ಈ ಭೂಮಿಯ ಪರಿಮಳ

posted in: Gurubodhe | 0

“ಪುಣ್ಯೋ ಗಂಧಃ ಪೃಥಿವ್ಯಾಂ” ಪೃಥಿವಿಯಲ್ಲಿರುವ ಪರಿಮಳ ತನ್ನದೇ ಒಂದು ಸ್ವರೂಪವೆಂದು ಭಗವಂತ ಹೇಳಿದ್ದಾನೆ. ಅಂದರೆ ಸುವಾಸನೆ ಪೃಥಿವಿಯ ಸಹಜ ಗುಣ. ದುರ್ವಾಸನೆ ಯಾವುದೋ ದೋಷದಿಂದ ಅದರಲ್ಲಿ ಬರುತ್ತದೆ.
ಯಾವುದೇ ಶುದ್ಧಸ್ಥಳದ ಮಣ್ಣನ್ನು ಅಗೆದು ತೆಗೆದು ಮೂಸಿ ನೋಡಿದರೆ ಅದರಲ್ಲಿ ಪರಿಮಳ ಗೋಚರಿಸುತ್ತದೆ. ಸಹಜವಾದ ಮಣ್ಣಿಗೆ ದುರ್ವಾಸನೆ ಇರುವುದಿಲ್ಲ. ತ್ಯಾಜ್ಯವಸ್ತುಗಳ ಸೇರ್ಪಡೆಯಿಂದ, ಪ್ಲಾಸ್ಟಿಕ್ ಮೊದಲಾದ ಕಸಗಳಿಂದ ಭೂಮಿಯಲ್ಲಿ ದುರ್ಗಂಧ ಬರುತ್ತದೆ. ಭಗವದ್ಗೀತೆಯ ಈ ವಾಕ್ಯಕ್ಕೆ ವ್ಯಾಖ್ಯಾನಗಳನ್ನು ಬರೆದಿರುವ ಮಧುಸೂದನಸರಸ್ವತೀ ಮುಂತಾದ ವ್ಯಾಖ್ಯಾನಕಾರರು ಅಧರ್ಮದಿಂದ ಪೃಥ್ವಿಯಲ್ಲಿ ದುರ್ಗಂಧವು ಬರುತ್ತದೆ ಎಂದು ಹೇಳಿದ್ದಾರೆ. ಭೂಮಿಯಲ್ಲಿ ಬಿದ್ದ ಪ್ರಾಣಿಗಳ ಮಲ-ಮೂತ್ರಗಳು ಅಥವಾ ಪ್ರಾಣಿಗಳ ಶರೀರಗಳು ಭೂಮಿಯಲ್ಲಿ ಕರಗಿ ಮಣ್ಣಾಗುತ್ತವೆ. ಇಂತಹ ಜೈವಿಕಾಂಶಗಳು ಮಣ್ಣಿನಲ್ಲಿ ತುಂಬಾ ಇರುತ್ತವೆ. ಹಾಗಿದ್ದರೂ ಮಣ್ಣು ಇವುಗಳಿಂದ ದುರ್ಗಂಧವಾಗುವುದಿಲ್ಲ. ಯಾಕೆಂದರೆ ಇಂತಹ ಜೈವಿಕ ಅಂಶಗಳು ಮಣ್ಣಿನಲ್ಲಿ ಕಾಲಕ್ರಮೇಣ ಕರಗಿ ಹೋಗುತ್ತವೆ. ಸೃಷ್ಟಿಯಲ್ಲಿ ಸಹಜವಾಗಿರುವ ಇಂತಹ ತ್ಯಾಜ್ಯಗಳನ್ನು ಮಣ್ಣು ಕರಗಿಸಿಕೊಳ್ಳುತ್ತದೆ, ತನ್ನಲ್ಲಿ ಅರಗಿಸಿಕೊಳ್ಳುತ್ತದೆ. ಮನುಷ್ಯನ ಕೃತ್ರಿಮತೆಯಿಂದ ಬಂದ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಮಣ್ಣಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕವಾಗಿ ಬಳಕೆಯಾಗುವ ರಾಸಾಯನಿಕಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಇಂದಿನ ಪ್ರಮುಖವಾದ ಪರಿಸರ ಮಾಲಿನ್ಯ.
