
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಅತ್ಯಂತ ಸುಂದರವಾಗಿ, ಅರ್ಥಪೂರ್ಣವಾಗಿ ನಡೆಯುತ್ತಾ ಇದೆ. 28-10-2025ರ ಈ ದಿನ ಅಭಿಯಾನದ ಒಂದು ವಿಶೇಷ ದಿನವಾಗಿ ರೂಪುಗೊಂಡಿರುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಶಿಷ್ಟವಾದ, ನೂತನವಾದ ಕಾರ್ಯಕ್ರಮಕ್ಕೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯು ಸಾಕ್ಷಿಯಾಯಿತು. ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ ಅಭಿಯಾನ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತದೆ ಆದರೆ ಇವತ್ತು ಒಂದು ಆಸ್ಪತ್ರೆಯಲ್ಲಿ ಅಭಿಯಾನದ ಕಾರ್ಯಕ್ರಮ ನಡೆದಿರುವುದು ಬಹಳ ವಿಶೇಷ. ರೋಗಿಗಳು ಆರೋಗ್ಯವಂತರಾಗಬೇಕಾದರೆ ವೈದ್ಯರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಭಗವಂತನ ಅನುಗ್ರಹವೂ ಬೇಕಾಗುತ್ತದೆ. ಭಗವಂತನ ಅನುಗ್ರಹದಿಂದ ವೈದ್ಯರ ಪ್ರಯತ್ನದ ಮೂಲಕ ರೋಗಿಗಳು ಬೇಗ ಗುಣಮುಖರಾಗುತ್ತಾರೆ. ಈ ಚಿಂತನೆಯಿಂದ ಪರಮ ಪೂಜ್ಯರು ಶಂಕರ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಗೆ ಚಿಕಿತ್ಸೆಗಾಗಿ ಆಗಮಿಸಿದವರಿಗೆ ಭಗವದ್ಗೀತೆಯ ಪುಸ್ತಕಗಳನ್ನು ಕೊಡುವ ಮೂಲಕ ಆಶೀರ್ವದಿಸಿದರು. ಅಭಿಯಾನ ನಡೆಯುವ ಈ ಒಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಗೆ ಬಂದು ಗುಣಮುಖರಾಗಿ ಹೋಗುವ ಎಲ್ಲರಿಗೂ ಆಸ್ಪತ್ರೆಯ ಸಿಬ್ಬಂದಿಗಳು ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಬೇಕು ಎಂದರು. ಭಗವದ್ಗೀತೆಯು ಕೊಡುವ ಸಂದೇಶ ಎಲ್ಲರಿಗೂ ಮುಟ್ಟುವ ಹಾಗೆ ಆಗಬೇಕು. ಭಗವಂತನ ಅನುಗ್ರಹ ಎಲ್ಲ ರೋಗಿಗಳಿಗೂ ಲಭಿಸಿ ಬೇಗ ಆರೋಗ್ಯವಂತರಾಗುವಂತೆ ಆಶೀರ್ವದಿಸಿದರು. ಅರ್ಥ ಪೂರ್ಣವಾದ ಈ ಕಾರ್ಯಕ್ರಮದಲ್ಲಿ ಅಭಿಯಾನ ಸಮಿತಿಯ ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶ್ರೀ ಟಿ ಜೆ ಲಕ್ಷ್ಮೀನಾರಾಯಣ, ಶ್ರೀ ಲಕ್ಷ್ಮೀನಾರಾಯಣ ಜೋಶಿ ಮತ್ತು ಆಸ್ಪತ್ರೆಯ ಡಾ ll ವೆಂಕಟೇಶ್ ಮೂರ್ತಿ, ಡಾll ಮಂಜುನಾಥ್, ಸಿಬ್ಬಂದಿಗಳು ಇದ್ದರು.
