ಅವಿನಶ್ಯತ್ಪರಂಪರೆ

posted in: shishyasvikara | 0

ಸಹಸ್ರಾರು ವರ್ಷಗಳಿಂದ ಹರಿದು ಬಂದಿರುವ ಗುರು- ಶಿಷ್ಯ ಪರಂಪರೆಯು ತನ್ನ ಮುಂದಿನ ಹರಿವಿಗೆ ಬೇಕಾದ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳುವ ಸಂದರ್ಭವೇ ಶಿಷ್ಯಸ್ವೀಕಾರ ಮಹೋತ್ಸವ.

ಅತ್ಯಂತ ದೀರ್ಘಕಾಲ ನಡೆದು ಬಂದ ಎರಡು ಪರಂಪರೆಗಳಲ್ಲಿ ರಾಜಪ್ರಭುತ್ವ ಒಂದಾದರೆ, ಗುರುಪೀಠಗಳ ಪರಂಪರೆ ಮತ್ತೊಂದು. ರಾಜಪ್ರಭುತ್ವಗಳು ನಶಿಸಿದವು. ಅರಮನೆಗಳು, ಕೋಟೆಗಳು ನಶಿಸಿದವು. ವೈಭೋಗ, ವೈಭವಗಳು ಮರೆಯಾದವು. ಎಷ್ಟೋ ವಂಶಗಳು ಈಗ ಯಾರ ನೆನಪಿನಲ್ಲಿಯೂ ಉಳಿದಿಲ್ಲ. ಆದರೆ ಸನಾತನ ಧರ್ಮದ ಗುರುಪೀಠದ ಪರಂಪರೆ ಮಾತ್ರ ಅವಿನಾಶಿಯಾಗಿ, ಸನಾತನಕ್ಕೆ ಅನ್ವರ್ಥವಾಗಿ ಸಾಗುತ್ತಲೇ ಇದೆ. ಮುಂದೆಯೂ ಸಮಾಜಕ್ಕೆ ದಾರಿದೀಪವಾಗಿ ಒದಗಲಿದೆ.

ಗುರುಪೀಠಗಳ ಈ ಅಚ್ಛಿದ್ರ-ಪರಂಪರೆಗೆ ಮೂಲ ಕಾರಣ ಅವುಗಳು ನಡೆದು ಬಂದ ಮತ್ತು ಯಾವ ಕಾರಣಕ್ಕೂ ತಪ್ಪದೇ ನಡೆಯಬೇಕೆಂದು ನಿರ್ಧರಿಸಲ್ಪಟ್ಟ ಹಾದಿ. ಅದೇ ಅಧ್ಯಾತ್ಮ. ಯಾವಾಗ ಸಮಾಜವು ಲೌಕಿಕದ ಜೊತೆಯಲ್ಲಿ ಅಲೌಕಿಕತೆಯನ್ನೂ, ಸಾಂಸಾರಿಕ ಧರ್ಮಗಳ ಜೊತೆಯಲ್ಲಿ ಅಧ್ಯಾತ್ಮವನ್ನೂ, ವ್ಯಾವಹಾರಿಕತೆಯ ಜೊತೆಯಲ್ಲಿ ಪಾರಮಾರ್ಥಿಕತೆಯನ್ನೂ ತನ್ನ ನಡೆಯಲ್ಲಿ ಜೋಡಿಸಿಕೊಳ್ಳುತ್ತಾ ಸಾಗುವುದೋ, ಆ ಸಮಾಜವು ಸಶಕ್ತವಾಗುವುದರ ಜೊತೆಗೆ, ಮುಂದಿನ ಸಾವಿರಾರು ವರ್ಷಗಳವರೆಗೆ ಸಾಗಲು ಬೇಕಾದ ಧೀಶಕ್ತಿ, ಅಂತ:ಸ್ಫುರಣೆ ಹಾಗೂ ಅಲೌಕಿಕವಾದ ಮಾರ್ಗದರ್ಶನವನ್ನು ತನ್ನೊಳಗೆ ಸಂಚಯಿಸಿಕೊಳ್ಳುತ್ತಾ ಮುಂದುವರೆಯಲು ಕಾರಣವಾಗುತ್ತದೆ.

