ಯುಗಾದಿ…

posted in: Articles | 0

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ 

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.” ಎಂಬ ಕವಿ ಬೇಂದ್ರೆಯವರ ವಾಣಿಯಂತೆ ಹೊಸ ವರ್ಷ ಹರ್ಷದಾಯಕವಾಗಲೆಂಬ ಒಳ್ಳೆಯ ಇಚ್ಚೆಯಿಂದ ಆಚರಿಸುವ ಹಬ್ಬವೇ ಯುಗಾದಿ. “ಯುಗ” ಎಂದರೆ “ನೂತನ ವರ್ಷ” ಆದಿ” ಎಂದರೆ “ಆರಂಭ” ಎಂದರ್ಥ. ಯುಗಾದಿ, ಹತ್ತು ಹಲವು ಪರಂಪರೆಯ ಆರಂಭದ ದಿನ. ಹಲವಾರು ಶತ್ರುಂಜಯ ಮತ್ಯುಂಜಯಗಳ ಸ್ಮಾರಕ ದಿನ. ವರ್ಷದ ಮೂರುವರೆ ಶುಭ ದಿನಗಳಲ್ಲಿ ಮೊದಲ ಮುಹೂರ್ತ ದಿನ.“ಋತೂನಾಂ ಕುಸುಮಾಕರಃ ” ಎಂಬ ಗೀತಾಚಾರ್ಯನ ವಾಣಿಯಂತೆ ಋತುರಾಜ ವಸಂತದ ಶುಭಾಗಮನದ ದಿನ.

                 ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ , ಕೋಗಿಲೆಗಳ ಇಂಚರವನ್ನು ಆಲಿಸಿದಾಗ “ಆನಂದಮಯ ಈ ಜಗ ಹೃದಯ ” ಎಂಬ ಕವಿ ವಾಣಿಯ ಸತ್ಯತೆ ಅರಿವಾಗುತ್ತದೆ. ಆ ಸಂತೋಷ ಸಂಭ್ರಮ ಕಂಡ ಜನ, ಎಣ್ಣೆ ನೀರು ಹಾಕಿಕೊಂಡು , ಹೊಸ ಬಟ್ಟೆ ತೊಟ್ಟು , ನೂತನ ವರುಷವನ್ನ ಇದಿರುಗೊಳ್ಳುತ್ತಾರೆ. ವರ್ಷದ ಫಸಲು ಕೈಗೆ ಬಂದು,ಆಗತಾನೇ ಸುಗ್ಗಿ ಮುಗಿದು ,ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ “ಉಂಡಿದ್ದೇ ಯುಗಾದಿ ,ಮಿಂದಿದ್ದೇ ದೀಪಾವಳಿ ”ಯಾಗಿ ತೋರಿದರೆ ಆಶ್ಚರ್ಯವಿಲ್ಲ. ಈ ಹಬ್ಬದ ಹಿರಿಮೆ -ಮಹಿಮೆ ಗರಿಮೆಗಳನ್ನು ಅಥರ್ವಣ ವೇದ ,ಶತಪಥ ಬ್ರಾಹ್ಮಣ ,ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

ಆಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ್ಯ. ಈ ದಿನ ಶ್ರೀರಾಮನು ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಪ್ರಾರಂಭಿಸಿದ . ಅಂದು ಶ್ರೀರಾಮನ ಜಯಕ್ಕೆ ಕಾರಣಕರ್ತರಾದ ಕನ್ನಡ ನಾಡಿನ ಕಪಿವೀರರು ಹಾಗೂ ಅಯೋಧ್ಯೆಯ ಪ್ರಜೆಗಳು ಉಂಡುಟ್ಟು ನಲಿದಾಡಿದರು. ಶ್ರೀರಾಮನೊಂದಿಗೆ ಪ್ರಜೆಗಳೂ ತಮ್ಮ ತಮ್ಮ ಮನೆಯ ಮುಂದೆ ವಿಜಯಪತಾಕೆ ಹಾರಿಸಿದರು.

      ಆ ಸಂತೋಷ ಅಲ್ಲಿಗೆ ಸೀಮಿತವಾಗಬಾರದು. ಅದರ ಸ್ಮರಣೆಗಾಗಿ,ರಾಮರಾಜ್ಯದ ಕನಸು ಹೊಂದಿರುವ ಭಾರತೀಯರು ,ಇಂದೂ ಈ ಹಬ್ಬದಂದು ಮನೆಯ ಮುಂದೆ ಬಾವುಟ ಹಾರಿಸಿ , ನಲಿಯುವ ಪದ್ದತಿಯುಂಟು.ಅದಕ್ಕಾಗಿಯೇ ಇದಕ್ಕೆ ಗುಡಿ ಪಾಡ್ಯ(ಗುಡಿ= ಬಾವುಟ) ಎಂಬ ಹೆಸರೂ ಇದೆ. ಮಹಾಭಾರದಲ್ಲೂ ಇದರ ಉಲ್ಲೇಖವಿದೆ.

