ಗುಕೇಶ್ ಎಂಬ ಹುಡುಗ ವಿಶ್ವ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿ ನಾವೆಲ್ಲ ಸಂತೋಷಪಟ್ಟಿದ್ದೇವೆ. ಗೆಲುವಿನ ಕ್ಷಣದಲ್ಲಿ ಆತನ ಪ್ರತಿಕ್ರಿಯೆ ಅನೇಕರಿಗೆ ಆಶ್ಚರ್ಯವನ್ನು ಉಂಟುಮಾಡಿತ್ತು. “ನನಗೆ ಗೆಲ್ಲುವ ನಿರೀಕ್ಷೆ ಇರಲಿಲ್ಲ” ಇದು ಆತನ ಬಾಯಲ್ಲಿ ಬಂದ ಮಾತು.
ಇದರಿಂದ ಆತನಲ್ಲಿ ಇರುವ ಸಾಧಕತ್ವ ಸಾತ್ವಿಕವಾದದ್ದು ಎಂದು ಗೊತ್ತಾಗುತ್ತದೆ. ಸಾತ್ವಿಕ ಸಾಧಕನು ಪ್ರಯೋಜನದ ನಿರೀಕ್ಷೆಯನ್ನು ತುಂಬಾ ಮಾಡಿಕೊಳ್ಳದೆ ಪ್ರಯತ್ನದಲ್ಲಿ ಸಂಪೂರ್ಣ ಮನಸ್ಸಿಟ್ಟು ತೊಡಗುತ್ತಾನೆ. ಆದರೆ ರಾಜಸ ಸಾಧಕನು ತನ್ನ ಗೆಲುವಿನ ಕಡೆಗೆ ಅಥವಾ ಎದುರಾಳಿಯ ಸೋಲಿನ ಕಡೆಗೆ ಹೆಚ್ಚು ಗಮನವಿಡುತ್ತಾನೆ. ಇದರಿಂದಾಗಿ ರಾಜಸ ಸಾಧಕನ ಮನಸ್ಸು ಭಾಗಶಃ ಆ ಕಡೆಗೆ ಹೋಗಿರುವುದರಿಂದ ಪ್ರಕೃತ ಸಾಧನೆಯಲ್ಲಿ ಸಂಪೂರ್ಣ ತೊಡಗಲಾರದು.
ಹೆಚ್ಚಿನ ಸಾಧಕರು ರಾಜಸರಾಗಿರುವುದರಿಂದ ಅವರಿಗೆ ಉತ್ಸಾಹ ತುಂಬಲು “ನೀನು ಗೆಲ್ಲುತ್ತೀಯೆ , ಪ್ರಯತ್ನ ಮಾಡು” ಎಂದು ಹೇಳಿ ಬೆನ್ನು ತಟ್ಟಬೇಕಾಗುತ್ತದೆ. ಗೆಲುವಿನ ಆಸೆ ಹುಟ್ಟಿಸುವ ಮೂಲಕ ಪ್ರಯತ್ನದಲ್ಲಿ ಮುಂದುವರಿಯುವಂತೆ ಮಾಡಬೇಕಾಗುತ್ತದೆ. ಭಗವಂತನು ಭಗವದ್ಗೀತೆಯಲ್ಲಿ ಒಂದು ಸಲ ಹಾಗೆ ಮಾಡಿದ್ದಾನೆ – “ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ” (11 -34)”ಭೀಷ್ಮ, ದ್ರೋಣಾದಿಗಳು ನನ್ನ ಸಂಕಲ್ಪ ಶಕ್ತಿಯಿಂದ ಮರಣ ಹೊಂದುವುದು ನಿಶ್ಚಿತವಾಗಿದೆ. ಆದ್ದರಿಂದ ನೀನು ಶತ್ರುಗಳನ್ನು ಗೆದ್ದೇ ಗೆಲ್ಲುತ್ತಿಯೇ ಯುದ್ಧ ಮಾಡು” ಹೀಗೆ ಹೇಳಿದ್ದಾನೆ.
