ಸನ್ಯಾಸಾಶ್ರಮದ ಮೂಲ ಪರಿಕಲ್ಪನೆ

posted in: Articles, shishyasvikara | 0

ಆಶ್ರಮಚತುಷ್ಟಯಗಳಲ್ಲಿ ಸನ್ಯಾಸ ಎಂಬುದು ಅನುಪಮವಾದ ಆಶ್ರಮ ಈ ಸನ್ಯಾಸ ಆಶ್ರಮದ ಕುರಿತು ಒಂದಷ್ಟು ಅಂಶಗಳನ್ನು ನಾವು ತಿಳಿಯಲೇ ಬೇಕಾಗಿದೆ.

ಕೇವಲ ಕಾಷಾಯ ವಸ್ತ್ರವನ್ನು ಧರಿಸಿದರೆ ಮಾತ್ರ ಆತ ಸನ್ಯಾಸಿಯಾಗಲಾರ. ಕಾವಿ ಬಟ್ಟೆ.. ಸನ್ಯಾಸದ ದಾರಿಯ ಸಂಕೇತವಷ್ಟೇ.. ಅದರ ಹಿಂದಿರುವ ತ್ಯಾಗ, ತಪಸ್ಸು, ನಿಷ್ಠೆ, ಇವೆಲ್ಲವೂ ಅತ್ಯಂತ ಮುಖ್ಯವಾಗುತ್ತವೆ. ಈ ಸನ್ಯಾಸಾಶ್ರಮೋ ಕುರಿತಾಗಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವ ಪ್ರಯತ್ನ ಈ ಲೇಖನದ ಉದ್ದೇಶ.
*ಸನ್ಯಾಸಾಶ್ರಮ –
ಮನು ಮಹರ್ಷಿಯ ವಚನ ಸನ್ಯಾಸಾಶ್ರಮವನ್ನು ಹೀಗೆ ವ್ಯಾಖ್ಯಾನಿಸುತ್ತದೆ.
ಅನಗ್ನಿರನಿಕೇತಸ್ಯಾತ್ ಗ್ರಾಮಮನ್ನಾರ್ಥಮಾಶ್ರಯೇತ್।
ಉಪೇಕ್ಷಕೋ ಸಾಂಚಯಿಕಃ ಮುನಿಭಾವಸಮಾಹಿತಃ ।।

ಅಗ್ನಿಪರಿಚರ್ಯೆಯನ್ನು ಮಾಡದೇ ( ಬ್ರಹ್ಮಚಾರಿಗೆ ಸಾವಿತ್ರಾಗ್ನಿ, ಗ್ರಹೃಸ್ಥನಿಗೆ ಗೃಹ್ಯಾಗ್ನಿ- ಈ ಎರಡೂ ಇಲ್ಲದ ಎಂದು ಅರ್ಥ) ಮನೆಯಲ್ಲಿ ವಾಸಮಾಡದೇ, ಕೇವಲ ಆಹಾರಕ್ಕಾಗಿ ಮಾತ್ರ ವಸತಿ ಇರುವ ಪ್ರದೇಶಕ್ಕೆ ಬಂದುಹೋಗುತ್ತಾ, ಯಾವುದೇ ಮೊಹಕ್ಕೆ ಒಳಗಾಗದೇ, ಮೌನಭಾವ ಎಂದರೆ ಕಾಯಿಕ ವಾಚಿಕ ಹಾಗೂ ಮಾನಸಿಕವಾಗಿ ಭಗವಂತನ ಅನುಸಂಧಾನದಲ್ಲಿಯೇ ಕಾಲಕಳೆಯುವ ಜೀವನ ಪದ್ಧತಿಗೆ ಸನ್ಯಾಸ ಎಂಬ ಅರ್ಥವನ್ನು ಹೇಳಬಹುದು. ಈ ಸನ್ಯಾಸಾಶ್ರಮವನ್ನು ಪ್ರತಿಯೊಬ್ಬ ವ್ಯಕ್ತಿಯೂ ಸಹ ಅನುಸರಿಸುವುದು ಶಾಸ್ತ್ರಗಳ ಮಾತು. ಕಾಳಿದಾಸ ರಘುವಂಶದ ಅರಸರ ಬಗ್ಗೆ ಹೇಳುವಾಗ ಅವರು ಶೈಶವದಲ್ಲಿ ವಿದ್ಯಾಭಾಸವನ್ನು ಚೆನ್ನಾಗಿ ಮಾಡಿ, ಅನಂತರ ಯೌವನದಲ್ಲಿ ವಿಷಯ ಭೋಗಗಳನ್ನು ಯಥೋಚಿತವಾಗಿ ಅನುಭವಿಸಿ ವೃದ್ಧಾಪ್ಯದ ಆರಂಭದಲ್ಲಿ ವಾನಪ್ರಸ್ಥವನ್ನು ಸ್ವೀಕರಿಸಿ ಕೊನೆಯಲ್ಲಿ ಸನ್ಯಾಸದ ಅನುಷ್ಠಾನದಿಂದ ಮೋಕ್ಷವನ್ನು ಪಡೆಯುತ್ತಿದ್ದರು. ಅಂದರೆ ಎಲ್ಲರೂ ಈ ನಾಲ್ಕು ಆಶ್ರಮದ ಅನುಷ್ಠಾನಕ್ಕೆ ಒಳಪಡುತ್ತಿದ್ದರು ಎಂಬುದು ತಿಳಿಯುತ್ತದೆ ಆದರೆ ಈಗ ಎಲ್ಲರೂ ಎಲ್ಲಾ ಆಶ್ರಮವನ್ನು ಅನುಸರಿಸುವುದು ಕಾಣುವುದಿಲ್ಲ. ಇಲ್ಲಿ ಕೇವಲ ಕೆಲವೇ ವ್ಯಕ್ತಿಗಳು ಸನ್ಯಾಶಾಸ್ತ್ರವನ್ನು ಸ್ವೀಕರಿಸುವ ಉದಾಹರಣೆಗಳು ಕಂಡುಬರುತ್ತವೆ. ಅದಕ್ಕೆ ಕಾರಣ ಕಲಿಯುಗದ ಜನ ಜೀವನವು ಇರಬಹುದು. ಭಗವಂತ ಭಗವದ್ಗೀತೆಯಲ್ಲಿ ಸನ್ಯಾಸ ಎಂಬ ಶಬ್ದಕ್ಕೆ ಅತ್ಯಂತ ಅದ್ಭುತವಾದಂತಹ ವ್ಯಾಖ್ಯಾನವನ್ನು ನೀಡಿದ್ದಾನೆ. ಈ ವ್ಯಾಖ್ಯಾನದ ಪ್ರಕಾರ ಪ್ರತಿಯೊಂದು ಮಾನವನೂ ಸನ್ಯಾಸಿ ಆಗಬಹುದು. ಭಗವದ್ಗೀತೆಯ ಆ ಮಾತು “ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸನ್ಯಾಸಂ ಕವಯೋ ವಿದುಃ” ಎಂದರೆ ಯಾರು ಕಾಮ್ಯ ಕರ್ಮವನ್ನು ತ್ಯಜಿಸುತ್ತಾರೋ ಅವರನ್ನು ಸನ್ಯಾಸಿ ಎನ್ನುತ್ತಾರೆ. ಫಲದ ಅಪೇಕ್ಷೆಯನ್ನಿಟ್ಟುಕೊಂಡು ಅಥವಾ ಯಾವುದೋ ಆಸೆಯ ಕಾರಣಕ್ಕೆ ಮಾಡುವ ಕರ್ಮವನ್ನು ಕಾಮ್ಯಕರ್ಮ ಎನ್ನುತ್ತಾರೆ. ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ನಿರ್ವಹಿಸುವ ಕರ್ಮವನ್ನು ನಿಷ್ಕಾಮಕರ್ಮ ಎಂದು ಕರೆಯುತ್ತಾರೆ ಗೀತೆಯಲ್ಲಿ ಭಗವಂತ ಹೇಳಿರುವ ಮಾತು ಅದನ್ನೇ ಸೂಚಿಸುತ್ತದೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಕೇವಲ ಈಶ್ವರಾರ್ಪಣ ಬುದ್ಧಿಯಿಂದ ಯಾರು ಕರ್ಮ ಮಾಡುತ್ತಾರೋ ಅವರು ಸನ್ಯಾಸಿಗಳು. ಅಂದರೆ ಕಾಮ್ಯ ಕರ್ಮದ ತ್ಯಾಗವೇ ಸನ್ಯಾಸ ಅಥವಾ ಕಾಮನೆಗಳ ತ್ಯಾಗವೇ ಸನ್ಯಾಸ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಯರ್ಯ ಎಂಬ ಷಡ್ವೈರಿಗಳನ್ನು ತ್ಯಜಿಸಿ ಪಂಚ ಕರ್ಮೇಂದ್ರಿಯಗಳು, ಪಂಚ-ಜ್ಞಾನೇಂದ್ರಿಯಗಳು ಹಾಗೂ ಮನಸ್ಸನ್ನು ನಿಗ್ರಹಿಸುವುದು ಸನ್ಯಾಸದ ಮೊದಲ ಹೆಜ್ಜೆ. ಅನುಭವದಿಂದ ವೈರಾಗ್ಯಪ್ರಾಪ್ತಿಯಾಗಿ ಮೋಹದ ಬಂಧನಗಳಿಂದ ವಿಮುಕ್ತರಾಗಿ ಸಂಸಾರದ ಸಂಕೋಲೆಯಿಂದ ಬಿಡುಗಡೆ ಹೊಂದುವ ಇಚ್ಛೆ ಉಳ್ಳ ಯಾವ ವ್ಯಕ್ತಿಗಳೂ ಸಹ ಸನ್ಯಾಸಿಗಳಾಗಬಹುದು. ಆದರೆ ಆ ಸನ್ಯಾಸಕ್ಕೆ ವೈರಾಗ್ಯ ಬರಲೇಬೇಕು.
ಆದ್ದರಿಂದ ಈ ಸನ್ಯಾಸಾಶ್ರಮವು ನಾಲ್ಕು ಆಶ್ರಮಗಳಲ್ಲಿ ಅತ್ಯಂತ ದುರ್ಲಭವವು ಅತ್ಯಂತ ಕಠಿಣವು ಆಗಿರುತ್ತದೆ. ಸನ್ಯಾಸಿ ಆದವನು ಎಲ್ಲವನ್ನು ತ್ಯಜಿಸಬೇಕು ಎಂಬುದು ನಮಗೆಲ್ಲ ತಿಳಿದ ವಿಷಯ. ಇಲ್ಲಿ ತ್ಯಜಿಸುವುದು ಎಂದರೆ ಕೇವಲ ಬಾಹ್ಯ ಮಾತ್ರದಿಂದಲ್ಲ. ಭೌತಿಕವಾದ ಬದಲಾವಣೆಗಳಿಂದ ಎಂದರೆ ಮನೆ, ಸಂಸಾರ, ಊರು ಇತ್ಯಾದಿಗಳನ್ನು ಬೌದ್ಧಿಕವಾಗಿ ತೊರೆದು, ಕಾಷಾಯ-ಕೌಪಿನಾದಿಗಳನ್ನು ಧರಿಸಿ ಊರೂರು ಅಲೆಯುತ್ತ ಹೊರಟರೆ ಅವನು ಸನ್ಯಾಸಿ ಎನಿಸಿಕೊಳ್ಳಲಾರ. ಸನ್ಯಾಸಿ ಆದವನು ಬಾಹ್ಯವಾದ ತ್ಯಾಗವನ್ನು ಹೇಗೆ ಮಾಡುತ್ತಾನೋ ಅದಕ್ಕೆ ಅನುಗುಣವಾಗಿ ಎಲ್ಲ ಭಾವಗಳನ್ನು, ಎಲ್ಲ ಮೋಹವನ್ನು ಮಾನಸಿಕವಾಗಿಯೂ ತ್ಯಜಿಸಬೇಕು. ಪ್ರಪಂಚದ ಯಾವ ವ್ಯಕ್ತಿಯ ಬಗ್ಗೆಯೂ ಇವರು ನಮ್ಮವರು, ಇವರು ನಮ್ಮವರಲ್ಲ ಎಂಬ ಭೇದ ಬುದ್ಧಿ ಮನಸ್ಸಿನಲ್ಲಿ ಒಂದು ಕ್ಷಣವೂ ಬರಬಾರದು. ಅಂತಹ ಮಾನಸಿಕ ಸ್ಥಿತಿಯನ್ನು ಸಂಪಾದಿಸಿಕೊಳ್ಳುವುದನ್ನೇ ಜ್ಞಾನಿಗಳು “ವೈರಾಗ್ಯ” ಎಂಬ ಶಬ್ದದಿಂದ ವ್ಯಾಖ್ಯಾನಿಸಿದ್ದಾರೆ. ಈ ವೈರಾಗ್ಯ ಪ್ರತಿಯೊಬ್ಬ ಮನುಷ್ಯನಿಗೂ ಬರುವುದಕ್ಕೆ ಸಾಧ್ಯವಿದೆ. ಆದರೆ ನಮ್ಮ ಸುತ್ತಲೂ ಬಿಗಿಯಾಗಿ ಕಟ್ಟಲ್ಪಟ್ಟ ಸಂಸಾರ-ಸಮಾಜವೆಂಬ ಮೋಹದ ಬಂಧನ ಈ ವೈರಾಗ್ಯದ ಆಗಮನಕ್ಕೆ ತಡೆಗೋಡೆಯಾಗಿ ನಿಲ್ಲುತ್ತದೆ. ಮನುಷ್ಯ ತಾನು ಹುಟ್ಟುವಾಗ ಏಕಾಂಗಿಯಾಗಿಯೇ ಹುಟ್ಟುತ್ತಾನೆ. ಆದರೆ ಅವನು ಪ್ರಪಂಚಕ್ಕೆ ಬಂದ ಮೇಲೆ, ಭೂಮಿಯನ್ನು ಸ್ಪರ್ಶಿಸಿದ ಮೇಲೆ ಅವನಿಗೆ ಒಂದೊಂದೇ ಮೋಹದ ಜಾಲಗಳು ಸಂಬಂಧ ಎಂಬ ಶಿರೋನಾಮೆಯಲ್ಲಿ ಸುತ್ತಿಕೊಳ್ಳುವುದಕ್ಕೆ ಆರಂಭವಾಗುತ್ತದೆ. ಮುಂದೆ ಆತನ ಶಾರೀರಿಕ ಬೆಳವಣಿಗೆ ಆಗುತ್ತಾ ಹೋದಂತೆ ಈ ಬಂಧನಗಳು ಬಿಗಿ ಆಗುತ್ತಾ ಹೋಗುತ್ತವೆ. ಕೊನೆಯ ಕ್ಷಣದಲ್ಲಿ ಅದು ಅತ್ಯಂತ ಬಿಗಿಯಾಗಿ ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಗಟ್ಟಿಯಾಗಿ ನಮ್ಮ ಮನಸ್ಸನ್ನು ಆವರಿಸಿಬಿಡುತ್ತದೆ. ಆದ್ದರಿಂದ ಲೋಕದಲ್ಲಿ ನೂರಕ್ಕೆ ತೊಂಭತ್ತೊಂಭತ್ತು ಮಾನವರು ವೈರಾಗ್ಯದ ಯೋಚನೆಯನ್ನು ಮಾಡದೆ ತಮ್ಮ ಜನ್ಮವನ್ನು ಮುಗಿಸಿಬಿಡುತ್ತಾರೆ. ಪೂರ್ವ ಜನ್ಮದ ವಾಸನಾ ಬಲದಿಂದಲೋ ಅಥವಾ ತಾನು ಬದುಕುತ್ತಿರುವ ವಾತಾವರಣದ ಪ್ರಚೋದನೆಯಿಂದಲೋ ನೂರಕ್ಕೆ ಒಬ್ಬ ವೈರಾಗ್ಯದ ಚಿಂತನೆಯನ್ನು ಮಾಡುತ್ತಾನೆ. ಆ ಚಿಂತನೆ ಮಾಡಿದ ಒಬ್ಬನು ವೈರಾಗ್ಯವನ್ನು ಸಾಧಿಸಿ ಮೋಕ್ಷ ಮಾರ್ಗದಲ್ಲಿ ತೆರಳುತ್ತಾನೆ ಎಂದು ಹೇಳಲಾಗದು. ಆದರೆ ಆತನಿಗೆ ಮೋಹಜಾಲದಿಂದ ಸ್ವಲ್ಪ ಹೊರಬರಲು ಸಾಧ್ಯವಿದೆ. ಇದು ನಮ್ಮೆಲ್ಲ ಸಾಮಾನ್ಯ ಮಾನವರ ಪರಿಸ್ಥಿತಿ. ಇದೆಲ್ಲವನ್ನು ಮೀರಿ, ಈ ಎಲ್ಲ ಮೋಹಜಾಲವನ್ನು ದಾಟಿ ಹೊರಬಂದು ನಿಲ್ಲುವ ವ್ಯಕ್ತಿ ಸನ್ಯಾಸಿಯಾಗುತ್ತಾನೆ. ಆದ್ದರಿಂದ ಸನ್ಯಾಸ ಅತ್ಯಂತ ಶ್ರೇಷ್ಠವಾದದ್ದು. ಸನ್ಯಾಸದ ಸಾಧನೆ ಅಥವಾ ಸನ್ಯಾಸದ ಉದ್ದೇಶ ವಿವೇಕಾನಂದರ ಮಾತು ಇರುವಂತೆ “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ”
ಮುಂದಿನ ಲೇಖನದಲ್ಲಿ ಸನ್ಯಾಸದ ವಿಧಗಳನ್ನು ನೋಡೋಣ
-ವಿ. ರವಿಶಂಕರ ದೊಡ್ನಳ್ಳಿ (ಸ್ವರ್ಣವಲ್ಲೀ ಭಕ್ತವೃಂದ)