ಸೋಂದಾ ಇತಿಹಾಸೋತ್ಸವ

posted in: History | 0

ಶ್ರೀ ಸೋದೆ ಅರಸ ಸದಾಶಿವರಾಯ

       ಇತಿಹಾಸ ಎಂಬುದು ವಾಸ್ತವಿಕವಾಗಿ ” ಹೀಗೆ ಇತ್ತು “ಎಂಬುದಾದರೂ “ಹೀಗೆ ಇರಬೇಕು” ಎಂಬುದರ ಪಥ ನಿರ್ದೇಶನದ ಗುರುವೂ ಹೌದು. ಒಳಿತು, ಕೆಡುಕು, ನ್ಯಾಯ, ಅನ್ಯಾಯ, ಸಾಧನೆ, ಸಂವೇದನೆ, ಸಂಘರ್ಷ, ಸಾಮರಸ್ಯ, ಸಂಪ್ರದಾಯ, ಸಂಸ್ಕೃತಿ ಹೀಗೆ ಸಕಲ ಸಾರಗಳ ಸಂಗ್ರಹವಾಗಿ ಇತಿಹಾಸ ನಮ್ಮ ವರ್ತಮಾನದ ಬದುಕಿಗೆ ಒಂದು ಸ್ಪೂರ್ತಿಯ ಸೆಲೆಯಾಗಿರುವ ಸಂಜೀವಿನಿ. ವಿಜ್ಞಾನ ತಂತ್ರಜ್ಞಾನಗಳು ಉಚ್ಛ್ರಾಯ ಸ್ಥಿತಿಗೆ ತಲುಪಿರುವ ಈ ಆಧುನಿಕ ಯುಗದಲ್ಲಿ ಹಿಂದೆ ಯಾವಾಗಲೋ ನಡೆದ ಘಟನೆಗಳು ಏನು ಮಾಡಿಯಾವು ಎಂಬ ನಕಾರಾತ್ಮಕ ಅಥವಾ ನಿರ್ಲಕ್ಷ್ಯದ ಧೋರಣೆ ಸಮಾಜದ ಅಧಃಪತನಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ,ನಮ್ಮ ನೆಲದ ಪುಣ್ಯ ಸಂಗತಿಗಳ ಸ್ಮರಣೆ, ಹಿಂದೆ ಆಗಿ ಹೋದ ಮಹಾಪುರುಷರ, ಸಾಧಕರ, ರಾಜಮಹಾರಾಜರ, ಆಧ್ಯಾತ್ಮಿಕ ಸಂಪನ್ನರ ಸ್ಮರಣೆ ಜಾಗೃತ ಸಮಾಜದ ಪ್ರಜ್ಞಾವಂತಿಕೆಯ ಲಕ್ಷಣ ಮಾತ್ರವಲ್ಲದೆ ಹೊಸ ಆವಿಷ್ಕಾರಕ್ಕೆ, ಸಾಧನೆಗೆ ಸ್ಪೂರ್ತಿಯೂ ಹೌದು ಎಂಬುದು ಆದ್ಯಂತಿಕ ಸತ್ಯ. ಹೇಗೆ ಹಿಂದಿನ ವಿದ್ಯಮಾನಗಳನ್ನು ಅರಿಯಲು ವಾಹನಕ್ಕೆ ಮಿರರ್ ಅಗತ್ಯವೋ ಹಾಗೆಯೇ ನಮ್ಮ ಬದುಕು ಎಂಬ ವಾಹನಕ್ಕೂ ಇತಿಹಾಸ ಎಂಬ ಮಿರರ್ ಬೇಕೆ ಬೇಕು, ಇಲ್ಲವಾದಲ್ಲಿ ಆಗುವುದು ಅಪಘಾತವೆ. ಹೊಸ ಪೀಳಿಗೆಗೆ ಇತಿಹಾಸವನ್ನು ಹೊಸ ರೀತಿಯಲ್ಲೇ ಪರಿಣಾಮಕಾರಿಯಾಗಿ ತಲುಪಿಸುವ ಆಶಯದೊಂದಿಗೆ ೨೦೧೪ ರಲ್ಲಿ ನನಗೊಂದು ಯೋಚನೆ ಮೂಡಿತು. ಅದುವೇ “ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ”. 

