ಸಂನ್ಯಾಸಿಗಳಿಗೆ ಭಗವದ್ಗೀತೆ ಸಂದೇಶ

posted in: Gurubodhe | 0

ವಿಶ್ವಕಲ್ಯಾಣಕ್ಕಾಗಿ ಭಗವದ್ಗೀತೆ ಕೊಟ್ಟ ಶ್ರೀಕೃಷ್ಣ ಪರಮಾತ್ಮ ಅವತಾರವೆತ್ತಿದ ದಿನ ಶ್ರೀಕೃಷ್ಣ ಜನ್ಮಾಷ್ಣಮಿ. ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆ ಮತ್ತು ಧರ್ಮ ಸಂಸ್ಥಾಪನೆಗೋಸ್ಕರ ಭಗವಂತನ  ಅವತಾರ . ಧರ್ಮ  ಸಂಸ್ಥಾಪನೆ ಎಂಬ  ಮೂರನೇ ಉದ್ದೇಶವನ್ನು  ಗೀತೋಪದೇಶದ ಮೂಲಕ ಭಗವಂತನು ನೆರವೇರಿಸಿದ್ದಾನೆ.

ಗೀತೆಯ ಒಂದು ಸಂದೇಶವನ್ನು ಈ ಲೇಖನದಲ್ಲಿ  ಸಂಕ್ಷೇಪದಲ್ಲಿ  ತಿಳಿಸೋಣ. ಕೇವಲ ಕರ್ಮಗಳನ್ನು ಬಿಟ್ಟ ಮಾತ್ರದಿಂದಲೇ ನೈಷ್ಕರ್ಮ್ಯ  ಸಿದ್ಧಿಯಾಗುವುದಿಲ್ಲ. ಜ್ಞಾನದಿಂದಲೇ ಅದು ಸಿದ್ಧಿಯಾಗುತ್ತದೆ. ’ನ ಕರ್ಮಣಾಮನಾರಂಭಾತ್ ನೈಷ್ಕರ್ಮ್ಯಂ ಪುರುಷೋಶ್ನುತೆ; ’ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ’ ಈ ಸಾಲುಗಳು ಇದನ್ನು ಹೇಳುತ್ತವೆ.(ಇಲ್ಲಿ ಬಂದಿರುವ ಸಂನ್ಯಾಸೇನ ಅಧಿಗಚ್ಛತಿ ಎಂಬ ಮಾತಿಗೆ  ಜ್ಞಾನನಿಷ್ಠೆಯಿಂದ ನೈಷ್ಕರ್ಮ್ಯ ಸಿದ್ಧಿಯಾಗುತ್ತದೆ ಎಂದು ಹೇಳುತ್ತಾರೆ.) ಜ್ಞಾನವೆಂದರೆ ಪರಮಾತ್ಮನ ಅನುಭವ, ತನ್ನ ಮೂಲ ಸ್ವರೂಪವೇ ಪರಮಾತ್ಮನೆಂಬ ಅರಿವು. ಈ ಅರಿವು ಬಂದಾಗ ಕರ್ಮಗಳು ತಾವಾಗಿಯೇ ಬಿಟ್ಟು ಹೋಗುತ್ತವೆ.

ಇದು ನೈಷ್ಕರ್ಮ್ಯಸಿದ್ಧಿ. ಒಂದು ಉದಾಹರಣೆಗೆ: ಮಾವಿನ ಕಾಯಿಯನ್ನು  ಕಾಯಿಯಿರುವಾಗಲೇ ನಾವಾಗಿಯೇ ಉದುರಿಸಿದರೆ ಅದು ಕರ್ಮಗಳನ್ನು ನಾವಾಗಿಯೇ ಬಿಡುವುದಕ್ಕೆ ಹೋಲಿಕೆಯಾಗುತ್ತದೆ. ಮಾವಿನಕಾಯಿ ಪಕ್ವಗೊಂಡು(ಹಣ್ಣಾಗಿ)ತಾನಾಗಿಯೇ ತೊಟ್ಟು ಕಳಚಿಕೊಂಡು ಬಿದ್ದರೆ ಅದು ಜ್ಞಾನದಿಂದ ಕರ್ಮಗಳು  ತಾವಾಗಿಯೇ ಬಿಟ್ಟು ಹೋಗುವುದಕ್ಕೆ ಹೋಲಿಕೆಯಾಗುತ್ತದೆ. ಹೀಗೆ ಕರ್ಮಗಳು ತಾವಾಗಿಯೇ ನಮ್ಮನ್ನು ಬಿಟ್ಟು ಹೋಗುವವರೆಗೆ ಒಂದಲ್ಲ ಒಂದು ರೀತಿಯ ಕರ್ಮಗಳು ನಮಗೆ ಇದ್ದೇ ಇರುತ್ತವೆ. ’ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಿ ಅಕರ್ಮಕೃತ್’ ಈ ವಾಕ್ಯವು ಇದನ್ನೇ ಹೇಳುತ್ತದೆ. ಆದ್ದರಿಂದ  ಕರ್ಮಗಳನ್ನು  ನಾವಾಗಿಯೇ ಬಿಟ್ಟ ಮಾತ್ರಕ್ಕೆ ನೈಷ್ಕರ್ಮ್ಯ ಸಿದ್ಧಿಯಾಗುವುದಿಲ್ಲ.

