ಶರೀರವನ್ನೇ ತಾನಾಗಿ ಗುರುತಿಸಿಕೊಳ್ಳವಿಕೆ ಅಜ್ಞಾನ

posted in: Gurubodhe | 0

,njhg

ಅಜ್ಞಾನವು  ನಮಗೆ ಅರಿವಿಲ್ಲದಂತೆಯೇ ಬುದ್ದಿಯನ್ನು ಆಗಾಗ  ಆವರಿಸುತ್ತದೆ. ಅದು ಹೀಗೆ ಆವರಿಸಿದ್ದನ್ನು  ಮಹಾತ್ಮರು ಕಂಡುಹಿಡಿದು ತಿಳಿಸಿಕೊಡುತ್ತಾರೆ. ಅಂತಹ ಒಂದು ಪ್ರಸಂಗ ಭಗವದ್ಗೀತೆಯಲ್ಲಿ ನಮಗೆ ಸಿಗುತ್ತದೆ. ನಾಲ್ಕನೇ ಅಧ್ಯಾಯದ ಆರಂಭದಲ್ಲಿ ಈ ಪ್ರಸಂಗ ಬರುತ್ತದೆ. ಭಗವಂತನು ಅಲ್ಲಿ ಹೇಳಿದ ಮಾತು.. ’ಈ ಯೋಗವನ್ನು ಸೃಷ್ಟಿಯ ಆದಿಯಲ್ಲಿ ನಾನು ವಿವಸ್ವಂತನಿಗೆ(ಸೂರ್ಯ ನಿಗೆ) ಹೇಳಿದೆ. ವಿವಸ್ವಂತನು ತನ್ನ ಮಗನಾದ ವೈವಸ್ವತ ಮನುವಿಗೆ ಹೇಳಿದನು. ಮನುವು ಇದನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದನು. (ಇಕ್ಷ್ವಾಕುವು ಸೂರ್ಯವಂಶದ ಮೊದಲ ರಾಜ. ಮುಂದೆ ಅವನ ವಂಶದಲ್ಲಿಯೇ  ಶ್ರೀರಾಮನ ಅವತಾರ.ತ್ರೇತಾಯುಗದಲ್ಲಿ ರಾಮಾವತಾರದ ನಂತರ ಈಗ ದ್ವಾಪರಯುಗದ ಕೃಷ್ಣಾವತಾದಲ್ಲಿ ಭಗವಂತನು ಈ ಮಾತನ್ನು ಹೇಳುತ್ತಿದ್ದಾನೆ.) ಇಕ್ಷ್ವಾಕುವಿನಿಂದ ಮುಂದೆ ಅವನ ವಂಶದಲ್ಲಿ ಬಂದ ರಾಜರ್ಷಿಗಳು ಈ ಯೋಗವನ್ನು ಮುಂದುವರೆಸಿಕೊಂಡು ಬಂದರು. ಈಗ ತುಂಬಾ ಕಾಲ ಕಳೆದದ್ದರಿಂದ ಈ ಯೋಗವು ಕಣ್ಮರೆಯಾಗಿದೆ. ಆದ್ದರಿಂದ ಅದೇ ಪುರಾತನ ಯೋಗವನ್ನು  ಈಗ ಅರ್ಜುನ ನಿನಗೆ  ಪುನಃ ಉಪದೇಶಿಸಿದ್ದೇನೆ.

ಯಾಕೆಂದರೆ ನೀನು ನನ್ನ ಭಕ್ತನೂ, ಸಖನೂ ಆಗಿದ್ದೀಯೇ’. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜುನನ ಮಾತನ್ನು  ಸರಿಯಾಗಿ ಗಮನಿಸಬೇಕು. ಕೃಷ್ಣ! ನೀನು ಇತ್ತಿಚೀಗೆ ವಸುದೇವನ ಮಗನಾಗಿ ಹುಟ್ಟಿ ನನಗೆ ಬಾಲ್ಯದಿಂದಲೂ ಪರಿಚಿತನಾಗಿದ್ದೀ.  ಸೃಷ್ಟಿಯ ಆದಿಯಲ್ಲಿ ವಿವಸ್ವಂತನ ಜನ್ಮ. ಸೃಷ್ಟಿಯ ಆದಿಯಲ್ಲಿಯೇ ನೀನು  ಅವನಿಗೆ ಯೋಗವನ್ನು  ಉಪದೇಶಿಸಲು  ಹೇಗೆ ಸಾಧ್ಯ? ಆದ್ದರಿಂದ ಆಗ ಉಪದೇಶಿಸಿದ ಯೋಗವನ್ನೇ ಈಗ ನನಗೆ ಉಪದೇಶಿಸಿದ್ದನ್ನು ಹೇಗೆ ನಂಬಲಿ?’

ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸುವಾಗ ವೈವಸ್ವತ (ವಿವಸ್ವಂತನ ಮಗ) ಮನ್ವಂತರದ ೨೮ ನೇ ಮಹಾಯುಗದ ದ್ವಾಪರಯುಗ ನಡೆಯುತ್ತಿದೆ. ವಿವಸ್ವಂತನಿಗೆ ಅವನು ಮೊದಲನೇ ಮಹಾಯುಗದ ಕೃತಯುಗದ ಆರಂಭದಲ್ಲಿ ಉಪದೇಶ ಮಾಡಿದ್ದನು.ಅಷ್ಟು ದೀರ್ಘಕಾಲದ ಹಿಂದೆ ತಾನು ನೋಡುತ್ತಿರುವ  ಕೃಷ್ಣ ಹುಟ್ಟಿದ್ದನೇ ಎಂಬುದು ಅರ್ಜುನನ ಪ್ರಶ್ನೆ. ಪರಮಾತ್ಮನನ್ನು ಈಗಿರುವ ಕೃಷ್ಣನೆಂಬ ಶರೀರಕ್ಕಷ್ಟೇ ಸೀಮಿತಗೊಳಿಸಿಕೊಂಡಿರುವುದರಿಂದ  ಈ ಪ್ರಶ್ನೆ ಹುಟ್ಟಿಕೊಂಡಿತು. ಹೀಗೆ ಶರೀರಕ್ಕೆ ಸೀಮಿತಗೊಳಿಸಿಕೊಂಡು ಆತ್ಮನನ್ನು ನೋಡುವಿಕೆಯೇ ಅಜ್ಞಾನ. ತನ್ನನ್ನು ಶರೀರಕ್ಕೆ ಸೀಮಿತಗೊಳಿಸಿಕೊಂಡು ನೋಡುವಿಕೆಯೇ ಅಜ್ಞಾನದ ಒಂದು ಮುಖವಾದರೆ ಮತ್ತೊಬ್ಬರನ್ನೂ ಶರೀರವಾಗಿಯೇ ನೋಡುವುದು ಇದರ ಇನ್ನೊಂದು ಮುಖ. ಅರ್ಜುನನಿಗೆ ಸ್ವಾಭಾವಿಕವಾದ ಈ ಅಜ್ಞಾನ ಒಮ್ಮೆ ಆವರಿಸಿತು.

ಭಗವಂತನ ಮುಂದಿನ ಮಾತು ಅವನ ಈ ಅಜ್ಞಾನವನ್ನು  ಪರಿಹರಿಸಿತು. ಅರ್ಜುನಾ! ನನಗೆ ಹಿಂದೆ ಅನೇಕ ಜನ್ಮಗಳಾಗಿವೆ. ನಿನಗೂ ಅನೇಕ ಜನ್ಮಗಳಾಗಿವೆ. ನನಗೆ ಅವೆಲ್ಲವೂ ಗೊತ್ತಿವೆ, ನಿನಗೆ ಗೊತ್ತಿಲ್ಲ’. ನಾವೆಲ್ಲರೂ ಹೀಗೆ ಹಿಂದೆ ಅನೇಕ ಜನ್ಮಗಳನ್ನು ಕಳೆದು ಬಂದವರೇ ಆಗಿದ್ದೇವೆ. ಶರೀರಗಳು ಬಂದು ಹೋಗುತ್ತಿದ್ದರೂ ನಾವುಗಳು ಶಾಶ್ವತವಾಗಿ ಮುಂದುವರೆಯುತ್ತಿದ್ದೇವೆ. ನಾವುಗಳು ಶರೀರಕ್ಕಿಂತ ಬೇರೆಯನ್ನುವದಕ್ಕೆ ಇದೇ ಕಾರಣ. ಶರೀರಕ್ಕಿಂತ ನಾವು ಬೇರೆಯೆಂಬ ಅರಿವಿನಿಂದಲೇ ಜ್ಞಾನದ ಆರಂಭ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