         ಈ ಯೋಚನೆ ಮೂಡುತ್ತಿದ್ದಂತೆಯೇ ನಮ್ಮ ಊರಿನ ಕೆಲವರು ಪ್ರಮುಖರ ಜೊತೆಗೆ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳನ್ನು ಕಾಣಲು ಅವರ ಪೀಠದ ಬಳಿ ಬಂದು ಕುಳಿತೆವು. ಇತಿಹಾಸದ ಕುರಿತು ವಿಶೇಷ ಕಾಳಜಿ ಮತ್ತು ಆಸಕ್ತಿ ಪೂಜ್ಯರಿಗೆ. ಅದರ ಪ್ರತಿಫಲವಾಗಿಯೇ ಸೋಂದಾದಲ್ಲಿ ಮೂರು ದಶಕಗಳ ಹಿಂದೆಯೇ ಸ್ಮಾರಕಗಳ ಸಂರಕ್ಷಣೆಗಾಗಿ ಜಾಗೃತ ವೇದಿಕೆ ಎಂಬ ಸಂಸ್ಥೆಯನ್ನೂ ಹುಟ್ಟು ಹಾಕಿದ್ದರು. ಹೀಗಾಗಿ ಮನದಲ್ಲಿ ಮೂಡಿದ ಇತಿಹಾಸ ಸಮ್ಮೇಳನದ ವಿಚಾರವನ್ನು ಶ್ರೀಗಳಿಗೆ ಹೇಳುತ್ತಿದ್ದಂತೆಯೇ ತಕ್ಷಣದಲ್ಲಿ ಒಪ್ಪಿಗೆ ನೀಡಿ ನಮ್ಮ ಮಠ ಮಾತ್ರವಲ್ಲದೆ ಸೋಂದಾದಲ್ಲೇ ಇರುವ ಸೋದೆ ವಾದಿರಾಜ ಮಠ, ಸ್ವಾದಿ ಜೈನಮಠಗಳನ್ನೂ ಸೇರಿಸಿಕೊಂಡು ಈ ಇತಿಹಾಸ ಸಮ್ಮೇಳನವನ್ನು “ಸೋಂದಾ ಇತಿಹಾಸೋತ್ಸವ ” ಎಂಬ ಹೆಸರಿನಲ್ಲಿ ಆಚರಿಸೋಣ ಎಂಬ ಅಭಯವನ್ನು ಪೂಜ್ಯ ಶ್ರೀಗಳವರು ನೀಡಿದ್ದು ನಮ್ಮ‌ನೆಲದ ಅಹೋಭಾಗ್ಯವೇ ಸರಿ. ಈ ಇತಿಹಾಸೋತ್ಸವ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜನೆಯ ಮೂಲ ಆಶಯವೆಂದರೆ ಯುವ ಜನತೆಗೆ ಇತಿಹಾಸದತ್ತ ಒಲವು ಬರಬೇಕು, ಪ್ರಾದೇಶಿಕ ಇತಿಹಾಸಕ್ಕೊಂದು ಪ್ರಾಮುಖ್ಯತೆ ಬರಬೇಕು, ಸೋದೆಯ ವಿದ್ವಾಂಸ ದೊರೆ ಸದಾಶಿವರಾಯರ ಸ್ಮರಣೆ ಪ್ರಶಸ್ತಿಯ ಮೂಲಕ ಚಿರಂಗನವಾಗಬೇಕು, ಹಾಗೂ ಹಲವಾರು ದಶಕಗಳ ಕಾಲ ಇತಿಹಾಸ ಸಂಶೋಧನೆ ಎಂಬ ಕಠಿಣ ಮತ್ತು ಸಾಹಸಿ ಕಾರ್ಯದಲ್ಲಿ ತೊಡಗಿಸಿಕೊಂಡ ಹಿರಿಯ ಇತಿಹಾಸಕಾರರಿಗೆ ವಿಶೇಷ ಗೌರವ ಸಂಮಾನ ದೊರಬೇಕು ಮತ್ತು ಪ್ರತಿ ವರ್ಷ ಪ್ರಾಚೀನ ಭಾರತದ ಸತ್ಯ ಚರಿತ್ರೆ ಹಾಗೂ ಕೊಡುಗೆಗಳ ಚಿಂತನೆ ಮುಖ್ಯವಾದವುಗಳು. ನಮ್ಮ ಈ ಆಶಯಕ್ಕೆ ಸೋದೆ ವಾದಿರಾಜ ಮಠದ ಶ್ರೀಗಳು ಹಾಗು ಸ್ವಾದಿ ಜೈನಮಠದ ಶ್ರೀಗಳು ಕೂಡ ತಮ್ಮ ಆಶೀರ್ವಾದ ಸಹಕಾರ ನೀಡಿದ್ದು ಆಶಯಕ್ಕೊಂದು ಆನೆಬಲಬಂದತ್ತಾಗಿತ್ತು. ಜಾಗೃತ ವೇದಿಕೆ ಸೋಂದಾ ಮತ್ತು ಸೋಂದಾ ಇತಿಹಾಸೋತ್ಸವ  ಸಮಿತಿ ಹಾಗೂ ಮೂರು ಧರ್ಮ ಪೀಠಗಳ ಸಂಯುಕ್ತ ಆಶ್ರಯದಲ್ಲಿ ಈ ಅಭೂತಪೂರ್ವ ಕಾರ್ಯಕ್ರಮ ಆಗಬೇಕು ಮತ್ತು ಪ್ರತಿ ವರ್ಷ ಸೋಂದಾದ ಒಂದೊಂದು ಮಠಗಳಲ್ಲಿ ಇದು ನಡೆಯಬೇಕು ಎಂಬ ಪೂಜ್ಯ ಶ್ರೀ ಸ್ವರ್ಣವಲ್ಲೀ ಶ್ರೀಗಳವರ ಪಥ ನಿರ್ದೇಶನದಲ್ಲಿ ಇಂಥಹದ್ದೊಂದು ಇತಿಹಾಸದ ಉತ್ಸವ ೨೦೧೪ ರಲ್ಲಿ ಪ್ರಾರಂಭವಾಯಿತು. ಅದಕ್ಕಿಂತ ಹೆಚ್ಚಾಗಿ ಈಗಿನ ಸೋಂದಾ ಹಿಂದೆ ಸೋಮಧಾಪುರ, ಸುಧಾಪುರ, ಸೋವದೆ, ಅಮೃತಪುರ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಐತಿಹಾಸಿಕ ಪಟ್ಟಣ ಸೋದೆ, ಅರಸರ ರಾಜಧಾನಿ ಪ್ರದೇಶವಾಗಿತ್ತು. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಂಪನ್ನತೆಯನ್ನು ಹೊಂದಿದ್ದ ಸಂಪದ್ಭರಿತ ಪ್ರದೇಶ ಇಂತಹ ಒಂದು ಸಮೃದ್ಧ ಐತಿಹಾಸಿಕ ನೆಲೆಯಲ್ಲಿ ಇತಿಹಾಸ ಸಮ್ಮೇಳನದ ಆಯೋಜನೆ ಶ್ರೀಗಳವರ ಕನಸೂ ಆಗಿತ್ತು. ಮೊದಲ ವರ್ಷದ ಸಮ್ಮೇಳನದಲ್ಲಿ ಹಿರಿಯ ಶಾಸನ ತಜ್ಞರಾದ ಡಾ.