*ಶಾಲಿವಾಹನ ಶಕೆಯ ಆರಂಭ ದಿನ* ಕ್ರೈಸ್ತ ವರ್ಷ ಆರಂಭವಾಗಿ ಎಪ್ಪತ್ತೆಂಟು ವರ್ಷಗಳ ತರುವಾಯ ಶಾಲಿವಾಹನ ಶಕೆ ಆರಂಭವಾಗುತ್ತದೆ. ದಕ್ಷಿಣ ಹಿಂದೂಸ್ಥಾನದಲ್ಲೆಲ್ಲಾ ಈ ಶಕೆ ಬಳಕೆಯಲ್ಲಿದೆ. ನಮ್ಮ ಪಂಚಾಂಗಗಳೂ ಈ ಶಕೆಯನ್ನೇ ಹೇಳುತ್ತವೆ. ಶಕರು ಈ ದೇಶದ ಮೇಲೆ ದಾಳಿ ಮಾಡಿದಾಗ, ಅಂದು ನರ್ಮದಾ -ಕಾವೇರಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ ಅವರ ಬಲವನ್ನು ಮುರಿದು ವಿಜಯಪತಾಕೆಯನ್ನು ಹಾರಿಸಿದ ದಿನ ಚೈತ್ರ ಶುದ್ಧ ಪ್ರತಿಪದೆ. ಅಲ್ಲಿಂದೀಚೆಗೆ ಭಾರತದಲ್ಲಿ ಶಕರು ಹೇಳ ಹೆಸರಿಲ್ಲದಂತಾದರು.

       ಪ್ರಪಂಚ ಸೃಷ್ಟಿಯಾದ ದಿನ :-ನಿರ್ಣಯ ಸಿಂಧುವಿನಲ್ಲಿ ಹೀಗೆ ಹೇಳಿದೆ.

   ” ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಹನಿ |

ಶುಕ್ಲಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇ ಸತಿ ||

                    ಅಂದರೆ “ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ. ರೋಮನ್ನರಿಗೆ ಜನವರಿಯ ಮೊದಲನೇ ದಿನವಿದ್ದಂತೆ, ಹಿಂದೂಗಳಿಗೆ “ಯುಗಾದಿ” ಯುಗದ ಆದಿಯ ದಿನ.

       “ಯಶ್ಚೈತ್ರ ಶುದ್ಧಪ್ರತಿಪತ್ ದಿನವಾರೋ ನೃಪೋ‍ಹಿಸಃ।

ತಸ್ಯ ಪೂಜಾ ವಿಧಾತವ್ಯಾ ಪತಾಕಾತೋರಣಾದಿಭಿಃ ।।”          

       ಅಂದರೆ, ಈ ದಿನ ಯಾವ ವಾರವಾಗಿರುವುದೋ ಆ ವಾರಧಿಪತಿ ಆ ವರ್ಷ ರಾಜ. ಉದಾ: ಯುಗಾದಿ ಗುರುವಾರವಾಗಿದ್ದರೆ ಗುರು ಆ ವರ್ಷದ ರಾಜ. ವರ್ಷಾರಂಭದ ಈ ತಿಥಿಯನ್ನು ಸಮಗ್ರ ವರ್ಷದ ಸುಖ – ದುಃಖದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ತಿಳಿಯಲಾಗುತ್ತದೆ. 

         ಶಕ್ತಿ ಉಪಾಸನೆಯ ಆರಂಭದ ದಿನ: ಚೈತ್ರ ಶುದ್ಧ ಪ್ರತಿಪದೆಯಿಂದ ವಸಂತ ನವರಾತ್ರಿ ಆರಂಭ. ವರ್ಷಾದಿಯ ವಸಂತ ಮತ್ತು ವರ್ಷ ಮಧ್ಯದ ಶರದೃತುಗಳ ಆರಂಭಕಾಲ, ಅನಿಷ್ಟ ನಿವಾರಣೆಗೆ, ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ. ಈ ಎರಡೂ ಋತುಗಳ ಆರಂಭದಲ್ಲಿ “ವಸಂತನವರಾತ್ರಿ” ಹಾಗೂ “ಶರತ್ ನವರಾತ್ರಿ” ಆಚರಿಸುವ ರೂಢಿ ಬೆಳೆದು ಬಂದಿದೆ. ವಾತಾವರಣದಲ್ಲಿ ಬದಲಾವಣೆಯಾಗುವ ಈ ಎರಡೂ ಋತುಗಳು ಶಕ್ತಿಯಲ್ಲಿ ಭಕ್ತಿ ಇಡಲು ಪ್ರಶಸ್ತ ಮುಹೂರ್ತಗಳಾಗಿವೆ.

” ವರ್ಷಾದೌ ಉಷಸಿ ಸ್ಮರನ್ ರಘುಪತಿಂ ಚೋತ್ಥಾಯ ಚಂದ್ರಸ್ವರೇ।

ವೃದ್ಧಾಶೀರನುಗೃಹ್ಯ ನಿಂಬಕದಳಂ ಪ್ರಾಶ್ಯಾಜ್ಯ ಪಾತ್ರೇ ಸ್ಥಿತಂ ”ll

                ವಕ್ತ್ರಂ ವೀಕ್ಷ್ಯ ಚ ದರ್ಪಣೇನಚ 

ತಥಾ ಸನ್ಮಿತ್ರ ವಸ್ಸಮಂ |

ದೈವಜ್ಞಸ್ಸುಸಭಾಂ ಪ್ರವಿತ್ಯ ಸುಜನಾನ್ 

ವಾರ್ಷಂ ಫಲಂ ಶ್ರಾವಯೇತ್॥

ಅಂದರೆ ಯುಗಾದಿಯ ದಿನ ಉಷಃ ಕಾಲಕ್ಕೆ ಎದ್ದು, ಶ್ರೀ ರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವ- ವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು, ತುಪ್ಪ ಮಿಶ್ರಿತ ಬೇವಿನದಳ ತಿಂದು, ಕನ್ನಡಿಯಲ್ಲಿ ಮುಖ ನೋಡಿ , ಮಿತ್ರರೊಡನೆ ಕುಳಿತು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳಬೇಕು. ತಮ್ಮ ರಾಶಿ ಭವಿಷ್ಯ ಕೇಳುವುದೂ ಉಂಟು . ಧರ್ಮ ಸಿಂಧುವಿನಲ್ಲಿ ಈ ವಿಚಾರವಾಗಿ ಹೀಗೆ ಹೇಳಿದೆ. “ಪ್ರತಿಗೃಹಂ ಧ್ವಜಾರೋಪಣಂ, ನಿಂಬ ಪತ್ರಾಶನಂ, ವತ್ಸರಾದಿ ಫಲ ಶ್ರವಣಂ, ನವರಾತ್ರಾರಂಭಃ ತೈಲ-ಅಭ್ಯಂಗಾದಿಶ್ಚ ಶುದ್ಧಮಾಸ ಪ್ರತಿಪದಿ ಕಾರ್ಯಃ” ಅಂದರೆ ಮನೆಯನ್ನೆಲ್ಲಾ, ಮಾವು-ಬೇವಿನ ತಳಿರು ತೋರಣಗಳಿಂದ ಅಲಂಕರಿಸಿ, ಬಾವುಟ ಹಾರಿಸುವುದು, ಬೇವು ತಿನ್ನುವುದು, ಪಂಚಾಂಗ ಶ್ರವಣ, ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ ,ಕಾಲಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ, ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.