ಸನಾತನ ಧರ್ಮದ ಸತ್ತ್ವವಿರುವುದು ಇಂಥ ಆತ್ಮಾಭಿಮುಖವಾದ ಜೀವನ ಪ್ರವೃತ್ತಿಗಳಲ್ಲಿ. ತನ್ನನ್ನು ತಾನು ಅರಿಯಲು ಬೇಕಿರುವ ಎಲ್ಲ ಸಾಧನಗಳನ್ನೂ, ಎಲ್ಲ ಮಾರ್ಗಗಳನ್ನೂ ಅದು ಒಳಗೊಳ್ಳುತ್ತಾ ಸಾಗುವುದಷ್ಟೇ ಅಲ್ಲ, ಇರುವ ಎಲ್ಲ ಮಾರ್ಗಗಳನ್ನೂ ಆತ್ಮಾಭಿಮುಖವಾಗುವಂತೆ ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿಯೇ ಅದು ತನ್ನ ನೈರಂತರ್ಯವನ್ನು ಕಾಪಾಡಿಕೊಳ್ಳುತ್ತಾ ಸಾಗುತ್ತದೆ.

ಇಲ್ಲಿ ಆಕ್ರಮಣಕಾರಿ ಮನ:ಸ್ಥಿತಿಯ ಮೂಲಕ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತಲೂ, ಲೌಕಿಕದ ಗದ್ದಲವಿಲ್ಲದ ಶಾಂತತೆಯನ್ನು ಪಡೆಯುತ್ತಾ, ತನ್ನನ್ನು ತಾನು ಗೆಲ್ಲುವ ಮೂಲಕ ಪ್ರಪಂಚವನ್ನು ಗೆಲ್ಲುವ ದರ್ಶನಕ್ಕೆ ಪ್ರಾಮುಖ್ಯವಿದೆ. ವ್ಯಷ್ಟಿಜೀವನಕ್ಕೂ, ಸಮಷ್ಟಿಜೀವನಕ್ಕೂ ಅದೇ ಅಂತಿಮವಾದ ಲಕ್ಷ್ಯವನ್ನಾಗಿ ಇಲ್ಲಿ ಹೊಂದಲಾಗಿದೆ. ಇಂಥ ಲಕ್ಷ್ಯದತ್ತ ಇಡೀ ಸಮಾಜವನ್ನು ನಡೆಸಲೆಂದೇ ಗುರುಪೀಠಗಳ ಸ್ಥಾಪನೆಯಾಗಿವೆ. ಕಾಲದ ಎಂತೆಂಥ ಹೊಡೆತಗಳಿಗೂ ಎದೆಕೊಟ್ಟು ನಿಂತು ಎದುರಿಸುವ ಗಟ್ಟಿತನವನ್ನು ಈ ಪರಂಪರೆಗೆ ಕೊಟ್ಟಿದ್ದೂ ಇದೇ ಆತ್ಮಾಭಿಮುಖ ಪ್ರವೃತ್ತಿ.

‘ಆತ್ಮನೋ ಮೋಕ್ಷಾಯ ಜಗದ್ಧಿತಾಯ ಚ’ ಎಂಬ ಸೂತ್ರವನ್ನು ಹಿಡಿದುಕೊಂಡು, ಸಾಗಿಬಂದಿರುವ ಈ ಅವಿನಶ್ಯತ್ಪರಂಪರೆಯು ಕಾಲಕಾಲಕ್ಕೆ ತನ್ನ ಹೊಸ ಹರಿವನ್ನು ತಾನೇ ನಿಶ್ಚಯಿಸಿಕೊಳ್ಳುತ್ತಾ, ಆ ದಾರಿಯಲ್ಲಿ ಬಂದ ಎಲ್ಲ ಸವಾಲುಗಳನ್ನೂ ಎಂತ ಕಷ್ಟದಲ್ಲೂ ಎದುರಿಸುತ್ತಾ, ಸಮಾಜಕ್ಕೆ ಮಾರ್ಗದರ್ಶಿಯಾಗಿ ಸಾಗುತ್ತಾ ಇಂದಿಗೂ ನಮ್ಮ ಕೈ ಹಿಡಿದು ನಡೆಸುತ್ತಿದೆ.

