ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶೋಕ ವ್ಯಕ್ತ ಪಡಿಸಿದ್ದಾರೆ.
ತಮ್ಮ ಅರ್ಥಗರ್ಭಿತವಾದ ಪ್ರವಚನಗಳ ಮೂಲಕ, ಭಕ್ತಾದಿಗಳ ಮನದಲ್ಲಿ ಭಕ್ತಿಭಾವವನ್ನು ಮೂಡಿಸಿದ ಸಿದ್ದೇಶ್ವರರು ಉತ್ತರಾಯಣದ ಶುಕ್ಲ ಪಕ್ಷದ ವೈಕುಂಠ ಏಕಾದಶಿ ದಿನದಂದು ದೇಹ ತ್ಯಾಗ ಮಾಡಿದ್ದು ಗಮನಿಸಿದರೆ ಅವರೊಬ್ಬರು ಶ್ರೇಷ್ಠ ಮಹಾತ್ಮರು ಎಂಬುದು ತಿಳಿಯುತ್ತದೆ. ಅವರು ಪ್ರಾತ:ಸ್ಮರಣೀಯರು ಕೂಡ. ಸಿದ್ದೇಶ್ವರ ಸ್ವಾಮಿಜಿಗಳನ್ನು ಹಿಂದೂ ಧರ್ಮಸಭಾದಲ್ಲಿ, ಭಗವದ್ಗೀತಾ ಅಭಿಯಾನದಲ್ಲಿ ಹಾಗೂ ಹಳಿಯಾಳದಲ್ಲಿ ಒಮ್ಮೆ ಭೇಟಿ ಆಗಿದ್ದೆವು. ಅವರ ಜ್ಞಾನ ಯೋಗಾಶ್ರಮಕ್ಕೂ ಭೇಟಿ ನೀಡಿದ್ದೆವು.
ನಮ್ಮ ಭೇಟಿಯ ಸಂದರ್ಭದಲ್ಲಿ ಶಾಲು ಹಾಕಲು ಮುಂದಾದಾಗ ನಿರಾಕರಿಸಿದ್ದರು. ಆದರೆ, ಪುಸ್ತಕ ಕೊಟ್ಟಾಗ ಸ್ವೀಕರಿಸಿದ್ದರು ಎಂದೂ ಶ್ರೀಗಳು ಸ್ಮರಿಸಿಕೊಂಡಿದ್ದಾರೆ.