ಗುರುಪೂರ್ಣಿಮೆ-ಗುರೂಪಸದನ

posted in: Gurubodhe | 0

ಈ  ಪೂರ್ಣಿಮೆಯನ್ನು ಗುರುಪೂರ್ಣಿಮೆ ಎಂಬುದಾಗಿ ಆಚರಿಸಲಾಗುತ್ತದೆ.ಗುರುವಿಗೆ ನಮ್ಮ ಧರ್ಮದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಗುರುವೇ ಅಧ್ಯಾತ್ಮ ವಿದ್ಯೆಯ ಕಣ್ಣನ್ನು ತೆರೆಸುವವನು. ಈ ಕಣ್ಣನ್ನು ತೆರೆಯಲು ಗುರುವಿನ ಬಳಿ ಸಾರಿ ಪಡೆಯುವುದೊಂದೆ ಉಪಾಯವೆಂಬುದಾಗಿ ಉಪನಿಷತ್ತು ಹೇಳುತ್ತದೆ. “ತದ್ವಿಜ್ಞಾನಾರ್ಥಂ ಸಃ ಗುರುಮೆವಾಭಿಗಚ್ಛೇತ್ ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್ ”.

ಅಧ್ಯಾತ್ಮ ವಿದ್ಯೆಯೆಂಬ ಕಣ್ಣನ್ನು ಜ್ಞಾನವೆಂಬ ಹೆಸರಿನಿಂದ ಕರೆಯುತ್ತಾರೆ. ಯಾವುದರ ಜ್ಞಾನ ? ಅಜ್ಞಾನದ ಪ್ರಯೋಜನವೇನು ? ಇದಕ್ಕೆ ಭಗವಂತನ ಮಾತು ಉತ್ತರವಾಗಿ ನಿಲ್ಲುತ್ತದೆ. “ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥೋ ಮಯಿ”  ಎಲ್ಲ ಜೀವಿಗಳು ಅಂತರ್ಯಾಮಿಯಾಗಿರುವ ಪರಮ್ಮಾತನಲ್ಲಿ ನಿಂತಿವೆ.

ಒಂದೇ ಪರಮ್ಮಾತನಲ್ಲಿಯೇ   ನಾನು ನಿಂತಿದ್ದೇನೆ. ಈ ವಸ್ತುಸ್ಥಿತಿಯ ಅರಿವಾಗುವಿಕೆಯೇ ಇಲ್ಲಿ ಹೇಳಿದ ಜ್ಞಾನ. ಈ ಜ್ಞಾನದ ಪ್ರಯೋಜನವೇನೆಂಬುವುದನ್ನು ಈ ಶ್ಲೋಕದ  ಪೂರ್ವ ಅರ್ಥ ಹೇಳುತ್ತದೆ. “ಯತ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ” ಈ ಜ್ಞಾನವನ್ನು ಪಡೆದಿದ್ದರಿಂದ ಪುನಃ ಮೋಹದ ಮಂಕು ಕವಿಯುವುದಿಲ್ಲ. ಅರ್ಜನನಿಗೆ ಗೀತೋಪದೇಶಕ್ಕಿಂತ ಮೊದಲು ಜಟಿಲವಾದ ಮೋಹವು ಆವರಿಸಿತ್ತು.

ಜ್ಞಾನವು ಇಂತಹ ಮೋಹವು ಮತ್ತೆ ಬರದಂತೆ ಮಾಡುತ್ತದೆ. ಮುಪ್ಪು, ಮಹಾರೋಗ, ಮರಣಗಳಲ್ಲಿಯೂ ಇಂತಹ ಜ್ಞಾನವನ್ನು ಪಡೆದವನ ಮನಸ್ಸಿಗೆ ಮಂಕು ಕವಿಯುವುದಿಲ್ಲ. ಸಂಸಾರವೆಲ್ಲವೂ ಮೋಹಮಯವಾದ್ದರಿಂದ, ಮೋಹವು ಮತ್ತೆ ಬರುವುದಿಲ್ಲ ಎಂಬ ಮಾತಿಗೆ ಸಂಸಾರಬಂಧನವು ಕಳಚಿ ಮೋಕ್ಷ ದೊರೆಯುತ್ತಿದೆ ಎಂಬುದಾಗಿಯೇ ಅರ್ಥ.

