ಪಕ್ಷಕ್ಕೂಂದುಪುರಾಣ – 1 ಮತ್ಸ್ಯಪುರಾಣ

posted in: Articles, Uncategorized | 0

   

[ಬಾವಿ, ಕೆರೆ ನಿರ್ಮಾಣ, ವೃಕ್ಷಗಳ ಉದ್ಯಾನವನ ನಿರ್ಮಾಣ, ವಾಸ್ತುಶಾಸ್ತ್ರ, ಖಗೋಳ, ಭೂಗೋಳ ಮುಂತಾದ ನಿತ್ಯೋಪಯೋಗೀ ವಿಷಯಗಳು ಮತ್ಸ್ಯಪುರಾಣದಲ್ಲಿ ವಿವರಿಸಲ್ಪಟ್ಟಿದೆ.]

 ವೇದಗಳಲ್ಲಿ ಹೇಳಿರುವ ವಿಷಯಗಳನ್ನು ಎಲ್ಲರಿಗೂ ಸರಳವಾದ ಭಾಷೆಯಲ್ಲಿ , ಅಥವಾ ಕಥಾರೂಪದಲ್ಲಿ ತಲುಪಿಸುವ ಉದ್ದೇಶದಿಂದ ರಚಿತವಾದ ಗ್ರಂಥಗಳೇ ಪುರಾಣಗಳು.. ಪುರಾಣ ಎಂಬ ಶಬ್ದಕ್ಕೆ ಹಳೆಯದು, ಪುರಾತನವಾದುದು ಎಂಬ ಅರ್ಥ ಬರುತ್ತದೆ. ಒಟ್ಟೂ ಹದಿನೆಂಟು ಮಹಾಪುರಾಣಗಳು ಪ್ರಸಿದ್ಧವಾಗಿವೆ. ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಹೆಸರುಗಳಿಂದ ಹೇಳಿದರೂ ಸಹ ಸಾಮಾನ್ಯವಾಗಿ ಪ್ರಸಿದ್ಧವಾದ ಒಂದು ಶ್ಲೋಕ ಇದೆ.

         ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್   

         ಅನಾಪಲಿಂಗ ಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ ।। 

ಮದ್ವಯಂಮತ್ಸ್ಯಪುರಾಣಮಾರ್ಕಂಡೇಯಪುರಾಣ

ಭದ್ವಯಂಭವಿಷ್ಯಪುರಾಣ, ಭಾಗವತಪುರಾಣ 

ಬ್ರತ್ರಯಂಬ್ರಹ್ಮ, ಬ್ರಹಾಂಡ, ಬ್ರಹ್ಮವೈವರ್ತಪುರಾಣ 

ವಚತುಷ್ಟಯಂವಾಯುಪುರಾಣ, ವಾಮನಪುರಾಣ, ವರಾಹಪುರಾಣ,ವಿಷ್ಣುಪುರಾಣ.

ಅ-ನಾ-ಪ-ಲಿಂ-ಗ-ಕೂ-ಸ್ಕಾ- – ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಕೂರ್ಮ, ಸ್ಕಾಂದಪುರಾಣ. 

        ಎಲ್ಲ ಪುರಾಣಗಳೂ ಒಂದಲ್ಲ ಒಂದು ರೀತಿಯಲ್ಲಿ ವೇದದ ಸಾರವನ್ನೇ, ಧರ್ಮದ ತತ್ವವನ್ನೇ ಹೇಳುತ್ತವೆ. ಪುರಾಣಗಳಲ್ಲಿ ಮತ್ಸ್ಯಪುರಾಣ ಕೂಡಾ ಒಂದು

     ವೇದಗಳ ಉದ್ಧಾರಕ್ಕಾಗಿಯೇ ಭಗವಂತ ಮತ್ಸ್ಯರೂಪವನ್ನು ತಾಳಿದನು ಎಂದೂ, ಆರಂಭದಲ್ಲಿ ಚಿಕ್ಕ ಮೀನಿನ ರೂಪದಲ್ಲಿ ಆವಿರ್ಭವಿಸಿ ಅನಂತರ ಮಹಾಮತ್ಸ್ಯನಾಗಿ ರೂಪಪಡೆದನೆಂದೂ, ಪ್ರಳಯಸಂಭವಿಸಿದಾಗ ವೈವಸ್ವತ ಮನುವನ್ನು ಉಪಯೋಗಿಸಿಕೊಂಡು ಎಲ್ಲ ಜೀವಜಂತುಗಳನ್ನು ರಕ್ಷಿಸಿದನೆಂದೂ ಮತ್ಸ್ಯಪುರಾಣ ಹೇಳುತ್ತದೆ. 

