ಬೇಗ ಪ್ರಾರಂಭಿಸಿಕೊಳ್ಳಬೇಕು

posted in: Gurubodhe | 0

ಯಾವುದು ಅತೀ ಅವಶ್ಯವೋ ಮತ್ತು ಯಾವುದಕ್ಕೆ ದೀರ್ಘಕಾಲದ ಹೆಚ್ಚು ಪ್ರಯತ್ನ ಬೇಕೋ ಅದನ್ನು ಬೇಗ ಪ್ರಾರಂಭಿಸಿಕೊಳ್ಳಬೇಕು. ರಸ್ತೆಯ ಪಕ್ಕದಲ್ಲಿ ಬರೆದಿಡುತ್ತಾರೆ – ಬೇಗ ಹೊರಡಿ, ನಿಧಾನವಾಗಿ ಚಲಿಸಿ, ಸುರಕ್ಷಿತವಾಗಿ ತಲುಪಿ. ಮನಸ್ಸಿನ ನಿಗ್ರಹ ಅತೀ ಅವಶ್ಯವಾಗಿರುವುದು ಮತ್ತು ದೀರ್ಘಕಾಲದ ಹೆಚ್ಚಿನ ಪ್ರಯತ್ನದ ಅವಶ್ಯಕತೆಯುಳ್ಳದ್ದು. ಆದ್ದರಿಂದ ಅದನ್ನು ಬೇಗ ಪ್ರಾರಂಭಿಸಿಕೊಂಡು ಸಾವಧಾನತೆಯಿಂದ ಬೆಳಸಿಕೊಂಡು ಹೋಗುವ ಅವಶ್ಯಕತೆ ಇದೆ.

     ಮನಸ್ಸಿನ ನಿಗ್ರಹ ಅತೀ ಅವಶ್ಯಕ ಯಾಕೆಂದರೆ ಐಹಿಕವಾದ ನೆಮ್ಮದಿ ಮತ್ತು ಪಾರಲೋಕಿಕವಾದ ಅಭ್ಯುದಯ ನಿಶ್ರೇಯಸ್ಸುಗಳು ಮನಸ್ಸಿನ ನಿಯಂತ್ರಣದಿಂದಲೇ ಬರುತ್ತವೆ. ಮನಸ್ಸಿನ ನಿಯಂತ್ರಣವನ್ನು ‘ಶಮ’ ಎಂಬುದಾಗಿ ಕರೆಯುತ್ತಾರೆ. ಎಲ್ಲಾ ಧರ್ಮಚರಣೆಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮನಸ್ಸಿನ ನಿಗ್ರಹ ಅಥವಾ ‘ಶಮ’ ಬಂದೇ ಬರುತ್ತದೆ. ಧರ್ಮಾಚರಣೆಯ ಮುಖ್ಯ ಭಾಗ ಮನಸ್ಸಿನ ನಿಯಮನ. ಆದರೆ ಅದರ ಬಗ್ಗೆ ಗಮನಹರಿಸದಿದ್ದರೆ ಅದು ಸ್ವಲ್ಪವಾಗಿ ಬಿಡುತ್ತದೆ. ಗಮನಹರಿಸಿ ಚೆನ್ನಾಗಿ ಮಾಡಿಕೊಂಡರೆ ಹೆಚ್ಚಿನ ಫಲ ಕೊಡುತ್ತದೆ. ಐಹಿಕವಾಗಿ ನೆಮ್ಮದಿ ಕೊಡುವುದಕ್ಕೆ ನಿಗ್ರಹಕ್ಕೆ ಒಳಪಡಿಸದಿರುವ ಮನಸ್ಸು ಮುಖ್ಯ ಕಾರಣ. ಆದ್ದರಿಂದ ಐಹಿಕ ನೆಮ್ಮದಿಗೋಸ್ಕರ ‘ ಶಮ ‘ ಅಗತ್ಯ.

      ಮನಸ್ಸಿನ ನಿಗ್ರಹಕ್ಕೆ ದೀರ್ಘಕಾಲದ ಹೆಚ್ಚಿನ ಪ್ರಯತ್ನ ಬೇಕು.  ಶಂಕರಾಚಾರ್ಯರು ಪ್ರಶ್ನೋತ್ತರಮಾಲಿಕಾದಲ್ಲಿ ಹೇಳಿದ್ದಾರೆ – “ಕಿಂ ದುಷ್ಕರಂ ನರಾಣಾಂ ಯನ್ಮನಸೋ ನಿಗ್ರಹಃ ಸತತಮ್” ಮನುಷ್ಯರಿಗೆ ಅತ್ಯಂತ ಹೆಚ್ಚು ಕಷ್ಟದಿಂದ ಸಾಧಿಸಿಕೊಳ್ಳಬೇಕಾದದ್ದು ಯಾವುದು? ಸತತ ಮನಸ್ಸಿನ ನಿಗ್ರಹವೇ ಅತ್ಯಂತ  ದುಃಸಾಧ್ಯ. “ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ l ಅಂತರಂಗದ ಕಡಲು ಶಾಂತಗೊಳಲಹುದು ||ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |ಸಂತಯಿಸು ಚಿತ್ತವನು – ಮಂಕುತಿಮ್ಮ” ಎಂಬ ಮಾತು ಪ್ರಸಿದ್ಧವಾಗಿದೆ. ಹೆಚ್ಚಿನ ಪ್ರಯತ್ನವೆಂದರೆ ನಿರಂತರ ಶ್ರದ್ಧೆಯಿಂದ ಪ್ರಯತ್ನ. ” ಸತು ದೀರ್ಘಕಾಲ – ನೈರಂತರ್ಯ – ಸತ್ಕಾರಾಸೇವಿತೋ ದೃಢ ಭೂಮಿಃ “

      ನಾವು ದಿನಾಲೂ ನಾಮಸ್ಮರಣೆ- ಮಂತ್ರ  ಉಚ್ಚಾರಣೆಗಳನ್ನು ಮಾಡುತ್ತೇವೆ ಆದರೂ ಅದು ಸಾಕಾಗುತ್ತಿಲ್ಲ. ಯಾಕೆಂದರೆ ನಾವು ಮಾಡುತ್ತಿರುವ ನಾಮಸ್ಮರಣೆ – ಮಂತ್ರ  ಉಚ್ಚಾರಣೆಗಳು ಸರಿಯಾಗಿ ಮನಸ್ಸಿಗೆ ಹಿಡಿಯುತ್ತಿಲ್ಲ. ತಿಂದ ಆಹಾರ ಕೆಲವರಿಗೆ ಮೈಗೆ ಹಿಡಿಯುವುದಿಲ್ಲ. ಕಾರಣ ತಿನ್ನುವಾಗ ಸರಿಯಾಗಿ ಅಗಿಯದೆ ನುಂಗಿದ್ದು. ಅದೇ ರೀತಿ  ಮಂತ್ರ ಉಚ್ಚಾರಣೆಯಲ್ಲಿ ಮನಸ್ಸಿನಿಂದ ಮಂತ್ರದ ಪ್ರತೀ ಅಕ್ಷರ, ಪ್ರತೀ ಶಬ್ದಗಳನ್ನು, ಆಹಾರ ಅಗಿದಂತೆ, ಮನನ ಮಾಡುತ್ತಾ ಹೇಳಬೇಕು. ಹಾಗೆ ಹೇಳದೆ ಇದ್ದಿದ್ದರಿಂದ ಮನಸ್ಸಿನ ನಿಗ್ರಹದ ಸಾಧನೆ ಆಗುತ್ತಿಲ್ಲ. ನಾಮ ಸಂಕೀರ್ತನೆಗಳಲ್ಲೂ ಇದೇ ಸ್ಥಿತಿ. ಸಂಗೀತದ ರಾಗ – ತಾಳಗಳ ಮನರಂಜನೆಯಲ್ಲಿಯೇ ನಿಂತು ಹೋಗಿರುವ ಮನಸ್ಸು ದೇವರ ಭಕ್ತಿ ಪೂರ್ವಕ ಸ್ಮರಣೆಯಲ್ಲಿ ಹಿಂದೆ ಬೀಳುತ್ತಿದೆ. ಊಟ ಮಾಡುವಾಗ ಟಿ.ವಿ.  ನೋಡುತ್ತಿರುವುದರಿಂದ ತಿನ್ನುವ ಆಹಾರದ ಕಡೆ ಗಮನ ಇಲ್ಲದಿದ್ದರಿಂದ ತಿಂದ ಆಹಾರ ಮೈಗೆ ಹಿಡಿಯದೆ ಇರುವಂತೆ, ಭಜನೆಯ ಸತ್ವ ಮನಸ್ಸಿಗೆ ಹಿಡಿಯುತ್ತಿಲ್ಲ. ಅಂದರೆ ಭಜನೆ ಮನಸ್ಸಿನ ನಿಗ್ರಹದ ಸಾಧನೆಗೆ ಸಹಾಯವಾಗುತ್ತಿಲ್ಲ.

      ಈ ರೀತಿಯ ಅನವಧಾನಕ್ಕೆ ಅವಕಾಶವಾಗದಂತೆ ಮಂತ್ರೋಚ್ಚಾರಣೆ – ನಾಮಸಂಕೀರ್ತನೆಗಳನ್ನು ಮಾಡಿದರೆ ಖಂಡಿತವಾಗಿಯೂ ಮನಸ್ಸಿನ ನಿಗ್ರಹ ನಡೆಯುತ್ತದೆ. ಮನಸ್ಸಿನ ನಿಗ್ರಹ ಮತ್ತೆ ಮತ್ತೆ ಆದಾಗ ಆ ಸಂಸ್ಕಾರ ಬೆಳೆದು ನಮ್ಮನ್ನು ಉತ್ತಮಗತಿಗೆ ಒಯ್ಯುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