ಮತದಾನಿಗಳ ಸಂಖ್ಯೆ ಕಡಿಮೆಯಾದರೆ ಅಪಾಯ

posted in: Gurubodhe | 0

ಉತ್ತರ ಭಾಗದಲ್ಲಿ ಲೋಕಸಭೆಯ ಚುನಾವಣೆಯ ಪ್ರಥಮ ಹಂತದ  ಮತದಾನ ನಡೆದು  ಶೇಖಡಾ ೫೨ ರಷ್ಟು ಜನ ಮತದಾನ ಮಾಡಿರುವುದಾಗಿ ವರದಿಯಾಗಿದೆ. ಮತದಾನ ಮಾಡುತ್ತಿರುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಇದು ಶೋಚನೀಯ ಸಂಗತಿ ಪ್ರಜಾಪ್ರಭುತ್ವವೆಂಬ ವ್ಯವಸ್ಥೆಯಲ್ಲಿ ಒಪ್ಪಿಕೊಂಡ ಮೇಲೆ ಮತದಾನ ಮಾಡದಿರುವುದು ಘೋರ ಅನ್ಯಾಯವಾಗಿದೆ.

         ನಾವು ಈ ಅಂಕಣದಲ್ಲಿ ರಾಜಕೀಯದ ಬಗ್ಗೆ ಬರೆದದ್ದು ತಿರಾ ಕಮ್ಮಿ. ಎಲ್ಲೋ ಒಂದೆರಡು ಸಲ ಮಾತ್ರ ಇರಬಹುದು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಬರೆಯಲೇ ಬೇಕಾಗಿದೆ.

     ಮತದಾನ ಮಾಡುವವರ ಸಂಖ್ಯೆಯೇ ಕಡಿಮೆಯಾದರೆ ಬಹುಮತ ಎಂಬುದು ಸಿದ್ದವಾಗದೇ ಹೋಗಬಹುದು. ಯಾಕೆಂದರೆ ಮತದಾನ ಮಾಡದೆ ಇದ್ದವರು ಆಯ್ಕೆಗೊಂಡ ಅಭ್ಯರ್ಥಿಗೆ ವಿರುದ್ಧವಾಗಿ ಮತದಾನ ಮಾಡುವವನಾಗಿರಬಹುದು. ಉದಾಹರಣೆಗೆ ಮತದಾನ ಮಾಡಿದ  ಅರವತ್ತೆರಡು ಜನರಲ್ಲಿ ನಲವತ್ತು ಜನ ಒಬ್ಬ ಅಭ್ಯರ್ಥಿಗೆ ಮತದಾನ ಮಾಡಿದರೆ ಇಂದಿನ ವ್ಯವಸ್ಥೆಯೊಳಗೆ ಅವನೇ ಬಹುಮತಪಡೆದವನು ಎಂದು ಘೋಷಣೆಯಾಗುತ್ತದೆ. ಆದರೆ ನೂರು ಜನರಿದ್ದಾಗ ನಲವತ್ತು ಎಂಬ ಸಂಖ್ಯೆ ಬಹುಮತವಲ್ಲ ಇದು ಸರಳವಾಗಿ ಎಲ್ಲರಿಗೂ ಅರ್ಥವಾಗುವ ವಿಷಯ ಆದ್ದರಿಂದ ಎಲ್ಲರೂ ಮತದಾನ ಮಾಡಿದಾಗಲೇ ಸರಿಯಾದ ಬಹುಮತ ದೊರೆಯುತ್ತದೆ.

