ಸಿಹಿಯ ಕಹಿ

ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ.ಶಿರಸಿ.

ಸಿಹಿ ಸವಿ
ಸಿಹಿ ಅಂದಕೂಡಲೇ ಎಲ್ಲರು ಮನದಲ್ಲಿ ಬರುವುದು ಸಕ್ಕರೆಯೇ.ತಪ್ಪಿದರೆ ಬೆಲ್ಲ. ಈಗೀಗ ಬೆಲ್ಲದ ಪ್ರಚಾರ ಹೆಚ್ಚಾಗಿದೆ.ಮಧುಮೇಹ ಇದ್ರೇ ಎರಡೂ ವಿರೋಧಿಯೇ.ಆದರೆ ಜನರ ಕಲ್ಪನೆ ಮಾತ್ರ ಸಕ್ಕರೆ ಹತ್ತಿರದ ವಿರೋಧೀ,ಬೆಲ್ಲ ದೂರದ ವಿರೋಧಿ.ಇನ್ನೂ ಹಲವು ಕಡೆ ಸಾವಯವ ಬೆಲ್ಲ ಮಧುಮೇಹಕ್ಕೆ ಮಿತ್ರ ಎಂಬ ಘೋರ ತಪ್ಪು ಕಲ್ಪನೆ ಇದೆ.ಆದರೆ ಈ ಗಡಿಬಿಡಿಯಲ್ಲಿ ಕೃತಕ ಸಿಹಿ ಮಾತ್ರ ಹತ್ತಿರದ ಸಂಬಂಧಿ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ನಗರ ಹಳ್ಳಿಗಳಲ್ಲಿಯೂ ಕೂಡ ಹೊಸದೊಂದು ಅಂಗಡಿಗಳ ಸಾಲು ಸಾಲು ಕಾಣಸಿಗುತ್ತದೆ ಅದೇನೆಂದರೆ ಬೆಲ್ಲದ ಚಹಾ. ಹಲವರು ಚಹಾವನ್ನು ಅಮೃತ ಎಂದು ನಂಬಿದ್ದಾರೆ ಅದರಲ್ಲಿಯೂ ಬೆಲ್ಲದ ಚಹಾ ಎಂದರೆ ಡಬಲ್ ಅಮೃತ ಅಂತ ತಿಳಿದಿದ್ದಾರೆ.
ಈ ಬೆಲ್ಲದ ಚಹಾದ ನಾಮಫಲಕಗಳೇ ನನಗೆ ಬೆಲ್ಲದ ಮೂಲದ ಬಗ್ಗೆ ಕುತೂಹಲವನ್ನು ಮೂಡಿಸಲು ಮುಖ್ಯ ಕಾರಣ. ಇಂತಹ ಚಹಾದ ಅಂಗಡಿಗಳಲ್ಲಿ ಯಾವ ಬೆಲ್ಲವನ್ನು ಉಪಯೋಗಿಸುತ್ತಾರೆ ಹೇಳುವುದು ಪ್ರಶ್ನಾರ್ಥಕ ವಿಷಯ ನಮ್ಮ ಉತ್ತರ ಕನ್ನಡದ ಅತ್ಯಂತ ನೈಸರ್ಗಿಕ ಆಲೆಮನೆ ಬೆಲ್ಲವನ್ನು ಅಥವಾ ಪೆಂಟೆಬೆಲ್ಲವನ್ನ ಅಥವಾ ಸಾವಯವ ಪೇಂಟೆಬೆಲ್ಲವನ್ನ, ಸಾವಯವ ಎಂದು ಮಾತ್ರ ಬರೆದಿರುವ ಪೆಂಟೆಬೆಲ್ಲವನ್ನ ಅಥವಾ ಸಕ್ಕರೆಯಿಂದ ತಯಾರಾದಂತಹ ಬೆಲ್ಲವನ್ನ ಇವುಗಳಲ್ಲಿ ಯಾವ ಬೆಲ್ಲವನ್ನ ಎಂದು ತಿಳಿದುಕೊಳ್ಳುವಂತಹ ನಿಖರವಾದ ಅಂತಹ ಸುಲಭದ ಉಪಾಯಗಳು ಇಲ್ಲ. ಇವುಗಳನ್ನು ಪ್ರಯೋಗ ಶಾಲೆಗೆ ಕಳುಹಿಸಿ ತಿಳಿದುಕೊಳ್ಳುವ ಅವಕಾಶದ ಬಗ್ಗೆ ನನಗೆ ಮಾಹಿತಿ ಇಲ್ಲ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಮತ್ತು ಬೆಲ್ಲದ ಜಗಳ ಹೆಚ್ಚಾಗುತ್ತಿದೆ. ಸಕ್ಕರೆ ಆರೋಗ್ಯಕ್ಕೆ ಉತ್ತಮ ಅಲ್ಲ, ಬೆಲ್ಲ ಆರೋಗ್ಯಕ್ಕೆ ಉತ್ತಮ ಎಂಬವಾದ ವಾದ ತೀವ್ರತರವಾಗುತ್ತಿದೆ. ನನಗೆ ಇತ್ತೀಚಿನ ದಿನಗಳಲ್ಲಿ ನನಗೆ ಯಾಕೊ ಬೆಲ್ಲದ ಮೇಲೆ ಅನುಮಾನ ಹೆಚ್ಚಾಗಿದೆ.
ಯಾಕೆಂದರೆ ಸಕ್ಕರೆ ಹೀಗೆಯಾ ಎಂಬ ನಿಖರತೆ ಇದೆ. ಮತ್ತು ಸಕ್ಕರೆಗಳಲ್ಲಿ ಸಕ್ಕರೆ ಕಣಗಳು ಸಣ್ಣ, ದೊಡ್ಡ, ಅತಿ ದೊಡ್ಡ ಇಷ್ಟೇ ಪ್ರಕಾರಗಳು ಬಿಟ್ಟರೆ ಇನ್ನಿತರ ಪ್ರಕಾರಗಳು ಇಲ್ಲ. ಆದರೆ ಬೆಲ್ಲದಲ್ಲಿ ಹಾಗಲ್ಲ ವಿವಿಧ ರೀತಿಯ ಬೆಲ್ಲಗಳು ಈಗಾಗಲೇ ಇವೆ.

ಈಗಾಗಲೇ ನಮ್ಮ ಉತ್ತರ ಕನ್ನಡದಲ್ಲಿ ಕಬ್ಬಿನರಸದಿಂದಲೇ ತಯಾರಿಸಿದ ಆಲೆಮನೆ ಬೆಲ್ಲ, ಇತರೆಡೆ ಸಿಗುವ ಪೆಂಟೆ ಬೆಲ್ಲ, ತಾಳೆಯ ಬೆಲ್ಲ ಇನ್ನು ಕೆಲವು ಕಡೆ ತೆಂಗಿನ ಬೆಲ್ಲಗಳು ಸಿಗುತ್ತವೆ.

ಬೆಲ್ಲ ಎನ್ನುವುದು ಆರೋಗ್ಯಕ್ಕೆ ಉತ್ತಮ ಎನ್ನುವ ಕಲ್ಪನೆಯ ಮಧ್ಯ ದೊಡ್ಡ ಪ್ರಮಾಣದಲ್ಲಿ ಬೆಲ್ಲದ ಕಲಬೆರಕೆ ಪ್ರಾರಂಭವಾಗಿದೆ. ಆಲೆಮನೆ ಬೆಲ್ಲ ಅಂದರೆ ನೈಸರ್ಗಿಕವಾಗಿ ಕಬ್ಬಿನ ಹಾಲಿನಿಂದಲೇ ತಯಾರು ಮಾಡಿರುವಂತಹ ಬೆಲ್ಲವಾಗಿರುತ್ತದೆ ಇದು ಖಂಡಿತವಾಗಿಯೂ ದೇಹದಲ್ಲಿರುವ ಕಬ್ಬಿಣದ ಅಂಶ ಅಂದರೆ ಹಿಮೋಗ್ಲೋಬಿನ್ ಹೆಚ್ಚಾಗಲು ಖಚಿತವಾಗಿ ಸಹಾಯ ಮಾಡುತ್ತದೆ. ಆದರೆ ಅಲೆಮನೆಗಳು ಕಡಿಮೆಯಾಗಿವೆ ಮತ್ತು ಲಭ್ಯವಿರುವ ಆಲೆಮನೆ ಬೆಲ್ಲ ಆಲೆಮನೆಗಳಕ್ಕಿಂತ ಹೆಚ್ಚಾಗಿದ್ದೆ ಹೇಳುವುದರಲ್ಲಿ ವಾದವೇ ಇಲ್ಲ. ಆ ಕಾರಣಕ್ಕೆ ನನ್ನದೊಂದು ಮಾತಿದೆ ನಿಮ್ಮ ಖಾತ್ರಿಯ ನಿಖರತೆ ಇರುವ ರೈತರಿಂದಲೇ ನೇರವಾಗಿ ಅಲೆಮನೆ ಬೆಲ್ಲವನ್ನ ಖರೀದಿಸಿ ಎಂದು.

