ಭಗವದ್ಗೀತೆಯಲ್ಲಿ ಒಂದು ಅಚ್ಚರಿಯಡಗಿದೆ ಭಗವಂತನು ಸರ್ವಕರ್ಮ ಸಂನ್ಯಾಸ ಪೂರ್ವಕ ಆತ್ಮ ಜ್ಞಾನದಿಂದಲೇ ಮೋಕ್ಷ ಎಂಬುದಾಗಿ ವ್ಯಕ್ತಪಡಿಸಿದ್ದಾನೆ. ಇಂತಹ ಭಗವದ್ಗೀತೆಯನ್ನು ಅರ್ಥ ಮಾಡಿಕೊಂಡು ಓದಿದರೂ ಓದಿದವನು ನಿಷ್ಕ್ರಿಯನಾಗುವುದಿಲ್ಲ, ಇನ್ನೂ ಹೆಚ್ಚು ಸಕ್ರಿಯನಾಗುತ್ತಾನೆ. ಇದು ಅಚ್ಚರಿಯ ಸಂಗತಿ.
ಭಗವದ್ಗೀತೆಯು ಯಾವುದನ್ನು ಮೋಕ್ಷಕ್ಕೆ ಸಾಧನ ಎಂಬುದಾಗಿ ಹೇಳುತ್ತದೆ? ಈ ಪ್ರಶ್ನೆಯನ್ನು ಎತ್ತಿಕೊಂಡು ಶ್ರೀ ಶಂಕರಾಚಾರ್ಯರು 18ನೇ ಅಧ್ಯಾಯದ ಕೊನೆಯ ಭಾಗದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಕೊನೆಯಲ್ಲಿ ಸರ್ವಕರ್ಮ ಸಂನ್ಯಾಸಪೂರ್ವಕವಾದ ಆತ್ಮ ಜ್ಞಾನವೇ ಮೋಕ್ಷಕ್ಕೆ ನೇರ ಸಾಧನ ಎಂದು ನಿರ್ಧರಿಸಿದ್ದಾರೆ. ಸರ್ವಕರ್ಮ ಸಂನ್ಯಾಸವೆಂದರೆ ಎಲ್ಲಾ ಕ್ರಿಯೆಗಳ ಪರಿತ್ಯಾಗವೆಂಬ ಅರ್ಥವಿದೆ. ಇದೇ ನೈಷ್ಕರ್ಮ್ಯಸಿದ್ಧಿ. ಕೇವಲ ಕ್ರಿಯೆಗಳನ್ನು ಬಿಟ್ಟ ಮಾತ್ರಕ್ಕೆ ನೈಷ್ಕರ್ಮ್ಯಸಿದ್ಧಿ ಆಗುವುದಿಲ್ಲ, ಅದಕ್ಕೆ ವಿಶಿಷ್ಟವಾದ ಸಾಧನೆಗಳು ಬೇಕು. ಆದರೂ ಎಲ್ಲಾ ಕ್ರಿಯೆಗಳನ್ನು ಬಿಡುವಿಕೆ ಇದ್ದೇ ಇದೆ. ಇದನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಓದಿದವನು ನಿಷ್ಕ್ರಿಯನಾಗದೇ ಉತ್ಸಾಹಶಾಲಿ ಸಕ್ರಿಯನಾಗುತ್ತಾನೆ.
ಇದಕ್ಕೆ ಅರ್ಜುನನೇ ಉದಾಹರಣೆ. ಎಲ್ಲಾ ಉಪದೇಶಗಳು ಮುಗಿದ ನಂತರ ಭಗವಂತ ಕೇಳಿದ – “ಪಾರ್ಥ! ನನ್ನ ಉಪದೇಶವನ್ನು ಕೇಳಿದ ನಂತರ ನಿನ್ನ ಮನಸ್ಸಿಗೆ ಕವಿದ ಅಜ್ಞಾನದ ಮಂಕು ಕಳೆಯಿತೇ?” ಇದಕ್ಕೆ ಅರ್ಜುನನ ಉತ್ತರ – “ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ | ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ||” “ಅಚ್ಯುತ ನಿನ್ನ ಅನುಗ್ರಹದಿಂದ ಅಜ್ಞಾನದ ಆವರಣ ನಾಶವಾಯಿತು, ಆತ್ಮ ತತ್ವದ ಅರಿವಾಯಿತು. ಇನ್ನು ಸಂದೇಹವಿಲ್ಲದೆ ನಿನ್ನ ಮಾತನ್ನು ನಡೆಸುತ್ತೇನೆ, ಯುದ್ಧದಲ್ಲಿ ತೊಡಗುತ್ತೇನೆ”. ಇದು ಅರ್ಜುನನ ಮಾತಾದರೆ ಆಧುನಿಕರಾದ ಗಾಂಧೀಜಿಯೇ ಮೊದಲಾದವರು ಇದೇ ರೀತಿ ಉತ್ಸಾಹಭರಿತರಾಗಿ ಕರ್ಮಯೋಗದಲ್ಲಿ ತೊಡಗಿದ್ದನ್ನು ಕಾಣುತ್ತೇವೆ.
ಹೀಗಾಗಲು ಕಾರಣವಿದೆ. ಗೀತೆಯು ಹೇಳುವ ಕರ್ಮಸಂನ್ಯಾಸವು ಕರ್ಮಯೋಗದಿಂದಲೇ ಬರುತ್ತದೆ. “ಸನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಂಮಯೋಗತಾಃ |” ಕರ್ಮಯೋಗ ಮಾಡದೇ ಮನಸ್ಸು ಶುದ್ಧ ಮತ್ತು ಏಕಾಗ್ರಗೊಳ್ಳುವುದಿಲ್ಲ. ಶುದ್ಧಿ ಮತ್ತು ಏಕಾಗ್ರತೆಗಳಲ್ಲದೇ ಕರ್ಮ ಸಂನ್ಯಾಸ ಅಥವಾ ನೈಷ್ಕರ್ಮ್ಯ ಸಿದ್ಧಿ ಉಂಟಾಗುವುದಿಲ್ಲ. ಗೀತೆಯನ್ನು ಅರ್ಥಮಾಡಿಕೊಂಡವನಿಗೆ ಈ ಸಂಗತಿ ಗೊತ್ತಾಗುತ್ತದೆ. ಭಗವಂತನು ಉಪದೇಶದ ಸಂದರ್ಭದಲ್ಲಿ ಕರ್ಮಸಂನ್ಯಾಸದ ಮಹತ್ವವನ್ನು ಮತ್ತೆ ಮತ್ತೆ ಹೇಳಿಕೊಂಡು ಅರ್ಜುನನಿಗೆ ’ನೀನು ಕರ್ಮಯೋಗವನ್ನೇ ಮಾಡು’ ಎಂಬುದನ್ನೇ ಒತ್ತಿ ಹೇಳಿದ್ದಾನೆ. ಇದನ್ನೆಲ್ಲಾ ಓದಿದವನು ಕರ್ಮಯೋಗಕ್ಕೆ ತಕ್ಷಣ ಜಾಗೃತಗೊಳ್ಳತ್ತಾನೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