ಸ್ವರ್ಣಜ್ಯೋತಿಯ  ಅಮೃತಸೇಚನ

posted in: History, Uncategorized | 0

(ಶ್ರೀ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಯವರು ಸನ್ಯಾಸವನ್ನು ಸ್ವೀಕರಿಸಿ ಪೀಠಾರೋಹಣ ಮಾಡಿದ ಸಂದರ್ಭದಲ್ಲಿ ಶಿಷ್ಯರಿಗೆ ಆಶ್ವಾಸನಾರೂಪವಾಗಿ ಮಾಡಿದ ಅನುಗ್ರಹ ವಚನ)

ಜ್ಯೋತಿಯು ಬೆಳಗುತ್ತಿರುವಂಥ ಶುಭಸಂದರ್ಭದಲ್ಲಿ ಅಭಯವನ್ನು ಕೊಡಿ ಎಂದು ಪ್ರಾರ್ಥನೆ ಮಾಡುತ್ತಿರುವಂಥ ಸಮಸ್ತ ಶಿಷ್ಯ ಮಹಾಜನರೇ! ವೇದಿಕೆಯ ಮೇಲೆ ಮಂಡಿಸಿದಂಥ ಎಲ್ಲ ಅತಿಥಿಗಳೇ! ಸ್ವಾಗತಸಮಿತಿಯ ಪದಾಧಿಕಾರಿಗಳೇ! ಹಾಗೂ ಎಲ್ಲಾ ಶ್ರದ್ಧಾಳುಗಳೇ!

ಸುಂದರವಾದಂಥ ಸಸ್ಯಶಾಮಲವಾದ ಶಾಲ್ಮಲೀ ತಟದಲ್ಲಿ, ಇಷ್ಟು ರಮಣೀಯವಾದ ವಾತಾವರಣದಲ್ಲಿ ತಪೋವನದಲ್ಲಿ, ಶ್ರೀ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಯವರ ತಪೋಭೂಮಿಕೆಯಲ್ಲಿ ತಾವೆಲ್ಲ ಸೇರಿದ್ದೀರಿ.

ಇಂಥ ತಪೋಭೂಮಿಕೆ ಹೇಗೆ ನಿರ್ಮಾಣವಾಯಿತು? ಕಾರಣವೇನು? ಇಂಥ ಸಸ್ಯಶಾಮಲತೆ ಏಕೆ ಬಂತು? ನಾವು ಪುರಾಣದಲ್ಲಿರಲಿ, ಇತಿಹಾಸದಲ್ಲಿರಲಿ ತಪೋಭೂಮಿ ಎಂದು ನಮ್ಮ ಮನಸ್ಸಿಗೆ ಬಂದಾಗ ಸುಂದರ ಹೂಗಿಡಗಳು,ವೃಕ್ಷಗಳು, ಲತೆಗಳು, ನಿರ್ಭಯವಾಗಿ ಸಂಚರಿಸುವ ಪ್ರಾಣಿಗಳು, ಸದಾ ಅಧ್ಯಯನ-ಅಧ್ಯಾಪನ, ಯಜನ-ಯಾಜನ ನೆಡೆಯುತ್ತಿರುವುದು ಮನೋಗೋಚರವಾಗುತ್ತದೆ. ಅದೇ ರೀತಿ ಇಂದಿನ ವಾತಾವರಣವಿದೆ. ಅದೇ ತಪೋಭೂಮಿ ಇದೆ. ಅದಕ್ಕೆ ಸುಂದರ ಪರಿಸರವು ಮೆರಗು ಕೊಟ್ಟಿದೆ.

ಈ ಶುಭಸಂದರ್ಭದಲ್ಲಿ ಶ್ರೀ ಗುರುಗಳು ಹೇಳಿದ ಹಾಗೇ ಈ ಪರಂಪರೆಗೆ ಹೊಸ ಜ್ಯೋತಿಯನ್ನು ಸೇರಿಸಿ, ಆ ಜ್ಯೋತಿಯಲ್ಲಿ ಅಭಯವನ್ನು ಕೇಳುತ್ತಿದ್ದೀರಿ.

