ಸೋಮಧಾಪುರ,ಸುಧಾಪುರ,ಅಮೃತಪುರ,ಸೋವದೆ,ಸ್ವಾದಿ,ಸೋದೆ ಎಂಬಿತ್ಯಾದಿ ಹೆಸರುಗಳಿಂದ ಇತಿಹಾಸ ಕಾಲದಲ್ಲಿ ಗುರುತಿಸಿಕೊಂಡ ಈಗಿನ ಸೋಂದಾ ಕ್ಷೇತ್ರ ಆಧ್ಯಾತ್ಮಿಕವಾಗಿ,ಧಾರ್ಮಿಕವಾಗಿಯೂ ಪುಣ್ಯಭೂಮಿಯಾಗಿದೆ.ಸೋದೆಅರಸರು ತಮ್ಮ ಕಾಲಾವಧಿಯಲ್ಲಿ ಆಡಳಿತಕ್ಕೆ ಸೂಕ್ತ ಕ್ಷೇತ್ರವೆಂದು ಭಾವಿಸಿ ಇದನ್ನೇ ತಮ್ಮ ರಾಜಧಾನಿಯಾಗಿಸುವ ಹಿಂದೆಯೂ ಈ ಕ್ಷೇತ್ರ ಹೊಂದಿದ ಆಧ್ಯಾತ್ಮಿಕ ಹಿನ್ನೆಲೆಯೇ ಪ್ರಮುಖ ಕಾರಣವಾಗಿತ್ತು. ಕ್ರಿ.ಶ ನಾಲ್ಕನೇ ಶತಮಾನಕ್ಕೂ ಮೊದಲೇ ಸೋಂದಾ ಕ್ಷೇತ್ರದಲ್ಲಿ ಸರ್ವಸಂಗಪರಿತ್ಯಾಗಿಗಳು ತಮ್ಮ ಯೌಗಿಕ ಸಿದ್ಧಿಗಾಗಿ ಈ ಕ್ಷೇತ್ರದಲ್ಲಿನ ಶಾಲ್ಮಲಾ ನದಿಯ ಪ್ರಶಾಂತ ಪರಿಸರವನ್ನೇ ಆಯ್ಕೆಮಾಡಿಕೊಂಡಿದ್ದರು.ಶಾಲ್ಮಲೆ ಇಲ್ಲಿ ತನ್ನ ಹರಿವಿಗೆ ರೌದ್ರತೆಯ ಲಕ್ಷಣವನ್ನು ನೀಡದೆ ಶಾಂತತೆಯ ಸ್ವರೂಪವನ್ನು ನೀಡಿ ನಿರ್ಮಲ ಸ್ವರೂಪಿಣಿಯಾಗಿ ಯೋಗಿಗಳಿಗೆ ತಮ್ಮ ತಪಸ್ಸಿಗೆ,ಧಾರ್ಮಿಕ ಆಚರಣೆಗೆ ಅನುಕೂಲವಾಗುವ ತೀರ್ಥಸ್ವರೂಪಿಣಿಯಾಗಿಯೂ ಶತಶತಮಾನಗಳಿಂದ ಹರಿಯುತ್ತಿದ್ದಾಳೆ.ಇಂತಹ ಪಾವನವಾಹಿನಿಯ ದಂಡೆಯ ಮೇಲಿನ ಪುಣ್ಯ ಸ್ಥಳವೇ ಸೋಂದಾದ ” ಭೀಮನ ಪಾದ” ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣವಾದದ್ದು ಇಲ್ಲಿನ ಬಂಡೆಯ ಮೇಲೆ ಕೆತ್ತಲಾದ ಪ್ರಾಚೀನ ಪಾದಗಳಿಂದ.ಕ್ರಿ.ಶ ೧೪ ನೇ ಶತಮಾನದಲ್ಲಿ ಶ್ರೀ ಸ್ವರ್ಣವಲ್ಲೀ ಮಠ ಇಲ್ಲಿಯೇ ಇತ್ತು.ಇಲ್ಲಿಂದ ಶ್ರೀಮಠ ಈಗಿರುವ ಸ್ಥಳಕ್ಕೆ ಸ್ಥಳಾಂತರವಾದದ್ದು ಕ್ರಿ.ಶ ೧೫೫೫ ರಲ್ಲಿ.