ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ರೀತಿಯ ಸುಡುಬಿಸಿಲಿನಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಮನೆ ಒಳಗಿರಲಿ ಹೊರಗಿರಲಿ, ಬೆವರುವಿಕೆಯಿಂದಾಗಿ ದೇಹದಲ್ಲಿ ನೀರಿನ ನಷ್ಟವಾಗುವುದು. ದೇಹಕ್ಕೆ ನೀರಿನ ಅಗತ್ಯತೆ ಇದ್ದು ಸಾಕಷ್ಟು ನೀರು ಸಿಗದೇ ಇದ್ದಾಗ ಡಿಹೈಡ್ರೇಷನ್ ಆಗುವುದು. ಸುಸ್ತು, ಅಜೀರ್ಣ, ತಲೆ ಸುತ್ತುವುದು, ಹಸಿವಾಗದಿರುವುದು ಇವೆಲ್ಲವೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ತೊಂದರೆಗಳು. ಡಿಹೈಡ್ರೇಷನ್ ಅಧಿಕವಾದಾಗ ಕಿಡ್ನಿ ಸ್ಟೋನ್, ಸ್ಟ್ರೋಕ್ ನಂತಹ ತೊಂದರೆಗಳು ಆಗುವ ಸಾಧ್ಯತೆ ಹೆಚ್ಚು.
ಬೇಸಿಗೆಯಲ್ಲಿ ತಂಪು ಪಾನೀಯಗಳಾದ ಬಾಟಲ್ ಗಳಲ್ಲಿ ಬರುವ ಜ್ಯೂಸ್ ಗಳನ್ನು ಮತ್ತು ಸೋಡಾ ಅಥವಾ ಕಾರ್ಬೋನೇಟೆಡ್ ಪಾನೀಯ ಗಳನ್ನು ಹೆಚ್ಚಿನ ಜನ ಸೇವಿಸುತ್ತಾರೆ. ಅದರಲ್ಲೂ ಮಕ್ಕಳಂತೂ ಅವುಗಳ ಬಣ್ಣಕ್ಕೆ ಆಕರ್ಷಿತರಾಗುತ್ತಾರೆ.
ಇತ್ತೀಚೆಗೆ ಟಿವಿ ಜಾಹೀರಾತುಗಳನ್ನು ನೋಡಿ ಕೃತಕ ಬಣ್ಣ ಮತ್ತು ರುಚಿಗಳನ್ನು ಸೇರಿಸಿದಂತಹ ಜ್ಯೂಸ್ ಗಳು ಅನೇಕ ಮನೆಗಳ ಫ್ರಿಡ್ಜ್ ನ್ನು ಸೇರುತ್ತಿವೆ. ಎಷ್ಟೋ ಜನ ಪೆಪ್ಸಿ, ಕೋಕ್ ನಂತಹವುಗಳು ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲ, ಇತರೆ ಜ್ಯೂಸ್ ಗಳನ್ನು ಹಣ್ಣುಗಳಿಂದಲೇ ತಯಾರಿಸುತ್ತಾರೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ
ಇವುಗಳಲ್ಲಿ ಯಾವುದೇ ಹಣ್ಣಿನ ರಸಗಳಿರುವುದಿಲ್ಲ. ಬದಲಾಗಿ ಅತಿಯಾದ ಸಕ್ಕರೆ, ಮತ್ತು ಕೃತಕ ಬಣ್ಣ ಹಾಗೂ ಇತರೆ ರಾಸಾಯನಿಕಗಳನ್ನು ಹಂದಿರುತ್ತದೆ. ಇವುಗಳೆಲ್ಲವೂ ಕೂಡ ದೇಹಕ್ಕೆ ಹಾನಿಕಾರಕ ವಾದುದು. ಇವುಗಳನ್ನೆಲ್ಲ ಅರಿತುಕೊಂಡು ಅಂತಹ ರಾಸಾಯನಿಕಯುಕ್ತ ಪಾನೀಯಗಳಿಂದ ದೂರವಿರುವುದು ಒಳಿತು.
