ಯಜ್ಞ ಮತ್ತು ವಿಶ್ವಾಸಗಳಿಂದ ಕುಟುಂಬ ಸಾಮರಸ್ಯ

posted in: Gurubodhe | 0

ಭಗವದ್ಗೀತೆಯಿಂದ ಕೌಟುಂಬಿಕ ಸಾಮರಸ್ಯಕ್ಕೆ ಏನಾದರೂ ಕೊಡುಗೆಗಳು ಇವೆಯೇ? ಈ ಪ್ರಶ್ನೆಗೆ ಅನೇಕ ವಿಧದ ಉತ್ತರಗಳನ್ನು ಕೊಡಬಹುದು. ನಮ್ಮ ದೃಷ್ಟಿಯಲ್ಲಿ ಪ್ರಮುಖವಾಗಿರುವ ಎರಡು ಉತ್ತರಗಳನ್ನು ಕೊಡೋಣ.

“ನಾಯಂ ಲೋಕೋಸ್ತಿ ಅಯಜ್ಞಸ್ಯ ಕುತೋನ್ಯಃ ಕುರುಸತ್ತಮ”(4-31) ಯಜ್ಞಗಳನ್ನು ಸ್ವಲ್ಪವೂ ಮಾಡದಿರುವವನಿಗೆ ಈ ಲೋಕದಲ್ಲಿಯೇ ಚೆನ್ನಾಗಿ ಬದುಕಲು ಸಾಧ್ಯವಿಲ್ಲ. ಇನ್ನು ಪರಲೋಕದ ಮತಿಂತು? ಈ ಸಾಲಿನಲ್ಲಿ “ಅಯಂಲೋಕಃ” ಎಂಬ ಶಬ್ದದಲ್ಲಿ ಐಹಿಕ ಬದುಕಿನ ಉಲ್ಲೇಖವಾಗಿದೆ. ಐಹಿಕ ಬದುಕು ಎಂದರೆ ಇಲ್ಲಿಯ ಜೀವನ, ಮರಣದವರೆಗಿನ ಜೀವಿತಾವಧಿ. ಈ ಅವಧಿಯಲ್ಲಿ ಗೃಹಸ್ಥಾಶ್ರಮದ ಕಾಲ ಬಹಳ ಮುಖ್ಯವಾದದ್ದು. ಸುಮಾರು 20-25 ವರ್ಷಗಳ ವಯಸ್ಸಿನಿಂದ ಪ್ರಾರಂಭವಾಗಿ ಸುಮಾರು ಜೀವನದ ಕೊನೆಯ ಪರ್ಯಂತ ಗೃಹಸ್ಥಾಶ್ರಮ ಇರುತ್ತದೆ. ಗೃಹಸ್ಥಾಶ್ರಮದಲ್ಲಿರುವಾಗ ಯಜ್ಞಗಳನ್ನು ಮಾಡಬೇಕು. ಅಗ್ನಿಯಲ್ಲಿ ಹವಿಸ್ಸಿನ ಸಮರ್ಪಣೆಯಷ್ಟೇ ಯಜ್ಞವಲ್ಲ. ಜಪ,ಪೂಜೆಗಳೂ ಯಜ್ಞಗಳೇ, ನಾಮ ಸಂಕೀರ್ತನೆಯೂ ಯಜ್ಞವೇ. ಕುಟುಂಬದ ವ್ಯವಸ್ಥೆಯಲ್ಲಿದ್ದುಕೊಂಡು ಇಂತಹ ಯಜ್ಞಗಳನ್ನು ಮಾಡಬೇಕು. ಇದರಿಂದ ಅದೃಷ್ಟ ಪ್ರಯೋಜನಗಳ ಜೊತೆಗೆ ಕುಟುಂಬ ಸಾಮರಸ್ಯ ಎಂಬ ದೃಷ್ಟ ಪ್ರಯೋಜನ ಕೈಗೆ ಸಿಗುತ್ತದೆ. ‘ ಅಯಂ ಲೋಕಃ ‘ (ಈ ಲೋಕ) ಎಂಬ ಶಬ್ದವನ್ನು ಹೇಳುವ ಮೂಲಕ ಕಣ್ಣಿಗೆ ಕಾಣುವ ಲೋಕವನ್ನೇ ಭಗವಂತನು ಹೇಳಿದ್ದಾನೆ. ಕಣ್ಣಿಗೆ ಕಾಣುವ(ದೃಷ್ಟ) ಪ್ರಯೋಜನವನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಶಬ್ದವನ್ನು ಪ್ರಯೋಗಿಸಿದ್ದಾನೆ. ಯಜ್ಞಗಳ ಆಚರಣೆಗಳ ಮೂಲಕ ಕುಟುಂಬ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು ಭಗವಂತನ ಅಭಿಪ್ರಾಯ ಇದರಲ್ಲಿ ಇದೆ.