ಆಗ ಸೋದೆ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಇಮ್ಮಡಿ ಅರಸಪ್ಪ ಮಹಾಪ್ರಭುಗಳು ಈಗಿರುವ ಸ್ಥಳದಲ್ಲಿ ಶ್ರೀಮಠಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ” ಸ್ವರ್ಣವಲ್ಲೀ ” ಎಂಬ ನೂತನ ಹೆಸರನ್ನು ನೀಡಿದ ಕುರಿತು ಶಾಸನಾಧಾರಗಳಿವೆ.ಅದಕ್ಕೂ ಪೂರ್ವದಲ್ಲಿ ಶ್ರೀಮಠ ” ಹೊನ್ನಳ್ಳಿ” ಮಠವೆಂದು ಕರೆಯಲ್ಪಡುತ್ತಿತ್ತು.ಅರಸಪ್ಪ ಮಹಾಪ್ರಭುಗಳಿಗೆ ಮೊದಲ ಮೂರೂ ಸಂತಾನಗಳೂ ಪುತ್ರಿಯರ ಸ್ವರೂಪದಲ್ಲಿ ಪ್ರಾಪ್ತಿಯಾಗಿದ್ದವು. ( ವೀರಮ್ಮಾಜಿ,ಲಕ್ಷ್ಮೀ,ಅರಸಾದೇವಿಯರು) ಹೀಗಾಗಿ ಪುತ್ರ ಸಂತಾನವಿಲ್ಲದೆ,ಮುಂದಿನಉತ್ತರಾಧಿಕಾರಿಯಿಲ್ಲದೆ ಪರಿತಪಿಸುತ್ತಿದ್ದ ಅರಸಪ್ಪಪ್ರಭುವಿಗೆ ಅನುಗ್ರಹಸ್ವರೂಪಿಯಾಗಿ ಗೋಚರಿಸಿದವರೇ ” ಭೀಮನಪಾದ” ದಲ್ಲಿ ಸದಾ ತಪಸ್ಸಿನಲ್ಲಿಯೇ ಇರುತ್ತಿದ್ದ ಈಗಿನ ಸ್ವರ್ಣವಲ್ಲೀ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಹಿರೇಚಂದ್ರಶೇಖರ ಸರಸ್ವತೀ ಮಹಾಸ್ವಾಮಿಗಳು.ಇವರು ಆ ಕಾಲದಲ್ಲಿ ತಮ್ಮ ತಪಸ್ಸು,ಅನುಷ್ಠಾನಗಳಿಂದಲೇ ಹೆಸರಾಗಿದ್ದ ಮಹಾನ್ ಯತಿಗಳು.ಇವರ ಬಳಿ ಬಂದ ಅರಸಪ್ಪ ಪ್ರಭು ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಪೂಜ್ಯ ಯತಿಗಳು ಭಗವಂತನನ್ನು ಪ್ರಾರ್ಥಿಸಿ ಭೀಮನ ಪಾದ ಕ್ಷೇತ್ರದಲ್ಲಿ ಶಿವನ ಲಿಂಗವೊಂದನ್ನು ಸ್ಥಾಪಿಸಲು ಸೂಚನೆ ನೀಡಿದರು.ತತ್ಪರಿಣಾಮ ಒಂದು ವರ್ಷದೊಳಗೆ ಅರಸನಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಆತನಿಗೆ ” ಭೈರವ” ಎಂಬ ಹೆಸರನ್ನಿಡಲಾಯಿತು.ಮುಂದೆ ಆತನೇ ” ಭೈರವರಸ”ನೆಂದು ಗುರುತಿಸಿಕೊಂಡ.