ಸಾವಿರಾರು ವರ್ಷಗಳ ಪರಂಪರೆಯ ಮೂಲಕ ಈಗ ನಮ್ಮ ಕಣ್ಣೆದುರಿಗೆ ಇರುವ ಇಂಥ ಗುರುಪರಂಪರೆಯು ಸಮಾಜವನ್ನು ಹೋಳಾಗದಂತೆ ತಡೆದಿದೆ. ಪ್ರಭುತ್ವಗಳು ನೆಲ ಕಚ್ಚಿದಾಗಲೂ, ಸಮಾಜವನ್ನು ರಕ್ಷಿಸಿಕೊಂಡು ಬಂದಂಥವು ನಮ್ಮ ಗುರುಪೀಠಗಳು. ಪರಂಪರೆ, ಸಂಪ್ರದಾಯ, ಮತ, ಆಚರಣೆ ಎಲ್ಲದರಲ್ಲಿಯೂ ವೈವಿಧ್ಯವನ್ನು ಹೊಂದಿದ್ದರೂ ಅವುಗಳು ಸಮಾಜದ ಒಡಕಿಗೆ ಕಾರಣವಾಗದೇ, ಒಂದಾಗಿ ನಡೆಯಲು, ಪರಸ್ಪರ ಸಮನ್ವಯಕ್ಕೇ ಕಾರಣವಾಗಿವೆ. ಸನಾತನದ ರಹಸ್ಯವೇ ಅದು. ಇಲ್ಲಿ ಜೀವಿಸಿ ಅನುಭವಿಸದ ಮತ್ತೊಬ್ಬನಿಗೆ ಈ ರಹಸ್ಯದ ಅನುಭೂತಿಯಾಗಲಾರದು. ಅದರ ಗಂಧವೂ ಆತನಿಗೆ ಸುಳಿಯದು.

ಗುರುಪೀಠಗಳಿಗೆ ತಮ್ಮ ಈ ಧರ್ಮಜಾಗರಣೆಯ ಕಾರ್ಯದ ಮುಂದುವರಿಕೆಗಾಗಿ, ಸಮಾಜಕ್ಕಾಗಿ ಹಾಗೂ ಅಧ್ಯಾತ್ಮ ಸಾಧನೆಗಾಗಿಯೇ ಜೀವನವನ್ನು ಮೀಸಲಾಗಿಡಬಲ್ಲ ಸೂಕ್ತ ವ್ಯಕ್ತಿಯನ್ನು ಆಯ್ದುಕೊಳ್ಳುವ ಜವಾಬ್ದಾರಿ ಇರುತ್ತದೆ. ಇದು ಮತ್ತೆಲ್ಲ ಕಾರ್ಯಗಳಿಗಿಂತ ದುಸ್ಸಾಧ್ಯವಾದುದು. ಯಾಕೆಂದರೆ ಅಂಥ ಪುಣ್ಯಾತ್ಮರ ಲಭ್ಯತೆಯ ಕೊರತೆ. ಇದ್ದರೂ ಸರಿಯಾದ ಸಮಯಕ್ಕೆ ಸಿಗಬೇಕು. ದೃಷ್ಟಿಗೆ ನಿಲುಕಬೇಕು. ಯೋಗ್ಯತೆಗಳ ಪರೀಕ್ಷೆಯಾಗಬೇಕು. ದಶಕಗಳ ಅಧ್ಯಯನ, ಬ್ರಹ್ಮಚರ್ಯ, ದೃಢ ವೈರಾಗ್ಯ, ಮುಮುಕ್ಷುತ್ವವೇ ಮೊದಲಾದ ಅಧಿಕಾರ, ಒಂದು ಮಠವನ್ನು ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯ, ವ್ಯಾವಹಾರಿಕ ಜಂಜಡಗಳ ಪ್ರವಾಹದಲ್ಲಿ ತೇಲಿಹೋಗದೇ ಅಧ್ಯಾತ್ಮವನ್ನು ಮುಂದು ಮಾಡಿಕೊಂಡು ಸಾಗುವ ಧೀರತೆ ಇವೆಲ್ಲವೂ ಬೇಕು.