ಈಗ ಒಂದು ವಿಚಾರವನ್ನು ಹೇಳಬೇಕಾಗುತ್ತದೆ. ಈ ರೀತಿಯಾದ ಪರಂಪರೆ ವಿಚ್ಛಿನ್ನವಾಗದಂತೆ ಏಕೆ ನಾವು ಈ ರೀತಿ ಮುಂದುವರಿಸುತ್ತ ಹೋಗುತ್ತೇವೆ? ಈ ದೇಶದಲ್ಲಿ ಅನೂಚಾನಾಗಿ ತಪಸ್ಸು ನೆಡೆಯುತ್ತಿರಲಿ. ಈ ಪ್ರದೇಶದಲ್ಲಿ ಆರಂಭವಾದ, ನಡೆದುಕೊಂಡು ಬಂದ ತಪೋನುಷ್ಠಾನ ಪದ್ಧತಿಯು ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದಲ್ಲವೇ ನೀವು ಎಲ್ಲಾ ಮಹಾಜನಗಳು ಸೇರಿ ಬಿನ್ನವತ್ತಳೆಯನ್ನು ಸಮರ್ಪಿಸಿದ್ದೀರಿ! ಇಂಥ ಶುಭಸಂದರ್ಭದಲ್ಲಿ ಅಭಯವನ್ನು ಯಾವ ರೀತಿ ಕೊಡಬೇಕು. ಈ ರೀತಿಯ ಪರಂಪರೆ, ಆ ಪರಂಪರೆಯ ರಕ್ಷಣೆ, ಪರಂಪರೆಯ ರಕ್ಷಣೆಯ ಮೂಲಕ ಎಲ್ಲ ಭಕ್ತಾದಿಗಳ ಶ್ರೀರಕ್ಷೆ ಹಾಗೂ ಸನಾತನ ಧರ್ಮದ ಸಂರಕ್ಷಣೆ ಈ ಎಲ್ಲವೂ ಕೂಡ ದೃಷ್ಟಿಯಲ್ಲಿ ಇರಬೇಕಾಗುತ್ತದೆ. ನಮ್ಮ ಸನಾತನ ಧರ್ಮದ ಸಂರಕ್ಷಣೆ ಏಕೆ?
ಈಗಾಗಲೇ ವೇದಿಕೆಯ ಮೇಲೆ ಭಾಷಣಮಾಡಿದ ಮಹನೀಯರೆಲ್ಲ ಹೇಳಿದರು. “ಶಾಂತಿ ಬೇಕು” . ಶಾಂತಿಯನ್ನು ಅದರಲ್ಲೂ ಇವತ್ತಿನ ದಿನಗಳಲ್ಲಿ ಪಶ್ಚಿಮದ ದೇಶಗಳಲ್ಲಿ, ಅರಬದೇಶಗಳಲ್ಲಿ ಆಗುತ್ತಿರುವ ಅಶಾಂತಿಯ ವಿಚಾರ ಇರಲಿ, ಆದರೆ ನಮ್ಮಲ್ಲೇ ಅಶಾಂತಿ ಇದೆ. ನಮ್ಮ ದೇಶದ ಒಂದೊಂದು ರಾಜ್ಯದಲ್ಲಿ, ಒಂದೊಂದು ಜಿಲ್ಲೆಯಲ್ಲಿ, ಒಂದೊಂದು ತಾಲ್ಲೂಕುಗಳಲ್ಲಿ, ಒಂದೊಂದು ವ್ಯಕ್ತಿಯಲ್ಲೂ ಅಶಾಂತಿ ಇದೆ. ಪ್ರತೀ ವ್ಯಕ್ತಿಯಲ್ಲಿ ತುಂಬಿದ ಈ ಎಲ್ಲ ಅಶಾಂತಿಯನ್ನು ಶಮನ ಮಾಡಿದರೆ ದೇಶಕ್ಕೆ ಶಾಂತಿಯನ್ನು ಉಂಟುಮಾಡುವುದು ಬೇರೆ ಏನೂ ಉಳಿಯುವದಿಲ್ಲ. ಪ್ರತ್ಯೇಕ ವ್ಯಕ್ತಿಗೂ ಕೂಡ ಸನಾತನ ಧರ್ಮದ ಸೊಂಪು, ಇಂಪು ಮುಟ್ಟಿದರೆ ತಟ್ಟಿದರೆ ಅವನ ಮನಸ್ಸು ನೆಮ್ಮದಿಯಿಂದ ಬಾಳುತ್ತದೆ. ಆದ್ದರಿಂದ ಸನಾತನ ಧರ್ಮದ ರಕ್ಷಣೆ ಅಗತ್ಯ. ಈ ರಕ್ಷಣೆಗೋಸ್ಕರ ಶ್ರೀ ಶಂಕರ ಭಗವತ್ಪಾದರು ಮಠಾಮ್ನಾಯಗಳನ್ನು ಸ್ಥಾಪನೆ ಮಾಡಿದರು. ಅದೇ ರೀತಿ ಮುಂದಿನ ಎಲ್ಲ ಯತಿವರ್ಯರೂ ಕೂಡ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು. ಆ ಪರಂಪರೆಯನ್ನು ಒಂದುಕಡೆ ನಿಲ್ಲಿಸಿ ಮಠಗಳು ಎಂದು ವಿಷೇಶ ನಾಮಧೇಯದಿಂದ ಕರೆಯುತ್ತೇವೆ. ಇಂಥ ಮಠಗಳನ್ನೆಲ್ಲ ರಕ್ಷಣೆ ಮಾಡುವದು ಅಗತ್ಯ. ತತ್ರಾಪಿ ಇಲ್ಲಿ ನಾವು ಸೇರಿದ್ದು ನಮ್ಮ ಮಠದ ವಿಚಾರವನ್ನು ಮಾಡಲಿಕ್ಕೆ. ಮೊದಲು ಮನೆಯನ್ನು ಗೆಲ್ಲಬೇಕಂತೆ. ಆಮೇಲೆ ಮಾರನ್ನು ಗೆಲ್ಲುವುದು. ಈ ದಿನಗಳಲ್ಲಿ ಕೇಳಿಬರುತ್ತಿದೆ.  “ಮಠವನ್ನು ಮುಳುಗಿಸಿ ಬಿಡಬೇಕು” ಎಂದು. ಬೇಡ್ತಿ ಯೋಜನೆಯನ್ನು ನಾವು ಕೇಳುತ್ತಿದ್ದೇವೆ. ನಮ್ಮ ಕಿವಿಗೆ ಬಂದು ಕುಕ್ಕುತ್ತಾ ಇದೆ. ಹೌದು ಸನಾತನ ಧರ್ಮ ಸಂರಕ್ಷಣೆಗೆ ಎಂದೇ ನಮ್ಮನ್ನು ಕುಳ್ಳಿರಿಸಿದ್ದೀರಿ. ಆದರೂ ಕೂಡ ಸನಾತನ ಧರ್ಮದ ರಕ್ಷಣೆ ಎನ್ನುವದು ಇಲ್ಲಿನ ಪರಿಸರ ರಕ್ಷಣೆ, ಶ್ರೀಮಠದ ರಕ್ಷಣೆ, ಸಮಸ್ತ ಶಿಷ್ಯ ಜನರ ಸಂರಕ್ಷಣೆಯಲ್ಲೂ ಅಡಕವಾಗಿದೆ. ಆದ್ದರಿಂದ ಈ ಬೇಡ್ತಿ ಯೋಜನೆಯನ್ನು ನೆಚ್ಚಿಕೊಂಡು ಅನ್ಯಾಯವಾಗುತ್ತಿದೆ. ಯಾವುದೋ ಯುವಕ ಸಂಘದವರು ಆ ವಿಷಯವನ್ನು ನಮ್ಮಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅದು ಯುಕ್ತವೇ ಆಗಿದೆ. ಯಾವ ವಿಧದಲ್ಲೂ ಶ್ರೀಮಠವನ್ನು ರಕ್ಷಣೆ ಮಾಡಲಿಕ್ಕೆ ನಾವೆಲ್ಲರೂ ಕಟಿಬದ್ಧರಾಗಿರಬೇಕು. ಆಗ ಕೇವಲ ನಮ್ಮ ರಕ್ಷಣೆ ಮಾತ್ರವಲ್ಲ ಸನಾತನ ಧರ್ಮ ಪರಂಪರೆಯ ಈ ತಪೋಭೂಮಿಯೂ ರಕ್ಷಿತವಾಗುತ್ತದೆ. ನಮ್ಮೆಲ್ಲರ ರಕ್ಷಣೆಯೂ ಆಗುತ್ತದೆ. ಈ ಸಂರಕ್ಷಣಾಭಾವನೆ ನಮ್ಮ ಮನಸ್ಸಿನಲ್ಲಿ ಯಾವತ್ತೂ ಇರಬೇಕು.

ಇನ್ನು ಶ್ರೀಮಠದ ಸಂಪ್ರದಾಯವನ್ನು ಉತ್ತರೋತ್ತರವಾಗಿ ಅಭಿವೃದ್ಧಿಪಡಿಸಬೇಕು. ಈ ಮಠದಲ್ಲಿ ಅನೂಚಾನವಾಗಿ ನೆಡೆಸಿಕೊಂಡು ಬರುತ್ತಿರುವ ಉಪಾಸನೆಗಳನ್ನು ಅರ್ಚನೆಗಳನ್ನು ಅನುಷ್ಠಾನಗಳನ್ನು ಇನ್ನೂ ಬೆಳಸಬೇಕು ಎಂದು ವಿನಂತಿಸಿದ್ದೀರಿ. ಇನ್ನು ಮುಂದೆ ಶ್ರೀಮಠದಲ್ಲಿ ನಡೆದುಕೊಂಡು ಬರುತ್ತಿರುವ ಯಾವ ಅರ್ಚನೆಗೂ ಉಪಾಸನೆಗೂ ನ್ಯೂನತೆ ಬರುವದಿಲ್ಲ. ಇತೋಪ್ಯತಿಷಯವಾಗಿ ವರ್ಧಿಸುತ್ತೇವೆ ಎಂದು ಧೈರ್ಯವಾಗಿ ಹೇಳುತ್ತೇವೆ. ಇದರಲ್ಲಿ ಸಂಶಯ ಬೇಡ. ಭಯ ಬೇಡ. ಶ್ರೀಮಠದ ಎಲ್ಲ ಶಿಷ್ಯರು ಅತಿಶಯ ಭಕ್ತಿಯಿಂದ ಮಠದ ಸೇವೆ ಮಾಡುತ್ತಿದ್ದಾರೆ. ಶ್ರೀ ಗುರುಚರಣರು ಆ ರೀತಿಯ ಉಪಾಸನೆಯ ಪದ್ಧತಿಯನ್ನು ಇಟ್ಟುಕೊಂಡಿದ್ದರಿಂದ. ಆದ್ದರಿಂದ ಅವುಗಳನ್ನು ಬೆಳಸುವದು ಅತ್ಯಗತ್ಯ. ಅವುಗಳನ್ನು