ನಮ್ಮ ಮನಸ್ಸು ಮೂರು ವಿಷಯಗಳಲ್ಲಿ ಸರಿಯಾಗಿ ವಸ್ತುಸ್ಥಿತಿಯನ್ನು ಗ್ರಹಿಸಲಾಗದೇ ನಿಂತುಬಿಡುತ್ತದೆ- ದೇವರು, ಮಹಾತ್ಮರು ಮತ್ತು ತನ್ನ ನಿಜಸ್ವರೂಪ.
ಇದನ್ನೊಂದು ಉದಾಹರಣೆಯ ಮುಲಕ ವಿವರಿಸಬಹುದು. ನಾನು ಒಮ್ಮೆ ಭೌತಶಾಸ್ತçದ ಪ್ರಯೋಗಾಲಯಕ್ಕೆ ಹೋಗಿದ್ದೆ. ಶಬ್ದದ ತರಂಗಾAತರವನ್ನು ತೋರಿಸುತ್ತಾ ಶಬ್ದ ಮಾಡುವ ಯಂತ್ರವೊAದನ್ನು ನನಗೆ ಅಲ್ಲಿ ತೋರಿಸಿದರು. ನಮ್ಮ ಕಿವಿಯು ಒಂದು ಮಿತಿಯ ಒಳಗಿನ ತರಂಗಾAತರದ ಶಬ್ದಗಳನ್ನು ಮಾತ್ರವೇ ಗ್ರಹಿಸುತ್ತದೆ. ಆ ಮಿತಿಗಿಂತ ಹೆಚ್ಚು ದೀರ್ಘ ತರಂಗಾAತರದ ಶಬ್ದವನ್ನು ನಮ್ಮ ಕಿವಿಯು ಗ್ರಹಿಸುವುದಿಲ್ಲ. ಆ ಮಿತಿಗಿಂತ ಕಡಿಮೆ ತರಂಗಾAತರದ ಶಬ್ದಗಳನ್ನೂ ಗ್ರಹಿಸುವುದಿಲ್ಲ. ಉದಾಹರಣೆಗೆ ಆಕಾಶವಾಣಿಯಿಂದ ಬಿತ್ತರಗೊಳ್ಳುವ ದೀರ್ಘ ತರಂಗಾAತರವುಳ್ಳ ಶಬ್ದಗಳು ವಾತಾವರಣದಲ್ಲಿದ್ದರೂ ನಮ್ಮ ಕಿವಿಗೆ ಗೊತ್ತಾಗುವುದಿಲ್ಲ. ರೇಡಿಯೋ ಟ್ರಾನ್ಸಿಸ್ಟರ್ ಆ ಶಬ್ದಗಳ ತರಂಗಾAತರವನ್ನು ಕಮ್ಮಿ ಮಾಡಿದಾಗ ನಮ್ಮ ಕಿವಿ ಗ್ರಹಿಸುತ್ತದೆ. ಪ್ರಯೋಗಾಲಯದಲ್ಲಿ ಆ ಯಂತ್ರದ ಗುಂಡಿಯನ್ನು ಒಂದುಕಡೆ ತಿರುಗಿಸಿದರೆ ಶಬ್ದದ ತರಂಗಾAತರ ಕಡಿಮೆಯಾಗುತ್ತಾ ಹೋಗುತ್ತದೆ, ಇನ್ನೊಂದು ಕಡೆ ತಿರುವಿದರೆ ತರಂಗಾAತರ ಹೆಚ್ಚಿಗೆಯಾಗುತ್ತದೆ. ಪ್ರಾಧ್ಯಾಪಕರು ನನಗೆ ಇದನ್ನು ಪ್ರತ್ಯಕ್ಷವಾಗಿ ತೋರಿಸಿದರು. ತರಂಗಾAತರ ಮನುಷ್ಯನ ಕಿವಿಯ ಗ್ರಹಿಕೆಯ ಮಿತಿಗಿಂತ ಕಡಿಮೆಯಾದಾಗ ಮತ್ತು ಹೆಚ್ಚಿಗೆಯಾದಾಗ ಅಲ್ಲಿಯೇ ನಿಂತಿದ್ದರೂ ಶಬ್ದ ನಮಗೆ ಕೇಳಿಸುವುದಿಲ್ಲ. ಆದರೆ ಶಬ್ದ ಬರುತ್ತಿರುವುದನ್ನು ಆ ಯಂತ್ರದ ಮೀಟರ್ ತೋರಿಸುತ್ತದೆ. ಅಂದರೆ ಶಬ್ದವಿದ್ದರೂ ನಮ್ಮ ಕಿವಿಗಳೇ ಗ್ರಹಿಸಲಾರದೆ ಸ್ಥಗಿತಗೊಳ್ಳುತ್ತವೆ.
