“ಮಮತೆಯಳಿವಿಂ ಜ್ಞಾನ ಪಾಂಡಿತ್ಯದಿಂದಲ್ಲ, ಶ್ರಮಿಸಿಳೆಯ ಗಾಣದೊಳು ಮಂಕುತಿಮ್ಮ” ಕಗ್ಗದ ಒಂದು ಪದ್ಯದ ಕೊನೆ ಭಾಗ. ಮಮಕಾರವು ಕಡಿಮೆಯಾದರೆ ಜ್ಞಾನದ ಬೆಳಕು ಹೊರಬರಲು ಶುರುವಾಗುತ್ತದೆ, ಸಂಪೂರ್ಣ ನಾಶವಾದರೆ ಪರಮಾತ್ಮನ ಅರಿವು ಪರಿಪೂರ್ಣವಾಗುತ್ತದೆ.
‘ನನ್ನದು’ ಎಂಬ ಭಾವವೇ ಮಮಕಾರ. ನಮಗರಿವಿಲ್ಲದಂತೆ ನಮ್ಮ ಸುತ್ತಲಿರುವ ವಸ್ತುಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ‘ನನ್ನದು’, ‘ನನ್ನವರು’ ಎಂಬ ಭಾವ ಬೆಳೆಯುತ್ತದೆ. ಆ ವಸ್ತುವನ್ನು ಕಳೆದುಕೊಂಡಾಗ, ಅಥವಾ ಆ ವ್ಯಕ್ತಿ ದೂರವಾದಾಗ ಮಾನಸಿಕ ವ್ಯಥೆಯ ರೂಪದಲ್ಲಿ ಆ ಮಮಕಾರವು ವ್ಯಕ್ತವಾಗುತ್ತದೆ. ಮಮಕಾರವೇ ಮೋಹ. ಅದನ್ನು ಬಿಡುವುದು ತುಂಬಾ ಕಷ್ಟ.
ಮಮಕಾರವನ್ನು ಬಿಡಲು ಭಗವದ್ಗೀತೆಯು ಸರಳ ಉಪಾಯವನ್ನು ಕೊಡುತ್ತದೆ. “ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ”(ಭ.ಗೀ ೧೨.೧೦) ಭಗವಂತನಿಗೋಸ್ಕರ ಕರ್ಮ ಮಾಡುವುದನ್ನು ರೂಢಿಸಿಕೊಂಡರೆ ಚಿತ್ತವು ಶುದ್ಧಿಯಾಗುತ್ತದೆ. ಮಮಕಾರದ ನಾಶವೇ ಇಲ್ಲಿ ಹೇಳುತ್ತಿರುವ ಚಿತ್ತಶುದ್ಧಿ ಅಥವಾ ಮಮಕಾರವೆಂಬ ಪಾಶ (ಹಗ್ಗ)ದ ಕಟ್ಟು ಸಡಿಲವಾಗುವಿಕೆಯೇ ಇಲ್ಲಿ ಚಿತ್ತಶುದ್ಧಿ. ಭಗವಂತನಿಗೋಸ್ಕರ ಮಾಡುವ ಕರ್ಮದಿಂದ ಮಮಕಾರದ ಪಾಶ ಬಂಧನವು ಸಡಿಲವಾಗುತ್ತದೆ.
ಅದು ಹೇಗೆ? ‘ತನಗೋಸ್ಕರ ಕರ್ಮಮಾಡುತ್ತಿದ್ದೇನೆ’ ಎಂದುಕೊಂಡರೆ ಮುಂದೆ ‘ತನ್ನದು’ ಎಂಬ ಭಾವ ಬಂದೇ ಬರುತ್ತದೆ. ಉದಾಹರಣೆಗೆ ಒಬ್ಬ ಗುತ್ತಿಗೆದಾರ ಕಟ್ಟಡಗಳನ್ನು ಕಟ್ಟುವಾಗ ತನಗೋಸ್ಕರ ಕಟ್ಟುತ್ತೇನೆಂದು ಭಾವಿಸುತ್ತಾ ಕಟ್ಟಿಸುತ್ತಾನೆ. ಆಗ ಅವನ ಮನಸ್ಸು ಹೇಳುತ್ತಿರುತ್ತದೆ- ‘ಈ ಕೆಲಸದ ಲಾಭ ತನಗೆ ಸಿಗುತ್ತದೆ’, ‘ಇದನ್ನು ಕಟ್ಟಿದ್ದರಿಂದ ಬರುವ ಪ್ರಸಿದ್ಧಿಯು ತನಗೆ ಸೇರುತ್ತದೆ’ ಬೇರೆಯವರ ಕಟ್ಟಡ ಕಟ್ಟುವಾಗಲೂ ಅದೇ ಭಾವನೆಯಿಂದ ಕಟ್ಟುತ್ತಾನೆ. ಕಟ್ಟಿ ಮುಗಿದ ನಂತರ ‘ನೋಡಿ ಇದೆಲ್ಲಾ ನನ್ನ ಸಾಧನೆ, ಈ ಕಟ್ಟಡವೂ ನನ್ನದೇ, ಆಚೆ ಇರುವ ದೊಡ್ಡ ಕಟ್ಟಡವೂ ನನ್ನದೇ’ ಎನ್ನುತ್ತಾ ತನ್ನ ಸ್ನೇಹಿತರಿಗೆ ತೋರಿಸುತ್ತಾನೆ. ತನ್ನದೆಂಬ ಭಾವ ಅವನಿಗೆ ಈಗ ಬಂದಿದೆ. ಇದು ಬರಲು ಮೊದಲು ಅವನು ತನಗೋಸ್ಕರ ಎಂಬ ಭಾವನೆ ಮಾಡಿಕೊಂಡಿದ್ದೇ ಕಾರಣ. ಆದ್ದರಿಂದ ‘ತನಗೋಸ್ಕರ’ ಎಂಬ ಭಾವ ಆರಂಭದಲ್ಲಿ ಬಂದರೆ ಮುಂದೆ ‘ತನ್ನದು’ ಎಂಬ ಭಾವ (ಮಮಕಾರ) ಬಂದೇ ಬರುತ್ತದೆ.
ಬುದ್ಧಿವಂತನಾದ ಸಾಧಕನು ಮುಂದೆ ಬರಲಿರುವ ಮಮಕಾರದ ಗಾಢ ಪಾಶವನ್ನು ತಪ್ಪಿಸಿಕೊಳ್ಳಲು, ಆರಂಭದಲ್ಲಿ ‘ತನಗೋಸ್ಕರ’ ಎಂಬ ಭಾವವನ್ನು ಬಿಡುತ್ತಾನೆ.ಪಾಶ ಕಟ್ಟಿದ ನಂತರ ಬಿಡಿಸಿಕೊಳ್ಳಲು ಪ್ರಯತ್ನಿಸುವುದಕ್ಕಿಂತ ಮೊದಲೇ ಕಟ್ಟಿಹಾಕದಂತೆ ನೋಡಿಕೊಳ್ಳುವುದು ಬುದ್ಧಿವಂತಿಕೆ. ಈ ಬುದ್ದಿವಂತಿಕೆಯನ್ನು ಭಗವಂತ “ಮದರ್ಥಮಪಿ ಕರ್ಮಾಣಿ” ಎಂಬ ಶಬ್ದಗಳಲ್ಲಿ ಅಡಗಿಸಿಟ್ಟಿದ್ದಾನೆ.(ಸಂಸ್ಕೃತದಲ್ಲಿ ‘ಮದರ್ಥಂ’ ಎಂದರೆ ಭಗವಂತನಿಗೋಸ್ಕರ ಎಂದರ್ಥ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