ಮತ್ಸ್ಯರೂಪೀ ಭಗವಂತ ವೈವಸ್ವತ ಮನುವಿಗೆ ಉಪದೇಶಿಸಿದ ಪುರಾಣವೇ ಮತ್ಸ್ಯಪುರಾಣ. ಈ ಪುರಾಣದಲ್ಲಿ  291 ಅಧ್ಯಾಯಗಳು ಇವೆ. ಸರಿಸುಮಾರು 14000 ( ಹದಿನಾಲ್ಕು ಸಾವಿರ) ಶ್ಲೋಕಗಳಿವೆ. ಮತ್ಸ್ಯಪುರಾಣವು ಮತ್ಸ್ಯರೂಪೀ ಭಗವಂತನ ಹಾಗೂ ವೈವಸ್ವತ ಮನುವಿನ ಸಂವಾದರೂಪದಲ್ಲಿ ಇದೆ. ಆರಂಭದಲ್ಲಿ ಪ್ರಳಯದ ವರ್ಣನೆ ಇದೆ. ಹಾಗೇಯೇ ಜಗತ್ ಸೃಷ್ಟಿಯ ವೈಭವವೂ ಇದೆ. ಆದಿಸೃಷ್ಟಿ ಅಧ್ಯಾಯಗಳು ಎಂಬ ಹಸರಿನಲ್ಲಿ ಪ್ರಪಂಚದ ಸೃಷ್ಟಿಯು ವರ್ಣಿತವಾಗಿದೆ. ಬ್ರಹ್ಮನ ಉತ್ಪತ್ತಿ, ಬ್ರಹ್ಮಕಪಾಲದ ಕಥೆ, ದಕ್ಷಯಜ್ಞದ ಕಥೆ, ಮನ್ಮಥ ದಹನದ ಕಥೆ, ಪೃಥುರಾಜನ ವಂಶ ವರ್ಣನೆ, ವೇಮನ ಮಹಾರಾಜನ ಕಥೆ, ಸೂರ್ಯವಂಶ ವರ್ಣನೆ, ಪಿತೃವೇಶ ವರ್ಣನೆ, ಶ್ರಾದ್ಧಕರ್ಮದ ವಿವರಣೆ, ಸಪಿಂಡೀಕರಣದ ವಿಧಗಳು ಹಾಗೂ ವಿಧಾನಗಳು, ಶ್ರಾದ್ಧಕಾಲನಿರ್ಣಯ, ಶ್ರಾದ್ಧಫಲ, ಪಿತೃಪೂಜನದ ಫಲ, ಚಂದ್ರವಂಶದ ವರ್ಣನೆ, ಯಯಾತಿಚರಿತ, ಯದುವಂಶವರ್ಣನೆ, ಕಾರ್ತ್ಯವೀರ್ಯಾರ್ಜನ ವೃತ್ತಾಂತ,  ಸ್ಯಮಂತಕೋಪಾಖ್ಯಾನ, ವಸುದೇವ ಚರಿತೆ, ಶುಕ್ರಾಚಾರ್ಯರಿಗೆ ಶಿವನಿಂದ ವರಪ್ರಾಪ್ತಿ, ಭೃಗುಶಾಪ ವೃತ್ತಾಂತ,  ಬಲಿಚಕ್ರವರ್ತಿಯ ವಂಶ ವರ್ಣನೆ, ಪುರು ರಾಜನ ವಂಶ ವರ್ಣನೆ ಮುಂತಾದ ವಿಷಯಗಳು ಮೊದಲ 50 ಅಧ್ಯಾಯಗಳಲ್ಲಿ ಬರುತ್ತದೆ. 