 ಸಾಮಾಜಿಕ ದೃಷ್ಟಿ: ಮನೆಯಯನ್ನೆಲ್ಲಾ ಅಲಂಕರಿಸಿ, ಮಂಗಳ ಸ್ನಾನ ಮಾಡಿ ,ಮಂಗಳ ಬೊಟ್ಟಿಟ್ಟು ,ಹೊಸ ಬಟ್ಟೆ ತೊಟ್ಟು, ಇಷ್ಟ ಮಿತ್ರರೊಂದಿಗೆ ಹೋಳಿಗೆಯ ಮೃಷ್ಟಾನ್ನ ಭೋಜನ ಮಾಡಿದಾಗ ಮನಸ್ಸಿಗೆ ಅಪಾರ ಸಂತೋಷ ವಾಗುವುದು ಸಹಜ. ಎಲ್ಲರೂ ಒಂದೆಡೆ ಸೇರಿ , ಪಂಚಾಂಗ ಶ್ರವಣ, ವರ್ಷ ಫಲ ಕೇಳುವುದು, ಸಮಾಜ ಸಂಘಟನೆಗೆ ಸಹಾಯಕ. ಈ ರೀತಿ ಚಾಂದ್ರಮಾನ ಯುಗಾದಿಯ ಆಚರಣೆ ಕರ್ನಾಟಕ, ಆಂಧ್ರ, ಕೇರಳ, ಮಹಾರಾಷ್ಟ್ರ ,ಗುಜರಾತ್ ರಾಜ್ಯಗಳಲ್ಲಿ ಬಳಕೆಯಲ್ಲಿದೆ. ತಮಿಳುನಾಡು ಹಾಗೂ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿ ಬಳಕೆಯಲ್ಲಿದೆ. ಅವರು ಸೂರ್ಯನು ಮೇಷರಾಶಿ ಪ್ರವೇಶಿಸುವ ದಿನದಂದು ಯುಗಾದಿ ಆಚರಿಸುತ್ತಾರೆ.

ವೈಜ್ಞಾನಿಕ ದೃಷ್ಟಿ :-ಯಾವುದೇ ಧಾರ್ಮಿಕ ಆಚರಣೆಗಳಿಗೆ ಸಂಪ್ರದಾಯ ಬದ್ಧ ಆಧಾರವಿದ್ದರೂ ಖಗೋಳದ ಒಂದು ನಿರ್ದಿಷ್ಟಘಟನೆಗೆ ಅದು ಸಂವಾದಿಯಾದಾಗ ಇನ್ನೂ ಹೆಚ್ಚು ಅರ್ಥೂರ್ಣವಾಗುತ್ತದ್ದೆ.ಈ ದೃಷ್ಟಿಯಿಂದ ಸ್ವಲ್ಪ ವಿಚಾರಿ ಸೋಣ. ಚಂದ್ರನ ಚಲನೆಯನ್ನು ಅನುಸರಿಸಿ ಅಮಾಯಸ್ಯೇ ಹುಣ್ಣಿಮೆಗಳ ಆಧಾರದ ಮೇಲೆ, ಮಾಸ ಗಣನೆ ಮಾಡುವ ಪದ್ಧತಿಗೆ “ಚಾಂದ್ರಮಾನ” ಎಂದು ಹೆಸರು. ತಿಂಗಳು ಎಂದು ಹೆಸರು ಬಂದಿರುವುದು ಚಂದ್ರನಿಂದಲೆ ಸರಿ.( ಉದಾ:-ತಿಂಗಳ ಬೆಳಕು ಎಂದರೆ ಚಂದ್ರನ ಬೆಳದಿಂಗಳು ಎಂದರ್ಥ ). ಹುಣ್ಣಿಮೆಯ ದಿನ ಚಂದ್ರ ಯಾವ ನಕ್ಷತ್ರ ಯುಕ್ತನಾಗಿರುವನೋ ಆ ಹೆಸರಿನಿಂದಲೇ ಆಯಾ ತಿಂಗಳನ್ನು ಕರೆಯಲಾಗುತ್ತದೆ.ಉದಾ: ಚಂದ್ರ ಹುಣ್ಣಿಮೆಯಂದು ಚಿತ್ರಾ ನಕ್ಷತ್ರ ಯುಕ್ತನಾಗಿದ್ದರೆ ಅದು ಚೈತ್ರಮಾಸ. ವಿಶಾಖಾ ನಕ್ಷತ್ರದಲ್ಲಿದ್ದರೆ ಅದು ವೈಶಾಖ ಮಾಸ. ಇಲ್ಲಿಯ ತಿಥಿಗಳು, ಮಾಸಗಳು ಎಲ್ಲವೂ ಖಗೋಳದಲ್ಲಿ ಸಂಭವಿಸುವ ಘಟನೆಗಳಿಗೆ ಸಂವಾದಿಯಾಗಿವೆ. ಕ್ರಿ.ಶ. ೫ನೆ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ ವರಾಹಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರಶುದ್ದ ಪಾಡ್ಯ ಹೊಸವರ್ಷವೆಂದು ದ್ರಢೀಕರಿಸಿದ್ದಾನೆ.