ಒಂದಿದ್ದರೆ ಮತ್ತೊಂದಿಲ್ಲ ಎಂಬಂಥ ವ್ಯಕ್ತಿಗಳೇ ಹೆಚ್ಚಿನವರು. ಯಾಕೆಂದರೆ ಇವೆಲ್ಲವೂ ಒಟ್ಟಾಗುವ ಸೌಭಾಗ್ಯ ಅದೆಷ್ಟು ಜನರಿಗೆ ಸಿಕ್ಕೀತು? ಭಗವಂತನೇ ಹೇಳಿದಂತೆ, ‘ಮನುಷ್ಯಾಣಾಂ ಸಹಸ್ರೇಷು ಕಶ್ಚಿತ್ ಯತತಿ ಸಿದ್ಧಯೇ| ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತ:||’ ಹಾಗೆಯೇ, ‘ ಬಹೂನಾಂ ಜನ್ಮನಾಮ್ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ’ ಎಂಬ ಮಾತುಗಳು ಇಂಥ ಜ್ಞಾನಿಗಳ, ಯೋಗ್ಯ ಮುಮುಕ್ಷುಗಳ ವೈರಲ್ಯವನ್ನು ತಿಳಿಸುತ್ತವೆ.

ಹೀಗಿರುವಾಗ, ಇಂಥ ಕಲಿಯುಗದಲ್ಲಿಯೂ ಸನಾತನದ ಸಾರವನ್ನು ಕಡೆದು ಜನರಿಗೆ ಉಣಬಡಿಸುವ ಮತ್ತು ಸ್ವಯಂ ತಾನು ಕೂಡ ಆ ಅಮೃತತ್ವದತ್ತ ಸಾಗಲು ಪ್ರಯತ್ನಿಸುವ ಯೋಗಿಗಳು ಲೋಕದಲ್ಲಿ ಎಷ್ಟಿದ್ದಾರು?

ಶಿಷ್ಯವರ್ಗದ ಪೂರ್ವಸುಕೃತರಾಶಿ ಯಿಂದ ಮಾತ್ರ ಒಬ್ಬ ಯೋಗ್ಯ ಸಾಧಕರು ಕಾಲಕಾಲಕ್ಕೆಪೀಠಕ್ಕೆ ಬಂದು ಪರಂಪರೆಯನ್ನು ಮುಂದುವರಿಸುತ್ತಾರೆ. ಆ ಕಾಲದ ಶಿಷ್ಯರ ಪ್ರಾರಬ್ಧವೂ ಇವನ್ನೆಲ್ಲ ಪ್ರಭಾವಿಸುತ್ತದೆ ಅನಿಸುತ್ತದೆ.

ಹೀಗೆ ತಪೋನಿಷ್ಠ, ಯೋಗನಿಷ್ಠ ಜ್ಞಾನಿಗಳು ಪೀಠಾಧಿಪತಿಗಳಾಗಿ ಸಿಕ್ಕು, ಅವರಿಂದ ಮಾರ್ಗದರ್ಶನ ಪಡೆಯುವ ಸೌಭಾಗ್ಯವನ್ನು ಆರಾಧ್ಯ ದೇವರು ಕರುಣಿಸುತ್ತಾರೆ. ಆ ಕರುಣೆಗೆ ಪಾತ್ರತ್ವವನ್ನು ಮಾತ್ರ ಶಿಷ್ಯವರ್ಗ ಉಳಿಸಿಕೊಂಡು ಹೋಗಬೇಕಾಗುತ್ತದೆ.