"ನಾಯಂ ಲೋಕೋಸ್ತಿ ನಪರೋ ನ ಸುಖಂ ಸಂಶಯಾತ್ಮನಃ" (4-40) ಮನಸ್ಸಿನಲ್ಲಿ ಸಂಶಯಗಳನ್ನು ತುಂಬಿಕೊಂಡಿರುವವನಿಗೆ ಈ ಲೋಕ ಮತ್ತು ಪರಲೋಕಗಳಲ್ಲಿ ಚೆನ್ನಾಗಿ ಬದುಕಲು ಸಾಧ್ಯವಿಲ್ಲ. ಅವನಿಗೆ ಸುಖವಿಲ್ಲ. ಇಲ್ಲಿಯೂ ಭಗವಂತ "ಅಯಂಲೋಕಃ" ಎಂಬ ಶಬ್ದವನ್ನು ಬಳಸಿದ್ದಾನೆ. ಅತಿಯಾಗಿ ಸಂಶಯ ಪಡುವ ಸ್ವಭಾವವುಳ್ಳವನಿಗೆ ಈ ಲೋಕದ ಬದುಕು ಚೆನ್ನಾಗಿರಲು ಸಾಧ್ಯವಿಲ್ಲ. ಅವನಿಗೆ ನೆಮ್ಮದಿಯೂ ಇಲ್ಲ. ಹಿಂದಿನಂತೆ ಗೃಹಸ್ಥಾಶ್ರಮ  ಈ ಲೋಕದ ಬದುಕಿನಲ್ಲಿ ಮುಖ್ಯವಾದದ್ದು. ಗೃಹಸ್ಥಾಶ್ರಮವು ಸರಿಯಾಗಿ ನಡೆಯಲು ಮನೆಯ ಸದಸ್ಯರಲ್ಲಿ ಪರಸ್ಪರ ವಿಶ್ವಾಸ ತುಂಬಾ ಅವಶ್ಯಕ. ಮುಖ್ಯವಾಗಿ ಪತಿ - ಪತ್ನಿಯರಲ್ಲಿ ಪರಸ್ಪರ ವಿಶ್ವಾಸ ಅವಶ್ಯಕ. ಸಂಶಯಗಳನ್ನು ನಿವಾರಿಸಿಕೊಂಡರೆ ಮಾತ್ರವೇ ವಿಶ್ವಾಸ ಉಳಿಯುತ್ತದೆ. ಸಂಶಯದ ಸಂದರ್ಭಗಳು ಬಂದಾಗ ಪರಸ್ಪರ ಮಾತಾಡಿಕೊಂಡು ಅದನ್ನು ನಿವಾರಿಸಿಕೊಳ್ಳಬೇಕು. ವಿಶ್ವಾಸ - ಪ್ರೀತಿಗಳೇ ಕುಟುಂಬದ ಭದ್ರ ಬುನಾದಿ.

ಯಜ್ಞ ಮತ್ತು ವಿಶ್ವಾಸ ಇವೆರಡರಲ್ಲಿ ಯಜ್ಞವು ಇಹ – ಪರಗಳೆರಡಕ್ಕೂ ಸಲ್ಲುವ ಸಾಧನವಾಗಿದ್ದಾರೆ, ವಿಶ್ವಾಸ ಇಹ ಜೀವನದ ಯಶಸ್ಸಿನ ಸಾಧನ. ಮನೆಯ ಮಂದಿಗಳಲ್ಲಿ ಸಾಮರಸ್ಯ ತುಂಬಲು ಇವೆರಡೇ ಸಾಕು. ಇಂದು ನಡೆಯುತ್ತಿರುವ ಕುಟುಂಬ ಕಲಹ, ವಿವಾಹ ವಿಚ್ಛೇದನಗಳಿಗೆ ಇವುಗಳೇ ಮುಖ್ಯ ಪರಿಹಾರ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