ಇಂತಹ ಜ್ಞಾನವನ್ನುಂಟುಮಾಡುವ ಗುರುವಿನ ಬಳಿಗೆ ಹೋಗಿ ಶರಣಾಗತಿಯನ್ನು ಹೊಂದಬೇಕು.

ಆ ಶರಣಾಗತಿ ಹೇಗಿರಬೇಕೆಂಬುದನ್ನು ಭಗವಂತನೇ ಹಿಂದಿನ ಶ್ಲೋಕದಲ್ಲಿ ತಿಳಿಸಿದ್ದಾನೆ. ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ| ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ವದರ್ಶಿನಃ || ಪ್ರಣಿಪಾತವೆಂದರೆ ಸಾಷ್ಟಾಂಗ ನಮಸ್ಕಾರ. ಇಡೀ ಶರೀರವನ್ನು ಗುರುವಿನ ಪದತಲದಲ್ಲಿ ಚೆಲ್ಲಬೇಕು.

ಇದರಿಂದ ಶಾರೀರಿಕವಾದ ಅಭಿಮಾನವು ಕಳಚಿ ಹೋಗುತ್ತದೆ.ನಾನು ಸುಂದರ, ನಾನು ಚಿರನವ ಯುವಕ, ನಾನು ತುಂಬ ಬಲಶಾಲಿ ಈ ರೀತಿಯ ಭಾವನೆಗಳೆಲ್ಲವೂ ಶಾರೀರಿಕ ಅಭಿಮಾನಗಳು. ಜ್ಞಾನೋಪದೇಶದ ಅರ್ಹತೆ  ಬರಲು ಶರೀರಾಭಿಮಾನ ಕಡಿಮೆಯಾಗಬೇಕು. ಶರೀರವನ್ನು ಬಗ್ಗಿಸಿ ನಮಸ್ಕರಿಸುವ ಮೂಲಕ ಈ ಅಭಿಮಾನವನ್ನು ಕಡಿಮೆ ಮಾಡಿಕೊಳ್ಳಬೇಕು.

ಎರಡನೆಯದಾಗಿ ವಿನಯದಿಂದ ಮತ್ತು ತೆರೆದ ಮನಸ್ಸಿನಿಂದ ತನ್ನ ಜಿಜ್ಞಾಸೆಯನ್ನು ಗುರುವಿನ ಮುಂದೆ ಇಡಬೇಕು. ಇದೇ ಪರಿಪ್ರಶ್ನೆ. ಮೂರನೇಯದಾಗಿ  ಗುರು ಸೇವೆಯಲ್ಲಿ ತೊಡಗುವ ಮೂಲಕ  ತನ್ನ ಸ್ವಾಭಿಮಾನ  ಅಥವಾ ದೊಡ್ಢತನದ ಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಮೂರು ಅಂಶಗಳಿಂದ ಕೂಡಿದ ಗುರೂಪಸದನದಿಂದ ತತ್ವಜ್ಞಾನಿಗಳಾದ ಗುರುಗಳು ಜ್ಞಾನೋಪದೇಶವನ್ನು ಮಾಡುತ್ತಾರೆ.ಜ್ಞಾನೋಪದೇಶದ ವಿಷಯದಲ್ಲಿ ಇನ್ನೂ ಅನೇಕ ಸೂಕ್ಷ್ಮ ಮರ್ಮಗಳಿವೆ. ಇವುಗಳನ್ನು ಅರಿತು ತನ್ನಲ್ಲಿ ಅಳವಡಿಸಿಕೊಂಡು ಜ್ಞಾನೋಪದೇಶ ಪಡೆದರೆ ನಿಶ್ಚಿತವಾಗಿಯೂ ಫಲಕಾರಿಯಾಗಿರುತ್ತದೆ. ಹಿಂದೆ ಹೇಳಿದ ಫಲವನ್ನು ಕೊಡುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