
ವಿಶಿಷ್ಟವಾದ ಹೂವಿನ ಅಲಂಕಾರ, ದೀಪಗಳ ಸರಮಾಲೆಗಳಿಂದ ಶೋಭಿಸುವ ಪ್ರಾಕಾರ, ಮಧ್ಯದ ಗರ್ಭಗುಡಿಯಲ್ಲಿ ಸ್ವರ್ಣಾಲಂಕೃತ ದೇವತೆಗಳ ಸಾನ್ನಿಧ್ಯ, ಯತಿಗಳ ಸಾನ್ನಿಧ್ಯದಿಂದ ಪರಿಶೋಭಿಸುತ್ತಿರುವ ಪ್ರಾಕಾರವೇದಿಕೆ, ಆ ವೇದಿಕೆಯಲ್ಲಿ ಬಾಲಶಂಕರರಂತೆ ಕಂಗೊಳಿಸುತ್ತಿರುವ ನೂತನ ಯತಿಗಳು, ಅವರಿಗೆ ದೀಕ್ಷಾದಂಡಸಹಿತವಾಗಿ ಯೋಗಪಟ್ಟ ನಾಮಧೇಯವನ್ನಿತ್ತು ಹರಸುತ್ತಿರುವ ಹಿರಿಯ ಶ್ರೀ ಶ್ರೀಗಳವರು, ಈ ಎಲ್ಲ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವ ಭಕ್ತಜನಸ್ತೋಮ; ಈ ಎಲ್ಲ ವೈಭವಗಳ ಸಾಕಾರಕ್ಕೆ ಇಂದಿಗೆ ಒಂದು ವರ್ಷ ಸಂಪನ್ನವಾಯಿತು. ಹೂವಿನ ಅಲಂಕಾರದಿಂದ ಕಣ್-ಮನಗಳನ್ನು ತಂಪಾಗಿಸಿಕೊಂಡವರು ಅನೇಕರು, ಅಬ್ಬಾ! ಎಷ್ಟೊಂದು ಚೆಂದದ ಅಲಂಕಾರ! ಎಂದು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸಿದ ಭಕ್ತರು ಹಲವರು. ರಾತ್ರಿ ಬೆಳಗಾಗುವುದರಲ್ಲಿ ಅದ್ಭುತವಾದ ಪುಷ್ಪಲೋಕವನ್ನೇ ಧರೆಗಿಳಿಸಿದಂತೆ ಶ್ರೀ ಮಠದ ಚಿತ್ರಣವನ್ನೇ ಬದಲಿಸಿದ ಹೂವಿನ ಅಲಂಕಾರವೋ ಎಂಬ ಹಾಗೆ ಮೂಕವಿಸ್ಮಿತರಾದವರು ಇನ್ನು ಹಲವರು. ಹೀಗೆ ೨೦೨೪-ರ ಫೆಬ್ರವರಿ ೧೮-ರಿಂದ ೨೨-ರ ವರೆಗೆ ಐದು ದಿನಗಳ ಕಾಲ ನಡೆದ ಅಭೂತಪೂರ್ವ ‘ಶಿಷ್ಯಸ್ವೀಕಾರ’ ಕಾರ್ಯಕ್ರಮವನ್ನು ಸಾಗರೋಪಾದಿಯಲ್ಲಿ ಬಂದು ಭಕ್ತರು ಕಣ್ತುಂಬಿಕೊಂಡರು. ಸನ್ಯಾಸ ದೀಕ್ಷೆಯ ಎಲ್ಲ ಕಾರ್ಯಕ್ರಮಗಳೂ ಯಾವುದೇ ಅಡೆತಡೆಗಳಿಲ್ಲದೇ, ಶಾಸ್ತ್ರೋಕ್ತವಾಗಿ, ಸರ್ವಾಂಗಸುಂದರವಾಗಿ ಸಂಪನ್ನವಾಗಿರುವುದು ‘ದೈವಶಕ್ತಿ’ಯ ಹಾಗೂ ‘ಗುರು’ಭಕ್ತಿಯ ಅನಾವರಣವೇ ಸರಿ.