      ವೈದ್ಯಕೀಯ ದೃಷ್ಟಿ:-ಈ ಹಬ್ಬದಲ್ಲಿ ಬೇವಿನ ಚಿಗುರು- ಹೂಗಳು ಬೆಲ್ಲ -ಜೀರಿಗೆಗಳೊಂದಿಗೆ ಮಿಶ್ರಣ ಮಾಡಿ

 ” ಶತಾಯುರ್ವಜ್ರದೇಹಾಯ ಸರ್ವ ಸಂಪತ್ಕರಾಯಚ|

  ಸರ್ವಾರಿಷ್ಟವಿನಾಶಾಯ ನಿಂಬಸ್ಯ ದಳ ಭಕ್ಷಣಂ “|| ಎನ್ನುತ್ತಾ ಸೇವಿಸುವುದು ರೂಢಿ.

               ಬೇವು ನೂರು ಕಾಲ ಆಯುಷ್ಯವನ್ನೂ , ಸರ್ವ ಸಂಪತ್ತನ್ನೂ ನೀಡುವುದಲ್ಲದೆ ಅನಿಷ್ಟಗಳನ್ನೆಲ್ಲಾ ನಿವಾರಿಸುತ್ತದೆ, ಎಂದು ಹೇಳಲಾಗಿದೆ. ದೇಹಕ್ಕೆ, ತಂಪು ನೀಡುವ ಬೇವೂ ಬೇಕು. ಉಷ್ಣ ಪ್ರಧಾನ ಬೆಲ್ಲವೂ ಬೇಕು. ಆಯುರ್ವೇದದ ಪ್ರಕಾರ ವಸಂತ ಋತುವಿನಲ್ಲಿ ಉಂಟಾಗುವ ಕಾಯಿಲೆಗಳಿಗೆ ಬೇವು ಬೆಲ್ಲ ಸಿದ್ಧೌಷಧ.

ಬೇವು ಬೆಲ್ಲದ ಅಂತರಂಗ ಸಂದೇಶ : – “ಜೀವನವೆಲ್ಲಾ ಬೇವು ಬೆಲ್ಲ , ಎರಡೂ ಸವಿವನೆ ಕವಿಮಲ್ಲ”* ಎಂಬ ಕವಿ ಕುವೆಂಪು ವಾಣಿಯಂತೆ ಬೇವು ಅಧರಕ್ಕೆ ಕಹಿ, ಉದರಕ್ಕೆ ಸಿಹಿ. ಬೇವಿನ ಕಹಿ ಅನುಭವವಿಲ್ಲದವರಿಗೆ ಸಿಹಿಯ ಮಹತ್ವ ತಿಳಿಯದು. ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ-ದುಃಖ, ಹಗಲು-ರಾತ್ರಿ, ನೋವು – ನಲಿವು, ಪ್ರೀತಿ – ದ್ವೇಷಗಳ ಸಂಕೇತ.

      ” ಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ, ಜಯಾಜಯೌ” ಎಂಬ ಭಗವದ್ಗೀತೆಯ ವಾಕ್ಯದಂತೆ ಸುಖ – ದುಃಖಗಳ ಸಮರಸವೇ ಜೀವನ. ದ್ವೇಷ ಮೆಟ್ಟಿ ಪ್ರೀತಿ ಬೆಳೆಸಲು ಯತ್ನಿಸಬೇಕು. ಭೂತಕಾಲದ ಕಹಿ ಅನುಭವ ಭವಿಷ್ಯದ ಸಿಹಿ ಅನುಭವಕ್ಕೆ ನಾಂದಿಯಾಗಬೇಕು.

                ಬೇವು – ಬೆಲ್ಲ ಇಂತಹ ಹತ್ತು ಹಲವು ಸಂಕೇತಗಳಿಂದ ಕೂಡಿದೆ. ಹಿಂದೆ ಕಾಮನಹುಣ್ಣಿಮೆ ಮುಂದೆ ರಾಮನವಮಿಗಳ ಮಧ್ಯೆ ಬರುವ ಯುಗಾದಿ ನಮ್ಮನ್ನು ಕಾಮನಿಂದ ರಾಮನತ್ತ, ಕಹಿಯಿಂದ ಸಿಹಿಯತ್ತ, ಕತ್ತಲೆಯಿಂದ ಬೆಳಕಿನತ್ತ ಒಯ್ದು ಆಯುರಾರೋಗ್ಯ ಭಾಗ್ಯವನ್ನು ಹಾರೈಸುವ ಹಬ್ಬವಾಗಿದೆ.

ಲೇಖನ –   ಈಶ್ವರ.ಗ.ಭಟ್ಟ. ( ಕರ್ಣಜ್ಜರಮನೆ )ಮಲವಳ್ಳಿ

ಪ್ರಸರಣ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ.