ಶ್ರದ್ಧೆ ಬೆಳವಣಿಗೆಯಾದರೆ ಮೂರು ಪ್ರಯೋಜನ…

posted in: Gurubodhe | 0

ಶ್ರದ್ಧೆಗೆ ಅದ್ಭುತವಾದ ಶಕ್ತಿಯಿದೆ. ಕ್ಲಿಷ್ಟವಾದುದನ್ನು ಅದು ಸುಲಭಗೊಳಿಸಬಲ್ಲದು. ಮನಸ್ಸಿನ ಭಾರವನ್ನು ಕಡಿಮೆ ಮಾಡಬಲ್ಲದು. ಮಾನವಿಕ ಸಂಬಂಧವನ್ನು ಬಲಪಡಿಸಬಲ್ಲದು. ಕ್ಲಿಷ್ಟವಾದುದನ್ನು ಶ್ರದ್ಧೆಯಿಂದ ಸುಲಭೀಕರಿಸುವುದಕ್ಕೆ ಭಗವದ್ಗೀತೆಯ ಎರಡು ಸಾಲುಗಳು ಪುರಾವೆ ಒದಗಿಸುತ್ತದೆ. ಅಧ್ಯಾತ್ಮ ಜ್ಞಾನವನ್ನು ಭಗವದ್ಗೀತೆಯಲ್ಲಿ  ರಾಜವಿದ್ಯೆ ಎಂಬುದಾಗಿ ಕರೆಯುತ್ತಾರೆ. “ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ || ಪ್ರತ್ಯಕ್ಷಾವಗಮಂ ಧರ್ಮಂ ’ಸುಸುಖಂ ಕರ್ತುಂ’ ಎಂಬ ಪದಗಳನ್ನು ಗಮನಿಸಬೇಕು. ಅಧ್ಯಾತ್ಮ ವಿದ್ಯೆ ಅನುಷ್ಠಾನ ಮಾಡಲು ಸುಲಭವಾದುದು. ಅದು ಕ್ಲಿಷ್ಟವೆನಿಸಲು ಕಾರಣವೆನೆಂಬುದನ್ನು ಮುಂದಿನ ಶ್ಲೋಕ ಹೇಳುತ್ತದೆ.

       ’ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ | ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರ ವರ್ತ್ಮನಿ ||’ ಈ ಅಧ್ಯಾತ್ಮ ವಿದ್ಯೆಯೆಂಬ ಧರ್ಮದ ಬಗ್ಗೆ ಶ್ರದ್ಧೆಯನ್ನು ರೂಢಿಸಿಕೊಳ್ಳಲು ಸಾಧ್ಯವಾಗದಿದ್ದವರು, ಮುಕ್ತಿಯನ್ನು ಹೊಂದಲಾರದವರು. ಮೃತ್ಯು ಸಂಸಾರದಲ್ಲಿಯೇ ಅವರು ಸುತ್ತುತ್ತಾರೆ. ಅಂದರೆ ಅಧ್ಯಾತ್ಮ ವಿದ್ಯೆ ಬಗ್ಗೆ ಅಶ್ರದ್ಧೆಯೇ ಅವರು ದುಃಸ್ಥಿತಿಗೆ ಹೋಗಲು ಕಾರಣ, ಅಶ್ರದ್ಧೆ ದುಃಸ್ಥಿಗೆ ಕಾರಣವಾದರೆ ಅದಕ್ಕೆ ವಿರುದ್ಧವಾದ ಶ್ರದ್ಧೆ ಸುಸ್ಥಿತಿಗೆ ಕಾರಣವೆಂಬುದು ಅರ್ಥಾತ್ ಸಿದ್ಧವಾಗುತ್ತದೆ. ಈ ಅರ್ಥಾತ್ ಸಿದ್ಧವಾಗುವ ಅಂಶವನ್ನೇ  ಹಿಂದಿನ ವಾಕ್ಯ ಮೊದಲೇ ಹೇಳುತ್ತದೆ.-“ಸುಸುಖಂ ಕರ್ತುಮವ್ಯಯಂ” ಎಂಬುದಾಗಿ. ಅಂದರೆ ಅಧ್ಯಾತ್ಮವಿದ್ಯೆ ಸುಲಭವಾಗಲು ಶ್ರದ್ಧೆಯೇ ಕಾರಣ. ಅಧ್ಯಾತ್ಮವಿದ್ಯೆ ಸಾಧನೆಯು ಚುರುಕುಗೊಂಡು ಬೇಗ ಫಲ ದೊರೆಯಲು ಬೆಳವಣಿಗೆ ಹೊಂದಿದ ಶ್ರದ್ಧೆಯೇ ಕಾರಣ.

