ಬಿನ್ನಹ ಪತ್ರಿಕಾ

posted in: History | 0

ಶ್ರೀ ಗುರವೇ ನಮಃ

ಶ್ರೀ ಶ್ರೀಮತ್ ಪರಮಹಂಸೇತ್ಯಾದಿ ಬಿರುದಾಂಕಿತ ಶ್ರೀಕಾಂಚೀ ಕಾಮಕೋಟೀ ಪೀಠಾಧೀಶ್ವರ ಶ್ರೀ ಶ್ರೀಮಜ್ಜಗದ್ಗುರು ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚರಣ ಕಮಲಗಳಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಿಷ್ಯ ಸಮುದಾಯದ ಪರವಾಗಿ ಗೌರವಾದರಪೂರ್ವಕ ಅನಂತ ಪ್ರಣಾಮಗಳೊಂದಿಗೆ ಸಮರ್ಪಿಸಿದ 

ಬಿನ್ನಹ ಪತ್ರಿಕಾ

ಇದಂ ಕಾಂಚೀಪದಂ  ಶ್ರೌತಂ ಪುಣ್ಯಂ ಸ್ವರ್ಗ್ಯಂಚ ಮುಕ್ತಿದಂ|

ಪೀಠೋsಯಂ ಕಾಮಕೋಟೀಚ ತಥಾಶ್ರೇಷ್ಠಾ ತಪೋಭುವಾಂ||

ಅಧಿತಿಷ್ಠಂತಿ ಯೇ ಪೀಠಮಮುಂ ಸಂಯಮಿಪುಂಗವಾಃ|

ಮನ್ನಾಮ್ನೈವ ಖ್ಯಾತಾ ಹಿ ತೇ ಭವಿಷ್ಯಂತಿ ಮಹೀತಲೇ||

ಯೇಷಾಂ ನಾಮ ತು ವಿಖ್ಯಾತಂ ಇಂದ್ರಪೂರ್ವಾ ಸರಸ್ವತೀ| ಮಿಥ್ಯಾವಾರಸ್ಸಂಪ್ರದಾಯಃ ಪ್ರಜ್ಞಾನಂ ಬ್ರಹ್ಮಚಾರಿಭೃತ್||

ಪರಮಪೂಜ್ಯ ಜಗದ್ಗುರುಗಳವರೇ,

ಶ್ರೀಮದಾದಿಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕಾಂಚೀ ಕಾಮಕೋಟೀ ಪೀಠದಲ್ಲಿ ಪರಮಪೂಜ್ಯ ಶ್ರೀಮತ್ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹ ಪಡೆದು ಅವರ ಕರಕಮಲ ಸಂಜಾತರಾದ ತಾವು ಅಪಾರ ಶಿಷ್ಯಪ್ರೇಮದಿಂದ ಲೋಕವನ್ನು ಅನುಗ್ರಹಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ವಿಶೇಷ.

‘ತೀರ್ಥೀಕುರ್ವಂತಿ ತೀರ್ಥಾನಿ’ ಎಂಬ ಆರ್ಷವಾಕ್ಯದಂತೆ ಮಹಾತ್ಮರು ತಮ್ಮ ಸಂಚಾರದಿಂದ ಪವಿತ್ರವಾದುದನ್ನು ಮತ್ತೂ ಪಾವನಗೊಳಿಸಬಲ್ಲವರು. ಅದರಂತೆ ಪ್ರಕೃತಿ ಸೌಂದರ್ಯದ ನೆಲೆವೀಡಾದ ಸಹ್ಯಾದ್ರಿಯ ಶಿರಸ್ಸಿನಲ್ಲಿ ಹರಿಯುತ್ತಿರುವ ಶಾಲ್ಮಲಾ ನದೀತೀರದ ಪುಣ್ಯಕ್ಷೇತ್ರ, ಸಹಸ್ರಲಿಂಗ ಅಂಚಿನಲ್ಲಿರುವ ತಪಸ್ವಿಗಳ ತಪೋಭೂಮಿಯಾದ ಈ ಸ್ವರ್ಣವಲ್ಲಿಯ ನೆಲವು ತಮ್ಮ ಪಾದಸ್ಪರ್ಶದಿಂದ ಪಾವನಗೊಂಡು ಮೇಲಿನ ಋಷಿವಾಕ್ಯ ಸತ್ಯವೆನಿಸಿತು.