       ಪ್ರಜಾಪ್ರಭುತ್ವದ ಹೊರತಾಗಿ ಬೇರೆ ವ್ಯವಸ್ಥೆ ಈಗ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಅಲ್ಲಲ್ಲಿ ಹಳೆಯ ರಾಜಪರಂಪರೆ ಉಳಿದಿದೆ ಯಾದರೂ ಆ ರಾಜರಿಗೆ ಹಿಂದಿನಂತೆ ಯಾವುದೇ ಅಧಿಕಾರಗಳಿಲ್ಲ. ಹಾಗಿರುವಾಗ ಚುನಾವಣೆಗೆ ಬಹಿಷ್ಕಾರ ಏಕೆ? ಯಾರಾದರೂ ಒಬ್ಬ ಜನಪ್ರತಿನಿಧಿ ಆಯ್ಕೆಯಾದಾಗಲೇ ಸರ್ಕಾರದ ರಚನೆಯಾಗಿ ದೇಶದ ವ್ಯವಸ್ಥೆ ಮುನ್ನಡೆಯುತ್ತದೆ. ಯಾರೂ  ಜನಪ್ರತಿನಿಧಿಯಾಗಿ ಆಯ್ಕೆಯಾಗಲೇ ಬಾರದೇ? ಚುನಾವಣೆಯನ್ನು ಬಹಿಷ್ಕರಿಸುವವರು ಮತ್ತು ಮತದಾನ ಮಾಡದೇ ಇರುವವರು ಇದನ್ನು ಆಲೋಚಿಸಬೇಕು. ನಮ್ಮಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಥವಾ ರಾಜಕೀಯ ಪಕ್ಷಗಳು ಚುನಾವಣೆಯನ್ನು ನಿರ್ವಹಿಸುವ ರೀತಿಯಲ್ಲಿ ದೋಷಗಳಿರಬಹುದು. ಮತ ಹಾಕದೇ ಇರುವುದು ಅದಕ್ಕೆ ಪರಿಹಾರವಿಲ್ಲ.

    ಮತದಾನ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಾ ಹೋದರೆ ದೇಶದ ಸಮಗ್ರತೆಗೆ ದೊಡ್ಡ ಸವಾಲು ಎದುರಾಗಬಹುದು. ಶ್ರೀಲಂಕಾದಲ್ಲಿ ನಾಯಕತ್ವವಿಲ್ಲದೇ ಅರಾಜಕತೆ ಉಂಟಾಗಿದ್ದನ್ನು ಕೇಳಿದ್ದೀರಿ ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿಯೂ ಉಂಟಾಗಬಾರದು. ಅತ್ಯಂತ ಮೂಲಕ್ಕೆ ಹೋದರೆ ಸತ್ಯ ಯುಗದಲ್ಲಿ (ಕೃತಯುಗದಲ್ಲಿ)  ಒಂದು ರೀತಿಯ ಪ್ರಜಾಪ್ರಭುತ್ವವೇ ಇತ್ತು ಎನ್ನಬಹುದು. “ನೈವ ರಾಜ್ಯಂ ನ ರಾಜಾಸೀತ್ ನ ದಂಡ್ಯೋ ನಚ ದಂಡಿಕಃ  l ಧರ್ಮೇಣ ಏವ ಪ್ರಜಾಃ ಸರ್ವೇ ರಕ್ಷoತಿ ಚ ಪರಸ್ಪರಮ್ ll” ಆ ಕಾಲದಲ್ಲಿ ರಾಜನಿರಲಿಲ್ಲ , ದಂಡನೆ ಮಾಡುವವರು ಇರಲಿಲ್ಲ. ಧರ್ಮದ ಮೂಲಕವೇ ಎಲ್ಲರೂ ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಹೋಗುತ್ತಿದ್ದರು. ಇಂತಹ ಪ್ರಜಾಪ್ರಭುತ್ವ ಈಗ ಸಾಧ್ಯವಿಲ್ಲದಿರಬಹುದು ಆದರೆ ಇಂತಹ ಸ್ಥಿತಿಗೆ ಹೋಗಬೇಕು ಎಂಬ ಗುರಿ ಇರಬೇಕು. ದೇಶಕ್ಕೆ ಬೇರೆ ಎಲ್ಲಾ ಸಮೃದ್ಧಿಗಳಿದ್ದರೂ ಅರಾಜಕತೆ ಎಂಬ  ಒಂದು ಕೊರತೆ ಇದ್ದರೆ ಎಲ್ಲಾ ಸಮೃದ್ಧಿಗಳೂ ವ್ಯರ್ಥವಾಗುತ್ತವೆ. ಆದ್ದರಿಂದ ಚುನಾವಣೆಯ ಮುಂದಿನ ಹಂತಗಳಲ್ಲಾದರೂ ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ನಮ್ಮ ಜನರು ಮತದಾನಮಾಡು ವಂತಾಗಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