ಇದೇ ರೀತಿ ಮನಸ್ಸು ದೇವರನ್ನು ಗ್ರಹಿಸಲು ಹೊರಟಾಗ ಒಂದು ಹಂತದಲ್ಲಿ ಸ್ಥಗಿತಗೊಳ್ಳುತ್ತದೆ. ದೇವರ ಜಡ ಮೂರ್ತಿಯನ್ನೇ ಗ್ರಹಿಸುತ್ತಾ ಅಲ್ಲಿರುವ ಚೈತನ್ಯವನ್ನು ಗ್ರಹಿಸುವಲ್ಲಿ ಮನಸ್ಸು ವಿಫಲವಾಗುತ್ತದೆ. ‘ಹಾಗಾಗಿಯೇ ಅನೇಕರು ಅದು ಬೆಳ್ಳಿಯ ಮೂರ್ತಿಯೋ? ಅಥವಾ ಪಂಚಲೋಹದ್ದೋ?’ ಎಂಬುದಾಗಿ ಕೇಳುತ್ತಾರೆ. ತನ್ನಂತೆಯೇ ಅಲ್ಲೊಬ್ಬ ಇದ್ದಾನೆ ಎಂಬುದನ್ನು ಅನೇಕರು ಗ್ರಹಿಸುವುದೇ ಇಲ್ಲ. ಮನಸ್ಸು ಹೆಚ್ಚಿನ ಸ್ತರದ ಅಸ್ತಿತ್ವವುಳ್ಳ ಚೈತನ್ಯವನ್ನು ಗ್ರಹಿಸುವಲ್ಲಿ ವಿಫಲವಾಗುವುದೇ ಇದಕ್ಕೆ ಕಾರಣ.
ಮಹಾತ್ಮರನ್ನು ನೋಡಿದಾಗ ಮನಸ್ಸು ‘ಇವರೂ ನಮ್ಮಂತೆಯೇ, ಏಕೆಂದರೆ ನಮ್ಮಂತೆಯೇ ಊಟ ಮಾಡುತ್ತಾರೆ, ನಿದ್ರೆ ಮಾಡುತ್ತಾರೆ’ ಎಂಬುದಾಗಿ ಗ್ರಹಿಸುತ್ತಾರೆ. ಮಹಾತ್ಮರಲ್ಲಿ ಭಗವಂತನು ಹೇಳಿದ ಅಭಯ, ಸತ್ವಸಂಶುದ್ಧಿ, ಜ್ಞಾನಯೋಗ, ಅಹಿಂಸೆ, ಸಮತ್ವ ಮುಂತಾದ ದೈವೀ ಸಂಪತ್ತುಗಳು ಇರುತ್ತವೆ. ಅವುಗಳು ಒಮ್ಮೆಲೆ ಮನಸ್ಸಿಗೆ ಗ್ರಹಿಕೆಯಾಗುವುದಿಲ್ಲ.
ನಮ್ಮ ನಿಜಸ್ವರೂಪವನ್ನೇ ಮನಸ್ಸು ಗ್ರಹಿಸುವುದಿಲ್ಲ. ಶರೀರವೇ ನಾವು ಎಂದು ಅಜ್ಞಾನಿಗಳಾದ ನಾವೆಲ್ಲಾ ಕಾಣುತ್ತೇವೆ. ಈ ಶರೀರ ಹುಟ್ಟುವುದಕ್ಕಿಂತ ಮುಂಚೆಯೂ ನಾನು ಇದ್ದದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಅಷ್ಟೇ ಏಕೆ, ಹಿಂದೆ ತಾಯಿಯ ಉದರದಲ್ಲಿದ್ದು ಹುಟ್ಟಿಬಂದದ್ದನ್ನು ನಮ್ಮ ಇಂದಿನ ಮನಸ್ಸು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ ಮನಸ್ಸು ವಸ್ತುಸ್ಥಿತಿಯನ್ನು ಗ್ರಹಿಸಲಾರದೇ ಮೂರ್ಖನಂತಾಗಿಬಿಡುತ್ತದೆ. ಸಂಸ್ಕಾರ ಇಲ್ಲದಿರುವಿಕೆಯೇ ಇದಕ್ಕೆ ಕಾರಣ. ಕನ್ನಡಕವನ್ನು ಒರೆಸಿಕೊಳ್ಳುವಂತೆ ಮನಸ್ಸನ್ನು ಸಂಸ್ಕಾರಗಳಿಂದ ವರೆಸಿಕೊಂಡು ನೋಡಬೇಕು, ಆಗ ವಸ್ತುಸ್ಥಿತಿಯ ಅರಿವಾಗುತ್ತದೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