ಆದರೆ ಭಗವಂತನೇ ಆರಂಭದಲ್ಲಿ “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ l
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ll ” (2-38) “ಯುದ್ಧದಿಂದ ಉಂಟಾಗುವ ಜಯ – ಪರಾಜಯಗಳನ್ನು ಸಮಾನವಾಗಿ ಪರಿಗಣಿಸಿ (ಲೆಕ್ಕಿಸದೆ)ಕೊಂಡು ಯುದ್ದಮಾಡು” ಎಂಬ ಮಾತನ್ನು ಹೇಳಿದ್ದಾನೆ. ಇದು ‘ಸಾತ್ವಿಕ ಸಾಧಕನಾಗು’ ಎಂಬ ಸಂದೇಶವಾಗಿದೆ. ಫಲದ ಅಪೇಕ್ಷೆಯಿಲ್ಲದ, ಶತ್ರು ಪರಾಜಯದ ಗೀಳು ಇಲ್ಲದ ಕರ್ತವ್ಯ ನಿಷ್ಠೆ ಸಾತ್ವಿಕ ಸಾಧಕನ ಲಕ್ಷಣ. ರಾಜಸ ಸಾಧಕತ್ವಕ್ಕಿಂತ ಸಾತ್ವಿಕ ಸಾಧಕತ್ವ ಶ್ರೇಷ್ಠ. ಭಗವಂತನಿಗೆ ಸಾತ್ವಿಕ ಸಾಧಕತ್ವದ ಬಗ್ಗೆ ಹೆಚ್ಚು ಒಲವು ಇದೆ. ಶ್ರದ್ಧೆ,ಆಹಾರ, ಯಜ್ಞ, ತಪಸ್ಸು ಮುಂತಾದ ಸಾಧನಗಳನ್ನು ಸಾತ್ವಿಕ – ರಾಜಸ – ತಾಮಸ ಎಂಬುದಾಗಿ ವಿಭಾಗಿಸಿ ಹೇಳುತ್ತಿರುವ ಅವನ ತಾತ್ಪರ್ಯ ತಾಮಸ – ರಾಜಸಗಳಿಗಿಂತ ಸಾತ್ವಿಕ ಶ್ರೇಷ್ಠ ಎಂಬುದು. ರಾಜಸ ಸಾಧಕನೂ ಮುಂದೆ ಬರಲಿ ಎಂಬ ಉದ್ದೇಶದಿಂದ ಫಲದ ಕಡೆ ಬೊಟ್ಟು ಮಾಡಿ ಪ್ರಯತ್ನದಲ್ಲಿ ಮುಂದೆ ಹೋಗುವಂತೆ ಪ್ರೇರೇಪಿಸುವುದು ಸಾಮಾನ್ಯ ರೂಢಿ. ಅದಕ್ಕೋಸ್ಕರ ಅರ್ಜುನನಿಗೆ 11 ನೇ ಅಧ್ಯಾಯದಲ್ಲಿ “ಗೆಲ್ಲುತ್ತೀಯೆ ಯುದ್ಧ ಮಾಡು” ಎಂದಿದ್ದಾನೆ.
ನಮಗೆ ಅನಿಸುವಂತೆ ಗುಕೇಶ್ ಒಬ್ಬ ಸಾತ್ವಿಕ ಸಾಧಕ. ಭಗವದ್ಗೀತೆಯ ದೃಷ್ಟಿಯಿಂದ ಯಾವುದೇ ಕ್ಷೇತ್ರದ ಸಾಧಕರು ಸಾತ್ವಿಕ ಸಾಧಕರಾಗಬೇಕು. ಕೆಲವು ರಾಜಸ ಸಾಧನೆಗಳಿಗೆ ಈ ಮಾತು ಅನ್ವಯವಾಗದಿರಬಹುದು. ಉದಾಹರಣೆ : - ಪ್ರಭುತ್ವ, ಕುಸ್ತಿಪಟು ಮುಂತಾದವುಗಳು. ಆದರೆ ಹೆಚ್ಚಿನ ಕಡೆಗಳಲ್ಲಿ ಸಾತ್ವಿಕ ಸಾಧಕತ್ವ ಬೇಕು. ನಮ್ಮ ಯುವಕರಿಗೆ ಇದು ಆದರ್ಶವಾಗಬೇಕು.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