ಚಾತುರ್ಮಾಸ್ಯ ವ್ರತವನ್ನು ಯತಿಗಳು ಪ್ರತಿವರ್ಷ ಮಾಡುತ್ತಾರೆ. ಇದರ ಬಗ್ಗೆ ಹಿಂದೆ ಬರೆದಿರುವುದರಿಂದ ಎಲ್ಲ ಅಂಶಗಳನ್ನು ಇಲ್ಲಿ ವಿವರಿಸುವುದಿಲ್ಲ. ಒಂದು ಅಂಶವನ್ನು ಮಾತ್ರ ಇಲ್ಲಿ ವಿವರಿಸುತ್ತಿದ್ದೇವೆ. ಚಾತುರ್ಮಾಸ್ಯದಲ್ಲಿ ಯತಿಗಳು ಸಂಚರಿಸುವುದಿಲ್ಲ ಯಾಕೆ? ಇದೇ ಲೇಖನದ ವಿಷಯ.
ಚಾತುರ್ಮಾಸ್ಯದ ತಿಂಗಳುಗಳಲ್ಲಿ ಯತಿಗಳು ಸಂಚರಿಸದೇ ಒಂದೆಡೆ ನಿಂತಿರಬೇಕೆಂದು ಶಾಸ್ತ್ರವು ಹೇಳುತ್ತದೆ. “ವರ್ಷಾಸು ಏಕತ್ರ ಸಂವಸೇತ್” ವರ್ಷಋತುವಿನ ಅವಧಿಯಲ್ಲಿ ಒಂದೆಡೆ ವಾಸಮಾಡಬೇಕು. ಅದಕ್ಕೆ ಅಹಿಂಸೆ ಒಂದು ಕಾರಣ. ಇನ್ನೊಂದು ಕಾರಣ ಯುಕ್ತ ವಿಹಾರ. ಇದನ್ನು “ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು | ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||” ಎಂಬ ಗೀತಾಶ್ಲೋಕದಲ್ಲಿ ಕಾಣಬಹುದು. ದುಃಖನಿವಾರಕವಾದ ಯೋಗವು ಸಿದ್ಧಿಸಬೇಕಾದರೆ ಯುಕ್ತವಾದ ಆಹಾರ,ಯುಕ್ತವಾದ ವಿಹಾರ, ಯುಕ್ತವಾದನಿದ್ರೆ – ಎಚ್ಚರಗಳು, ಯುಕ್ತವಾದ ಚೇಷ್ಟೆಗಳು ಬೇಕಾಗತ್ತವೆ. ಇವುಗಳಲ್ಲಿ ಯುಕ್ತವಾದ ವಿಹಾರವೆಂದರೆ ಯುಕ್ತವಾದ ಸಂಚಾರವೆಂದರ್ಥ. ಚಾತುರ್ಮಾಸ್ಯವ್ರತಾಚರಣೆಗೆ ಇದೂ ಒಂದು ಕಾರಣ.
ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಇಂದ್ರಿಯಗಳೆಂಬ ಹತ್ತು ಕುದುರೆಗಳಲ್ಲಿ ಪಾದಗಳು ಸಂಚಾರದ ಮುಖ್ಯಸಾಧನಗಳು. ಸಂಚರಿಸುವ ಎಲ್ಲಾ ಪ್ರಾಣಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಇವು ಇರುತ್ತವೆ. ನಮ್ಮನ್ನು ಒಂದು ವಾತಾವರಣದಿಂದ ಎನ್ನೊಂದು ವಾತಾವರಣಕ್ಕೆ ಕೊಂಡೊಯ್ಯುವ ಮೂಲಕ ನಮ್ಮ ಮನಸ್ಸಿನಲ್ಲಿ ಪಾದಗಳು ಬದಲಾವಣೆಯನ್ನು ತರುತ್ತವೆ. ಕೆಟ್ಟವಾತಾವರಣವಿದ್ದರೆ ಕೆಟ್ಟಮನಸ್ಥಿತಿ ಬರುತ್ತದೆ. ಎಲ್ಲ ಇಂದ್ರಿಯಗಳಿಗೂ ಇರುವ ಒಂದು ಸಮಾನವಾದ ದೊಷವೆಂದರೆ ಅವು ಮನಸ್ಸನ್ನು ಬಹುಮುಖಗೊಳಿಸಿ ಚಂಚಲಗೊಳಿಸತ್ತವೆ. ಉಳಿದಲ್ಲ ಇಂದ್ರಿಯಗಳು ನಾವು ಇದ್ದಲ್ಲಯೇ ನಮ್ಮ ಮನಸ್ಸನ್ನು ಚಂಚಲಗೊಳಿಸಿದರೆ ಪಾದಗಳು ಬೇರೆಕಡೆ ಕರೆದೊಯ್ಯುವ ಮೂಲಕ ಮನಸ್ಸನ್ನು ಚಂಚಲಗೊಳಿಸುತ್ತವೆ. ಮನಸ್ಸಿನ ನಿಶ್ಚಲತೆ ಯತಿಗಳಿಗೆ ಬೇಕಾದ ಅತೀ ಅವಶ್ಯ ಸಾಧನ. ಅದಕ್ಕಾಗಿ ಯತಿಗಳಿಗೆ ಸಂಚಾರಕ್ಕೊಂದು ಮಿತಿ ಅವಶ್ಯ. ಚಾತುರ್ಮಾಸ್ಯವ್ರತ ಇದನ್ನು ಹಾಕುತ್ತದೆ. ಚಾತುರ್ಮಾಸ್ಯದಲ್ಲಿ ಗ್ರಾಮದ ಗಡಿಯನ್ನು ದಾಟಬಾರದು. ಭಿಕ್ಷೆಗೆ ಹೊಗುವದಿದ್ದರೆ ಗ್ರಾಮದ ಒಳಗೇ ಸಂಚರಿಸಬೇಕು. ನದಿಗಳು ಸಾಮಾನ್ಯವಾಗಿ ಗ್ರಾಮದ ಅಥವಾ ಸೀಮೆಯ ಗಡಿಗಳಾಗಿರುರತ್ತೆವೆ. ಆದ್ದರಿಂದ ನದಿಯನ್ನು ದಾಟಬಾರದು. ಚಾತುರ್ಮಾಸ್ಯದ ಅವಧಿ ಮುಗಿಯುವವರೆಗೆ ಒಂದೇ ದೇವಸ್ಥಾನ ಅಥವಾ ಒಂದೇ ಮನೆಯಲ್ಲಿ ವಾಸ್ತವ್ಯ ಮಾಡುವುದು ಉತ್ತಮ. ಹಾಗಂತ ವರ್ಷಾವಧಿ ಒಂದೇ ಕಡೆ ಇರುವುದೂ ಸರಿಯಲ್ಲ. ಯಾಕೆಂದರೆ ಆ ಸ್ಥಳದ ಬಗ್ಗೆ, ಅಲ್ಲಿಯ ಜನಗಳ ಬಗ್ಗೆ ಮಮಕಾರ ಬಂದುಬಿಡುತ್ತದೆ . ಅದಕ್ಕಾಗಿ ಚಾತುರ್ಮಾಸ್ಯಕ್ಕೆ ಹೊರತಾಗಿ ಉಳಿದ ಅವಧಿಗಳಲ್ಲಿ ಸಂಚಾರ .ಆ ಸಂಚಾರಕ್ಕೂ ಬೇರೆ ರೀತಿಯ ಮಿತಿಗಳು ಉಂಟು. ಒಟ್ಟಾರೆ ಯುಕ್ತವಾದ ಸಂಚಾರ, ಯುಕ್ತವಾದ ವ್ಯವಹಾರ ಸಂನ್ಯಾಸ ಜೀವನದ ಜೀವಾಳ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