ಅನಂತರಅಗ್ನಿವಂಶವರ್ಣನೆ, ಯೋಗಮಾಹಾತ್ಮ್ಯ,  ಪುರಾಣಾನುಕ್ರಮಣಿಕೆ, ನಕ್ಷತ್ರಪುರುಷ, ಆದಿತ್ಯಶಯನ, ಕೃಷ್ಣಾಷ್ಟಮೀ, ರೋಹಿಣೀಚಂದ್ರಶಯನ, ಸೌಭಾಗ್ಯಶಯನ, ಅನಂತತೃತೀಯಾ, ರಸಕಲ್ಯಾಣೀವ್ರತ,  ಆರ್ದ್ರಾನಂದಕರೀವ್ರತ, ಸಾರಸ್ವತವ್ರತ, ಸಪ್ತಮೀಸ್ನಪನವ್ರತ, ಭೀಮದ್ವಾದಶೀವ್ರತ, ಅಂಗದಾನವ್ರತ, ಅಶೂನ್ಯಶಯನವ್ರತ, ಅಂಗಾರಕವ್ರತ, ಗುರುವ್ರತ, ಶುಕ್ರವ್ರತ, ಕಲ್ಯಾಣಸಪ್ತಮೀ, ವಿಶೋಕಸಪ್ತಮೀ, ಫಲಸಪ್ತಮೀ, ಶರ್ಕರಾಸಪ್ತಮೀ, ಮಂದಾರಸಪ್ತಮೀ, ಕಮಲಸಪ್ತಮೀ, ಶುಭಸಪ್ತಮೀಮುಂತಾದವ್ರತಗಳಬಗೆಗೆ, ಹಾಗೂ, ಚಂದ್ರಸೂರ್ಯಗ್ರಹಣವಿಧಿ, ಜಲಾಶಯನಿರ್ಮಾಣವಿಧಿ, ವೃಕ್ಷೋದ್ಯಾನನಿರ್ಮಾಣವಿಧಿ, ಅನೇಕವಸ್ತುಗಳದಾನವಿಧಿಹಾಗೂಫಲ, ಅಗಸ್ತ್ಯಪೂಜಾವಿಧಿ, ನವಗ್ರಹಪೂಜಾವಿಧಿ, ನವಗ್ರಹಸ್ವರೂಪವರ್ಣನೆ, ಪ್ರಯಾಗತೀರ್ಥಮಾಹಾತ್ಮ್ಯ, ಭೂಗೋಳ, ಖಗೋಳ, ಹಾಗೂತ್ರಿಪುರವೃತ್ತಾಂತಹಾಗೂಮನ್ವಂತರಗಳವರ್ಣನೆಗಳು  145 ನೇಅಧ್ಯಾಯದವರಗೆವಿವರಿಸಲ್ಪಟ್ಟಿದೆ. 

         ಮುಂದೆ ತಾರಕಾಸುರೋಪಾಖ್ಯಾನ, ಸೃಸಿಂಹಾವತಾರವರ್ಣನೆ, ಪಾದ್ಮಕಲ್ಪವೃತ್ತಾಂತ, ವಾರಣಾಸೀ, ನರ್ಮದಾ ಮಾಹಾತ್ಮ್ಯ, ಋಷಿವಂಶ ವರ್ಣನೇ, ಕೃಷ್ಣಾಜಿನಾದಿ ದಾನ ವರ್ಣನೇ, ಸಾವಿತ್ರೀ ಚರಿತ್ರೆ, ರಾಜಧರ್ಮವಿವರಣೆ, ವಾಮನಾವತಾರ, ವರಾಹಾವತಾರ, ಕ್ಷೀರಸಾಗರಮಥನ ವೃತ್ತಾಂತಗಳನ್ನು ವಿವರಿಸಲಾಗಿದೆ

