ದಂಪತಿಗಳು ಪರಸ್ಪರ ಅರಿತು ಬೆರೆತು ಬದುಕಬೇಕು -ಶ್ರೀ ಶ್ರೀಗಳವರು
’ಪರಸ್ಪರ ಹೊಂದಾಣಿಕೆಯಿಂದ ದಂಪತಿಗಳು ಗೃಹಸ್ಥಾಶ್ರಮ ಧರ್ಮವನ್ನು ನಿಭಾಯಿಸಬೇಕು. ನನ್ನ ಮಾತೇ ನಡೆಯಬೇಕು ಎನ್ನುವ ಭಾವದಿಂದಲೇ ಬಹಳಷ್ಟು ಸಲ ಸಣ್ಣ ಸಣ್ಣ ವಿಷಯಗಳ ಕುರಿತು ಭಿನ್ನಾಭಿಪ್ರಾಯ ಉಂಟಾಗುತ್ತದೆ. ಇಂತಹ ಮನಃಸ್ಥಿತಿಯ ಬದಲಾಗಿ ಇಬ್ಬರೂ ಸ್ವಲ್ಪ ಹೊಂದಾಣಿಕೆ ಮನೋಭಾವದಿಂದ ಹೋದರೆ ಮಾತ್ರ ಗೃಹಸ್ಥಾಶ್ರಮ ಧನ್ಯತೆಯತ್ತ ಸಾಗುತ್ತದೆ. ಸಮಾಜದ ಆಧಾರ ಸ್ತಂಭವಾದ ಗೃಹಸ್ಥ ಧರ್ಮದ ಆಚರಣೆ ಸರಿಯಾದ ರೀತಿಯಲ್ಲಿ ಆದರೆ ಪ್ರತಿಯೊಂದು ಮನೆಯೂ ಧಾರ್ಮಿಕ ಕೇಂದ್ರವಾಗುತ್ತದೆ. ಇದರಿಂದ ವೈಯಕ್ತಿಕವಾಗಿಯೂ ಲಾಭ, ಸಮಾಜಕ್ಕೂ ಒಳಿತು. ಹಾಗಾಗಿ ಪ್ರತಿಯೊಂದು ದಂಪತಿಗಳು ಪರಸ್ಪರ ಅರಿತು ಬೆರೆತು ಬದುಕುವುದನ್ನು ಆಚರಣೆಗೆ ತಂದುಕೊಳ್ಳಬೇಕು’ ಎಂದು (ಶ್ರೀ ಶ್ರೀಗಳವರು) ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಸೆ. ೧೫ರಂದು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಅವರ ಚಾತುರ್ಮಾಸ್ಯ ಸಂದರ್ಭದಲ್ಲಿ ನಡೆದ ಧನ್ಯೋಗೃಹಸ್ಥಾಶ್ರಮ ದಂಪತಿ ಶಿಬಿರದಲ್ಲಿ ನುಡಿದರು.
ಮುಂದುವರೆದ ಅವರು, ಪ್ರತಿಯೊಂದು ಮಗುವಿಗೂ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಮುಂದಿನ ಸಮಾಜ ಉತ್ತಮ ಸಂಸ್ಕಾರವಂತ ಸಮಾಜವಾಗುತ್ತದೆ. ಇಂತಹ ಸಮಾಜ ನಿರ್ಮಾಣ ಮಾಡಲು ಈಗಿನ ನವ ದಂಪತಿಗಳಿಗೆ ಅವಕಾಶ ಹೆಚ್ಚಿದೆ ಎಂದ ಅವರು ಪ್ರತಿಯೊಂದು ದಂಪತಿಗಳು ಒಂದು ಮಗುವನ್ನಾದರೂ ವೇದಾಧ್ಯಯನ ಮಾಡಲು ಕಳುಹಿಸಬೇಕು. ಇದರಿಂದಾಗಿ ಕುಟುಂಬಕ್ಕೂ ಸಮಾಜಕ್ಕೂ ಉಳಿತಾಗುತ್ತದೆ ಎಂದು ಕರೆನೀಡಿದರು.