ಶ್ರೀನಿವಾಸ ರಿತ್ತಿಯವರಿಗೆ ಸದಾಶಿವರಾಯ ಪ್ರಶಸ್ತಿ ಹಾಗೂ ಕಡತ ತಜ್ಞರಾದ ಡಾ.ಎ.ಕೆ ಶಾಸ್ತ್ರಿಯವರಿಗೆ ಸರ್ವಾಧ್ಯಕ್ಷತೆ ನೀಡಿ ಗೌರವಿಸಲಾಯಿತು. ನಂತರದ ವರ್ಷಗಳಲ್ಲಿ ಡಾ.ಅ.ಸುಂದರ, ಡಾ.ಎಸ್.ಕೆ.ಜೋಷಿ, ಡಾ.ಎಂ.ಎಸ್.ಕೃಷ್ಣಮೂರ್ತಿ, ಡಾ.ಶ್ರೀನಿವಾಸ ಪಾಡಿಗಾರ್, ಡಾ.ಶುಭಚಂದ್ರ ಜೈನ್, ಡಾ.ಆರ್.ಎಂ .ಷಡಕ್ಷರಯ್ಯ, ಡಾ.ಲಕ್ಷ್ಮಣ ತೆಲಗಾವಿ, ಡಾ.ಎಚ್ .ಎಸ್.ಗೋಪಾಲರಾವ್ಡಾ, ದೇವರಕೊಂಡಾರೆಡ್ಡಿ, ಡಾ.ಸುಂದರ್ ರಾಜನ್ ಅವರುಗಳು ಪ್ರಶಸ್ತಿ ಮತ್ತು ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿದ್ದಾರೆ. ದೇಶದ ಅದೆಷ್ಟೋ ವಿದ್ವಾಂಸರು ಈ ಆರು ಸಮ್ಮೇಳನಗಳ ಗೋಷ್ಠಿಯಯಲ್ಲಿ ತಮ್ಮ ಅಮೂಲ್ಯ ಚಿಂತನೆಯನ್ನು ಬಿತ್ತಿದ್ದಾರೆ. ಇದೆಲ್ಲದಕ್ಕೂ ಮೂಲ ಪ್ರವರ್ತಕರಾಗಿರುವ ಪೂಜ್ಯ ಶ್ರೀ ಸ್ವರ್ಣವಲ್ಲೀ ಶ್ರೀಗಳವರು ಗತದ ರಥಕ್ಕೆ ಪಥ ನಿರ್ದೇಶಿಸಿದ ಮಹಾಮಹಿಮರು. ಇವರ ಇತಿಹಾಸದೆಡೆಗಿನ ಅದಮ್ಯ ಪ್ರೀತಿಗೆ ನನ್ನದೊಂದೊಂದು ಅನಂತ ಪ್ರಣಾಮಗಳು. ಇತಿಹಾಸ ಸಮ್ಮೇಳನ ಯಾಕೆ ಬೇಕು ಎಂಬುದಕ್ಕೆ ಉತ್ತರ ಸಮಾಜದಲ್ಲಿ ಈಗಾಗಲೇ ದೊರಕಿದೆ. ಮೊದಲನೇ ಸಮ್ಮೇಳನದಲ್ಲಿ ಡಾ.ರಿತ್ತಿಯವರು ಪೂಜ್ಯ  ಶ್ರೀ ಸ್ವರ್ಣವಲ್ಲೀ ಶ್ರೀಗಳವರಿಗೆ ತಮ್ಮ ಬಳಿ ಇದ್ದ ಅಮೂಲ್ಯ ತಾಮ್ರಪತ್ರವೊಂದನ್ನು ಹಸ್ತಾಂತರಿಸಿದ್ದರು.

