ಸಹ್ಯಾದ್ರಿಯ ಮಡಿಲಲ್ಲಿ, ಶಾಲ್ಮಲೆಯ ತಟದಲ್ಲಿ ವಿರಾಜಮಾನನಾಗಿರುವ ಚಂದ್ರಮೌಳೀಶ್ವರಸಹಿತ ಲಕ್ಮೀನೃಸಿಂಹನ ಪುಣ್ಯಸನ್ನಿಧಿಯಲ್ಲೊಂದು ಅಭೂತಪೂರ್ವ ಕ್ಷಣ…! ಕೋಟಿ ಕೋಟಿ ಜನರ ಜಯಘೋಷದ ಪುನರಾವರ್ತನ…. !
ಅದೆಷ್ಟೋ ದಿನಗಳ ನಂತರ ಮಹಾತ್ಮರೋರ್ವರ ದಿವ್ಯ ಸಂದರ್ಶನ…. !
ತಲೆಯಿಟ್ಟು ಸಂಭ್ರಮಿಸುವ ಪುಟ್ಟ ಮಗುವಿಗೆ ತಾಯಿ ಮಡಿಲೊಡ್ಡಿ ತಲೆ ತಟ್ಟಿದ ತೃಪ್ತಿಯ ಭಾವ…. !
ಆ ದಿನ ಮಾಘಮಾಸದ ಚತುರ್ಥಿ ಶನಿವಾರ (02-02-1991), ಶಾಲ್ಮಲೆಯ ತಟದಲ್ಲಿ ಒಬ್ಬ ಹದಿಹರೆಯದ ಯುವಕ ಹಾಗೂ ಜ್ಞಾನ ಸಮೃದ್ಧರೂ, ವಯೋಸಮೃದ್ಧರೂ ಆದ ಸನ್ಯಾಸಿಗಳ ಪುಣ್ಯ ಮಿಲನ… …. ! ಸಾವಿರಾರು ಭಕ್ತರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದಾರೆ… !
“ನ ಕರ್ಮಣಾ ನ ಪ್ರಜಯಾ…. ! ಸನ್ಯಾಸ ಸೂಕ್ತದ ಜಯಘೊಷ ಮುಗಿಲು ಮುಟ್ಟಿದ ಅನುಭವ.”
“ನಡಗೋಡು… ಶಿವರಾಮ ಭಟ್ಟರ ಎರಡನೆಯ ಮಗನಂತೆ…! ಎಲ್ಲರ ಬಾಯಲ್ಲೂ ಅನುರಣಿಸುವ ಸಾಮಾನ್ಯ ಶಬ್ದಗಳು…!
“ಹೊಳೆಯ ತೀರದ ಕರ್ಮಾಚರಣೆ ಮುಗಿಸಿ…! ಅಲ್ಲಿಂದ ಸ್ವರ್ಣವಲ್ಲೀ ಮಠದತ್ತ ಜಯಘೋಷದೊಂದಿಗೆ, ಸ್ವಸ್ತಿವಾಚನದೊಂದಿಗೆ….ಎಲ್ಲರ ಪಯಣ ಇರುವೆಗಳ ಸಾಲಿನಂತೆ ಸಾಗಿತ್ತು….!”
ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳೆಂಬ ಒಬ್ಬ ಅಭಿನವ ವಿವೇಕಾನಂದರ ಪೀಠಾರೋಹಣದ ಮೈಮನ ಪುಳಕಿಸುವ ದಿನವದು. ಸಹಸ್ರಾರು ಜನರು ಮುಂದಿನ ಪೀಠಾಧಿಪತಿಯ ಬರವಿಗಾಗಿ ಕಾದು ಕಾದು. ಆ ದಿನ ಅವರ ಮುಖಕಂಡು ತೃಪ್ತರಾಗಿದ್ದಾರೆ.
54 ನೇಯ ಯತಿಗಳಾಗಿ ಪೀಠಾರೋಹಣಕ್ಕೆ ಸಿದ್ಧರಾಗಿ ನಿಂತ ಯುವಕನನ್ನು ನೋಡಿದ ಹಲವರು ಹಲವು ಉದ್ಗಾರ ಎತ್ತಿದ್ದು ಅವರ ಲಕ್ಷಣದ ಪರಿಪಕ್ವತೆಗೆ ಸಾಕ್ಷಿಯೆಂಬಂತಿತ್ತು.
“ಶ್ರೀ ಶಂಕರ ಅವತಾರ” ಎಂದು ಕೆಲವರು ಉಲಿದರೆ,” ವಿವೇಕಾನಂದರ ಛಾಯೆ ಕಾಣುತ್ತಿದೆ” ಎಂದು ಆಡಿದವರು ಒಂದಷ್ಟು ಜನ. “ದಿಟ್ಟತನ ಕಣ್ಣ ನೋಟದಲ್ಲಿ ಕಾಣುತ್ತಿದೆ” ಎಂದವರೂ ಕೆಲವರಾದರೆ, “ದೃಢ ನಿಲುವು ನಡಿಗೆಯಲ್ಲಿ ಕಂಡಿತು” ಎಂದವರು ಕೆಲವರು…. !
ಶರೀರದ ವಯಸ್ಸು 21 ಆದರೂ ವೇದಶಾಸ್ತ್ರಗಳ ಅಧ್ಯಯನ, ಅಧ್ಯಾಪನ, ಮಂಥನ, ಮಥನಗಳಿಂದ ಪರಿಪೂರ್ಣ ವಿದ್ವನ್ಮಣಿಯಾಗಿ ಸಿದ್ದರಾಗಿದ್ದಾರೆ ಎಂಬುದು ಅವರ ಭಾಷಾ ಪ್ರೌಢಿಮೆಯಿಂದಲೆ ಎಂಥವರೂ ಅರ್ಥಮಾಡಿಕೊಳ್ಳುವ ಹಾಗೆ ಗೋಚರಿಸುತ್ತಿತ್ತು… !
ಪೀಠಾರೋಹಣದ ಆಶೀರ್ವಚನ ಸಭೆಯಲ್ಲಿ “ಮಠದ ಸಂಪ್ರದಾಯ ಹಾಗೂ ವ್ಯವಸ್ಥೆಗಳಿಗೆ ಯಾವುದೇ ಚ್ಯುತಿಬರದಂತೆ, ಶಿಷ್ಯಕೋಟಿಯ ಅಭಿವೃದ್ಧಿಯಲ್ಲಿ ಯಾವ ಲೋಪವೂ ಆಗದಂತೆ, ಒಂದು ಕ್ಷಣವೂ ಮೈಮರೆಯದೇ ಕರ್ತವ್ಯ ನಿರತನಾಗುತ್ತೇನೆ ಎಂದು, ಗುರುಗಳ ಹಾಗೂ ಈ ಶಿಷ್ಯಸಮುದಾಯದ ಎದುರಿನಲ್ಲಿ ಪ್ರತಿಜ್ಞೆಗೈಯುತ್ತೇನೆ” ಎಂಬ ಮಾತು ಕೇಳಿದ ಮೇಲಂತೂ ‘ಬರದಿಂದ ಕಂಗೆಟ್ಟ ಮರಗಿಡಗಳು ಮಳೆಯನೀರ ಸಿಂಚನದಿಂದ ಮೈಮನ ಅರಳಿಸುವಂತೆ’ ಬಾಲ ಸನ್ಯಾಸಿಯ ಬಲಭರಿತ ವಾಕ್ ಝರಿಯಲ್ಲಿ ಭರವಸೆಯ ಬೆಳಕಿನ ಅಗಾಧತೆಯನ್ನು ಮನದೊಳಗೇ ಅನುಭವಿಸಿ ಸಾರ್ಥಕ್ಯದ ಭಾವದಲ್ಲಿ ತೇಲಾಡಿದ ಶಿಷ್ಯಕೋಟಿಯ ಸಂತಸಕ್ಕೆ ವರ್ಣನಾತೀತವೇ ಕೊನೆ… ! ಎನ್ನಬಹುದೇನೋ… !
ಹೊಸ ಅಧಿಪತಿಗಳಿಂದ ಸುವರ್ಣಮಂತ್ರಾಕ್ಷತೆಗೆ ಸಾಗುತ್ತಿದ್ದ ಜನಸ್ತೋಮ… ! ಮಹಾಸ್ತೋಮದಲ್ಲೂ ಪ್ರತಿಯೊಬ್ಬರ ಪರಿಚಯ ಕೇಳಿ ಅವರ ಸ್ಥಿತಿ ವಿಚಾರಿಸಿ ಒಮ್ಮೆ ಕಣ್ಮುಚ್ಚಿ “ಓಂ ನಮೋ ನಾರಾಯಣಾಯ” ಎಂಬ ಅಷ್ಟಾಕ್ಷರೀ ದಿಮ್ಯಮಂತ್ರದೊಂದಿಗೆ ಮಂತ್ರಾಕ್ಷತೆ ಅನುಗ್ರಹಿಸುವ ಅವರ ತಾಳ್ಮೆಯ ಶರಧಿ… ! ಎಂದೂ ಬತ್ತದ ಎಂದೆಂದೂ ಮಾಸದ ಆ ಪರಿಪೂರ್ಣ ಪರಾರ್ಥಭರಿತ ಆಶೀರ್ವಾದ… !
ಆ ದಿವ್ಯ ಅನುಭೂತಿ ಅನುಭವಿಸದ ಭಕ್ತರು ನಿಜವಾಗಿಯೂ ನತದೃಷ್ಟರೇ ಸರಿ… !
ಎಷ್ಟೊ ದಿನಗಳಿಂದ ಅರಸುತ್ತಿದ್ದ ದಿವ್ಯಮಣಿಯೊಂದು ಕೈಗೆ ಸಿಕ್ಕಿ ಕಿರೀಟ ಸೇರಿದ ಅನುಭವದೊಂದಿಗೆ….! ಮನೆಗೆ ತೆರಳಿದವರು ಕೆಲವರಾದರೆ. ಈ ದಿವ್ಯ ಭವ್ಯ ಕೈಂಕರ್ಯದಲ್ಲಿ ಕೈಜೋಡಿಸಿ ಕೃತಾರ್ಥಭಾವದಿಂದ ನಿರ್ಗಮಿಸಿದ ಹಳ್ಳಿ-ಹಳ್ಳಿಯ ಮೂಲೆಗಳಿಂದ ಆಗಮಿಸಿದ್ದ ಕರಸೇವಕರು ಕೆಲವರು. ದಿವ್ಯದಾಸೋಹಕ್ಕೆ ತರಕಾರಿ ಹೆಚ್ಚಿದವರು ತಾವು ಹೆಚ್ಚಿನದ್ದನ್ನೇ ಮಾಡಿದ್ದೇವೆಂದು ಬೀಗಿ ಸಾಗಿದ್ದು ಕಾರ್ಯಕ್ರಮದ ಶ್ರೇಷ್ಠತೆಗೆ ಉತ್ತಮ ನಿದರ್ಶನ… !
ದಿವ್ಯತೆಯ ಭವ್ಯತೆಯ ಕ್ಷಣಕ್ಕೆ ಮೂಲಕಾರಣರಾದ ಪುಣ್ಯ ದಂಪತಿಗಳು ನಿಜವಾಗಿಯೂ ಪುಣ್ಯಾತ್ಮರೇ ಸರಿ… !
“ ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ ” ಎಂಬ ಮಾತನ್ನು ಬೋಧಿಸಿದ ಗುರುಗಳ ವಾಕ್ಯದಂತೆ ಜೀವಿಸು ಎಂಬ ತಿಳುವಳಿಕೆ ನೀಡಬೇಕಿದ್ದ ಪಿತ, ಕೋಟಿ-ಕೋಟಿ ಪ್ರಜೆಗಳ ಧರ್ಮತಂತುವಿನ ಸಂರಕ್ಷಣೆ ಕಟಿಬದ್ಧನಾದ ಮಗನನ್ನು ತ್ಯಾಗ ಮಾಡಿದರಲ್ಲ… ! ಇದು ನಿಜವಾದ ತ್ಯಾಗ… ! …ಶಿವರಾಮಭಟ್ಟರದ್ದು… !
“ನವಮಾಸ ಶರೀರದ ಅಂತರಂಗದಲ್ಲಿ ಆಶ್ರಯವನ್ನಿತ್ತು, ಇಪ್ಪತ್ತು ವರ್ಷ ತೋಳ್ತೆಕ್ಕೆಯಲಿ ಬಂಧಿಸಿಟ್ಟು ಪೋಷಿಸಿದ, ಹಸಿವೆಂದಾಗ ತುತ್ತಿಟ್ಟು, ಒಸರಿಬಂದಾಗ ಕಣ್ಣೀರೊರೆಸಿ ಮುತ್ತಿಟ್ಟು ಆನಂದದ ಆಲಿಂಗನವಿತ್ತು ಆನಂದತುಂದಿಲಳಾಗುತ್ತಿದ್ದ ಆ ತಾಯಿ ಜಗಕ್ಕಾಗಿ ಮಗನನ್ನು ಸಮರ್ಪಿಸಿ ಬಿಟ್ಟಳಲ್ಲ … ! ಆಹಾ ಈ ನಿಜವಾದ ಜಗನ್ಮಾತೆ… ! ಶರಾವತಿ… ! ”
“ಸರ್ವಜ್ಞೇಂದ್ರರು ನುಡಿದಿದ್ದರಂತೆ” ಹದಿನಾರು ಸೀಮೆಗೆ ಆಚಾರ್ಯನಲ್ಲ, ಜಗಕ್ಕೇ ಆಚಾರ್ಯನಾಗಿ, ಜಗತ್ತೇ ನಿಬ್ಬೆರಗಾಗುವಂತಹ ಉತ್ತರಾಧಿಕಾರಿ ಬರುತ್ತಾನೆ ತಾಯಿ ಹೇಳಿದ್ದಾಳೆ” ಎಂದು ಹರ್ಷದಿಂದ… !
ತಾರಣ ಸಂವತ್ಸರದ ಪುಷ್ಯ ಶುದ್ಧ ಚುತುರ್ಥೀ ಗುರುವಾರ ದಿನಾಂಕ 1992 ನೇ ಇಸವಿಯ ಜನವರಿ 09….ಆ! ಸ್ಥಳೀಯ ವಿದ್ವಾಂಸರಿಗೆ ಸಂಸ್ಕೃತಾಸಕ್ತರಿಗೆ …. ! ವೈದಿಕರಿಗೆ, ಮಠದಲ್ಲಿರುವ ಹಾಗೂ ವೇದ ಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಹಬ್ಬದ ದಿನವದು… ! ರಾಜ್ಯದ ದೇಶದ ಮೂಲೆ ಮೂಲೆಗಳಿಂದ ವಿದ್ವಾಂಸರು ಆಗಮಿಸುತ್ತಿದ್ದಾರೆ… ! ಕೆಲವು ಕಂಡರಿತ ಮುಖಗಳು … ! ಕೆಲವು ಕಾಣದ ಮುಖಗಳು… ! ಆ ದಿನ ಬೆಳಿಗ್ಗೆ ಗುರುಪೀಠದ ಎದುರಿನಲ್ಲಿ ವಿದ್ವನ್ಮಣಿಗಳ ಸಾಲು ಸಾಲು…. !
ಶಾಸ್ತ್ರ ಚಿಂತನದ ಸಪ್ತಾಹದ ಸನ್ನಾಹ ‘ಶಾಸ್ತ್ರಗೋಷ್ಠಿ’ ಮೊದಲನೇಯದು ಆ ದಿನ ಸ್ವರ್ಣವಲ್ಲಿಯಲ್ಲಿ… ! ಜಗತ್ತೇ ಮೆಚ್ಚಿದ ವಿದ್ವಾಂಸರಿಂದ ಆರಂಭಿಸಿ….ಜಗತ್ತನ್ನೇ ಕಾಣಲು ಹಾತೊರೆಯುತ್ತಿರುವ ವಿಧಾರ್ಥಿಗಳವರೆಗೆ ಜಗದ್ಗುರು ಪೀಠದೆದುರು ಸಮಾಗಮಿಸಿದ್ದಾರೆ ಆಹಾ….. ! ಎಂತಹ ಸಂಧರ್ಭ ಅದು ವ್ಯಾಕರಣಶಾಸ್ತ್ರ, ಮೀಮಾಂಸಾಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಅಲಂಕಾರ ಶಾಸ್ತ್ರ, ಶ್ರೌತ, ಜ್ಯೋತಿಷ್ಯಶಾಸ್ತ್ರ ಹಾಗೂ ಸರ್ವಮೂರ್ಧನ್ಯವಾದ ವೇದಾಂತಶಾಸ್ತ್ರಗಳ ಮೇಲೆ ಆ ದಿನ ಪ್ರಭಂಧ ಮಂಡನೆ ಚರ್ಚೆಗಳಾದವು.
ಸರ್ವಜ್ಞೇಂದ್ರ ಸರಸ್ವತೀ ಶ್ರೀಗಳ ಮುಖಾರವಿಂದದಿಂದ ಪ್ರಸ್ಪುರಿತಗೊಂಡ ಆ ವಾಗ್ವಿದ್ಯುಲ್ಲತೆಗಳು “ ವಾಚಮರ್ಥೋನುಧಾವತಿ” ಎಂಬಹಾಗೆ ಅರ್ಥವನ್ನನುಸರಿಸಿ ಧಾವಿಸಿಹೊರಟಿದ್ದು ಅಕ್ಷರಶಃ ಸತ್ಯ ಎಂಬುದು ಪ್ರತಿಯೊಬ್ಬ ಭಕ್ತನಿಗೂ ಅನ್ನಿಸಿತ್ತು ,,,,! ಆ ದಿನ,,,!
ಮಾಘ ಬಹುಳ ಚತುರ್ಥಿ(ಸಂಕಷ್ಟಹರ ಚತುರ್ಥಿ) ಯ ದಿನದಂದು ಸ್ವರ್ಣಪೀಠದಲ್ಲಿ ವಿರಾಜಮಾನರಾದ ಆ ಯತಿಗಳು ಶಿಷ್ಯಕೋಟಿಯ ವಿಘ್ನಗಳನ್ನು ನಿವಾರಿಸಲೋಸುಗ ಸಂಜನಿಸಿಬಂದ ನಿರ್ವಿಘ್ನದಾಯಕನಂತೆ,,,! ಬ್ರಹ್ಮವಿದ್ಯಾಧ್ಯಯನ ಈಪ್ಸಿತರಾಗಿ ಬಂದ ವಿದ್ಯಾರ್ಥಿಭ್ರಮರಗಳಿಗೆ ಆತ್ಮಬ್ರಹ್ಮ ಕೇಂದ್ರಿತವಾದ ಬ್ರಹ್ಮವಿದ್ಯಾಮಕರಂದವನ್ನುಣಬಡಿಸುವ ಗಾಢಾಂದಕಾರದಲ್ಲೂ ಅರಳಿಸಬಲ್ಲ ಜ್ಞಾನವಾರಿಧಿಯ ಬ್ರಹ್ಮ ಕಮಲದಂತೆ …! ಶ್ರದ್ಧಾಭಕ್ತಿ ಭರಿತ ಭಕ್ತ ಸ್ತೋಮಕ್ಕೆ ಗೋಚರಿಸಿದ್ದು ಆ ಶಿಷ್ಯಕೋಟಿಯ ಜನ್ಮಜನ್ಮಾಂತರದ ಸೌಭಾಗ್ಯವೇ ಸರಿ……
23-09-1991 ರ ಭಾದ್ರಪದ ಶುಧ್ದ ಹುಣ್ಣಿಮೆ ಸೋಮವಾರದಂದು ಮಹಾಮೇಧಾವಿ ಶ್ರೀಚಕ್ರೋಪಾಸಕರೂ ಶ್ರೇಷ್ಠವಿದ್ವಾಂಸರೂ ಆದ ಶ್ರೀಯುತ ಕೆ.ಪಿ ಶಂಕರ ಶಾಸ್ತ್ರಿಗಳ ನಿರ್ದೇಶನ, ಸಾನ್ನಿಧ್ಯದಲ್ಲಿ ಶಿಷ್ಯಕೋಟಿಯ ಸಮಸ್ತ ಸೌಭಾಗ್ಯಕ್ಕೂ ಕಾರಣಳಾದ ತಾಯಿ ರಾಜರಾಜೇಶ್ವರಿಯ ಸಂಪೂರ್ಣ ಅನುಗ್ರಹಕ್ಕಾಗಿ ಜೀರ್ಣಾವಸ್ಥೆಯಲ್ಲಿದ್ದ ಹಳೆಯ ಶ್ರೀಚಕ್ರವನ್ನು ವಿಸರ್ಜಿಸಿ ಹೊಸ ಶ್ರೀಚಕ್ರದ ಪ್ರತಿಷ್ಠಾಪನೆಯಾಯಿತು…
ಆ ದಿನದಿಂದಲೇ ಮಠದಲ್ಲಿ ಹಿಂದಿನಿಂದಲೂ ನಿರಂತರವಾಗಿ ನಡೆದುಬಂದ ಶ್ರೀಚಕ್ರಾರಾಧನೆಯ ಸಂಪ್ರದಾಯ ಮುಂದುವರೆಯಿತು. ಪ್ರತೀ ಶುಕ್ರವಾರ, ಹಬ್ಬಗಳಲ್ಲಿ ಮತ್ತು ನವರಾತ್ರಿ ಉತ್ಸವದಲ್ಲಿ ನಿರಂತರ ಶ್ರೀವಿದ್ಯಾ ಸಪರ್ಯೆ ನೆಡೆದುಬರುತ್ತಿದೆ .ಶ್ರೀಸಂಸ್ಥಾನದ ವಾರ್ಷಿಕ ಹಬ್ಬ ಪೂಜೆ ಉತ್ಸವಗಳನ್ನು ಶಾಸ್ತ್ರೀಯವಾಗಿ ಸಂಪನ್ನಗೊಳಿಸುತ್ತ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ದೇವತಾನುಗ್ರಹಕ್ಕೆ ಪಾತ್ರರಾದವರೆಂಬುವಲ್ಲಿ ಸಂಶಯವಿಲ್ಲ.
ವಿಜಯದಶಮಿಯ ದಿನ ಅವರ ದಿವ್ಯವಾಣಿಯಿಂದಲೇ ಶ್ರೀ ದೇವರ ಪದತಲಕ್ಕೆ ಸಮರ್ಪಿತವಾಗುವ “ರಾಜರಾಜೇಶ್ವರಿ ದೇವಿಯ” ಪ್ರಾರ್ಥನೆಯ ಶ್ಲೋಕಗಳು, ಆ ವರ್ಷದ ಜಾಗತಿಕ ವ್ಯವಹಾರ ಅಥವಾ ಸುಖದುಃಖಗಳ ಸ್ವರೂಪವನ್ನು ಪ್ರಸ್ತಾಪಿಸುತ್ತಾ ಸರ್ವಜನರ ಪರವಾಗಿ ಶರಣಾಗತಿ ಹೊಂದುವ ಶಬ್ದಗಳೊಡನೆ ಸಮರ್ಪಿತವಾಗುವುದನ್ನು ಕಂಡು ಅವರ ವಿದ್ವತ್ ಶ್ರೀಮಂತಿಕೆಯನ್ನು ಮಹಾಮಹೋಪಾಧ್ಯಾಯರೆನಿಸಿಕೊಂಡವರೂ ಮೆಚ್ಚಿ ಹೊಗಳಿದ್ದಾರೆ… !
ಶ್ರೀಗಳ ವೇದ ಶಾಸ್ತ್ರಗಳಮೇಲಿನ ಅಪಾರ ಶ್ರದ್ಧೆ, ಕಾಳಜಿ ಶ್ರೀಮಠದ ರಾಜರಾಜೇಶ್ವರೀ ವಿದ್ಯಾಸಂಸ್ಥೆಯಲ್ಲಿ ಸಂಪ್ರದಾಯಯುತವಾಗಿ ನೆಡೆಯುತ್ತಿದ್ದ ಪಾಠಶಾಲೆಯ ಅಭಿವೃಧ್ದಿಗೂ ಉತ್ತಮ ಪ್ರಚೋದನೆಯಾಯಿತು.
ಪ್ರಮುಖ ದೇವಾಲಯಗಳ ಭೇಟಿ, ಸೀಮಾಭೇಟಿ, ಶಿಷ್ಯಕೋಟಿಯಲ್ಲಿ ಪಾದಪೂಜೆ, ಭಿಕ್ಷೆಗೆ ಅವಕಾಶ ನಿರಂತರವಾಗಿ ಸಾಗಿದ್ದು ಅವಿಸ್ಮರಣೀಯ.. ಸಂಘಟನಾ ಕೌಶಲ್ಯ ಮತ್ತು ಶಿಷ್ಯರ ಶ್ರೇಯೋಭಿವೃಧ್ದಿಯ ಧ್ಯೇಯದ ಅನಾವರಣಕ್ಕೆ ಸಾಕ್ಷಿಯೋ ಎಂಬಂತೆ … ಶ್ರೀಗಳ ಚಾತುರ್ಮಾಸ್ಯ ಕಾಲದಲ್ಲಿ ಹದಿನಾರು ಸೀಮೆ ಹಾಗೂ ಭಾಗಿಗಳ ವಿಭಾಗದಂತೆ ಪ್ರತಿನಿತ್ಯ ಒಂದು ಸೀಮೆಯಂತೆ “ಸೀಮಾಭಿಕ್ಷಾ” ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿತು..