ಬೆಳಗ್ಗೆ ಶ್ರೀವ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿ. ಎನ್. ಹೆಗಡೆಯವರು ಶಿಬಿರ ಉದ್ಘಾಟಿಸಿ ದಂಪತಿಗಳಿಗೆ ಶುಭ ಕೋರಿ ಇಂದು ನೀಡುವ ತಜ್ಞರ ಉಪನ್ಯಾಸಗಳ ವಿಷಯವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಈ ಶಿಬಿರ ಸಾರ್ಥಕವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ನಾರಾಯಣ ಭಟ್ ಬಳ್ಳಿ ಅವರು ಸಾಂದರ್ಭಿಕವಾಗಿ ತಮ್ಮ ಅನುಭವದ ಮಾತುಗಳನ್ನು ಆಡಿ ದಂಪತಿಗಳಿಗೆ ಶುಭ ಹಾರೈಸಿದರು.
ಶಿಬಿರದಲ್ಲಿ ಡಾ|| ವಿನಾಯಕ ಹೆಬ್ಬಾರ ಶಿರಸಿ ಭ್ರೂಣಹತ್ಯೆಯ ದುಷ್ಪರಿಣಾಮಗಳು ಹಾಗೂ ಉತ್ತಮ ಸಂತಾನಕ್ಕೆ ಪೂರ್ವ ಸಿದ್ಧತೆಗಳು ಎಂಬ ವಿಷಯದ ಕುರಿತು, ವೇ| ಮೂ| ಸೀತಾರಾಮ್ ಭಟ್ ಮತ್ತಿಗಾರ್ ಅವರು ಉತ್ತಮ ಸಂತಾನಕ್ಕೆ ಶಾಸ್ತ್ರಸೂತ್ರಗಳು ಎನ್ನುವ ವಿಷಯದ ಮೇಲೆ ಹಾಗೂ ವೇದಮೂರ್ತಿ ಅನಂತಮೂರ್ತಿ ಭಟ್ ಯಲೂಗಾರ ಅವರು ಬದುಕಿನ ಧನ್ಯತೆಯ ರಾಜಮಾರ್ಗ ಗೃಹಸ್ಥಾಶ್ರಮ ವಿಷಯದ ಮೇಲೆ ತಮ್ಮ ಮಾರ್ಗದರ್ಶಕ ಉಪನ್ಯಾಸ ನೀಡಿದರು. ಆರಂಭದಲ್ಲಿ ಶಿಬಿರಾರ್ಥಿಗಳಾದ ಶ್ರೀ ಸೀತಾರಾಮ ಭಟ್ ವೇದಘೋಷ ಗೈದರು. ಶ್ರೀಮತಿ ರಮ್ಯಶ್ರೀ ಹೆಗಡೆ ಕಡಬಾಳ ಹಾಗೂ ಶ್ರೀಮತಿ ಸೌಜನ್ಯ ಹೆಗಡೆ ಬಿಳಗಿ ಪ್ರಾರ್ಥನೆ ಹಾಡಿದರು. ಶ್ರೀಮತಿ ಹೇಮಲತಾ ಪ್ರಸಾದ ಹೆಗಡೆ ಕುಂಟೆಮನೆ ವಂದಿಸಿದರು. ಶ್ರೀಮತಿ ಭವ್ಯ ಅಭಿಷೇಕ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕರಾದ ವಿ. ಎಂ. ಹೆಗಡೆಯವರು ಸ್ವಾಗತಿಸಿ ಶಿಬಿರದ ಉದ್ದೇಶವನ್ನು ವಿವರಿಸಿದರು. ಅಲ್ಲದೆ ಶಿಬಿರವನ್ನು ಆದ್ಯಂತವಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಮಾತೃ ಮಂಡಲ ಅಧ್ಯಕ್ಷ ಶ್ರೀಮತಿ ಗೀತಾ ಹೆಗಡೆ ಶೀಗೆಮನೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಜಿ. ವಿ. ಹೆಗಡೆ ಹಾಗೂ ಶ್ರೀ ಸ. ಸ. ಪ್ರತಿಷ್ಠಾನದ ಕಾರ್ಯದರ್ಶಿ ತ್ರಯಂಬಕ ಹೆಗಡೆಯವರು ಉಪಸ್ಥಿತರಿದ್ದರು.