ದೇಶಿಕಾಚಾರ್ಯವರ್ಯರೆ,

ಕಲಿಯುಗದ ಕಾಮಧೇನುವಾದ ಶ್ರೀ ಕಾಮಾಕ್ಷಿದೇವಿಯ ಪುಣ್ಯಕಾರುಣ್ಯ ಪಡೆದ ತಮ್ಮ ಇಚ್ಛಾಶಕ್ತಿಯು ಅಮೋಘವಾದುದು. ತಾವು ಜ್ಞಾನಗಂಗಾ ಪ್ರವಾಹವನ್ನು ಹರಿಸಲು ಪೂರ್ವಸಮುದ್ರದಂಚಿನಿಂದ ಪಶ್ಚಿಮ ಸಮುದ್ರದ ಸಮೀಪದವರೆಗೂ ಬರುವಂತಾದುದು ದೈವೀಸಂಕಲ್ಪವಿಶೇಷವೆಂದೇ ಭಾವಿಸುತ್ತೇವೆ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯರ ಸಮ್ಮುಖದಲ್ಲಿ ಅವರ ಪ್ರಿಯಶಿಷ್ಯರಾದ ಭಾಸ್ಕರೇಂದ್ರ ಸರಸ್ವತೀಗಳವರಿಂದ ದೀಕ್ಷೆ ಪಡೆದ ಈ ಪೀಠ ಪರಂಪರೆಯ ಮೊದಲ ಗುರುಗಳು ಶ್ರೀ ವಿಶ್ವವಂದ್ಯ ಸರಸ್ವತೀಗಳವರು. ಪ್ರಥಮತಃ ಕಾಶಿಯಲ್ಲಿ ಸ್ಥಾಪಿತವಾದ ಈ ಮಠದ ಪೀಠ ಪರಂಪರೆಯು ಸರ್ವತಂತ್ರ ಸ್ವತಂತ್ರವಾಗಿ ಅವ್ಯಾಹತವಾಗಿ ಉಜ್ಜಯಿನಿ, ಗೋಕರ್ಣ, ಅಂಸಳ್ಳಿ, ಕಡತೋಕೆ, ಸಹಸ್ರಲಿಂಗಗಳಲ್ಲಿ ಬೆಳಗಿ ಸ್ವಾದಿ ಅರಸಪ್ಪನಾಯಕನ ಕಾಲದಿಂದ ಈ ಸ್ಥಳದಲ್ಲಿ ವಿರಾಜಿಸುತ್ತಿದೆ.

ಈ ಪೀಠಪರಂಪರೆಯ ೪೫ನೆಯ ಶ್ರೀಗಳವರ ಸಂನ್ಯಾಸದೀಕ್ಷೆ ಮತ್ತು ಪೀಠಾರೋಹಣ ಸಮಾರಂಭಗಳು ತಮ್ಮ ದಿವ್ಯನೇತೃತ್ವದಲ್ಲಿ ಸಾಂಗವಾಗಿ ನೆರವೇರಿರುವುದು ನಮ್ಮೆಲ್ಲರ ಸುಯೋಗ.

ತಾವು ಆಸೇತುಹಿಮಾಚಲದವರೆಗೆ ಪಾದಯಾತ್ರೆ ಕೈಗೊಂಡು ಜನತೆಗೆ ಧರ್ಮೋಪದೇಶ ನೀಡುತ್ತ ಧರ್ಮಸಂಸ್ಥಾಪನೆಯ ಕರ್ತವ್ಯ ನಿರ್ವಹಿಸುತ್ತಿರುವದು ಜನಜನಿತವಾಗಿದೆ.