ನಿನ್ನೆಯಿಂದ ಸ್ವರ್ಣವಲ್ಲೀ ಎಂಬ ಬಂಗಾರದ ಲತೆಯಲ್ಲಿ ಮತ್ತೊಂದು ಚಿಗುರೊಡೆಯುವ ಸಂಭ್ರಮ ಆರಂಭಗೊಂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಪೀಠವನ್ನು ಮುನ್ನಡೆಸಲು ಒಬ್ಬ ಉತ್ತರಾಧಿಕಾರಿಯನ್ನು ಆರಾಧ್ಯ ದೇವತೆಗಳು ಹಾಗೂ ಪೂರ್ವ ಗುರುಗಳು ಈ ಪೀಠದ ಪ್ರಕೃತ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಮುಖಾಂತರ ಆಯ್ದುಕೊಟ್ಟಿದ್ದಾರೆ. ಅವರ ಮಾರ್ಗದರ್ಶನವನ್ನು ಪಡೆದು ಮುನ್ನಡೆಯುವ ಸೌಭಾಗ್ಯ ನಮ್ಮೆಲ್ಲರದು.

ಶಿಷ್ಯರ ಆಯ್ಕೆ ಆದಾಗಿನಿಂದ ಸ್ವರ್ಣವಲ್ಲೀ ಸ್ವಾಮಿಗಳಿಗೆ ಆನಂದದ ಅತಿಶಯವಾದ ಅನುಭವ ಆಗುತ್ತಿದೆ. ಅವರ ಮುಖದಲ್ಲಿ, ಮಾತಿನಲ್ಲಿ ಅಂತ ಸ್ವಚ್ಛ ಆನಂದದ ಅನುಭವ ಕಾಣಿಸುತ್ತಿದೆ. ಇದು ಸಹಜವೂ ಹೌದು. ಅನೇಕ ವರ್ಷಗಳ ಪ್ರಾರ್ಥನೆಯ ಫಲವಾಗಿ ಶಿಷ್ಯರು ದೊರೆತಿದ್ದಾರೆ. ನವರಾತ್ರಿಯ ಕಠಿಣ ವ್ರತದ ಸಮಾಪ್ತಿಯ ಸಂದರ್ಭದಲ್ಲಿ ಅವರು ಜಗನ್ಮಾತೆಯಲ್ಲಿ ಈ ಭವ್ಯ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಂಥ ಒಬ್ಬ ಯೋಗ್ಯ ಶಿಷ್ಯನನ್ನು ಕರುಣಿಸು ಎಂದು ಬಿಕ್ಕಿ ಬಿಕ್ಕಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಅಷ್ಟೇ ಅಲ್ಲ, ಮತ್ತೆ ಮತ್ತೆ ‘ ಇನ್ನೂ ಕರುಣಿಸಿಲ್ಲವಲ್ಲ ಅಮ್ಮಾ ‘ ಎಂದು ರಾಜರಾಜೇಶ್ವರಿಯಲ್ಲಿ ಅತ್ಯಂತ ಕಾತರದಿಂದ ಪ್ರಾರ್ಥಿಸುತ್ತಾ, ಹಠ ಹಿಡಿಯುತ್ತಾ, ನಿವೇದಿಸಿಕೊಂಡಿದ್ದು ನಮ್ಮ ಕಿವಿಯಲ್ಲಿಯೇ ಇದೆ. ನಿನ್ನೆಯ ಪ್ರಾರಂಭೋತ್ಸವದಲ್ಲೂ ಅವರು ಪ್ರಾರ್ಥನೆ ಹೇಗೆ ಮಾಡಿದರೆ ಫಲಿಸುತ್ತದೆ ಎಂಬುದನ್ನು ಶಿಷ್ಯಸ್ವೀಕಾರವನ್ನೇ ದಾರ್ಷ್ಟಾಂತೀಕರಿಸಿ ಹೇಳಿದ್ದನ್ನು ಕೂಡ ನಾವು ಕೇಳಿದ್ದೇವೆ. ಹಾಗಾಗಿ ಶಿಷ್ಯಗುರುಗಳು ನಿರಾಯಾಸದಿಂದ ದೊರೆತವರಲ್ಲ. ಈಗಿನ ಗುರುಗಳ ತಪೋಬಲ, ಪ್ರಾರ್ಥನೆ, ಹಿಂದಿನ ಎಲ್ಲ ಗುರುಗಳ ಆಶೀರ್ವಾದ ಹಾಗೂ ಇಡೀ ಸಮಾಜದ ದೀರ್ಘಕಾಲದ ಬಯಕೆಗೆ ಆರಾಧ್ಯ ದೇವರುಗಳು ಕೊಟ್ಟ ವರವಿದು.