       ಸಾಂಸಾರಿಕ ಚಿಂತೆಗಳಿಂದ ಮನಸ್ಸು ಭಾರವೆನಿಸುತ್ತದೆ. ಆ ಸ್ಥಿತಿಯಲ್ಲಿ ಯಾವುದೇ ಕೆಲಸ ಮಾಡಲು ಕಷ್ಟವಾಗುತ್ತದೆ. ಈ ಭಾರವನ್ನು ಶ್ರದ್ಧೆಯು ಕಡಿಮೆಮಾಡಬಲ್ಲದು. ದೇವರಲ್ಲಿ ಹೆಚ್ಚು ಮನಸ್ಸು ಕೊಟ್ಟು ಭಜನೆ, ಪ್ರಾರ್ಥನೆ, ಪೂಜೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಈ ಭಾರವನ್ನು ಕರಗಿಸಿಕೊಳ್ಳಬಹುದಾಗಿದೆ. ಬೆಳೆದ ಶ್ರದ್ಧೆ ಸಾಂಸಾರಿಕ ಚಿಂತೆಗಳ ಭಾರವುಳ್ಳ ಮನಸ್ಸನ್ನು ಮೇಲಕ್ಕೆ ದೇವರಕಡೆ ಎತ್ತಿಕೊಂಡು ಹೋಗಬಲ್ಲದು. ಬೇರೆ ಯಾವ ಕೆಲಸಕ್ಕೂ ತೊಡಗಲು ಸಾಧ್ಯವಾಗದ ಭಾರವಾದ ಮನಸ್ಸನ್ನು ಎತ್ತುವ ಸಾಮರ್ಥ್ಯ ಬೆಳೆದ ಶ್ರದ್ಧೆಗೆ ಇದೆ.

        ಹೆಚ್ಚು ಶ್ರದ್ಧೆಯಿಂದ ದೇವರ ಭಜನೆ, ಜಪ, ಪೂಜೆಯನ್ನು ಮಾಡುವ ವ್ಯಕ್ತಿಗೆ ಇತರ ಮನುಷ್ಯರ ಜೊತೆಗೆ ಉತ್ತಮ ಸಂಬಂಧವಿರುತ್ತದೆ. ಅವನ ಬಗ್ಗೆ ಎಲ್ಲರಿಗೂ ವಿಶ್ವಾಸ. ಹೆಚ್ಚು ದೇವರ ಪೂಜೆ ಮಾಡಿದರೂ ಇತರ ಮನುಷ್ಯರನ್ನು ದ್ವೇಷಿಸುವವರೂ ಇದ್ದಾರೆ. ಶ್ರದ್ಧೆ ಕಡಿಮೆ ಇರುವುದೇ ಅದಕ್ಕೆ ಮುಖ್ಯ ಕಾರಣ. ಶ್ರದ್ಧೆ ಹೆಚ್ಚಿದರೆ ಮಾನವೀಯ ಗುಣಗಳು ಬೆಳೆಯುವುದರಿಂದ ಇತರರ ಜೊತೆ ಆತ್ಮೀಯತೆ ಬಂದೇ ಬರುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