ಅದು ಗೋಕರ್ಣದಲ್ಲಿ ಮಠದ ಅಸ್ತಿತ್ವವನ್ನು ತಿಳಿಸುವ ತೀರಾ ಪ್ರಮುಖ ದಾಖಲೆಯಾಗಿತ್ತು. ಇದೊಂದು ಅವಿಸ್ಮರಣೀಯ ಘಟನೆ ಮಾತ್ರವಲ್ಲದೆ ಇತಿಹಾಸ ಸಮ್ಮೇಳನದ ಫಲಶೃತಿ ಎಂಬ ಹೆಮ್ಮೆ ನಮಗಿದೆ. ಪೂಜ್ಯ ಶ್ರೀಗಳ ಇತಿಹಾಸದ ಕುರಿತಾದ ಕಳಕಳಿ ಮತ್ತು ಇತಿಹಾಸೋತ್ಸವದ ಆಯೋಜನೆಗೆ ಅವರದೇ ಆದ ಒಂದಿಷ್ಟು ಆಶಯಗಳಿವೆ. ಮುಖ್ಯವಾಗಿ ಅವರೇ ಹೇಳುವಂತೆ  “ಇತಿಹಾಸದಲ್ಲಿ ಉಲ್ಲೇಖವಾಗಿರುವ ಹಿಂದಿನ ಘಟನೆಗಳ ಅರಿವು ನಮಗಿರಬೇಕು, ಹಿಂದೆ ನಡೆದಿದ್ದರ ಪ್ರಜ್ಞೆ ನಮಗಿದ್ದರೆ ಮಾತ್ರ ಮುಂದಿನ ಹೆಜ್ಜೆ ಧೃಡ ಮತ್ತು ಪರಿಣಾಮಕಾರಿಯಾಗಿರಲು ಸಾಧ್ಯ. ನಮ್ಮ ನಾಡಿನ ಇತಿಹಾಸ ಜಗತ್ತಿನ ಪ್ರಾಚೀನ ಇತಿಹಾಸಗಳಲ್ಲೊಂದು ಎಂಬುದಕ್ಕೆ ನಮ್ಮ ವೇದಗಳೇ ಸಾಕ್ಷಿ. ಇತಿಹಾಸ ಎನ್ನುವುದು ಒಂದು ದೇಶದ ಆತ್ಮ, ಇತಿಹಾಸವಿಲ್ಲದ ಬದುಕು ಶೂನ್ಯ. ಇಂಥಹ ಸಮ್ಮೇಳನದ ಮೂಲಕ ವಿದ್ಯಾರ್ಥಿಗಳು ಇತಿಹಾಸದೆಡೆಗೆ ಒಲವು ತೋರಲು ಮುಂದಾಗಬಹುದು. ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ ಎಂಬ ಕುರಿತು ಕೆಲವರಿಂದ ಆಕ್ಷೇಪವಿದೆ, ನಮ್ಮಲ್ಲಿರುವ ಇತಿಹಾಸದೆಡೆಗಿನ ನಿರ್ಲಕ್ಷವೇ ಅದಕ್ಕೆ ಕಾರಣ. ಇತಿಹಾಸದೆಡೆಗೆ ಅಭಿಮಾನ ಉಳ್ಳವರು ಶ್ರೇಷ್ಠ ಮೌಲ್ಯಗಳ ದಾರಿಯಲ್ಲಿ ಹೆಜ್ಜೆ ಇಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ‌ಕುಟುಂಬದ ಹಿನ್ನೆಲೆ ತಿಳಿದಾಗ ಅಭಿಮಾನ ಮೂಡಿ ಉತ್ತಮ ದಾರಿಯೆಡೆಗೆ ಸಾಗುತ್ತಾರೆ. ಪಿ.ಯೂ.ಸಿ. ಪದವಿಗಳ ಕಲಾ ವಿಭಾಗಕ್ಕೆ ಮಾತ್ರ ಇತಿಹಾಸ ಸೀಮಿತವಾಗದೆ ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲೂ ಇತಿಹಾಸ ಕಡ್ಡಾಯವಾಗಬೇಕು. ಪ್ರಾದೇಶಿಕ ಇತಿಹಾಸದ ಅಧ್ಯಯನ ಸ್ಥಳೀಯ ಮಟ್ಟದ ಅನೇಕ ಅಭಿವೃದ್ಧಿಗೆ ಚೇತೋಹಾರಿಯಾಗಿದೆ. ಜೀವನದ ಮೌಲ್ಯಕ್ಕೆ ಇತಿಹಾಸದ ಅಭಿಮಾನ ಅಗತ್ಯ. ಇವೆಲ್ಲ ಇತಿಹಾಸ ಸಮ್ಮೇಳನದ ಆಯೋಜನೆಯಲ್ಲಿ ಪೂಜ್ಯರ ಆಶಯಗಳು. ಇದುವರೆಗಿನ ಆರು ಸಮ್ಮೇಳನಗಳಲ್ಲಿ ಅನೇಕ ನಿರ್ಣಯಗಳು ಮಂಡಿಸಲ್ಪಟ್ಟಿದೆ ಮುಖ್ಯವಾಗಿ ಉತ್ತರ ಕನ್ನಡಕ್ಕೊಂದು ವಿಶ್ವವಿದ್ಯಾಲಯ ಬೇಕೆಂಬುದು, ಅದು ಈಗ ನೆರವೇರಲ್ಪಟ್ಟಿದೆ. ಅದೇ ರೀತಿ ಸೋದೆಯ ಮತ್ತು ಸದಾಶಿವರಾಯನ ಇತಿಹಾಸ ಪಠ್ಯದಲ್ಲಿ ಬರಬೇಕೆಂಬುದು ಮತ್ತೊಂದು ನಿರ್ಣಯವಾಗಿತ್ತು. ಅದೂ ಕೂಡಾ ಈಗ ಸಾಧ್ಯವಾಗಿ ಪಠ್ಯದಲ್ಲಿ ಸೋದೆ ಮತ್ತು ಸದಾಶಿವರಾಯನ‌ ಇತಿಹಾಸಗಳು ಬಂದಿವೆ. ಸೋಂದಾದಲ್ಲೊಂದು ಪ್ರಾದೇಶಿಕ ಇತಿಹಾಸ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕೆಂಬ ನಿರ್ಣಯಕ್ಕಿನ್ನೂ ಜೀವ ಬರಬೇಕಿದೆ. ಸ್ಮಾರಕಗಳು ರಕ್ಷಣೆಯಾಗಬೇಕು. ಪ್ರಾದೇಶಿಕ ಇತಿಹಾಸಕ್ಕೆ ಮಹತ್ವ ಬರಬೇಕು ಇತ್ಯಾದಿ ಬೇಡಿಕೆಗಳು ರಾಜ್ಯದಲ್ಲಿ ಬಹಳ ಉನ್ನತ ಮಟ್ಟದ ಪ್ರಾಮುಖ್ಯತೆಯನ್ನು ಸಮ್ಮೇಳನಕ್ಕೆ ಒದಗಿಸಿದೆ. ವಿಜಯ ನಗರ ವಂಶಸ್ಥರಾದ ಪ್ರಸ್ತುತದ ಶ್ರೀ ಕೃಷ್ಣದೇವರಾಯರು, ಸೋದೆಯ ಅರಸು ವಂಶಸ್ಥರಾದ ಶ್ರೀ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರು ಸೋಂದಾ ಇತಿಹಾಸೋತ್ಸವದಲ್ಲಿ ಪಾಲ್ಗೊಂಡು ಇದರ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಕಳೆದ ಆರು ಸಮ್ಮೇಳನಗಳು ಬದ್ಧತೆ, ಸಿದ್ಧತೆ ಮತ್ತು ಶುದ್ಧತೆಯೊಂದಿಗೆ ನಾಡಿನ ಮನೆ-ಮನಗಳ ಮಾತಾಗಿದೆ ಎಂಬ ಹೆಮ್ಮೆಯ ಭಾವದೊಂದಿಗೆ ಇದಕ್ಕೆಲ್ಲ ಮೂಲ ಪ್ರೇರಣೆ ಮತ್ತು ಶಕ್ತಿಯಾದ ಪೂಜ್ಯ ಶ್ರೀ ಸ್ವರ್ಣವಲ್ಲೀ ಶ್ರೀಗಳವರಿಗೆ ಮತ್ತು ಸೋದೆಯ ಎಲ್ಲ ಧರ್ಮಪೀಠಗಳಿಗೂ ಮನಸಾ ನಮನಗಳು.

ಲೇಖಕರು: ಡಾ.ಲಕ್ಷ್ಮೀಶ್ ಸೋಂದಾ

ಇತಿಹಾಸಕಾರರು ಮತ್ತು ಸದಸ್ಯರು ನ್ಯಾಶನಲ್ ಫೆಲೋಶಿಪ್ ಕಮಿಟಿ ದೆಹಲಿ

ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