ಅತ್ಯದ್ಭುತ ಸನಾತನ ಸಂಸ್ಕೃತಿಯ ಅಷ್ಟೇ ಅದ್ಭುತವಾದ ಐತಿಹಾಸಿಕವಾದ ಸಂದರ್ಭವಿದು. ನಮ್ಮ ತಲೆಮಾರಿನ ಜನರಿಗೆ ಈ ಪುಣ್ಯವಿದೆ. ಇಂಥ ಅದ್ಭುತವೂ, ರೋಮಹರ್ಷಣವೂ ಆದ ಶಿಷ್ಯಸ್ವೀಕಾರದ ಪುಣ್ಯಘಳಿಗೆಯನ್ನು ಮಠ, ಪರಂಪರೆ, ಸಂಪ್ರದಾಯ, ದೇಶ,ಕಾಲ, ವ್ಯಕ್ತಿಗಳ ಭೇದವಿಲ್ಲದೇ ಪ್ರತಿಯೊಬ್ಬ ಸನಾತನಿಯೂ ಕಣ್ಣು ತುಂಬಿಕೊಂಡು ಬರಬೇಕು.

ಇದೇ ಫೆಬ್ರುವರಿ 22 ಕ್ಕೆ ಶಿಷ್ಯಸ್ವೀಕಾರ ಮಹೋತ್ಸವದ ಕೊನೆಯ ದಿನ. ಅವತ್ತು ಯೋಗಪಟ್ಟ ಪ್ರದಾನವು ಕೂಡ ಇರುತ್ತದೆ. ಒಬ್ಬ ವ್ಯಕ್ತಿ ಸಾಂಸಾರಿಕ ಅವಸ್ಥೆಯನ್ನೂ, ಸಂಸಾರದ ಎಲ್ಲ ಬಂಧಗಳನ್ನೂ ತೊರೆದು, ಆಶ್ರಮಗಳ ರಾಜನಾದ ಸಂನ್ಯಾಸಾಶ್ರಮವನ್ನು ಗ್ರಹಿಸುವ ಈ ಅಪೂರ್ವ ಕ್ಷಣಗಳಿಗೆ ಎಲ್ಲರೂ ಸಾಕ್ಷಿಯಾಗಬೇಕು.

ಸಮಾಜವಾಗಿ ನಾವು ನಮ್ಮ ಮುಂದಿನ ಮಾರ್ಗದರ್ಶಕರನ್ನು ಬರಮಾಡಿಕೊಳ್ಳೋಣ.

ಸನಾತನ ಪರಂಪರೆಯ ಮಾಲೆಗೆ ಒಂದು ರತ್ನವನ್ನು ಪೋಣಿಸುವ ಸಂದರ್ಭಕ್ಕೆ ನಾವಲ್ಲಿ ಇರೋಣ.

ಡಾ.ವಿಶ್ವನಾಥ ಸುಂಕಸಾಳ.