ಶಿಷ್ಯಹಿತಕ್ಕಾಗಿ ಶಿಷ್ಯರನ್ನೇ ಗುರುವನ್ನಾಗಿಸುವ ಶಿಷ್ಯಸ್ವೀಕಾರ ಮಹೋತ್ಸವ

posted in: Articles, shishyasvikara | 0

ಡಾ|| ಮಹಾಬಲೇಶ್ವರ ಭಟ್ಟ, ಕಿರುಕುಂಭತ್ತಿ.

ಶ್ರೀಶಂಕರಸಮಾರಂಭಾಂ ಸ್ವರ್ಣವಲ್ಲೀಪರಂಪರಾಮ್ |

ಸಂನ್ಯಾಸಯೋಗಸಂಸಿದ್ಧಾಂ ವಂದೇ ಸುಜ್ಞಾನದೀಪಿಕಾಮ್ ||

`ಕೋ ಗುರುಃ? ಅಧಿಗತತತ್ತ್ವಃ ಶಿಷ್ಯಹಿತಾಯೋದ್ಯತಃ ಸತತಮ್’ `ಗುರು’ ಎಂದರೆ ಯಾರು? ಪರಮಾತ್ಮತತ್ತ್ವವನ್ನು ಅರಿತು, ಸದಾ ಶಿಷ್ಯಹಿತಕ್ಕೋಸ್ಕರ ಉದ್ಯುಕ್ತನಾಗಿರುವವನೇ ಗುರು.’ ಶ್ರೀ ಶಂಕರಭಗವತ್ಪಾದರ ಈ ಮಾತು ಶ್ರೀ ಸ್ವರ್ಣವಲ್ಲೀ ಗುರುಪರಂಪರೆಗೆ ನೀಡಿದ ಪ್ರಮಾಣಪತ್ರದಂತಿದೆ. ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಪ್ರವರ್ತಿಸಲ್ಪಟ್ಟ ಈ ಜ್ಞಾನಜ್ಯೋತಿಯ ದಿವ್ಯ ಪರಂಪರೆಯ ಭವ್ಯ ಪೀಠದಲ್ಲಿ ಪ್ರಸ್ತುತ ವಿರಾಜಮಾನರಾಗಿರುವವರು 54-ನೆಯ ಯತಿವರೇಣ್ಯರಾದ ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರು. ಪರಮಪೂಜ್ಯ ಶ್ರೀ ಶ್ರೀಗಳವರು ಈ ಪರಂಪರೆಯ 55-ನೆಯ ಜ್ಯೋತಿಯನ್ನು ಬೆಳಗಿಸುವ ಮೂಲಕ ಗುರುಪರಂಪರಾ ಪ್ರವರ್ತಕರಾಗುತ್ತಿರುವ ಪರಮ ಮಂಗಲ ಸನ್ನಿವೇಶವು ಇದೀಗ ಸನ್ನಿಹಿತವಾಗುತ್ತಿದೆ. ಇದು ಸಮಸ್ತ ಶಿಷ್ಯಕೋಟಿಯ ಸೌಭಾಗ್ಯದ ಕ್ಷಣವೂ ಹೌದು. ಶೋಭನ ಸಂವತ್ಸರದ ಮಾಘ ಶುಕ್ಲ ತ್ರಯೋದಶೀ ಗುರುವಾರ ದಿನಾಂಕ 22-02-2024-ರಂದು ಶ್ರೀ ಸ್ವರ್ಣವಲ್ಲಿಯ ತಪೋಭೂಮಿಯು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಒಂದು ದೀಪವೇ ಇನ್ನೊಂದು ದೀಪವನ್ನು ಬೆಳಗಿಸಲು ಸಾಧ್ಯ. ಹಾಗೆಯೇ ಒಬ್ಬ ಗುರುವು ಮಾತ್ರ ಶಿಷ್ಯನನ್ನೂ ಗುರುವನ್ನಾಗಿಸಲು ಸಾಧ್ಯ. ಏಕೆಂದರೆ `ಅಧಿಗತತತ್ತ್ವಃ’ ಪರಬ್ರಹ್ಮತತ್ತ್ವವನ್ನು ಅರಿತವನೇ ಗುರು. ಪರಬ್ರಹ್ಮತತ್ತ್ವವನ್ನು ಗುರುವಿನ ಉಪದೇಶ ಮತ್ತು ಅನುಗ್ರಹದಿಂದಲೇ ಅರಿತುಕೊಳ್ಳಲು ಸಾಧ್ಯ. `ತದ್ವಿಜ್ಞಾನಾರ್ಥಂ ಗುರುಮೇವಾಭಿಗಚ್ಛೇತ್’ `ಪರಬ್ರಹ್ಮ ತತ್ತ್ವವನ್ನು ಅರಿಯುವುದಕ್ಕೋಸ್ಕರ ವಿರಕ್ತನಾದ ಮುಮುಕ್ಷುವು ಗುರುವನ್ನೇ ಸಂದರ್ಶಿಸಬೇಕು’ ಎಂಬುದಾಗಿ ಮುಂಡಕೋಪನಿಷತ್ತು ಹೇಳುತ್ತದೆ. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ದಾಸವಾಣಿಯೂ ಉಪನಿಷದ್ವಾಣಿಯ ತಾತ್ಪರ್ಯವನ್ನೇ ವಿವರಿಸುತ್ತದೆ. ಒಂದು ದೀಪವು ಇನ್ನೊಂದು ದೀಪವನ್ನು ಬೆಳಗಿಸುವಾಗ ಆ ದೀಪಕ್ಕೆ ಆಧಾರ, ತೈಲ, ವರ್ತಿ ಮೊದಲಾದ ಎಲ್ಲ ಪರಿಕರಗಳೂ ಬೇಕಾಗುತ್ತವೆ. ಹಾಗೆಯೇ ಜ್ಞಾನದೀಪ ಸ್ವರೂಪನಾದ ಗುರುವು ಶಿಷ್ಯನನ್ನು ಗುರುವನ್ನಾಗಿಸಿ ಬೆಳಗಿಸುವಾಗ ಆ ಶಿಷ್ಯನಲ್ಲಿಯೂ ಭಕ್ತಿ, ವಿವೇಕ, ವೈರಾಗ್ಯ, ಇಂದ್ರಿಯನಿಗ್ರಹ, ಚಿತ್ತಶುದ್ಧಿಯೇ ಮೊದಲಾದ ಎಲ್ಲ ಸಮರ್ಪಕ ಸಾಧನಗಳೆಂಬ ಅರ್ಹತೆಗಳೂ ಇರಬೇಕಾಗುತ್ತವೆ. ಅರ್ಹ ಶಿಷ್ಯನಿಗೆ ಯೋಗ್ಯ ಗುರುವು ಲಭಿಸುವುದೆಂದರೆ, ಆ ಶಿಷ್ಯನಿಗೆ ಆತ್ಮೋದ್ಧಾರದ ಬಾಗಿಲು ತೆರೆದಂತೆ. ಅಂತೆಯೇ ಯೋಗ್ಯ ಗುರುವಿಗೆ ಅರ್ಹ ಶಿಷ್ಯನು ಲಭಿಸುವ ಮೂಲಕ ಗುರುಪರಂಪರೆಯು ಮುಂದುವರೆಯುತ್ತದೆ ಎಂದರೆ, ಅದು ಸಮಸ್ತ ಶಿಷ್ಯಕೋಟಿಯ ಭಾಗ್ಯದ ಬಾಗಿಲು ತೆರೆದಂತೆಯೇ ಸರಿ!. ಈ ದೃಷ್ಟಿಯಿಂದ `ಆತ್ಮನೋ ಮೋಕ್ಷಾಯ, ಜಗದ್ಧಿತಾಯ ಚ’ ಎಂಬ ಘೋಷವಾಕ್ಯವು ಶ್ರೀ ಗುರುಪರಂಪರೆಯ ಎಲ್ಲ ಯತಿಗಳಿಗೂ ಪರಿಪೂರ್ಣವಾಗಿ ಅನ್ವಯಿಸುತ್ತದೆ. ಈ ಮಾತು ಅತಿಶಯೋಕ್ತಿಯಲ್ಲವೆಂಬುದನ್ನು ಅರ್ಥೈಸಿಕೊಳ್ಳಲು ಶಾಸ್ತ್ರೀಯ ಹಿನ್ನೆಲೆಯಲ್ಲಿ ಒಂದಿಷ್ಟು ಚಿಂತನೆಯ ಅಗತ್ಯವಿದೆ.

ಯಾರಿಗೋಸ್ಕರ `ಗುರು’? ಯಾವುದಕ್ಕೋಸ್ಕರ `ಗುರು’? ಎಂಬ ಪ್ರಶ್ನೆಗಳಿಗೆ ಶುದ್ಧ ಮನಸ್ಸಿನಿಂದ ಮತ್ತು ಸೂಕ್ಷ್ಮ ಬುದ್ಧಿಯಿಂದ ಉತ್ತರವನ್ನು ಕಂಡುಕೊಳ್ಳಬೇಕಿದೆ. ಅಂತಹ ಶುದ್ಧ ಮನಸ್ಸಿಗೆ, ಸೂಕ್ಷ್ಮ ಬುದ್ಧಿಗೆ ಗೋಚರವಾಗುವ ಉತ್ತರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ `ನನಗೋಸ್ಕರ ಗುರು; ನಾನು ನಾನೇ ಆಗುವುದಕ್ಕೋಸ್ಕರ ಗುರು.’ ಈ ಸೂತ್ರವನ್ನು ಶಾಸ್ತ್ರ ಮತ್ತು ಆಚಾರ್ಯರ ಉಪದೇಶದಿಂದ ಅರ್ಥೈಸಿಕೊಳ್ಳಬೇಕು. `ನನಗೋಸ್ಕರ ಗುರು’ ಎಂದು ಹೇಳುವಾಗ `ನಾನು ಪುರುಷಾರ್ಥವೆಂಬ ಗುರಿಯನ್ನು ತಲುಪಬೇಕಾದ ಒಬ್ಬ ಜೀವ, ಗುರಿಯನ್ನು ತಲುಪುವ ದಾರಿಗೆ ದೀಪವಾಗಿರುವ ಗುರುವನ್ನು ಬಯಸುವ ಒಬ್ಬ ಶಿಷ್ಯ’ ಎಂಬ ಪರಿಶುದ್ಧ ಪ್ರಜ್ಞೆ ಅಗತ್ಯ. `ನಾನು ನಾನೇ ಆಗುವುದಕ್ಕೋಸ್ಕರ ಗುರು’ ಎಂದು ಹೇಳುವಾಗ `ನಾನು ಯಾರು ಮತ್ತು ನನ್ನ ಮೂಲ ಯಾವುದು ಎಂಬ ನಿಜ ಸ್ವರೂಪದ ಅರಿವನ್ನು ಮೂಡಿಸಿ, ಜೀವಾತ್ಮನಿಗೆ ಪರಮಾತ್ಮಾನುಭವವನ್ನು ಉಂಟುಮಾಡುವವನೇ ಗುರು’ ಎಂಬ ವಿವೇಕವೂ ಅಗತ್ಯ. `ಈಶ್ವರಾನುಗ್ರಹಾದೇವ ಪುಂಸಾಮದ್ವೈತವಾಸನಾ’ – ಇಂತಹ ಪ್ರಜ್ಞೆ ಮತ್ತು ವಿವೇಕಗಳು ಈಶ್ವರಾನುಗ್ರಹದಿಂದ ಮಾತ್ರವೇ ಪ್ರಾಪ್ತವಾಗುತ್ತವೆ.

