18 ಪುರಾಣಗಳಲ್ಲಿ ವಾಮನ ಪುರಾಣವು ಅತ್ಯಂತ ಕಡಿಮೆ ಅಧ್ಯಾಯಗಳುಳ್ಳ ಪುರಾಣಗಳಲ್ಲಿ ಒಂದು ಈ ಪುರಾಣವು ಸುಮಾರು 10 ಸಾವಿರ ಶ್ಲೋಕಗಳಿಂದ ರಚಿಸಲ್ಪಟ್ಟಿದೆ 95 ಅಧ್ಯಾಯಗಳಿಂದ ಈ ಪುರಾಣವು ವಿರಾಜಮಾನವಾಗಿದೆ ಈ ಪುರಾಣದಲ್ಲಿ ಪುಲಸ್ತ್ಯ ಮಹರ್ಷಿಗಳನ್ನು ಕುರಿತು ನಾರದರು ಮಾಡುವ ಪ್ರಶ್ನೆಗಳು ಹಾಗೂ ಸುದೀರ್ಘವಾಗಿ ಪುಲಸ್ಯರು ಆ ಪ್ರಶ್ನೆಗಳಿಗೆ ಉತ್ತರಿಸುವ ಒಂದು ಸಂಭಾಷಣಾತ್ಮಕ ವ್ಯವಸ್ಥೆ ಇದೆ. ನಾರದರ ಪ್ರಶ್ನೆಗಳಿಗೆ ಉತ್ತರಿಸಲು ಉದ್ಯುಕ್ತರಾದ ಮಹರ್ಷಿಗಳು ಶಿವ ಹಾಗೂ ಸತಿ ದೇವಿಯರ ವಿವಾಹ,ದಕ್ಷ ಯಜ್ಞ ,ವೀರಭದ್ರೋತ್ಪತ್,ತಿ ಮುಂತಾದ ಘಟನೆಗಳನ್ನು ವಿಸ್ತಾರವಾಗಿ ವಿವರಿಸುತ್ತಾರೆ ಇದೇ ಸಂದರ್ಭದಲ್ಲಿ ಸುಕೇಶೀ ವೃತ್ತಾಂತವನ್ನು ವಿವರಿಸುತ್ತಾರೆ. ಹದಿನಾರನೆಯ ಅಧ್ಯಾಯದಿಂದ ಕೆಲವು ಪುಣ್ಯತಮವಾದ ವ್ರತಗಳನ್ನು ವಿವರಿಸುತ್ತಾರೆ. ಅದರಲ್ಲಿ ಪ್ರಮುಖವಾದ ವ್ರತವೆಂದರೆ “ಅಶೂನ್ಯ ಶಯನ ದ್ವಾದಶಿ”. ತದನಂತರ ವೈಷ್ಣವ ವ್ರತವನ್ನು ವಿಷ್ಣು ಪೂಜಾ ಪದ್ಧತಿಯನ್ನು ವಿಸ್ತಾರವಾಗಿ ವಿವರಿಸುತ್ತಾರೆ 23ನೆಯ ಅಧ್ಯಾಯದಿಂದ ಸಮಗ್ರವಾಗಿ ವಾಮನಾವತಾರದ ವಿವರಣೆ ಆರಂಭವಾಗುತ್ತದೆ 32ನೆಯ ಅಧ್ಯಾಯದವರೆಗೆ ಈ ವಾಮನಾವತಾರದ ವಿವರಣೆ ಇದೆ. 33ನೆಯ ಅಧ್ಯಾಯದಿಂದ ಅನೇಕ ತೀರ್ಥಗಳ ಮಹಾತ್ಮೆಯು ಉಲ್ಲೇಖವಾಗಿದೆ. ಬಲಿಚಕ್ರವರ್ತಿಯ ವೃತ್ತಾಂತವನ್ನು ಹೇಳುವುದಕ್ಕೆ ತೊಡಗಿದ ಪುಲಸ್ತ್ಯರು ಬಲಿಯ ಪೂರ್ವವೃತ್ತಾಂತವನ್ನು ಹಾಗೂ ಅಂಧಕಾಸುರ ವೃತ್ತಾಂತವನ್ನು ವಿವರಿಸುತ್ತಾರೆ. ತದನಂತರ ಬಲಿಚಕ್ರವರ್ತಿಯ ಗರ್ವಭಂಗ ಹಾಗೂ ವಾಮನಾಾವತಾರದ ಶ್ರೇಷ್ಠತೆ ಮುಂತಾದ ವಿಷಯಗಳ ಜೊತೆಗೆ ಪುರಾಣದ ಪರಿಸಮಾಪ್ತಿ ಆಗುತ್ತದೆ ಪುರಾಣ ಗಾತ್ರದಲ್ಲಿ ಚಿಕ್ಕದಾದರೂ ಅನೇಕ ಮುಖ್ಯವಾದ ಅಂಶಗಳನ್ನು ಜೀವನ ಮೌಲ್ಯವನ್ನು ತನ್ನೊಳಗೆ ಅಳವಡಿಸಿಕೊಂಡಿರುವುದರಿಂದ ಈ ಪುರಾಣವನ್ನು ಮಹಾಪುರಾಣವಾಗಿಯೇ ವಿದ್ವಾಂಸರು ಅಂಗೀಕರಿಸಿದ್ದಾರೆ.