ಮುಂದೆ ಇದೇ ಹರಕೆ ಪರಂಪರೆ ಮುಂದುವರೆದು ಶಾಲ್ಮಲೆಯ ತಟದಲ್ಲಿ ತಮ್ಮಇಷ್ಟಾರ್ಥಗಳ ನೆರವೇರಿಕೆಗಾಗಿ ಲಿಂಗಗಳನ್ನಕೆತ್ತಿಸಿಕೊಡುವ ಹರಕೆಯ ಪರಂಪರೆ ಬೆಳೆದದ್ದು ಇತಿಹಾಸ.ಇದಕ್ಕೆಲ ಕಾರಣರಾದವರು ಶ್ರೀ ಹಿರೇಚಂದ್ರಶೇಖರ ಸರಸ್ವತೀ ಮಹಾಸ್ವಾಮಿಗಳು.ಇವರ ನಂತರ ಮಠದ ಪೀಠವನ್ನಲಂಕರಿಸಿದ ಎಲ್ಲ ಯತಿಗಳೂ ಇದೇ ತಪಸ್ಸನ್ನು ಈ ಕ್ಷೇತ್ರದಲ್ಲಿ ಆಚರಿಸುತ್ತಾ ಇದನ್ನೊಂದು ಪರಮಪಾವನ ಪುಣ್ಯ ಭೂಮಿಯನ್ನಾಗಿಸಿದರು.ಈ ಭಿಮನಪಾದ ಕ್ಷೇತ್ರದಲ್ಲಿ ಅನೇಕ ರೀತಿಯ ವಿಶಿಷ್ಟ ಶಿಲ್ಪಗಳು,ಲಿಂಗಗಳು ಇವೆ.ಅವುಗಳಲ್ಲಿ ಮುಖ್ಯವಾಗಿ ಇಲ್ಲಿನ ಒಂದು ಬಂಡೆಯ ಮೇಲಿರುವ ಕದಂಬ ಪೇಟಿಕಾಶಿರದ ಬ್ರಾಹ್ಮಿ ಸಂಸ್ಕೃತ ಬರಹ ಹಾಗೂ ಅದರ ಬದಿಯಲ್ಲಿರುವ ಮಂಡಲಾಕಾರದ ಚಿತ್ರ ಸಂಕೇತಗಳು ಸ್ವಾರಸ್ಯಕರವಾಗಿವೆ.ಇದೇ ಪ್ರದೇಶದಲ್ಲಿ ಕಲ್ಯಾಣ ಚಾಳುಕ್ಯ ಕಾಲದ ( ಕ್ರಿ.ಶ ೧೧-೧೩ ನೇ ಶತಮಾನ) ಶಿಲ್ಪಗಳೂ ಇವೆ.ಇನ್ನೊಂದು ಬಂಡೆಯ ಮೇಲೆ ಶಾಸನವೊಂದಿದ್ದು ಇದು ಕಲ್ಯಾಣ ಚಾಳುಕ್ಯರ ತ್ರಿಭುವನಮಲ್ಲನ ಕಾಲದ್ದಾಗಿದೆ.ಇದರ ಪ್ರಕಾರ ” ಪ್ರಕಾಶತೀರ್ಥರ ಅನುಯಾಯಿಯಾದ ರಾಜೇಂದ್ರನಾಥನು ಕೇಶವಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದನು ಎಂಬುದಾಗಿದೆ.ಹಾಗು ಅದರ ಪೂಜೆಗಾಗಿ ಗ್ರಾಮವೊಂದನ್ನು ದತ್ತಿಬಿಟ್ಟ ಉಲ್ಲೇಖವಿದೆ.ಈ ಕಾಲಘಟ್ಟದ ಮತ್ತೊಂದು ಬಂಡೆಗಲ್ಲು ಶಾಸನವು ಲಿಂಗಪೂಜೆ ಮತ್ತು ತೀರ್ಥಸ್ನಾನದ ಉಲ್ಲೇಖವನ್ನು ಒಳಗೊಂಡಿದೆ.ಅದರ ಮೇಲೆ ಕೆತ್ತಿರುವ ಐದುಲಿಂಗಗಳ ರೇಖಾಚಿತ್ರ ಸ್ವಾರಸ್ಯಕರವಾಗಿದೆ.ಈ ಬಂಡೆಯ ಸಮೀಪ ಒಂದು ಭಗ್ನ ಶಿವಲಿಂಗವಿದ್ದು ಇದನ್ನು ಷಟ್ಚಕ್ರದ ಸಂಕೇತದಲ್ಲಿ ಪದ್ಮಾಕೃತಿಯಿಂದ ಮೂಡಿಬಂದಂತೆ ಕೆತ್ತಲಾಗಿದ್ದು ಶಿವಲಿಂಗದ ಶಿರೋಭಾಗ ಮಾತ್ರ ಭಗ್ನವಾಗಿದೆ.ಹೊರವಲಯದಿಂದ ೪-೬-೧೦-೧೨-೧೬-೨ ಪದ್ಮಗಳನ್ನು ಕ್ರಮವಾಗಿ ಕೆತ್ತಿದ್ದು ಇವುಗಳ ಮಧ್ಯದಲ್ಲಿ ಶಿವಲಿಂಗವಿದೆ.ಇದು ಅತ್ಯಂತ ಅಪರೂಪದಲ್ಲಿ ಅಪರೂಪವಾದ ಶಿವ ಸಂಬಂಧೀ ಕೆತ್ತನೆಯಾಗಿದ್ದು ಉನ್ನತ ಮಟ್ಟದ ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತದೆ.ಆಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಯಲ್ಲಿ ಯಾರು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೋ ಅಂತವರಲ್ಲಿ ಏಳು ಚಕ್ರಗಳು ಹೆಚ್ಚು ಶಕ್ತಿಯುತವಾಗಿರುತ್ತದೆ ಎನ್ನಲಾಗುತ್ತದೆ. ಮನುಷ್ಯನ ದೇಹದಲ್ಲಿ ಪವಿತ್ರವಾದ ಆತ್ಮವಿರುತ್ತದೆ, ಆತ್ಮದ ಸುತ್ತಲೂ ವಿಶಿಷ್ಟ ಶಕ್ತಿಯ ಪ್ರಭೆ ಆವರಿಸಿರುತ್ತದೆ. ಅಂತೆಯೇ ದೇಹದಲ್ಲಿ ಏಳು ಪ್ರಮುಖ ಚಕ್ರಗಳಿರುತ್ತವೆ. ಅವೆಲ್ಲವೂ ನಮ್ಮಲ್ಲಿರುವ ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಯಾರು ಸಕಾರಾತ್ಮಕ ರೀತಿಯ ವರ್ತನೆಯನ್ನು ಹೊಂದಿರುತ್ತಾರೋ ಆಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಂತವರಲ್ಲಿ ಈ ಏಳು ಚಕ್ರಗಳು ಹೆಚ್ಚು ಶಕ್ತಿಯುತವಾಗಿರುತ್ತದೆ ಎನ್ನಲಾಗುತ್ತದೆ. ನಮ್ಮ ದೇಹದಲ್ಲಿನ ಒಂದು ಲಕ್ಷದ ಎಪ್ಪತ್ತೆರಡು ಸಾವಿರ ನಾಡಿಗಳು ಆಧ್ಯಾತ್ಮಿಕ ಮತ್ತು ಜೀವಶಕ್ತಿಯ ವಾಹಕಗಳಾಗಿವೆ. ಅವುಗಳಲ್ಲಿ 109 ಮುಖ್ಯ ನರ ಕೇಂದ್ರಗಳು, ಆ 109 ನರ ಕೇಂದ್ರಗಳಲ್ಲಿ ಒಂಬತ್ತು ಅತ್ಯಂತ ಪ್ರಮುಖವಾದ ಕೇಂದ್ರಗಳು ಒಂಬತ್ತರಲ್ಲಿ ಈ ಏಳು ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿವೆ. ಈ ನರಕೇಂದ್ರಗಳು ಅಥವಾ ಚಕ್ರಗಳು ಪ್ರಜ್ಞೆ ಭಾವನೆ ಸಂವೇದನೆ ಮತ್ತು ಅನುಭವಗಳಂತಹ ಸಂಗತಿಗಳನ್ನು ಒಳಗೊಂಡಿದೆ. ಈ ಚಕ್ರಗಳನ್ನು ವಿಶೇಷವಾಗಿ ಈ ಹೆಸರುಗಳಿಂದ ಕರೆಯಲಾಗುವುದು. ಮೊದಲನೇಯದಾಗಿ ಚತುರ್ದಳ ಇದನ್ನು ಮೂಲಾಧಾರ ಚಕ್ರ ಎನ್ನಲಾಗುತ್ತದೆ. ಇದು ಬೆನ್ನು ಮೂಳೆಯ ಮಧ್ಯದಲ್ಲಿರುವ ಚಕ್ರ, ಮೂಲಾಧಾರ ಚಕ್ರವೂ ಸಕ್ರಿಯಗೊಂಡಾಗ ವ್ಯಕ್ತಿ ತನ್ನ ಜೀವನದಲ್ಲಿ ಹೆಚ್ಚು ಉತ್ಸಾಹವನ್ನು ಅನುಭವಿಸುತ್ತಾನೆ. ಇದು ಭೂಮಿಯ ಅಂಶದೊಂದಿಗೆ ಸಂಬಂಧಿಸಿದೆ. ಎರಡನೆಯದಾಗಿ ಷಟ್ದಳ, ಇದನ್ನು ಸ್ವಾಧಿಷ್ಟಾನ ಚಕ್ರವೆಂದು ಕರೆಯಲಾಗುತ್ತದೆ. ಇದು ಮಾನವನ ದೇಹದಲ್ಲಿ ಇರುವ ಎರಡನೇ ಪ್ರಮುಖ ಚಕ್ರ ಈ ಚಕ್ರವು ಸೃಜನಶೀಲತೆ, ಅಧಿಕ ಚಟುವಟಿಕೆ ಮತ್ತು ಲೌಕಿಕತೆಗೆ ಸಂಬಂಧಿಸಿದೆ. ಈ ಚಕ್ರವು ನೀರಿನೊಂದಿಗೆ ಸಂಬಂಧಿಸಿದೆ.ಮೂರನೇಯದಾಗಿ ದಶದಳ ಇದನ್ನು ಮಣಿಪೂರ ಚಕ್ರ ಎನ್ನಲಾಗುತ್ತದೆ. ಇದು ಪ್ರಮುಖವಾಗಿ ನಾಲ್ಕು ರೂಪದಲ್ಲಿ ಅಥವಾ ನಾಲ್ಕು ಭಾವನೆಗಳಲ್ಲಿ ಪ್ರಕಟವಾಗುತ್ತದೆ.ಅಸೂಯೆ,ಔದಾರ್ಯ, ಸಂತೋಷ ಮತ್ತು ದುರಾಸೆ. ಈಚಕ್ರವು ಬೆಂಕಿಯೊಂದಿಗೆ ಸಂಬಂಧಿಸಿದೆ. ನಾಲ್ಕನೆಯದಾಗಿ ದ್ವಾದಶದಳ. ಇದನ್ನು ಅನಾಹತ ಚಕ್ರ ಎಂಬುದಾಗಿ ಕರೆಯಲಾಗುತ್ತದೆ. ಇದು ಭಯ, ಪ್ರೀತಿ, ದ್ವೇಷವನ್ನು ಪ್ರತಿನಿಧಿಸುತ್ತದೆ. ಐದನೆಯದಾಗಿ ಷೋಡಶದಳ ಅಥವಾ ವಿಶುದ್ಧಿ ಚಕ್ರ. ಇದು ಗಂಟಲಿನ ಭಾಗದಲ್ಲಿನ ಚಕ್ರ. ಇದು ಅನುಭವಿಸುವ ಸಂವೇದನೆಯನ್ನು ಪ್ರತಿಬಿಂಬಿಸುತ್ತದೆ. ಆರನೆಯದಾಗಿ ದ್ವಿದಳ ಚಕ್ರ ಅಥವಾ ಆಜ್ಞಾಚಕ್ರ. ಇದು ಹಣೆಯ ಭಾಗದಲ್ಲಿ ಬರುತ್ತದೆ. ಜ್ಞಾನ ಮತ್ತು ಅರಿವು ಎಂಬುದು ಇದರಿಂದ ಚಿತ್ರಿಸಲ್ಪಟ್ಟಿದೆ.ಕೊನೆಯದಾಗಿ ಸಹಸ್ರಾರ ಚಕ್ರ ಇದು ಪರಮಾತ್ಮನ ಸ್ಥಾನ ಇಲ್ಲಿ ಲಿಂಗವನ್ನು ಕೆತ್ತಲಾಗಿದೆ. ಅತಿಂದ್ರಿಯ ಎನ್ನುವುದು ವ್ಯಕ್ತಿಗೆ ಇರುವ ಮೂರನೇ ಕಣ್ಣು ಎಂದು ಹೇಳಲಾಗುತ್ತದೆ. ಶಿವನು ಮೂರನೇ ಕಣ್ಣನ್ನು ಹೊಂದಿರುವುದು ಹಾಗೂ ಕೋಪ ಬಂದಾಗ ಆ ಕಣ್ಣು ತೆರೆದು ಕೋಪಕ್ಕೆ ಕಾರಣವಾಗುವ ವಸ್ತು ಸುಡುವುದು ಎಂದು ಹೇಳಲಾಗುವುದು. ಈ ಚಕ್ರವು ಕೋಪ,ಜ್ಞಾನ ಮತ್ತು ಜಾಗೃತಿಯನ್ನು ಪ್ರತಿನಿಧಿಸುತ್ತದೆ.ಭೀಮನಪಾದದಲ್ಲಿ ಕೆತ್ತಲಾದ ಈ ವಿಶೇಷ ಶಿಲ್ಪವು ಒಟ್ಟಾರೆಯಾಗಿ ಸಾಧಕನಾದವನು ಮೂಲದಿಂದಲೇ ಸಾಧನೆಯನ್ನು ಮಾಡುತ್ತಾ ಸಿದ್ಧಿಯನ್ನು ಪಡೆಯಬೇಕೆಂಬ ಉನ್ನತ ಸಂದೇಶವನ್ನು ಸಾರುತ್ತಿದೆ.ಸೋಮಸೂತ್ರವು ಶಕ್ತಿಸ್ವರೂಪವೂ ಆಗಿದ್ದು ಶಕ್ತಿಯು ಜ್ಞಾನಚಕ್ರವನ್ನು ದಾಟಿಯೇ ಸಾಗುತ್ತದೆ .ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಒಂದು ಕಾಲದಲ್ಲಿ ಅಪಾರವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಳಹದಿಯ ತಪಸ್ಸಿನ ಕ್ಷೇತ್ರವಾಗಿತ್ತೆಂಬುದು ಇದರಿಂದ ತಿಳಿದುಬರುತ್ತದೆ.ಇದೇ ಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಬಂಡೆಯ ಅಂಚಿನಲ್ಲಿ ಜಟಾಧಾರಿಯಾದ ಶಿವಯೋಗಿ ತಪೋನಿರತನಾಗಿರುವ ಶಿಲ್ಪವಿದೆ.ಪದ್ಮಾಸನದಲ್ಲಿ ಕುಳಿತ ಈ ಯೋಗಿ ರುದ್ರಾಕ್ಷಿ,ಬಲಕ್ಕೆ ಕಮಂಡಲು,ಯಜ್ಞೋಪವಿತ ಧರಿಸಿದ್ದು ಕಂಡುಬರುತ್ತದೆ.ಎಡಭಾಗದಲ್ಲಿ ದಂಡವೊಂದನ್ನು ಪ್ರತ್ಯೇಕವಾಗಿ ರೇಖಿಸಿದೆ.ಈ ಯೋಗಿಯ ಮುಖದಲ್ಲಿ ಯೌಗಿಕ ತೇಜಸ್ಸು ಎದ್ದುಕಾಣುತ್ತದೆ.ಇದನ್ನು ಶಿಲ್ಪಶೈಲಿಯ ಆಧಾರದ ಮೇಲೆ ಕಲ್ಯಾಣ ಚಾಳುಕ್ಯರ ಕಾಲದ್ದೆಂದು ( ಕ್ರಿ.ಶ ೧೧-೧೩ ನೇ ಶತಮಾನ) ಹೇಳಬಹುದು. ಅದೇ ರೀತಿ ಇಲ್ಲಿ ಇನ್ನೂ ಕೆಲವು ಶಿಲ್ಪಗಳಿದ್ದು ಶಿವಲಿಂಗ,ಮಂಡಲ,ತಾಡೋಲೆ ಕಟ್ಟುಗಳನ್ನು ಕತ್ತರಿಯಾಗಿಟ್ಟಂತೆ ಇಟ್ಟ ಶಿಲ್ಪ,ಹಸು,ಕರು,ನಂದಿ ಮುಂತಾದ ಶಿಲ್ಪಗಳನ್ನೂ ಕಾಣಬಹುದು.ಅದೇ ರೀತಿ ಕನ್ನಡ,ತಿಗಳಾರಿ,ದೇವನಾಗರಿ ಲಿಪಿಯ ಹರಕೆಯ ಬರಹಗಳನ್ನೂ ಕಾಣಬಹುದು.ಇವೆಲ್ಲ ಸೋದೆ ಅರಸರ ಕಾಲದ ಮತ್ತು ನಂತರದ ಕಾಲದ್ದಾಗಿವೆ.ಒಟ್ಟಾರೆಯಾಗಿ ಇದರಿಂದ ತಿಳಿದು ಬರುವ ಸಂಗತಿ ಎಂದರೆ ಸಾವಿರಾರು ವರ್ಷಗಳಿಂದ ಈ ಪ್ರದೇಶ ಯೋಗಿಗಳ ತಪಸ್ಸಿಗೆ ಬಳಕೆಯಾಗುತ್ತಿದ್ದ ಪುಣ್ಯ ಭೂಮಿಯಾಗಿದೆ.ಮುಂದೆ ಶ್ರೀ ಸ್ವರ್ಣವಲ್ಲಿ ಯತಿ ಪರಂಪರೆ ಈ ಪುಣ್ಯಪ್ರಭಾವವನ್ನು ತಮ್ಮಅನೂಚಾನ,ಅವಿಚ್ಛಿನ್ನ ತಪಸ್ಸಿನಿಂದ ಹೆಚ್ಚಿಸಿದ್ದು ಐತಿಹಾಸಿಕ ಸತ್ಯವಾಗಿದೆ.ಇಂದಿಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಈ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಪೂಜೆಯನ್ನು ಆಚರಿಸುತ್ತಾ ತಮ್ಮಪೂರ್ವಪೀಠಾಧಿಪತಿಗಳ ಅನುಷ್ಠಾನ ಪರಂಪರೆಯನ್ನು ಮುಂದುವರೆಸಿದ್ದಾರೆ.
–ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ
ಇತಿಹಾಸಕಾರರು, ಸದಸ್ಯರು,ನ್ಯಾಷನಲ್ ಫೆಲೊಶಿಪ್ ಕಮಿಟಿ,ದೆಹಲಿ