ಇನ್ನು ಪೇಟೆಯಲ್ಲಿ ಲಭ್ಯವಿರುವ ಪಂಟೇಬೆಲ್ಲದ ಹಣೆಬರ. ಗೋಕಾಕ್ ತಾಲೂಕಿನಿಂದ ಸ್ವಲ್ಪ ಮುಂದೆ ನನ್ನ ಮಿತ್ರರು ದೊಡ್ಡ ರೈತರು ಒಮ್ಮೆ ಭೇಟಿಯಾದಾಗ ಮೊದಲೇ ಹೇಳಿದಿದ್ದರೆ ಒಂದೆರಡು ಪೇಂಟೆ ಬೆಲ್ಲ ನನ್ನ ಮನೆ ಉಪಯೋಗಕ್ಕೆ ನೀನು ಬರ್ತಾ ತರಬಹುದಿತ್ತಲ್ಲ ಎಂದು, ಆಗ ಅವರಿಂದ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಹೆದರಿ ಹೋದೆ, ಅವರು ಎರಡು ಕೈಗಳನ್ನ ಮುಗಿದು ಅಣ್ಣ ಪೆಂಟೆಬೆಲ್ಲ ಉಪಯೋಗಿಸುವ ಗೋಜಿಗೆ ಹೋಗಬೇಡ. ಪುನಃ ನಾನು ಅವರಿಗೆ ಪ್ರಶ್ನಿಸಿದೆ ಈಗ ಪೆಂಟೆ ಬೆಲ್ಲವನ್ನ ಸಕ್ಕರೆಯಿಂದ ತಯಾರು ಮಾಡಲಾಗುತ್ತದೆ. ಇದು ಕೇಳಿ ನಾನೊಮ್ಮೆ ಗಾಬರಿಯಾದೆ ಆಗ ಅವರಿಂದ ಬಂದಂತಹ ಉತ್ತರ ಈ ರೀತಿ ಇತ್ತು. ಸಕ್ಕರೆ ಅತಿ ಉತ್ತಮ ದೊಡ್ಡ ಹರಳಿನ ಸಕ್ಕರೆ ರೂ. 40 ಕೆಜಿ, ಅದನ್ನು ಸಗಟು ಮಾರಾಟದಲ್ಲಿ ತಂದರೆ 38ಕ್ಕೂ ಸಿಗಬಹುದು. ಆದರೆ ಬೆಲ್ಲ 65 ರೂಪಾಯಿ ಕಿಲೋ ಸಾವಯವ ಲೇಬಲ್ ಇದೆ ಎಂದಾದರೆ 75ರಿಂದ 150ರವರೆಗೂ ಲಭ್ಯ. ಸಾವಯವ ಬೆಲ್ಲಗಳ ಖಚಿತತೆ ಬಗ್ಗೆ ನಾನೇನು ಖಾತ್ರಿ ಕೊಡುವುದಿಲ್ಲ. ₹ 40 ಕೆಜಿ ಸಕ್ಕರೆ ಖರೀದಿಸಿ ₹ 75 ಕೆಜಿ ಬೆಲ್ಲ ತಯಾರಿಸುವುದು ಅತ್ಯಂತ ಸುಲಭ ಮತ್ತು ಆರ್ಥಿಕವಾಗಿಯೂ, ಶ್ರಮದ ವಿಚಾರದಲ್ಲಿ ಅತ್ಯಂತ ಸುಲಭ ಎಂದು ಆಗ ಅವರಿಗೆ ಮರಳಿ ನಾನು ಪ್ರಶ್ನಿಸಿದೆ ಹಾಗಾದರೆ ಹೇಗೆ ತಯಾರು ಮಾಡುತ್ತಾರೆ ಒಂದು ಅಂದಾಜಿಗಾದರೂ ಹೇಳ್ರಿ ಅಂತ , ಆಗ ಅವರಿಂದ ಬಂದಂತಹ ಉತ್ತರ ಹೀಗಿತ್ತು. ಸರಿಸುಮಾರು ಎರಡು ನೂರು ಲೀಟರ್ ಕಬ್ಬಿನ ಹಾಲಿಗೆ 4 ಕ್ವಿಂಟಾಲ್ ಸಕ್ಕರೆ ಬೆರೆಸಿ ಕುದಿಸಲಾಗುತ್ತದೆ ಹಾಗೂ ಪೆಂಟೆ ಬೆಲ್ಲ ಮಾಡಲು ಬೇಕಾಗುವ ಯಥೋಚಿತ ರಾಸಾಯನಿಕಗಳನ್ನು, ಬಣ್ಣಗಳನ್ನು ಮತ್ತು ಬ್ಲೀಚ ಗಳನ್ನು ಸೇರಿಸಿ ಬೆಲ್ಲ ತಯಾರಿಸಲಾಗುತ್ತದೆ ಎಂದು. ಅಂದರೆ ಇದು ಪೆಂಟೆ ಬೆಲ್ಲವೆ ಅಲ್ಲ ಇದು ಸಕ್ಕರೆಬೆಲ್ಲ ಎಂದಾಯ್ತಲ್ಲ ಎಂದು ಕೇಳಿದೆ ಆಗ ಈ ದೊಡ್ಡ ರೈತನಿಂದ ಬಂದಂತಹ ಉತ್ತರ ಹೌದು ಇದು ಸಕ್ಕರೆಬೆಲ್ಲನೆ, ನೋಡು ಎಲ್ಲವೂ ಸುಲಭ ನಿಮ್ಮ ಮಲೆನಾಡಿನವರಿಗೆ ಬೆಲ್ಲದ ಪೆಂಟೆಯ ಬಣ್ಣ ನೋಡುವುದು ಗೊತ್ತಿದೆ ಬಿಟ್ಟರೆ ಹೇಗೆ ಮಾಡುತ್ತಾರೆ ಎಂದು ಕೇಳುವುದು ಗೊತ್ತೇ ಇಲ್ಲ ಎಂಬ ಬಿಗಿ ಮಾತಿನೊಂದಿಗೆ ಅವರು ಅವರ ಊರಿಗೆ ಹಿಂದಿರುಗಿದರು.