ವಾಮನ ಎಂಬ ಶಬ್ದಕ್ಕೆ ಚಿಕ್ಕವನು ಕುಳ್ಳ ಎಂಬ ಅರ್ಥವಿದೆ. “ವಾಮಯತಿ ವಮತಿ ವಾ ಮದಂ ಇತಿ ವಾಮನ” ಅಹಂಕಾರಿಗಳ ಅಹಂಕಾರವನ್ನು ನಾಶ ಮಾಡುವ ವ್ಯಕ್ತಿತ್ವ ಉಳ್ಳವನು ಎಂಬುದು ವಾಮನ ಶಬ್ದದ ಅರ್ಥ ಬಲಿಚಕ್ರವರ್ತಿಯ ಅಹಂಕಾರವನ್ನು ನಾಶ ಮಾಡಲು ಹಾಗೂ ದುಷ್ಟ ಸಂಕಲ್ಪದಿಂದ ಅವನು ಆಚರಿಸುತ್ತಿದ್ದ ಯಜ್ಞವನ್ನು ನಷ್ಟ ಗೊಳಿಸಲು ಭಗವಂತನು ವಾಮನ ರೂಪಿಯಾಗಿ ಅವತರಿಸುತ್ತಾನೆ ಅವತರಿಸಿದ ಕೆಲವೇ ಕ್ಷಣಗಳಲ್ಲಿ ಮಾತನಾಡುವುದಕ್ಕೂ ಓಡಾಡುವುದಕ್ಕೂ ಆರಂಭಿಸುತ್ತಾನೆ
ದೇವತೆಗಳ ಕೋರಿಕೆಯಂತೆ ವಾಮನನ್ನು ಬಲಿಚಕ್ರವರ್ತಿಯ ಯಜ್ಞ ಶಾಲೆಗೆ ಬಂದು ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ದಾನವನ್ನು ಬೇಡುತ್ತಾನೆ ಇದರಿಂದ ಚಕಿತನಾದ ಬಲಿಚಕ್ರವರ್ತಿಯು 3 ಹೆಜ್ಜೆ ನೀಡಲು ಒಪ್ಪಿಕೊಳ್ಳುತ್ತಾನೆ ಆಗ ತನ್ನ ಎರಡೇ ಹೆಜ್ಜೆಗಳಿಂದ ಬ್ರಹ್ಮಾಂಡ ಭೂಮಂಡಲಗಳನ್ನು ಆವರಿಸಿ ಮೂರನೇ ಹೆಜ್ಜೆಗಾಗಿ ವಾಮನನ್ನು ಬಲಿಯ ಮುಖವನ್ನು ನೋಡುತ್ತಾನೆ ಆಗ ಬಲಿಚಕ್ರವರ್ತಿಯು ಸ್ವತಃ ತನ್ನ ತಲೆಯ ಮೇಲೆ ಹೆಜ್ಜೆ ಇಡುವಂತೆ ಕೇಳಿಕೊಳ್ಳುತ್ತಾನೆ. ಆಗ ವಾಮಾನನು ಬಲಿಯ ತಲೆಯ ಮೇಲೆ ಹೆಜ್ಜೆಯನ್ನು ಇಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ. ಹೀಗೆ ಬಲಿಚಕ್ರವರ್ತಿಯ ಅಹಂಕಾರವನ್ನು ಮುರಿದನಾದ್ದರಿಂದ ಇವನು ರಾಮನ ಎಂಬ ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆಯುತ್ತಾನೆ.
ಇದು ವಾಮನ ಪುರಾಣದ ಸಂಕ್ಷಿಪ್ತ ಪರಿಚಯ. ಈ ವಾಮನ ಪುರಾಣದಲ್ಲಿ ಅನೇಕ ಸ್ತೋತ್ರಗಳು ಇರುವುದು ಇನ್ನೂ ವಿಶೇಷ. ಪ್ರಹ್ಲಾದನ ತೀರ್ಥಯಾತ್ರೆಯ ವಿವರಣೆ ಬಹಳ ಸಲಾದರವಾಗಿ ಈ ಪುರಾಣದಲ್ಲಿ ಉಲ್ಲೇಖಗೂಂಡಿದೆ.
ಈ ಪುರಾಣವನ್ನು, ಓದಿ, ಕೇಳಿ ನಾವು ಕೃತಾರ್ಥರಾಗೋಣ.
ಲೇಖನ – ವಿ. ರವಿಶಂಕರ ಹೆಗಡೆ ದೊಡ್ನಳ್ಳಿ.
ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ.