀಸ್ವರ್ಣವಲ್ಲೀಭಕ್ತವೃಂದ