ಯೋಗಿವರ್ಯರೆ, ತಪೋಭೂಮಿಯಾದ ಈ ಪರಿಸರದಲ್ಲಿ ನೂತನ ಶ್ರೀಗಳವರಾದ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರನ್ನು ಧರ್ಮ ವ್ಯವಸ್ಥೆಗೆ ಈ ಮಠದ ಪೀಠಾಧಿಪತಿಗಳನ್ನಾಗಿಸಿದ ತಮ್ಮನ್ನು ಕೃತಜ್ಞತೆಯಿಂದ ಈ ಶಿಷ್ಯ ಸಮೂಹವು ಸದಾ ಸ್ಮರಿಸುತ್ತದೆ. ಸಂನ್ಯಾಸ ಸಂಪ್ರದಾಯಗಳಲ್ಲಿ ವಿಶೇಷತೆಯನ್ನು ಹೊಂದಿದ ಕಾಂಚೀ ಹಾಗೂ ಸ್ವರ್ಣವಲ್ಲಿಯ ತಪಃಶಕ್ತಿಗಳು ಸಮ್ಮಿಳಿತವಾಗಿ ಲೋಕಕ್ಕೆ ನಿರಂತರ ಆಧ್ಯಾತ್ಮಿಕ ಬೆಳಕನ್ನು ನೀಡುವಂತಾದುದು ನಮ್ಮ ಅದೃಷ್ಟ ವಿಶೇಷವೇ ಸರಿ. ತಮ್ಮ ಅಮೋಘ ತೇಜಸ್ಸಿನ ಪ್ರಭಾವ ಜಗತ್ತಿನಲ್ಲಿ ನಿರಂತರ ಬೆಳಗುತ್ತಿರುವಂತೆ ಈ ಪೀಠ ಪರಂಪರೆಯಲ್ಲೂ ಬೆಳಗಲಿ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ನೈಸರ್ಗಿಕ ಸಮತೋಲನ ಇವುಗಳಿಗೆ ಕಿಂಚಿತ್ತೂ ಕ್ಷತಿ ಉಂಟಾಗದೆ ಜನಜೀವನಕ್ಕೆ ಪೋಷಕವಾಗುವಂತೆ ತಮ್ಮ ಆಶೀರ್ವಾದ ಅನುಗ್ರಹ ಲಭಿಸಲಿ ಮತ್ತು ಇಲ್ಲಿಯ ಪ್ರಕೃತಿ ತಪಃ ಪ್ರಭಾವದಿಂದ ಸದಾ ಪ್ರಸನ್ನವಾಗಿರಲಿ. ತಮ್ಮ ದಿವ್ಯಾನುಗ್ರಹ ಹಾಗೂ ಈ ಪೀಠ ಪರಂಪರೆಯ ಹಿಂದಿನ ಗುರುವರ್ಯರುಗಳ ಪುಣ್ಯ ಪ್ರಭಾವ, ಶ್ರೀಮಠದ ಆರಾಧ್ಯ ದೇವರುಗಳಾದ ಶ್ರೀ ಲಕ್ಷ್ಮೀನೃಸಿಂಹ, ಶ್ರೀಚಂದ್ರಮೌಳೀಶ್ವರ ಮತ್ತು ಶ್ರೀರಾಜರಾಜೇಶ್ವರಿಯ ಕೃಪೆ ಹಾಗೂ ಶ್ರೀಕಾಂಚೀಕಾಮಾಕ್ಷಿ ದೇವಿಯ ಪೂರ್ಣಕಾರುಣ್ಯ ಇವುಗಳಿಂದ ಈ ಪ್ರದೇಶ ಆಚಂದ್ರಾರ್ಕವಾಗಿ ಲೌಕಿಕ ಮತ್ತು ಪಾರಮಾರ್ಥಿಕಗಳೆರಡರಲ್ಲೂ ಸಂಪದ್ಭರಿತವಾಗಿ ಬಾಳಿ ಬೆಳಗುವಂತೆ ತಮ್ಮ ಶ್ರೀರಕ್ಷೆ ಇರಲೆಂದು ಪ್ರಾರ್ಥಿಸಿಕೊಳ್ಳುತ್ತೇವೆ.

ಶ್ರೀಮಠದ ಶಿಷ್ಯವೃಂದದ ಪರವಾಗಿ,

ಎಸ್.ಆರ್.ಹೆಗಡೆ ಕಡವೆ ಗೌರವಾಧ್ಯಕ್ಷರು

ಜಿ.ಎಮ್.ಹೆಗಡೆ ಹುಳಗೋಳ

ಪ್ರಧಾನ ಕಾರ್ಯದರ್ಶಿ

ಜಿ.ಎಸ್.ಹೆಗಡೆ ಅಜ್ಜೀಬಳ

ಅಧ್ಯಕ್ಷರು

ಪ್ರಮೋದ ಸಂ|| ಮಾಘ ಕೃಷ್ಣ ೪ ಯು ಶನಿವಾರ, ತಾ: ೨. ೨. ೧೯೯೧

ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