`ಯಸ್ಯ ದೇವೇ ಪರಾ ಭಕ್ತಿಃ ಯಥಾ ದೇವೇ ತಥಾ ಗುರೌ’ `ಈಶ್ವರನು ಬೇರೆಯಲ್ಲ, ಗುರುವು ಬೇರೆಯಲ್ಲ; ಗುರು ಮತ್ತು ದೇವರಲ್ಲಿ ಪರಸ್ಪರ ಅನನ್ಯ ಭಾವವನ್ನೂ, ಅನನ್ಯ ಭಕ್ತಿಯನ್ನೂ ಹೊಂದಿರಬೇಕು.’ ಜಗದೀಶ್ವರನೇ ಆದಿಗುರು. `ಶಂಭೋರ್ಮೂರ್ತಿಶ್ಚರತಿ ಭುವನೇ ಶಂಕರಾಚಾರ್ಯರೂಪಾ’ – ಈಶ್ವರನ ಅವತಾರವೇ ಜಗದ್ಗುರು ಶ್ರೀ ಶಂಕರಾಚಾರ್ಯರು. ಶ್ರೀ ಶಂಕರಾಚಾರ್ಯರೇ ಈ ಪರಂಪರೆಯ ಗುರುವಿನ ರೂಪದಲ್ಲಿ ಅವತರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುರುಪರಂಪರೆಯ ಎಲ್ಲ ಯತಿವರೇಣ್ಯರನ್ನೂ ಶ್ರೀ ಶಂಕರಭಗವತ್ಪಾದರ ರೂಪದಲ್ಲಿ ಕಾಣುವ ಪ್ರಾಂಜಲ ಅಂತಃಕರಣವನ್ನು ಹೊಂದಿರಬೇಕಾದದ್ದು ಪ್ರತಿಯೊಬ್ಬ ಶಿಷ್ಯನ ಅರ್ಹತೆ ಮತ್ತು ಕರ್ತವ್ಯವಾಗಿದೆ. ಈ ಅರ್ಹತೆ ಮತ್ತು ಕರ್ತವ್ಯಪ್ರಜ್ಞೆಯ ಪರಿಪಕ್ವರೂಪವೇ `ಗುರುಭಕ್ತಿ’ ಎನಿಸಿಕೊಳ್ಳುತ್ತದೆ.  ಅಜ್ಞಾನ ಸಾಗರದಲ್ಲಿ ಮುಳುಗಿದ ನಮಗೆ ಆನಂದ ಸಾಗರವೇ ಆಗಿರುವ ಪರಮಾತ್ಮನನ್ನು ಪಡೆಯುವುದೇ ತನ್ನ ಗುರಿ, ತಾನೊಬ್ಬ ಗುರಿಯನ್ನು ತಲುಪಬೇಕಾದ ಶಿಷ್ಯ ಎಂಬ ಪ್ರಜ್ಞೆಯೂ ಕೂಡ ಗುರುವಿನ ಅನುಗ್ರಹದಿಂದಲೇ ಉಂಟಾಗುತ್ತದೆ ಎಂದಾದರೆ ಗುರುವಿನ ಅಪಾರವಾದ ಕಾರುಣ್ಯವನ್ನೂ, `ಗುರು’ವಿನ ಅತಿಶಯವಾದ ಮಾಹಾತ್ಮ್ಯವನ್ನೂ ಊಹಿಸುವುದು ಪಾಮರರಾದ ನಮ್ಮಿಂದ ಹೇಗೆ ಸಾಧ್ಯವಾದೀತು!?.

ಜೀವನಾಗಿ ದೇಹವನ್ನು ಧರಿಸಿ ಬಂದಿರುವವನಿಗೆ ಸಾರ್ಥಕ ಜೀವನಕ್ಕಾಗಿ ಮಾರ್ಗದರ್ಶನ ಮಾಡಲು `ಗುರು’ ಬೇಕು. ಜೀವಭಾವವನ್ನು ತೊರೆದು ದೇವಭಾವವನ್ನು ಆಂತುಕೊಳ್ಳಬೇಕೆಂದಿರುವವನಿಗೆ ದೇವಯಾನವನ್ನು ತೋರಿಸಿಕೊಡುವುದಕ್ಕೋಸ್ಕರವೂ `ಗುರು’ ಬೇಕು. ಜೀವ-ದೇವ ಭಾವಗಳನ್ನೂ ಮೀರಿದ ಪರಿಶುದ್ಧ ಪರಮಾತ್ಮಭಾವವೆಂಬ ಮೋಕ್ಷವನ್ನೇ ಬಯಸಿದ ಮುಮುಕ್ಷುಗಳಿಗೆ ಮೋಕ್ಷಮಾರ್ಗವನ್ನು ಉಪದೇಶಿಸುವುದಕ್ಕೂ `ಗುರು’ವೇ ಬೇಕು. ಒಟ್ಟಾರೆ ನಮ್ಮ ಐಹಿಕ (ಇಹಲೋಕದ) ಪುರುಷಾರ್ಥಸಾಧನೆಗೂ, ಆಮುಷ್ಮಿಕ (ಪಾರಲೌಕಿಕ) ಪುರುಷಾರ್ಥಸಾಧನೆಗೂ, ಮೋಕ್ಷವೆಂಬ ಪರಮಪುರುಷಾರ್ಥಸಾಧನೆಗೂ ಗುರುವಿನ ಮಾರ್ಗದರ್ಶನ ಮತ್ತು ಅನುಗ್ರಹ ಬೇಕೇ ಬೇಕು. ಹೀಗೆ ಒಂದಲ್ಲ ಒಂದು ವಿಧದಿಂದ ನಮ್ಮ ಜೀವನ ಯಾತ್ರೆಯ ಪ್ರತಿಯೊಂದು ಹೆಜ್ಜೆಯನ್ನೂ ಗುರುವಿನ ಮಾರ್ಗದರ್ಶನದಲ್ಲಿಯೇ ಇರಿಸುತ್ತಾ ಸಾಗಿದಾಗ ಮಾತ್ರವೇ ಅಂತಹ ಜೀವನ `ಜೀವನ ಯಾತ್ರೆ’ಯಾಗುತ್ತದೆ. ಇಲ್ಲವಾದರೆ ಅದು ಕೇವಲ “ಜೀವ’ನ ಜಾತ್ರೆ’ಯಾಗುತ್ತದೆ. ಆದ್ದರಿಂದ ಶಿಷ್ಯಹಿತಕ್ಕೋಸ್ಕರ ಗುರುವೇ ಹೊರತು ಗುರುವಿಗೋಸ್ಕರ ಗುರು ಅಲ್ಲ ಎಂಬ ಗಂಭೀರ ಚಿಂತನೆಯು ನಮ್ಮ ಮನಸ್ಸಿನಲ್ಲಿ ದೃಢವಾಗಬೇಕು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಈರಾಪುರದ ಗಂಗೇಮನೆ ಎಂಬಲ್ಲಿ, ಕೃಷಿ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಕುಟುಂಬದಲ್ಲಿ  ದಿನಾಂಕ 01-05-2000-ದಂದು ಶ್ರೀ ಗಣಪತಿ ಭಟ್ಟ ಮತ್ತು ಶ್ರೀಮತೀ ಭುವನೇಶ್ವರೀ ದಂಪತಿಗಳ ಜ್ಯೇಷ್ಠ ಪುತ್ರನ ರೂಪದಿಂದ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಗೆ ಸೇರಬೇಕಾದ ಒಂದು ವಿಶಿಷ್ಟ ಚೈತನ್ಯವು  `ಶ್ರೀ ನಾಗರಾಜ ಭಟ್ಟ’ ಎಂಬ ಅಭಿಧಾನದೊಂದಿಗೆ ಪ್ರಕಟಗೊಂಡಿತ್ತು. ಈ ಸಂಗತಿಯು ಲೋಕಕ್ಕೆ ವಿದಿತವಾಗುವ ಕಾಲ ಈಗ ಬಂದೊದಗಿದೆ. ಪ್ರಾಥಮಿಕ ಲೌಕಿಕ ಶಿಕ್ಷಣವನ್ನು ಈರಾಪುರದ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ಶ್ರೀ ನಾಗರಾಜ ಭಟ್ಟರ ಅಂತಃಕರಣದಲ್ಲಿ ಸನಾತನ ವೈದಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕೆಂಬ ದೈವದತ್ತವಾದ ಸಂಸ್ಕಾರವು ಆಗಲೇ ಜಾಗೃತವಾಗಿತ್ತು. ಆ ಸಂಸ್ಕಾರವೇ ಶ್ರೀಯುತರನ್ನು ವೇದ-ಶಾಸ್ತ್ರ-ತಪೋನಿಧಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರ ಸನ್ನಿಧಿಗೆ ಬರುವಂತೆ ಪ್ರೇರಣೆಯನ್ನು ನೀಡಿತು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಕೃಷ್ಣಯಜುರ್ವೇದವನ್ನು ಅಧ್ಯಯನ ಮಾಡಿ, ಸಂನ್ಯಾಸಾಶ್ರಮಕ್ಕೆ ಭೂಷಣವಾಗಿರುವ ಅದ್ವೈತವೇದಾಂತ ಶಾಸ್ತ್ರವನ್ನು ಪರಮಪೂಜ್ಯ ಶ್ರೀ ಗುರುಗಳ ಮುಖದಿಂದಲೇ ಶ್ರವಣ ಮಾಡುವ ಪರಮ ಸೌಭಾಗ್ಯವು ಶ್ರೀಯುತರಿಗೆ ಲಭಿಸಿತು. ಪರಮಪೂಜ್ಯ ಶ್ರೀ ಗುರುಗಳ ದಿವ್ಯ ಸಂಕಲ್ಪದ ಫಲವಾಗಿ ಮತ್ತು ಶ್ರೀ ಶ್ರೀಗಳವರು ತಮ್ಮ ಆರಾಧ್ಯ ದೇವತೆಗಳಲ್ಲಿ ಮಾಡಿದ ಪ್ರಾರ್ಥನೆಯ ಫಲವಾಗಿ ಇಂದು ಶ್ರೀ ಸ್ವರ್ಣವಲ್ಲೀ ಗುರುಪರಂಪರೆಗೆ ಇನ್ನೊಂದು ಸ್ವರ್ಣಜ್ಯೋತಿಯು ಸೇರಿಕೊಳ್ಳುತ್ತಿದೆ. ಸರ್ವೋತ್ಕೃಷ್ಟ ಸಂನ್ಯಾಸಾಶ್ರಮದ ಪರಿಪಾಲನೆ, ಅವ್ಯಾಜ ಕರುಣಾಪೂರ್ಣವಾದ ಶಿಷ್ಯವಾತ್ಸಲ್ಯ, ಸಾಮಾಜಿಕ ಕಳಕಳಿ, ರಾಷ್ಟ್ರಹಿತ ಚಿಂತನೆ, ಸನಾತನ ವೈದಿಕ ಪರಂಪರೆಯ ರಕ್ಷಣೆಗಾಗಿ ದಣಿವರಿಯದ ತಪಸ್ಸು, ಅನುಪಮವಾದ ಪರಿಸರ ಪ್ರೇಮ ಈ ಎಲ್ಲ ಮಹೋನ್ನತ ಆದರ್ಶಗಳ ಸಾಕಾರ ರೂಪವಾಗಿ, ಸಾಕ್ಷಾತ್ ಶ್ರೀ ಶಂಕರರ ಸ್ವರೂಪ-ಚಿಹ್ನೆಗಳೊಂದಿಗೆ ಕಂಗೊಳಿಸುತ್ತಿರುವ  ಶ್ರೀಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರ ದಿವ್ಯಾಮೃತ ಹಸ್ತದಿಂದ ಶ್ರೀ ನಾಗರಾಜ ಭಟ್ಟರು ಸಂನ್ಯಾಸ ದೀಕ್ಷೆಯನ್ನು ಪಡೆದು ಭವ್ಯ ಪರಂಪರೆಯ ದೀಪವಾಗಿ ಪ್ರಜ್ವಲಿಸಲಿ ಎಂಬುದು ಸಮಸ್ತ ಶಿಷ್ಯಕೋಟಿಯ ಹೃದ್ಗತವಾದ ಪ್ರಾರ್ಥನೆ.