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು “ಸ್ವಾತಂತ್ರ ಪೂರ್ವದಲ್ಲೇ “ಅಂದರೆ ಕ್ರಿ.ಶ 1931 ರಲ್ಲೇ ಜಾರಿಗೊಳಿಸಿದ “ಪ್ರಜಾತಂತ್ರ ವ್ಯವಸ್ಥೆ ( ಹದಿನಾರು ಸೀಮೆಗಳು , ಪ್ರತೀಸೀಮೆಯ ಒಬ್ಬ ಪದಾಧಿಕಾರಿ ಶ್ರೀಮಠದ ಆಡಳಿತ ಕಮೀಟಿಯಲ್ಲಿ. ಎಲ್ಲಾ ಸೀಮೆಗೂ ವ್ಯಾವಹಾರಿಕ ಮತ್ತೂ ಕಾನೂನು ವ್ಯವಸ್ಥೆಗೆ ಸೀಮಾಧ್ಯಕ್ಷ ಮತ್ತು ಸೀಮೆಯ ಧಾರ್ಮಿಕ ಸುವ್ಯವಸ್ಥೆಯ ನಿಯಂತ್ರಣಕ್ಕಾಗಿ ಆಚಾರ್ಯ ಭಟ್ಟರ (ವೇದ ಶಾಸ್ತ್ರಾಧ್ಯಯನ ಸಂಪನ್ನ ವೈದಿಕರ) ನಿಯೋಜನೆ. ಪ್ರತೀ ಗ್ರಾಮದ ಗಮನಕ್ಕಾಗಿ ಗ್ರಾಮ ಮೊಕ್ತೇಸರನ ನೇಮಕ ) ಈ ನೂತನ ಯತಿಗಳ ನಿರ್ದೇಶನದಲ್ಲಿ ಅಚ್ಚುಕಟ್ಟಾಗಿ ನಿಯೋಜನಗೊಂಡಿತು. ಜೊತೆಗೆ ಸ್ತ್ರೀಶಿಕ್ಷಣ ಹಾಗೂ ಸ್ರ್ತೀಸಂಸ್ಕೃತಿ ರಕ್ಷಣೆಯ ಕಾರಣಕ್ಕಾಗಿ “ ತಾಯಿಯೇ ಮೊದಲಗುರು “ ಎಂಬ ಕಾರಣದಿಂದ ಮಾತೆಯರಿಗಾಗಿ ಈ ಪ್ರಜಾಪ್ರಭುತ್ವದಡಿಯಲ್ಲಿ ಮಾತೃಮಂಡಲ ನಿರ್ಮಾಣವಾಯಿತು.
ಒಟ್ಟಾರೆಯಾಗಿ ಬಂಗಾರದ ಬಳ್ಳಿಗೆ ಐವತ್ನಾಲ್ಕನೆಯ ಫಲ ಎಲ್ಲರಿಗೂ ಸಂತೃಪ್ತಿಯನ್ನು ಕೊಡುವದರ ಜೊತೆಗೆ, ಜಾಹ್ನವಿಯನ್ನು ತಲೆಯಲ್ಲಿ ಧರಿಸಿದ ಗಂಗಾಧರನಂತೆ ಪ್ರಶಾಂತ ತ್ಯಾಗ ಮೂರ್ತಿಯಾಗಿ ಶಿಷ್ಯಕೋಟಿಯ ಅಭಿವೃಧ್ದಿಗೆ ಶ್ರೇಯಸ್ಸಿಗೂ ಪ್ರೇಯಸ್ಸಿಗೂ ಕಾರಣಗಾಗುವರೆಂಬ ಬಲವಾದ ನಂಬಿಕೆಯನ್ನು ಪ್ರತಿಷ್ಠಾಪಿಸುವಲ್ಲಿ ಕಾರಣವಾಯಿತು ಎಂದರೆ ಅತಿಶಯೋಕ್ತಿಯಲ್ಲ.