ಪ್ರಾಮಾಣಿಕ ಬೆಲ್ಲ ತಯಾರಿಸುವಂತಹ ರೈತರು ಹಾಗೂ ಕೈಗಾರಿಕೆಗಳ ಬಗ್ಗೆ ಪ್ರಶ್ನೆಯೇ ಇಲ್ಲ ಆದರೆ ಸಕ್ಕರೆಯಿಂದ ಬೆಲ್ಲ ತಯಾರು ಮಾಡುವಂತಹ ರೈತರು ಹಾಗೂ ಉದ್ಯಮಿಗಳು ನೇರವಾಗಿ ಸಕ್ಕರೆಬೆಲ್ಲ ತಯಾರಿಸಿದಂತೆ ಅಲ್ವೇ ? ,

ಸರಕಾರ ಸಿಹಿಗಳಲ್ಲಿ ಇನ್ನೊಂದು ಹೊಸ ವರ್ಗವನ್ನೇ ಸೃಷ್ಟಿಸಬೇಕಿದೆ , ಬೆಲ್ಲದಲ್ಲಿ ಈ ಸಕ್ಕರೆಯಿಂದ ತಯಾರಿಸಿದ ಬೆಲ್ಲವನ್ನ ಸೇರಿಸುವ ಅವಶ್ಯಕತೆ ಇದೆ.
ಇಷ್ಟು ಮಾಹಿತಿ ನಂತರ ನೀವು ನೀವೇ ಯೋಚಿಸಿ ನಿರ್ಧರಿಸಿ