ಬೆಳಸುವುದರ ಜೊತೆಯಲ್ಲಿಯೇ ವೈದಿಕ-ಪ್ರೋತ್ಸಾಹವೂ ಅಗತ್ಯ. ವೇದಗಳಿಗೆ, ಶಾಸ್ತ್ರಗಳಿಗೆ ಅತ್ಯಗತ್ಯ ಪ್ರೋತ್ಸಾಹವನ್ನು ಕೊಡಲೇಬೇಕಾಗುತ್ತದೆ. ಯಾಕೆ? “ಮಠ” ಎಂದರೆ ಏನು? ಸಂಸ್ಕೃತದ ಶ್ಲೋಕ ಒಂದು ಹೇಳುತ್ತದೆ. ಮಠವೆಂದರೆ ಅಧ್ಯಯನಶೀಲ ಛಾತ್ರರು ಅಲ್ಲಿ ಇರಲೇಬೇಕು. ಆದ್ದರಿಂದ ಮಠ ಶಬ್ದವು ಸಾರ್ಥಕವಾಗಬೇಕಾದರೆ ಇಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ ನಡೆಯಲೇಬೇಕು. ಇನ್ನೂ ಒಂದು ಕಾರಣ. ಮಠದಲ್ಲಿ ನಾವು ಯಾವ ರೀತಿ ವಾತಾವರಣವನ್ನು ಬಯಸಬೇಕು?  ಯಾವರೀತಿ ಪರಿಸರವನ್ನು ನಾವು ಕಾಣಬಯಸುತ್ತೇವೆ. ಒಂದು ಶಾಂತವಾದ, ಹೊರಗಿನ ಲೌಕಿಕ ಪ್ರಪಂಚಕ್ಕೆ ಭಿನ್ನವಾದಂಥ ತಪೋಮಯವಾದಂಥ ವಾತಾವರಣವನ್ನು ನೋಡಲು ಬಯಸುತ್ತೇವೆ. ಅಂಥ ವಾತಾವರಣಕ್ಕೆ ಸಾಧನಗಳು ಎರಡೇ . ಒಂದು ತಪೋನುಷ್ಠಾನ, ಇನ್ನೊಂದು ಅಧ್ಯಯನ-ಅಧ್ಯಾಪನ. ತಪೋನುಷ್ಠಾನವು ದೈವಾನುಗ್ರಹ ಸಾಧ್ಯವಾದದ್ದು. ಆದರೆ ಅಧ್ಯಯನ-ಅಧ್ಯಾಪನ ನಮ್ಮ ಪ್ರಯತ್ನದಿಂದಲೇ ಸಾಧ್ಯ. ಎಲ್ಲ ಶಿಷ್ಯಜನರ ಪ್ರಯತ್ನ ಅದರಲ್ಲಿ ಒಡಗೂಡಿದರೆ ಇನ್ನೂ ಹೆಚ್ಚು ಸಫಲವಾಗುತ್ತದೆ. ಅಧ್ಯಯನ-ಅಧ್ಯಾಪನಗಳೆಂಬ ತಪೋನುಷ್ಠಾನವನ್ನು ಇತೋಪ್ಯತಿಶಯವಾಗಿ ಬೆಳಸಬೇಕು. ಸ್ವಾಮಿಗಳೊಬ್ಬರೇ ಇಲ್ಲಿ ತಪಸ್ಸು ಮಾಡುವವರಲ್ಲ. ತಪಸ್ಸು ಮಾಡುವ ಅನೇಕ ಶಾಸ್ತ್ರಾಧ್ಯಯನಶೀಲರು ಇಲ್ಲಿ ಇದ್ದಾರೆ ಎಂದಾಗಬೇಕು. ಅಂಥ ವಾತಾವರಣ ಸೃಷ್ಟಿಯಾದಾಗ ಸನಾತನ ಧರ್ಮದ ಬೆನ್ನೆಲುಬು ಇನ್ನೂ ಘಟ್ಟಿಯಾಗುತ್ತದೆ. ಹವ್ಯಕ ಸಮಾಜದಲ್ಲಿ ಇಂದು ಸಂಸ್ಕೃತಾಭಿಮಾನ ಹೆಚ್ಚಾಗುತ್ತಿದೆ. ಆದರೆ ವೇದಾಧ್ಯಯನ, ಶಾಸ್ತ್ರಾಧ್ಯಯನಗಳು ಇಲ್ಲಿ ಹೆಚ್ಚು ಬೆಲೆಯನ್ನು ಪಡೆಯುತ್ತಿಲ್ಲ.ಈ ಬೆಲೆಯನ್ನು ನಾವು ಇಲ್ಲಿ ತೋರಿಸದೇ ಇನ್ನೆಲ್ಲಿ ತೋರಿಸೋಣ? ಇಷ್ಟು ಅಭಿಮಾನವಿರುವ ಈ ಸ್ಥಳದಲ್ಲಿ ವೇದಕ್ಕೆ ಶಾಸ್ತ್ರಕ್ಕೆ ಯೋಗ್ಯ ಸಮ್ಮಾನವನ್ನು ನೀಡದಿದ್ದರೆ ಇನ್ನೆಲ್ಲಿ ನಿರೀಕ್ಷಿಸೋಣ? ಆದ್ದರಿಂದ ಈ ವಿಚಾರವೂ ಕೂಡ ನಮ್ಮ ಮನಸ್ಸಿನಲ್ಲಿ ಇದೆ.

ಇನ್ನು ಈ ದೇಶದ ಸಕಲವಿಧ ಶ್ರೇಯಸ್ಸಿಗೂ ಕೂಡ ನಮ್ಮ ಪ್ರಾರ್ಥನೆ ಸಲ್ಲಬೇಕಾಗುತ್ತದೆ. ಈ ದೇಶದ ಸಕಲ ಪ್ರಜೆಗಳ ಮೇಲೂ ನಮ್ಮ ಆಶೀರ್ವಾದವಿರಬೇಕಾಗುತ್ತದೆ. “ಹವ್ಯಕರು ಮಾತ್ರ ಈ ಮಠದ ಶಿಷ್ಯರು” ಎಂಬ ಭಾವನೆ ನಮಗೆ ಖಂಡಿತ ಇಲ್ಲ. ಹವ್ಯಕರು ಈ ಮಠಕ್ಕೆ ವಿಷೇಶವಾಗಿ ಸೇವೆ ಸಲ್ಲಿಸುತ್ತಾರೆ. ಅಷ್ಟೆ. ಶ್ರೀ ಶ್ರೀ ಶಂಕರಾಚಾರ್ಯರ ಪರಂಪರೆಯ ಪ್ರತಿಯೊಬ್ಬ ಯತಿಯೂ ಕೂಡ ಈ ದೇಶದ, ಈ ಪ್ರಪಂಚದ ಸಕಲ ಭೂತಗ್ರಾಮಗಳಿಗೂ ನೆಮ್ಮದಿ ಸಿಗಲಿ ಎಂದು ಪ್ರತಕ್ಷಣದಲ್ಲೂ ಪ್ರತಿ ಉಸಿರಾಟವನ್ನು ಮಾಡುತ್ತಾರೆ. ಆದ್ದರಿಂದ ಸಮಸ್ತ ಭಾರತ ಪ್ರಜೆಗಳೂ ಶಿಷ್ಯರೇ. ಅವರೆಲ್ಲರೂ ಉದ್ಧಾರ್ಯರೇ. ಅವರೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವದು ನಮ್ಮ ಕರ್ತವ್ಯವೇ.

ಈ ದೇಶ ಸುಶಾಂತವಾಗಿ ನಡೆಯಬೇಕೆಂದರೆ ಎಲ್ಲ ಕಡೆಗಳಲ್ಲೂ ದೃಷ್ಟಿಹರಿಸಬೇಕಾದದ್ದು ಅಗತ್ಯ. ಅಂದರೆ ಈ ದೇಶದ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿಗಳ ಬದಲಾವಣೆಗಳನ್ನು ಗಮನಿಸಬೇಕಾಗುತ್ತದೆ. ಇವುಗಳ ಎಲ್ಲಕಡೆ ಸಂಪರ್ಕವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಈ ರೀತಿಯ ಸರ್ವತೋಮುಖ ಅಭಿವೃದ್ಧಿಯನ್ನು ಯತಿಗಳಿಂದ ಒಮ್ಮೆಲೇ ಬಯಸುವದು ಸರಿಯಲ್ಲ ಎನ್ನಿಸುತ್ತದೆ. ಹೌದು ರಾಜಕೀಯ ಅಭಿವೃದ್ಧಿಯಾಗಬೇಕು. ಸಾಮಾಜಿಕ-ಬದಲಾವಣೆಗಳೂ ಅಭಿವೃದ್ಧಿಗಳೂ ಆಗಬೇಕು. ಅವು ಯತಿವರ್ಯರು ನೀಡುವ ಆಶೀರ್ವಾದದ ನಂತರದ ಬೆಳವಣಿಗೆಗಳು. ಅವರು ಆಶೀರ್ವಾದವನ್ನು ಕೊಡುತ್ತಾರೆ. ಅಷ್ಟೆ. ಆಮೇಲೆ ಶ್ರೇಯೋಮಾರ್ಗದಲ್ಲಿ ಅಭಿವೃದ್ಧಿಯಾಗಬೇಕು. ನೇರವಾಗಿ ರಾಜಕೀಯವನ್ನು ಪ್ರವೇಶಿಸುವದು ಉಚಿತವಲ್ಲ. ಬಯಸುವದೂ ಇಲ್ಲ.

ಇಂಥ ಅಭಯಪ್ರದಾನ ಸಮಾರಂಭದಲ್ಲಿ ಇನ್ನೊಂದು ಮಾತನ್ನು ಅವಷ್ಯವಾಗಿ ಹೇಳಬೇಕೆಂದು ಮನಸ್ಸು ಬಯಸುತ್ತಿದೆ. ತಮಗೆಲ್ಲ ಗೊತ್ತಿರುವಂತೆ ಇನ್ನು ಹತ್ತು ವರ್ಷಗಳಲ್ಲಿ ಈ ಶತಮಾನ ಮುಗಿದು ಹೋಗುತ್ತದೆ. ಶತಮಾನವು ಕಳೆದು ಹೋಗುವ ಈ ಸಂದರ್ಭವನ್ನು ಹಲವು ಮುಖಗಳು ಹಲವು ವಿಧದಿಂದ ವೀಕ್ಷಿಸುತ್ತಿದ್ದಾರೆ. ಅನೇಕ ವಿದ್ವಾಂಸರು ವಿಚಿತ್ರ ದೃಷ್ಟಿಯಿಂದ ನೋಡಿದ್ದಾರೆ. ಪಶ್ಚಿಮದ ವಿದ್ವಾಂಸ ನಾರ್ಸೊಡಾಮಾ ಆ ಕಾಲವನ್ನು “ಸಂದಿಗ್ಧ ಪರಿಸ್ಥಿತಿ” ಸಂಧಿಕಾಲವೆಂದು ವಿವರಿಸಿದ್ದಾನೆ. “ವಿಚಿತ್ರ ಬದಲಾವಣೆ,ಹೊಸಯುಗ ಆರಂಭವಾಗುತ್ತದೆ.” ಎಂದಿದ್ದಾನೆ. ಆ ಕಾಲ ಬಹಳ ದೂರವಿಲ್ಲ. ಆ ಕಾಲದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆಯೋ ನಾವು ಕಂಡಿಲ್ಲ. ದೇವರಿಗೆ ಗೊತ್ತು. ಪರಂಪರೆಯಿಂದ ನಡೆದುಬಂದ ವರ್ಣಾಶ್ರಮ ಧರ್ಮಗಳು ಪುನಃ ಪ್ರತಿಷ್ಠಿತವಾಗಬಹುದು. ಇನ್ನೂ ಬಲವತ್ತರವಾಗಿ ರೂಢ ಮೂಲವಾಗಬಹುದು. ಅಥವಾ ಋಷಿ- ಮುನಿಗಳ ಕಾಲದ ಸನಾತನ ಸಂಸ್ಕೃತಿ ಹೊಸ ವೇಷವನ್ನು ಕಟ್ಟಿಕೊಂಡು ಪುನಃ ಪ್ರತಿಷ್ಠಾಪಿತವಾಗಬಹುದು. ಆದರೆ ನಾವು ಯಾವುದೇ ವಿಧವಾದ ಬದಲಾವಣೆಗೂ ಸನ್ನದ್ಧರಾಗಿ ಇರಬೇಕಾಗುತ್ತದೆ. ಈ ದಿಶೆಯಲ್ಲಿ ಮಠದ ವತಿಯಿಂದ ಎಲ್ಲ ಶಿಷ್ಯರೂ ಸಿದ್ಧರಾಗಿ ಇರಬೇಕಾಗುತ್ತದೆ. ಇವತ್ತು ಆ ಬದಲಾವಣೆಯ ಸೂಚನೆಗಳು ಕಾಣುತ್ತಿದೆ. ಜಗತ್ತಿನಲ್ಲಿ ಅಶಾಂತಿ ತಲೆದೋರುತ್ತಿದೆ. ಆ ಅಶಾಂತಿಯನ್ನು ಸಹಿಸುವ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕಾಗುತ್ತದೆ. ಶ್ರೀಮಠದ ಉತ್ತರೋತ್ತರ ಅಭಿವೃದ್ಧಿ ನಮ್ಮ ದೃಷ್ಟಿಯಲ್ಲಿ ಇದೆ. ಎಲ್ಲ ಜನರು, ಎಲ್ಲ ಶಿಷ್ಯರು, ಎಲ್ಲ ಶೃದ್ಧಾಳುಗಳು ನಿನ್ನೆ , ಈದಿನ ನಡೆದ ಎಲ್ಕ ಕಾರ್ಯಕ್ರಮಗಳಲ್ಲಿ ಶೃದ್ಧೆಯಿಂದ ಭಾಗವಹಿಸಿದ್ದಾರೆ. ಆ ಶೃದ್ಧೆಯ ಫಲ ಎಲ್ಲರಿಗೂ ದೊರಕುವಂತೆ ಆಗಲಿ. ಸಮಸ್ತ ಶಿಷ್ಯರೂ ಶ್ರೇಯಸ್ಸಿನ ಮತ್ತು ಪ್ರೇಯಸ್ಸಿನ ಮಾರ್ಗದಲ್ಲಿ ಸುಗಮವಾಗಿ ಗಮಿಸುವಂತೆ ಆಗಲಿ. ಇಡೀ ಭಾರತದೇಶದ ಎಲ್ಲ ಪ್ರಜೆಗಳಿಗೂ ಸನ್ಮಂಗಳ ಉಂಟಾಗಲಿ. ಎಲ್ಲ ಭೂತಗ್ರಾಮಗಳಿಗೂ ಆರಾಧ್ಯ ದೇವತೆಯಾದ ಶ್ರೀಲಕ್ಷ್ಮೀನೃಸಿಂಹ ಹಾಗೂ ಶ್ರೀರಾಜರಾಜೇಶ್ವರಿ ಸನ್ಮಂಗಳವನ್ನು ಉಂಟುಮಾಡಲಿ

ನಾರಾಯಣ ನಾರಾಯಣ ‌ನಾರಾಯಣ