ಹೀಗೆಂದ ಮಾತ್ರಕ್ಕೆ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದವರು ಬಿಡುವಂತದ್ದು ಯಾವುದೂ ಇಲ್ಲ ಎಂದರ್ಥವಲ್ಲ. ಬಾಹ್ಯಾಗ್ನಿಯಲ್ಲಿ ಯಾಗವನ್ನು ಬಿಡಬೇಕಾಗುತ್ತದೆ. ಸಂತಾನವನ್ನು ಪಡೆಯುವುದು ಅವರಿಗೆ ನಿಷಿದ್ಧ. ಹೀಗೆ ಇನ್ನೂ ಅನೇಕ ಕರ್ಮಗಳನ್ನು  ಅವರು ತ್ಯಜಿಸಬೇಕಾಗುತ್ತದೆ. ಆದರೆ ಸಂನ್ಯಾಸಿಗಳಿಗೆ ಹೇಳಲ್ಪಟ್ಟ ಶಮ- ದಮ-ತಿತಿಕ್ಷೆ-ಶ್ರದ್ಧಾ-ಸಮಾಧಾನ-ಅಹಿಂಸೆ ಮುಂತಾದವುಗಳನ್ನು ಅವರು ಬಿಡದೇ ಅನುಷ್ಠಾನ ಮಾಡಬೇಕಾಗುತ್ತದೆ.

ಶಮಾದಿಗಳು  ಮಾನಸಿಕ ಕರ್ಮಗಳು . ಆದರೂ ಅವುಗಳು ಕರ್ಮಗಳೇ ಆಗಿವೆ. ಸಂನ್ಯಾಸಿಗಳಿಗೂ ಹೀಗೆ ಒಂದಿಷ್ಟು ಕರ್ಮಗಳು ಹೇಳಲ್ಪಟ್ಟಿವೆ ಎಂಬುದಾಗಿ ಶಂಕರಾಚಾರ್ಯರು ತೈತ್ತಿರೀಯ ಭಾಷ್ಯದಲ್ಲಿ ತಿಳಿಸಿದ್ದಾರೆ. ಈ ಶಮದಮಾದಿ ಮಾನಸಿಕಗಳಿಗೆ ಪೂರಕವಾಗಿ ಶಾರೀರಿಕ ಚಟುವಟಿಕೆಗಳು  ಮತ್ತು ವಾಚಿಕ ಚಟುವಟಿಕೆಗಳು ಬೇಕಾಗುತ್ತವೆ. ಯೋಗಾಸನ – ಪ್ರಾಣಾಯಾಮ ಮತ್ತು ಜಪಗಳು ಇಲ್ಲದಿದ್ದರೆ ಶಮದಮಾದಿಗಳು ಆಚರಣೆಗೆ ಬರುವುದಿಲ್ಲ. ಹೀಗಾಗಿ ಇಂತಹ ಪೂರಕ ಚಟುವಟಿಕೆಗಳಿಂದ  ಕೂಡಿದ ಶಮದಮಾದಿಗಳು ಸಂನ್ಯಾಸಿಗಳಿಗೆ  ಹೇಳಿದ ಕರ್ಮಗಳು. ತಾನು  ಸಂನ್ಯಾಸಿ ಎಂದು ತಿಳಿದು ಇಂತಹ ಕರ್ಮಗಳನ್ನು ಬಿಟ್ಟುಬಿಡಬಾರದು. ಜ್ಞಾನ ಸಿದ್ಧಿಯಾಗುವವರೆಗೂ ಇವುಗಳನ್ನು ಮಾಡುತ್ತಿರಬೇಕು. ಇದು ಭಗವಂತನ ಮಾತಿನ ತಾತ್ಪರ್ಯ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