ಇಂತಹ ಅಭೂತಪೂರ್ವವಾದ ಸಂದರ್ಭಕ್ಕೆ ಶ್ರೀ ಮಠವು ಸಾಕ್ಷಿಯಾಗಿ ಇಷ್ಟು ಬೇಗ ಒಂದು ವರ್ಷ ಕಳೆಯಿತು ಎಂದರೆ ಆಶ್ಚರ್ಯವಾಗುತ್ತದೆ. ಮಗ ಹುಟ್ಟಿದ ಸಂತೋಷದಲ್ಲಿ ತಾಯಿಯು ಹೇಗೆ ತನ್ನ ಎಲ್ಲ ನೋವುಗಳನ್ನು ಮರೆಯವಳೋ, ಸಂತೋಷದಿಂದ ಪುತ್ರೋತ್ಸವವನ್ನು ಹೇಗೆ ಅನುಭವಿಸುವಳೋ, ಅದೇ ರೀತಿಯಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಶಿಷ್ಯೋತ್ಸವವನ್ನು ಸಂಭ್ರಮಿಸಿದ ಆ ಕಾಲ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅನೇಕ ದಿನಗಳ ಕಾಲ ವಿಶ್ರಾಂತಿ-ನಿದ್ರೆಗಳನ್ನು ಬಿಟ್ಟಿದ್ದರೂ ಮೈ-ಮನಗಳಲ್ಲಿ ಕುಂದದ ಉತ್ಸಾಹ, ಇಮ್ಮಡಿಸಿದ ಅಲೌಕಿಕ ಸಂತೋಷ ಇವೆಲ್ಲವೂ ದೈವಶಕ್ತಿಯ ಅನಾವರಣವಾದರೆ, ‘ಶಿಷ್ಯಸ್ವೀಕಾರ’ದ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ದಿವ್ಯ ಸಾನ್ನಿಧ್ಯವನ್ನು ನೀಡಿ, ಮಾರ್ಗದರ್ಶನ ಮಾಡುತ್ತಾ ಶಿಷ್ಯರಲ್ಲಿ ಉತ್ಸಾಹವನ್ನು ತುಂಬುತ್ತಿದ್ದ ಶ್ರೀ ಗುರುಗಳ ಎಲ್ಲ ಸಂಕಲ್ಪ-ಆದೇಶಗಳನ್ನೂ ಪರಿಪೂರ್ಣವಾದ ಶ್ರದ್ಧಾ-ಭಕ್ತಿಗಳಿಂದ ಸಾಕಾರಗೊಳಿಸುತ್ತಿದ್ದ ಶಿಷ್ಯಭಕ್ತರ ಪಾಲ್ಗೊಳ್ಳುವಿಕೆಯು ಗುರುಭಕ್ತಿಯ ಅನಾವರಣವಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡರೆ ಮೈ-ಮನಗಳೆಲ್ಲ ಪುಳಕಗೊಳ್ಳುತ್ತವೆ. ಶ್ರೀ ಶ್ರೀಗಳವರು ತಮ್ಮ ಶಿಷ್ಯರನ್ನು ನೋಡಿದ ತಕ್ಷಣ ದೇಹದಲ್ಲಿ ಅಡಗಿದ ಎಲ್ಲ ನೋವುಗಳು ಮಾಯವೋ ಎಂಬಂತೆ ಕಾಣುತ್ತಿದ್ದರು. ಅವರ ಆ ಉತ್ಸಾಹ ಎಲ್ಲಿಲ್ಲದ ಆನಂದ ಇವನ್ನೆಲ್ಲ ನೋಡಿ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲು ನಿಯೋಜಿತರಾದ ಬ್ರಹ್ಮಚಾರಿಗಳು ದೀಕ್ಷಾಂಗವಾಗಿ ನಡೆಯುವ ಎಲ್ಲಾ ಕಾರ್ಯ-ಕಲಾಪಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದರು. ಸೂರ್ಯೋದಯಕ್ಕಿಂತ ಪೂರ್ವದಲ್ಲಿ ಪೂರ್ಣಾಹುತಿಯನ್ನು ನೆರವೇರಿಸಬೇಕು ಎಂಬ ನಿಯಮದಂತೆ ವಿರಜಾಹೋಮವನ್ನು ಬೆಳಗಿನ ಜಾವ ೩ ಗಂಟೆಯಿಂದಲೇ ಆರಂಭಿಸಿ, ಸಕಾಲದಲ್ಲಿ ಪೂರ್ಣಗೊಳಿಸಿದರು. ವೇದ-ವೇದಾಂಗಗಳ ಅಧ್ಯಯನ ಸಂಪನ್ನರಾದ, ಶ್ರೌತಕರ್ಮಗಳಲ್ಲಿ ನಿಷ್ಣಾತರಾದ ನಾಡಿನ ಅನೇಕ ಹಿರಿಯ ವಿದ್ವಾಂಸರ ಉಪಸ್ಥಿತಿ ಹಾಗೂ ಭಾಗವಹಿಸುವಿಕೆಯಲ್ಲಿ ಸಂನ್ಯಾಸಸ್ವೀಕಾರದ ವಿಧಿವಿಧಾನಗಳು ನೆರವೇರಿದವು. ಶಾಲ್ಮಲಾ ನದಿಯಲ್ಲಿ ಸನ್ಯಾಸ ದೀಕ್ಷಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಬ್ರಹ್ಮಚಾರಿಗಳ ದೃಢ ಸಂಕಲ್ಪ ಇಲ್ಲಿ ಎದ್ದು ತೋರುತ್ತಿತ್ತು. ವೇದಮಂತ್ರಗಳ ಉಚ್ಚಾರದಿಂದ ಅವರ ಮನಸ್ಸು ಇನ್ನಷ್ಟು ಸತ್ವಯುತವಾಗಿತ್ತು. ತನಗೆ ದೀಕ್ಷಾವಸ್ತ್ರ, ದಂಡ, ಕಮಂಡಲು, ಆಸನ ಇತ್ಯಾದಿಗಳನ್ನು ನೀಡಿ ಸನ್ಯಾಸ ದೀಕ್ಷೆಯನ್ನು ನೀಡುವ ಶ್ರೀ ಗುರುಗಳ ಮೇಲೆ ಅವರಿಗೆ ಇರುವ ಅಪಾರ ಶದ್ಧಾ – ಭಕ್ತಿಯೂ ಕೂಡ ಇನ್ನೊಂದು ವಿಧದಿಂದ ಗುರುಭಕ್ತಿಯ ಅನಾವರಣವೆಂದೇ ಹೇಳಬೇಕು. ದೀಕ್ಷೆಯನ್ನು ನೀಡುವ ಹಾಗೂ ಸ್ವೀಕರಿಸುವ ಆ ದೃಶ್ಯವನ್ನು ಹತ್ತಿರದಿಂದ ನೋಡಿದ ನಮ್ಮೆಲ್ಲರ ಸೌಭಾಗ್ಯವನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಹುಟ್ಟಿದ ಕರುವಿನೊಂದಿಗೆ ಹಸುವು ಬರುವ ಹಾಗೆ ರಥಬೀದಿಯಲ್ಲಿ ಹಿರಿಯ ಶ್ರೀಗಳೊಂದಿಗೆ ಬಾಲಯತಿಗಳು ಸಾಗಿ ಬರುತ್ತಿರುವಾಗ ಸಾಗರೋಪಾದಿಯಲ್ಲಿ ಸೇರಿದ ಜನರಿಂದ, ವೇದಘೋಷ, ಜಯಘೋಷ, ಮಂಗಳವಾದ್ಯಗಳು ಮೊಳಗಿದವು. ಕಣ್ಣುಗಳನ್ನು ಮುಚ್ಚಿ ಸ್ವಲ್ಪ ಹೊತ್ತು ಕುಳಿತು ಈ ದೃಶ್ಯವನ್ನು ಚಿಂತಿಸಿದರೆ ಇಂದಿಗೂ ಆ ಅಲೌಕಿಕ ವೈಭವದ ಸಾಕ್ಷಾತ್ಕಾರ ಉಂಟಾಗುತ್ತದೆ. ಶ್ರೀ ಶಂಕರರ ಶ್ರೇಷ್ಠ ಪರಂಪರೆಯಲ್ಲಿ ಬಂದ ನಾಡಿನ ಅನೇಕ ಯತಿವರೇಣ್ಯರ ಸಮ್ಮುಖದಲ್ಲಿ ಪರಮಪೂಜ್ಯರು ತಮ್ಮ ಶಿಷ್ಯರಿಗೆ ಶ್ರೀ ಆನಂದಬೋಧೇಂದ್ರಸರಸ್ವತೀ, ಶ್ರೀ ಆನಂದಬೋಧೇಂದ್ರಸರಸ್ವತೀ, ಶ್ರೀ ಆನಂದಬೋಧೇಂದ್ರಸರಸ್ವತೀ ಎಂದು ಮೂರು ಬಾರಿ ಉಚ್ಚರಿಸಿ ಯೋಗಪಟ್ಟ ನಾಮವನ್ನಿತ್ತ ಆ ಕ್ಷಣದಿಂದ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಯು ಇನ್ನಷ್ಟು ಶ್ರೀಮಂತವಾಯಿತು. ಶ್ರೀ ಸ್ವರ್ಣವಲ್ಲೀ ಪರಂಪರೆಗೆ ಶ್ರೀ ಆನಂದಬೋಧೇಂದ್ರಸರಸ್ವತೀ ಶ್ರೀಗಳವರು ಸೇರಿದಾಗ ಶಿಷ್ಯಕೋಟಿಗೆ ಉಂಟಾದ ‘ಆನಂದಬೋಧ’ವು ದೈವಶಕ್ತಿಯ-ಗುರುಭಕ್ತಿಯ ಅನಾವರಣವಲ್ಲದೇ ಇನ್ನೇನು!