ಭೂಮಿಯಲ್ಲಿ ಸುಗಂಧ ಸಹಜವಾಗಿ ಬರುವಂತೆ ನಮ್ಮ ದೇಶದ ಜನತೆಯ ಅಂತರಂಗಗಳಲ್ಲಿ ಅನೇಕ ಒಳ್ಳೆಯ ಮೌಲ್ಯಗಳು ಸಹಜವಾಗಿ ಇವೆ. ಇದೇ ಮನಸ್ಸೆಂಬ ಮಣ್ಣಿನ ಸಹಜ ಸುಗಂಧ. ಆದರೆ ಈಗ ಈ ಸುಗಂಧ ಅಧರ್ಮದಿಂದ ಹಾಳಾಗುತ್ತಿದೆ, ಅಧರ್ಮವೆಂಬ ದುರ್ಗಂಧ ಮನಸ್ಸೆಂಬ ಮಣ್ಣಿನಲ್ಲಿ ಬರುತ್ತಿದೆ. ಇದಕ್ಕೆ ಬೇರೆ ದೇಶಗಳ ಚಿಂತನೆಗಳು ಮನಸ್ಸುಗಳಲ್ಲಿ ಹೊಕ್ಕಿವೆ. ಹಳ್ಳಿಗಳಲ್ಲಿರುವ ಕೃಷಿ ಮತ್ತು ಗೋ ಸಂರಕ್ಷಣೆ ಮುಂತಾದ ಜೀವನ ಪದ್ಧತಿಗಳು ಮಾಯವಾಗುತ್ತಿವೆ. ಹಿಂದಿನ ಕಾಲದಲ್ಲಿ ಸಹಜವಾಗಿರುತ್ತಿದ್ದ ಪರೋಪಕಾರ, ಸತ್ಯನಿಷ್ಠೆ ಮತ್ತು ದೈವ ಭಕ್ತಿಗಳು ತುಂಬಾ ಹ್ರಾಸಗೊಳ್ಳುತ್ತಿವೆ. ಚೆನ್ನಾಗಿ ಸಂಪಾದನೆ, ಐಶಾರಾಮಿ ಜೀವನ, ಸುಳ್ಳಿನ ಕಂತೆಗಳ ನಡುವೆಯೇ ವ್ಯವಹಾರ ಇವೆಲ್ಲಾ ಸಹಜವೆಂಬಂತೆ ಆಗಿವೆ. ಇವೆಲ್ಲ ರಾಸಾಯನಿಕಗಳು ಜನರ ಮನಸ್ಸೆಂಬ ಪೃಥಿಯನ್ನು ದುರ್ಗಂಧಮಯ ಗೊಳಿಸುತ್ತಿವೆ.
ಆದರೂ ನಮ್ಮ ಮಣ್ಣು ಹಿಂದಿನಿಂದಲೂ ಬೇರೆಕಡೆಯ ಒಳ್ಳೆಯ ಅಂಶಗಳನ್ನು ಸ್ವೀಕರಿಸಿ ಅರಗಿಸಿಕೊಂಡು ತನ್ನದಾಗಿ ಮಾಡಿಕೊಳ್ಳುತ್ತಾ ಬಂದಿದೆ. ಹಾಗೆಯೇ ಈಗಲೂ ಬೇರೆ ದೇಶಗಳಿಂದ ಬಂದ ಅಥವಾ ಬರುತ್ತಿರುವ ಒಳ್ಳೆಯ ಅಂಶಗಳನ್ನು ನಿಧಾನವಾಗಿಯಾದರೂ ಅರಗಿಸಿಕೊಂಡು ನಮ್ಮದಾಗಿಸಿಕೊಳ್ಳಬೇಕಾಗಿದೆ. ಮೊದಲಿಂದಲೇ ನಮ್ಮಲ್ಲಿರುವ ಒಳ್ಳೆಯ ಅಂಶಗಳನ್ನು ಬಿಡುವ ಪ್ರಶ್ನೆಯಿಲ್ಲ. ಹೀಗೆ ಅರಗಿಸಿಕೊಳ್ಳುತ್ತಿದ್ದರೂ ಕೆಲವು ಪ್ಲಾಸ್ಟಿಕ್‌ಗಳು ಮತ್ತು ರಾಸಾಯನಿಕಗಳು ಮಣ್ಣಲ್ಲಿ ಮಣ್ಣಾಗದೇ ಹಾಗೆಯೇ ದುರ್ಗಂಧವನ್ನು ಮಾಡುತ್ತಲೇ ಉಳಿದುಕೊಳ್ಳಬಹುದೆಂಬ ಆತಂಕವಿದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