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಮೊದಲು ಬೇಕಾದುದು ನೀರು. ದಿನಕ್ಕೆ ಕನಿಷ್ಟ ೨-೩ ಲೀಟರ್ ನೀರು ಅಗತ್ಯ ಇರುತ್ತದೆ. ಒಂದುವೇಳೆ ಅತಿಯಾಗಿ ಬೆವರುವರು ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವವರಾದರೆ ೪-೫ ಲೀ ಅಥವಾ ಹೆಚ್ಚಿನ ನೀರನ್ನು ಕುಡಿಯಬೇಕು.
ಇನ್ನು ಕೆಲವರು ಕೇವಲ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ. ಅಂತವರು ಎಳನೀರು, ಅಥವಾ ನೀರಿನಂಶ ಹೆಚ್ಚಿರುವ ಕರಬೂಜ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಸಬಹುದು.
ಸಬ್ಜಾ ಸೀಡ್ಸ್ ಅಥವಾ ಕಾಮಕಸ್ತೂರಿ ಬೀಜವನ್ನು ನೀರಿಗೆ ಸೇರಿಸಿ ಆಗಾಗ ಕುಡಿಯುವುದರಿಂದ ನೀರಿನಂಶ ಹೆಚ್ಚುಹೊತ್ತು ಇರುವಂತೆ ನೋಡಿಕೊಂಡು ದೇಹವನ್ನು ತಂಪಾಗಿರಿಸುತ್ತದೆ.
ನಿಂಬೆ ಹಣ್ಣಿನ ಪಾನಕ, ರಾಗಿ ಹಾಲು, ರಾಗಿ ಗಂಜಿ, ಬಾರ್ಲಿ ಗಂಜಿ, ಬೆಣ್ಣೆ ತೆಗೆದ ಮಜ್ಜಿಗೆ, ಬೀಟ್ರೂಟ್ ಜ್ಯೂಸ್, ಕ್ಯಾರೆಟ್ ಜ್ಯೂಸ್, ಒಂದೆಲಗದ ಜ್ಯೂಸ್ ಇವುಗಳನ್ನು ಸುಲಭವಾಗಿ ಮತ್ತು ರುಚಿಕರವಾಗಿ ಮನೆಯಲ್ಲಿಯೇ ತಯಾರಿಸಬಹುದು. ಬಾಯಾರಿಕೆ ನೀಗಿಸುವುದರ ಜೊತೆಗೆ ಇತರೆ ಪೋಷಕಾಂಶಗಳನ್ನು ಒದಗಿಸುತ್ತವೆ. (ಅತಿಯಾದ ಸಕ್ಕರೆ ಮತ್ತು ಉಪ್ಪು ಬಳಸುವುದರಿಂದ ಬಾಯಾರಿಕೆ ಇನ್ನಷ್ಟು ಹೆಚ್ಚಾಗುವುದು)
ಬೇಸಿಗೆಯಲ್ಲಿ ಆದಷ್ಟು ತಾಜಾ ತಯಾರಿಸಿದ ಆಹಾರ, ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ. ಅತಿಯಾದ ಖಾರ, ಮಸಾಲೆಭರಿತ, ಎಣ್ಣೆಯಲ್ಲಿ ಕರಿದಂತಹ ಆಹಾರ, ಪದೇ ಪದೇ ಟೀ, ಕಾಫಿಯನ್ನು ಕುಡಿಯುವುದು ದೇಹದ ಉಷ್ಣತೆಯನ್ನು ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಆದ್ದರಿಂದ ದೇಹಕ್ಕೆ ಹೊಂದುವಂತಹ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಿ ಬೇಸಿಗೆಯ ಧಗೆಯಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳೋಣ..
– ಪೂರ್ಣಿಮಾ ಭಟ್ಟ
ಡಯಟೀಷಿಯನ್