         ಮತ್ಸ್ಯಪುರಾಣದ ಕೊನೆಯಲ್ಲಿ ವಾಸ್ತುಶಾಸ್ತ್ರದ ಪೂರ್ಣವಿವರಗಳಿದ್ದು, ಗೃಹವಾಸ್ತು, ಆಲಯವಾಸ್ತು, ಆಯ, ಮೂರ್ತಿಲಕ್ಷಣ, ಮೂರ್ತಿಪ್ರತಿಷ್ಠಾಕಲ್ಪಗಳನ್ನೊಳಗೊಂಡಂತೆ ಎಲ್ಲವಿಧವಾದ ವಾಸ್ತುವಿಧಾನವನ್ನು ಸವಿವರವಾಗಿ ನೀಡಲಾಗಿದೆ. 252 ರಿಂದ 271 ರವರೆಗೆ ಸುಮಾರು 20 ಅಧ್ಯಾಯಗಳು ವಾಸ್ತುಶಾಸ್ತ್ರದ ವಿವರಣೆಯನ್ನು ನೀಡಿವೆ

        ವಾಸ್ತುಶಾಸ್ತ್ರದ ವಿವರಣೆಯ ಅನಂತರ ಕೆಲವು ಕಲಿಯುಗದ ರಾಜಸಂತತಿಯ ಬಗೆಗಿನ ಇತಿಹಾಸವನ್ನೂ ಮತ್ಸ್ಯಪುರಾಣ ಹೇಳುತ್ತದೆ. ಮಹಾದಾನಗಳ ವಿವರಣೆಯನ್ನು ಪೂರ್ಣವಾಗಿ ಮಾಡುತ್ತಾ 291 ನೇ ಅಧ್ಯಾಯಕ್ಕೆ ಮತ್ಸ್ಯಪುರಾಣ ಮುಕ್ತಾಯಗೊಳ್ಳುತ್ತದೆ

        ಮತ್ಸ್ಯಪುರಾಣದಲ್ಲಿ ಅತ್ಯಂತ ಮುಖ್ಯವಾಗಿ ಪರಿಸರ ಸಂರಕ್ಷಣೆಯನ್ನೂ, ವೃಕ್ಷಾರೋಪಣದ ಪುಣ್ಯಫಲವನ್ನೂ ಹೇಳಿದೆ. ಅದರಲ್ಲಿ ಒಂದು ಶ್ಲೋಕ ಹೀಗಿದೆ. 

ಅನೇನ ವಿಧಿನಾ ಯಸ್ತು ಕುರ್ಯಾತ್

 ವೃಕ್ಷೋತ್ಸವಂ ಬುಧಃ

ಸರ್ವಾನ್ ಕಾಮಾನ್ ಅವಾಪ್ನೋತಿ 

ಫಲಂ ಚಾನಂತ್ಯಮಾಪ್ನುತೇ।।

     ಪುರಾಣದಲ್ಲಿ ಹೇಳಿದ ಕ್ರಮದಿಂದ ಯಾರು ವೃಕ್ಷವನ್ನು ನೆಡುತ್ತಾರೋ ಅವರು ಎಲ್ಲ ಇಷ್ಟಾರ್ಥವನ್ನೂ ಪಡೆಯುತ್ತಾರೆ. ಅಲ್ಲದೇ ಅವರು ಪರಮಪದವನ್ನೂ ಪಡೆಯುತ್ತಾರೆ

        ಆದ್ದರಿಂದ ವೃಕ್ಷವನ್ನು ನೆಡುವ ಮುಖೇನ ಪ್ರಂಪಂಚ ಹಾಗೂ ಪರಿಸರದ ರಕ್ಷಣೆ ನಮ್ಮದಾಗಲೀ

          ಇದು ಮತ್ಸ್ಯಪುರಾಣದ ಸಂಕ್ಷಿಪ್ತ ಪರಿಚಯ. 

ಮುಂದುವರಿಯುವದು……

[ವಿಶೇಷ ಸೂಚನೆ – ಪ್ರತಿ ಏಕಾದಶಿಯಂದು ಒಂದೊಂದು ಪುರಾಣದ ಸ್ಥೂಲಪರಿಚದ ಲೇಖನ ಪ್ರಕಟವಾಗುವುದು.] 

ಲೇಖನವಿ. ರವಿಶಂಕರ ಹೆಗಡೆ  ದೊಡ್ನಳ್ಳಿ.

ಸಂಗ್ರಹಶ್ರೀ ಸ್ವರ್ಣವಲ್ಲೀ ಭಕ್ತವೃಂದ